“ಸಹಜ ಪ್ರವೃತ್ತಿಯ ವಿವೇಕಿ”ಗಳಾಗಿರುವ ಜೀವಿಗಳು ನಮಗೆ ಕಲಿಸಬಲ್ಲ ವಿಷಯಗಳು
ಹವಾನಿಯಂತ್ರಿಸುವಿಕೆ, ಘನೀಕರಣನಿರೋಧಕ, ಅಪಲವಣೀಕರಣ ಮತ್ತು ಧ್ವನಿತರಂಗ ಉಪಕರಣ—ಇವು ಈ 20ನೆಯ ಶತಮಾನದಲ್ಲಿ ಮಾನವಕುಲಕ್ಕೆ ವ್ಯಾಪಕವಾಗಿ ಪರಿಚಿತವಾದ ಹೊಸಶೋಧನೆಗಳು. ಆದರೂ ಪ್ರಾಣಿಲೋಕದಲ್ಲಿ ಅವು ಸಾವಿರಾರು ವರ್ಷಗಳಿಗೆ ಮೊದಲೇ ಅಸ್ತಿತ್ವದಲ್ಲಿದ್ದವು. ಹೌದು, ಮಾನವಕುಲವು ಇಂತಹ “ಸಹಜ ಪ್ರವೃತ್ತಿಯ ವಿವೇಕಿ”(NW)ಗಳಾದ ಜೀವಿಗಳನ್ನು ಅಧ್ಯಯನಮಾಡುವುದರಿಂದ ಪ್ರಯೋಜನಪಡೆಯುತ್ತದೆ. (ಜ್ಞಾನೋಕ್ತಿ 30:24-28; ಯೋಬ 12:7-9) ಕೆಲವು ಪ್ರಾಣಿಗಳು ಮಾನವಕುಲದ ಮಾತನಾಡದ ಶಿಕ್ಷಕರಾಗಿರುವಂತೆ ತೋರುತ್ತದೆ, ಮತ್ತು ಅವುಗಳನ್ನು ಪರೀಕ್ಷಿಸುವುದನ್ನು ನಾವು ಬಹಳ ಆಸಕ್ತಿಕರವಾದುದಾಗಿ ಕಂಡುಕೊಳ್ಳಬಲ್ಲೆವು.
ಕೆಲವು ಪ್ರಾಣಿಗಳ ಪ್ರವೃತ್ತಿಗಳನ್ನು ಪರಿಗಣಿಸುವುದರಿಂದ ನಾವು ಪ್ರಯೋಜನಪಡೆಯಬಲ್ಲೆವೊ? ಒಳ್ಳೇದು, ಯೇಸು ಕ್ರಿಸ್ತನು ತನ್ನ ಶಿಷ್ಯರನ್ನು ಕುರಿಗಳು, ಸರ್ಪಗಳು, ಪಾರಿವಾಳಗಳು ಮತ್ತು ಮಿಡತೆಗಳಿಗೂ ಹೋಲಿಸಿದನು. ತನ್ನ ಹಿಂಬಾಲಕರನ್ನು ಈ ಜೀವಿಗಳಿಗೆ ಹೋಲಿಸಿದಾಗ ಅವನ ಮನಸ್ಸಿನಲ್ಲಿ ಏನಿತ್ತು? ನಾವು ನೋಡೋಣ.
“ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ”
ಬೈಬಲಿನಲ್ಲಿ ಕುರಿಗಳನ್ನು 200ಕ್ಕೂ ಹೆಚ್ಚು ಬಾರಿ ಹೆಸರಿಸಲಾಗಿದೆ. ಸ್ಮಿಥ್ಸ್ ಬೈಬಲ್ ಡಿಕ್ಷನೆರಿ ಹೇಳುವಂತೆ, “ಕುರಿಯು ನಮ್ರತೆ, ತಾಳ್ಮೆ ಮತ್ತು ಅಧೀನತೆಯ ಒಂದು ದ್ಯೋತಕವಾಗಿದೆ.” ಯೆಶಾಯ 53ನೆಯ ಅಧ್ಯಾಯದಲ್ಲಿ ಯೇಸುವನ್ನೇ ಪ್ರವಾದನಾರೂಪದಲ್ಲಿ ಒಂದು ಕುರಿಗೆ ಹೋಲಿಸಲಾಯಿತು. ಅವನು ತನ್ನ ಹಿಂಬಾಲಕರನ್ನು ಅದೇ ಪ್ರಾಣಿಗೆ ಹೋಲಿಸಿದನೆಂಬುದು ಎಷ್ಟೊಂದು ಯೋಗ್ಯವಾಗಿದೆ! ಆದರೆ ಯೇಸುವಿನ ಮನಸ್ಸಿನಲ್ಲಿ, ಕುರಿಯ ಯಾವ ಪ್ರತ್ಯೇಕ ವಿಶೇಷ ಗುಣಗಳಿದ್ದವು?
“ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ,” ಎಂದನು ಯೇಸು. (ಯೋಹಾನ 10:27) ಹೀಗೆ ಅವನು ತನ್ನ ಶಿಷ್ಯರ ನಮ್ರತೆ ಮತ್ತು ತನ್ನನ್ನು ಹಿಂಬಾಲಿಸಲು ಅವರಿಗಿದ್ದ ತವಕವನ್ನು ಎತ್ತಿತೋರಿಸಿದನು. ಅಕ್ಷರಾರ್ಥ ಕುರಿಗಳು ತಮ್ಮ ಕುರುಬನಿಗೆ ಕಿವಿಗೊಡುತ್ತವೆ ಮತ್ತು ಅವನನ್ನು ಮನಪೂರ್ವಕವಾಗಿ ಹಿಂಬಾಲಿಸುತ್ತವೆ. ಕುರುಬನಿಗೆ ಮಂದೆಯೊಂದಿಗೆ ಆಪ್ತವಾದೊಂದು ಅಂಟಿಕೆಯೂ ಇದೆ.
ಒಂದು ಮಂದೆಯು ಮೇಯುತ್ತಿರುವಾಗ ಒಂದು ಹುಲ್ಲುಗಾವಲಿನ ಉದ್ದಕ್ಕೂ ಚದರಿರಬಹುದಾದರೂ, ಪ್ರತಿಯೊಂದು ಕುರಿಯು ಅಖಂಡವಾಗಿ ತನ್ನ ಗುಂಪಿನೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುತ್ತದೆ. ಹೀಗೆ, ಆ ಪ್ರಾಣಿಗಳಿಗೆ ಭದ್ರತೆಯಿಲ್ಲದ ಅಥವಾ ಹೆದರಿಕೆಯ ಅನಿಸಿಕೆಯಾಗುವಾಗ, “ಅವು ತ್ವರೆಯಾಗಿ ಒಟ್ಟುಸೇರಬಲ್ಲವು,” ಎಂದು ಆಲೆಸ್ ಫೂರ್ ಡಾಸ್ ಶಾಫ್ (ಸಕಲವೂ ಕುರಿಗಳಿಗಾಗಿ) ಎಂಬ ಪುಸ್ತಕವು ಹೇಳುತ್ತದೆ. ಅಪಾಯವನ್ನು ಪಾರಾಗಲು ಕುರಿಗಳು ಓಡಿಹೋಗುವುದಾದರೆ, ಅವು ಆಗಾಗ ಪರಿಸ್ಥಿತಿಯನ್ನು ಪುನರ್ನಿರ್ಧರಿಸಲಿಕ್ಕಾಗಿ ನಿಲ್ಲುತ್ತ, ಮಂದೆಯಾಗಿ ಓಡಿಹೋಗುತ್ತವೆ. “ಹಂತಗಳಲ್ಲಿ ಪಲಾಯನ ಮಾಡುವುದು, ಮರಿಗಳು ಮತ್ತು ಬಲಹೀನ ಕುರಿಗಳು ಬೆನ್ನುಹಿಡಿಯುವಂತೆ ಅನುಮತಿಸುತ್ತದೆ. ಆ ಮಂದೆ ಅವುಗಳಿಗೆ ವಿಶೇಷ ರೀತಿಯ ಸಂರಕ್ಷಣೆಯನ್ನೂ ಒದಗಿಸುತ್ತದೆ.” ಈ ವರ್ತನೆಯಿಂದ ನಾವೇನು ಕಲಿಯಬಲ್ಲೆವು?
ಸತ್ಯ ಕ್ರೈಸ್ತರು ಇಂದು ಕ್ರೈಸ್ತ ಪ್ರಪಂಚದ ಪಂಗಡಗಳಲ್ಲಿ ಮತ್ತು ಪಂಥಗಳ ಮಧ್ಯೆ ಚೆದರಿಹೋಗಿರುವುದಿಲ್ಲ. ಬದಲಾಗಿ, ಅವರು ಒಂದು ಮಂದೆಯೊಳಗೆ ಕೂಡಿಸಲ್ಪಟ್ಟಿದ್ದಾರೆ. ಪ್ರತಿಯೊಬ್ಬ ಕ್ರೈಸ್ತನಿಗೆ ಈ ದೇವರ ಮಂದೆಯೊಂದಿಗೆ ವೈಯಕ್ತಿಕ ಅಂಟಿಕೆಯ ಭಾವನೆಯಿದೆ, ಮತ್ತು ಇದು ಯೆಹೋವನ ಸಾಕ್ಷಿಗಳ ಸಂಸ್ಥೆಯ ಐಕ್ಯಕ್ಕೆ ಸಹಾಯ ನೀಡುತ್ತದೆ. ಎಂದಾದರೂ ವಿಷಮ ಸ್ಥಿತಿಯು—ಗುರುತರವಾದ ಕಾಯಿಲೆ, ಯುದ್ಧ ಅಥವಾ ನೈಸರ್ಗಿಕ ವಿಪತ್ತೇ ಆಗಿರಲಿ—ಸಂಭವಿಸುವಾಗ ಪ್ರತಿಯೊಬ್ಬ ಆರಾಧಕನು ಮಾರ್ಗದರ್ಶನೆ ಮತ್ತು ಸಂರಕ್ಷಣೆಯನ್ನು ಎಲ್ಲಿ ಅರಸುತ್ತಾನೆ? ಆತ್ಮಿಕ ಭದ್ರತೆಯನ್ನು ನೀಡುವ ಯೆಹೋವನ ಸಂಸ್ಥೆಯಲ್ಲಿಯೇ.
ಬೈಬಲ್ ಸಲಹೆಯು ಹೇಗೆ ಲಭ್ಯಗೊಳಿಸಲ್ಪಡುತ್ತದೆ? ಕಾವಲಿನಬುರುಜು ಮತ್ತು ಅದರ ಸಂಗಾತಿ ಪತ್ರಿಕೆಯಾದ ಎಚ್ಚರ!ದಂತಹ ಸಾಹಿತ್ಯಗಳ ಮುಖೇನವೇ. ಈ ಪತ್ರಿಕೆಗಳು ಮತ್ತು ಕ್ರೈಸ್ತ ಕೂಟಗಳು ಹೆಚ್ಚಿನ ಪರಾಮರಿಕೆಯ ಅಗತ್ಯವಿರುವವರಿಗೆ—ಮಂದೆಯಲ್ಲಿರುವ ಕುರಿಮರಿಗಳು ಮತ್ತು ಹೆಚ್ಚು ಬಲಹೀನ ಕುರಿಗಳಂತೆ—ವಿಶೇಷ ಸಹಾಯವನ್ನೂ ನೀಡುತ್ತವೆ. ಉದಾಹರಣೆಗೆ, ಒಂಟಿ ಹೆತ್ತವರು ಮತ್ತು ಖಿನ್ನತೆಯಿಂದ ನರಳುತ್ತಿರುವವರಿಗೆ ಗಮನವನ್ನು ಕೊಡಲಾಗುತ್ತದೆ. ಆದಕಾರಣ, ಪ್ರತಿಯೊಂದು ಪತ್ರಿಕೆಯನ್ನು ಓದಿ, ಸಭೆಯ ಪ್ರತಿಯೊಂದು ಕೂಟಕ್ಕೆ ಹಾಜರಾಗಿ, ನಾವು ಕಲಿಯುವುದನ್ನು ಅನ್ವಯಿಸಿಕೊಳ್ಳುವುದು ಅದೆಷ್ಟು ವಿವೇಕಯುತ! ಆ ವಿಧದಲ್ಲಿ ನಾವು ನಮ್ರತೆಯನ್ನೂ ದೇವರ ಮಂದೆಗೆ ಬಲವಾದ ಅಂಟಿಕೆಯೊಂದನ್ನೂ ಪ್ರದರ್ಶಿಸುತ್ತೇವೆ.—1 ಪೇತ್ರ 5:2.
“ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ”
ಸ್ಮಿಥ್ಸ್ ಬೈಬಲ್ ಡಿಕ್ಷನೆರಿ ಹೇಳುವುದು: “ಸರ್ಪವು ಪೂರ್ವದೇಶಗಳಲ್ಲೆಲ್ಲ ಕೆಡುಕಿನ ಮೂಲತತ್ತ್ವದ, ಅವಿಧೇಯತೆಯ ಆತ್ಮದ ದ್ಯೋತಕವಾಗಿ ಉಪಯೋಗಿಸಲ್ಪಟ್ಟಿತ್ತು.” ಇನ್ನೊಂದು ಕಡೆಯಲ್ಲಿ, “ಪಾರಿವಾಳವೇ” ಎಂಬುದು ಮುದ್ದಾಟದ ಪದವಾಗಿತ್ತು. (ಪರಮಗೀತ 5:2) ಹಾಗಾದರೆ, ಯೇಸು ತನ್ನ ಶಿಷ್ಯರನ್ನು, “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರಬೇಕೆಂದು ಪ್ರೋತ್ಸಾಹಿಸಿದಾಗ, ಅವನ ಮನಸ್ಸಿನಲ್ಲಿ ಏನಿತ್ತು?—ಮತ್ತಾಯ 10:16.
ಯೇಸುವು ಸಾರಲಿಕ್ಕಾಗಿ ಮತ್ತು ಬೋಧಿಸಲಿಕ್ಕಾಗಿ ಉಪದೇಶಗಳನ್ನು ಕೊಡುತ್ತಿದ್ದನು. ಅವನ ಶಿಷ್ಯರು ಒಂದು ಮಿಶ್ರಿತ ಸ್ವಾಗತವನ್ನು ನಿರೀಕ್ಷಿಸಸಾಧ್ಯವಿತ್ತು. ಅಲ್ಪ ಮಂದಿ ಆಸಕ್ತಿಯನ್ನು ತೋರಿಸುವಾಗ ಇತರರು ಸುವಾರ್ತೆಯನ್ನು ತಿರಸ್ಕರಿಸಲಿದ್ದರು. ಕೆಲವರು ದೇವರ ಈ ಸತ್ಯ ಸೇವಕರನ್ನು ಹಿಂಸಿಸುವರು ಕೂಡ. (ಮತ್ತಾಯ 10:17-23) ಆ ಶಿಷ್ಯರು ಹಿಂಸೆಗೆ ಹೇಗೆ ಪ್ರತಿಕ್ರಿಯಿಸಬೇಕಿತ್ತು?
ಡಾಸ್ ಏಫಾಂಗೇಲ್ಯುಮ್ ಡೆಸ್ ಮಾಟೇಉಸ್ (ಮತ್ತಾಯನ ಸುವಾರ್ತೆ)ನಲ್ಲಿ ಫ್ರಿಟ್ಸ್ ರೈನೆಕರ್, ಮತ್ತಾಯ 10:16ರ ಕುರಿತು ಹೇಳುವುದು: “ದೂರುಕೊಡಲು ವೈರಿಗಳಿಗೆ ಸಮಂಜಸವಾದ ಆಧಾರವಿರುವ ಏನಾದರೂ ಸಂಭವಿಸದಂತೆ, ಬುದ್ಧಿವಂತಿಕೆಯು . . . ಸಮಗ್ರತೆ, ಪ್ರಾಮಾಣಿಕತೆ ಮತ್ತು ಮುಚ್ಚುಮರೆಯಿಲ್ಲದಿರುವಿಕೆಯೊಂದಿಗೆ ಜೊತೆಗೂಡಬೇಕು. ಯೇಸುವಿನ ರಾಯಭಾರಿಗಳು ನಿರ್ದಯತೆಯ ವಿರೋಧಿಗಳ ಮಧ್ಯೆ ಇರುತ್ತಾರೆ. ಈ ವಿರೋಧಿಗಳು ಯಾವ ಪರಿಗಣನೆಯನ್ನೂ ತೋರಿಸದೆ ಅಪೊಸ್ತಲರ ಮೇಲೆ ಕರುಣಾರಹಿತರಾಗಿ ಮತ್ತು ಅತ್ಯಲ್ಪ ಕಾರಣವಿದ್ದರೂ ಆಕ್ರಮಣ ಮಾಡುತ್ತಾರೆ. ಆದುದರಿಂದ—ಸರ್ಪದಂತೆ—ವಿರೋಧಿಗಳ ಮೇಲೆ ಕಾವಲಿನ ಕಣ್ಣನ್ನು ಇಡುವುದು, ಕಣ್ಣುಗಳು ಮತ್ತು ಸಂವೇದನೆಗಳಿಂದ ಪರಿಸ್ಥಿತಿಯನ್ನು ವಿಮರ್ಶಿಸುವುದು, ಯುಕ್ತಿ ಅಥವಾ ವಂಚನೆರಹಿತವಾಗಿ ಪರಿಸ್ಥಿತಿಯ ಸ್ವಾಮ್ಯವನ್ನು ಇಟ್ಟುಕೊಳ್ಳುವುದು ಮತ್ತು ನಡೆನುಡಿಯಲ್ಲಿ ನಿರ್ಮಲರೂ ಸತ್ಯವಂತರೂ ಆಗಿದ್ದು ಹೀಗೆ ತಾವು ಪಾರಿವಾಳಸದೃಶರೆಂದು ರುಜುಮಾಡಿಕೊಡುವುದು ಆವಶ್ಯಕ.”
ಮತ್ತಾಯ 10:16ರಲ್ಲಿ ಕಂಡುಬರುವ ಯೇಸುವಿನ ಮಾತುಗಳಿಂದ ದೇವರ ಆಧುನಿಕ ದಿನದ ಸೇವಕರು ಏನು ಕಲಿಯಬಲ್ಲರು? ಇಂದು ಜನರು ಸುವಾರ್ತೆಗೆ ಸರಿಸುಮಾರು ಪ್ರಥಮ ಶತಮಾನದಲ್ಲಿ ಮಾಡಿದ ರೀತಿಯಲ್ಲಿಯೇ ಪ್ರತಿಕ್ರಿಯಿಸುತ್ತಾರೆ. ಹಿಂಸೆಯನ್ನು ಎದುರಿಸುವಾಗ, ಸತ್ಯ ಕ್ರೈಸ್ತರು ಸರ್ಪದ ಜಾಣ್ಮೆಯನ್ನು ಪಾರಿವಾಳದ ನಿರ್ಮಲತೆಯೊಂದಿಗೆ ಜೋಡಿಸುವುದು ಅಗತ್ಯವಾಗಿದೆ. ಕ್ರೈಸ್ತರು ವಂಚನೆ ಅಥವಾ ಅಪ್ರಾಮಾಣಿಕತೆಯನ್ನು ಎಂದಿಗೂ ಉಪಯೋಗಿಸುವುದಿಲ್ಲ, ಬದಲಿಗೆ ಇತರರಿಗೆ ರಾಜ್ಯ ಸಂದೇಶವನ್ನು ಪ್ರಕಟಿಸುವುದರಲ್ಲಿ ಭ್ರಷ್ಟತೆಯಿಲ್ಲದವರೂ, ಅಕೃತ್ರಿಮರೂ, ಪ್ರಾಮಾಣಿಕರೂ ಆಗಿರುತ್ತಾರೆ.
ದೃಷ್ಟಾಂತಕ್ಕಾಗಿ: ಯೆಹೋವನ ಸಾಕ್ಷಿಯಾಗಿರುವ ನಿಮ್ಮ ನಂಬಿಕೆಗಳ ಕುರಿತು ನಿಮ್ಮ ಸಹೋದ್ಯೋಗಿಗಳು, ಶಾಲೆಯಲ್ಲಿರುವ ಯುವಜನರು, ಇಲ್ಲವೆ ನಿಮ್ಮ ಸ್ವಂತ ಕುಟುಂಬದ ಸದಸ್ಯರು ಚುಚ್ಚುವ ಹೇಳಿಕೆಗಳನ್ನು ಮಾಡಬಹುದು. ಒಡನೆ ಬರುವ ಪ್ರತಿಕ್ರಿಯೆಯು ಅವರ ನಂಬಿಕೆಯ ಕುರಿತು ಅಷ್ಟೇ ಕಟುವಾಗಿ ಪ್ರತ್ಯುತ್ತರಿಸುವುದಾಗಿರಬಹುದು. ಆದರೆ ಅದು ನಿಷ್ಕಪಟವಾದದ್ದೊ? ಅಲ್ಲ. ಅವರ ಹೇಳಿಕೆಗಳು ನಿಮ್ಮ ಹಿತಕರ ವರ್ತನೆಯ ಮೇಲೆ ಯಾವ ಪರಿಣಾಮವನ್ನೂ ಮಾಡಿರುವುದಿಲ್ಲವೆಂದು ನೀವು ನಿಮ್ಮ ಟೀಕಾಕಾರರಿಗೆ ತೋರಿಸುವಲ್ಲಿ, ಅವರು ಸುಧಾರಣೆ ಹೊಂದಾರು. ಆಗ ನೀವು ಜಾಣರೂ ನಿಂದಾರಹಿತರೂ—‘ಸರ್ಪದ ಹಾಗೆ ಜಾಣರೂ ಪಾರಿವಾಳದಂತೆ ನಿಷ್ಕಪಟಿಗಳೂ’—ಆಗಿರುವಿರಿ.
“ಆ ಮಿಡಿತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು”
ಜಿಯೊ (GEO) ಪತ್ರಿಕೆ ವರದಿ ಮಾಡಿದ್ದೇನಂದರೆ, 1784ರಲ್ಲಿ, “ದಾಖಲಾಗಿರುವ ಇತಿಹಾಸದಲ್ಲಿ ದಾಖಲಿಸಿರುವವುಗಳಲ್ಲಿ ಅತ್ಯಂತ ದೊಡ್ಡ [ಮಿಡತೆಗಳ] ಹಿಂಡು,” ದಕ್ಷಿಣ ಆಫ್ರಿಕಕ್ಕೆ ಬಡಿಯಿತು. ಆ ಹಿಂಡು, ಹಾಂಗ್ ಕಾಂಗ್ನ ಗಾತ್ರಕ್ಕಿಂತ ಸುಮಾರು ಐದು ಪಾಲು ದೊಡ್ಡದಾಗಿರುವ, 5,200 ಚದರ ಕಿಲೊಮೀಟರ್ಗಳನ್ನು ಆವರಿಸಿತು. ಮಿಡತೆಗಳು, “ತಾವು ಭೇಟಿಕೊಡುವ ದೇಶಗಳಲ್ಲಿ ಭಯಂಕರ ಧ್ವಂಸವನ್ನು ಮಾಡುತ್ತವೆ,” ಎನ್ನುತ್ತದೆ, ಸ್ಮಿಥ್ಸ್ ಬೈಬಲ್ ಡಿಕ್ಷನೆರಿ.
“ಕರ್ತನ ದಿನ”ದಲ್ಲಿ ನಡೆಯುವ ವಿಷಯಗಳ ತನ್ನ ದೈವದತ್ತ ಪ್ರಕಟನೆಯಲ್ಲಿ, ಯೇಸುವು ಮಿಡತೆಗಳ ಹಿಂಡಿನ ಒಂದು ದರ್ಶನವನ್ನು ಉಪಯೋಗಿಸಿದನು. ಅವುಗಳ ಕುರಿತು ಹೀಗೆ ಹೇಳಲ್ಪಟ್ಟಿತ್ತು: “ಆ ಮಿಡಿತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು.” (ಪ್ರಕಟನೆ 1:1, 10; 9:3-7) ಈ ಪ್ರತೀಕದ ಮಹತ್ವವೇನಾಗಿತ್ತು?
ಪ್ರಕಟನೆ 9ನೆಯ ಅಧ್ಯಾಯದ ಮಿಡತೆಗಳು, ಈ ಶತಮಾನದಲ್ಲಿ ಭೂಮಿಯಲ್ಲಿರುವ ದೇವರ ಅಭಿಷಿಕ್ತ ಸೇವಕರನ್ನು ಚಿತ್ರಿಸುತ್ತವೆಂದು ಯೆಹೋವನ ಸಾಕ್ಷಿಗಳು ದೀರ್ಘಕಾಲದಿಂದ ಅರ್ಥಮಾಡಿಕೊಂಡಿದ್ದಾರೆ.a ಈ ಕ್ರೈಸ್ತರಿಗೆ ಒಂದು ನಿರ್ದಿಷ್ಟ ಕೆಲಸವನ್ನು—ರಾಜ್ಯ ಸುವಾರ್ತೆಯನ್ನು ಭೂವ್ಯಾಪಕವಾಗಿ ಸಾರಿ ಶಿಷ್ಯರನ್ನಾಗಿ ಮಾಡುವುದನ್ನು—ನೇಮಿಸಲಾಗಿದೆ. (ಮತ್ತಾಯ 24:14; 28:19, 20) ಅವರು ತಡೆಗಳನ್ನು ಜಯಿಸಿ ತಮ್ಮ ಕೆಲಸಕ್ಕೆ ಅಂಟಿಕೊಳ್ಳುವುದನ್ನು ಇದು ಕೇಳಿಕೊಳ್ಳುತ್ತದೆ. ಇದನ್ನು ಅದಮ್ಯವಾದ ಮಿಡತೆಗಳಲ್ಲದೆ ಇನ್ನಾವುದು ಹೆಚ್ಚು ಉತ್ತಮವಾಗಿ ಚಿತ್ರಿಸಸಾಧ್ಯವಿದೆ?
ಐದು ಸೆಂಟಿಮೀಟರುಗಳಿಗಿಂತ ತುಸು ಹೆಚ್ಚು ಉದ್ದವಷ್ಟೇ ಇರುವುದಾದರೂ ಮಿಡತೆಯು ಸಾಮಾನ್ಯವಾಗಿ ದಿನಕ್ಕೆ 100ರಿಂದ 200 ಕಿಲೊಮೀಟರುಗಳಷ್ಟು ಪಯಣಿಸುತ್ತದೆ. ಮರುಭೂಮಿಯ ಮಿಡತೆಯು ಇದನ್ನು 1,000 ಕಿಲೊಮೀಟರುಗಳಿಗೂ ವಿಸ್ತರಿಸಬಹುದು. “ಅದರ ರೆಕ್ಕೆಗಳು ಸೆಕೆಂಡಿಗೆ 18 ಬಾರಿ, ಒಂದು ದಿನಕ್ಕೆ 17 ತಾಸುಗಳ—ಇನ್ನಾವ ಕೀಟವೂ ನಿಭಾಯಿಸದ ಸಂಗತಿ—ತನಕ ಒಲೆದಾಡುತ್ತವೆ” ಎಂದು ಜಿಯೊ ವಿವರಿಸುತ್ತದೆ. ಅಷ್ಟೊಂದು ಚಿಕ್ಕ ಜೀವಿಗೆ ಎಷ್ಟು ಬೃಹತ್ತಾದ ಕೆಲಸ!
ಗುಂಪಾಗಿ ಪರಿಗಣಿಸುವಾಗ, ಯೆಹೋವನ ಸಾಕ್ಷಿಗಳು ರಾಜ್ಯದ ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ದೃಢ ನಿಷ್ಠೆಯವರು. ಈಗ ಅವರು 230ಕ್ಕೂ ಹೆಚ್ಚು ದೇಶಗಳಲ್ಲಿ ಸಾರುತ್ತಾರೆ. ಆ ಕೆಲಸವನ್ನು ನೆರವೇರಿಸುವುದರಲ್ಲಿ ಒಂದು ಭಾಗವಿರುವಂತೆ ದೇವರ ಈ ಸೇವಕರು ಅನೇಕ ಅಡಚಣೆಗಳನ್ನು ಜಯಿಸುತ್ತಾರೆ. ಅವರು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ? ಪೂರ್ವಕಲ್ಪಿತ ಅಭಿಪ್ರಾಯ, ಶಾಸನಸಮ್ಮತ ನಿರ್ಬಂಧಗಳು, ಕಾಯಿಲೆ, ನಿರುತ್ಸಾಹ, ಮತ್ತು ಸಂಬಂಧಿಗಳಿಂದ ವಿರೋಧ—ಇವು ಕೇವಲ ಕೆಲವಾಗಿವೆ. ಆದರೆ ಯಾವುದಕ್ಕೂ ಅವರ ಮುಂದೊತ್ತುವಿಕೆಯನ್ನು ತಡೆಯಸಾಧ್ಯವಾಗಿರುವುದಿಲ್ಲ. ಅವರು ತಮ್ಮ ದೈವದತ್ತ ಕೆಲಸಕ್ಕೆ ಅಂಟಿಕೊಳ್ಳುತ್ತಾರೆ.
ಕ್ರೈಸ್ತ ಗುಣಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸಿರಿ
ಹೌದು, ಯೇಸು ತನ್ನ ಹಿಂಬಾಲಕರನ್ನು, ಕುರಿಗಳು, ಸರ್ಪಗಳು, ಪಾರಿವಾಳಗಳು ಮತ್ತು ಮಿಡತೆಗಳಿಗೆ ಹೋಲಿಸಿದನು. ನಿಜವಾಗಿಯೂ ಇದು ನಮ್ಮ ದಿನಗಳಿಗೆ ಸೂಕ್ತವಾಗಿ ಅನ್ವಯಿಸುತ್ತದೆ. ಏಕೆ? ಏಕೆಂದರೆ ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಸನ್ನಿಹಿತವಾಗಿದೆ, ಮತ್ತು ಸಮಸ್ಯೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಒತ್ತಡಹಾಕುತ್ತಿವೆ.
ಯೇಸುವಿನ ದೃಷ್ಟಾಂತದಿಂದ ಕೂಡಿದ ಮಾತುಗಳನ್ನು ಮನಸ್ಸಿನಲ್ಲಿಡುವ ಮೂಲಕ, ಸತ್ಯ ಕ್ರೈಸ್ತರು ದೇವರ ಮಂದೆಗೆ ನಿಕಟವಾಗಿ ಅಂಟಿಕೊಂಡು, ಯೆಹೋವನ ಸಂಸ್ಥೆಯಿಂದ ಕೊಡಲ್ಪಡುವ ಸಲಹೆಯನ್ನು ದೀನಭಾವದಿಂದ ಅಂಗೀಕರಿಸುತ್ತಾರೆ. ಅವರು ಜಾಗರೂಕರಾಗಿರುತ್ತಾರೆ ಮತ್ತು ಎಲ್ಲಾ ವಿಷಯಗಳಲ್ಲಿ ಅವರು ನಿಂದಾತೀತರಾಗಿ ಉಳಿಯುವಾಗ, ತಮ್ಮ ಕ್ರೈಸ್ತ ಚಟುವಟಿಕೆಗಳನ್ನು ಪ್ರತಿಬಂಧಿಸಸಾಧ್ಯವಿರುವ ಸನ್ನಿವೇಶಗಳಿಗೆ ಎಚ್ಚರದಿಂದಿರುತ್ತಾರೆ. ಅದಲ್ಲದೆ, ವಿಘ್ನಗಳ ಎದುರಿನಲ್ಲಿಯೂ ದೇವರ ಚಿತ್ತವನ್ನು ಮಾಡುವುದರಲ್ಲಿ ಅವರು ಪಟ್ಟುಹಿಡಿದು ಮುಂದುವರಿಯುತ್ತಾರೆ. ಮತ್ತು “ಸಹಜ ಪ್ರವೃತ್ತಿಯ ವಿವೇಕಿ”ಗಳಾಗಿರುವ ಕೆಲವು ಜೀವಿಗಳಿಂದ ವಿಷಯಗಳನ್ನು ಕಲಿಯುವುದನ್ನು ಅವರು ಮುಂದುವರಿಸುತ್ತಾರೆ.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ ಪ್ರಕಾಶಿತ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ 22ನೆಯ ಅಧ್ಯಾಯವನ್ನು ನೋಡಿ.