ಎಲ್ಲ ಭಾಷೆಗಳು ಮತ್ತು ಧರ್ಮಗಳ ಜನರಿಗೆ ಸಾಕ್ಷಿನೀಡುವುದು
1 ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರು, ಬೇರೆ ಭಾಷೆಗಳನ್ನಾಡಿದ ಮತ್ತು ವಿಭಿನ್ನ ಧರ್ಮಗಳಲ್ಲಿ ವಿಶ್ವಾಸವನ್ನಿಟ್ಟಿದ್ದ ಜನರಿಗೆ ಹುರುಪಿನ ಸಾಕ್ಷಿಯನ್ನು ನೀಡಿದರು. ಫಲಸ್ವರೂಪವಾಗಿ, “ಇಸವಿ 100ರೊಳಗಾಗಿ, ಮೆಡಿಟರೇನಿಯನ್ ಸಮುದ್ರದ ಅಂಚಿನಲ್ಲಿದ್ದ ಬಹುಶಃ ಪ್ರತಿಯೊಂದು ಪ್ರಾಂತದಲ್ಲಿ ಒಂದು ಕ್ರೈಸ್ತ ಸಮುದಾಯವಿತ್ತು.”—ಮಧ್ಯ ಯುಗಗಳ ಇತಿಹಾಸ (ಇಂಗ್ಲಿಷ್).
2 ಭಾರತದಲ್ಲಿ, ಜನರು ಅನೇಕ ಭಾಷೆಗಳನ್ನಾಡುತ್ತಾರೆ. ಸಾಮಾನ್ಯವಾಗಿ, ಒಂದೇ ಭಾಷೆಯನ್ನಾಡುವ ಜನರು, ಒಂದೇ ರಾಜ್ಯದಲ್ಲಿ ಒಟ್ಟಿಗೆ ಗುಂಪುಗೂಡಿಸಲ್ಪಟ್ಟಿರುತ್ತಾರೆ. ಆದರೂ, ಅನೇಕ ಭಾರತೀಯ ನಗರಗಳು ಮತ್ತು ಪಟ್ಟಣಗಳು ಈಗ ಅಂತಾರಾಷ್ಟ್ರೀಯ ನಗರಗಳಾಗಿವೆ—ವಿವಿಧ ಭಾಷೆಗಳನ್ನಾಡುವ ಜನರು ಅಲ್ಲಿ ಜೀವಿಸುತ್ತಾರೆ. ಭಾಷೆಗಳ ಈ ವೈವಿಧ್ಯತೆಯ ಕಾರಣ, ಅಂತಹ ಜನರೊಂದಿಗೆ ಸಂಭಾಷಿಸಿ, ಅವರಿಗೆ ಸಾಕ್ಷಿನೀಡುವುದು ಹೇಗೆಂದು ತಿಳಿದುಕೊಳ್ಳುವುದು ಕೆಲವೊಮ್ಮೆ ಒಂದು ಪಂಥಾಹ್ವಾನವಾಗಿದೆ. ಕಾರ್ಯತಃ, ನಮ್ಮ ಸ್ವಂತ ಸ್ಥಳದಲ್ಲಿ ನಮಗೆ ಮಿಷನೆರಿ ಟೆರಿಟೊರಿಯಿರಬಹುದು. ಎಲ್ಲ ಭಾಷೆಗಳು ಮತ್ತು ಧರ್ಮಗಳ ಜನರಿಗೆ “ಸಾರಿ ಸಾಕ್ಷಿಹೇಳ”ಬೇಕೆಂಬ ಯೇಸುವಿನ ಆಜ್ಞೆಯನ್ನು ನಾವು ಹೇಗೆ ಅನುಸರಿಸಬಲ್ಲೆವು?—ಅ. ಕೃ. 10:42.
ಬೇರೊಂದು ಭಾಷೆಯನ್ನಾಡುವ ಜನರಿಗೆ ಸಾಕ್ಷಿನೀಡುವುದು
3 ಅನೇಕ ಜನರು ತಮ್ಮ ಮಾತೃಭಾಷೆಯಲ್ಲಿ ಕಲಿಸಲ್ಪಟ್ಟಾಗ, ಬಹಳಷ್ಟು ತ್ವರಿತವಾಗಿ ಮತ್ತು ಹೆಚ್ಚು ಸ್ಪಷ್ಟವಾದ ತಿಳಿವಳಿಕೆಯೊಂದಿಗೆ ಕಲಿತುಕೊಳ್ಳುತ್ತಾರೆಂಬುದರಲ್ಲಿ ಸಂಶಯವಿಲ್ಲ. “ಸುವಾರ್ತೆಗೋಸ್ಕರ” ಮತ್ತು ‘ಇತರರ ಸಂಗಡ ಅದರಲ್ಲಿ ಪಾಲುಗಾರ’ರಾಗಲು, ಲೋಕವ್ಯಾಪಕವಾಗಿ ಅನೇಕ ಸಹೋದರ ಸಹೋದರಿಯರು ಬೇರೊಂದು ಭಾಷೆಯನ್ನು ಕಲಿತುಕೊಂಡಿದ್ದಾರೆ. (1 ಕೊರಿಂ. 9:23) ಇಂಗ್ಲಿಷ್ ಭಾಷೆಯನ್ನಾಡುವ ಒಂದು ದೇಶದಲ್ಲಿ, ಚೈನೀಸ್ ಭಾಷೆಯನ್ನಾಡುವ ಒಬ್ಬ ಸ್ತ್ರೀಯು ಇಂಗ್ಲಿಷ್ ಭಾಷೆಯನ್ನಾಡುವ ಸಹೋದರಿಯ ಪತ್ರಿಕಾ ಪಥದಲ್ಲಿ ಅನೇಕ ವರ್ಷಗಳಿಂದ ಇದ್ದರೂ, ಬೈಬಲ್ ಅಧ್ಯಯನಕ್ಕಾಗಿ ಮಾಡಲ್ಪಟ್ಟ ನೀಡಿಕೆಗಳನ್ನು ಅವಳು ನಿರಾಕರಿಸಿದಳು. ಆದರೆ, ಚೈನೀಸ್ ಭಾಷೆಯನ್ನು ಕಲಿಯುತ್ತಿದ್ದ ಮತ್ತೊಬ್ಬ ಸಹೋದರಿಯು ಆ ಭಾಷೆಯಲ್ಲಿ ಅವಳಿಗೊಂದು ಪುಸ್ತಕವನ್ನು ನೀಡಿದಾಗ, ಅವಳು ಅದನ್ನು ಒಂದು ಅಧ್ಯಯನದೊಂದಿಗೆ ಮನಃಪೂರ್ವಕವಾಗಿ ಸ್ವೀಕರಿಸಿದಳು. ಇಷ್ಟೆಲ್ಲಾ ವ್ಯತ್ಯಾಸವನ್ನು ಉಂಟುಮಾಡಿದ್ದು, ಆ ಸ್ತ್ರೀಯ ಸ್ವಂತ ಭಾಷೆಯಲ್ಲಿ ಕೆಲವೊಂದು ಮಾತುಗಳನ್ನಾಡಲು ಆ ಎರಡನೆಯ ಸಹೋದರಿಯು ಮಾಡಿದ ಪ್ರಯತ್ನಗಳೇ.—ಹೋಲಿಸಿ ಅ. ಕೃ. 22:2.
4 ನಿಮ್ಮ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಮಾತಾಡಲ್ಪಡುವ ಭಾಷೆಗಿಂತಲೂ ಬೇರೆಯಾದ ಒಂದು ಭಾಷೆಯು ನಿಮಗೆ ಗೊತ್ತಿರುವಲ್ಲಿ, ನಿಮ್ಮ ಟೆರಿಟೊರಿಯಲ್ಲಿ ಆ ಎರಡನೆಯ ಭಾಷೆಯನ್ನಾಡುವ ಜನರ ಮೇಲೆ ವಿಶೇಷವಾಗಿ ಕೇಂದ್ರೀಕರಿಸಲು ನೀವು ಶಕ್ತರಾಗಿರಬಹುದು. (ಮತ್ತಾ. 9:37, 38) ಉದಾಹರಣೆಗೆ, ಅಮೆರಿಕದಲ್ಲಿ, ಸತ್ಯಕ್ಕೆ ಬರುವ ಮುಂಚೆ ವಿಯೆಟ್ನಮೀಸ್ ಭಾಷೆಯನ್ನು ಕಲಿತ ಒಬ್ಬ ಸಹೋದರನು ಈಗ, ವಿಯೆಟ್ನಮೀಸ್ ಭಾಷೆಯನ್ನಾಡುವ ಜನರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದರಲ್ಲಿ ಮಹಾ ಆನಂದವನ್ನು ಕಂಡುಕೊಳ್ಳುತ್ತಾನೆ. ಸಾಕ್ಷಿನೀಡಲಿಕ್ಕಾಗಿ ಆ ಭಾಷೆಯ ಕುರಿತು ತನಗಿರುವ ಜ್ಞಾನವನ್ನು ಉಪಯೋಗಿಸಲು ತನ್ನನ್ನು ಹೆಚ್ಚಾಗಿ ಲಭ್ಯಗೊಳಿಸಿಕೊಳ್ಳಲಿಕ್ಕಾಗಿ, ವಿಯೆಟ್ನಮೀಸ್ ಕ್ಷೇತ್ರದಲ್ಲಿ ಎಲ್ಲಿ ಅಗತ್ಯವು ಹೆಚ್ಚಾಗಿದೆಯೊ ಅಲ್ಲಿಗೆ ಅವನು ತನ್ನ ಕುಟುಂಬವನ್ನು ದೇಶಾದ್ಯಂತ ಸ್ಥಳಾಂತರಿಸಿದನು. ಸ್ಥಳಾಂತರವನ್ನು ಮಾಡಿದಂದಿನಿಂದ, ವಿಯೆಟ್ನಮ್ನಿಂದ ಬಂದಿರುವ ಅನೇಕ ಜನರೊಂದಿಗೆ ಬೈಬಲ್ ಅಧ್ಯಯನವನ್ನು ನಡೆಸುವುದರಲ್ಲಿ ಅವನು ಒಳ್ಳೆಯ ಯಶಸ್ಸನ್ನು ಪಡೆಯುತ್ತಿದ್ದಾನೆ.
5 ಒಬ್ಬ ಪಯನೀಯರ್ ಸಹೋದರಿಯು, ತನ್ನ ಟೆರಿಟೊರಿಯಲ್ಲಿ ಹಲವಾರು ಕಿವುಡರನ್ನು ಸಂಧಿಸಿದಳು. ಅವರಿಗೆ ಸತ್ಯವನ್ನು ಕಲಿಸಸಾಧ್ಯವಾಗುವಂತೆ ಅವಳಿಗೆ ಸಂಜ್ಞಾಭಾಷೆಯನ್ನು ಕಲಿಸುವ ಯಾರನ್ನಾದರೂ ಕಂಡುಕೊಳ್ಳಲು ಅವಳು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿದಳು. ಒಂದು ದಿನ ಅವಳು ನೆರೆಹೊರೆಯಲ್ಲಿದ್ದ ಸೂಪರ್ಮಾರ್ಕೆಟ್ನಲ್ಲಿ ಶಾಪಿಂಗ್ ಮಾಡುತ್ತಿದ್ದಾಗ, ಕಿವುಡಿಯಾದ ಒಬ್ಬ ಯುವ ಸ್ತ್ರೀಯು ಅವಳನ್ನು ಸಮೀಪಿಸಿ, ಒಂದು ವಸ್ತುವನ್ನು ಕಂಡುಕೊಳ್ಳಲು ಸಹಾಯ ಮಾಡುವಂತೆ, ಒಂದು ಚೀಟಿಯಲ್ಲಿ ಬರೆದು ಕೇಳಿಕೊಂಡಳು. ಅದನ್ನು ಕಂಡುಕೊಳ್ಳಲು ಅವಳಿಗೆ ಸಹಾಯ ಮಾಡಿದ ತರುವಾಯ, ಆ ಕ್ಷೇತ್ರದಲ್ಲಿರುವ ಕಿವುಡರಿಗೆ ಸಹಾಯ ಮಾಡುವಂತೆ ಸಂಜ್ಞಾಭಾಷೆಯನ್ನು ಕಲಿತುಕೊಳ್ಳುವ ತನ್ನ ಬಯಕೆಯನ್ನು ವ್ಯಕ್ತಪಡಿಸುತ್ತಾ, ಪಯನೀಯರ್ ಸಹೋದರಿಯು ಒಂದು ಚೀಟಿಯನ್ನು ಬರೆದಳು. “ಕಿವುಡರಿಗೆ ಸಹಾಯ ಮಾಡಲು ನೀವು ಬಯಸುವುದೇಕೆ?” ಎಂದು ಆ ಕಿವುಡಿ ಯುವತಿಯು ಬರೆದು ಪ್ರಶ್ನಿಸಿದಳು. ಆ ಸಹೋದರಿಯು ಉತ್ತರಿಸಿ, ಬರೆದುದು: “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು, ಮತ್ತು ಬೈಬಲನ್ನು ಕಿವುಡರು ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡಲು ನಾನು ಬಯಸುತ್ತೇನೆ. ನೀನು ನನಗೆ ಸಂಜ್ಞಾಭಾಷೆಯನ್ನು ಕಲಿಸುವುದಾದರೆ, ನಾನು ನಿನಗೆ ಬೈಬಲನ್ನು ಕಲಿಸಲು ಸಂತೋಷಿಸುವೆನು.” ಆ ಸಹೋದರಿಯು ಹೇಳುವುದು: “ಅವಳು ‘ಆಗಲಿ’ ಎಂದಾಗ, ನನಗಾದ ಆನಂದವನ್ನು ನೀವು ಊಹಿಸಲಾರಿರಿ.” ಆ ಸಹೋದರಿಯು, ಆರು ವಾರಗಳ ಕಾಲ ಪ್ರತಿ ಸಂಜೆ ಆ ಸ್ತ್ರೀಯ ಮನೆಗೆ ಹೋದಳು. ಅವಳು ಸಂಜ್ಞಾಭಾಷೆಯನ್ನು ಕಲಿತಳು, ಮತ್ತು ಆ ಕಿವುಡಿಯು ಸತ್ಯವನ್ನು ಕಲಿತು ದೀಕ್ಷಾಸ್ನಾನ ಪಡೆದುಕೊಂಡಳು! ಅದು 30ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ನಡೆಯಿತು, ಮತ್ತು ಆ ಪಯನೀಯರ್ ಸಹೋದರಿಯು ಕಿವುಡರಿಗೆ ಇನ್ನೂ ಸಾಕ್ಷಿನೀಡುತ್ತಿದ್ದಾಳೆ.
6 ನಿಮ್ಮ ಕ್ಷೇತ್ರದಲ್ಲಿರುವ ಟೆರಿಟೊರಿಯು ಚೆನ್ನಾಗಿ ಆವರಿಸಲ್ಪಡುತ್ತಿರುವಲ್ಲಿ ಮತ್ತು ಎಲ್ಲಿ ಕೊಂಚವೇ ಸಾಕ್ಷಿಗಳಿದ್ದಾರೆಂದು ನಿಮಗೆ ಗೊತ್ತಿದೆಯೊ ಆ ಕ್ಷೇತ್ರದಲ್ಲಿ ಮಾತಾಡಲ್ಪಡುವ ಭಾಷೆಯನ್ನು ನೀವು ನಿರರ್ಗಳವಾಗಿ ಮಾತಾಡುವಲ್ಲಿ, ಮತ್ತು ಆ ಕ್ಷೇತ್ರಕ್ಕೆ ಸ್ಥಳಾಂತರಿಸುವ ಬಯಕೆ ನಿಮಗಿರುವಲ್ಲಿ ಹಾಗೂ ಸ್ವಯಂಪ್ರೇರಿತರಾಗಿ ಹಾಗೆ ಮಾಡಲು ಶಕ್ತರಾಗಿರುವಲ್ಲಿ, ಆ ವಿಷಯವನ್ನು ನಿಮ್ಮ ಸಭೆಯಲ್ಲಿರುವ ಹಿರಿಯರೊಂದಿಗೆ ಏಕೆ ಚರ್ಚಿಸಬಾರದು? ನೀವು ಅರ್ಹರೆಂದು ಅವರಿಗೆ ಅನಿಸಿದರೆ, ನೀವು ಸೊಸೈಟಿಗೆ ಬರೆಯಸಾಧ್ಯವಿದೆ. ಆದರೆ ಅದರೊಂದಿಗೆ, ನಿಮ್ಮ ಅರ್ಹತೆಗಳು ಹಾಗೂ ಭಾಷಾ ಕೌಶಲಗಳ ಕುರಿತಾದ ತಮ್ಮ ವೀಕ್ಷಣೆಗಳೊಂದಿಗೆ ಒಂದು ಆವರಣ ಪತ್ರವನ್ನು ಹಿರಿಯರು ಕಳುಹಿಸತಕ್ಕದ್ದು.—ಆಗಸ್ಟ್ 15, 1988ರ ವಾಚ್ಟವರ್, 21-3ನೆಯ ಪುಟಗಳನ್ನು ನೋಡಿರಿ.
7 ಒದಗಿಸಲ್ಪಟ್ಟಿರುವ ಸಾಧನಗಳನ್ನು ಬಳಸುವುದು: ನಮ್ಮ ಸಾಹಿತ್ಯವು ಅನೇಕ ಭಾಷೆಗಳಲ್ಲಿ ದೊರೆಯುತ್ತದೆ. ನಿಮ್ಮ ಟೆರಿಟೊರಿಯಲ್ಲಿ ಮಾತಾಡಲ್ಪಡುವ ಎಲ್ಲ ಭಾಷೆಗಳಲ್ಲಿ ಕಿರುಹೊತ್ತಗೆಗಳನ್ನು ಇಲ್ಲವೆ ಅಪೇಕ್ಷಿಸು ಬ್ರೋಷರನ್ನು ಅಥವಾ ಬೇರೊಂದು ಬ್ರೋಷರನ್ನು ಕೊಂಡೊಯ್ಯುವುದು ಒಳ್ಳೆಯದು. ಸ್ಥಳಿಕ ಭಾಷೆಯು ವ್ಯಕ್ತಿಯೊಬ್ಬನ ಮೂಲ ಭಾಷೆಯಲ್ಲವೆಂದು ವ್ಯಕ್ತವಾದಲ್ಲಿ, ಯಾವ ಭಾಷೆಯಲ್ಲಿ ಓದಲು ಅವನು ಇಷ್ಟಪಡುತ್ತಾನೆಂದು ಕೇಳಿರಿ. ಆಗ, ಸಾಧ್ಯವಿದ್ದಲ್ಲಿ, ಆ ಭಾಷೆಯ ಸಾಹಿತ್ಯವನ್ನು ಅವನಿಗೆ ನೀಡಿರಿ.
8 ನಿಮ್ಮ ಸಾಕ್ಷಿಕಾರ್ಯದಲ್ಲಿ ನೀವು ಸಂಧಿಸುವ ಒಬ್ಬ ವ್ಯಕ್ತಿಯ ಭಾಷೆಯನ್ನು ನೀವು ಮಾತಾಡದಿದ್ದರೂ, ಅವನಿಗೆ ಸುವಾರ್ತೆಯನ್ನು ಪ್ರಸ್ತುತಪಡಿಸಲು ನೀವು ಇನ್ನೂ ಶಕ್ತರಾಗಿರುವಿರಿ. ಹೇಗೆ? ಸಕಲ ಜನಾಂಗಗಳಿಗೆ ಸುವಾರ್ತೆ (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ಉಪಯೋಗಿಸುವ ಮೂಲಕವೇ. ಅದರಲ್ಲಿ 59 ಭಾಷೆಗಳಲ್ಲಿ ಮುದ್ರಿತವಾದ ಸಂಕ್ಷಿಪ್ತ ಸಂದೇಶವಿದೆ. ಆ ಪುಸ್ತಿಕೆಯ 2ನೆಯ ಪುಟದಲ್ಲಿರುವ ಸೂಚನೆಗಳು ವಿವರಿಸುವಂತೆ, ಮನೆಯವನ ಭಾಷೆಯನ್ನು ನೀವು ಗೊತ್ತುಪಡಿಸಿಕೊಂಡ ಬಳಿಕ, ಪುಸ್ತಿಕೆಯಲ್ಲಿ ಸರಿಯಾದ ಪುಟದಲ್ಲಿರುವ ಮುದ್ರಿತ ಮಾಹಿತಿಯನ್ನು ಅವನು ಓದಲಿ. ಅದನ್ನು ಓದಿದ ಬಳಿಕ, ಅವನ ಭಾಷೆಯಲ್ಲಿರುವ ಒಂದು ಪ್ರಕಾಶನವನ್ನು ತೋರಿಸಿರಿ. ನಿಮ್ಮಲ್ಲಿ ಅದು ಇರದಿದ್ದಲ್ಲಿ, ಯಾವ ಭಾಷೆಯಲ್ಲಿ ಅದು ಇದೆಯೊ ಆ ಪ್ರಕಾಶನವನ್ನು ತೋರಿಸಿರಿ. ಅವನ ಭಾಷೆಯ ಒಂದು ಪ್ರತಿಯೊಂದಿಗೆ ನೀವು ಹಿಂದಿರುಗಲು ಪ್ರಯತ್ನಿಸುವಿರೆಂದು ಅವನಿಗೆ ಹೇಳಿರಿ. ಅವನ ಹೆಸರು ಕೇಳಿ, ಅದನ್ನು ವಿಳಾಸದೊಂದಿಗೆ ಬರೆದುಕೊಳ್ಳಿರಿ. ಬಹುಶಃ ನಿಮ್ಮ ಸಭೆಯಲ್ಲಿ ಆ ಭಾಷೆಯನ್ನಾಡುವ ಒಬ್ಬರಿಗೆ ನೀವು ಆ ಮಾಹಿತಿಯನ್ನು ದಾಟಿಸಸಾಧ್ಯವಿದೆ. ಪುನರ್ಭೇಟಿಯನ್ನು ಮಾಡಲು ಆ ಭಾಷೆಯನ್ನಾಡುವ ಯಾರೊಬ್ಬರೂ ಇರದಿದ್ದಲ್ಲಿ, ನಿಮ್ಮ ಭಾಷೆಯಲ್ಲಿರುವ ಪ್ರಕಾಶನವನ್ನು ಅನುಸರಿಸುತ್ತಾ ಆ ವ್ಯಕ್ತಿಯೊಂದಿಗೆ ಅಧ್ಯಯನಮಾಡುವ ಪಂಥಾಹ್ವಾನವನ್ನೂ ಸ್ವೀಕರಿಸಲು ನೀವು ಶಕ್ತರಾಗಿರಬಹುದು.—1 ಕೊರಿಂ. 9:19-23.
ಕ್ರೈಸ್ತೇತರ ಧರ್ಮಗಳ ಜನರಿಗೆ ಸಾಕ್ಷಿನೀಡುವುದು
9 ವ್ಯಕ್ತಿಯೊಬ್ಬನ ಧಾರ್ಮಿಕ ಹಿನ್ನೆಲೆಯ ಕುರಿತು ಒಂದಿಷ್ಟು ಜ್ಞಾನವನ್ನು ಪಡೆದಿರುವುದು, ದೇವರ ರಾಜ್ಯದ ಕುರಿತು ಒಂದು ಪರಿಣಾಮಕಾರಿ ಸಾಕ್ಷಿಯನ್ನೀಡಲು ನಮಗೆ ಸಹಾಯ ಮಾಡುತ್ತದೆ. ಅವರು ಸತ್ಯದ ಜ್ಞಾನಕ್ಕೆ ಬರುವಂತೆ ಸಾಕಷ್ಟು ಸಹಾಯವನ್ನು ನೀಡಲಿಕ್ಕಾಗಿ, ಜನರ ನಂಬಿಕೆಗಳನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ, ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಎಂಬ ಪುಸ್ತಕವು, ಲೋಕದ ಪ್ರಧಾನ ಧರ್ಮಗಳ ಕುರಿತಾದ ಒಳನೋಟವನ್ನು ನಮಗೆ ನೀಡುತ್ತದೆ.
10 ಈ ಪುರವಣಿಯ ಕೊನೆಯ ಪುಟದಲ್ಲಿರುವ ರೇಖಾಚೌಕವು, ಕ್ರೈಸ್ತೇತರ ಜನರಿಗೆ ಸಾಕ್ಷಿನೀಡುವುದರಲ್ಲಿ ಉಪಯೋಗಿಸುವಂತೆ ಯೆಹೋವನ ಸಂಸ್ಥೆಯು ಒದಗಿಸಿರುವ ಕೆಲವೊಂದು ಪ್ರಕಾಶನಗಳ ಒಂದು ಪಟ್ಟಿಯನ್ನು ನೀಡುತ್ತದೆ. ಈ ಪ್ರಕಾಶನಗಳನ್ನು ಓದುವ ಮೂಲಕ, ಜನರನ್ನು ಸುವಾರ್ತೆಯೊಂದಿಗೆ ಸಮೀಪಿಸುವುದು ಹೇಗೆಂದು ನಾವು ತಿಳಿದುಕೊಳ್ಳುತ್ತೇವೆ. ಒಂದು ಸಹಾಯಕಾರಿ ಸಾಧನದೋಪಾದಿ, ರೀಸನಿಂಗ್ ಪುಸ್ತಕವನ್ನು ಮರೆಯಬಾರದು. ಆ ಪುಸ್ತಕದ 21-4ನೆಯ ಪುಟಗಳು, ಬೌದ್ಧರಿಗೆ, ಹಿಂದೂಗಳಿಗೆ, ಯೆಹೂದ್ಯರಿಗೆ, ಮತ್ತು ಮುಸ್ಲಿಮರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಪ್ರಾಯೋಗಿಕ ಸೂಚನೆಗಳನ್ನು ಒದಗಿಸುತ್ತವೆ.
11 ನೀವು ಹೇಳುವ ವಿಷಯದ ಬಗ್ಗೆ ಜಾಗರೂಕರಾಗಿರುವುದು: ಒಂದು ನಿರ್ದಿಷ್ಟ ಧರ್ಮದ ಜನರ ವೈಯಕ್ತಿಕ ನಂಬಿಕೆಗಳು, ಆ ಧರ್ಮದಲ್ಲಿರುವ ಇತರರ ನಂಬಿಕೆಗಳಂತೆಯೇ ಇವೆಯೆಂದು ತೀರ್ಮಾನಿಸುವ ಮೂಲಕ ಅವರನ್ನು ಒಂದು ಪಡಿಯಚ್ಚಿನಲ್ಲಿ ಹಾಕುವುದರಿಂದ ಜಾಗರೂಕರಾಗಿರಬೇಕು. ಬದಲಿಗೆ, ನೀವು ಯಾರೊಂದಿಗೆ ಮಾತಾಡುತ್ತಿದ್ದೀರೊ ಆ ವ್ಯಕ್ತಿಯು ಹೇಗೆ ಆಲೋಚಿಸುತ್ತಾನೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿರಿ. (ಅ. ಕೃ. 10:24-35) ಒಬ್ಬ ಮುಸ್ಲಿಮನೋಪಾದಿ ಸಲೀಮೂನ್, ಕುರಾನ್ ದೇವರ ವಾಕ್ಯವಾಗಿದೆಯೆಂದು ನಂಬುವಂತೆ ಬೆಳೆಸಲ್ಪಟ್ಟನು. ಆದರೆ, ಕರುಣಾಮಯಿಯಾದ ದೇವರು ಜನರನ್ನು ಉರಿಯುವ ನರಕದಲ್ಲಿ ಹಿಂಸಿಸುವನೆಂಬ ಮುಸ್ಲಿಮ್ ಬೋಧನೆಯನ್ನು ಅವನೆಂದಿಗೂ ಪೂರ್ತಿಯಾಗಿ ಸ್ವೀಕರಿಸಸಾಧ್ಯವಿರಲಿಲ್ಲ. ಒಂದು ದಿನ, ಯೆಹೋವನ ಸಾಕ್ಷಿಗಳು ಅವನನ್ನು ಒಂದು ಕೂಟಕ್ಕೆ ಆಮಂತ್ರಿಸಿದರು. ಸತ್ಯವನ್ನು ಕೂಡಲೇ ಗುರುತಿಸುತ್ತಾ, ಈಗ ಅವನೊಬ್ಬ ಹಿರಿಯನೋಪಾದಿ ಕ್ರೈಸ್ತ ಸಭೆಯಲ್ಲಿ ಸಂತೋಷದಿಂದ ಸೇವೆಸಲ್ಲಿಸುತ್ತಾನೆ.
12 ಕ್ರೈಸ್ತೇತರ ನಂಬಿಕೆಗಳವರಿಗೆ ಸಾಕ್ಷಿನೀಡುತ್ತಿರುವಾಗ, ಸುವಾರ್ತೆಯ ಕುರಿತು ಅವರೊಂದಿಗೆ ಸಂಭಾಷಿಸುವ ಅವಕಾಶವನ್ನು ನಮ್ಮ ಪ್ರಸ್ತಾವನೆಯು ನಷ್ಟಪಡಿಸದಿರುವಂತೆ ನಾವು ಜಾಗರೂಕರಾಗಿರಬೇಕು. (ಅ. ಕೃ. 24:16) ಕೆಲವೊಂದು ಧರ್ಮಗಳ ಅನುಯಾಯಿಗಳು, ಅವರನ್ನು ‘ಮತಾಂತರಿಸ’ಲಿಕ್ಕಾಗಿರುವ ಯಾವುದೇ ಪ್ರಯತ್ನಗಳ ಕುರಿತು ಬಹಳ ಸೂಕ್ಷ್ಮಮತಿಗಳಾಗಿರುತ್ತಾರೆ. ಆದುದರಿಂದ, ಅವರನ್ನು ದೇವರ ವಾಕ್ಯದ ಸಂಪೂರ್ಣ ಸತ್ಯಕ್ಕೆ ಆಕರ್ಷಿಸಲು ಸಾಮಾನ್ಯ ಆಧಾರದ ಮೇಲೆ ಕಟ್ಟಸಾಧ್ಯವಿರುವ ಅಂಶಗಳನ್ನು ಕಂಡುಕೊಳ್ಳಲು ಜಾಗೃತರಾಗಿರಿ. ಕುರಿಸದೃಶರು ದಯಾಪರ ಸಮೀಪಿಸುವಿಕೆಗೆ ಮತ್ತು ಸತ್ಯದ ಸ್ಪಷ್ಟವಾದ ನಿರೂಪಣೆಗೆ ಪ್ರತಿಕ್ರಿಯಿಸುವರು.
13 ಪರಿಗಣಿಸಲ್ಪಡಬೇಕಾದ ಒಂದು ಪ್ರಾಮುಖ್ಯ ವಿಷಯವು, ನಮ್ಮ ಶಬ್ದದ ಆಯ್ಕೆಯಾಗಿದೆ. ಇಲ್ಲದಿದ್ದರೆ, ನಾವು ಅನಾವಶ್ಯಕವಾಗಿ ಜನರನ್ನು ನಮ್ಮ ಸಂದೇಶದಿಂದ ವಿಮುಖಗೊಳಿಸುತ್ತೇವೆ. ಉದಾಹರಣೆಗೆ, ನೀವು ನಿಮ್ಮನ್ನು ಒಬ್ಬ ಕ್ರೈಸ್ತರಾಗಿ ಕೂಡಲೆ ಪರಿಚಯಿಸಿಕೊಳ್ಳುವುದಾದರೆ, ನಿಮ್ಮ ಕೇಳುಗನು ಅಭ್ಯಾಸಗತವಾಗಿ ನಿಮ್ಮನ್ನು ಕ್ರೈಸ್ತಪ್ರಪಂಚದ ಚರ್ಚುಗಳಿಗೆ ಸಂಬಂಧಿಸುವನು. ಇದು ಒಂದು ಅಡಚಣೆಯನ್ನು ಉಂಟುಮಾಡಬಹುದು. ಬೈಬಲನ್ನು “ಶಾಸ್ತ್ರ”ಗಳು ಇಲ್ಲವೆ “ಪವಿತ್ರ ಬರಹಗಳು” (NW) ಎಂಬುದಾಗಿ ಸೂಚಿಸಿ ಹೇಳುವುದೂ ಪ್ರಯೋಜನಕರವಾಗಿರಬಹುದು.—ಮತ್ತಾ. 21:42; 2 ತಿಮೊ. 3:15.
14 ಬೌದ್ಧಮತೀಯರಿಗೆ ಸಾಕ್ಷಿನೀಡುವುದು: (ದೇವರಿಗಾಗಿ ಮಾನವಕುಲದ ಅನ್ವೇಷಣೆ ಪುಸ್ತಕದಲ್ಲಿ 6ನೆಯ ಅಧ್ಯಾಯವನ್ನು ನೋಡಿರಿ.) ಬೌದ್ಧಮತೀಯರ ನಂಬಿಕೆಗಳು ಒಬ್ಬೊಬ್ಬ ಅನುಯಾಯಿಯಲ್ಲೂ ಬಹಳವಾಗಿ ಭಿನ್ನವಾಗಿರುತ್ತವೆ. ಒಬ್ಬ ವೈಯಕ್ತಿಕ ಸೃಷ್ಟಿಕರ್ತನ ಅಸ್ತಿತ್ವವನ್ನು ಸಮರ್ಥಿಸುವ ಬದಲಿಗೆ, ಬೌದ್ಧಮತವು ಸಾ.ಶ.ಪೂ. ಆರನೆಯ ಶತಮಾನದ ಗೌತಮ ಬುದ್ಧನನ್ನು ಒಬ್ಬ ಧಾರ್ಮಿಕ ಆದರ್ಶ ವಕ್ತಿಯನ್ನಾಗಿ ವೀಕ್ಷಿಸುತ್ತದೆ. ಗೌತಮನು ಪ್ರಥಮ ಸಲ ಒಬ್ಬ ಅಸ್ವಸ್ಥನನ್ನು, ಒಬ್ಬ ವೃದ್ಧನನ್ನು, ಮತ್ತು ಒಬ್ಬ ಮೃತ ವ್ಯಕ್ತಿಯನ್ನು ನೋಡಿದಾಗ, ಜೀವನದ ಅರ್ಥದ ವಿಷಯವಾಗಿ ಅವನು ವ್ಯಥೆಪಟ್ಟನು. ‘ಮನುಷ್ಯರು ಕೇವಲ ಕಷ್ಟಾನುಭವಿಸಿ, ವೃದ್ಧರಾಗಿ, ಸಾಯಲು ಹುಟ್ಟಿರುತ್ತಾರೊ?’ ಎಂದು ಅವನು ಆಶ್ಚರ್ಯಪಟ್ಟನು. ನಿಶ್ಚಯವಾಗಿಯೂ, ಉತ್ತರಗಳನ್ನು ತಿಳಿದುಕೊಳ್ಳಲು ಬಯಸುವ ಪ್ರಾಮಾಣಿಕ ಬೌದ್ಧಮತೀಯರಿಗೆ ನಾವು ಆ ಪ್ರಶ್ನೆಗಳನ್ನು ಉತ್ತರಿಸಸಾಧ್ಯವಿದೆ.
15 ಬೌದ್ಧಮತೀಯರೊಂದಿಗೆ ಮಾತಾಡುವಾಗ, ಎಲ್ಲ ಪವಿತ್ರ ಪುಸ್ತಕಗಳಲ್ಲೇ ಮಹಾನ್ ಆಗಿರುವ ಬೈಬಲಿನಲ್ಲಿ ಕಂಡುಕೊಳ್ಳಲ್ಪಡುವ ಸಕಾರಾತ್ಮಕವಾದ ಸಂದೇಶ ಹಾಗೂ ಸ್ಪಷ್ಟವಾದ ಸತ್ಯಗಳಿಗೆ ಅಂಟಿಕೊಳ್ಳಿರಿ. ಇತರ ಅಧಿಕಾಂಶ ಜನರಂತೆಯೇ ಬೌದ್ಧಮತೀಯರು, ಶಾಂತಿ, ನೈತಿಕತೆ, ಮತ್ತು ಕುಟುಂಬ ಜೀವನದಲ್ಲಿ ಗಾಢವಾಗಿ ಆಸಕ್ತರಾಗಿರುತ್ತಾರೆ ಮತ್ತು ಅನೇಕ ವೇಳೆ ಈ ವಿಷಯಗಳ ಕುರಿತಾದ ಚರ್ಚೆಗಳನ್ನು ಇಷ್ಟಪಡುತ್ತಾರೆ. ಮಾನವಕುಲದ ಸಮಸ್ಯೆಗಳಿಗೆ ರಾಜ್ಯವು ನಿಜವಾದ ಪರಿಹಾರವೆಂದು ನೀವು ಎತ್ತಿತೋರಿಸುವುದಕ್ಕೆ ಇದು ನಡೆಸಬಲ್ಲದು. ಸಹೋದರಿಯೊಬ್ಬಳು ಚೈನೀಸ್ ಭಾಷೆಯನ್ನಾಡುವ ಒಬ್ಬ ಮನುಷ್ಯನನ್ನು ಕಿರಾಣಿ ಅಂಗಡಿಯಲ್ಲಿ ನೋಡಿದಾಗ, ಅವನ ಭಾಷೆಯಲ್ಲಿ ಅವನಿಗೊಂದು ಕಿರುಹೊತ್ತಗೆಯನ್ನು ಕೊಟ್ಟು, ಬೈಬಲ್ ಅಧ್ಯಯನವನ್ನು ಮಾಡುವಂತೆ ಕೇಳಿಕೊಂಡಳು. ಅವನು ಹೇಳಿದ್ದು: “ನೀವು ಪವಿತ್ರ ಬೈಬಲಿನ ಕುರಿತು ಮಾತಾಡುತ್ತಿದ್ದೀರೊ? ನನ್ನ ಜೀವನಪೂರ್ತಿ ನಾನು ಇದಕ್ಕಾಗಿ ಹುಡುಕುತ್ತಿದ್ದೇನೆ!” ಅವನು ಆ ವಾರ ಅಭ್ಯಾಸಿಸಲು ಆರಂಭಿಸಿ, ಎಲ್ಲ ಕೂಟಗಳಿಗೆ ಹಾಜರಾಗತೊಡಗಿದನು.
16 ಒಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಮತ್ತೊಬ್ಬ ಪಯನೀಯರ್ ಸಹೋದರಿಯು, ಚೈನೀಸ್ ವಿದ್ಯಾರ್ಥಿಗಳಿಗೆ ಸತ್ಯವನ್ನು ಕಲಿಸುತ್ತಿದ್ದಾಳೆ. ಈ ವಿದ್ಯಾರ್ಥಿಗಳು ವಾಸವಾಗಿರುವ ಎಂಟು ಕೋಣೆಗಳ ಒಂದು ಕಟ್ಟಡದಲ್ಲಿ ಕೆಲಸಮಾಡುತ್ತಿರುವಾಗ, ಪ್ರತಿಯೊಂದು ಕೋಣೆಯಲ್ಲಿ ಅಭ್ಯಾಸವನ್ನು ಆರಂಭಿಸಲು ಸಹಾಯ ಮಾಡುವಂತೆ ಅವಳು ಯೆಹೋವನಲ್ಲಿ ಪ್ರಾರ್ಥಿಸಿದಳು. ಎರಡು ವಾರಗಳೊಳಗೆ, ಪ್ರತಿ ಕೋಣೆಯಲ್ಲಿ ಕಡಿಮೆಯೆಂದರೆ ಒಬ್ಬ ವಿದ್ಯಾರ್ಥಿಯೊಂದಿಗಾದರೂ ಅವಳು ಅಭ್ಯಾಸಿಸುತ್ತಿದ್ದಳು. ವಿದ್ಯಾರ್ಥಿಗಳಲ್ಲಿ ಒಂದು ಸಾಮಾನ್ಯ ಚಿಂತೆ—ಅವರೆಲ್ಲರೂ ಶಾಂತಿ ಮತ್ತು ಸಂತೋಷವನ್ನು ಬಯಸುತ್ತಾರೆ—ಯನ್ನು ತಾನು ಕಂಡುಕೊಂಡಿರುವುದಾಗಿ ಹೇಳುವುದು, ಅವಳಿಗೆ ಒಂದು ಪರಿಣಾಮಕಾರಿ ಪ್ರಸ್ತಾವನೆಯಾಗಿ ಪರಿಣಮಿಸಿದೆ. ಅದು ಅವರ ಚಿಂತೆಯೂ ಆಗಿದೆಯೊ ಎಂದು ಅವಳು ಕೇಳುತ್ತಾಳೆ. ಅವರು ಯಾವಾಗಲೂ ಹೌದೆನ್ನುತ್ತಾರೆ. ಚೈನೀಸ್ ಜನರಿಗಾಗಿ ರಚಿಸಲ್ಪಟ್ಟಿರುವ, ಬಾಳುವ ಶಾಂತಿ ಮತ್ತು ಸಂತೋಷ—ಅವುಗಳನ್ನು ಕಂಡುಕೊಳ್ಳುವ ವಿಧ (ಇಂಗ್ಲಿಷ್) ಎಂಬ ಬ್ರೋಷರಿಗೆ ಅವರ ಗಮನವನ್ನು ಸೆಳೆಯುತ್ತಾಳೆ. ಕೇವಲ ಐದು ಅಭ್ಯಾಸಾವಧಿಗಳ ತರುವಾಯ, ತಾನು ದೀರ್ಘ ಸಮಯದಿಂದ ಸತ್ಯಕ್ಕಾಗಿ ಹುಡುಕುತ್ತಾ ಇದ್ದು, ಈಗ ಅದನ್ನು ಕಂಡುಕೊಂಡಿರುವುದಾಗಿ ಒಬ್ಬ ವಿದ್ಯಾರ್ಥಿಯು ಅವಳಿಗೆ ಹೇಳಿದನು.
17 ಹಿಂದೂಗಳಿಗೆ ಸಾಕ್ಷಿನೀಡುವುದು: (ದೇವರಿಗಾಗಿ ಮಾನವಕುಲದ ಅನ್ವೇಷಣೆ ಪುಸ್ತಕದಲ್ಲಿ 5ನೆಯ ಅಧ್ಯಾಯವನ್ನು ನೋಡಿರಿ.) ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರುವಂತೆ, ಹಿಂದೂಮತಕ್ಕೆ ನಿಶ್ಚಿತವಾದ ಸಿದ್ಧಾಂತವಿರುವುದಿಲ್ಲ. ಅದರ ತತ್ವಜ್ಞಾನವು ತುಂಬ ಜಟಿಲವಾಗಿದೆ. ತಮ್ಮ ಪ್ರಧಾನ ದೇವನಾದ ಬ್ರಹ್ಮನ ಕುರಿತು ಹಿಂದೂಗಳಿಗೆ ತ್ರಯೈಕ್ಯ ಪರಿಕಲ್ಪನೆಯಿದೆ (ಸೃಷ್ಟಿಕರ್ತ ಬ್ರಹ್ಮ, ಸಂರಕ್ಷಕ ವಿಷ್ಣು, ಮತ್ತು ವಿನಾಶಕ ಶಿವ). ಅಮರ ಆತ್ಮದಲ್ಲಿನ ನಂಬಿಕೆಯು, ಪುನರವತಾರದ ಅವರ ಬೋಧನೆಗೆ ಅತ್ಯಾವಶ್ಯಕವಾಗಿದೆ. ಇದು ಹಿಂದೂಗಳಿಗೆ ಜೀವನದ ವಿಧಿವಾದಾತ್ಮಕ ದೃಷ್ಟಿಕೋನವನ್ನು ಕೊಡುತ್ತದೆ. (ರೀಸನಿಂಗ್ ಪುಸ್ತಕ, 317-21ನೆಯ ಪುಟಗಳನ್ನು ಮತ್ತು ಮೇ 15, 1997ರ ಕಾವಲಿನಬುರುಜು, 3-8ನೆಯ ಪುಟಗಳನ್ನು ನೋಡಿರಿ.) ಹಿಂದೂಮತವು ಸಹಿಷ್ಣುತೆಯನ್ನು, ಎಲ್ಲ ಧರ್ಮಗಳು ಒಂದೇ ಸತ್ಯಕ್ಕೆ ನಡೆಸುತ್ತವೆಂಬ ವಿಷಯವನ್ನು ಕಲಿಸುತ್ತದೆ.
18 ಹಿಂದೂ ತತ್ವಜ್ಞಾನದ ಕುರಿತಾದ ದೀರ್ಘವಾದ ಚರ್ಚೆಗಳಲ್ಲಿ ತೊಡಗುವುದರ ಬದಲಿಗೆ, ಒಬ್ಬ ಹಿಂದೂ ವ್ಯಕ್ತಿಗೆ ಸಾಕ್ಷಿನೀಡುವಾಗ ಉಪಯೋಗಿಸಬೇಕಾದ ಪ್ರಸ್ತಾವನೆಯು ಯಾವುದೆಂದರೆ, ಭೂಮಿಯ ಮೇಲೆ ಮಾನವ ಪರಿಪೂರ್ಣತೆಯಲ್ಲಿ ಸದಾಕಾಲ ಜೀವಿಸುವ ನಮ್ಮ ಬೈಬಲಾಧಾರಿತ ನಿರೀಕ್ಷೆಯನ್ನು, ಅಲ್ಲದೆ ಸಕಲ ಮಾನವಕುಲವನ್ನು ಎದುರಿಸುವ ಪ್ರಮುಖ ಪ್ರಶ್ನೆಗಳಿಗೆ ಬೈಬಲು ನೀಡುವ ತೃಪ್ತಿಕರ ಉತ್ತರಗಳನ್ನು ವಿವರಿಸುವುದೇ ಆಗಿದೆ.
19 ಯೆಹೂದ್ಯರಿಗೆ ಸಾಕ್ಷಿನೀಡುವುದು: (ದೇವರಿಗಾಗಿ ಮಾನವಕುಲದ ಅನ್ವೇಷಣೆ ಪುಸ್ತಕದಲ್ಲಿ 9ನೆಯ ಅಧ್ಯಾಯವನ್ನು ನೋಡಿರಿ.) ಅನ್ಯ ಕ್ರೈಸ್ತೇತರ ಧರ್ಮಗಳಂತಿರದೆ, ಯೆಹೂದ್ಯಮತವು ಪುರಾಣಕಥೆಯಲ್ಲಲ್ಲ, ಇತಿಹಾಸದಲ್ಲಿ ಬೇರೂರಿದೆ. ಪ್ರೇರಿತ ಹೀಬ್ರು ಶಾಸ್ತ್ರಗಳ ಮುಖಾಂತರ, ಸತ್ಯ ದೇವರಿಗಾಗಿ ಮಾನವಕುಲದ ಅನ್ವೇಷಣೆಯಲ್ಲಿ ಒಂದು ಅತ್ಯಾವಶ್ಯಕ ಕೊಂಡಿಯು ಒದಗಿಸಲ್ಪಟ್ಟಿದೆ. ಆದರೂ, ದೇವರ ವಾಕ್ಯಕ್ಕೆ ವಿರುದ್ಧವಾಗಿ, ಆಧುನಿಕ ಯೆಹೂದ್ಯಮತದ ಒಂದು ಮೂಲಭೂತ ಬೋಧನೆಯು, ಅಮರ ಮಾನವ ಆತ್ಮದಲ್ಲಿನ ನಂಬಿಕೆಯಾಗಿದೆ. ನಾವು ಅಬ್ರಹಾಮನ ದೇವರನ್ನು ಆರಾಧಿಸುತ್ತೇವೆಂದು ದೃಢೀಕರಿಸುವ ಮೂಲಕ ಮತ್ತು ಇಂದಿನ ಲೋಕದಲ್ಲಿ ನಾವೆಲ್ಲರೂ ಅದೇ ಕಷ್ಟಗಳನ್ನು ಎದುರಿಸುತ್ತೇವೆಂದು ಒಪ್ಪಿಕೊಳ್ಳುವ ಮೂಲಕ, ಒಂದು ಸಾಮಾನ್ಯ ಆಧಾರವನ್ನು ಸ್ಥಾಪಿಸಸಾಧ್ಯವಿದೆ.
20 ದೇವರಲ್ಲಿ ನಂಬಿಕೆಯ ಕೊರತೆಯನ್ನು ಪ್ರದರ್ಶಿಸುವ ಒಬ್ಬ ಯೆಹೂದಿಯನ್ನು ನೀವು ಸಂಧಿಸುವಲ್ಲಿ, ಅವನಿಗೆ ಯಾವುದು ಬಹಳಷ್ಟು ಆಕರ್ಷಕವಾಗಿರುವುದೆಂದು ವಿವೇಚಿಸಲು, ಅವನಿಗೆ ಯಾವಾಗಲೂ ಹಾಗೆಯೇ ಅನಿಸಿದೆಯೊ ಎಂದು ಕೇಳುವುದು ನಿಮಗೆ ಸಹಾಯ ಮಾಡಬಹುದು. ಉದಾಹರಣೆಗೆ, ದೇವರು ಕಷ್ಟಾನುಭವಕ್ಕೆ ಅನುಮತಿ ನೀಡುವ ಕಾರಣದ ಕುರಿತು ಅವನೆಂದಿಗೂ ಒಂದು ತೃಪ್ತಿಕರ ವಿವರಣೆಯನ್ನು ಕೇಳಿಸಿಕೊಂಡಿರಲಿಕ್ಕಿಲ್ಲ. ಮೆಸ್ಸೀಯನೋಪಾದಿ ಯೇಸುವಿನ ಗುರುತನ್ನು ಪುನಃ ಪರೀಕ್ಷಿಸುವಂತೆ ಪ್ರಾಮಾಣಿಕ ಯೆಹೂದ್ಯರು ಉತ್ತೇಜಿಸಲ್ಪಡಬಲ್ಲರು. ಕ್ರೈಸ್ತಪ್ರಪಂಚದವರು ಅವನನ್ನು ತಪ್ಪಾಗಿ ಪ್ರತಿನಿಧಿಸುವ ರೀತಿಯಲ್ಲಲ್ಲ, ಬದಲಿಗೆ ಗ್ರೀಕ್ ಶಾಸ್ತ್ರಗಳ ಯೆಹೂದಿ ಬರಹಗಾರರು ಅವನನ್ನು ನಿರೂಪಿಸುವ ವಿಧದ ಮೂಲಕವೇ.
21 ಮುಸ್ಲಿಮರಿಗೆ ಸಾಕ್ಷಿನೀಡುವುದು: (ದೇವರಿಗಾಗಿ ಮಾನವಕುಲದ ಅನ್ವೇಷಣೆ ಪುಸ್ತಕದಲ್ಲಿ 12ನೆಯ ಅಧ್ಯಾಯವನ್ನು ನೋಡಿರಿ.) ಇಸ್ಲಾಮ್ ಧರ್ಮದ ಅನುಯಾಯಿಗಳಾದ ಮುಸ್ಲಿಮರು, ತಮ್ಮ ಏಕೈಕ ದೇವನಾಗಿ ಅಲ್ಲಾನಲ್ಲಿ ಮತ್ತು ಅವನ ಕೊನೆಯ ಹಾಗೂ ಅತ್ಯಂತ ಪ್ರಮುಖ ಪ್ರವಾದಿಯಾಗಿ ಮಹಮ್ಮದ್ (ಸಾ.ಶ. 570-632)ನಲ್ಲಿ ನಂಬಿಕೆಯಿಡುತ್ತಾರೆ. ದೇವರಿಗೆ ಮಗನಿದ್ದನೆಂದು ಅವರು ನಂಬದ ಕಾರಣ, ಯೇಸು ಕ್ರಿಸ್ತನನ್ನು ಮುಸ್ಲಿಮರು ದೇವರ ಅಪ್ರಮುಖ ಪ್ರವಾದಿಯಾಗಿ—ಅದಕ್ಕಿಂತ ಹೆಚ್ಚಿನವನಾಗಿ ಅಲ್ಲ—ಗುರುತಿಸುತ್ತಾರೆ. 1,400ಕ್ಕಿಂತಲೂ ಕಡಿಮೆ ವರ್ಷಗಳ ಹಿಂದೆ ಬರೆಯಲ್ಪಟ್ಟ ಕುರಾನ್, ಹೀಬ್ರು ಹಾಗೂ ಗ್ರೀಕ್ ಶಾಸ್ತ್ರಗಳನ್ನು—ಎರಡನ್ನೂ—ಉದ್ಧರಿಸುತ್ತದೆ. ಇಸ್ಲಾಮ್ ಮತ್ತು ಕ್ಯಾತೊಲಿಕ್ ಧರ್ಮಗಳ ನಡುವೆ ಬಲವಾದ ಹೋಲಿಕೆಗಳಿವೆ. ಎರಡೂ ಧರ್ಮಗಳು, ಮಾನವ ಆತ್ಮದ ಅಮರತ್ವ, ತಾತ್ಕಾಲಿಕ ಚಿತ್ರಹಿಂಸೆಯ ಸ್ಥಿತಿ, ಮತ್ತು ಉರಿಯುವ ನರಕದ ಅಸ್ತಿತ್ವವನ್ನು ಕಲಿಸುತ್ತವೆ.
22 ಒಬ್ಬನೇ ಸತ್ಯ ದೇವರಿದ್ದಾನೆ ಮತ್ತು ಬೈಬಲು ಆತನಿಂದ ಪ್ರೇರಿತವಾದದ್ದು ಎಂಬ ನಮ್ಮ ನಂಬಿಕೆಯು ಸ್ಪಷ್ಟವಾದ ಸಾಮಾನ್ಯ ಆಧಾರವಾಗಿದೆ. ಕುರಾನಿನ ಒಬ್ಬ ಜಾಗರೂಕ ಓದುಗನು, ಟೋರ, ಕೀರ್ತನೆಗಳು ಮತ್ತು ಸುವಾರ್ತೆಗಳನ್ನು ದೇವರ ವಾಕ್ಯವಾಗಿ ಉಲ್ಲೇಖಿಸಲ್ಪಟ್ಟಿರುವುದನ್ನು ನೋಡಿದ್ದಾನೆ ಮತ್ತು ಅವುಗಳನ್ನು ಹಾಗೆಂದು ಗುರುತಿಸಿ, ಅವುಗಳಿಗೆ ವಿಧೇಯರಾಗಬೇಕೆಂದು ಓದಿದ್ದಾನೆ. ಆದಕಾರಣ, ವ್ಯಕ್ತಿಯೊಂದಿಗೆ ಇವುಗಳನ್ನು ಅಭ್ಯಾಸಿಸಲು ನೀವು ಸಿದ್ಧರಿದ್ದೀರೆಂದು ಹೇಳಸಾಧ್ಯವಿದೆ.
23 ಮುಸ್ಲಿಮ್ ಆಗಿರುವ ಒಬ್ಬನಿಗೆ ಈ ನಿರೂಪಣೆಯು ಕಾರ್ಯಸಾಧಕವಾಗಿರಬಹುದು: “ಈ ಕೈಪಿಡಿಯಲ್ಲಿ ನಿಮ್ಮ ಧರ್ಮದ ಕೆಲವೊಂದು ಬೋಧನೆಗಳ ಕುರಿತು ನಾನು ಓದಿದ್ದೇನೆ. [ರೀಸನಿಂಗ್ ಪುಸ್ತಕವನ್ನು 24ನೆಯ ಪುಟಕ್ಕೆ ತಿರುಗಿಸಿರಿ.] ಯೇಸು ಒಬ್ಬ ಪ್ರವಾದಿಯಾಗಿದ್ದನು, ಆದರೆ ಮಹಮ್ಮದನು ಕೊನೆಯ ಹಾಗೂ ಅತ್ಯಂತ ಪ್ರಮುಖ ಪ್ರವಾದಿಯಾಗಿದ್ದನೆಂದು ನೀವು ನಂಬುವುದಾಗಿ ಅದು ಹೇಳುತ್ತದೆ. ಮೋಶೆಯು ಒಬ್ಬ ನಿಜ ಪ್ರವಾದಿಯಾಗಿದ್ದನೆಂಬುದನ್ನೂ ನೀವು ನಂಬುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮೋಶೆಯು ದೇವರಿಂದ ಆತನ ವೈಯಕ್ತಿಕ ಹೆಸರಿನ ಕುರಿತು ಏನನ್ನು ಕಲಿತನೆಂಬುದನ್ನು ನಾನು ನಿಮಗೆ ತೋರಿಸಲೊ?” ಅನಂತರ ವಿಮೋಚನಕಾಂಡ 6:2, 3ನ್ನು ಓದಿರಿ. ಪುನರ್ಭೇಟಿಯಲ್ಲಿ, ದೇವರಿಗೆ ನಿಜವಾದ ಅಧೀನತೆಯನ್ನು ತೋರಿಸಲಿಕ್ಕಾಗಿರುವ ಸಮಯ (ಇಂಗ್ಲಿಷ್) ಎಂಬ ಪುಸ್ತಿಕೆಯಲ್ಲಿ, 13ನೆಯ ಪುಟದಲ್ಲಿರುವ “ಒಬ್ಬನೇ ದೇವರು, ಒಂದೇ ಧರ್ಮ” ಎಂಬ ಉಪಶೀರ್ಷಿಕೆಯನ್ನು ನೀವು ಚರ್ಚಿಸಬಹುದು.
24 ಇಂದು, ಯೆಶಾಯ 55:6ರ ಮಾತುಗಳಿಗೆ ಅನುಗುಣವಾಗಿ ಅನೇಕರು ಕಾರ್ಯನಡಿಸುತ್ತಿದ್ದಾರೆ. ಅದು ಓದುವುದು: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.” ಇದು ಎಲ್ಲ ಪ್ರಾಮಾಣಿಕ ಹೃದಯದ ಜನರಿಗೆ—ಅವರು ಮಾತಾಡುವ ಭಾಷೆ ಇಲ್ಲವೆ ಅವರ ಧಾರ್ಮಿಕ ಹಿನ್ನೆಲೆ ಯಾವುದೇ ಆಗಿರಲಿ—ಅನ್ವಯಿಸುತ್ತದೆ. ನಾವು ಹೋಗಿ “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡಲು ಪ್ರಯತ್ನಿಸಿದಂತೆ, ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನೆಂಬ ಭರವಸೆಯಿಂದ ಇರಬಲ್ಲೆವು.—ಮತ್ತಾ. 28:19.
ಪುಟ 6ರಲ್ಲಿರುವಚೌಕ]
ಕ್ರೈಸ್ತೇತರ ಜನರಿಗಾಗಿ ವಿನ್ಯಾಸಿಸಲ್ಪಟ್ಟ ಸಾಹಿತ್ಯ
ಬೌದ್ಧಮತೀಯರು
“ಇಗೋ! ನಾನು ಎಲ್ಲವನ್ನು ಹೊಸದು ಮಾಡುತ್ತೇನೆ” (ಬ್ರೋಷರ್)
ಒಬ್ಬ ತಂದೆಯ ಅನ್ವೇಷಣೆಯಲ್ಲಿ (ಪುಸ್ತಿಕೆ, ಇಂಗ್ಲಿಷ್)
ಚೈನೀಸ್
ಬಾಳುವ ಶಾಂತಿ ಮತ್ತು ಸಂತೋಷ—ಅವುಗಳನ್ನು ಕಂಡುಕೊಳ್ಳುವ ವಿಧ (ಬ್ರೋಷರ್, ಇಂಗ್ಲಿಷ್)
ಹಿಂದೂಗಳು
ಕುರುಕ್ಷೇತ್ರದಿಂದ ಅರ್ಮಗೆದೋನಿಗೆ—ಮತ್ತು ನಿಮ್ಮ ಪಾರಾಗುವಿಕೆ (ಪುಸ್ತಿಕೆ)
ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? (ಬ್ರೋಷರ್)
ಮರಣದ ಮೇಲೆ ವಿಜಯ—ಅದು ನಿಮಗೆ ಸಾಧ್ಯವೊ? (ಪುಸ್ತಿಕೆ, ಇಂಗ್ಲಿಷ್)
ಮುಕ್ತಿಗೆ ನಡಿಸುವ ದೈವಿಕ ಸತ್ಯದ ಹಾದಿ (ಪುಸ್ತಿಕೆ)
ಯೆಹೂದ್ಯರು
ಯುದ್ಧರಹಿತ ಲೋಕವು ಎಂದಾದರೂ ಇರುವುದೊ? (ಬ್ರೋಷರ್, ಇಂಗ್ಲಿಷ್)
ಮುಸ್ಲಿಮರು
ಪರದೈಸಿಗೆ ಹೋಗುವ ಹಾದಿಯನ್ನು ಕಂಡುಕೊಳ್ಳುವ ವಿಧ (ಕಿರುಹೊತ್ತಗೆ)
ದೇವರಿಗೆ ನಿಜವಾದ ಅಧೀನತೆಯನ್ನು ತೋರಿಸಲಿಕ್ಕಾಗಿರುವ ಸಮಯ (ಪುಸ್ತಿಕೆ, ಇಂಗ್ಲಿಷ್)