ಯೆಹೋವನ ಸೇವೆಯ ಸುತ್ತಲೂ ನಿಮ್ಮ ಜೀವಿತವನ್ನು ಕಟ್ಟಿರಿ
1 ಯೇಸು ತನ್ನ ಕೇಳುಗರನ್ನು ಎರಡು ವಿಧವಾದ ವಾಸ್ತುಶಿಲ್ಪಿಗಳಿಗೆ ಹೋಲಿಸಿದನು. ಒಬ್ಬನು ಕ್ರಿಸ್ತನಿಗೆ ವಿಧೇಯನಾಗುವುದರ ಬಂಡೆಯ ಮೇಲೆ ತನ್ನ ಜೀವನ ರೀತಿಯನ್ನು ಕಟ್ಟಿ, ವಿರೋಧ ಹಾಗೂ ಸಂಕಷ್ಟದ ಬಿರುಗಾಳಿಯು ಬೀಸಿದಾಗ ಎದುರಿಸಿ ನಿಲ್ಲಲು ಶಕ್ತನಾದನು. ಮತ್ತೊಬ್ಬನು, ಸ್ವಾರ್ಥಪರ ಅವಿಧೇಯತೆ ಎಂಬ ಮರಳಿನ ಮೇಲೆ ತನ್ನ ಜೀವನ ರೀತಿಯನ್ನು ಕಟ್ಟಿ, ಒತ್ತಡವು ಬಂದಾಗ ಅದನ್ನು ಎದುರಿಸಿ ನಿಲ್ಲಲಾಗದೆ ಹೋದನು. (ಮತ್ತಾ. 7:24-27) ಈ ವಿಷಯಗಳ ವ್ಯವಸ್ಥೆಯ ಅಂತ್ಯದಲ್ಲಿ ಜೀವಿಸುತ್ತಿರಲಾಗಿ ನಾವು ಅನೇಕ ಎಡರುತೊಡರುಗಳ ಬಿರುಗಾಳಿಯನ್ನು ಎದುರಿಸುತ್ತೇವೆ. ಬಾನಂಚಿನಲ್ಲಿ ಮಹಾ ಸಂಕಟದ ಕಪ್ಪು ಮೋಡಗಳು ತ್ವರಿತಗತಿಯಲ್ಲಿ ಒಟ್ಟುಗೂಡುತ್ತಿವೆ. ನಮ್ಮ ನಂಬಿಕೆಯನ್ನು ಅಖಂಡವಾಗಿಟ್ಟುಕೊಂಡು ಕೊನೆಯ ತನಕ ನಾವು ತಾಳಿಕೊಳ್ಳುವೆವೋ? (ಮತ್ತಾ. 24:3, 13, 21) ನಮ್ಮ ಜೀವಿತಗಳನ್ನು ನಾವು ಈಗ ಹೇಗೆ ಕಟ್ಟುತ್ತಿದ್ದೇವೋ ಅದರ ಮೇಲೆ ಹೆಚ್ಚಿನದ್ದು ಅವಲಂಬಿಸುತ್ತದೆ. ಆದುದರಿಂದ, ‘ದೇವರಿಗೆ ವಿಧೇಯ ಸೇವೆಯನ್ನು ಸಲ್ಲಿಸುವುದರ ಸುತ್ತಲೂ ನಾನು ನನ್ನ ಕ್ರಿಸ್ತೀಯ ಜೀವಿತವನ್ನು ದೃಢವಾಗಿ ಕಟ್ಟುತ್ತಿದ್ದೇನೋ?’ ಎಂಬುದಾಗಿ ಆತ್ಮವಿಮರ್ಶೆ ಮಾಡಿಕೊಳ್ಳುವುದು ಬಹಳ ತುರ್ತಿನದ್ದಾಗಿದೆ.
2 ಯೆಹೋವನ ಸೇವೆಯ ಸುತ್ತಲೂ ನಮ್ಮ ಜೀವಿತಗಳನ್ನು ಕಟ್ಟುವುದು ಅಂದರೇನು? ಅಂದರೆ ಯೆಹೋವನನ್ನು ನಮ್ಮ ಜೀವಿತಗಳ ಕೇಂದ್ರ ಬಿಂದುವನ್ನಾಗಿ ಮಾಡಿಕೊಳ್ಳುವುದೇ ಆಗಿದೆ. ಇದು ರಾಜ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವುದನ್ನು ನಮ್ಮ ಮುಖ್ಯ ಆಸ್ಥೆಯನ್ನಾಗಿ ಮಾಡಿಕೊಳ್ಳುವುದನ್ನು ಒಳಗೊಳ್ಳುತ್ತದೆ. ಇದು ನಮ್ಮ ದಿನನಿತ್ಯದ ಜೀವಿತಗಳ ಕಾರ್ಯಕಲಾಪಗಳಲ್ಲೆಲ್ಲ ದೇವರಿಗೆ ವಿಧೇಯರಾಗಿರುವುದನ್ನು ಅವಶ್ಯಪಡಿಸುತ್ತದೆ. ಇದು ವೈಯಕ್ತಿಕವಾಗಿ, ಕುಟುಂಬವಾಗಿ ಮತ್ತು ಸಭೆಯಲ್ಲಿ ಬೈಬಲನ್ನು ಅಭ್ಯಾಸಿಸುವುದರಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ನಮ್ಮನ್ನು ಮನಪೂರ್ವಕವಾಗಿ ತೊಡಗಿಸಿಕೊಳ್ಳುವುದನ್ನು ಮತ್ತು ಇವುಗಳನ್ನು ನಮ್ಮ ಆದತ್ಯೆಗಳನ್ನಾಗಿಡುವುದನ್ನು ಕೇಳಿಕೊಳ್ಳುತ್ತದೆ. (ಪ್ರಸಂ. 12:13; ಮತ್ತಾ. 6:33) ಅಂಥ ಒಂದು ವಿಧೇಯ ಜೀವನಕ್ರಮವು, ಕಲ್ಲುಬಂಡೆಯಷ್ಟು ಬಲವಾದ ನಂಬಿಕೆಯನ್ನು ನಮ್ಮಲ್ಲಿ ಉಂಟುಮಾಡುವುದು. ಇದು ನಮ್ಮನ್ನು ತಾಕುವ ಯಾವುದೇ ವಿಪತ್ತಿನ ಬಿರುಗಾಳಿಯ ಎದುರಿನಲ್ಲೂ ಕುಸಿದುಹೋಗದು.
3 ಯೇಸುವಿನಂತೆಯೇ, ಕೋಟ್ಯಂತರ ಜನರು ತಮ್ಮ ಜೀವಿತಗಳನ್ನು ಮತ್ತು ಭವಿಷ್ಯತ್ತಿಗಾಗಿರುವ ತಮ್ಮ ನಿರೀಕ್ಷೆಗಳನ್ನು ದೇವರ ಸೇವೆಯ ಸುತ್ತಲೂ ದೃಢಭರವಸೆಯಿಂದ ಕಟ್ಟುತ್ತಿರುವುದು ನಿಜವಾಗಿಯೂ ಆನಂದದಾಯಕವಾದ ವಿಷಯವಾಗಿದೆ. (ಯೋಹಾ. 4:34) ಅವರು ದೇವಪ್ರಭುತ್ವ ಕಾರ್ಯಕಲಾಪಗಳ ಒಂದು ಏಕಪ್ರಕಾರವಾದ ಶೆಡ್ಯೂಲಿಗೆ ಅಂಟಿಕೊಳ್ಳುತ್ತಾರೆ ಮತ್ತು ಇದರ ಪರಿಣಾಮವಾಗಿ ಹೇರಳವಾದ ಆಶೀರ್ವಾದಗಳನ್ನು ಅನುಭವಿಸುತ್ತಾರೆ. ತಾನು ಮತ್ತು ತನ್ನ ಪತಿಯು ಹೇಗೆ ತಮ್ಮ ಇಬ್ಬರು ಪುತ್ರರನ್ನು ಯೆಹೋವನನ್ನು ಸೇವಿಸುವಂತೆ ಬೆಳೆಸಿದರೆಂಬುದರ ಕುರಿತಾಗಿ ಒಬ್ಬ ತಾಯಿಯು ಹೀಗೆ ವಿವರಿಸುತ್ತಾಳೆ: “ಎಲ್ಲ ಅಧಿವೇಶನಗಳಿಗೆ ಹೋಗುವುದು, ಕೂಟಗಳಿಗಾಗಿ ತಯಾರಿಸುವುದು ಹಾಗೂ ಹಾಜರಾಗುವುದು ಮತ್ತು ಕ್ಷೇತ್ರ ಸೇವೆಯನ್ನು ನಮ್ಮ ಜೀವಿತಗಳ ಒಂದು ಕ್ರಮವಾದ ಭಾಗವನ್ನಾಗಿ ಮಾಡುವ ಮೂಲಕ, ನಾವು ನಮ್ಮ ಜೀವಿತಗಳನ್ನು ಸತ್ಯದಿಂದ ತುಂಬಿಸಿದೆವು.” ಅವಳ ಪತಿಯು ಅದಕ್ಕೆ ಕೂಡಿಸಿ ಹೇಳುವುದು: “ಸತ್ಯವು ನಮ್ಮ ಜೀವಿತದ ಭಾಗವಾಗಿಲ್ಲ, ಬದಲಿಗೆ ಅದು ತಾನೇ ನಮ್ಮ ಜೀವಿತವಾಗಿದೆ. ಪ್ರತಿಯೊಂದು ವಿಷಯವು ಅದರ ಸುತ್ತಲೂ ತಿರುಗುತ್ತದೆ.” ನೀವು ಸಹ ನಿಮ್ಮ ಕುಟುಂಬದಲ್ಲಿ ಯೆಹೋವನ ಸೇವೆಗೆ ಪ್ರಪ್ರಥಮ ಸ್ಥಾನವನ್ನು ಇದೇ ರೀತಿಯಲ್ಲಿ ಕೊಟ್ಟಿದ್ದೀರೋ?
4 ಕಾರ್ಯಸಾಧಕ ಸಾಪ್ತಾಹಿಕ ಶೆಡ್ಯೂಲನ್ನು ತಯಾರಿಸಿರಿ: ವಾರದಲ್ಲಿ ಐದು ಕೂಟಗಳನ್ನು ಏರ್ಪಡಿಸುವ ಮೂಲಕ, ಒಂದು ಒಳ್ಳೆಯ ಆತ್ಮಿಕ ನಿಯತಕ್ರಮವನ್ನು ಅನುಸರಿಸುವಂತೆ ನಮಗೆ ಯೆಹೋವನ ಸಂಸ್ಥೆಯು ಸಹಾಯಮಾಡುತ್ತದೆ. ಯೆಹೋವನ ಆರಾಧನೆಯ ಸುತ್ತಲೂ ತಮ್ಮ ಜೀವಿತಗಳನ್ನು ಕಟ್ಟುತ್ತಿರುವ ಕ್ರೈಸ್ತರು, ಈ ಎಲ್ಲ ಪ್ರಾಮುಖ್ಯ ಕೂಟಗಳಿಗೆ ಹಾಜರಾಗಸಾಧ್ಯವಾಗುವಂತಹ ರೀತಿಯಲ್ಲಿ ತಮ್ಮ ಐಹಿಕ ಹಾಗೂ ಕೌಟುಂಬಿಕ ವ್ಯವಹಾರಗಳನ್ನು ಏರ್ಪಡಿಸುತ್ತಾರೆ. ಅಷ್ಟೇನೂ ಪ್ರಾಮುಖ್ಯವಲ್ಲದ ವಿಷಯಗಳು ತಮ್ಮ ಕ್ರಮವಾದ ಹಾಜರಿಗೆ ಅಡ್ಡ ಬರುವಂತೆ ಅವರು ಅನುಮತಿಸುವುದಿಲ್ಲ.—ಫಿಲಿ. 1:10; ಇಬ್ರಿ. 10:25.
5 ಪ್ರತಿದಿನವೂ ಇಂಥಿಂಥ ಸಮಯಗಳಲ್ಲಿ ಕ್ರಮವಾಗಿ ಆಹಾರವನ್ನು ಸೇವಿಸುವುದು ಎಷ್ಟು ಪ್ರಾಮುಖ್ಯವಾಗಿದೆಯೋ, ಅದೇ ರೀತಿಯಲ್ಲಿ ಕೂಟಗಳಿಗಾಗಿ ತಯಾರಿ ಮಾಡುವುದನ್ನು ಸೇರಿಸಿ, ವೈಯಕ್ತಿಕ ಮತ್ತು ಕುಟುಂಬ ಅಭ್ಯಾಸಕ್ಕಾಗಿ ನಿಶ್ಚಿತವಾದ ಶೆಡ್ಯೂಲನ್ನು ಮಾಡುವುದೂ ಪ್ರಾಮುಖ್ಯವಾಗಿದೆ ಎಂಬುದನ್ನು ಪ್ರೌಢ ಕ್ರೈಸ್ತರು ಗ್ರಹಿಸುತ್ತಾರೆ. (ಮತ್ತಾ. 4:4) ವೈಯಕ್ತಿಕ ಅಧ್ಯಯನಕ್ಕಾಗಿ ಪ್ರತಿ ದಿನ ಕಡಿಮೆ ಪಕ್ಷ 15 ಅಥವಾ 20 ನಿಮಿಷಗಳನ್ನು ನೀವು ಬದಿಗಿಡಸಾಧ್ಯವಿದೆಯೋ? ಅಧ್ಯಯನಕ್ಕಾಗಿ ಬದಿಗಿರಿಸಿರುವ ಸಮಯವನ್ನು ಇತರ ವಿಷಯಗಳು ಅತಿಕ್ರಮಿಸುವಂತೆ ಬಿಡದಿರುವುದೇ ಕೀಲಿ ಕೈ ಆಗಿದೆ. ಅದನ್ನು ಒಂದು ಉಪಯುಕ್ತ ರೂಢಿಯನ್ನಾಗಿ ಮಾಡಿಕೊಳ್ಳಿರಿ. ಇದು ನೀವು ಪ್ರತಿ ದಿನ ಬೆಳಗ್ಗೆ ಎದ್ದೇಳುವುದಕ್ಕಿಂತಲೂ, ಇನ್ನೂ ಬೇಗನೇ ಎದ್ದೇಳುವುದನ್ನು ಕೇಳಿಕೊಳ್ಳಬಹುದು. ಲೋಕವ್ಯಾಪಕವಾಗಿ 17,000 ಬೆತೆಲ್ ಸದಸ್ಯರು, ದಿನದ ವಚನದ ಚರ್ಚೆಗಾಗಿ ಬೆಳಗ್ಗೆ ಬೇಗನೆ ಎದ್ದೇಳುತ್ತಾರೆ. ಬೇಗನೆ ಎದ್ದೇಳಬೇಕಾದರೆ ರಾತ್ರಿ ಬೇಗನೆ ಮಲಗಬೇಕು. ಹೀಗೆ ಮಾಡುವುದರಿಂದ ಮರುದಿನ ಹುಮ್ಮಸ್ಸಿನಿಂದ ಮತ್ತು ವಿಶ್ರಾಂತಿ ಪಡೆದುಕೊಂಡವರಾಗಿ ಎದ್ದೇಳಸಾಧ್ಯವಿದೆ.
6 ನೀವು ಕುಟುಂಬದ ಮುಖ್ಯಸ್ಥರಾಗಿದ್ದರೆ, ದೇವಪ್ರಭುತ್ವ ಕಾರ್ಯಕಲಾಪದ ನಿಮ್ಮ ಕೌಟುಂಬಿಕ ಶೆಡ್ಯೂಲನ್ನು ಯೋಜಿಸಲು ಮತ್ತು ವ್ಯವಸ್ಥಾಪಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ಕೆಲವು ಕುಟುಂಬಗಳು ರಾತ್ರಿಯೂಟವಾದ ಅನಂತರ ಬೈಬಲು, ಯಿಯರ್ಬುಕ್, ಅಥವಾ ಇನ್ನಿತರ ಪ್ರಕಾಶನಗಳನ್ನು ಒಟ್ಟಿಗೆ ಓದುವ ಅಭ್ಯಾಸವನ್ನು ಮಾಡಿಕೊಂಡಿವೆ. ತಮ್ಮ ಮಕ್ಕಳು ಆತ್ಮಿಕವಾಗಿ ಪ್ರೌಢ ಕ್ರೈಸ್ತರಾಗಿ ಬೆಳೆದಿರುವುದನ್ನು ನೋಡಿರುವ ಅನೇಕ ಹೆತ್ತವರು, ಅವರ ಯಶಸ್ಸಿಗೆ ಒತ್ತಾಸೆ ಕೊಟ್ಟ ಒಂದು ಅಂಶವು, ಕುಟುಂಬವು ಪ್ರತಿ ವಾರ ಒಂದು ಸಂಜೆಯನ್ನು ಬದಿಗಿಡಲು ರೂಢಿಮಾಡಿಕೊಂಡದ್ದೇ ಆಗಿತ್ತು ಎಂದು ಹೇಳುತ್ತಾರೆ. ಮತ್ತು ಇದು ಅವರಿಗೆ ಆತ್ಮಿಕವಾಗಿ ಕಟ್ಟುವಂತಹ ಸಮಯವಾಗಿತ್ತು. ಹೀಗೆ ಮಾಡಿದ ಒಬ್ಬ ತಂದೆಯು ಹೇಳಿದ್ದು: “ನಮ್ಮ ಮಕ್ಕಳ ಆತ್ಮಿಕ ಬೆಳವಣಿಗೆಯಲ್ಲಿ, 30 ವರ್ಷಗಳ ಹಿಂದೆ ನಾವು ಆರಂಭಿಸಿದ, ಬುಧವಾರ ರಾತ್ರಿಯ ಕ್ರಮವಾದ ಕುಟುಂಬ ಅಧ್ಯಯನವು ಮಹತ್ತರವಾದ ಪಾತ್ರವನ್ನು ವಹಿಸಿತೆಂದು ನನಗನಿಸುತ್ತದೆ.” ಅವನ ಮೂವರು ಮಕ್ಕಳಲ್ಲಿ ಎಲ್ಲರೂ ಚಿಕ್ಕ ವಯಸ್ಸಿನಲ್ಲೇ ದೀಕ್ಷಾಸ್ನಾನ ಪಡೆದುಕೊಂಡರು ಮತ್ತು ಅನಂತರ ಅವರೆಲ್ಲರೂ ಪೂರ್ಣಸಮಯದ ಶುಶ್ರೂಷಕರಾದರು. ಕುಟುಂಬ ಅಧ್ಯಯನದ ಜೊತೆಗೆ, ಕ್ಷೇತ್ರ ಸೇವಾ ನಿರೂಪಣೆಗಳನ್ನು ಅಥವಾ ಕೂಟದ ನೇಮಕಗಳನ್ನು ಪೂರ್ವಾಭಿನಯಿಸಸಾಧ್ಯವಿದೆ ಮತ್ತು ಇತರ ಹಿತಕರ ಚಟುವಟಿಕೆಗಳನ್ನು ಒಟ್ಟಿಗೆ ಆನಂದಿಸಸಾಧ್ಯವಿದೆ.
7 ನಿಮ್ಮ ಸಾಪ್ತಾಹಿಕ ಶೆಡ್ಯೂಲಿನಲ್ಲಿ ರಾಜ್ಯ ಪ್ರಚಾರಕ್ಕಾಗಿ, ‘ಸಮಯವನ್ನು ಖರೀದಿಸಿದ್ದೀರೋ’? (ಕೊಲೊ. 4:5, NW) ಹೆಚ್ಚು ಕಡಿಮೆ ನಾವೆಲ್ಲರೂ ತುಂಬ ಕಾರ್ಯಮಗ್ನರಾಗಿರುತ್ತೇವೆ. ಕುಟುಂಬದ ಮತ್ತು ಸಭೆಯ ಜವಾಬ್ದಾರಿಗಳು ನಮ್ಮ ಮೇಲಿರುತ್ತವೆ. ಪ್ರತಿ ವಾರ ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಪಾಲನ್ನು ತೆಗೆದುಕೊಳ್ಳಲು ನಾವು ನಿಶ್ಚಿತ ಏರ್ಪಾಡುಗಳನ್ನು ಮಾಡದಿದ್ದಲ್ಲಿ, ಇತರ ವಿಷಯಗಳು ಈ ಮುಖ್ಯ ಚಟುವಟಿಕೆಯನ್ನು ಅದುಮಿಬಿಡುವುದು ತುಂಬ ಸುಲಭ. ಒಂದು ದೊಡ್ಡ ಪಶುಪಾಲನ ಕೇಂದ್ರದ ಒಡೆಯನು ಹೇಳಿದ್ದು: “ಕ್ಷೇತ್ರ ಸೇವೆಗಾಗಿ ಒಂದು ನಿರ್ದಿಷ್ಟ ದಿನವನ್ನು ಶೆಡ್ಯೂಲ್ ಮಾಡಿದರೆ ಮಾತ್ರ ನಾನು ಅದರಲ್ಲಿ ಪಾಲ್ಗೊಳ್ಳಸಾಧ್ಯವಿದೆ ಎಂಬುದನ್ನು ಸುಮಾರು 1944ರಲ್ಲಿ ನಾನು ಕಂಡುಕೊಂಡೆ. ಮತ್ತು ಅಂದಿನಿಂದ ಈ ದಿನದ ವರೆಗೂ ನಾನು ಕ್ಷೇತ್ರ ಸೇವೆಗಾಗಿ ವಾರದಲ್ಲಿ ಒಂದು ದಿನವನ್ನು ಬದಿಗಿಡುತ್ತೇನೆ.” ಸಾಕ್ಷಿಕಾರ್ಯಕ್ಕಾಗಿ ಒಂದು ನಿಶ್ಚಿತ ಶೆಡ್ಯೂಲನ್ನು ಮಾಡುವುದರಿಂದ, ತನಗೆ ಒಂದು ತಿಂಗಳಲ್ಲಿ ಸರಾಸರಿ 15 ತಾಸುಗಳನ್ನು ಕ್ಷೇತ್ರ ಸೇವೆಯಲ್ಲಿ ವ್ಯಯಿಸಲು ಸಾಧ್ಯವಾಗುತ್ತದೆ ಎಂಬುದನ್ನು ಒಬ್ಬ ಕ್ರೈಸ್ತ ಹಿರಿಯನು ಕಂಡುಕೊಳ್ಳುತ್ತಾನೆ. ಶನಿವಾರದಂದು ಅವನಿಗೆ ಯಾವುದೇ ಐಹಿಕ ಕೆಲಸವಿರುವುದಾದರೆ, ಬೆಳಗ್ಗೆ ಕ್ಷೇತ್ರ ಸೇವೆಯನ್ನು ಮಾಡಿಯಾದ ಮೇಲೆ ಅದರ ಕಡೆಗೆ ಗಮನವಹಿಸುತ್ತಾನೆ. ನೀವು ಮತ್ತು ನಿಮ್ಮ ಕುಟುಂಬವು ಪ್ರತಿ ವಾರ ಕ್ಷೇತ್ರಸೇವೆಗಾಗಿ ಕಡಿಮೆ ಪಕ್ಷ ಒಂದು ದಿನವನ್ನು ಬದಿಗಿರಿಸಿ, ಅದನ್ನು ನಿಮ್ಮ ಆತ್ಮಿಕ ಜೀವನ ರೀತಿಯ ಭಾಗವನ್ನಾಗಿ ಮಾಡಸಾಧ್ಯವಿದೆಯೋ?—ಫಿಲಿ. 3:16.
8 ನಿಮ್ಮ ಜೀವಿತದ ದಿನಚರಿಯನ್ನು ಪರೀಕ್ಷಿಸಿರಿ: ಯೆಹೋವನ ಸೇವೆಯ ಸುತ್ತಲೂ ನಮ್ಮ ಜೀವಿತಗಳನ್ನು ಕಟ್ಟುವುದರ ವಿರುದ್ಧ ಕಾರ್ಯಮಾಡುವ ವಿಷಯಗಳೂ ಇವೆ. ಅಧ್ಯಯನ, ಕೂಟಗಳು ಮತ್ತು ಕ್ಷೇತ್ರಸೇವೆಗಾಗಿ ನಾವು ಜಾಗರೂಕವಾಗಿ ಯೋಜಿಸಿಟ್ಟಿರುವ ಶೆಡ್ಯೂಲ್, ಕೆಲವೊಂದು ಮುಂಗಾಣದಂತಹ ಪರಿಸ್ಥಿತಿಗಳಿಂದಾಗಿ ತಲೆಕೆಳಗಾಗಬಹುದು. ಮತ್ತು ನಮ್ಮ ವಿರೋಧಿಯಾದ ಸೈತಾನನು ‘ಅಭ್ಯಂತರ ಮಾಡಲು’ ಮತ್ತು ನಮ್ಮ ಯೋಜನೆಗಳನ್ನು ಮುರಿಯಲು ತನ್ನಿಂದಾದುದೆಲ್ಲವನ್ನೂ ಮಾಡುವನು. (1 ಥೆಸ. 2:18; ಎಫೆ. 6:12, 13) ಈ ಅಡೆತಡೆಗಳು, ನಿಮ್ಮನ್ನು ಬಿಟ್ಟುಕೊಡುವಂತೆ ಇಲ್ಲವೇ ನಿರುತ್ತೇಜನಗೊಳಿಸುವಂತೆ ಅನುಮತಿಸದಿರಿ. ನೀವು ಶೆಡ್ಯೂಲ್ ಮಾಡಿರುವ ದೇವಪ್ರಭುತ್ವ ಚಟುವಟಿಕೆಯನ್ನು ಮುಂದುವರಿಸಿಕೊಂಡು ಹೋಗಲು ಬೇಕಾಗಿರುವ ಹೊಂದಾಣಿಕೆಗಳನ್ನೆಲ್ಲ ಮಾಡಿರಿ. ಯಾವುದು ನಿಜವಾಗಿಯೂ ಸಾರ್ಥಕವಾಗಿದೆಯೋ ಅದನ್ನು ಮಾಡಿ ಮುಗಿಸಲು ದೃಢನಿರ್ಧಾರ ಮತ್ತು ನಿರಂತರ ಪರಿಶ್ರಮವು ಅಗತ್ಯ.
9 ನಾವು ಆತ್ಮಿಕವಲ್ಲದ ಕಾರ್ಯಕಲಾಪಗಳನ್ನು ಮಾಡುವಂತೆ, ಲೌಕಿಕತೆಯು ಹಾಗೂ ಅಪರಿಪೂರ್ಣತೆಯು ನಮ್ಮ ಮೇಲೆ ಪ್ರಭಾವವನ್ನು ಬೀರುವಂತೆ ಬಿಡಬಾರದು. ಏಕೆಂದರೆ ಇದು ನಮ್ಮ ಸಮಯ ಮತ್ತು ಗಮನವನ್ನು ಹೆಚ್ಚೆಚ್ಚಾಗಿ ನುಂಗಿಬಿಡಸಾಧ್ಯವಿದೆ. ಆತ್ಮಪರೀಕ್ಷೆಯು ಆವಶ್ಯಕ. ನಾವು ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು: ‘ನನ್ನ ಜೀವನ ಕ್ರಮವು ಕ್ರಮೇಣವಾಗಿ ಅಸಮತೂಕಗೊಂಡಿದೆಯೋ ಅಥವಾ ಅಪಕರ್ಷಿಸಲ್ಪಟ್ಟಿದೆಯೋ? ಗತಿಸಿಹೋಗುತ್ತಿರುವ ಈ ಲೋಕದ ವಿಷಯಗಳ ಸುತ್ತಲೂ ನನ್ನ ಜೀವಿತವನ್ನು ಕಟ್ಟಲು ನಾನು ಪ್ರಾರಂಭಿಸಿದ್ದೇನೋ? (1 ಯೋಹಾ. 2:15-17) ಆತ್ಮಿಕ ಚಟುವಟಿಕೆಗಳಿಗೆ ಹೋಲಿಸುವಾಗ, ವೈಯಕ್ತಿಕ ಬೆನ್ನಟ್ಟುವಿಕೆಗಳು, ವಿನೋದ ಪ್ರವಾಸ, ಕ್ರೀಡಾ ಚಟುವಟಿಕೆಗಳು ಅಥವಾ ಟೆಲಿವಿಷನನ್ನು ವೀಕ್ಷಿಸುವುದು ಅಥವಾ ಇಂಟರ್ನೆಟ್ನಲ್ಲಿ ವಿವಿಧ ವೆಬ್ಸೈಟ್ಗಳನ್ನು ಜಾಲಾಡುತ್ತ ಇರುವುದನ್ನು ಸೇರಿಸಿ, ಇತರ ಮನೋರಂಜನೆಗಾಗಿ ನಾನು ಎಷ್ಟು ಸಮಯವನ್ನು ವ್ಯಯಿಸುತ್ತೇನೆ?’
10 ನಿಮ್ಮ ಜೀವಿತವು ಹೆಚ್ಚೆಚ್ಚು ಅನಾವಶ್ಯಕ ಕಾರ್ಯಕಲಾಪಗಳಿಂದ ಅಸ್ತವ್ಯಸ್ತಗೊಂಡಿದೆ ಎಂದು ನಿಮಗೆ ತಿಳಿದುಬಂದರೆ ಆಗ ಏನು ಮಾಡಬೇಕು? ತನ್ನ ಸಹೋದರರು “ಪೂರ್ಣಕ್ರಮಕ್ಕೆ” ಬರುವಂತೆ, ಅಥವಾ “ಯೋಗ್ಯ ಸ್ಥಾನಕ್ಕೆ ಬರುವಂತೆ” ಪೌಲನು ಪ್ರಾರ್ಥಿಸಿದಂತೆಯೇ, ಪುನಃ ಯೆಹೋವನ ಸೇವೆಗೆ ಪ್ರಮುಖ ಸ್ಥಾನವನ್ನು ಕೊಡಲು ಆತನ ಸಹಾಯಕ್ಕಾಗಿ ಪ್ರಾರ್ಥಿಸಬಾರದೇಕೆ? (2 ಕೊರಿಂ. 13:9, 10, NW ಪಾದಟಿಪ್ಪಣಿ.) ಅನಂತರ ನೀವು ಮಾಡಿರುವ ಸಂಕಲ್ಪಕ್ಕನುಸಾರವಾಗಿ ಜೀವಿಸಲು ದೃಢನಿಶ್ಚಯವುಳ್ಳವರಾಗಿರಿ ಮತ್ತು ಬೇಕಾದ ಹೊಂದಾಣಿಕೆಗಳನ್ನು ಮಾಡಿರಿ. (1 ಕೊರಿಂ. 9:26, 27) ಆತನಿಗೆ ಸಲ್ಲಿಸುವ ವಿಧೇಯ ಸೇವೆಯ ಮಾರ್ಗದಿಂದ ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗದಂತೆ ನಿಮಗೆ ಯೆಹೋವನು ಸಹಾಯಮಾಡುವನು.—ಯೆಶಾಯ 30:20, 21ನ್ನು ಹೋಲಿಸಿರಿ.
11 ದೇವರ ಹರ್ಷಭರಿತ ಸೇವೆಯಲ್ಲಿ ತೊಡಗಿಸಿಕೊಳ್ಳಿರಿ: ಸಂತೋಷವನ್ನು ಬೆನ್ನಟ್ಟಿಹೋಗುವ ಕೋಟ್ಯಂತರ ಜನರು, ತಾವು ತುಂಬ ಉತ್ಸುಕದಿಂದ ಹುಡುಕಿಕೊಂಡು ಹೋದ ಭೌತಿಕ ವಸ್ತುಗಳು ಬಾಳುವಂತಹ ಸಂತೋಷವನ್ನು ತಂದುಕೊಟ್ಟಿಲ್ಲವೆಂಬುದನ್ನು ತಮ್ಮ ಜೀವಿತದ ಕೊನೆಗಳಿಗೆಯಲ್ಲಿ ಕಂಡುಕೊಂಡಿದ್ದಾರೆ. ಅದು “ಗಾಳಿಯನ್ನು ಹಿಂದಟ್ಟಿದ ಹಾಗೆ” ಇದೆ. (ಪ್ರಸಂ. 2:11) ಮತ್ತೊಂದು ಕಡೆಯಲ್ಲಿ, ಯೆಹೋವನನ್ನು ‘ಯಾವಾಗಲೂ ನಮ್ಮೆದುರಿಗೇ ಇಟ್ಟುಕೊಳ್ಳುತ್ತಾ’ ನಮ್ಮ ಜೀವಿತಗಳನ್ನು ಆತನ ಮೇಲೆ ಕೇಂದ್ರೀಕರಿಸುವಾಗ, ನಾವು ಆಳವಾದ ತೃಪ್ತಿಯನ್ನು ಅನುಭವಿಸುತ್ತೇವೆ. (ಕೀರ್ತ. 16:8, 11) ಏಕೆಂದರೆ ನಾವು ಅಸ್ತಿತ್ವದಲ್ಲಿರುವುದಕ್ಕೆ ಯೆಹೋವನೇ ಕಾರಣನಾಗಿದ್ದಾನೆ. (ಪ್ರಕ. 4:11) ಮಹಾನ್ ಉದ್ದೇಶಕನಾದ ಯೆಹೋವನಿಲ್ಲದೆ ಜೀವಿತಕ್ಕೆ ಯಾವುದೇ ಅರ್ಥವಿರುವುದಿಲ್ಲ. ಯೆಹೋವನಿಗೆ ಸೇವೆ ಸಲ್ಲಿಸುವುದು, ನಮಗೆ ಹಾಗೂ ಇತರರಿಗೆ ಬಾಳುವ ಪ್ರಯೋಜನವನ್ನು ತರುವ ಸಾರ್ಥಕವಾದ ಹಾಗೂ ಉದ್ದೇಶಭರಿತ ಕಾರ್ಯವನ್ನು ನಮ್ಮ ಜೀವಿತಗಳಲ್ಲಿ ತುಂಬಿಸುತ್ತದೆ.
12 ಸ್ವಸಂತುಷ್ಟರಾಗಿ, ತ್ವರಿತವಾಗಿ ಸಮೀಪಿಸುತ್ತಿರುವ ಸೈತಾನನ ಲೋಕದ ಅಂತ್ಯದ ವಿಷಯದಲ್ಲಿ ತುರ್ತಿನ ಪ್ರಜ್ಞೆಯನ್ನು ಕಳೆದುಕೊಳ್ಳದೇ ಇರುವುದು ತುಂಬ ಪ್ರಾಮುಖ್ಯವಾಗಿದೆ. ಭವಿಷ್ಯತ್ತಿನ ಕುರಿತಾಗಿ ನಮಗಿರುವ ದೃಷ್ಟಿಕೋನದಿಂದ ನಮ್ಮ ದಿನನಿತ್ಯದ ಜೀವಿತವು ಪ್ರಭಾವಿಸಲ್ಪಡುತ್ತದೆ. ನೋಹನ ದಿನದಲ್ಲಿ, ಭೌಗೋಲಿಕ ಜಲಪ್ರಳಯದ ಮೇಲೆ ನಂಬಿಕೆಯನ್ನಿಡದ ಜನರು, ಜಲಪ್ರಳಯವು “ಬಂದು ಎಲ್ಲರನ್ನು ಬಡುಕೊಂಡುಹೋಗುವ” ತನಕ ವೈಯಕ್ತಿಕ ಅಭಿಲಾಷೆಗಳ ಮೇಲೆ, ಅಂದರೆ ತಿನ್ನುವುದು, ಕುಡಿಯುವುದು, ಮದುವೆಯಾಗುವುದು ಇಂತಹವುಗಳ ಮೇಲೆ ತಮ್ಮ ಜೀವಿತಗಳನ್ನು ಕೇಂದ್ರೀಕರಿಸುತ್ತಾ, “ಗಮನ ಕೊಡದೇ ಹೋದರು.” (ಮತ್ತಾ. 24:37-39, NW) ಇಂದು, ಈ ಲೋಕದ ಮೇಲೆ ತಮ್ಮ ಜೀವಿತಗಳನ್ನು ಕೇಂದ್ರೀಕರಿಸುವವರು, ಮನುಷ್ಯನು ಹಿಂದೆಂದೂ ಅನುಭವಿಸಿರದ ಅತ್ಯಂತ ದೊಡ್ಡ ವಿನಾಶವಾದ “ಯೆಹೋವನ ದಿನ”ದಲ್ಲಿ, ಭವಿಷ್ಯತ್ತಿಗಾಗಿದ್ದ ತಮ್ಮ ಪ್ರತೀಕ್ಷೆಗಳು ತಮ್ಮ ಕಣ್ಣಮುಂದೆಯೇ ನುಚ್ಚುನೂರಾಗುವುದನ್ನು ನೋಡುವರು.—2 ಪೇತ್ರ 3:10-12.
13 ಆದಕಾರಣ, ಸಜೀವ ದೇವರಾದ ಯೆಹೋವನ ಮತ್ತು ಆತನ ಚಿತ್ತವನ್ನು ಮಾಡುವುದರ ಸುತ್ತಲೂ ನಿಮ್ಮ ಜೀವಿತವನ್ನು ಕಟ್ಟುತ್ತಾ ಇರ್ರಿ. ಇದಕ್ಕಿಂತಲೂ ಉತ್ತಮವಾದ ಬೇರೆ ಯಾವ ಬಂಡವಾಳವನ್ನು ನೀವು ಈ ಜೀವಿತದಲ್ಲಿ ಹೂಡಸಾಧ್ಯವಿಲ್ಲ. ಏಕೆಂದರೆ ಯೆಹೋವನಷ್ಟು ಭರವಸಾರ್ಹ ಬೆಂಬಲಿಗನು ಇನ್ಯಾರೂ ಇಲ್ಲ. ಆತನು ಸುಳ್ಳಾಡಸಾಧ್ಯವಿಲ್ಲ, ಆತನು ತನ್ನ ವಾಗ್ದಾನಗಳಿಗೆ ಸತ್ಯವಂತನಾಗಿರುತ್ತಾನೆ. (ತೀತ 1:2) ಆತನು ಮೃತಹೊಂದಸಾಧ್ಯವಿಲ್ಲ—ಯೆಹೋವನ ವಶದಲ್ಲಿರುವ ಯಾವುದೇ ಸಂಗತಿಯು ಎಂದೂ ನಾಶಗೊಳ್ಳುವುದಿಲ್ಲ. (ಹಬ. 1:12; 2 ತಿಮೊ. 1:12) ಈಗ ನಾವು ಕಟ್ಟುತ್ತಿರುವ ವಿಧೇಯ ಹಾಗೂ ನಂಬಿಕೆಯ ಜೀವಿತವು, ನಮ್ಮ ಸಂತೋಷದ ದೇವರ ಆನಂದಭರಿತ ಸೇವೆಯಲ್ಲಿ ಸದಾಕಾಲ ಬಾಳುವಂತಹ ಜೀವಿತದ ಆರಂಭವಾಗಿದೆ ಅಷ್ಟೇ.—1 ತಿಮೊ. 1:11; 6:19.
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಸತ್ಯವು ನಮ್ಮ ಜೀವಿತದ ಭಾಗವಾಗಿಲ್ಲ, ಬದಲಿಗೆ ಅದು ತಾನೇ ನಮ್ಮ ಜೀವಿತವಾಗಿದೆ.” ಪ್ರತಿಯೊಂದು ವಿಷಯವು ಅದರ ಸುತ್ತಲೂ ತಿರುಗುತ್ತದೆ.”