1999ರ ದೇವಪ್ರಭುತ್ವ ಶುಶ್ರೂಷಾ ಶಾಲೆಯ ಕಾರ್ಯಕ್ರಮದಿಂದ ಪ್ರಯೋಜನವನ್ನು ಪಡೆದುಕೊಳ್ಳಿರಿ
1 ಯೇಸು ಒಬ್ಬ ನಿಪುಣ ಬೋಧಕನಾಗಿದ್ದನು. ಜನರು “ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು.” (ಮಾರ್ಕ 1:22) ನಮ್ಮಲ್ಲಿ ಯಾರೂ ಯೇಸುವಿನಷ್ಟು ಉತ್ತಮವಾಗಿ ಮಾತಾಡಿ, ಕಲಿಸಲು ಸಾಧ್ಯವಿಲ್ಲವಾದರೂ, ಅವನನ್ನು ಅನುಕರಿಸಲು ನಾವು ಪ್ರಯತ್ನಿಸಸಾಧ್ಯವಿದೆ. (ಅ.ಕೃ. 4:13) ಆ ಗುರಿಯನ್ನು ಸಾಧಿಸಲು, ದೇವಪ್ರಭುತ್ವ ಶುಶ್ರೂಷಾ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ನಮ್ಮ ಮಾತಾಡುವ ಮತ್ತು ಕಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುತ್ತಾ ಹೋಗುವಂತೆ ಸಹಾಯಮಾಡುವುದು.
2 ಇಸವಿ 1999ರಲ್ಲಿ ನೇಮಕ ನಂ. 1, ಮುಖ್ಯವಾಗಿ 1997ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಲೇಖನಗಳ ಮೇಲೆ ಆಧಾರಿತವಾಗಿರುವುದು. ನಾವು ಈ ಮಾಹಿತಿಯನ್ನು ಮುಂದಾಗಿಯೇ ಓದಿ, ಅನಂತರ ಶಾಲಾ ಕಾರ್ಯಕ್ರಮದಲ್ಲಿ ಅದನ್ನು ಕೇಳಿಸಿಕೊಳ್ಳುವಲ್ಲಿ, ಆತ್ಮಿಕ ವಿಷಯಗಳ ಕುರಿತಾದ ನಮ್ಮ ಗ್ರಹಿಕೆಯು ಇನ್ನೂ ಅಧಿಕಗೊಳ್ಳುವುದು. ಈ ಉಪದೇಶ ಭಾಷಣಗಳನ್ನು ನೀಡಲು ನೇಮಿಸಲ್ಪಟ್ಟವರು ಈ ವಿಷಯವನ್ನು ಪ್ರಾಯೋಗಿಕವಾಗಿ ಅನ್ವಯಿಸಬೇಕು. ಅದನ್ನು ಆಸಕ್ತಿದಾಯಕವಾಗಿ ಹಾಗೂ ಉತ್ಸುಕವಾಗಿ ನೀಡಬೇಕು. ನೇಮಕ ನಂ. 3 ಮತ್ತು ನಂ. 4 ಕುಟುಂಬ ಸಂತೋಷ ಪುಸ್ತಕದ ಮೇಲೆ ಅಥವಾ “ಚರ್ಚೆಗಾಗಿ ಬೈಬಲ್ ವಿಷಯಗಳು” ಪುಸ್ತಿಕೆಯ ಮೇಲೆ ಆಧಾರಿತವಾಗಿರುವುದು. ಈ ನೇಮಕಗಳಲ್ಲಿ ಭಾಷಣದ ಮುಖ್ಯವಿಷಯವು ಅದಲು ಬದಲಾಗಬಹುದು. ಭಾಗಗಳನ್ನು ನೇಮಿಸುವ ಮುಂಚೆ ಶಾಲಾ ಮೇಲ್ವಿಚಾರಕನು ವಿಷಯವನ್ನು ಜಾಗರೂಕವಾಗಿ ಪರಿಶೀಲಿಸಬೇಕು. ಕುಟುಂಬ ಸಂತೋಷ ಪುಸ್ತಕದಿಂದ ವಿಷಯವನ್ನು ಪ್ರಸ್ತುತಪಡಿಸಲು ನೇಮಿಸಲ್ಪಟ್ಟಿರುವ ಎಲ್ಲ ವಿದ್ಯಾರ್ಥಿಗಳು ತಮ್ಮ ಸ್ವಂತ ಕುಟುಂಬ ಜೀವಿತದಲ್ಲಿ ಆದರ್ಶಪ್ರಾಯರಾಗಿರಬೇಕು.
3 ಸಲಹೆಯನ್ನು ಅನ್ವಯಿಸಿಕೊಳ್ಳಿರಿ ಮತ್ತು ಚೆನ್ನಾಗಿ ತಯಾರಿಸಿರಿ: ಮಾತಾಡುವ ಮತ್ತು ಬೋಧಿಸುವ ಕಲೆಯಲ್ಲಿ ಪ್ರತಿಯೊಬ್ಬರೂ ಹೆಚ್ಚಿನ ಸುಧಾರಣೆಯನ್ನು ಮಾಡಸಾಧ್ಯವಿದೆ. (1 ತಿಮೊ. 4:13) ಆದುದರಿಂದ, ನಾವು ಸಲಹೆಯನ್ನು ಸ್ವೀಕರಿಸಬೇಕು ಮತ್ತು ಅದನ್ನು ಎಂದೂ ತಳ್ಳಿಹಾಕಬಾರದು. (ಜ್ಞಾನೋ. 12:15; 19:20) ಕೂಟಗಳಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಸತ್ಯವನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲು, ಕೇವಲ ವಾಸ್ತವಾಂಶಗಳನ್ನು ಹೇಳುವುದಕ್ಕಿಂತ ಇಲ್ಲವೇ ಯಾಂತ್ರಿಕವಾಗಿ ಶಾಸ್ತ್ರವಚನಗಳನ್ನು ಓದುವುದಕ್ಕಿಂತಲೂ ಹೆಚ್ಚಿನ ವಿಷಯವನ್ನು ಮಾಡಬೇಕಾಗಿದೆ. ನಾವು ಕೇಳುಗರ ಹೃದಯವನ್ನು ಸ್ಪರ್ಶಿಸಬೇಕು ಮತ್ತು ಅವರನ್ನು ಪ್ರಚೋದಿಸಬೇಕು. ಹೃದಯದಾಳದಿಂದ ಮನದಟ್ಟುಮಾಡುವ ರೀತಿಯಲ್ಲಿ ಸತ್ಯವನ್ನು ಮಾತಾಡುವುದರ ಮೂಲಕ ನಾವು ಇದನ್ನು ಮಾಡಸಾಧ್ಯವಿದೆ. (ಅ. ಕೃತ್ಯಗಳು 2:37ನ್ನು ಹೋಲಿಸಿರಿ.) ಶಾಲೆಯಲ್ಲಿ ನಮಗೆ ಸಿಗುವ ಸಲಹೆಯು ಇದನ್ನು ಮಾಡಲು ಸಹಾಯಮಾಡುವುದು.
4 ನೇಮಕವನ್ನು ಪಡೆದ ಕೂಡಲೇ, ಸ್ಕೂಲ್ ಗೈಡ್ಬುಕ್ನಲ್ಲಿ ವಿವರಿಸಲ್ಪಟ್ಟಿರುವಂತೆ, ನೀವು ಕಾರ್ಯಮಾಡಬೇಕಾಗಿರುವ ಭಾಷಣದ ಗುಣಲಕ್ಷಣಗಳ ಕುರಿತು ಯೋಚಿಸಿರಿ. ನೀವು ಈ ಹಿಂದೆ ಪಡೆದುಕೊಂಡಿರುವ ಸಲಹೆಯನ್ನು ಅನ್ವಯಿಸಿಕೊಳ್ಳಲು ಏನು ಮಾಡುವ ಅಗತ್ಯವಿದೆ ಎಂಬುದನ್ನು ಪರಿಗಣಿಸಿರಿ. ನಿಮ್ಮ ಮುಖ್ಯವಿಷಯದ ಮೇಲೆ, ಅವಶ್ಯವಿರುವಲ್ಲಿ ನೀವು ಉಪಯೋಗಿಸುವ ಸೆಟ್ಟಿಂಗ್ ಮತ್ತು ನಿಮ್ಮ ನೇಮಿತ ವಿಷಯದಲ್ಲಿರುವ ಶಾಸ್ತ್ರವಚನಗಳನ್ನು ಹೇಗೆ ಅನ್ವಯಿಸುವಿರಿ ಎಂಬ ವಿಷಯಗಳ ಕುರಿತು ಮನನ ಮಾಡಿರಿ. ಕಲಿಸಲು ಮತ್ತು ಪ್ರಚೋದಿಸಲು ಈ ಮಾಹಿತಿಯನ್ನು ಎಷ್ಟು ಉತ್ತಮವಾಗಿ ಉಪಯೋಗಿಸಸಾಧ್ಯವಿದೆ ಎಂಬುದರ ಕುರಿತಾಗಿ ಚಿಂತನೆಮಾಡಿರಿ.—1 ತಿಮೊ. 4:15, 16.
5 ಶಾಲೆಯಲ್ಲಿ ಹೆಸರನ್ನು ನಮೂದಿಸಿಕೊಳ್ಳುವ ಕುರಿತು ನೀವು ಹೆದರುತ್ತಿರುವುದಾದರೆ, ಅದರ ಕುರಿತು ಪ್ರಾರ್ಥಿಸಿ, ಅನಂತರ ನಿಮ್ಮ ಮನಸ್ಸಿನ ಭಾವನೆಗಳನ್ನು ಶಾಲಾ ಮೇಲ್ವಿಚಾರಕನಿಗೆ ಹೇಳಿರಿ. 1999ರಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಪ್ರಸ್ತುತಪಡಿಸಲ್ಪಡುವ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸದುಪಯೋಗಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ.