ಮುಂದಾಳತ್ವವನ್ನು ವಹಿಸುವ ಮೇಲ್ವಿಚಾರಕರು—ಸಭಾ ಪುಸ್ತಕ ಅಭ್ಯಾಸ ಸಂಚಾಲಕರು
1 ಒಬ್ಬ ಯೋಗ್ಯ ಹಿರಿಯನಿಗೆ ಇಲ್ಲವೇ ಶುಶ್ರೂಷಾ ಸೇವಕನಿಗೆ ಸಭಾ ಪುಸ್ತಕ ಅಭ್ಯಾಸ ಸಂಚಾಲಕನಾಗಿ ಸೇವೆ ಸಲ್ಲಿಸುವುದು ಒಂದು ವಿಶೇಷ ಸುಯೋಗವಾಗಿದೆ. ತನ್ನ ಗುಂಪಿನಲ್ಲಿರುವವರ ಆತ್ಮಿಕ ಅಗತ್ಯಗಳ ಬಗ್ಗೆ ಕಾಳಜಿವಹಿಸುವುದು, ನಿಜವಾಗಿಯೂ ಒಂದು ಗಂಭೀರವಾದ ಜವಾಬ್ದಾರಿಯಾಗಿದೆ. ಅವನ ಕರ್ತವ್ಯಗಳಲ್ಲಿ ಮೂರು ವರ್ಗಗಳಿವೆ.
2 ಸಮರ್ಥ ಬೋಧನೆ: ತನ್ನ ಗುಂಪಿನಲ್ಲಿರುವವರು ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳಸಾಧ್ಯವಾಗಬೇಕಾದರೆ, ಮೊದಲು ಸಭಾ ಪುಸ್ತಕ ಅಭ್ಯಾಸ ಸಂಚಾಲಕನು ಚೆನ್ನಾಗಿ ತಯಾರಿಸಬೇಕು. ಅವನು ಅಭ್ಯಾಸಿಸಲ್ಪಡುತ್ತಿರುವ ವಿಷಯಕ್ಕಾಗಿ ಗಣ್ಯತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಾನೆ. ಅಭ್ಯಾಸದ ಸಮಯದಲ್ಲಿ ಅವನೇ ಹೆಚ್ಚು ಮಾತಾಡುವುದರ ಬದಲು, ಅಗತ್ಯವಿರುವಾಗ ಪಾಠದ ಮುಖ್ಯಾಂಶಗಳನ್ನು ಹೊರಸೆಳೆಯಲು ಇನ್ನೂ ಹೆಚ್ಚಿನ ಸೂಕ್ತ ಪ್ರಶ್ನೆಗಳನ್ನು ಕೇಳುವನು. ಅಭ್ಯಾಸವನ್ನು ಆಸಕ್ತಿಕರವೂ ಬೋಧಪ್ರದವೂ ಆಗಿ ಮಾಡುವುದು ಮತ್ತು ಚರ್ಚೆಯಲ್ಲಿ ಎಲ್ಲರನ್ನೂ ಒಳಗೂಡಿಸುವುದೇ ಅವನ ಕೆಲಸವಾಗಿದೆ. ಆತ್ಮಿಕವಾಗಿ ಕಟ್ಟುವುದು, ಅಭ್ಯಾಸದ ಪ್ರಾಯೋಗಿಕ ಮೌಲ್ಯವನ್ನು ಒತ್ತಿಹೇಳುವುದು, ಹಾಗೂ ವಿಷಯವು ಹೃದಮನಗಳಲ್ಲಿ ಅಚ್ಚಳಿಯದಂತೆ ಮಾಡುವುದು ಅವನ ಉದ್ದೇಶವಾಗಿದೆ.—1 ಥೆಸ. 2:13.
3 ಸಹಾಯಕ ಕುರಿಪಾಲನೆ: ಸಭಾ ಪುಸ್ತಕ ಅಭ್ಯಾಸ ಸಂಚಾಲಕನು, “ಮಳೆಯಲ್ಲಿ ಆಶ್ರಯ ಸ್ಥಳವಾಗಿಯೂ ಗಾಳಿಯಲ್ಲಿ ಮರೆಯಂತೆಯೂ” ಇರುವನು. (ಯೆಶಾ. 32:2, ಪರಿಶುದ್ಧ ಬೈಬಲ್) ಅವನು ತನ್ನ ಗುಂಪಿನಲ್ಲಿರುವ ಎಲ್ಲರ ಬಗ್ಗೆ ಕಾಳಜಿವಹಿಸುತ್ತಾನೆ ಮತ್ತು ತನ್ನ ಪಾಲನೆಯಲ್ಲಿರುವ ಯಾರಾದರೊಬ್ಬರು ನಿರುತ್ತೇಜಿತರಾದಾಗ ಆತ್ಮಿಕ ಸಹಾಯವು ನೀಡಲ್ಪಡುವಂತೆ ನೋಡಿಕೊಳ್ಳುತ್ತಾನೆ.—ಯೆಹೆ. 34:15, 16; 1 ಥೆಸ. 2:7, 8.
4 ಹುರುಪಿನ ಸಾರುವಿಕೆ: ತನ್ನ ಗುಂಪು ಕ್ಷೇತ್ರ ಸೇವೆಯಲ್ಲಿ ಪೂರ್ಣ ರೀತಿಯಲ್ಲಿ ಭಾಗವಹಿಸಸಾಧ್ಯವಾಗುವಂತೆ ಕಾರ್ಯಸಾಧಕ ಏರ್ಪಾಡುಗಳನ್ನು ಮಾಡುವುದರಲ್ಲಿ ಸಭಾ ಪುಸ್ತಕ ಅಭ್ಯಾಸ ಸಂಚಾಲಕನು ಜಾಗರೂಕನಾಗಿರುತ್ತಾನೆ. ಏಕೆಂದರೆ ಸೇವೆಯಲ್ಲಿ ತಾನು ತೋರಿಸುವ ಕ್ರಮಬದ್ಧತೆ, ಹುರುಪು, ಮತ್ತು ಉತ್ಸಾಹವು ಗುಂಪಿನಲ್ಲಿರುವ ಇತರರ ಮೇಲೆ ಪ್ರಭಾವವನ್ನು ಬೀರುವುದು ಎಂಬುದನ್ನು ಅವನು ಅರಿತಿದ್ದು, ಅವನು ಸಾರುವ ಕೆಲಸದಲ್ಲಿ ನೇತೃತ್ವವನ್ನು ತೆಗೆದುಕೊಳ್ಳುತ್ತಾನೆ. (ಕೊಲೊ. 4:17; 2 ಥೆಸ. 3:9) ಸಕಾಲದಲ್ಲಿ, ತನ್ನ ಗುಂಪಿನಲ್ಲಿರುವ ಪ್ರತಿಯೊಬ್ಬ ಸದಸ್ಯನೊಂದಿಗೆ ಸೇವೆಮಾಡಲು ಅವನು ಪ್ರಯತ್ನಿಸುತ್ತಾನೆ. ಶುಶ್ರೂಷೆಯಲ್ಲಿ ನಮ್ಮ ಸಾರುವಿಕೆಯನ್ನು ಮತ್ತು ಬೋಧನಾ ಕುಶಲತೆಗಳನ್ನು ನಾವು ಉತ್ತಮಗೊಳಿಸಲು ಇಷ್ಟಪಡುವಲ್ಲಿ, ಆ ನಮ್ಮ ಗುರಿಯನ್ನು ಸಾಧಿಸಲು ಸಭಾ ಪುಸ್ತಕ ಅಭ್ಯಾಸ ಸಂಚಾಲಕನು ನಮಗೆ ಸಹಾಯಮಾಡಬಲ್ಲನು.—1 ತಿಮೊ. 4:16; 2 ತಿಮೊ. 4:5.
5 ಆತ್ಮಿಕ ಸಹಾಯ ಮತ್ತು ಪ್ರೀತಿಪರ ಬೆಂಬಲವನ್ನು ನೀಡಲು ಸದಾ ಸಿದ್ಧರಾಗಿರುವ ಈ ಪುರುಷರಲ್ಲಿನ ದಾನಗಳ ಮೂಲಕ ನಾವು ತುಂಬ ಆಶೀರ್ವದಿತರಾಗಿದ್ದೇವೆ. (1 ಥೆಸ. 5:14) ಪುಸ್ತಕ ಅಭ್ಯಾಸದಲ್ಲಿ ನಮ್ಮ ಕ್ರಮವಾದ ಭಾಗವಹಿಸುವಿಕೆ ಮತ್ತು ಸೌವಾರ್ತಿಕ ಕೆಲಸಕ್ಕಾಗಿ ನಮ್ಮ ನಂಬಿಗಸ್ತ ಬೆಂಬಲವನ್ನು ನೀಡುವ ಮೂಲಕ, ಯೆಹೋವನಿಂದ ಒದಗಿಸಲ್ಪಟ್ಟಿರುವ ಈ ಅದ್ಭುತಕರವಾದ ಮುನ್ನೇರ್ಪಾಡಿಗಾಗಿ ನಾವು ಗಣ್ಯತೆಯನ್ನು ತೋರಿಸುವಂತಾಗಲಿ.—ಇಬ್ರಿ. 10:25.