ಸುಳ್ಳಾಡುವುದರ ಕುರಿತಾದ ಸತ್ಯ
“ನೀನು ಸುಳ್ಳುಗಾರ!” ಆ ಚುಚ್ಚು ಮಾತುಗಳು ಎಂದಾದರೂ ನಿಮ್ಮ ವಿಷಯದಲ್ಲಿ ತೀಕ್ಷ್ಣವಾಗಿ ನುಡಿಯಲ್ಪಟ್ಟಿವೆಯೊ? ನುಡಿಯಲ್ಪಟ್ಟಿರುವುದಾದರೆ, ಅವುಗಳಲ್ಲಿ ಒಳಗೂಡಿರುವ ಭಾವನಾತ್ಮಕ ಆಘಾತವನ್ನು ನೀವು ಗ್ರಹಿಸುತ್ತೀರೆಂಬುದರಲ್ಲಿ ಸಂದೇಹವಿಲ್ಲ.
ಬಹಳ ಸಮಯದಿಂದ ಜೋಪಾನವಾಗಿಟ್ಟುಕೊಂಡಿದ್ದ ಒಂದು ಹೂದಾನಿಯನ್ನು ನೆಲದ ಮೇಲೆ ಬೀಳಿಸುವಲ್ಲಿ, ಅದು ಚೂರುಚೂರಾಗಬಹುದು. ಅಂತೆಯೇ, ಸುಳ್ಳಾಡುವುದರ ಮೂಲಕ ಅಮೂಲ್ಯವಾದ ಒಂದು ಸಂಬಂಧವು ಹಾಳಾಗಸಾಧ್ಯವಿದೆ. ಸ್ವಲ್ಪ ಕಾಲಾವಧಿಯ ಬಳಿಕ, ನೀವು ಹಾನಿಯನ್ನು ಸರಿಪಡಿಸಲು ಶಕ್ತರಾಗಬಹುದು ನಿಜ, ಆದರೆ ಆ ಸಂಬಂಧವು ಪುನಃ ಎಂದಿಗೂ ಹಿಂದಿನಂತೆಯೇ ಮುಂದುವರಿಯದಿರಬಹುದು.
“ತಮಗೆ ಸುಳ್ಳು ಹೇಳಲಾಗಿದೆ ಎಂದು ಕಂಡುಕೊಳ್ಳುವ ಜನರು, ಹೊಸ ಸಂಧಾನಗಳ ಕುರಿತಾಗಿ ಜಾಗರೂಕರಾಗಿರುತ್ತಾರೆ. ಮತ್ತು ಅವರು, ಕಂಡುಹಿಡಿಯಲ್ಪಟ್ಟ ಸುಳ್ಳುಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾ, ತಮ್ಮ ಗತ ನಂಬಿಕೆಗಳು ಹಾಗೂ ಕ್ರಿಯೆಗಳ ಕಡೆಗೆ ಹಿನ್ನೋಟ ಬೀರುತ್ತಾರೆ,” ಎಂಬುದಾಗಿ ಸುಳ್ಳಾಡುವಿಕೆ—ಸಾರ್ವಜನಿಕ ಹಾಗೂ ಖಾಸಗಿ ಜೀವಿತದಲ್ಲಿ ನೈತಿಕ ಆಯ್ಕೆ (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. ಆ ವಂಚನೆಯು ಬಹಿರಂಗಗೊಳಿಸಲ್ಪಟ್ಟ ಬಳಿಕ, ಒಂದು ಸಮಯದಲ್ಲಿ ಬಿಚ್ಚುಮನಸ್ಸಿನ ಸಂವಾದ ಹಾಗೂ ವಿಶ್ವಾಸದಿಂದ ಏಳಿಗೆ ಹೊಂದಿದ್ದಂತಹ ಆ ಸಂಬಂಧವು, ಶಂಕೆ ಹಾಗೂ ಸಂಶಯದಿಂದ ನಿಗ್ರಹಿಸಲ್ಪಡಬಹುದು.
ಸುಳ್ಳಾಡುವುದರೊಂದಿಗೆ ಜೊತೆಗೂಡಿರುವ ಈ ಎಲ್ಲಾ ನಕಾರಾತ್ಮಕ ಅನಿಸಿಕೆಗಳಿಂದಾಗಿ, ‘ಅಂತಹ ವಂಚನಾತ್ಮಕ ರೂಢಿಯು ಹೇಗೆ ಆರಂಭವಾಯಿತು?’ ಎಂದು ನಾವು ಕೇಳಿಕೊಳ್ಳಬೇಕು.
ಪ್ರಪ್ರಥಮ ಸುಳ್ಳು
ಪ್ರಥಮ ಮಾನವ ಜೊತೆಯಾದ ಆದಾಮಹವ್ವರನ್ನು ಯೆಹೋವ ದೇವರು ಸೃಷ್ಟಿಸಿದಾಗ, ಆತನು ಅವರನ್ನು ಒಂದು ಸುಂದರವಾದ ತೋಟದ ಮನೆಯಲ್ಲಿ ಇರಿಸಿದನು. ಅವರ ಮನೆಯು ಯಾವುದೇ ರೀತಿಯ ವಂಚನೆ ಅಥವಾ ಕುಯುಕ್ತಿಯಿಂದ ಸ್ವತಂತ್ರವಾಗಿತ್ತು. ನಿಜವಾಗಿಯೂ ಅದೊಂದು ಪ್ರಮೋದವನವಾಗಿತ್ತು!
ಆದರೂ, ಹವ್ವಳ ಸೃಷ್ಟಿಯಾದ ಸ್ವಲ್ಪಸಮಯಾನಂತರ, ಶೋಧನೆಗೊಳಪಡಿಸುವಂತಹ ಒಂದು ನೀಡಿಕೆಯೊಂದಿಗೆ ಪಿಶಾಚನಾದ ಸೈತಾನನು ಅವಳನ್ನು ಸಮೀಪಿಸಿದನು. ದೇವರು ನಿಷೇಧಿಸಿದ “ಮರದ ಹಣ್ಣನ್ನು” ತಿಂದಲ್ಲಿ, ಸಾಯುವಳೆಂದು ದೇವರು ಹೇಳಿದ್ದಂತೆ ಅವಳು ಸಾಯುವುದಿಲ್ಲ ಎಂದು ಹವ್ವಳಿಗೆ ಹೇಳಲಾಯಿತು. ಅದಕ್ಕೆ ಬದಲಾಗಿ, ಅವಳು “ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತ”ವಳಾಗುವಳು. (ಆದಿಕಾಂಡ 2:17; 3:1-5) ಹವ್ವಳು ಸೈತಾನನು ಹೇಳಿದ್ದನ್ನು ನಂಬಿದಳು. ಅವಳು ಹಣ್ಣನ್ನು ತೆಗೆದುಕೊಂಡು, ತಿಂದು, ನಂತರ ತನ್ನ ಗಂಡನಿಗೂ ಸ್ವಲ್ಪ ಕೊಟ್ಟಳು. ಆದರೆ ಸೈತಾನನು ವಾಗ್ದಾನಿಸಿದ್ದಂತೆ, ದೇವರಂತೆ ಆಗುವ ಬದಲಿಗೆ, ಆದಾಮಹವ್ವರು ಅವಿಧೇಯ ಪಾಪಿಗಳಾಗಿ, ಭ್ರಷ್ಟತೆಯ ದಾಸರಾದರು. (2 ಪೇತ್ರ 2:19) ಮತ್ತು ಆ ಪ್ರಪ್ರಥಮ ಸುಳ್ಳನ್ನು ಹೇಳುವ ಮೂಲಕ, ಸೈತಾನನು “ಸರ್ವ ಸುಳ್ಳುಗಳಿಗೂ ಪಿತ”ನಾಗಿ ಪರಿಣಮಿಸಿದನು. (ಯೋಹಾನ 8:44, ಟುಡೇಸ್ ಇಂಗ್ಲಿಷ್ ವರ್ಷನ್) ಸಕಾಲದಲ್ಲಿ, ಪಾಪಪೂರ್ಣರಾದ ಈ ಮೂರು ಜನರು ಕಲಿತುಕೊಂಡದ್ದೇನಂದರೆ, ಒಬ್ಬನು ಸುಳ್ಳು ಹೇಳುವಾಗ ಅಥವಾ ಸುಳ್ಳೊಂದರಲ್ಲಿ ಭರವಸೆಯಿಡುವಾಗ, ಅದರಲ್ಲಿ ವಿಜಯಿಗಳಿರುವುದಿಲ್ಲ.
ಮಾರಕ ಪರಿಣಾಮಗಳು
ಉದ್ದೇಶಪೂರ್ವಕವಾದ ಅವಿಧೇಯತೆಗೆ ಖಂಡಿತವಾಗಿಯೂ ಶಿಕ್ಷೆ ದೊರಕುತ್ತದೆ ಎಂಬುದನ್ನು, ಸ್ವರ್ಗದಲ್ಲಿರುವ ಹಾಗೂ ಭೂಮಿಯಲ್ಲಿರುವ ತನ್ನೆಲ್ಲಾ ಸೃಷ್ಟಿಯು ತಿಳಿದುಕೊಳ್ಳಬೇಕೆಂದು ಯೆಹೋವನು ಬಯಸಿದನು. ಈ ದಂಗೆಕೋರ ಆತ್ಮ ಜೀವಿಯು, ತನ್ನ ಜೀವಿತದ ಉಳಿದ ಸಮಯವನ್ನು ದೇವರ ಪವಿತ್ರ ಸಂಸ್ಥೆಯ ಹೊರಗೆ ಕಳೆಯುವಂತೆ ದಂಡನೆ ವಿಧಿಸುವ ಮೂಲಕ, ಆತನು ತತ್‌ಕ್ಷಣವೇ ಕಾರ್ಯೋನ್ಮುಖನಾದನು. ಇದಲ್ಲದೆ, ಕಟ್ಟಕಡೆಗೆ ಯೆಹೋವ ದೇವರು, ಸೈತಾನನು ಸಂಪೂರ್ಣವಾಗಿ ನಾಶವಾಗುವಂತೆ ಮಾಡುವನು. ತಾನು ಒದಗಿಸುತ್ತೇನೆಂದು ದೇವರು ವಾಗ್ದಾನಿಸಿದ “ಸಂತಾನ”ವು, ಮರಣಾಂತಕವಾದ ತಲೆಯ ಗಾಯವನ್ನು ಮಾಡುವಾಗ, ಇದು ಸಂಭವಿಸುವುದು.—ಆದಿಕಾಂಡ 3:14, 15; ಗಲಾತ್ಯ 3:16.
ಆದಾಮಹವ್ವರ ವಿಷಯದಲ್ಲಿಯಾದರೋ, ಅವರು ಏದೆನ್ ತೋಟದಿಂದ ಗಡೀಪಾರು ಮಾಡಲ್ಪಟ್ಟರು. ಹೀಗೆ ಹೇಳುತ್ತಾ ದೇವರು ಆದಾಮನಿಗೆ ದಂಡನೆ ವಿಧಿಸಿದನು: “ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; . . . ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” ಸಕಾಲದಲ್ಲಿ, ದೇವರು ಮುಂತಿಳಿಸಿದ್ದಂತೆಯೇ, ಅವನೂ ಹವ್ವಳೂ—ಇಬ್ಬರೂ ಮೃತಪಟ್ಟರು.—ಆದಿಕಾಂಡ 3:19.
ಆದಾಮನ ವಂಶಸ್ಥರೋಪಾದಿ, ಇಡೀ ಮಾನವ ಕುಟುಂಬವು “ಪಾಪದ ಸ್ವಾಧೀನದಲ್ಲಿರುವದಕ್ಕೆ ಮಾರ”ಲ್ಪಟ್ಟಿದೆ. ಎಲ್ಲ ಮಾನವರೂ ಮರಣಕ್ಕೆ ನಡಿಸುವ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದುಕೊಂಡಿದ್ದಾರೆ. (ರೋಮಾಪುರ 5:12; 6:23; 7:14) ಆ ಪ್ರಪ್ರಥಮ ಸುಳ್ಳಿನ ಪರಿಣಾಮಗಳು ಎಷ್ಟು ಭೀತಿದಾಯಕವಾಗಿದ್ದವು!—ರೋಮಾಪುರ 8:22.
ಆಳವಾಗಿ ಬೇರೂರಿರುವ ರೂಢಿ
ಸೈತಾನನೂ, ದೇವರ ವಿರುದ್ಧ ನಡೆಸಿದ ದಂಗೆಯಲ್ಲಿ ಅವನೊಂದಿಗೆ ಜೊತೆಗೂಡಿದ ದೇವದೂತರೂ, ಇದುವರೆಗೂ ವಧಿಸಲ್ಪಡದಿರುವ ಕಾರಣದಿಂದಾಗಿ, ಅವರು ಮನುಷ್ಯರನ್ನು “ಸುಳ್ಳಾಡು”ವಂತೆ ಪ್ರೇರಿಸುತ್ತಾರೆಂಬ ವಿಷಯವನ್ನು ತಿಳಿದು ನಾವು ಆಶ್ಚರ್ಯಪಡಬಾರದು. (1 ತಿಮೊಥೆಯ 4:1-3) ಫಲಿತಾಂಶವಾಗಿ, ಮಾನವ ಸಮಾಜದಲ್ಲಿ ಸುಳ್ಳಾಡುವುದು ಆಳವಾಗಿ ಬೇರೂರಿದೆ. “ಸುಳ್ಳಾಡುವುದು ಎಷ್ಟರ ಮಟ್ಟಿಗೆ ಸಂಘಟಿತವಾಗಿದೆಯೆಂದರೆ, ಈಗ ಸಮಾಜವು ಅದಕ್ಕೆ ಬಹುತೇಕವಾಗಿ ಪ್ರತಿಕ್ರಿಯೆ ತೋರಿಸುತ್ತಿಲ್ಲ” ಎಂದು ಲಾಸ್ ಏಂಜಲೀಸ್ ಟೈಮ್ಸ್ ಗಮನಿಸಿತು. ಇಂದು ಅನೇಕರು, ಸುಳ್ಳಾಡುವುದನ್ನು ರಾಜಕೀಯ ಹಾಗೂ ರಾಜಕಾರಣಿಗಳೊಂದಿಗೆ ಜೊತೆಗೂಡಿಸುತ್ತಾರೆ, ಆದರೆ ಅತ್ಯಂತ ಕುಪ್ರಸಿದ್ಧ ಸುಳ್ಳುಗಾರರಲ್ಲಿ ಧಾರ್ಮಿಕ ಮುಖಂಡರೂ ಸೇರಿದ್ದಾರೆಂಬುದು ನಿಮಗೆ ಗೊತ್ತಿದೆಯೊ?
ಯೇಸುವಿನ ಭೂಶುಶ್ರೂಷೆಯ ಸಮಯದಲ್ಲಿ, ಅವನ ಧಾರ್ಮಿಕ ವಿರೋಧಿಗಳು, ಅವನ ಕುರಿತಾಗಿ ಸುಳ್ಳುಗಳನ್ನು ಹಬ್ಬಿಸಿದರು. (ಯೋಹಾನ 8:48, 54, 55) ಅವನು ಅವರನ್ನು ಬಹಿರಂಗವಾಗಿ ಖಂಡಿಸುತ್ತಾ ಹೇಳಿದ್ದು: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. . . . ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ.”—ಯೋಹಾನ 8:44.
ಯೇಸುವಿನ ಪುನರುತ್ಥಾನವಾದ ಬಳಿಕ, ಅವನ ಸಮಾಧಿಯು ಬರಿದಾಗಿರುವುದನ್ನು ಕಂಡುಕೊಂಡಾಗ, ಪ್ರಸಾರಮಾಡಲ್ಪಟ್ಟ ಸುಳ್ಳನ್ನು ನೀವು ಜ್ಞಾಪಿಸಿಕೊಳ್ಳುತ್ತೀರೊ? ಮಹಾಯಾಜಕರು, “ಸಿಪಾಯಿಗಳಿಗೆ ಬಹಳ ಹಣಕೊಟ್ಟು—ಅವನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿರುವಾಗ ಅವನನ್ನು ಕದ್ದುಕೊಂಡು ಹೋದರು ಎಂದು ಹೇಳಿರಿ” ಎಂದರೆಂದು ಬೈಬಲು ಹೇಳುತ್ತದೆ. ಈ ಸುಳ್ಳು ವ್ಯಾಪಕವಾಗಿ ಹಬ್ಬಿ, ಅನೇಕರು ಇದರಿಂದ ಮೋಸಗೊಳಿಸಲ್ಪಟ್ಟರು. ಧಾರ್ಮಿಕ ಮುಖಂಡರು ಎಷ್ಟು ದುಷ್ಟರಾಗಿದ್ದರು!—ಮತ್ತಾಯ 28:11-15.
ಇಂದು ಧಾರ್ಮಿಕ ಸುಳ್ಳುಗಳು
ಇಂದು ಧಾರ್ಮಿಕ ಮುಖಂಡರಿಂದ ನುಡಿಯಲ್ಪಡುವ ಪ್ರಧಾನ ಸುಳ್ಳು ಯಾವುದು? ಇದು ಸೈತಾನನು ಹವ್ವಳಿಗೆ ಹೇಳಿದ ಸುಳ್ಳಿಗೆ ಸಮಾನವಾದದ್ದಾಗಿದೆ: “ನೀವು ಹೇಗೂ ಸಾಯುವದಿಲ್ಲ.” (ಓರೆಅಕ್ಷರಗಳು ನಮ್ಮವು.) (ಆದಿಕಾಂಡ 3:4) ಆದರೆ ಹವ್ವಳು ಖಂಡಿತವಾಗಿಯೂ ಸತ್ತಳು, ಮತ್ತು ಅವಳು ಭೂಮಿಗೆ, ಯಾವುದರಿಂದ ಮಾಡಲ್ಪಟ್ಟಿದ್ದಳೋ ಆ ಮಣ್ಣಿಗೆ ಹಿಂದಿರುಗಿದಳು.
ಆದರೂ, ಅವಳು ಕೇವಲ ಮೃತಪಟ್ಟವಳಂತೆ ಕಂಡುಬಂದು, ವಾಸ್ತವವಾಗಿ ಬೇರೊಂದು ರೂಪದಲ್ಲಿ ಜೀವಿಸುತ್ತಾ ಮುಂದುವರಿದಳೊ? ಮರಣವು ಬೇರೊಂದು ಜೀವಿತಕ್ಕೆ ಒಂದು ಪ್ರವೇಶಮಾರ್ಗವಾಗಿದೆಯೊ? ಹವ್ವಳ ಯಾವುದೋ ಒಂದು ಪ್ರಜ್ಞಾವಂತ ಭಾಗವು ಜೀವಿಸುತ್ತಾ ಮುಂದುವರಿಯಿತೆಂದು ಬೈಬಲು ಎಲ್ಲಿಯೂ ಸೂಚಿಸುವುದಿಲ್ಲ. ಅವಳ ಪ್ರಾಣವು ಬದುಕಿ ಉಳಿಯಲಿಲ್ಲ. ದೇವರಿಗೆ ಅವಿಧೇಯಳಾಗುವ ಮೂಲಕ, ಅವಳು ಪಾಪಮಾಡಿದ್ದಳು. ಮತ್ತು ಬೈಬಲು ಹೇಳುವುದು: “ಪಾಪಮಾಡುತ್ತಿರುವ ಪ್ರಾಣವು—ಅದು ತಾನೇ ಸಾಯುವುದು.” (ಯೆಹೆಜ್ಕೇಲ 18:4, NW) ತನ್ನ ಗಂಡನಂತೆಯೇ ಹವ್ವಳು ಒಬ್ಬ ಬದುಕುವ ಪ್ರಾಣವಾಗಿ ಸೃಷ್ಟಿಸಲ್ಪಟ್ಟಿದ್ದಳು. ಮತ್ತು ಬದುಕುವ ಪ್ರಾಣವಾಗಿದ್ದ ಅವಳ ಜೀವಿತವು ಕೊನೆಗೊಂಡಿತು. (ಆದಿಕಾಂಡ 2:7) ಮೃತರ ಸ್ಥಿತಿಯ ಕುರಿತಾಗಿ ಬೈಬಲು ಹೇಳುವುದು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” (ಪ್ರಸಂಗಿ 9:5) ಆದರೂ, ಸರ್ವಸಾಮಾನ್ಯವಾಗಿ ಚರ್ಚುಗಳು ಏನನ್ನು ಕಲಿಸುತ್ತವೆ?
ಚರ್ಚುಗಳು ಅನೇಕವೇಳೆ, ಮಾನವರಿಗೆ ಒಂದು ಅಮರ ಪ್ರಾಣವಿದೆ ಮತ್ತು ಇನ್ನೊಂದು ಜೀವಿತ—ಸ್ವರ್ಗಸುಖವನ್ನಾಗಲಿ ನಿತ್ಯಯಾತನೆಯನ್ನಾಗಲಿ—ವನ್ನು ಅನುಭವಿಸುವಂತೆ ಮರಣವು ಅದನ್ನು ಬಿಡುಗಡೆಮಾಡುತ್ತದೆ ಎಂದು ಕಲಿಸುತ್ತದೆ. ಉದಾಹರಣೆಗಾಗಿ, ದ ಕ್ಯಾಥೊಲಿಕ್ ಎನ್‌ಸೈಕ್ಲೊಪೀಡಿಯ ಹೇಳುವುದು: “ಚರ್ಚು, ನರಕದ ವೇದನೆಗಳ ನಿತ್ಯತೆಯನ್ನು, ಸ್ಫುಟವಾದ ಯಾವುದೇ ವಿರೋಧಾಭಿಪ್ರಾಯವಿಲ್ಲದೆ ಯಾರೊಬ್ಬನೂ ಅಲ್ಲಗಳೆಯಲಾರದ ಅಥವಾ ಪಂಥಾಹ್ವಾನಿಸಲಾರದ, ನಂಬಿಕೆಯ ಸತ್ಯದೋಪಾದಿ ಭಾವಗರ್ಭಿತವಾಗಿ ಕಲಿಸುತ್ತದೆ.”—ಸಂಪುಟ 7, ಪುಟ 209, 1913ರ ಮುದ್ರಣ.
ಬೈಬಲು ಸ್ಪಷ್ಟವಾಗಿ ಹೇಳುವ ವಿಷಯಕ್ಕಿಂತಲೂ ಆ ಕಲಿಸುವಿಕೆಯು ಎಷ್ಟು ಭಿನ್ನವಾದದ್ದಾಗಿದೆ! ಒಬ್ಬ ವ್ಯಕ್ತಿಯು ಮೃತಪಟ್ಟಾಗ, “ಅವನು ಮಣ್ಣಿಗೆ ಸೇರುತ್ತಾನೆ, ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು” ಎಂದು ಬೈಬಲು ಕಲಿಸುತ್ತದೆ. (ಕೀರ್ತನೆ 146:4) ಆದುದರಿಂದ, ಬೈಬಲಿಗನುಸಾರ, ಮೃತರು ಯಾವುದೇ ವೇದನೆಯನ್ನು ಅನುಭವಿಸಲಾರರು, ಏಕೆಂದರೆ ಅವರಿಗೆ ಯಾವುದೇ ವಿಷಯದ ಪರಿಜ್ಞಾನವಿರುವುದಿಲ್ಲ. ಆದುದರಿಂದಲೇ ಬೈಬಲು ಪ್ರಚೋದಿಸುವುದು: “ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ [“ಷೀಓಲ್‌ನಲ್ಲಿ,” NW, ಮಾನವಕುಲದ ಸಾಮಾನ್ಯ ಸಮಾಧಿ] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”—ಪ್ರಸಂಗಿ 9:10.
ಜಾಗರೂಕತೆಯಿಂದಿರಬೇಕಾದ ಆವಶ್ಯಕತೆ
ಯೇಸುವಿನ ದಿನದ ಯಾಜಕರ ಸುಳ್ಳುಗಳಿಂದ ಅನೇಕರು ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟಿದ್ದಂತೆಯೇ, ಇಂದಿನ ಧಾರ್ಮಿಕ ಮುಖಂಡರ ಸುಳ್ಳು ಬೋಧನೆಗಳಿಂದ ವಂಚನೆಗೊಳಗಾಗುವ ಅಪಾಯವಿದೆ. ಈ ಜನರು “ದೇವರ ಸತ್ಯವನ್ನು ಸುಳ್ಳಿಗಾಗಿ ವಿನಿಮಯ”ಮಾಡಿದ್ದಾರೆ (NW), ಹಾಗೂ ಅವರು ಮಾನವ ಪ್ರಾಣದ ಅಮರತ್ವದಂತಹ ಸುಳ್ಳು ಬೋಧನೆಗಳನ್ನು ಮತ್ತು ಮಾನವರ ಪ್ರಾಣಗಳು ನರಕಾಗ್ನಿಯಲ್ಲಿ ಯಾತನೆಗೊಳಪಡಿಸಲ್ಪಡುವವು ಎಂಬಂತಹ ಕಲ್ಪನೆಯನ್ನು ಪ್ರವರ್ಧಿಸುತ್ತಾರೆ.—ರೋಮಾಪುರ 1:25.
ಇದಕ್ಕೆ ಕೂಡಿಸಿ, ಇಂದಿನ ಧರ್ಮಗಳು ಸರ್ವಸಾಮಾನ್ಯವಾಗಿ ಮಾನವ ಸಂಪ್ರದಾಯ ಹಾಗೂ ತತ್ತ್ವಜ್ಞಾನವನ್ನು, ಬೈಬಲ್ ಸತ್ಯದೊಂದಿಗೆ ಸಮನಾದ ಮಟ್ಟದಲ್ಲಿಡುತ್ತವೆ. (ಕೊಲೊಸ್ಸೆ 2:8) ಹೀಗೆ, ನೈತಿಕತೆಯ ಕುರಿತಾದ ದೇವರ ನಿಯಮಗಳು—ಪ್ರಾಮಾಣಿಕತೆ ಹಾಗೂ ಲೈಂಗಿಕ ನಡವಳಿಕೆಯ ಕುರಿತಾದ ನಿಯಮಗಳನ್ನೂ ಇದು ಒಳಗೊಂಡಿದೆ—ಸಮಗ್ರವಾಗಿ ಅಲ್ಲ, ಸಾಪೇಕ್ಷವಾಗಿ ವೀಕ್ಷಿಸಲ್ಪಡುತ್ತವೆ. ಇದರ ಫಲಿತಾಂಶವು ಟೈಮ್ ಪತ್ರಿಕೆಯಲ್ಲಿ ವರ್ಣಿಸಿದಂತಿದೆ: “ಸುಳ್ಳುಗಳು, ಸಾಮಾಜಿಕ ಅನಿಶ್ಚಿತತೆಯಲ್ಲಿ—ಒಬ್ಬರು ಇನ್ನೊಬ್ಬರ ಕಡೆಗೆ ವರ್ತಿಸುವ ತಮ್ಮ ನಡವಳಿಕೆಯನ್ನು ನಿಯಂತ್ರಿಸುವ ನಿಬಂಧನೆಗಳನ್ನು, ಜನರು ಇನ್ನೆಂದಿಗೂ ಅರ್ಥಮಾಡಿಕೊಳ್ಳದಿರುವಾಗ ಅಥವಾ ಸಮ್ಮತಿಸದಿರುವಾಗ—ಸಮೃದ್ಧವಾಗಿ ಬೆಳೆಯುತ್ತವೆ.”—ಹೋಲಿಸಿರಿ ಯೆಶಾಯ 59:14, 15; ಯೆರೆಮೀಯ 9:5.
ಸತ್ಯವು ಮಾನ್ಯವೆಂದು ಪರಿಗಣಿಸಲ್ಪಡದಂತಹ ಪರಿಸರದಲ್ಲಿ ಜೀವಿಸುವುದು, ಸುಳ್ಳುಗಳನ್ನು ಹೇಳಬಾರದೆಂಬ ದೇವರ ಬುದ್ಧಿವಾದಕ್ಕೆ ಲಕ್ಷ್ಯಕೊಡುವುದನ್ನು ಕಷ್ಟಕರವಾದದ್ದಾಗಿ ಮಾಡುತ್ತದೆ. ಎಲ್ಲಾ ಸಮಯದಲ್ಲಿಯೂ ನಾವು ಸತ್ಯವನ್ನಾಡುವವರಾಗಿರಲು ಯಾವುದು ಸಹಾಯ ಮಾಡಬಲ್ಲದು?
ಸತ್ಯಕ್ಕಾಗಿ ನಿಲುವನ್ನು ತೆಗೆದುಕೊಳ್ಳುವುದು
ನಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸುವ ನಮ್ಮ ಬಯಕೆಯು, ಸತ್ಯವಾದ ಮಾತನ್ನಾಡುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಅತ್ಯುತ್ತಮವಾದ ಪ್ರಚೋದನೆಯನ್ನು ಒದಗಿಸುತ್ತದೆ. ಅರ್ಥಗರ್ಭಿತವಾಗಿಯೇ, ಬೈಬಲು ಆತನನ್ನು “ಸತ್ಯದ ದೇವರು” (NW) ಎಂದು ಕರೆಯುತ್ತದೆ. (ಕೀರ್ತನೆ 31:5) ಆದುದರಿಂದ, “ಸುಳ್ಳಿನ ನಾಲಿಗೆ”ಯನ್ನು ದ್ವೇಷಿಸುವ ನಮ್ಮ ಸೃಷ್ಟಿಕರ್ತನನ್ನು ಸಂತೋಷಪಡಿಸುವುದು ನಮ್ಮ ಅಪೇಕ್ಷೆಯಾಗಿರುವುದಾದರೆ, ನಾವೂ ಆತನನ್ನು ಅನುಕರಿಸುವಂತೆ ಪ್ರಚೋದಿಸಲ್ಪಡುವೆವು. (ಜ್ಞಾನೋಕ್ತಿ 6:17) ನಾವು ಇದನ್ನು ಹೇಗೆ ಮಾಡಬಲ್ಲೆವು?
ದೇವರ ವಾಕ್ಯದ ಶ್ರದ್ಧಾಪೂರ್ವಕವಾದ ಅಭ್ಯಾಸವು, ‘ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಮಾತಾಡಲು’ ಬೇಕಾದ ನೈತಿಕ ಬಲವನ್ನು ನಮಗೆ ಕೊಡಬಲ್ಲದು. (ಎಫೆಸ 4:25) ಹಾಗಿದ್ದರೂ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ತಿಳಿದಿರುವುದು ಮಾತ್ರವೇ ಸಾಕಾಗಲಾರದು. ಇಂದು ಲೋಕದಲ್ಲಿರುವ ಅನೇಕರಂತೆ, ನಾವು ಯಾವಾಗಲೂ ಸತ್ಯವನ್ನು ಹೇಳುವ ಪ್ರವೃತ್ತಿಯುಳ್ಳವರಾಗಿರದಿದ್ದಲ್ಲಿ, ನಾವು ಸತ್ಯವನ್ನು ಹೇಳುವ ನಿಜ ಪ್ರಯತ್ನವನ್ನು ಮಾಡುವ ಅಗತ್ಯವಿದೆ. ನಾವು ಅಪೊಸ್ತಲ ಪೌಲನ ಮಾದರಿಯನ್ನು ಅನುಸರಿಸಿ, ನಮ್ಮನ್ನು ನಾವೇ ಕಟ್ಟುನಿಟ್ಟುಗೊಳಿಸಿಕೊಳ್ಳುವ ಅಗತ್ಯವಿರಬಹುದು. “ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿ”ಕೊಂಡಿದ್ದೇನೆ ಎಂದು ಪೌಲನು ಬರೆದನು.—1 ಕೊರಿಂಥ 9:27.
ಎಲ್ಲಾ ಸಮಯಗಳಲ್ಲಿ ಸತ್ಯವನ್ನು ಹೇಳುವ ಕದನದಲ್ಲಿ ಸಿಗುವ ಇನ್ನೊಂದು ಸಹಾಯವು, ಪ್ರಾರ್ಥನೆಯಾಗಿದೆ. ಯೆಹೋವನಲ್ಲಿ ಸಹಾಯಕ್ಕಾಗಿ ಯಾಚಿಸುವ ಮೂಲಕ, ನಮಗೆ “ಸಾಮಾನ್ಯವಾಗಿರುವುದಕ್ಕಿಂತಲೂ ಮಿಗಿಲಾದ ಬಲವು” (NW) ದೊರಕುವುದು. (2 ಕೊರಿಂಥ 4:7) ವಾಸ್ತವವಾಗಿ, “ಸತ್ಯದ ತುಟಿ”ಯನ್ನು ಕಾಪಾಡಿಕೊಳ್ಳುತ್ತಾ, “ಸುಳ್ಳಿನ ನಾಲಿಗೆ”ಯನ್ನು ತೊರೆಯುವುದು, ನೈಜವಾದ ಒಂದು ಹೋರಾಟವಾಗಿರಬಹುದು. (ಜ್ಞಾನೋಕ್ತಿ 12:19) ಆದರೆ ಯೆಹೋವನ ಸಹಾಯದಿಂದ ಅದನ್ನು ಪೂರೈಸಸಾಧ್ಯವಿದೆ.—ಫಿಲಿಪ್ಪಿ 4:13.
ಸುಳ್ಳಾಡುವುದು ಸಹಜವಾದ ವಿಷಯವಾಗಿದೆ ಎಂದು ತೋರುವಂತೆ ಮಾಡುವವನು, ಪಿಶಾಚನಾದ ಸೈತಾನನು ಎಂಬುದನ್ನು ಯಾವಾಗಲೂ ಜ್ಞಾಪಕದಲ್ಲಿಡಿರಿ. ಹಗೆಸಾಧನೆಯಿಂದ ಮೊದಲ ಸ್ತ್ರೀಯಾದ ಹವ್ವಳಿಗೆ ಸುಳ್ಳಾಡುವ ಮೂಲಕ, ಅವನು ಅವಳನ್ನು ವಂಚಿಸಿದನು. ಆದರೂ, ಸೈತಾನನ ಸುಳ್ಳಾಡುವ ವಿಧಾನಗಳ ವಿಪತ್ಕಾರಕ ಪರಿಣಾಮಗಳ ಕುರಿತು ನಾವು ಸಂಪೂರ್ಣವಾಗಿ ಅರಿವುಳ್ಳವರಾಗಿದ್ದೇವೆ. ಒಂದು ಸ್ವಾರ್ಥಪರ ಸುಳ್ಳು ಹಾಗೂ ಮೂವರು ಸ್ವಾರ್ಥಿ ವ್ಯಕ್ತಿಗಳ—ಆದಾಮ, ಹವ್ವ, ಹಾಗೂ ಸೈತಾನ—ಕಾರಣದಿಂದ, ಮಾನವ ಕುಟುಂಬದ ಮೇಲೆ ಅಗಣಿತ ಕಷ್ಟಾನುಭವವು ಬರಮಾಡಲ್ಪಟ್ಟಿದೆ.
ಹೌದು, ಸುಳ್ಳಾಡುವುದರ ಕುರಿತಾದ ಸತ್ಯವು ಏನಾಗಿದೆಯೆಂದರೆ, ಅದು ಮರಣಾಂತಕ ವಿಷಕ್ಕೆ ತುಲ್ಯ. ಆದರೂ, ಕೃತಜ್ಞತಾಪೂರ್ವಕವಾಗಿ ನಾವು ಇದರ ಕುರಿತು ಕಾರ್ಯನಡಿಸಬಲ್ಲೆವು. ನಾವು ಸುಳ್ಳಾಡುವ ರೂಢಿಯನ್ನು ನಿಲ್ಲಿಸಿ, “ಪ್ರೀತಿಪೂರ್ವಕವಾದ ದಯೆ ಹಾಗೂ ಸತ್ಯದಲ್ಲಿ ಸಮೃದ್ಧ”ನಾಗಿರುವ (NW) ಯೆಹೋವ ದೇವರ ಅನುಗ್ರಹದಲ್ಲಿ ಶಾಶ್ವತವಾಗಿ ಆನಂದಿಸಬಲ್ಲೆವು.—ವಿಮೋಚನಕಾಂಡ 34:6.
[ಪುಟ 39 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸುಳ್ಳಾಡುವಿಕೆಯು ಮರಣಾಂತಕ ವಿಷಕ್ಕೆ ತುಲ್ಯ
[ಪುಟ 37 ರಲ್ಲಿರುವ ಚಿತ್ರ]
ಸುಳ್ಳಾಡುವುದರ ಪರಿಣಾಮಗಳು, ಒಂದು ಹೂದಾನಿಯ ಚೂರುಚೂರಾಗುವಿಕೆಯಂತಿವೆ