ಪಯನೀಯರ್ ಸೇವೆ—ನಮ್ಮ ಸಮಯದ ವಿವೇಕಯುಕ್ತ ಬಳಕೆ!
1 ‘ನನಗೆ ಈಗಾಗಲೇ ಮಾಡಲು ಸಾಕಷ್ಟು ಕೆಲಸವಿದೆ! ಇಂತಹ ಒಂದು ಸಮಯದಲ್ಲಿ ನನಗೆ ಪಯನೀಯರ್ ಸೇವೆ ಮಾಡಲು ಸಾಧ್ಯವೋ?’ “ಪಯನೀಯರ್ ಸೇವೆಯೊಂದಿಗೆ ಮುಂದೊತ್ತುವುದು” ಎಂಬ ಶೀರ್ಷಿಕೆಯುಳ್ಳ ಸರ್ಕಿಟ್ ಸಮ್ಮೇಳನದ ಭಾಷಣವನ್ನು ಒಬ್ಬ ಪಯನೀಯರ್ ಹಿರಿಯನು ಕೊಡುವುದನ್ನು ಕೇಳಿಸಿಕೊಂಡ ಒಬ್ಬ ಸಹೋದರಿಯು ಹೀಗೆ ನೆನಸಿದಳು. ಸಭಿಕರ ಮಧ್ಯೆ ಕುಳಿತಿದ್ದ ಮತ್ತೊಬ್ಬ ಯುವ ಸಹೋದರನು ಹೀಗೆ ನೆನಸಿದನು, ‘ಪಯನೀಯರ್ ಸೇವೆಯನ್ನು ನಾನು ಹೇಗೆ ಮಾಡಸಾಧ್ಯವಿದೆ? ನಾನೊಬ್ಬ ಹಿರಿಯನಾಗಿಲ್ಲ ಆದರೂ, ನನಗೆ ತುಂಬ ಜವಾಬ್ದಾರಿಯಿದೆ!’
2 ಪಯನೀಯರ್ ಸೇವೆಯಿಂದ ಸಿಗುವ ಆಶೀರ್ವಾದಗಳನ್ನು ಆ ಹಿರಿಯನು ಹೇಳುತ್ತಾ ಮುಂದುವರಿದಂತೆ, ಆ ಸರ್ಕಿಟ್ನಿಂದ ಅನೇಕ ಪಯನೀಯರುಗಳನ್ನು ಅವನು ಸಂದರ್ಶಿಸಿದನು. ಅವರೆಲ್ಲರೂ ತಾವು ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ಏನೆಲ್ಲಾ ಹೊಂದಾಣಿಕೆಗಳನ್ನು ಮಾಡಿದೆವು ಮತ್ತು ತಮ್ಮ ಪ್ರಯತ್ನಗಳ ಫಲವಾಗಿ ಯೆಹೋವನಿಂದ ಆಶೀರ್ವಾದಗಳನ್ನು ಪಡೆದುಕೊಂಡ ವಿಷಯಗಳನ್ನು ಹೇಳಿದರು. ಒಬ್ಬರು ಅಂಗವಿಕಲರಾಗಿದ್ದರು, ಒಬ್ಬರಿಗೆ ಅವಿಶ್ವಾಸಿ ಸಂಗಾತಿಯಿದ್ದರು, ಮತ್ತು ಒಬ್ಬರು ತಮ್ಮ ಉದ್ಯೋಗವನ್ನು ಬಿಟ್ಟು, ಅಲ್ಪಸ್ವಲ್ಪ ಆದಾಯದಿಂದ ಬದುಕುತ್ತಿದ್ದರು. ಯೆಹೋವನ ಸಹಾಯದಿಂದ ಈ ಪಯನೀಯರರು ಹೇಗೆ ಯಶಸ್ವೀ ಜೀವನವನ್ನು ನಡೆಸುತ್ತಿದ್ದರು ಎಂಬುದನ್ನು ಕೇಳಿಸಿಕೊಂಡ ಸಭಿಕರ ಮಧ್ಯೆಯಿದ್ದ ಈ ಸಹೋದರ ಮತ್ತು ಸಹೋದರಿ ತಮ್ಮ ಆಲೋಚನೆ ಮತ್ತು ಪರಿಸ್ಥಿತಿಗಳನ್ನು ಪುನರ್ಪರಿಶೀಲಿಸಲು ಪ್ರಾರಂಭಿಸಿದರು. ನೀವು ಸಹ ಅದನ್ನೇ ಮಾಡುವಂತೆ ನಾವು ಕೇಳಿಕೊಳ್ಳುತ್ತೇವೆ. ಏಕೆಂದರೆ, ಸುವಾರ್ತೆಯನ್ನು ಸಾರುವ ಹೆಚ್ಚಿನ ಪ್ರಚಾರಕರಿಗೆ ಈಗ ಕಡಿಮೆಗೊಳಿಸಲ್ಪಟ್ಟಿರುವ ತಾಸಿನ ಆವಶ್ಯಕತೆಗಳು ಕೈಗೆಟುಕುವಂತೆ ಇರುವುದರಿಂದ ನಾವು ಈ ರೀತಿಯ ಆಮಂತ್ರಣವನ್ನು ನೀಡುತ್ತಿದ್ದೇವೆ.
3 ಯೆಹೋವನು ಸೃಷ್ಟಿಕರ್ತನೂ ವಿಶ್ವದ ಪರಮಾಧಿಕಾರಿಯೂ ಆಗಿದ್ದಾನೆ ಎಂಬುದು ನಮಗೆ ಗೊತ್ತಿದೆ ಮತ್ತು ನಾವು ನಮ್ಮ ಜೀವಿತಗಳಿಗಾಗಿ ಆತನಿಗೆ ಋಣಿಗಳಾಗಿದ್ದೇವೆ. (ದಾನಿ. 4:17; ಅ.ಕೃ. 17:28) ಯೆಹೋವನು ಕೇವಲ ಒಂದು ಸಂಸ್ಥೆಯನ್ನು ಉಪಯೋಗಿಸುತ್ತಿದ್ದಾನೆ ಎಂಬುದು ಸ್ಫುಟ. ಅಂತ್ಯವು ಬರುವ ಮುಂಚೆ ರಾಜ್ಯದ ಸಾಕ್ಷಿಕಾರ್ಯವನ್ನು ಮಾಡುವ ಮೂಲಕ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗಕ್ಕೆ ಬೆಂಬಲವನ್ನು ನೀಡುತ್ತಾ, ನಾವು ಅದರೊಂದಿಗೆ ನಿಷ್ಠೆಯಿಂದ ಸೇವೆಸಲ್ಲಿಸಲು ನಿಜವಾಗಿಯೂ ಸುಯೋಗವನ್ನು ಪಡೆದಿದ್ದೇವೆ. (ಮತ್ತಾ. 24:45; 25:40; 1 ಪೇತ್ರ 2:9) ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವುದರಿಂದ ಸಾರುವುದಕ್ಕಾಗಿರುವ ಸಮಯವು ಕಡಿಮೆಯಾಗುತ್ತಾ ಇದೆ. (2 ತಿಮೊ. 3:1) ಇದರ ಮಧ್ಯೆ, ನಾವು ನಮ್ಮ ಕುಟುಂಬಗಳಿಗೆ ಭೌತಿಕವಾಗಿ ಸಹ ಬೆಂಬಲವನ್ನು ನೀಡಬೇಕು. (1 ತಿಮೊ. 5:8) ಹಿಂದೆ ಜೀವನಕ್ಕೆ ಸಾಕಾಗುತ್ತಿದ್ದ ಆದಾಯವು ಈಗ ಸಾಕಾಗದಿರಬಹುದು. ಇಲ್ಲವೇ ನಮ್ಮ ಆರೋಗ್ಯವು ಹಿಂದೆ ಇದ್ದಷ್ಟು ಚೆನ್ನಾಗಿಲ್ಲದಿರಬಹುದು. ಈ ಕಾರಣದಿಂದ ನಮ್ಮನ್ನು ನೋಡಿಕೊಳ್ಳಲಿಕ್ಕಾಗಿ ಸ್ವಲ್ಪ ಸಮಯ ಮತ್ತು ಹಣವನ್ನು ಹೊಂದಿರಲು ನಾವು ಇಷ್ಟಪಡುವೆವು ನಿಜ. (ಪ್ರಸಂ. 3:12, 13) ಆದುದರಿಂದ ಪಯನೀಯರ್ ಸೇವೆಯನ್ನು ಮಾಡಲಿರುವ ಆಮಂತ್ರಣವನ್ನು ಸ್ವೀಕರಿಸುವುದು ನಿಜವಾಗಿಯೂ ವಿವೇಕಯುಕ್ತವಾಗಿದೆಯೋ ಎಂದು ನಾವು ಕೌತುಕಪಡಬಹುದು.
4 ನಮ್ಮ ಸ್ಥಿತಿಗತಿಗಳನ್ನು ಜಾಗರೂಕವಾಗಿ ಪರಿಶೀಲಿಸಿ, ಪಯನೀಯರ್ ಸೇವೆಯನ್ನು ಮಾಡಬಹುದೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ನಮ್ಮ ವೈಯಕ್ತಿಕ ನಿರ್ಣಯವಾಗಿದೆ. (ರೋಮಾ. 14:12; ಗಲಾ. 6:5) ಪಯನೀಯರ್ ಸೇವೆಯ ಆಮಂತ್ರಣಕ್ಕೆ ಅನೇಕರು ಪ್ರತಿಕ್ರಿಯಿಸಿರುವುದು ನಿಜವಾಗಿಯೂ ಉತ್ತೇಜನದಾಯಕವಾಗಿದೆ. ಈ ಕಡೇ ದಿವಸಗಳಲ್ಲಿ ನಾವು ಎದುರಿಸುವ ಒತ್ತಡಗಳು ಮತ್ತು ಸಮಸ್ಯೆಗಳ ಮಧ್ಯೆಯೂ, ಲೋಕವ್ಯಾಪಕವಾಗಿ ಸುಮಾರು 7,00,000 ಯೆಹೋವನ ಸಾಕ್ಷಿಗಳು ಪಯನೀಯರ್ ಸೇವೆಯಲ್ಲಿ ಆನಂದಿಸುತ್ತಿದ್ದಾರೆ ಎಂದು 1999 ಯಿಯರ್ಬುಕ್ನಲ್ಲಿ ಪ್ರಕಾಶಿಸಲ್ಪಟ್ಟ ಸೇವಾ ವರದಿಯು ತೋರಿಸುತ್ತದೆ. ಕಷ್ಟಕರವಾದ ಆರ್ಥಿಕ ಪರಿಸ್ಥಿತಿಗಳಲ್ಲಿ, ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ, ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾ, ಅಥವಾ ಇತರ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಾ ಇರುವುದಾದರೂ ಈ ಸಹೋದರ ಸಹೋದರಿಯರು ಉತ್ತಮವಾದುದನ್ನು ಮಾಡುವುದರಲ್ಲಿ ದಣಿದುಹೋಗುತ್ತಿಲ್ಲ. ಇದು ನಿಜವಾಗಿಯೂ ಶ್ಲಾಘನೀಯವಾದುದಾಗಿದೆ. (ಗಲಾ. 6:9) ತನ್ನನ್ನು ಪರೀಕ್ಷಿಸಿರಿ ಎಂಬ ಯೆಹೋವನ ಆಮಂತ್ರಣವನ್ನು ಅವರು ಸ್ವೀಕರಿಸಿದ್ದಾರೆ. (ಮಲಾ. 3:10) ತಮಗಿರುವ ಸೀಮಿತ ಸಮಯ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪಯನೀಯರ್ ಸೇವೆಯಲ್ಲಿ ವ್ಯಯಿಸುವುದು ಅತಿ ಬುದ್ಧಿವಂತಿಕೆಯ ವಿಚಾರವಾಗಿದೆ ಎಂದು ಅವರು ನೆನಸುತ್ತಾರೆ. ಮತ್ತು ಪಯನೀಯರ್ ಸೇವೆಯನ್ನು ಮಾಡುವುದಕ್ಕೆ ಮತ್ತು ಅದರಲ್ಲಿ ಉಳಿಯಲಿಕ್ಕಾಗಿ ಅವರು ಮಾಡಿದ ಹೊಂದಾಣಿಕೆಗಳಿಗಾಗಿ ಯೆಹೋವನು ನಿಜವಾಗಿಯೂ ಅವರನ್ನು ಆಶೀರ್ವದಿಸಿದ್ದಾನೆ.
5 ಪಯನೀಯರರು ಆಶೀರ್ವದಿಸಲ್ಪಡುತ್ತಿದ್ದಾರೆ: ಕ್ಯಾಮರೂನಿನಲ್ಲಿರುವ ಎಳೆಯ ಪುತ್ರಿಯನ್ನು ಹೊಂದಿರುವ ಒಬ್ಬ ಸಹೋದರಿಯು ವಿವರಿಸುವುದು: “ನನ್ನ ಮಗಳು ಹುಟ್ಟಿದಾಗಿನಿಂದ ನನ್ನೊಟ್ಟಿಗೆ ಶುಶ್ರೂಷೆಯಲ್ಲಿ ಜೊತೆಗೂಡಿದ್ದಾಳೆ. ಅವಳು ಹೆಜ್ಜೆ ಎತ್ತಿಡುವ ಮುಂಚೆ, ನಾನು ಅವಳನ್ನು ಒಂದು ಬಟ್ಟೆಯ ಸಹಾಯದಿಂದ ನನ್ನ ಬೆನ್ನಿಗೆ ಕಟ್ಟಿ, ಎತ್ತಿಕೊಂಡು ಹೋಗುತ್ತಿದ್ದೆ. ಒಂದು ದಿನ ಬೆಳಗ್ಗೆ ಸೇವೆಮಾಡುತ್ತಿದ್ದಾಗ, ನಾನು ರಸ್ತೆಬದಿಯ ಅಂಗಡಿಯ ಬಳಿ ನಿಂತುಕೊಂಡೆ. ನನ್ನ ಮಗು ನನ್ನ ಬ್ಯಾಗಿನಿಂದ ಅನೇಕ ಪತ್ರಿಕೆಗಳನ್ನು ತೆಗೆದುಕೊಂಡು, ಪಕ್ಕದಲ್ಲಿಯೇ ಇದ್ದ ಮಳಿಗೆಗೆ ದಟ್ಟಗಾಲು ಹಾಕುತ್ತಾ ಹೋದಳು. ಅವಳು ಅಷ್ಟೇನೂ ಮಾತಾಡಶಕ್ತಳಾಗದಿದ್ದರೂ, ಒಬ್ಬ ಸ್ತ್ರೀಯ ಗಮನವನ್ನು ಸೆಳೆದು, ಅವಳು ಆ ಪತ್ರಿಕೆಯನ್ನು ತೆಗೆದುಕೊಳ್ಳುವಂತೆ ಮಾಡಿದಳು. ಅಷ್ಟು ಚಿಕ್ಕ ಮಗು ಸೇವೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನೋಡಿ ಆ ಸ್ತ್ರೀಯು ಮೂಕವಿಸ್ಮಿತಳಾದಳು. ಅವಳು ಆ ಪತ್ರಿಕೆಯನ್ನು ತಕ್ಷಣವೇ ತೆಗೆದುಕೊಂಡಳು, ಅಷ್ಟುಮಾತ್ರವಲ್ಲದೆ ಒಂದು ಮನೇ ಬೈಬಲ್ ಅಭ್ಯಾಸಕ್ಕೆ ಒಪ್ಪಿಕೊಂಡಳು!”
6 ಹೆಚ್ಚು ಆಕ್ಸಿಲಿಯರಿ ಪಯನೀಯರರು ಬೇಕಾಗಿದ್ದಾರೆ ಎಂಬ ಆಮಂತ್ರಣಕ್ಕೆ ಸ್ಯಾಂಬೀಯದಲ್ಲಿ ಒಬ್ಬ ಹಿರಿಯನು ಮತ್ತು ಮನೆಯ ಮುಖ್ಯಸ್ಥನಾಗಿರುವ ಸಹೋದರನು ಈ ರೀತಿಯಲ್ಲಿ ಪ್ರತಿಕ್ರಿಯಿಸಿದನು. ಅವನು ಹೊರಗೆ ಐಹಿಕ ಉದ್ಯೋಗದಲ್ಲಿದ್ದನು, ಆದರೂ ತನ್ನ ಕಾರ್ಯಮಗ್ನ ಶೆಡ್ಯೂಲಿನ ಮಧ್ಯೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ನಿರ್ಧರಿಸಿದನು. ಅವನು ತನ್ನ ಸಭೆಗೆ ಮತ್ತು ತನ್ನ ಕುಟುಂಬಕ್ಕೆ ಒಂದು ಉತ್ತಮ ಮಾದರಿಯನ್ನಿಡಲು ಇಷ್ಟಪಟ್ಟನು. ಕೆಲವೊಂದು ಸಂದರ್ಭಗಳಲ್ಲಿ, ತನ್ನ ಕಾರನ್ನು ರಸ್ತೆಬದಿಯಲ್ಲಿ ನಿಲ್ಲಿಸಿ, ಕುಟುಂಬ ಸಂತೋಷದ ರಹಸ್ಯದ ಆಡಿಯೋಕ್ಯಾಸೆಟ್ಟನ್ನು ಹಾಕುತ್ತಿದ್ದನು. ಹಾದುಹೋಗುತ್ತಿದ್ದವರನ್ನು ಕಾರಿನ ಬಳಿ ಕರೆದು, ಜೋರಾಗಿ ಕೇಳಿಬರುತ್ತಿದ್ದ ವಿಷಯವನ್ನು ಕೇಳಿಸಿಕೊಳ್ಳುವಂತೆ ಹೇಳುತ್ತಿದ್ದನು. ಈ ರೀತಿಯಲ್ಲಿ ಅವನು 16 ಕುಟುಂಬ ಸಂತೋಷ ಮತ್ತು 13 ಜ್ಞಾನ ಪುಸ್ತಕಗಳನ್ನು ನೀಡಲು ಶಕ್ತನಾದನು. ಅಷ್ಟುಮಾತ್ರವಲ್ಲದೆ, ಎರಡು ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಿದನು.
7 ಸಿಂಬಾಬ್ವೆಯ ನೆರೆಯ ದೇಶದಲ್ಲಿ ಸಹ ಒಂದು ಒಳ್ಳೆಯ ಪಯನೀಯರ್ ಆತ್ಮವು ಕಂಡುಬಂತು. 1998ರ ಏಪ್ರಿಲ್ ತಿಂಗಳಿನಲ್ಲಿ, 117 ಮಂದಿ ಪ್ರಚಾರಕರುಳ್ಳ ಒಂದು ಸಭೆಯಲ್ಲಿ 70 ಮಂದಿ ಆಕ್ಸಿಲಿಯರಿ ಮತ್ತು 9 ಮಂದಿ ರೆಗ್ಯುಲರ್ ಪಯನೀಯರರಾಗಿ ಸೇವೆಸಲ್ಲಿಸಿದರು. ಮತ್ತೊಂದು ಸಭೆಯಲ್ಲಿ 94 ಮಂದಿ ಪ್ರಚಾರಕರಲ್ಲಿ 58 ಮಂದಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸಿದರು. 126 ಪ್ರಚಾರಕರಿರುವ ಮತ್ತೊಂದು ಸಭೆಯು 4 ರೆಗ್ಯುಲರ್ ಪಯನೀಯರರೊಂದಿಗೆ 58 ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ನಿರ್ಧರಿಸಿದರು ಎಂದು ವರದಿಸಿತು. ಸಿಂಬಾಬ್ವೆಯಲ್ಲಿ ಕಳೆದ ಸೇವಾ ವರ್ಷವು ಗಮನಾರ್ಹವಾಗಿತ್ತು. ಅಲ್ಲಿರುವ ಸಹೋದರರು ತಮ್ಮ ಕುಟುಂಬದ ವ್ಯವಹಾರಗಳಲ್ಲಿ, ಸಭಾ ಚಟುವಟಿಕೆಗಳಲ್ಲಿ, ಬ್ರಾಂಚ್ ಕಟ್ಟುವುದರಲ್ಲಿ ತುಂಬ ಕಾರ್ಯಮಗ್ನರಾಗಿದ್ದರೂ, ತಮ್ಮ ಸಮಯವನ್ನು ಸೇವೆಯಲ್ಲಿ ಬುದ್ಧಿವಂತಿಕೆಯಿಂದ ಉಪಯೋಗಿಸುವುದರಲ್ಲಿ ಗಮನವನ್ನು ಕೇಂದ್ರೀಕರಿಸಿದರು.
8 ಪಯನೀಯರ್ ಸೇವೆಯನ್ನು ಪ್ರಾರಂಭಿಸುವುದು ಮತ್ತು ಅದರಲ್ಲಿ ಉಳಿಯುವುದು ತಮ್ಮ ಸ್ವಂತ ಶಕ್ತಿಯಿಂದಾಗುವುದಿಲ್ಲ ಎಂಬುದು ಪಯನೀಯರರಿಗೆ ಗೊತ್ತಿದೆ. “ದೇವರು ದಯಪಾಲಿಸುವ ಶಕ್ತಿಯ ಮೇಲೆ ಅವಲಂಬಿತ”ರಾಗಿರುವ (NW) ಕಾರಣ ತಮಗೆ ಇಷ್ಟೆಲ್ಲ ಮಾಡಸಾಧ್ಯವಿದೆ ಎಂಬುದನ್ನು ಒಪ್ಪಿಕೊಳ್ಳುವುದರಲ್ಲಿ ಅವರು ಮೊದಲಿಗರಾಗಿದ್ದಾರೆ. (1 ಪೇತ್ರ 4:11) ಅವರಿಗಿರುವ ನಂಬಿಕೆಯು ದಿನೇದಿನೇ ಶುಶ್ರೂಷೆಯಲ್ಲಿ ಮುಂದುವರಿಯುವಂತೆ ಅವರನ್ನು ಶಕ್ತಗೊಳಿಸುತ್ತದೆ. ತಮ್ಮ ಸ್ವಂತ ಅನುಕೂಲತೆ ಮತ್ತು ಸುಖಸೌಕರ್ಯಗಳನ್ನು ನೋಡಿಕೊಳ್ಳುವ ಬದಲು, ಯಶಸ್ವೀ ಪಯನೀಯರರು ಶುಶ್ರೂಷೆಯಲ್ಲಿ ಮುಂದೆ ಸಾಗಬೇಕಾದರೆ, “ತುಂಬ ಹೋರಾಟವನ್ನು” (NW) ನಡೆಸಬೇಕು ಎಂಬುದನ್ನು ತಿಳಿದುಕೊಂಡಿದ್ದಾರೆ. ಆದರೆ ಇದರ ಪರಿಣಾಮವಾಗಿ ಅವರು ಅನೇಕ ಆಶೀರ್ವಾದಗಳನ್ನು ಪಡೆದುಕೊಳ್ಳುತ್ತಾರೆ.—1 ಥೆಸ. 2:2.
9 ಪೌಲನ ಮಾದರಿಯು ಅನುಕರಣಯೋಗ್ಯವಾಗಿದೆ: ಶುಶ್ರೂಷೆಯಲ್ಲಿ ಅಪೊಸ್ತಲ ಪೌಲನ ಅಮೋಘ ಸಾಧನೆಗಳನ್ನು ಮತ್ತು ಅವನು ಅನೇಕ ಜನರಿಗೆ ನೀಡಿದ ಉತ್ತಮ ಸಹಾಯವನ್ನು ಬೈಬಲಿನ ವೃತ್ತಾಂತಗಳು ತಿಳಿಸುತ್ತವೆ. ಇತರರಂತೆ ಪೌಲನೂ ತುಂಬ ಕಾರ್ಯಮಗ್ನನಾಗಿದ್ದನು. ಸುವಾರ್ತೆಯನ್ನು ಸಾರಲಿಕ್ಕಾಗಿ ಮತ್ತು ಸಭೆಗಳನ್ನು ಬಲಪಡಿಸಲಿಕ್ಕಾಗಿ ಅವನು ನಾನಾ ರೀತಿಯ ಹಿಂಸೆಯನ್ನು ಮತ್ತು ಶಾರೀರಿಕ ಕಷ್ಟಕಾರ್ಪಣ್ಯಗಳನ್ನು ಸಹಿಸಿಕೊಂಡನು. ಅವನು ಆರೋಗ್ಯದ ಸಮಸ್ಯೆಯನ್ನು ಸಹ ತಾಳಿಕೊಳ್ಳಬೇಕಾಗಿತ್ತು. (2 ಕೊರಿಂ. 11:21-29; 12:7-10) ಅವನು ತನ್ನ ಸಮಯವನ್ನು ವಿವೇಕದಿಂದ ಉಪಯೋಗಿಸಲು ದೃಢಸಂಕಲ್ಪವುಳ್ಳವನಾಗಿದ್ದನು. ತಾನು ಎಲ್ಲ ಕಾರ್ಯಗಳನ್ನು ಯೆಹೋವನ ಸಹಾಯದಿಂದ ಮಾಡಿದೆನೆಂಬುದನ್ನು ಅವನು ಅಂಗೀಕರಿಸಿದನು. (ಫಿಲಿ. 4:13) ಪೌಲನಿಂದ ಸಹಾಯವನ್ನು ಪಡೆದುಕೊಂಡ ಯಾರೊಬ್ಬರಿಗೂ, ಪೌಲನು ಯೆಹೋವನ ಸೇವೆಯಲ್ಲಿ ತನ್ನ ಸಮಯ ಮತ್ತು ಶ್ರಮವನ್ನು ಸುಮ್ಮನೇ ವ್ಯರ್ಥಗೊಳಿಸುತ್ತಿದ್ದಾನೆ ಅಥವಾ ಒಳ್ಳೆಯ ರೀತಿಯಲ್ಲಿ ವ್ಯಯಿಸಿರಬಹುದಿತ್ತು ಎಂದು ನೆನಸಲು ಕಾರಣವಿರಲಿಲ್ಲ. ಅಷ್ಟೇಕೆ, ಪೌಲನು ತನ್ನ ಸಮಯವನ್ನು ವಿವೇಕದಿಂದ ಉಪಯೋಗಿಸಿದ ರೀತಿಯಿಂದ ನಾವು ಈಗಲೂ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೇವೆ! ನಮ್ಮ ಆದ್ಯತೆಗಳನ್ನು ಮುಂದಿರಿಸಿ, ಈ ಕಷ್ಟಕರವಾದ ಸಮಯಗಳಲ್ಲಿ ಸತ್ಯದೊಂದಿಗೆ ಅಂಟಿಕೊಂಡಿರಲು ನಮಗೆ ಸಹಾಯಮಾಡಲಿಕ್ಕಾಗಿ ಅವನ ಪ್ರೇರಿತ ಸಲಹೆಯನ್ನು ನಾವು ಬಹಳ ಗಣ್ಯಮಾಡುತ್ತೇವೆ!
10 ಹಿಂದೆಂದಿಗಿಂತಲೂ ಈಗ, ‘ಸುವಾರ್ತೆಯನ್ನು ಸಾರುವುದಕ್ಕೆ ಉಳಿದಿರುವ ಸಮಯವು ಕಡಿಮೆಯಾಗಿದೆ.’ (1 ಕೊರಿಂ. 7:29, NW; ಮತ್ತಾ. 24:14) ಆದುದರಿಂದ, ನಮ್ಮನ್ನು ಈ ರೀತಿ ಪ್ರಶ್ನಿಸಿಕೊಳ್ಳುವುದು ತಕ್ಕದ್ದಾಗಿದೆ, ‘ನಾಳೆ ನಾನೇನಾದರೂ ಸಾಯುತ್ತೇನೆಂದು ನನಗೆ ಗೊತ್ತಾದಲ್ಲಿ, ಇಂದು ಯೆಹೋವನಿಗೆ ನನ್ನ ಸಮಯವನ್ನು ಬುದ್ಧಿವಂತಿಕೆಯಿಂದ ವ್ಯಯಿಸಿದ್ದೇನೆಂದು ಹೇಳುವ ಸ್ಥಾನದಲ್ಲಿ ನಾನಿದ್ದೇನೋ?’ (ಯಾಕೋ. 4:14) ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಲು ನಿಮಗಿರುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾ, ಈಗಲೇ ಯೆಹೋವನೊಂದಿಗೆ ಪ್ರಾರ್ಥನೆಯಲ್ಲಿ ಏಕೆ ಮಾತಾಡಬಾರದು? (ಕೀರ್ತ. 90:12) ನಿಮ್ಮ ಜೀವಿತವನ್ನು ಸರಳವಾಗಿಡಲು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿರಿ. ಹಿಂದೆ ಪಯನೀಯರ್ ಸೇವೆಯನ್ನು ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿರುವುದಾದರೂ, ಈಗ ನೀವು ಮಾಡಸಾಧ್ಯವೋ?
11 ನಿಮಗೆ ಒದಗಿಬರುವ ಪರಿಸ್ಥಿತಿಗಳನ್ನು ಸದುಪಯೋಗಿಸಿರಿ: ರೆಗ್ಯುಲರ್ ಪಯನೀಯರರಾಗಿ ಸೇವೆಸಲ್ಲಿಸಲು ಇಷ್ಟಪಡುವವರೆಲ್ಲರೂ ಕಾರಣಾಂತರಗಳಿಂದ ತಿಂಗಳಿಗೆ 70 ತಾಸುಗಳನ್ನು ವ್ಯಯಿಸಸಾಧ್ಯವಿಲ್ಲ. ಆದರೂ, ಸಾಧ್ಯವಾದಾಗಲೆಲ್ಲ ಅಥವಾ ನಿರಂತರವಾಗಿ ಅನೇಕ ಪ್ರಚಾರಕರು ತಿಂಗಳಿಗೆ 50 ತಾಸುಗಳನ್ನು ವ್ಯಯಿಸುತ್ತಾ ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸಲು ಏರ್ಪಾಡುಮಾಡಿದ್ದಾರೆ. ಆದರೆ, ನಿಮ್ಮ ಪರಿಸ್ಥಿತಿಗಳು ಆಕ್ಸಿಲಿಯರಿ ಸೇವೆ ಅಥವಾ ರೆಗ್ಯುಲರ್ ಪಯನೀಯರರಾಗಿ ಸೇವೆಸಲ್ಲಿಸಲು ಅನುಮತಿಸದಿರುವಲ್ಲಿ ನಿರುತ್ಸಾಹಗೊಳ್ಳದಿರಿ. ನಿಮ್ಮ ಪರಿಸ್ಥಿತಿಗಳು ಬದಲಾಗುವಂತೆ ನಿರಂತರವಾಗಿ ಪ್ರಾರ್ಥಿಸಿರಿ. ಅದೇ ಸಮಯದಲ್ಲಿ, ಹೊಂದಾಣಿಕೆಗಳನ್ನು ಮಾಡಲು ಸಾಧ್ಯವೇ ಇರದ ಪಕ್ಷದಲ್ಲಿ, ಯೆಹೋವನ ಸೇವೆಯಲ್ಲಿ ಪೂರ್ಣಹೃದಯದಿಂದ ನೀವು ಮಾಡುವ ಅಲ್ಪಸ್ವಲ್ಪ ಸೇವೆಯನ್ನು ಸಹ ಆತನು ಸಂತೋಷದಿಂದ ಸ್ವೀಕರಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ಸಾಂತ್ವನವನ್ನು ಪಡೆದುಕೊಳ್ಳಿರಿ. (ಮತ್ತಾ. 13:23) ನೀವು ಆತನ ಪಕ್ಷದಲ್ಲಿ ದೃಢವಾಗಿ ನಿಂತುಕೊಂಡಿದ್ದೀರಿ ಮತ್ತು ಪ್ರತಿ ತಿಂಗಳು ಸಾಕ್ಷಿ ನೀಡುವ ಮೂಲಕ ಒಬ್ಬ ನಂಬಿಗಸ್ತ ಪ್ರಚಾರಕರಾಗಿರಲು ಕಠಿನ ಪರಿಶ್ರಮವನ್ನು ಪಡುತ್ತಿದ್ದೀರಿ ಎಂಬುದನ್ನು ಆತನು ನೋಡುತ್ತಾನೆ. ಸುವಾರ್ತೆಯ ಒಬ್ಬ ಅತ್ಯುತ್ಕೃಷ್ಟ ಪ್ರಚಾರಕರೂ ಬೋಧಕರೂ ಆಗಿ, ನಿಮ್ಮ ಸಾಕ್ಷಿಕಾರ್ಯದ ಕೌಶಲಗಳನ್ನು ಹರಿತಗೊಳಿಸುವ ಮೂಲಕ ನೀವು ಪ್ರಗತಿಯನ್ನು ಮಾಡಸಾಧ್ಯವಿದೆ.—ತಿಮೊ. 4:16
12 “ಯೆಹೋವನ ಭಯಂಕರವಾದ ಮಹಾದಿನವು” ತುಂಬ ಹತ್ತಿರವಿರುವುದರಿಂದ, ನಮಗೆ ನೇಮಿಸಲ್ಪಟ್ಟ ಕೆಲಸವನ್ನು ನಾವು ಮಾಡಿಮುಗಿಸಬೇಕಾದರೆ, ಉಳಿದಿರುವ ಸಮಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವ ಅಗತ್ಯವಿದೆ. (ಯೋವೇ. 2:31) ಸೈತಾನನಿಗೆ ತನ್ನ ಸಮಯವು ತುಂಬ ಕಡಿಮೆಯೆಂದು ಗೊತ್ತಿದೆ. ಆದುದರಿಂದ ನಮ್ಮ ಜೀವಿತಗಳನ್ನು ಗೋಜಲುಗೊಳಿಸಿ, ನಿಜವಾಗಿಯೂ ಪ್ರಾಮುಖ್ಯವಾದ ವಿಷಯಗಳ ಮೇಲಿರುವ ನಮ್ಮ ಏಕಾಗ್ರತೆಯನ್ನು ಭಂಗಪಡಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದ್ದಾನೆ. (ಫಿಲಿ. 1:10; ಪ್ರಕ. 12:12) ನಿಮ್ಮ ಕುರಿತಾಗಿ ಯೆಹೋವನಿಗಿರುವ ಆಸಕ್ತಿಯನ್ನು ಎಂದೂ ಅಲ್ಪವಾಗಿ ಎಣಿಸದಿರಿ. ಯೆಹೋವನು ನಿಮ್ಮ ಜೀವಿತವನ್ನು ಸರಳೀಕರಿಸಲು ಸಹಾಯಮಾಡಬಲ್ಲನು. ಮತ್ತು ನಿಮ್ಮ ಕೈಲಾದಷ್ಟು ಸೇವೆಯನ್ನು ಸಲ್ಲಿಸಿರಿ. (ಕೀರ್ತ. 145:16) ಸಂತೋಷಕರವಾಗಿ ಅನೇಕರು, ತಮ್ಮ ಪರಿಸ್ಥಿತಿಗಳನ್ನು ಪುನರ್ಪರಿಶೀಲಿಸುವ ಮೂಲಕ ಆಕ್ಸಿಲಿಯರಿ ಅಥವಾ ರೆಗ್ಯುಲರ್ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದಾರೆ. ನಿಜವಾಗಿಯೂ, ಪಯನೀಯರರು ತಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವುದರಲ್ಲಿ ಆಳವಾದ ಸಂತೃಪ್ತಿಯನ್ನು ಕಂಡುಕೊಳ್ಳುತ್ತಾರೆ. ಅವರಲ್ಲಿ ನೀವು ಒಬ್ಬರಾಗಿರಲು ಇಷ್ಟಪಡುತ್ತೀರೋ?