ನಿಮ್ಮ ಪವಿತ್ರ ಸೇವೆಯಲ್ಲಿ ಸಂತೋಷವನ್ನು ಕಂಡುಕೊಳ್ಳುವುದು
1 ಅವರು “ಸಂತೋಷವುಳ್ಳವರಾಗಿ” ಹಿಂದಿರುಗಿದರು. ಯೇಸುವಿನ 70 ಮಂದಿ ಶಿಷ್ಯರು ವ್ಯಾಪಕವಾದ ಸಾರುವ ಸಂಚಾರದ ಬಳಿಕ ಅವನಿಗೆ ವರದಿಯೊಪ್ಪಿಸಿದಾಗ, ಅವರಿಗೆ ಹೇಗನಿಸಿತು ಎಂಬುದನ್ನು ಬೈಬಲ್ ವೃತ್ತಾಂತವು ಈ ಮಾತುಗಳಲ್ಲಿ ವ್ಯಕ್ತಪಡಿಸುತ್ತದೆ. ದೇವರ ಚಿತ್ತವನ್ನು ಮಾಡುವುದರಿಂದ ಸಿಗುವ ಆಂತರಿಕ ಆನಂದವನ್ನು ಅವರು ಅನುಭವಿಸಿದರು. (ಲೂಕ 10:17) ಪವಿತ್ರ ಸೇವೆಯಲ್ಲಿ ನೀವೂ ತದ್ರೀತಿಯ ಸಂತೋಷವನ್ನು ಕಂಡುಕೊಳ್ಳಲು ನಿಮಗೆ ಯಾವುದು ಸಹಾಯ ಮಾಡಬಲ್ಲದು?
2 ಒಂದು ಸಕಾರಾತ್ಮಕ ಮನೋಭಾವ: ಯೆಹೋವನ ಮಹಾ ಉದ್ದೇಶವನ್ನು ಜನರಿಗೆ ಪರಿಚಯಿಸುವ ದೇವದತ್ತ ಸುಯೋಗವು ನಿಮಗಿದೆ. ನಿಮ್ಮ ಸಾರುವ ಕಾರ್ಯದ ಮೂಲಕ, ಈ ಲೋಕದ ನೀತಿಭ್ರಷ್ಟ ಪದ್ಧತಿಗಳಿಂದ ಮತ್ತು ಸುಳ್ಳು ಧರ್ಮದ ಸಂಕೋಲೆಗಳಿಂದ ಒಬ್ಬ ವ್ಯಕ್ತಿಯನ್ನು ಸ್ವತಂತ್ರಗೊಳಿಸಲು ನೀವು ಸಹಾಯ ಮಾಡಬಹುದು. ಇಂದು ನಮ್ಮ ಸುತ್ತಲಿರುವ ಕಲಹದಿಂದ ಮುಕ್ತವಾಗಿರುವ ಒಂದು ಲೋಕದಲ್ಲಿ ಜೀವಿಸುವ ನಿರೀಕ್ಷೆಯನ್ನು ನೀವು ಜನರಿಗೆ ಕೊಡಸಾಧ್ಯವಿದೆ. ಗ್ರಹಣಶಕ್ತಿಯುಳ್ಳ ಒಂದು ಹೃದಯದಲ್ಲಿ ನೀವು ಸತ್ಯದ ಬೀಜಗಳನ್ನು ಯಶಸ್ವಿಕರವಾಗಿ ಬಿತ್ತುವಾಗ ಯೆಹೋವನಿಗಾಗುವ ಸಂತೋಷದ ಕುರಿತು ತುಸು ಆಲೋಚಿಸಿರಿ. ಪೂರ್ಣ ಮನಸ್ಸಿನಿಂದ ನೀವು ಶುಶ್ರೂಷೆಯನ್ನು ಮುಂದುವರಿಸುವಾಗ, ಸಂತೋಷದ ಫಲವನ್ನು ನಿಮ್ಮಲ್ಲಿ ಉತ್ಪಾದಿಸುವಂತೆ ದೇವರ ಆತ್ಮಕ್ಕಾಗಿ ಪ್ರಾರ್ಥಿಸುವುದರಲ್ಲಿ ಸಕಾರಾತ್ಮಕ ಮನೋಭಾವವುಳ್ಳವರಾಗಿರಿ.
3 ಪ್ರಾಯೋಗಿಕ ತರಬೇತಿ: ಯೇಸು ತನ್ನ 70 ಮಂದಿ ಶಿಷ್ಯರೊಂದಿಗೆ ನಡೆಸಿದ ಬೋಧನಾ ಕೂಟವು, ಆಧುನಿಕ ದಿನದ ಸೇವಾ ಕೂಟಕ್ಕೆ ಹೋಲಿಸಲ್ಪಟ್ಟಿದೆ. ಶಿಷ್ಯರು ತಮ್ಮ ಶುಶ್ರೂಷೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಸಾಧ್ಯವಾಗುವಂತೆ ಅವನು ಅವರಿಗೆ ತರಬೇತಿಯನ್ನು ನೀಡಿದನು. (ಲೂಕ 10:1-16) ಇಂದು, ಜನರನ್ನು ಹೇಗೆ ಸಮೀಪಿಸುವುದು, ಸಂಭಾಷಣೆಗಳನ್ನು ಹೇಗೆ ಆರಂಭಿಸುವುದು, ಮತ್ತು ಬೈಬಲ್ ಅಭ್ಯಾಸಗಳನ್ನು ಹೇಗೆ ಪ್ರಾರಂಭಿಸುವುದು ಮತ್ತು ನಡೆಸುವುದು ಎಂಬ ವಿಷಯಗಳಲ್ಲಿ ಸೇವಾ ಕೂಟವು ನಿಮಗೆ ತರಬೇತಿ ನೀಡುತ್ತದೆ. ನಿಮ್ಮ ಸಾರುವ ಕೌಶಲಗಳಿಗೆ ನೀವು ಗಮನಕೊಟ್ಟು, ಅವುಗಳನ್ನು ಉತ್ತಮಗೊಳಿಸಿಕೊಳ್ಳುವುದಾದರೆ, ನಿಮಗಿರುವ ಯಾವುದೇ ರೀತಿಯ ಭಯ ಹಾಗೂ ಅಸಮರ್ಥ ಅನಿಸಿಕೆಗಳು ಕಡಿಮೆಯಾಗಿ, ನಿಮ್ಮ ಆತ್ಮವಿಶ್ವಾಸ ಹಾಗೂ ಸಂತೋಷವು ಹೆಚ್ಚುತ್ತಿರುವುದನ್ನು ನೋಡುವಿರಿ.
4 ಭವಿಷ್ಯತ್ತಿನ ಮೇಲೆ ಗಮನವನ್ನು ಕೇಂದ್ರೀಕರಿಸಿರಿ: ಯೇಸು ಕಷ್ಟಾನುಭವಗಳನ್ನು ಸಹಿಸಿಕೊಂಡನಾದರೂ ತನ್ನ ಪವಿತ್ರ ಸೇವೆಯಲ್ಲಿ ಸಂತೋಷವನ್ನು ಕಂಡುಕೊಂಡನು. ಏಕೆ? ಏಕೆಂದರೆ ತನ್ನ ಮುಂದೆ ಇಡಲ್ಪಟ್ಟಿದ್ದ ಆಶೀರ್ವಾದಗಳು ಮತ್ತು ಸುಯೋಗಗಳ ಮೇಲೆ ಅವನು ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದ್ದನು. (ಇಬ್ರಿ. 12:2) ನಿಮ್ಮ ಮನಸ್ಸು ಹಾಗೂ ಹೃದಯವನ್ನು ಯೆಹೋವನ ಹೆಸರಿನ ಮೇಲೆ ಹಾಗೂ ದೇವರ ಹೊಸ ಲೋಕದಲ್ಲಿ ಬರಲಿರುವ ಆಶೀರ್ವಾದಗಳ ಮೇಲೆ ಕೇಂದ್ರೀಕರಿಸುವ ಮೂಲಕ ನೀವು ಸಹ ಹಾಗೆಯೇ ಮಾಡಬಲ್ಲಿರಿ. ಇದು ನಿಮ್ಮ ಶುಶ್ರೂಷೆಗೆ ಸಂತೋಷವನ್ನೂ ಅರ್ಥವನ್ನೂ ಕೂಡಿಸುವುದು.
5 ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸುವುದು, ಇಂದು ನಿಮಗೆ ಸಿಗಸಾಧ್ಯವಿರುವ ಮಹಾನ್ ಸುಯೋಗವಾಗಿದೆ. ಆದುದರಿಂದ, ನೀವು ಹೀಗೆ ಹೇಳುವಂತಾಗಲಿ: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು.”—ಕೀರ್ತ. 40:8.