ವಾಚಕರಿಂದ ಪ್ರಶ್ನೆಗಳು
ಯೇಸು ಪ್ರೇರೇಪಿಸಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗುವದಕ್ಕೆ ಹೆಣಗಾಡಿರಿ. ಬಹುಜನ ಒಳಕ್ಕೆ ಹೋಗುವದಕ್ಕೆ ನೋಡುವರು, ಆದರೆ ಅವರಿಂದಾಗುವದಿಲ್ಲ.” (ಲೂಕ 13:24) ಅವನು ಏನನ್ನು ಅರ್ಥೈಸಿದನು, ಮತ್ತು ಅದು ಇಂದು ಹೇಗೆ ಅನ್ವಯವಾಗುತ್ತದೆ?
ಈ ಆಸಕ್ತಿಕರ ವಚನಭಾಗದ ಸನ್ನಿವೇಶವನ್ನು ಪರಿಗಣಿಸುವ ಮೂಲಕ ನಾವು ಅದನ್ನು ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಬಹುದು. ತನ್ನ ಮರಣದ ಸುಮಾರು ಆರು ತಿಂಗಳುಗಳ ಮುಂಚೆ, ಯೇಸು ದೇವಾಲಯದ ಪುನರ್‌ಸಮರ್ಪಣೆಯ ವಾರ್ಷಿಕೋತ್ಸವದ ಸಮಯದಲ್ಲಿ ಯೆರೂಸಲೇಮಿನಲ್ಲಿದ್ದನು. ಅವನು ತಾನು ದೇವರ ಕುರಿಯ ಕುರುಬನಾಗಿರುವುದಾಗಿ ಮಾತಾಡಿದನು, ಆದರೆ ಸಾಮಾನ್ಯ ಯೆಹೂದ್ಯರು ಕಿವಿಗೊಡಲು ನಿರಾಕರಿಸಿದ್ದರಿಂದಾಗಿ ಅಂತಹ ಕುರಿಗಳಲ್ಲಿ ಒಬ್ಬರಾಗಿರಲಿಲ್ಲ ಎಂದು ಹೇಳಿದನು. ತಾನು ತನ್ನ ತಂದೆಯೊಂದಿಗೆ ‘ಒಂದಾಗಿದ್ದೇನೆ’ ಎಂದು ಅವನು ಹೇಳಿದಾಗ, ಯೆಹೂದ್ಯರು ಅವನಿಗೆ ಕಲ್ಲೆಸೆಯಲು ಕಲ್ಲುಗಳನ್ನು ಎತ್ತಿಕೊಂಡರು. ಅವನು ಅಲ್ಲಿಂದ ಯೊರ್ದಾನಿನಾಚೆಯ ಪೆರೀಯಕ್ಕೆ ಪಲಾಯನಗೈದನು.—ಯೋಹಾನ 10:1-40.
ಅಲ್ಲಿ ಒಬ್ಬ ಮನುಷ್ಯನು “ಸ್ವಾಮೀ, ರಕ್ಷಣೆ ಹೊಂದುವವರು ಸ್ವಲ್ಪಜನರೋ”? ಎಂದು ಕೇಳಿದನು. (ಲೂಕ 13:23) ಅದು ಅವನಿಗೆ ಕೇಳಲು ಒಂದು ಯೋಗ್ಯವಾದ ಪ್ರಶ್ನೆಯಾಗಿತ್ತು, ಯಾಕಂದರೆ ಕೇವಲ ಒಂದು ಸೀಮಿತ ಸಂಖ್ಯೆಯ ಜನರು ರಕ್ಷಣೆಗೆ ಯೋಗ್ಯರು ಎಂದು ಆ ಸಮಯದಲ್ಲಿನ ಯೆಹೂದ್ಯರು ನಂಬಿದ್ದರು. ಆ ಯೆಹೂದ್ಯರು ತೋರಿಸಿದಂತಹ ಮನೋಭಾವದಿಂದ, ಆ ಸ್ವಲ್ಪ ಜನರು ಯಾರಾಗಿದ್ದಾರೆಂದು ಅವರು ನೆನಸಿದರೋ ಅದನ್ನು ಊಹಿಸಿಕೊಳ್ಳುವುದು ಕಷ್ಟಕರವಲ್ಲ. ಮುಂದಿನ ವಿಕಸನಗಳು ತೋರಿಸಲಿದ್ದಂತೆ, ಅವರು ಎಷ್ಟೊಂದು ತಪ್ಪಾಗಿ ತಿಳಿದುಕೊಂಡಿದ್ದರು!
ಸುಮಾರು ಎರಡು ವರ್ಷಗಳ ವರೆಗೆ ಯೇಸು ಅವರ ನಡುವೆ ಇದ್ದು, ಕಲಿಸುತ್ತಾ, ಅದ್ಭುತಗಳನ್ನು ನಡಿಸುತ್ತಾ, ಸ್ವರ್ಗೀಯ ರಾಜ್ಯದ ಬಾಧ್ಯಸ್ಥರಾಗುವ ಸಾಧ್ಯತೆಯನ್ನು ಅವರಿಗೆ ನೀಡುತ್ತಾ ಇದ್ದನು. ಫಲಿತಾಂಶವೇನಾಗಿತ್ತು? ಅವರು, ಮತ್ತು ವಿಶೇಷವಾಗಿ ಅವರ ಮುಖಂಡರು, ಅಬ್ರಹಾಮನ ಸಂತತಿಯವರಾಗಿರುವುದಕ್ಕಾಗಿ ಮತ್ತು ದೇವರ ನಿಯಮಶಾಸ್ತ್ರವು ಅವರಿಗೆ ಕೊಡಲ್ಪಟ್ಟಿರುವ ವಿಷಯದಲ್ಲಿ ದುರಭಿಮಾನಿಗಳಾಗಿದ್ದರು. (ಮತ್ತಾಯ 23:2; ಯೋಹಾನ 8:31-44) ಆದರೆ ಅವರು ಒಳ್ಳೆಯ ಕುರುಬನ ಧ್ವನಿಯನ್ನು ಗುರುತಿಸಲೂ ಇಲ್ಲ, ಅದಕ್ಕೆ ಪ್ರತಿಕ್ರಿಯಿಸಲೂ ಇಲ್ಲ. ಅದು ಅವರ ಮುಂದೆ ಒಂದು ತೆರೆದ ಬಾಗಿಲಿನಂತಿತ್ತು. ಅದರ ಮೂಲಕ ಹೋಗುವದರ ಮುಖ್ಯ ಬಹುಮಾನವು, ರಾಜ್ಯದಲ್ಲಿ ಸದಸ್ಯತನ ಹೊಂದುವುದಾಗಿತ್ತು. ಆದರೆ ಅವರು ನಿರಾಕರಿಸಿದರು. ಕೇವಲ ಕೆಲವೇ ಮಂದಿ, ಮುಖ್ಯವಾಗಿ ಕೆಳವರ್ಗದವರು ಯೇಸುವಿನ ಸತ್ಯದ ಸಂದೇಶವನ್ನು ಆಲಿಸಿ, ಅದಕ್ಕೆ ಪ್ರತಿಕ್ರಿಯೆ ತೋರಿಸಿ, ಅವನೊಂದಿಗೆ ಅಂಟಿಕೊಂಡರು.—ಲೂಕ 22:28-30; ಯೋಹಾನ 7:47-49.
ಸಾ.ಶ. 33ರ ಪಂಚಾಶತ್ತಮದ ದಿನದಂದು, ಈ ಕೊನೆಯವರೇ, ಆತ್ಮದಿಂದ ಅಭಿಷಿಕ್ತರಾಗಲು ಅರ್ಹರಾಗಿದ್ದರು. (ಅ. ಕೃತ್ಯಗಳು 2:1-38) ಅವರು, ಯೇಸು ತಿಳಿಸಿದಂತಹ ಅಧರ್ಮಿಗಳ ನಡುವೆ ಇರಲಿಲ್ಲ. ಈ ಅಧರ್ಮಿಗಳು ತಮಗೆ ಲಭ್ಯಗೊಳಿಸಲ್ಪಟ್ಟಿರುವ ಅವಕಾಶವನ್ನು ಉಪಯೋಗಿಸಲು ತಪ್ಪಿಹೋಗಿರುವ ಕಾರಣದಿಂದ, ಗೋಳಾಡುವರು ಮತ್ತು ತಮ್ಮ ಹಲ್ಲುಗಳನ್ನು ಕಟಕಟಿಸುವರು.—ಲೂಕ 13:27, 28.
ಫಲಿತಾಂಶವಾಗಿ, ಪ್ರಥಮ ಶತಮಾನದಲ್ಲಿ “ಬಹುಜನ”ರು, ಸಾಮಾನ್ಯ ಯೆಹೂದ್ಯರಾಗಿದ್ದರು ಮತ್ತು ವಿಶೇಷವಾಗಿ ಧಾರ್ಮಿಕ ಮುಖಂಡರಾಗಿದ್ದರು. ಇವರು ದೇವರ ಅನುಗ್ರಹವನ್ನು ಬಯಸುತ್ತೇವೆಂದು ಹೇಳಿಕೊಂಡರು. ಆದರೆ ಅದನ್ನು ದೇವರಿಗನುಸಾರವಲ್ಲ, ಬದಲಾಗಿ ತಮ್ಮ ಸ್ವಂತ ಮಟ್ಟಗಳು ಮತ್ತು ಮಾರ್ಗಗಳಿಗನುಸಾರ ಪಡೆದುಕೊಳ್ಳಲು ಬಯಸಿದರು. ವ್ಯತಿರಿಕ್ತವಾಗಿ, ರಾಜ್ಯದ ಭಾಗವಾಗಿರಲಿಕ್ಕಾಗಿದ್ದ ಪ್ರಾಮಾಣಿಕ ಆಸಕ್ತಿಯಿಂದಾಗಿ ಪ್ರತಿಕ್ರಿಯೆ ತೋರಿಸಿದಂತಹ, ಸಂಬಂಧಿತವಾಗಿ “ಸ್ವಲ್ಪಜನರು,” ಕ್ರೈಸ್ತ ಸಭೆಯ ಅಭಿಷಿಕ್ತ ಸದಸ್ಯರಾಗಿ ಪರಿಣಮಿಸಿದರು.
ಈಗ ನಮ್ಮ ದಿನದಲ್ಲಿ ನಡೆಯುವ ಹೆಚ್ಚು ವಿಸ್ತೃತವಾದ ಅನ್ವಯವನ್ನು ಪರಿಗಣಿಸಿರಿ. ಕ್ರೈಸ್ತಪ್ರಪಂಚದ ಚರ್ಚುಗಳಿಗೆ ಹಾಜರಾಗುವ ಅಸಂಖ್ಯಾತ ವ್ಯಕ್ತಿಗಳಿಗೆ, ತಾವು ಸ್ವರ್ಗಕ್ಕೆ ಹೋಗುವೆವೆಂದು ಕಲಿಸಲಾಗಿದೆ. ಈ ಬಯಕೆಯಾದರೋ, ಶಾಸ್ತ್ರಗಳ ನಿಷ್ಕೃಷ್ಟ ಬೋಧನೆಗಳ ಮೇಲೆ ಆಧಾರಿಸಲ್ಪಟ್ಟಿಲ್ಲ. ಈ ಹಿಂದಿನ ಯೆಹೂದ್ಯರಂತೆ, ಇವರಿಗೆ ತಮ್ಮ ಸ್ವಂತ ಷರತ್ತುಗಳ ಮೇರೆಗೆ ದೇವರ ಅನುಗ್ರಹ ಬೇಕಾಗಿದೆ.
ಆದರೆ ನಮ್ಮ ಸಮಯದಲ್ಲಿ, ರಾಜ್ಯ ಸಂದೇಶಕ್ಕೆ ನಮ್ರತೆಯಿಂದ ಪ್ರತಿಕ್ರಿಯಿಸಿ, ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು, ಆತನ ಅನುಗ್ರಹಕ್ಕೆ ಯೋಗ್ಯರಾಗುವವರು ಸಂಬಂಧಿತವಾಗಿ ಸ್ವಲ್ಪವೇ ಜನರು. ಇದು ಅವರು “ರಾಜ್ಯದ ಪುತ್ರರು” (NW) ಆಗುವಂತೆ ನಡಿಸಿದೆ. (ಮತ್ತಾಯ 13:38) ಸಾ.ಶ. 33ರ ಪಂಚಾಶತ್ತಮದಂದು, ಇಂತಹ ಅಭಿಷಿಕ್ತ “ಪುತ್ರ”ರನ್ನು ಆಮಂತ್ರಿಸಲು ಆರಂಭಿಸಲಾಯಿತು. ತನ್ನ ಜನರೊಂದಿಗೆ ದೇವರು ವ್ಯವಹರಿಸುತ್ತಿರುವ ಸಾಕ್ಷ್ಯವು, ಮೂಲಭೂತವಾಗಿ ಸ್ವರ್ಗೀಯ ವರ್ಗದ ಸದಸ್ಯರನ್ನು ಕರೆಯಲಾಗಿದೆಯೆಂಬುದನ್ನು ಸೂಚಿಸುತ್ತದೆಂದು, ಯೆಹೋವನ ಸಾಕ್ಷಿಗಳು ಬಹು ಸಮಯದಿಂದ ನಂಬಿದ್ದಾರೆ. ಹೀಗಿರುವುದರಿಂದ, ಇತ್ತೀಚಿನ ವರ್ಷಗಳಲ್ಲಿ ಬೈಬಲ್ ಸತ್ಯವನ್ನು ಕಲಿತುಕೊಂಡಿರುವವರು, ಭೂಪ್ರಮೋದವನದಲ್ಲಿ ನಿತ್ಯಜೀವದ ನಿರೀಕ್ಷೆಯು ಈಗ ನೀಡಲ್ಪಡುತ್ತಿದೆಯೆಂಬುದನ್ನು ಅರಿತುಕೊಂಡಿದ್ದಾರೆ. ಇವರು, ವಾಸ್ತವದಲ್ಲಿ ಸ್ವರ್ಗಕ್ಕೆ ಹೋಗುವ ಪ್ರತೀಕ್ಷೆಯುಳ್ಳ, ಕಡಿಮೆಯಾಗುತ್ತಿರುವ ಅಭಿಷಿಕ್ತ ಕ್ರೈಸ್ತರ ಉಳಿಕೆಯವರಿಗಿಂತ ಹೆಚ್ಚಾಗಿ ಪರಿಣಮಿಸಿದ್ದಾರೆ. ಸ್ವರ್ಗಕ್ಕೆ ಹೋಗಲು ನಿರೀಕ್ಷೆಯಿಲ್ಲದವರಿಗೆ ಲೂಕ 13:24 ಪ್ರಮುಖವಾಗಿ ಅನ್ವಯವಾಗುವುದಿಲ್ಲವಾದರೂ, ಅವರಿಗಾಗಿ ಅದರಲ್ಲಿ ನಿಶ್ಚಯವಾಗಿಯೂ ವಿವೇಕಯುತವಾದ ಬುದ್ಧಿವಾದವಿದೆ.
ನಾವು ನಮ್ಮನ್ನು ಹುರುಪಿನಿಂದ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಮೂಲಕ, ನಮ್ಮನ್ನು ತಡೆಗಟ್ಟಲಿಕ್ಕಾಗಿ, ತಾನು ಅಥವಾ ತನ್ನ ತಂದೆಯು ನಮ್ಮ ಮಾರ್ಗದಲ್ಲಿ ತಡೆಗಳನ್ನು ಒಡ್ಡುತ್ತೇವೆಂದು ಯೇಸು ಹೇಳುತ್ತಿರಲಿಲ್ಲ. ಆದರೆ ದೇವರ ಆವಶ್ಯಕತೆಗಳು ಅನರ್ಹ ವ್ಯಕ್ತಿಗಳನ್ನು ಹೊರಗಿಡುವಂತಹ ರೀತಿಯದ್ದಾಗಿವೆಯೆಂದು ಲೂಕ 13:24ರಿಂದ ನಮಗೆ ತಿಳಿದುಬರುತ್ತದೆ. “ಕಷ್ಟಪಟ್ಟು ಹೆಣಗಾಡಿರಿ” ಎಂಬುದು ಪ್ರಯಾಸಪಡುವುದನ್ನು, ನಮ್ಮನ್ನೇ ಸಾಧ್ಯವಿರುವಷ್ಟು ಹೆಚ್ಚಾಗಿ ದುಡಿಸಿಕೊಳ್ಳುವುದನ್ನು ಅರ್ಥೈಸುತ್ತದೆ. ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಬಹುದು, ‘ನಾನು ಸ್ವತಃ ಸಾಧ್ಯವಿರುವಷ್ಟು ಹೆಚ್ಚು ದುಡಿಯುತ್ತಿದ್ದೇನೊ?’ ಲೂಕ 13:24ನ್ನು ಈ ಮಾತುಗಳಲ್ಲಿ ವಿಶದಗೊಳಿಸಬಹುದು, ‘ಇಕ್ಕಟ್ಟಾದ ಬಾಗಿಲಿನ ಮೂಲಕ ಒಳಗೆ ಹೋಗಲು ನಾನು ಕಷ್ಟಪಟ್ಟು ಹೆಣಗಾಡಬೇಕು, ಯಾಕಂದರೆ ಅನೇಕರು ಒಳಹೋಗಲು ಪ್ರಯತ್ನಿಸುತ್ತಾರಾದರೂ ಶಕ್ತರಾಗಿರುವುದಿಲ್ಲ. ಆದುದರಿಂದ ನಾನು ನಿಜವಾಗಿಯೂ ಕಷ್ಟಪಟ್ಟು ಹೆಣಗಾಡುತ್ತಿದ್ದೇನೊ? ಬಹುಮಾನವನ್ನು ಗಿಟ್ಟಿಸಿಕೊಳ್ಳಲಿಕ್ಕಾಗಿ ತನ್ನಿಂದ ಸಾಧ್ಯವಿರುವುದೆಲ್ಲವನ್ನು ಮಾಡುವ ಪುರಾತನ ಕಾಲದ ಕ್ರೀಡಾಂಗಣದಲ್ಲಿನ ಒಬ್ಬ ಕ್ರೀಡಾಪಟುವಿನಂತೆ ನಾನಿದ್ದೇನೊ? ಅಂತಹ ಯಾವುದೇ ಕ್ರೀಡಾಪಟು ಅರೆಮನಸ್ಸಿನವನಾಗಿರುವುದಿಲ್ಲ ಮತ್ತು ಆರಾಮದಿಂದಿರುವುದಿಲ್ಲ. ನಾನು ಹಾಗೆ ಇದ್ದೇನೊ?’
ಕೆಲವರು ತಮ್ಮ ಸ್ವಂತ ಅನುಕೂಲತೆಗನುಸಾರ, ತಮಗೆ ಇಷ್ಟವಾಗುವ ಆರಾಮದ ಗತಿಯಲ್ಲಿ ‘ಆ ಬಾಗಲಿನಿಂದ ಹೋಗಲು’ ಪ್ರಯತ್ನಿಸುವರೆಂದು ಯೇಸುವಿನ ಮಾತುಗಳು ಸೂಚಿಸುತ್ತವೆ. ಅಂತಹ ಮನೋಭಾವವು ವ್ಯಕ್ತಿಗತ ಸಾಕ್ಷಿಗಳನ್ನು ಬಾಧಿಸಬಲ್ಲದು. ಕೆಲವರು ಹೀಗೆ ತರ್ಕಿಸಬಹುದು: ‘ಹಲವಾರು ವರ್ಷಗಳ ವರೆಗೆ ತಮ್ಮನ್ನು ವಿನಿಯೋಗಿಸಿಕೊಂಡು, ಅನೇಕ ತ್ಯಾಗಗಳನ್ನು ಮಾಡಿರುವ ಸಮರ್ಪಿತ ಕ್ರೈಸ್ತರ ಪರಿಚಯ ನನಗಿದೆ; ಆದರೆ, ಅವರು ಸಾಯುವ ವರೆಗೂ ಈ ದುಷ್ಟ ವ್ಯವಸ್ಥೆಯ ಅಂತ್ಯವು ಇನ್ನೂ ಬಂದಿರಲಿಲ್ಲ. ಆದುದರಿಂದ, ನಾನು ಹೆಚ್ಚು ಸಾಧಾರಣವಾದ ಜೀವನವನ್ನು ನಡೆಸುತ್ತಾ ಸ್ವಲ್ಪ ನಿಧಾನಿಸಿಕೊಳ್ಳುವುದು ಉತ್ತಮ.’
ಹಾಗೆ ಯೋಚಿಸುವುದು ಸುಲಭವಾಗಿರುವುದಾದರೂ, ಅದು ನಿಜವಾಗಿಯೂ ವಿವೇಕಯುತವೊ? ಉದಾಹರಣೆಗಾಗಿ, ಅಪೊಸ್ತಲರು ಆ ರೀತಿಯಲ್ಲಿ ಯೋಚಿಸಿದರೊ? ಖಂಡಿತವಾಗಿಯೂ ಇಲ್ಲ. ತಮ್ಮ ಮರಣದ ವರೆಗೂ ಅವರು ಸತ್ಯಾರಾಧನೆಗಾಗಿ ತಮ್ಮ ಸರ್ವಸ್ವವನ್ನೂ ಕೊಟ್ಟರು. ದೃಷ್ಟಾಂತಕ್ಕಾಗಿ ಪೌಲನು ಹೀಗೆ ಹೇಳಸಾಧ್ಯವಿತ್ತು: “[ಕ್ರಿಸ್ತನನ್ನು] ಪ್ರಸಿದ್ಧಿಪಡಿಸುವವರಾಗಿ . . . ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲವನ್ನು ಪ್ರಯೋಗಮಾಡಿ ಇದಕ್ಕೋಸ್ಕರವೇ ಹೋರಾಡುತ್ತೇನೆ. ಪ್ರಯಾಸಪಡುತ್ತೇನೆ.” ತದನಂತರ ಅವನು ಬರೆದುದು: “ಇದಕ್ಕಾಗಿ ನಾವು ಕಷ್ಟಪಡುತ್ತೇವೆ, ಹೋರಾಡುತ್ತೇವೆ, ಯಾಕಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ.”—ಕೊಲೊಸ್ಸೆ 1:28, 29; 1 ತಿಮೊಥೆಯ 4:10.
ಕಷ್ಟಪಟ್ಟು ಹೆಣಗಾಡುವ ಮೂಲಕ ಪೌಲನು ಸರಿಯಾದ ಸಂಗತಿಯನ್ನೇ ಮಾಡಿದನೆಂಬುದು ನಮಗೆ ತಿಳಿದಿದೆ. ಪೌಲನು ಹೇಳಿದಂತೆಯೇ ನಾವು ಹೇಳಲು ಶಕ್ತರಾಗುವಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಎಷ್ಟು ಸಂತೃಪ್ತರಾಗಿರುವೆವು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.” (2 ತಿಮೊಥೆಯ 4:7) ಆದುದರಿಂದ ಲೂಕ 13:24ರ ಮಾತುಗಳಿಗೆ ಹೊಂದಿಕೆಯಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳಸಾಧ್ಯವಿದೆ, ‘ಶ್ರದ್ಧೆ ಮತ್ತು ಪರಿಶ್ರಮದೊಂದಿಗೆ ನಾನು ಕೆಲಸಮಾಡುತ್ತಿದ್ದೇನೊ? “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗುವದಕ್ಕೆ ಕಷ್ಟಪಟ್ಟು ಹೆಣಗಾಡಿರಿ” ಎಂಬ ಯೇಸುವಿನ ಬುದ್ಧಿವಾದಕ್ಕೆ ನಾನು ಲಕ್ಷ್ಯಕೊಡುತ್ತಿದ್ದೇನೆಂಬುದಕ್ಕೆ ಸಾಕಷ್ಟು, ನಿರಂತರ ಪ್ರಮಾಣವನ್ನು ನಾನು ಕೊಡುತ್ತಿದ್ದೇನೊ?’