ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 4/15 ಪು. 20-23
  • ಬಾರ್ನಬ—“ಸಾಂತ್ವನದ ಪುತ್ರ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಾರ್ನಬ—“ಸಾಂತ್ವನದ ಪುತ್ರ”
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಉದಾರಭಾವದ ಒಬ್ಬ ಸಹಾಯಕನು
  • ಅಂತಿಯೋಕ್ಯದಲ್ಲಿ
  • ಒಂದು ವಿಶೇಷ ಮಿಷನೆರಿ ನೇಮಕ
  • ಸುನ್ನತಿಯ ವಿವಾದಾಂಶ
  • “ತೀಕ್ಷ್ಣ ವಾಗ್ವಾದ”
  • ‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ‘ಯೆಹೋವನಿಂದ ಶಕ್ತಿ ಪಡ್ಕೊಂಡು ಧೈರ್ಯವಾಗಿ ಮಾತಾಡಿದ್ರು’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ಯೆಹೋವನ ಜನರು ನಂಬಿಕೆಯಲ್ಲಿ ದೃಢಗೊಳಿಸಲ್ಪಟ್ಟರು
    ಕಾವಲಿನಬುರುಜು—1991
  • ಕ್ರೈಸ್ತ ಮಿಷನೆರಿ ಕೆಲಸದ ಒಂದು ಪ್ರೇರಿತ ಮಾದರಿ
    ಕಾವಲಿನಬುರುಜು—1992
ಇನ್ನಷ್ಟು
ಕಾವಲಿನಬುರುಜು—1998
w98 4/15 ಪು. 20-23

ಬಾರ್ನಬ—“ಸಾಂತ್ವನದ ಪುತ್ರ”

ಒಬ್ಬ ಸ್ನೇಹಿತನಿಂದ ನೀವು ಕೊನೆಯ ಬಾರಿ ಸಾಂತ್ವನವನ್ನು ಪಡೆದುಕೊಂಡದ್ದು ಯಾವಾಗ? ಕೊನೆಯ ಬಾರಿ ನೀವು ಯಾರಿಗಾದರೂ ಸಾಂತ್ವನವನ್ನು ನೀಡಿದ್ದನ್ನು ನೀವು ನೆನಪಿಸಿಕೊಳ್ಳಬಲ್ಲಿರೊ? ಆಗಿಂದಾಗ್ಗೆ, ನಮಗೆಲ್ಲರಿಗೆ ಉತ್ತೇಜನದ ಅಗತ್ಯವಿದೆ, ಮತ್ತು ಅದನ್ನು ಪ್ರೀತಿಪರವಾಗಿ ನೀಡುವವರನ್ನು ನಾವೆಷ್ಟು ಗಣ್ಯಮಾಡುತ್ತೇವೆ! ಸಾಂತ್ವನ ನೀಡುವುದು, ಕಿವಿಗೊಡಲು ಸಮಯ ತೆಗೆದುಕೊಳ್ಳುವುದು, ಅರ್ಥಮಾಡಿಕೊಳ್ಳುವುದು ಮತ್ತು ಸಹಾಯಮಾಡುವುದನ್ನು ಅರ್ಥೈಸುತ್ತದೆ. ನೀವದನ್ನು ಮಾಡಲು ಸಿದ್ಧರಿದ್ದೀರೊ?

ಒಂದು ಆದರ್ಶಪ್ರಾಯ ವಿಧದಲ್ಲಿ ಅಂತಹ ಸಿದ್ಧಮನಸ್ಸನ್ನು ಪ್ರದರ್ಶಿಸಿದಂತಹ ಒಬ್ಬ ವ್ಯಕ್ತಿ ಬಾರ್ನಬನಾಗಿದ್ದನು. ಅವನು “ಒಳ್ಳೆಯವನೂ ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ ಆಗಿದ್ದನು.” (ಅ. ಕೃತ್ಯಗಳು 11:24) ಬಾರ್ನಬನ ಕುರಿತಾಗಿ ಏಕೆ ಹಾಗೆ ಹೇಳಸಾಧ್ಯವಿತ್ತು? ಈ ವರ್ಣನೆಗೆ ಅರ್ಹನಾಗಲು ಅವನು ಏನು ಮಾಡಿದ್ದನು?

ಉದಾರಭಾವದ ಒಬ್ಬ ಸಹಾಯಕನು

ಅವನ ನಿಜವಾದ ಹೆಸರು ಯೋಸೇಫ ಎಂದಾಗಿತ್ತು. ಆದರೆ ಅಪೊಸ್ತಲರು, ಅವನ ಸ್ವಭಾವವನ್ನು ತಕ್ಕದ್ದಾಗಿ ವರ್ಣಿಸಿದಂತಹ ಒಂದು ವರ್ಣನಾತ್ಮಕ ಅಡ್ಡಹೆಸರನ್ನು—ಬಾರ್ನಬ, “ಸಾಂತ್ವನದ ಪುತ್ರ” (NW) ಎಂಬ ಅರ್ಥವುಳ್ಳದ್ದು—ಕೊಟ್ಟರು.a (ಅ. ಕೃತ್ಯಗಳು 4:36) ಕ್ರೈಸ್ತ ಸಭೆಯು ಇತ್ತೀಚಿಗಷ್ಟೇ ರಚಿಸಲ್ಪಟ್ಟಿತ್ತು. ಬಾರ್ನಬನು ಈ ಮುಂಚೆ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನೆಂದು ಕೆಲವರು ಊಹಿಸುತ್ತಾರೆ. (ಲೂಕ 10:1, 2) ಅದು ನಿಜವಾಗಿರಲಿ ಇಲ್ಲದಿರಲಿ, ಈ ಮನುಷ್ಯನು ಒಂದು ಉತ್ತಮ ರೀತಿಯಲ್ಲಿ ವರ್ತಿಸಿದ್ದನು.

ಸಾ.ಶ. 33ರ ಪಂಚಾಶತ್ತಮದ ನಂತರ ಸ್ವಲ್ಪ ಸಮಯದಲ್ಲೇ, ಕುಪ್ರದಿಂದ ಬಂದಿದ್ದ ಒಬ್ಬ ಲೇವ್ಯನಾದ ಬಾರ್ನಬನು, ಸ್ವಂತ ಇಚ್ಛೆಯಿಂದ ಸ್ವಲ್ಪ ಜಮೀನನ್ನು ಮಾರಿ, ಹಣವನ್ನು ಅಪೊಸ್ತಲರಿಗೆ ಕೊಟ್ಟನು. ಅವನದನ್ನು ಏಕೆ ಮಾಡಿದನು? ಆ ಸಮಯದಲ್ಲಿ ಯೆರೂಸಲೇಮಿನಲ್ಲಿದ್ದ ಕ್ರೈಸ್ತರ ನಡುವೆ, “ಪ್ರತಿಯೊಬ್ಬನಿಗೆ ಅವನವನ ಅವಶ್ಯದಂತೆ ಹಂಚಿಕೊಡುತ್ತಿದ್ದರು” ಎಂದು ಅಪೊಸ್ತಲ ಕೃತ್ಯಗಳು ಪುಸ್ತಕದಲ್ಲಿನ ವೃತ್ತಾಂತವು ನಮಗೆ ತಿಳಿಸುತ್ತದೆ. ಅಗತ್ಯವಿರುವುದನ್ನು ಬಾರ್ನಬನು ನೋಡಿದನೆಂಬುದು ಸುವ್ಯಕ್ತ, ಮತ್ತು ಅದರ ಕುರಿತಾಗಿ ಅವನು ಹೃದಯೋಲ್ಲಾಸದಿಂದ ಕಾರ್ಯವೆಸಗಿದನು. (ಅ. ಕೃತ್ಯಗಳು 4:34-37) ಅವನು ಧನಿಕನಾಗಿದ್ದಿರಬಹುದಾದರೂ, ರಾಜ್ಯಾಭಿರುಚಿಗಳ ಏಳಿಗೆಗಾಗಿ ತನ್ನ ಭೌತಿಕ ಸ್ವತ್ತುಗಳನ್ನು ಅಥವಾ ತನ್ನನ್ನು ನೀಡಿಕೊಳ್ಳಲು ಅವನು ಹಿಂಜರಿಯಲಿಲ್ಲ.b “ಉತ್ತೇಜನದ ಅಗತ್ಯವಿರುವ ಜನರನ್ನು ಅಥವಾ ಪರಿಸ್ಥಿತಿಗಳನ್ನು ಬಾರ್ನಬನು ಕಂಡುಕೊಂಡಲ್ಲೆಲ್ಲಾ, ಅವನು ಕೊಡಲು ಸಮರ್ಥನಾಗಿದ್ದ ಎಲ್ಲ ಉತ್ತೇಜನವನ್ನು ಕೊಟ್ಟನು,” ಎಂದು ವಿದ್ವಾಂಸರಾದ ಎಫ್‌. ಎಫ್‌. ಬ್ರೂಸ್‌ ಗಮನಿಸುತ್ತಾರೆ. ಅವನು ತೋರಿಬರುವ ಎರಡನೆಯ ಘಟನಾವಳಿಯಿಂದ ಇದು ಸುಸ್ಪಷ್ಟವಾಗುತ್ತದೆ.

ಸಾ.ಶ. 36ರಷ್ಟಕ್ಕೆ, ತಾರ್ಸದ ಸೌಲನು (ಭಾವೀ ಅಪೊಸ್ತಲ ಪೌಲನು) ಒಬ್ಬ ಕ್ರೈಸ್ತನಾಗಿದ್ದು, ಯೆರೂಸಲೇಮಿನ ಸಭೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನು. ಆದರೆ “ಎಲ್ಲರು ಅವನನ್ನು ಶಿಷ್ಯನೆಂದು ನಂಬದೆ ಅವನಿಗೆ ಭಯಪಟ್ಟರು.” ತನ್ನ ಪರಿವರ್ತನೆಯು ನೈಜವಾಗಿತ್ತು ಮತ್ತು ಸಭೆಯನ್ನು ಇನ್ನೂ ಹೆಚ್ಚು ಧ್ವಂಸಗೊಳಿಸಲಿಕ್ಕಾಗಿ ಒಂದು ಯುಕ್ತಿಯಾಗಿರಲಿಲ್ಲವೆಂದು ಅವನು ಸಭೆಗೆ ಹೇಗೆ ಮನಗಾಣಿಸಸಾಧ್ಯವಿತ್ತು? “ಬಾರ್ನಬನು ಅವನನ್ನು ಕೈಹಿಡಿದು ಅಪೊಸ್ತಲರ ಬಳಿಗೆ ಕರೆದುಕೊಂಡು”ಹೋದನು.—ಅ. ಕೃತ್ಯಗಳು 9:26, 27; ಗಲಾತ್ಯ 1:13, 18, 19.

ಬಾರ್ನಬನು ಸೌಲನನ್ನು ನಂಬಿದ್ದೇಕೆಂಬುದು ತಿಳಿಸಲ್ಪಟ್ಟಿಲ್ಲ. ಏನೇ ಆಗಿರಲಿ, “ಸಾಂತ್ವನದ ಪುತ್ರ”ನು ಸೌಲನಿಗೆ ಕಿವಿಗೊಟ್ಟು, ಆಶಾಹೀನವಾಗಿ ತೋರುತ್ತಿದ್ದಂತಹ ಪರಿಸ್ಥಿತಿಯಿಂದ ಹೊರಬರಲು ಅವನಿಗೆ ಸಹಾಯಮಾಡುವ ಮೂಲಕ ತನ್ನ ಅಡ್ಡಹೆಸರಿಗೆ ತಕ್ಕಂತೆ ನಡೆದುಕೊಂಡನು. ಸೌಲನು ಅನಂತರ ತನ್ನ ನೆಲಸುನಾಡಾದ ತಾರ್ಸಕ್ಕೆ ಹಿಂದಿರುಗಿದರೂ, ಆ ಇಬ್ಬರು ಪುರುಷರ ನಡುವೆ ಒಂದು ಸ್ನೇಹವು ಏರ್ಪಟ್ಟಿತ್ತು. ಮುಂದಿನ ವರ್ಷಗಳಲ್ಲಿ, ಅದು ಪ್ರಾಮುಖ್ಯ ಪರಿಣಾಮಗಳನ್ನು ಪಡೆಯಲಿತ್ತು.—ಅ. ಕೃತ್ಯಗಳು 9:30.

ಅಂತಿಯೋಕ್ಯದಲ್ಲಿ

ಸಾ.ಶ. 45ರಷ್ಟಕ್ಕೆ, ಸಿರಿಯದ ಅಂತಿಯೋಕ್ಯದಲ್ಲಿನ ಅಸಾಮಾನ್ಯ ವಿಕಸನಗಳ ಕುರಿತಾದ ವಾರ್ತೆಯು ಯೆರೂಸಲೇಮನ್ನು ತಲಪಿತು—ಆ ನಗರದ ಗ್ರೀಕ್‌ ಭಾಷೆಯನ್ನಾಡುವ ಅನೇಕ ನಿವಾಸಿಗಳು, ವಿಶ್ವಾಸಿಗಳಾಗುತ್ತಿದ್ದರು. ವಿಚಾರಣೆ ನಡೆಸಲು ಮತ್ತು ಅಲ್ಲಿನ ಕೆಲಸವನ್ನು ಸಂಘಟಿಸಲು ಸಭೆಯು ಬಾರ್ನಬನನ್ನು ಕಳುಹಿಸಿತು. ಅವರು ಇದಕ್ಕಿಂತ ಹೆಚ್ಚು ವಿವೇಕಯುತವಾದ ಒಂದು ಆಯ್ಕೆಯನ್ನು ಮಾಡಸಾಧ್ಯವಿರಲಿಲ್ಲ. ಲೂಕನು ತಿಳಿಸುವುದು: “ಅವನು ಒಳ್ಳೆಯವನೂ ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ ಆಗಿದ್ದನು. ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು—ನೀವು ದೃಢಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರ್ರಿ ಎಂದು ಅವರೆಲ್ಲರಿಗೆ ಬುದ್ಧಿಹೇಳಿದನು. ಆಗ ಬಹುಮಂದಿ ಕರ್ತನಿಗೆ ಸೇರಿಕೊಂಡರು.”—ಅ. ಕೃತ್ಯಗಳು 11:22-25.

ಅವನು ಅಷ್ಟನ್ನು ಮಾತ್ರ ಮಾಡಲಿಲ್ಲ. ವಿದ್ವಾಂಸ ಜೂಸೆಪೇ ರೀಕಾಟೀಯವರಿಗನುಸಾರ, “ಬಾರ್ನಬನು ವ್ಯಾವಹಾರಿಕ ಜ್ಞಾನವುಳ್ಳ ಮನುಷ್ಯನಾಗಿದ್ದನು, ಮತ್ತು ಇಂತಹ ಒಂದು ಆಶಾಜನಕ ಅಭಿವೃದ್ಧಿಯನ್ನು ಒಂದು ಹೇರಳವಾದ ಕೊಯ್ಲು ಹಿಂಬಾಲಿಸುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಸಂಪೂರ್ಣವಾದ ಏರ್ಪಾಡುಗಳನ್ನು ಮಾಡಿ, ಕ್ರಿಯೆಗೈಯುವ ಅಗತ್ಯವನ್ನು ಅವನು ತತ್‌ಕ್ಷಣ ಮನಗಂಡನು.” ಕುಪ್ರದಿಂದ ಬಂದವನಾಗಿರಲಾಗಿ, ಅನ್ಯಜನಾಂಗದವರೊಂದಿಗೆ ವ್ಯವಹರಿಸುವುದು ಬಾರ್ನಬನಿಗೆ ಬಹುಶಃ ರೂಢಿಯಾಗಿತ್ತು. ತಾನು ವಿಧರ್ಮಿಗಳಿಗೆ ಸಾರಲಿಕ್ಕಾಗಿ ಅರ್ಹನಾಗಿದ್ದೇನೆಂದು ಅವನಿಗೆ ಅನಿಸಿದ್ದಿರಬಹುದು. ಆದರೆ ಈ ರೋಮಾಂಚಕರ ಮತ್ತು ಉತ್ತೇಜನದಾಯಕವಾದ ಚಟುವಟಿಕೆಯಲ್ಲಿ ಇತರರನ್ನು ಒಳಗೂಡಿಸಲು ಅವನು ಸಿದ್ಧನಾಗಿದ್ದನು.

ಬಾರ್ನಬನು ಸೌಲನ ಕುರಿತಾಗಿ ಯೋಚಿಸಿದನು. ಆ ಮಾಜಿ ಹಿಂಸಕನು ‘ಅನ್ಯಜನರಿಗೆ ಯೇಸುವಿನ ಹೆಸರನ್ನು ತಿಳಿಸುವದಕ್ಕಾಗಿ ಆರಿಸಿಕೊಳ್ಳಲ್ಪಟ್ಟಿದ್ದ ಸಾಧನ’ವಾಗಿದ್ದನೆಂಬುದಾಗಿ, ಸೌಲನ ಮತಾಂತರದ ಸಮಯದಲ್ಲಿ ಅನನೀಯನಿಗೆ ಕೊಡಲ್ಪಟ್ಟ ಪ್ರವಾದನಾತ್ಮಕ ಪ್ರಕಟನೆಯ ಕುರಿತಾಗಿ ಬಾರ್ನಬನಿಗೆ ತಿಳಿದಿತ್ತೆಂಬುದು ತೀರ ಸಂಭವನೀಯ. (ಅ. ಕೃತ್ಯಗಳು 9:15) ಆದುದರಿಂದ ಬಾರ್ನಬನು ಸೌಲನನ್ನು ಹುಡುಕಲಿಕ್ಕಾಗಿ ತಾರ್ಸಕ್ಕೆ ಹೊರಟನು. ಅಲ್ಲಿಗೆ ಹೋಗುವ ಪ್ರಯಾಣವು ಸುಮಾರು 200 ಕಿಲೊಮೀಟರುಗಳಷ್ಟು ದೂರದ್ದಾಗಿತ್ತು. ಅವರಿಬ್ಬರೂ ಒಂದು ಇಡೀ ವರ್ಷ ಜೊತೆಯಾಗಿ ಸಹಭಾಗಿಗಳಂತೆ ಕೆಲಸಮಾಡಿದರು. ಮತ್ತು ಇದೇ ಅವಧಿಯಲ್ಲಿ, “ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.”—ಅ. ಕೃತ್ಯಗಳು 11:25, 26.

ಕ್ಲಾಡಿಯನ ಆಳ್ವಿಕೆಯ ಸಮಯದಲ್ಲಿ, ರೋಮನ್‌ ಸಾಮ್ರಾಜ್ಯದ ವಿಭಿನ್ನ ಭಾಗಗಳಲ್ಲಿ ಕಠಿನವಾದ ಬರಗಾಲವು ಬಂತು. ಯೆಹೂದಿ ಇತಿಹಾಸಕಾರ ಜೋಸೀಫಸನಿಗನುಸಾರ, ಯೆರೂಸಲೇಮಿನಲ್ಲಿ “ಅನೇಕ ಜನರು ಆಹಾರವನ್ನು ಪಡೆಯಲಿಕ್ಕಾಗಿ ಅಗತ್ಯವಿದ್ದಂತಹ ವಿಷಯಗಳ ಕೊರತೆಯಿಂದಾಗಿ ಸತ್ತರು.” ಹೀಗಿರುವುದರಿಂದ ಅಂತಿಯೋಕ್ಯದಲ್ಲಿದ್ದ ಶಿಷ್ಯರು, “ಪ್ರತಿಯೊಬ್ಬರು ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯನುಸಾರ ದ್ರವ್ಯ ಸಹಾಯ ಮಾಡಬೇಕೆಂದು ನಿಶ್ಚಯಿಸಿಕೊಂಡರು. ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.” ಆ ನೇಮಕವನ್ನು ಪೂರ್ಣವಾಗಿ ಮುಗಿಸಿದ ನಂತರ, ಅವರಿಬ್ಬರು ಅಂತಿಯೋಕ್ಯಕ್ಕೆ ಮಾರ್ಕನೆನಿಸಿಕೊಳ್ಳುವ ಯೋಹಾನನೊಂದಿಗೆ ಹಿಂದಿರುಗಿದರು. ಅಲ್ಲಿ ಅವರನ್ನು ಆ ಸಭೆಯ ಪ್ರವಾದಿಗಳು ಮತ್ತು ಬೋಧಕರ ಭಾಗವಾಗಿ ಎಣಿಸಲಾಯಿತು.—ಅ. ಕೃತ್ಯಗಳು 11:29, 30; 12:25; 13:1.

ಒಂದು ವಿಶೇಷ ಮಿಷನೆರಿ ನೇಮಕ

ಅನಂತರ ಒಂದು ಅಸಾಮಾನ್ಯವಾದ ಘಟನೆಯು ನಡೆಯಿತು. “ಇವರು ಕರ್ತನನ್ನು [“ಯೆಹೋವನನ್ನು,” NW] ಸೇವಿಸುತ್ತಾ ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮನು—ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು.” ಸ್ವಲ್ಪ ಯೋಚಿಸಿರಿ! ಅವರಿಬ್ಬರಿಗೆ ಒಂದು ವಿಶೇಷ ನೇಮಕವು ಕೊಡಲ್ಪಡಬೇಕೆಂದು ಯೆಹೋವನ ಆತ್ಮವು ಆಜ್ಞಾಪಿಸಿತು. “ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಿಕೊಂಡವರಾಗಿ ಸೆಲ್ಯೂಕ್ಯಕ್ಕೆ ಬಂದರು; ಅಲ್ಲಿಂದ ಸಮುದ್ರ ಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು.” ಬಾರ್ನಬನನ್ನು ಸಹ ಯೋಗ್ಯವಾಗಿ ಒಬ್ಬ ಅಪೊಸ್ತಲನು, ಅಥವಾ ಕಳುಹಿಸಲ್ಪಟ್ಟವನೆಂದು ಕರೆಯಸಾಧ್ಯವಿತ್ತು.—ಅ. ಕೃತ್ಯಗಳು 13:2, 4; 14:14.

ಕುಪ್ರದಾದ್ಯಂತ ಪ್ರಯಾಣಿಸಿದ ಬಳಿಕ ಮತ್ತು ಆ ದ್ವೀಪದ ರೋಮನ್‌ ಪ್ರಾಂತೀಯ ಅಧಿಪತಿಯಾದ ಸೆರ್ಗ್ಯಪೌಲನನ್ನು ಮತಾಂತರಿಸಿದ ನಂತರ, ಅವರು ಏಷಿಯಾ ಮೈನರ್‌ನ ಪಶ್ಚಿಮ ಕರಾವಳಿಯಲ್ಲಿದ್ದ ಪೆರ್ಗಕ್ಕೆ ಮುಂದುವರಿದರು. ಅಲ್ಲಿ ಮಾರ್ಕನೆನಿಸಿಕೊಳ್ಳುವ ಯೋಹಾನನು ಹಿಂದೆ ಸರಿದು, ಯೆರೂಸಲೇಮಿಗೆ ಹಿಂದಿರುಗಿದನು. (ಅ. ಕೃತ್ಯಗಳು 13:13) ಅಷ್ಟರ ವರೆಗೆ ಬಾರ್ನಬನಿಗೆ ಮುಂದಾಳುತ್ವದ ಪಾತ್ರವಿತ್ತೆಂದು ತೋರುತ್ತದೆ. ಇದು, ಅವನು ಅವರಿಬ್ಬರಲ್ಲಿ ಹೆಚ್ಚು ಅನುಭವಸ್ಥನಾದ ಸಂಗಡಿಗನಾಗಿದ್ದದರಿಂದ ಇರಬಹುದು. ಈ ಹಂತದಿಂದ ಆರಂಭಿಸಿ, ಸೌಲನು (ಈಗ ಪೌಲನೆಂದು ಸೂಚಿಸಲ್ಪಟ್ಟಿದ್ದಾನೆ) ಮುಂದಾಳುತ್ವ ವಹಿಸುವವನಾದನು. (ಹೋಲಿಸಿ ಅ. ಕೃತ್ಯಗಳು 13:7, 13, 16; 15:2.) ಈ ವಿಕಸನದಿಂದಾಗಿ ಬಾರ್ನಬನು ನೊಂದುಕೊಂಡನೊ? ಇಲ್ಲ, ಯೆಹೋವನು ತನ್ನ ಸಂಗಡಿಗನನ್ನೂ ಒಂದು ಶಕ್ತಿಶಾಲಿಯಾದ ವಿಧದಲ್ಲಿ ಉಪಯೋಗಿಸುತ್ತಿದ್ದಾನೆಂಬುದನ್ನು ನಮ್ರಭಾವದಿಂದ ಅಂಗೀಕರಿಸಿದ ಒಬ್ಬ ಪ್ರೌಢ ಕ್ರೈಸ್ತನು ಅವನಾಗಿದ್ದನು. ಅವರ ಮೂಲಕ, ಬೇರೆ ಟೆರಿಟೊರಿಗಳು ಕೂಡ ಸುವಾರ್ತೆಯನ್ನು ಕೇಳಿಸಿಕೊಳ್ಳಬೇಕೆಂದು ಯೆಹೋವನು ಬಯಸಿದನು.

ವಾಸ್ತವದಲ್ಲಿ, ಪಿಸಿದ್ಯದಲ್ಲಿನ ಅಂತಿಯೋಕ್ಯದಿಂದ ಅವರಿಬ್ಬರೂ ಹೊರಹಾಕಲ್ಪಡುವುದಕ್ಕೆ ಮೊದಲು, ಪೌಲ ಬಾರ್ನಬರಿಂದ ಆ ಇಡೀ ಕ್ಷೇತ್ರವು ದೇವರ ವಾಕ್ಯವನ್ನು ಕೇಳಿಸಿಕೊಂಡಿತು, ಮತ್ತು ಅನೇಕರು ಆ ಸಂದೇಶವನ್ನು ಸ್ವೀಕರಿಸಿದರು. (ಅ. ಕೃತ್ಯಗಳು 13:43, 48-52) ಇಕೋನ್ಯದಲ್ಲಿ, “ಯೆಹೂದ್ಯರಲ್ಲಿಯೂ ಗ್ರೀಕರಲ್ಲಿಯೂ ಬಹುಮಂದಿ ನಂಬುವವರಾದರು.” ಇದು ಪೌಲಬಾರ್ನಬರು ಅಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾ, ‘ಯೆಹೋವನು ಅವರ ಕೈಯಿಂದ ಸೂಚಕಕಾರ್ಯಗಳೂ ಅದ್ಭುತಕಾರ್ಯಗಳೂ ಆಗುವಂತೆ ದಯಪಾಲಿಸಿ . . . ಧೈರ್ಯದಿಂದ ಮಾತಾಡು’ವಂತೆ ಅವರನ್ನು ಪ್ರಚೋದಿಸಿತು. ಅವರಿಗೆ ಕಲ್ಲೆಸೆಯುವ ಒಂದು ಹೂಟ ಹೂಡಲ್ಪಟ್ಟಿದೆಯೆಂಬುದನ್ನು ಅವರು ಕೇಳಿಸಿಕೊಂಡಾಗ, ಅವರಿಬ್ಬರೂ ವಿವೇಕಯುತವಾಗಿ ಅಲ್ಲಿಂದ ಓಡಿಹೋಗಿ, ಲುಕವೋನ್ಯ, ಲುಸ್ತ್ರ ಮತ್ತು ದೆರ್ಬೆಯಲ್ಲಿ ತಮ್ಮ ಕೆಲಸವನ್ನು ಮುಂದುವರಿಸಿದರು. ಲುಸ್ತ್ರದಲ್ಲಿ ಜೀವಾಪಾಯದ ಅನುಭವಗಳ ಎದುರಿನಲ್ಲಿ, ಬಾರ್ನಬ ಮತ್ತು ಪೌಲರು “ಶಿಷ್ಯರ ಮನಸ್ಸುಗಳನ್ನು ದೃಢಪಡಿಸಿದರು. ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕೆಂಬದಾಗಿ ಎಚ್ಚರಿಕೆಯ ಮಾತನ್ನು ಹೇಳಿ ಕ್ರಿಸ್ತನಂಬಿಕೆಯಲ್ಲಿ ಸ್ಥಿರವಾಗಿರ್ರಿ ಎಂದು ಅವರನ್ನು ಧೈರ್ಯಗೊಳಿ”ಸುತ್ತಾ ಇದ್ದರು.—ಅ. ಕೃತ್ಯಗಳು 14:1-7, 19-22.

ಈ ಇಬ್ಬರು ಕ್ರಿಯಾಶೀಲ ಪ್ರಚಾರಕರು, ತಮ್ಮನ್ನು ಯಾರೂ ಹೆದರಿಸುವಂತೆ ಬಿಡಲಿಲ್ಲ. ವ್ಯತಿರಿಕ್ತವಾಗಿ, ಅವರು ಈಗಾಗಲೇ ಎಲ್ಲಿ ತೀವ್ರ ವಿರೋಧವನ್ನು ಎದುರಿಸಿದ್ದರೊ ಅಂತಹ ಸ್ಥಳಗಳಲ್ಲಿದ್ದ ಹೊಸ ಕ್ರೈಸ್ತರ ಭಕ್ತಿವೃದ್ಧಿಮಾಡಲು ಹಿಂದಿರುಗಿ ಹೋದರು. ಆ ಹೊಸ ಸಭೆಗಳಲ್ಲಿ ಮುಂದಾಳುತ್ವವನ್ನು ವಹಿಸುತ್ತಿದ್ದ ಅರ್ಹ ಪುರುಷರಿಗೆ ಅವರು ಸಹಾಯಮಾಡುತ್ತಿದ್ದಿರಬಹುದು.

ಸುನ್ನತಿಯ ವಿವಾದಾಂಶ

ಸಾ.ಶ. 33ರ ಪಂಚಾಶತ್ತಮದ ಸುಮಾರು 16 ವರ್ಷಗಳ ಬಳಿಕ, ಸುನ್ನತಿಯ ವಿವಾದಾಂಶದ ವಿಷಯವಾದ ಒಂದು ಐತಿಹಾಸಿಕ ಘಟನಾವಳಿಯಲ್ಲಿ ಬಾರ್ನಬನು ಒಳಗೂಡಿದ್ದನು. “ಕೆಲವರು ಯೂದಾಯದಿಂದ [ಸಿರಿಯದ] ಅಂತಿಯೋಕ್ಯಕ್ಕೆ ಬಂದು—ನೀವು ಮೋಶೆಯ ಗ್ರಂಥದಲ್ಲಿ ಹೇಳಿರುವ ನೇಮದ ಪ್ರಕಾರ ಸುನ್ನತಿಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷೆಯಾಗಲಾರದು ಎಂಬದಾಗಿ ಸಹೋದರರಿಗೆ ಉಪದೇಶಮಾಡುತ್ತಿದ್ದರು.” ಇದು ಸರಿಯಲ್ಲವೆಂದು ಬಾರ್ನಬ ಮತ್ತು ಪೌಲರಿಗೆ ತಿಳಿದಿತ್ತು, ಮತ್ತು ಅವರು ಈ ವಿಷಯವನ್ನು ವಾದಿಸಿದರು. ತಮ್ಮ ಅಧಿಕಾರವನ್ನು ಪ್ರತಿಪಾದಿಸುವ ಬದಲಿಗೆ, ಇದು ಸಹೋದರರ ಇಡೀ ಬಳಗದ ಒಳಿತಿಗಾಗಿ ಇತ್ಯರ್ಥಗೊಳಿಸಲ್ಪಡಬೇಕಾದ ಒಂದು ಪ್ರಶ್ನೆಯಾಗಿತ್ತೆಂಬುದನ್ನು ಅವರು ಅರಿತುಕೊಂಡರು. ಆದುದರಿಂದ ಅವರು ಆ ಪ್ರಶ್ನೆಯನ್ನು ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಗೆ ತಿಳಿಸಿದರು. ಅಲ್ಲಿ ಅವರ ವರದಿಗಳು ವಿವಾದಾಂಶವನ್ನು ಇತ್ಯರ್ಥಗೊಳಿಸಲು ಸಹಾಯಮಾಡಿದವು. ತದನಂತರ, “ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾದ ನಮ್ಮ ಪ್ರಿಯ”ರೆಂದು ವರ್ಣಿಸಲ್ಪಟ್ಟಿರುವ ಪೌಲಬಾರ್ನಬರು, ಅಂತಿಯೋಕ್ಯದಲ್ಲಿದ್ದ ಸಹೋದರರಿಗೆ ಆ ನಿರ್ಣಯವನ್ನು ಒಯ್ಯಲು ನೇಮಿಸಲ್ಪಟ್ಟವರ ನಡುವೆ ಇದ್ದರು. ಆಡಳಿತ ಮಂಡಲಿಯಿಂದ ಬಂದ ಪತ್ರವು ಓದಲ್ಪಟ್ಟಾಗ ಮತ್ತು ಭಾಷಣಗಳು ಕೊಡಲ್ಪಟ್ಟಾಗ, ಸಭೆಯು “ಆ ಪ್ರೋತ್ಸಾಹದಿಂದಾಗಿ ಹರ್ಷ” (NW)ಗೊಂಡಿತು ಮತ್ತು “ದೃಢಪಡಿ”ಸಲ್ಪಟ್ಟಿತು.—ಅ. ಕೃತ್ಯಗಳು 15:1, 2, 4, 25-32.

“ತೀಕ್ಷ್ಣ ವಾಗ್ವಾದ”

ಅವನ ಕುರಿತಾದ ಇಷ್ಟೊಂದು ಸಕಾರಾತ್ಮಕ ವೃತ್ತಾಂತಗಳ ಬಳಿಕ, ನಾವು ಬಾರ್ನಬನ ಉದಾಹರಣೆಗೆ ತಕ್ಕಂತೆ ಎಂದೂ ಜೀವಿಸಲು ಸಾಧ್ಯವಿಲ್ಲವೆಂದು ನಮಗನಿಸಬಹುದು. ಆದರೂ, “ಸಾಂತ್ವನದ ಪುತ್ರ”ನು ನಮ್ಮಲ್ಲಿ ಉಳಿದವರಷ್ಟೇ ಅಪರಿಪೂರ್ಣನಾಗಿದ್ದನು. ಅವನು ಮತ್ತು ಪೌಲನು ಸಭೆಗಳನ್ನು ಸಂದರ್ಶಿಸಲಿಕ್ಕಾಗಿ ಎರಡನೆಯ ಮಿಷನೆರಿ ಪ್ರಯಾಣವನ್ನು ಯೋಜಿಸುತ್ತಿದ್ದಾಗ, ಒಂದು ಭಿನ್ನಾಭಿಪ್ರಾಯವು ಎದ್ದಿತು. ಬಾರ್ನಬನು ತನ್ನ ಸೋದರಸಂಬಂಧಿಯಾದ ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ತನ್ನೊಂದಿಗೆ ಕರೆದುಕೊಂಡುಹೋಗಲು ದೃಢಮನಸ್ಸುಳ್ಳವನಾಗಿದ್ದನು, ಆದರೆ ಅದು ಸರಿಯಲ್ಲವೆಂದು ಪೌಲನು ನೆನಸಿದನು, ಯಾಕಂದರೆ ಪ್ರಥಮ ಮಿಷನೆರಿ ಪ್ರಯಾಣದಲ್ಲಿ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಬಿಟ್ಟುಹೋಗಿದ್ದನು. “ಈ ವಿಷಯದಲ್ಲಿ ತೀಕ್ಷ್ಣ ವಾಗ್ವಾದವುಂಟಾಗಿ ಅವರು ಒಬ್ಬರನ್ನೊಬ್ಬರು ಅಗಲಿದರು. ಬಾರ್ನಬನು ಮಾರ್ಕನನ್ನು ಕರಕೊಂಡು ಸಮುದ್ರಮಾರ್ಗವಾಗಿ ಕುಪ್ರದ್ವೀಪಕ್ಕೆ ಹೋದನು,” ಆದರೆ “ಪೌಲನು ಸೀಲನನ್ನು ಆರಿಸಿಕೊಂಡು” ಇನ್ನೊಂದು ದಿಕ್ಕಿನಲ್ಲಿ ಹೋದನು.—ಅ. ಕೃತ್ಯಗಳು 15:36-40.

ಎಷ್ಟು ವಿಷಾದಕರ! ಆದರೆ ಆ ಘಟನೆಯು, ಬಾರ್ನಬನ ವ್ಯಕ್ತಿತ್ವದ ಕುರಿತಾಗಿ ಬೇರೊಂದು ವಿಷಯವನ್ನು ತಿಳಿಸುತ್ತದೆ. “ಬಾರ್ನಬನು ಅಪಾಯವನ್ನು ಎದುರಿಸಿ, ಮಾರ್ಕನಲ್ಲಿ ಎರಡನೆಯ ಸಲ ಭರವಸೆಯನ್ನಿಡಲು ಸಿದ್ಧನಾಗಿದ್ದನೆಂಬ ವಿಷಯವು, ಯಾವಾಗಲೂ ಬಾರ್ನಬನನ್ನು ಪ್ರಶಂಸೆಗೆ ಪಾತ್ರನನ್ನಾಗಿಮಾಡುವುದು,” ಎಂದು ಒಬ್ಬ ವಿದ್ವಾಂಸನು ಹೇಳುತ್ತಾನೆ. ಆ ಬರಹಗಾರನು ಸೂಚಿಸುವಂತೆ, “ಬಾರ್ನಬನು ಮಾರ್ಕನಲ್ಲಿಟ್ಟ ಭರವಸೆಯು, ಮಾರ್ಕನಿಗೆ ತನ್ನ ಸ್ವಂತ ಆತ್ಮವಿಶ್ವಾಸವನ್ನು ಪುನಃ ಗಳಿಸಲು ಸಹಾಯಮಾಡಿ, ನವೀಕರಿಸಲ್ಪಟ್ಟ ಬದ್ಧತೆಗೆ ಒಂದು ಪ್ರಚೋದನೆಯಾಗಿ ಕಾರ್ಯನಡಿಸಿದ್ದಿರಬಹುದು.” ಆದರೆ ಘಟನೆಗಳು ತೋರಿಸುವಂತೆ, ಆ ಭರವಸೆಯು ಪೂರ್ಣವಾಗಿ ಸಮರ್ಥಿಸಲ್ಪಟ್ಟಿತು, ಯಾಕಂದರೆ ಕ್ರೈಸ್ತ ಸೇವೆಯಲ್ಲಿ ಮಾರ್ಕನ ಉಪಯುಕ್ತತೆಯನ್ನು ಪೌಲನೂ ಅಂಗೀಕರಿಸಿದಂತಹ ಒಂದು ಸಮಯ ಬಂತು.—2 ತಿಮೊಥೆಯ 4:11; ಹೋಲಿಸಿರಿ ಕೊಲೊಸ್ಸೆ 4:10.

ಬಾರ್ನಬನ ಉದಾಹರಣೆಯು, ಎದೆಗುಂದಿದವರಿಗೆ ಕಿವಿಗೊಡಲು, ಅರ್ಥಮಾಡಿಕೊಳ್ಳಲು, ಮತ್ತು ಪ್ರೋತ್ಸಾಹವನ್ನು ಕೊಡಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳಲು, ಮತ್ತು ಪ್ರಾಯೋಗಿಕ ನೆರವಿನ ಅಗತ್ಯವಿರುವುದನ್ನು ನಾವು ನೋಡುವಾಗಲೆಲ್ಲಾ ಅದನ್ನು ಒದಗಿಸಲು ನಮ್ಮನ್ನು ಪ್ರಚೋದಿಸಬಲ್ಲದು. ದೀನಭಾವದಿಂದ ಮತ್ತು ಧೈರ್ಯದೊಂದಿಗೆ ತನ್ನ ಸಹೋದರರಿಗೆ ಸೇವೆಸಲ್ಲಿಸುವ ಅವನ ಸಿದ್ಧಮನಸ್ಸಿನ ದಾಖಲೆ, ಹಾಗೂ ಅದು ತಂದಂತಹ ಉತ್ಕೃಷ್ಟ ಪರಿಣಾಮಗಳು ತಾನೇ ಉತ್ತೇಜನದಾಯಕವಾಗಿವೆ. ಇಂದು ನಮ್ಮ ಸಭೆಗಳಲ್ಲಿ ಬಾರ್ನಬರಂತಹ ಜನರು ಇರುವುದು ಎಂತಹ ಒಂದು ಆಶೀರ್ವಾದವಾಗಿದೆ!

[ಅಧ್ಯಯನ ಪ್ರಶ್ನೆಗಳು]

a ಯಾವುದೇ ವ್ಯಕ್ತಿಯನ್ನು ಒಂದು ನಿರ್ದಿಷ್ಟ ಗುಣದ “ಪುತ್ರ”ನೆಂದು ಕರೆಯುವುದು, ಒಂದು ಗಮನಾರ್ಹ ಸ್ವಭಾವಲಕ್ಷಣವನ್ನು ಎತ್ತಿಹೇಳುತ್ತಿತ್ತು. (ಧರ್ಮೋಪದೇಶಕಾಂಡ 3:18, NW ಪಾದಟಿಪ್ಪಣಿಯನ್ನು ನೋಡಿರಿ.) ಪ್ರಥಮ ಶತಮಾನದಲ್ಲಿ, ಒಬ್ಬ ವ್ಯಕ್ತಿಯ ಗುಣಗಳಿಗೆ ಗಮನವನ್ನು ಸೆಳೆಯಲು ಅಡ್ಡಹೆಸರುಗಳನ್ನು ಉಪಯೋಗಿಸುವುದು ವಾಡಿಕೆಯಾಗಿತ್ತು. (ಮಾರ್ಕ 3:17ನ್ನು ಹೋಲಿಸಿರಿ.) ಅದು ಒಂದು ರೀತಿಯ ಸಾರ್ವಜನಿಕ ಅಂಗೀಕಾರವಾಗಿತ್ತು.

b ಮೋಶೆಯ ಧರ್ಮಶಾಸ್ತ್ರದಿಂದ ಸ್ಥಾಪಿಸಲ್ಪಟ್ಟಿದ್ದ ನಿಯಮವನ್ನು ಪರಿಗಣಿಸುತ್ತಾ, ಒಬ್ಬ ಲೇವ್ಯನಾದ ಬಾರ್ನಬನಿಗೆ ತನ್ನ ಸ್ವಂತ ಜಮೀನು ಇದದ್ದು ಹೇಗೆ ಎಂದು ಕೆಲವರು ಕೇಳಿದ್ದಾರೆ. (ಅರಣ್ಯಕಾಂಡ 18:20) ಆದಾಗಲೂ, ಆ ಆಸ್ತಿ ಪ್ಯಾಲೆಸ್ಟೀನ್ಯದಲ್ಲಿತ್ತೊ ಕುಪ್ರದಲ್ಲಿತ್ತೊ ಎಂಬುದು ಸ್ಪಷ್ಟವಾಗಿಲ್ಲ ಎಂಬುದನ್ನು ಗಮನಿಸಬೇಕು. ಇನ್ನೂ ಹೆಚ್ಚಾಗಿ, ಇದು ಬಾರ್ನಬನು ಯೆರೂಸಲೇಮಿನ ಕ್ಷೇತ್ರದಲ್ಲಿ ಪಡೆದಂತಹ ಬರಿಯ ಸ್ಮಶಾನ ಭೂಮಿಯಾಗಿರುವ ಸಾಧ್ಯತೆಯಿದೆ. ಏನೇ ಆಗಿರಲಿ, ಇತರರಿಗೆ ಸಹಾಯಮಾಡಲಿಕ್ಕಾಗಿ ಬಾರ್ನಬನು ತನ್ನ ಆಸ್ತಿಯನ್ನು ಮಾರಿದನು.

[ಪುಟ 23 ರಲ್ಲಿರುವ ಚಿತ್ರ]

ಬಾರ್ನಬನು “ಒಳ್ಳೆಯವನೂ ನಂಬಿಕೆಯಿಂದ ತುಂಬಿದವನೂ ಆಗಿದ್ದನು”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ