ಸರ್ವರೂ ದೇವರಿಗೆ ಲೆಕ್ಕವೊಂದನ್ನು ಒಪ್ಪಿಸಬೇಕು
“ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.”—ರೋಮಾಪುರ 14:12.
1. ಆದಾಮ, ಹವ್ವರ ಸ್ವಾತಂತ್ರ್ಯದ ಮೇಲೆ ಯಾವ ಪರಿಮಿತಿಗಳು ಇಡಲ್ಪಟ್ಟವು?
ಯೆಹೋವ ದೇವರು ನಮ್ಮ ಆದಿ ಪಿತೃಗಳಾದ ಆದಾಮ, ಹವ್ವರನ್ನು ಸ್ವತಂತ್ರ ನೈತಿಕ ಕರ್ತೃಗಳಾಗಿ ಸೃಷ್ಟಿಸಿದನು. ಅವರು ದೇವದೂತರಿಗಿಂತ ಕೆಳಮಟ್ಟದವರಾಗಿದ್ದರೂ, ಅವರು ವಿವೇಕಯುತವಾದ ನಿರ್ಣಯವನ್ನು ಮಾಡುವ ಸಾಮರ್ಥ್ಯವಿದ್ದ ಬುದ್ಧಿಶಕ್ತಿಯ ಜೀವಿಗಳಾಗಿದ್ದರು. (ಕೀರ್ತನೆ 8:4, 5) ಆದರೂ, ಆ ದೇವದತ್ತ ಸ್ವಾತಂತ್ರ್ಯವು ಆತ್ಮನಿರ್ಣಯಾಧಿಕಾರವನ್ನು ಪ್ರಯೋಗಿಸಲಿಕ್ಕಾಗಿದ್ದ ಒಂದು ಪರವಾನಗಿಯಾಗಿರಲಿಲ್ಲ. ಅವರು ತಮ್ಮ ಸೃಷ್ಟಿಕರ್ತನಿಗೆ ಉತ್ತರವಾದಿಗಳಾಗಿದ್ದರು, ಮತ್ತು ಈ ಉತ್ತರವಾದಿತ್ವವು ಅವರ ವಂಶಜರಿಗೆಲ್ಲ ವ್ಯಾಪಿಸಿದೆ.
2. ಯೆಹೋವನು ಬೇಗನೆ ಯಾವ ಲೆಕ್ಕಾಚಾರವನ್ನು ಮಾಡುವನು, ಮತ್ತು ಏಕೆ?
2 ನಾವೀಗ ಈ ದುಷ್ಟ ವ್ಯವಸ್ಥೆಯ ಪರಮಾವಧಿಗೆ ಸಮೀಪಿಸುತ್ತಿರುವುದರಿಂದ, ಯೆಹೋವನು ಭೂಮಿಯ ಮೇಲೊಂದು ಲೆಕ್ಕಾಚಾರವನ್ನು ಮಾಡುವನು. (ಹೋಲಿಸಿ ರೋಮಾಪುರ 9:28.) ಬೇಗನೆ, ಭಕ್ತಿಹೀನ ಜನರು ಭೂಮಿಯ ಸಂಪನ್ಮೂಲಗಳನ್ನು ಧ್ವಂಸಮಾಡಿರುವುದಕ್ಕಾಗಿ, ಮಾನವ ಜೀವವನ್ನು ನಾಶಮಾಡಿರುವುದಕ್ಕಾಗಿ, ಮತ್ತು ವಿಶೇಷವಾಗಿ ದೇವರ ಸೇವಕರನ್ನು ಹಿಂಸಿಸಿರುವುದಕ್ಕಾಗಿ, ಯೆಹೋವ ದೇವರಿಗೆ ಲೆಕ್ಕ ಒಪ್ಪಿಸಬೇಕಾಗಿದೆ.—ಪ್ರಕಟನೆ 6:10; 11:18.
3. ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?
3 ಈ ವಿಚಾರಶೀಲ ಪ್ರತೀಕ್ಷೆಯು ಎದುರಿಗಿರುವುದರಿಂದ, ಗತಕಾಲಗಳಲ್ಲಿ ತನ್ನ ಸೃಷ್ಟಿಜೀವಿಗಳೊಂದಿಗೆ ಯೆಹೋವನು ಮಾಡಿರುವ ನೀತಿಯ ವ್ಯವಹಾರಗಳ ಮೇಲೆ ಚಿಂತನೆ ಮಾಡುವುದು ನಮಗೆ ಪ್ರಯೋಜನಕರವಾಗಿದೆ. ಶಾಸ್ತ್ರಗಳು, ನಾವು ವೈಯಕ್ತಿಕವಾಗಿ ನಮ್ಮ ಸೃಷ್ಟಿಕರ್ತನಿಗೆ ಸ್ವೀಕಾರಯೋಗ್ಯವಾದ ಲೆಕ್ಕವನ್ನು ಒಪ್ಪಿಸುವಂತೆ ನಮಗೆ ಹೇಗೆ ಸಹಾಯಮಾಡಬಲ್ಲವು? ಯಾವ ಮಾದರಿಗಳು ಸಹಾಯಕರವಾಗಿರಬಹುದು, ಮತ್ತು ಯಾವುವನ್ನು ಅನುಕರಿಸುವುದರಿಂದ ನಾವು ದೂರವಿರಬೇಕು?
ದೇವದೂತರು ಉತ್ತರವಾದಿಗಳಾಗಿದ್ದಾರೆ
4. ತಮ್ಮ ವರ್ತನೆಗಳಿಗಾಗಿ ದೇವದೂತರನ್ನು ದೇವರು ಉತ್ತರವಾದಿಗಳನ್ನಾಗಿ ಮಾಡುತ್ತಾನೆಂಬುದು ನಮಗೆ ಹೇಗೆ ಗೊತ್ತು?
4 ಸ್ವರ್ಗದಲ್ಲಿರುವ ಯೆಹೋವನ ದೇವದೂತ ಜೀವಿಗಳು ಆತನಿಗೆ ನಮ್ಮಷ್ಟೇ ಉತ್ತರವಾದಿಗಳಾಗಿದ್ದಾರೆ. ನೋಹನ ದಿನದ ಜಲಪ್ರಳಯಕ್ಕೆ ಮೊದಲು, ಕೆಲವು ದೇವದೂತರು, ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧಗಳಲ್ಲಿ ಒಳಗೂಡಲಿಕ್ಕಾಗಿ ಅವಿಧೇಯತೆಯಿಂದ ದೇಹತಾಳಿದರು. ಸ್ವತಂತ್ರ ನೈತಿಕ ಕರ್ತೃಗಳಾಗಿದ್ದುದರಿಂದ, ಈ ಆತ್ಮಜೀವಿಗಳಿಗೆ ಈ ನಿರ್ಣಯವನ್ನು ಮಾಡಸಾಧ್ಯವಿತ್ತು, ಆದರೆ ದೇವರು ಅವರನ್ನು ಉತ್ತರವಾದಿಗಳನ್ನಾಗಿ ಮಾಡಿದನು. ಆ ಅವಿಧೇಯ ದೇವದೂತರು ಆತ್ಮಲೋಕಕ್ಕೆ ಹಿಂದಿರುಗಿದಾಗ, ಅವರು ತಮ್ಮ ಆದಿಯ ಸ್ಥಾನವನ್ನು ಪಡೆಯುವಂತೆ ಯೆಹೋವನು ಅನುಮತಿಸಲಿಲ್ಲ. ಅವರಿಗೆ “ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದಲ್ಲಿ ಆಗುವ ದಂಡನೆಯ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಇಟ್ಟಿದ್ದಾನೆ,” ಎಂದು ಶಿಷ್ಯನಾದ ಯೂದನು ನಮಗೆ ತಿಳಿಸುತ್ತಾನೆ.—ಯೂದ 6.
5. ಸೈತಾನನೂ ಅವನ ದೆವ್ವಗಳೂ ಯಾವ ಪತನವನ್ನು ಅನುಭವಿಸಿದ್ದಾರೆ, ಮತ್ತು ಅವರ ದಂಗೆಗಾಗಿ ಲೆಕ್ಕವು ಹೇಗೆ ತೀರಿಸಲ್ಪಡುವುದು?
5 ಈ ಅವಿಧೇಯ ದೇವದೂತರು, ಅಥವಾ ದೆವ್ವಗಳಿಗೆ, ಅವರ ಪ್ರಭುವಾಗಿ ಪಿಶಾಚನಾದ ಸೈತಾನನಿದ್ದಾನೆ. (ಮತ್ತಾಯ 12:24-26) ಈ ದುಷ್ಟ ದೇವದೂತನು ತನ್ನ ಸೃಷ್ಟಿಕರ್ತನ ವಿರುದ್ಧ ದಂಗೆಯೆದ್ದು, ಯೆಹೋವನ ಪರಮಾಧಿಕಾರದ ನ್ಯಾಯಬದ್ಧತೆಯನ್ನು ಪಂಥಾಹ್ವಾನಿಸಿದನು. ಸೈತಾನನು ನಮ್ಮ ಆದಿ ಹೆತ್ತವರನ್ನು ಪಾಪಕ್ಕೆ ನಡೆಸಿದನು, ಮತ್ತು ಇದು ಅವರ ಅಂತಿಮ ಮರಣದಲ್ಲಿ ಫಲಿಸಿತು. (ಆದಿಕಾಂಡ 3:1-7, 17-19) ಆ ಬಳಿಕ ಒಂದು ಅವಧಿಯಲ್ಲಿ ದೇವರು ಸೈತಾನನನ್ನು, ಅವನು ಸ್ವರ್ಗೀಯ ಆಸ್ಥಾನಗಳನ್ನು ಪ್ರವೇಶಿಸುವರೆ ಅನುಮತಿಸಿದನಾದರೂ, ಬೈಬಲಿನ ಪ್ರಕಟನೆ ಪುಸ್ತಕವು, ದೇವರ ತಕ್ಕ ಸಮಯದಲ್ಲಿ ಈ ಕೆಡುಕನನ್ನು ಭೂಮಿಯ ಪರಿಸರಕ್ಕೆ ದೊಬ್ಬಲಾಗುವುದೆಂಬುದನ್ನು ಮುಂತಿಳಿಸಿತು. ಇದು ಯೇಸು ಕ್ರಿಸ್ತನು 1914ರಲ್ಲಿ ರಾಜ್ಯಾಧಿಕಾರವನ್ನು ಪಡೆದ ಬಳಿಕ ಸ್ವಲ್ಪದರಲ್ಲಿ ಸಂಭವಿಸಿತೆಂದು ಸಾಕ್ಷ್ಯವು ತೋರಿಸುತ್ತದೆ. ಅಂತಿಮವಾಗಿ, ಪಿಶಾಚನೂ ಅವನ ದೆವ್ವಗಳೂ ನಿತ್ಯ ನಾಶನಕ್ಕೆ ಹೋಗುವರು. ಪರಮಾಧಿಕಾರದ ವಿವಾದಾಂಶವು ಕೊನೆಗೆ ನಿರ್ಣಯಿಸಲ್ಪಡುವುದರೊಂದಿಗೆ, ದಂಗೆಗಾಗಿ ಲೆಕ್ಕವು ಆಗ ನ್ಯಾಯವಾಗಿ ತೀರಿಸಲ್ಪಟ್ಟಿರುವುದು.—ಯೋಬ 1:6-12; 2:1-7; ಪ್ರಕಟನೆ 12:7-9; 20:10.
ದೇವರ ಪುತ್ರನು ಉತ್ತರವಾದಿಯಾಗಿದ್ದಾನೆ
6. ತನ್ನ ತಂದೆಯೆಡೆಗೆ ತನಗಿರುವ ಸ್ವಂತ ಉತ್ತರವಾದಿತ್ವವನ್ನು ಯೇಸು ಹೇಗೆ ವೀಕ್ಷಿಸುತ್ತಾನೆ?
6 ದೇವರ ಪುತ್ರನಾದ ಯೇಸು ಕ್ರಿಸ್ತನಿಂದ ಎಂತಹ ಒಂದು ಅತ್ಯುತ್ತಮವಾದ ಮಾದರಿಯು ಇಡಲ್ಪಟ್ಟಿದೆ! ಆದಾಮನಿಗೆ ಸಮಾನನಾಗಿದ್ದ ಪರಿಪೂರ್ಣ ಮನುಷ್ಯನಾಗಿ, ಯೇಸು ದೈವಿಕ ಚಿತ್ತವನ್ನು ಮಾಡಲು ಸಂತೋಷಿಸಿದ್ದನು. ಯೆಹೋವನ ನಿಯಮದ ಅನುಸರಣೆಗಾಗಿ ಉತ್ತರವಾದಿಯಾಗಿ ಮಾಡಲ್ಪಟ್ಟದ್ದಕ್ಕಾಗಿಯೂ ಅವನು ಉಲ್ಲಾಸಿತನಾಗಿದ್ದನು. ಅವನ ಕುರಿತಾಗಿ ಕೀರ್ತನೆಗಾರನು ಯುಕ್ತವಾಗಿ ಪ್ರವಾದಿಸಿದ್ದು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.”—ಕೀರ್ತನೆ 40:8; ಇಬ್ರಿಯ 10:6-9.
7. ತನ್ನ ಮರಣದ ಮುನ್ಸಂಜೆ ಪ್ರಾರ್ಥಿಸುತ್ತಿದ್ದಾಗ, ಯೋಹಾನ 17:4, 5ರಲ್ಲಿ ದಾಖಲೆಯಾಗಿರುವ ಮಾತುಗಳನ್ನು ಯೇಸು ಏಕೆ ಹೇಳಸಾಧ್ಯವಿತ್ತು?
7 ಯೇಸು ಅನುಭವಿಸಿದ ದ್ವೇಷಭರಿತ ವಿರೋಧದ ಹೊರತಾಗಿಯೂ, ಅವನು ದೇವರ ಚಿತ್ತವನ್ನು ಮಾಡಿ, ವಧಸ್ತಂಭದ ಮೇಲಿನ ಮರಣದ ಪರ್ಯಂತರವೂ ಸಮಗ್ರತೆಯನ್ನು ಕಾಪಾಡಿಕೊಂಡನು. ಆ ಮೂಲಕ ಅವನು ಮಾನವ ಕುಲವನ್ನು ಆದಾಮನ ಪಾಪದ ಮರಣಾಂತಕ ಪರಿಣಾಮಗಳಿಂದ ವಿಮೋಚಿಸಲು ಪ್ರಾಯಶ್ಚಿತ್ತ ಮೌಲ್ಯವನ್ನು ತೆತ್ತನು. (ಮತ್ತಾಯ 20:28) ಆದಕಾರಣ, ತನ್ನ ಮರಣದ ಮುನ್ಸಂಜೆ, ಯೇಸು ಭರವಸೆಯಿಂದ ಹೀಗೆ ಪ್ರಾರ್ಥಿಸಶಕ್ತನಾದನು: “ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೂಲೋಕದಲ್ಲಿ ಮಹಿಮೆಪಡಿಸಿದೆನು. ಈಗ ತಂದೆಯೇ, ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆಪಡಿಸು; ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು.” (ಯೋಹಾನ 17:4, 5) ಯೇಸು ತನ್ನ ಸ್ವರ್ಗೀಯ ತಂದೆಗೆ ಆ ಮಾತುಗಳನ್ನು ಹೇಳಶಕ್ತನಾದದ್ದು, ಅವನು ಉತ್ತರವಾದಿತ್ವದ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದು, ದೇವರಿಗೆ ಸ್ವೀಕಾರಾರ್ಹನಾಗಿರುತ್ತಿದ್ದುದರಿಂದಲೇ.
8. (ಎ) ನಾವು ಯೆಹೋವ ದೇವರಿಗೆ ನಮ್ಮ ವಿಷಯದಲ್ಲಿ ಲೆಕ್ಕವನ್ನೊಪ್ಪಿಸಬೇಕೆಂದು ಪೌಲನು ಹೇಗೆ ತೋರಿಸಿದನು? (ಬಿ) ನಾವು ದೇವರಿಂದ ಅಂಗೀಕಾರವನ್ನು ಪಡೆಯುವಂತೆ ನಮಗೆ ಯಾವುದು ಸಹಾಯಮಾಡುವುದು?
8 ಪರಿಪೂರ್ಣ ಮನುಷ್ಯನಾಗಿದ್ದ ಯೇಸು ಕ್ರಿಸ್ತನಿಗೆ ಅಸದೃಶವಾಗಿ, ನಾವು ಅಪರಿಪೂರ್ಣರಾಗಿದ್ದೇವೆ. ಆದರೂ, ನಾವು ದೇವರಿಗೆ ಉತ್ತರವಾದಿಗಳಾಗಿದ್ದೇವೆ. ಅಪೊಸ್ತಲ ಪೌಲನು ಹೇಳಿದ್ದು: “ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವದೇನು? . . . ನಿನ್ನ ಸಹೋದರನನ್ನು ನೀನು ಹೀನೈಸುವದೇನು? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ಲಾ. ನನ್ನ ಜೀವದಾಣೆ, ಎಲ್ಲರೂ ನನಗೆ ಅಡ್ಡ ಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು ಎಂಬದಾಗಿ ಕರ್ತನು [“ಯೆಹೋವನು,” NW] ಹೇಳಿದ್ದಾನೆ ಎಂದು ಬರೆದದೆ. ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.” (ರೋಮಾಪುರ 14:10-12) ನಾವು ಹಾಗೆ ಮಾಡಿ, ದೇವರಿಂದ ಅಂಗೀಕಾರವನ್ನು ಪಡೆಯುವುದಕ್ಕಾಗಿ, ಆತನು ಪ್ರೀತಿಯಿಂದ, ನಮ್ಮ ನಡೆನುಡಿಯಲ್ಲಿ ನಮ್ಮನ್ನು ಮಾರ್ಗದರ್ಶಿಸಲು ನಮಗೆ ಮನಸ್ಸಾಕ್ಷಿ ಮತ್ತು ತನ್ನ ಪ್ರೇರಿತ ವಾಕ್ಯವಾದ ಬೈಬಲು—ಇವೆರಡನ್ನೂ ಕೊಟ್ಟಿದ್ದಾನೆ. (ರೋಮಾಪುರ 2:14, 15; 2 ತಿಮೊಥೆಯ 3:16, 17) ಯೆಹೋವನ ಆತ್ಮಿಕ ಒದಗಿಸುವಿಕೆಗಳಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದು ಮತ್ತು ನಮ್ಮ ಬೈಬಲ್-ಶಿಕ್ಷಿತ ಮನಸ್ಸಾಕ್ಷಿಯನ್ನು ಅನುಸರಿಸುವುದು, ದೇವರೊಂದಿಗೆ ಅಂಗೀಕಾರವನ್ನು ಕಂಡುಕೊಳ್ಳಲು ನಮಗೆ ಸಹಾಯಮಾಡುವುದು. (ಮತ್ತಾಯ 24:45-47) ಯೆಹೋವನ ಪವಿತ್ರಾತ್ಮ ಅಥವಾ ಕಾರ್ಯಕಾರಿ ಶಕ್ತಿ, ಬಲ ಮತ್ತು ಮಾರ್ಗದರ್ಶನದ ಕೂಡಿಸಲ್ಪಟ್ಟ ಮೂಲವಾಗಿದೆ. ನಾವು ಆ ಆತ್ಮದ ಮಾರ್ಗದರ್ಶನ ಮತ್ತು ನಮ್ಮ ಬೈಬಲ್-ಶಿಕ್ಷಿತ ಮನಸ್ಸಾಕ್ಷಿಯ ನಿರ್ದೇಶನಕ್ಕೆ ಹೊಂದಿಕೆಯಲ್ಲಿ ವರ್ತಿಸುವಲ್ಲಿ, ನಾವು ನಮ್ಮ ಸಮಸ್ತ ಕ್ರಿಯೆಗಳಿಗಾಗಿ ಯಾರಿಗೆ ಲೆಕ್ಕವೊಪ್ಪಿಸಬೇಕೊ, ಆ ‘ದೇವರನ್ನು ತಿರಸ್ಕಾರ’ ಮಾಡುವುದಿಲ್ಲವೆಂಬುದನ್ನು ತೋರಿಸುತ್ತೇವೆ.—1 ಥೆಸಲೊನೀಕ 4:3-8; 1 ಪೇತ್ರ 3:16, 21.
ರಾಷ್ಟ್ರಗಳಾಗಿ ಉತ್ತರವಾದಿಗಳು
9. ಏದೋಮ್ಯರು ಯಾರಾಗಿದ್ದರು, ಮತ್ತು ಇಸ್ರಾಯೇಲಿನ ಕಡೆಗೆ ಅವರ ವರ್ತನೆಯ ಕಾರಣ ಅವರಿಗೆ ಏನು ಸಂಭವಿಸಿತು?
9 ಯೆಹೋವನು ರಾಷ್ಟ್ರಗಳನ್ನು ಲೆಕ್ಕ ತೀರಿಸಲಿಕ್ಕಾಗಿ ಕರೆಯುತ್ತಾನೆ. (ಯೆರೆಮೀಯ 25:12-14; ಚೆಫನ್ಯ 3:6, 7) ಮೃತ ಸಮುದ್ರದ ದಕ್ಷಿಣದಲ್ಲಿ ಮತ್ತು ಆಕಬ ಕೊಲ್ಲಿಯ ಉತ್ತರಕ್ಕಿರುವ ಪುರಾತನ ಕಾಲದ ಏದೋಮ್ ರಾಜ್ಯವನ್ನು ಪರಿಗಣಿಸಿರಿ. ಆ ಏದೋಮ್ಯರು ಇಸ್ರಾಯೇಲ್ಯರಿಗೆ ನಿಕಟ ಸಂಬಂಧಿಗಳಾಗಿದ್ದ ಶೇಮ್ ವಂಶಸ್ಥರಾಗಿದ್ದರು. ಏದೋಮ್ಯರ ಮೂಲಪಿತನು ಅಬ್ರಹಾಮನ ಮೊಮ್ಮಗನಾದ ಏಸಾವನಾಗಿದ್ದರೂ, ವಾಗ್ದತ್ತ ದೇಶದ ದಾರಿಯಲ್ಲಿ ಹೋಗುವಾಗ ಏದೋಮಿನ “ರಾಜಮಾರ್ಗ”ದ ಮೂಲಕ ಪಯಣಿಸಿ, ಅದನ್ನು ದಾಟುವ ಅನುಮತಿಯು ಇಸ್ರಾಯೇಲ್ಯರಿಗೆ ನಿರಾಕರಿಸಲ್ಪಟ್ಟಿತು. (ಅರಣ್ಯಕಾಂಡ 20:14-21) ಶತಮಾನಗಳಲ್ಲೆಲ್ಲಾ, ಏದೋಮ್ಯರ ಕಡು ಹಗೆತನವು ಇಸ್ರಾಯೇಲ್ಯರ ವಿರುದ್ಧ ಕರುಣಾರಹಿತ ದ್ವೇಷವಾಗಿ ಬೆಳೆಯಿತು. ಕೊನೆಗೆ, ಸಾ.ಶ.ಪೂ. 607ರಲ್ಲಿ ಯೆರೂಸಲೇಮನ್ನು ನಾಶಮಾಡುವಂತೆ ಬಾಬೆಲಿನವರನ್ನು ಏದೋಮ್ಯರು ಪ್ರೋತ್ಸಾಹಿಸಿದುದಕ್ಕಾಗಿ ಅವರು ಲೆಕ್ಕವನ್ನೊಪ್ಪಿಸಬೇಕಾಯಿತು. (ಕೀರ್ತನೆ 137:7) ಸಾ.ಶ.ಪೂ. ಆರನೆಯ ಶತಮಾನದಲ್ಲಿ, ರಾಜ ನೆಬೊನೈಡಸನ ಕೈಕೆಳಗಿದ್ದ ಬಾಬೆಲಿನ ಸೈನ್ಯಗಳು ಏದೋಮನ್ನು ಸೋಲಿಸಿದವು, ಮತ್ತು ಯೆಹೋವನು ವಿಧಿಸಿದ್ದಂತೆ ಅದು ನಿರ್ಜನವಾಯಿತು.—ಯೆರೆಮೀಯ 49:20; ಓಬದ್ಯ 9-11.
10. ಮೋವಾಬ್ಯರು ಇಸ್ರಾಯೇಲ್ಯರ ಕಡೆಗೆ ಹೇಗೆ ವರ್ತಿಸಿದರು, ಮತ್ತು ಮೋವಾಬನ್ನು ಲೆಕ್ಕವೊಪ್ಪಿಸುವಂತೆ ದೇವರು ಹೇಗೆ ಕರೆದನು?
10 ಮೋವಾಬು ತತ್ಸಮಾನವಾದ ಫಲವನ್ನು ಅನುಭವಿಸಿತು. ಮೋವಾಬ್ಯರ ರಾಜ್ಯವು ಏದೋಮಿಗೆ ಉತ್ತರದಲ್ಲಿ ಮತ್ತು ಮೃತ ಸಮುದ್ರದ ಪೂರ್ವದಲ್ಲಿತ್ತು. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು, ಮೋವಾಬ್ಯರು ಆರ್ಥಿಕ ಲಾಭಕ್ಕಾಗಿ ಮಾತ್ರ ಅವರಿಗೆ ರೊಟ್ಟಿ ಮತ್ತು ನೀರಿನ ಸರಬರಾಯಿ ಮಾಡಿ, ಅವರ ಕಡೆಗೆ ಆದರಾತಿಥ್ಯವನ್ನು ತೋರಿಸಲಿಲ್ಲವೆಂದು ಸ್ಪಷ್ಟವಾಗುತ್ತದೆ. (ಧರ್ಮೋಪದೇಶಕಾಂಡ 23:3, 4) ಮೋವಾಬಿನ ಅರಸನಾದ ಬಾಲಾಕನು ಇಸ್ರಾಯೇಲನ್ನು ಶಪಿಸಲು ಪ್ರವಾದಿ ಬಿಳಾಮನನ್ನು ಮಜೂರಿಗೆ ಹಿಡಿದನು, ಮತ್ತು ಇಸ್ರಾಯೇಲ್ಯ ಪುರುಷರನ್ನು ಅನೈತಿಕತೆ ಮತ್ತು ವಿಗ್ರಹಾರಾಧನೆಗೆ ಸೆಳೆಯಲು ಮೋವಾಬ್ಯ ಸ್ತ್ರೀಯರನ್ನು ಉಪಯೋಗಿಸಲಾಯಿತು. (ಅರಣ್ಯಕಾಂಡ 22:2-8; 25:1-9) ಆದರೂ, ಇಸ್ರಾಯೇಲಿನ ಕಡೆಗೆ ಮೋವಾಬಿಗಿದ್ದ ದ್ವೇಷವು ಗಮನಕ್ಕೆ ಬಾರದೆ ಹೋಗುವಂತೆ ಯೆಹೋವನು ಬಿಡಲಿಲ್ಲ. ಪ್ರವಾದಿಸಲ್ಪಟ್ಟಿದ್ದಂತೆ, ಬಾಬೆಲಿನವರ ಕೈಯಿಂದ ಮೋವಾಬ್ ಪತನವನ್ನು ಅನುಭವಿಸಿತು. (ಯೆರೆಮೀಯ 9:25, 26; ಚೆಫನ್ಯ 2:8-11) ಹೌದು, ದೇವರು ಮೋವಾಬನ್ನು ಲೆಕ್ಕ ಒಪ್ಪಿಸಲಿಕ್ಕಾಗಿ ಕರೆನೀಡಿದನು.
11. ಮೋವಾಬ್ ಮತ್ತು ಅಮ್ಮೋನ್ ಯಾವ ಪಟ್ಟಣಗಳಂತಾದವು, ಮತ್ತು ಈಗಿನ ವಿಷಯಗಳ ದುಷ್ಟ ವ್ಯವಸ್ಥೆಯ ಕುರಿತು ಬೈಬಲ್ ಪ್ರವಾದನೆಗಳು ಏನು ಸೂಚಿಸುತ್ತವೆ?
11 ಮೋವಾಬ್ ಮಾತ್ರವಲ್ಲ, ಅಮ್ಮೋನ್ ಸಹ ದೇವರಿಗೆ ಲೆಕ್ಕ ಒಪ್ಪಿಸಬೇಕಾಗಿತ್ತು. ಯೆಹೋವನು ಹೀಗೆ ಮುಂತಿಳಿಸಿದ್ದನು: “ಸೊದೋಮಿನ ಗತಿಯೇ ಮೋವಾಬಿಗೆ ಆಗುವದು, ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವದು; ಆ ಪ್ರಾಂತಗಳು ಮುಳ್ಳುಗಿಡಗಳಿಂದಲೂ ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯ ನಾಶನಕ್ಕೆ ಈಡಾಗುವವು.” (ಚೆಫನ್ಯ 2:9) ದೇವರು ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ನಾಶಗೊಳಿಸಿದ್ದಂತೆಯೇ, ಮೋವಾಬ್ ಮತ್ತು ಅಮ್ಮೋನ್ ದೇಶಗಳು ಧ್ವಂಸಗೊಳಿಸಲ್ಪಟ್ಟವು. ಲಂಡನಿನ ಭೂಗರ್ಭಶಾಸ್ತ್ರ ಸೊಸೈಟಿಗನುಸಾರ, ಮೃತ ಸಮುದ್ರದ ಪೂರ್ವ ಕರಾವಳಿಯಲ್ಲಿ ಧ್ವಂಸವಾಗಿರುವ ಸೊದೋಮ್ ಮತ್ತು ಗೊಮೋರಗಳ ನಿವೇಶನಗಳನ್ನು ತಾವು ಕಂಡುಹಿಡಿದಿರುವುದಾಗಿ ಸಂಶೋಧಕರು ಪ್ರತಿಪಾದಿಸುತ್ತಾರೆ. ಈ ವಿಷಯದಲ್ಲಿ ಇನ್ನೂ ಬೆಳಕಿಗೆ ಬರಬಹುದಾದ ಯಾವುದೇ ಭರವಸಾರ್ಹ ಸಾಕ್ಷ್ಯವು, ಈಗಿನ ವಿಷಯಗಳ ದುಷ್ಟ ವ್ಯವಸ್ಥೆಯು ಸಹ ಯೆಹೋವ ದೇವರಿಂದ ಲೆಕ್ಕವೊಪ್ಪಿಸಲು ಕರೆಯಲ್ಪಡುವುದೆಂಬುದನ್ನು ಸೂಚಿಸುವ ಬೈಬಲ್ ಪ್ರವಾದನೆಗಳನ್ನು ಮಾತ್ರ ಬೆಂಬಲಿಸಬಲ್ಲವು.—2 ಪೇತ್ರ 3:6-12.
12. ಇಸ್ರಾಯೇಲ್ ತನ್ನ ಪಾಪಗಳಿಗಾಗಿ ದೇವರಿಗೆ ಲೆಕ್ಕವೊಪ್ಪಿಸಬೇಕಾಗಿದ್ದರೂ, ಯೆಹೂದಿ ಜನಶೇಷದ ಕುರಿತು ಏನನ್ನು ಮುಂತಿಳಿಸಲಾಗಿತ್ತು?
12 ಇಸ್ರಾಯೇಲು ಯೆಹೋವನಿಂದ ಉಚ್ಚವಾಗಿ ಅನುಗ್ರಹಿತವಾಗಿತ್ತಾದರೂ, ತನ್ನ ಪಾಪಗಳಿಗಾಗಿ ಅದು ದೇವರಿಗೆ ಲೆಕ್ಕ ಒಪ್ಪಿಸಬೇಕಾಗಿತ್ತು. ಯೇಸು ಕ್ರಿಸ್ತನು ಇಸ್ರಾಯೇಲ್ ಜನಾಂಗಕ್ಕೆ ಬಂದಾಗ, ಅವರಲ್ಲಿ ಅಧಿಕಾಂಶ ಜನರು ಅವನನ್ನು ನಿರಾಕರಿಸಿದರು. ಉಳಿಕೆಯವರು ಮಾತ್ರ ನಂಬಿಕೆಯನ್ನು ಪ್ರಯೋಗಿಸಿ, ಅವನ ಹಿಂಬಾಲಕರಾದರು. ಪೌಲನು ಹೀಗೆ ಬರೆದಾಗ ಕೆಲವು ಪ್ರವಾದನೆಗಳನ್ನು ಈ ಯೆಹೂದಿ ಜನಶೇಷಕ್ಕೆ ಅನ್ವಯಿಸಿದನು: “ಇದಲ್ಲದೆ ಯೆಶಾಯನು ಇಸ್ರಾಯೇಲ್ ಜನರ ವಿಷಯದಲ್ಲಿ—ಕರ್ತನು [“ಯೆಹೋವನು,” NW] ಈ ದೇಶದವರ ವಿಷಯ ಪೂರ್ಣವಾಗಿಯೂ ತೀವ್ರವಾಗಿಯೂ ಲೆಕ್ಕವನ್ನು ತೀರಿಸುವನಾದದರಿಂದ ಇಸ್ರಾಯೇಲ್ಯರ ಸಂಖ್ಯೆಯು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಒಂದು ಅಂಶ ಮಾತ್ರ ರಕ್ಷಣೆಹೊಂದುವದೆಂದು ಕೂಗಿ ಹೇಳುತ್ತಾನೆ. ಅದೇ ಅಭಿಪ್ರಾಯದಿಂದ ಯೆಶಾಯನು ಮತ್ತೊಂದು ವಚನದಲ್ಲಿ—ಸೇನಾಧೀಶ್ವರನಾದ ಕರ್ತನು [“ಯೆಹೋವನು,” NW] ನಮಗೆ ಸಂತಾನವನ್ನು ಉಳಿಸದೆ ಹೋಗಿದ್ದರೆ ಸೊದೋಮಿನ ಗತಿಯೇ ನಮಗಾಗುತ್ತಿತ್ತು, ಗೊಮೋರದ ದುರ್ದಶೆಯೇ ಸಂಭವಿಸುತ್ತಿತ್ತು ಎಂದು ಹೇಳುತ್ತಾನೆ.” (ರೋಮಾಪುರ 9:27-29; ಯೆಶಾಯ 1:9; 10:22, 23) ಎಲೀಯನ ಕಾಲದಲ್ಲಿ ಬಾಳನಿಗೆ ಅಡ್ಡಬಿದ್ದಿರದ 7,000 ಮಂದಿಯ ದೃಷ್ಟಾಂತವನ್ನು ಅಪೊಸ್ತಲನು ಉದಾಹರಿಸಿ, ಬಳಿಕ ಅಂದದ್ದು: “ಅದರಂತೆ ಈಗಿನ ಕಾಲದಲ್ಲಿಯೂ ದೇವರು ಕೃಪೆಯಿಂದ ಆದುಕೊಂಡವರಾದ ಕೆಲವರು ಉಳಿದಿದ್ದಾರೆ.” (ರೋಮಾಪುರ 11:5) ಆ ಜನಶೇಷವು ವೈಯಕ್ತಿಕವಾಗಿ ದೇವರಿಗೆ ಲೆಕ್ಕ ಒಪ್ಪಿಸಬೇಕಾಗಿದ್ದ ವ್ಯಕ್ತಿಗಳನ್ನು ಒಳಗೊಂಡಿತ್ತು.
ವೈಯಕ್ತಿಕ ಉತ್ತರವಾದಿತ್ವದ ಮಾದರಿಗಳು
13. ತನ್ನ ತಮ್ಮನಾದ ಹೇಬೆಲನ ಕೊಲೆಮಾಡಿದುದಕ್ಕಾಗಿ ಲೆಕ್ಕವೊಪ್ಪಿಸಲು ದೇವರು ಕಾಯಿನನನ್ನು ಕರೆದಾಗ, ಅವನಿಗೆ ಏನು ಸಂಭವಿಸಿತು?
13 ಯೆಹೋವ ದೇವರಿಗೆ ವೈಯಕ್ತಿಕ ಉತ್ತರವಾದಿತ್ವದ ಅನೇಕ ವಿದ್ಯಮಾನಗಳನ್ನು ಬೈಬಲು ಉಲ್ಲೇಖಿಸುತ್ತದೆ. ಆದಾಮನ ಜ್ಯೇಷ್ಠ ಪುತ್ರನಾದ ಕಾಯಿನನ ದೃಷ್ಟಾಂತವನ್ನು ತೆಗೆದುಕೊಳ್ಳಿರಿ. ಅವನು ಮತ್ತು ಅವನ ತಮ್ಮನಾದ ಹೇಬೆಲ—ಇವರಿಬ್ಬರೂ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಿದರು. ಹೇಬೆಲನ ಯಜ್ಞವು ದೇವರಿಗೆ ಸ್ವೀಕಾರಯೋಗ್ಯವಾಗಿತ್ತಾದರೂ ಕಾಯಿನನದ್ದು ಆಗಿರಲಿಲ್ಲ. ತನ್ನ ತಮ್ಮನನ್ನು ಕ್ರೂರವಾಗಿ ಕೊಲೆಮಾಡಿದುದರ ಲೆಕ್ಕವೊಪ್ಪಿಸುವಂತೆ ಕರೆಯಲ್ಪಟ್ಟಾಗ, ಕಾಯಿನನು ಕಲ್ಲೆದೆಯವನಾಗಿ, “ನನ್ನ ತಮ್ಮನನ್ನು ಕಾಯುವವನು ನಾನೋ?” ಎಂದು ದೇವರಿಗೆ ಹೇಳಿದನು. ಅವನ ಪಾಪಕ್ಕಾಗಿ, ಕಾಯಿನನನ್ನು “ಏದೆನಿನ ಮೂಡಲಲ್ಲಿದ್ದ ತಲೆತಪ್ಪಿಸಿಕೊಳ್ಳುವಿಕೆಯ ದೇಶ”ಕ್ಕೆ (NW) ದೂರೀಕರಿಸಲಾಯಿತು. ಅವನು ತನ್ನ ಪಾತಕಕ್ಕಾಗಿ ಯಾವುದೇ ಯಥಾರ್ಥವಾದ ಪಶ್ಚಾತ್ತಾಪವನ್ನು ತೋರಿಸದೆ, ತನಗಾದ ನ್ಯಾಯಸಮ್ಮತವಾದ ಶಿಕ್ಷೆಗಾಗಿ ಮಾತ್ರ ವಿಷಾದಿಸಿದನು.—ಆದಿಕಾಂಡ 4:3-16.
14. ಮಹಾಯಾಜಕ ಏಲಿಯ ಮತ್ತು ಅವನ ಪುತ್ರರ ವಿದ್ಯಮಾನದಲ್ಲಿ, ದೇವರ ಕಡೆಗಿದ್ದ ವೈಯಕ್ತಿಕ ಉತ್ತರವಾದಿತ್ವವು ಹೇಗೆ ಚಿತ್ರಿಸಲ್ಪಟ್ಟಿತು?
14 ಇಸ್ರಾಯೇಲಿನ ಮಹಾಯಾಜಕನಾಗಿದ್ದ ಏಲಿಯ ವಿದ್ಯಮಾನದಲ್ಲಿಯೂ ದೇವರ ಕಡೆಗಿರುವ ಒಬ್ಬನ ವೈಯಕ್ತಿಕ ಉತ್ತರವಾದಿತ್ವವು ಚಿತ್ರಿಸಲ್ಪಡುತ್ತದೆ. ಅವನ ಪುತ್ರರಾದ ಹೊಫ್ನಿ ಮತ್ತು ಫೀನೆಹಾಸ್, ಪೌರೋಹಿತ್ಯ ನಡೆಸುವ ಯಾಜಕರಾಗಿ ಸೇವೆಮಾಡುತ್ತಿದ್ದರೂ, “ಅವರು ಮನುಷ್ಯರ ಕಡೆಗೆ ಅನ್ಯಾಯದ ಮತ್ತು ದೇವರ ಕಡೆಗೆ ಅಶ್ರದ್ಧೆಯ ದೋಷವಿದ್ದವರೂ ಆಗಿದ್ದು, ಯಾವುದೇ ರೀತಿಯ ದುಷ್ಟತ್ವವನ್ನು ವಿಸರ್ಜಿಸಿದವರಾಗಿರಲಿಲ್ಲ,” ಎನ್ನುತ್ತಾನೆ ಇತಿಹಾಸಕಾರ ಜೋಸೀಫಸನು. ಈ “ಬಹುದುಷ್ಟ”ರು ಯೆಹೋವನನ್ನು ಅಂಗೀಕರಿಸದೆ, ಅಪವಿತ್ರ ನಡತೆಯಲ್ಲಿ ಭಾಗವಹಿಸಿ, ಅಶ್ಲೀಲ ಅನೈತಿಕತೆಯ ದೋಷಿಗಳಾದರು. (1 ಸಮುವೇಲ 1:3; 2:12-17, 22-25) ಅವರ ತಂದೆ ಮತ್ತು ಇಸ್ರಾಯೇಲಿನ ಮಹಾಯಾಜಕನೋಪಾದಿ ಏಲಿಯನಿಗೆ ಅವರನ್ನು ಶಿಸ್ತಿಗೊಳಪಡಿಸುವ ಕರ್ತವ್ಯವಿದ್ದರೂ ಅವನು ಅವರನ್ನು ಸೌಮ್ಯವಾಗಿ ಗದರಿಸಿದನು, ಅಷ್ಟೆ. ಏಲಿಯು ‘ಯೆಹೋವನಿಗಿಂತ ಹೆಚ್ಚಾಗಿ ತನ್ನ ಪುತ್ರರನ್ನು ಗೌರವಿಸಿದನು.’ (1 ಸಮುವೇಲ 2:29) ಏಲಿಯ ಮನೆತನಕ್ಕೆ ಪ್ರತೀಕಾರವು ಬಂದಿತು. ಪುತ್ರರಿಬ್ಬರೂ ತಮ್ಮ ತಂದೆಯು ಸತ್ತ ದಿನವೇ ಸತ್ತುಹೋದರು, ಮತ್ತು ಅವರ ಯಾಜಕ ವಂಶವು ಕೊನೆಗೆ ಪೂರ್ತಿಯಾಗಿ ಕೊನೆಗಾಣಿಸಲ್ಪಟ್ಟಿತು. ಹೀಗೆ ಲೆಕ್ಕವು ತೀರಿಸಲ್ಪಟ್ಟಿತು.—1 ಸಮುವೇಲ 3:13, 14; 4:11, 17, 18.
15. ರಾಜ ಸೌಲನ ಪುತ್ರನಾದ ಯೋನಾತಾನನಿಗೆ ಪ್ರತಿಫಲ ಕೊಡಲ್ಪಟ್ಟದ್ದೇಕೆ?
15 ರಾಜ ಸೌಲನ ಮಗನಾದ ಯೋನಾತಾನನಿಂದ ತೀರ ವಿಭಿನ್ನವಾದ ಮಾದರಿಯೊಂದು ಇಡಲ್ಪಟ್ಟಿತು. ದಾವೀದನು ಗೊಲ್ಯಾತನನ್ನು ಕೊಂದ ಸ್ವಲ್ಪದರಲ್ಲಿ, “ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು,” ಮತ್ತು ಅವರು ಮಿತ್ರತ್ವದ ಒಡಂಬಡಿಕೆಯೊಂದನ್ನು ಮಾಡಿಕೊಂಡರು. (1 ಸಮುವೇಲ 18:1, 3) ದೇವರಾತ್ಮವು ಸೌಲನನ್ನು ಬಿಟ್ಟುಹೋಗಿದೆಯೆಂದು ಯೋನಾತಾನನು ವಿವೇಚಿಸಿದ್ದಿರಬಹುದಾದರೂ, ಸತ್ಯಾರಾಧನೆಗಿದ್ದ ಅವನ ಸ್ವಂತ ಹುರುಪು ಕುಂದದೆ ಉಳಿಯಿತು. (1 ಸಮುವೇಲ 16:14) ದಾವೀದನ ದೇವದತ್ತ ಅಧಿಕಾರಕ್ಕಾಗಿದ್ದ ಯೋನಾತಾನನ ಗಣ್ಯತೆಯು ಎಂದೂ ತಡವರಿಸಲಿಲ್ಲ. ಯೋನಾತಾನನು ದೇವರ ಕಡೆಗೆ ತನಗಿದ್ದ ಉತ್ತರವಾದಿತ್ವವನ್ನು ಗ್ರಹಿಸಿದನು, ಮತ್ತು ಅವನ ಗೌರವಪೂರ್ಣ ನಡವಳಿಕೆಗಾಗಿ, ಅವನ ಕುಟುಂಬವು ಅನೇಕ ಸಂತತಿಗಳ ವರೆಗೆ ಮುಂದುವರಿಯುವುದೆಂಬ ಆಶ್ವಾಸನೆಯ ಮೂಲಕ ಯೆಹೋವನು ಅವನಿಗೆ ಪ್ರತಿಫಲಕೊಟ್ಟನು.—1 ಪೂರ್ವಕಾಲವೃತ್ತಾಂತ 8:33-40.
ಕ್ರೈಸ್ತ ಸಭೆಯಲ್ಲಿ ಉತ್ತರವಾದಿತ್ವ
16. ತೀತನು ಯಾರಾಗಿದ್ದನು, ಮತ್ತು ಅವನು ತನ್ನ ವಿಷಯದಲ್ಲಿ ದೇವರಲ್ಲಿ ಉತ್ತಮ ಅಭಿಪ್ರಾಯವನ್ನು ಮೂಡಿಸಿದನೆಂದು ಏಕೆ ಹೇಳಸಾಧ್ಯವಿದೆ?
16 ತಮ್ಮ ವಿಷಯದಲ್ಲಿ ಉತ್ತಮ ಅಭಿಪ್ರಾಯವನ್ನು ಮೂಡಿಸಿದ ಅನೇಕ ಮಂದಿ ಪುರುಷ ಮತ್ತು ಸ್ತ್ರೀಯರನ್ನು ಕ್ರೈಸ್ತ ಗ್ರೀಕ್ ಶಾಸ್ತ್ರವು ಪ್ರಶಂಸಿಸುತ್ತದೆ. ಉದಾಹರಣೆಗೆ, ತೀತನೆಂಬ ಗ್ರೀಕ್ ಕ್ರೈಸ್ತನೊಬ್ಬನಿದ್ದನು. ಪೌಲನು ಕುಪ್ರಕ್ಕೆ ಮಾಡಿದ ಮೊದಲ ಮಿಷನೆರಿ ಪ್ರಯಾಣದಲ್ಲಿ ಅವನು ಕ್ರೈಸ್ತನಾದನೆಂದು ಸೂಚಿಸಲ್ಪಟ್ಟಿದೆ. ಸಾ.ಶ. 33ರ ಪಂಚಾಶತ್ತಮದ ಸಮಯದಲ್ಲಿ ಕುಪ್ರದಿಂದ ಹೋಗಿದ್ದ ಯೆಹೂದ್ಯರೂ, ಮತಾವಲಂಬಿಗಳೂ ಯೆರೂಸಲೇಮಿನಲ್ಲಿ ಇದ್ದಿರಬಹುದಾದುದರಿಂದ, ಕ್ರೈಸ್ತತ್ವವು ಆ ದ್ವೀಪವನ್ನು ಅದಾಗಿ ಸ್ವಲ್ಪ ಸಮಯದ ನಂತರ ತಲಪಿದ್ದಿರಬಹುದು. (ಅ. ಕೃತ್ಯಗಳು 11:19) ಆದಾಗಲೂ, ತೀತನು ಪೌಲನ ನಂಬಿಗಸ್ತ ಜೊತೆ ಕೆಲಸಗಾರರಲ್ಲಿ ಒಬ್ಬನಾಗಿ ಪರಿಣಮಿಸಿದನು. ಸುಮಾರು ಸಾ.ಶ. 49ರಲ್ಲಿ ಸುನ್ನತಿಯ ಕುರಿತ ಪ್ರಧಾನ ವಿವಾದಾಂಶವು ಇತ್ಯರ್ಥವಾದಾಗ, ಯೆರೂಸಲೇಮಿಗೆ ಮಾಡಿದ ಪ್ರಯಾಣದಲ್ಲಿ ಅವನು ಪೌಲ ಮತ್ತು ಬಾರ್ನಬರ ಜೊತೆಗೆ ಹೋದನು. ತೀತನಿಗೆ ಸುನ್ನತಿಯಾಗಿರಲಿಲ್ಲವೆಂಬ ನಿಜತ್ವವು, ಕ್ರೈಸ್ತ ಮತಾಂತರಿಗಳು ಮೋಶೆಯ ಧರ್ಮಶಾಸ್ತ್ರದ ಕೆಳಗಿರಬಾರದು ಎಂಬ ಪೌಲನ ವಾದಕ್ಕೆ ಬೆಂಬಲವನ್ನು ಕೂಡಿಸಿತು. (ಗಲಾತ್ಯ 2:1-3) ತೀತನ ಉತ್ತಮ ತೆರದ ಶುಶ್ರೂಷೆಯನ್ನು ಶಾಸ್ತ್ರವು ದೃಢೀಕರಿಸುತ್ತದೆ, ಮತ್ತು ಪೌಲನು ಒಂದು ದೈವಿಕವಾಗಿ ಪ್ರೇರಿಸಲ್ಪಟ್ಟ ಪತ್ರವನ್ನೂ ಅವನಿಗೆ ನಿರ್ದೇಶಿಸಿದನು. (2 ಕೊರಿಂಥ 7:6; ತೀತ 1:1-4) ತನ್ನ ಭೂಜೀವನದ ಅತಿ ಅಂತ್ಯದ ವರೆಗೂ, ತೀತನು ತನ್ನ ವಿಷಯವಾಗಿ ದೇವರಿಗೆ ಉತ್ತಮವಾದೊಂದು ಅಭಿಪ್ರಾಯವನ್ನು ಕೊಡುತ್ತ ಮುಂದುವರಿದನೆಂಬುದು ಸ್ಪಷ್ಟ.
17. ತಿಮೊಥೆಯನು ಯಾವ ಲೆಕ್ಕವನ್ನು ಒಪ್ಪಿಸಿದನು, ಮತ್ತು ಈ ಮಾದರಿಯು ನಮ್ಮ ಮೇಲೆ ಹೇಗೆ ಪ್ರಭಾವ ಬೀರಬಲ್ಲದು?
17 ತನ್ನ ವಿಷಯವಾಗಿ ಯೆಹೋವ ದೇವರಲ್ಲಿ ಸ್ವೀಕಾರಯೋಗ್ಯವಾದ ಅಭಿಪ್ರಾಯವನ್ನು ಮೂಡಿಸಿದ ಇನ್ನೊಬ್ಬ ಹುರುಪಿನ ವ್ಯಕ್ತಿಯು ತಿಮೊಥೆಯನು. ತಿಮೊಥೆಯನಿಗೆ ಕೆಲವು ಆರೋಗ್ಯ ಸಮಸ್ಯೆಗಳಿದ್ದರೂ, ‘ಯಾವ ಕಪಟವೂ ಇಲ್ಲದ ನಂಬಿಕೆಯನ್ನು’ (NW) ಅವನು ಪ್ರದರ್ಶಿಸಿ, ‘ಸುವಾರ್ತಾಪ್ರಚಾರಕ್ಕಾಗಿ ಪೌಲನೊಂದಿಗೆ ಕಷ್ಟಪಟ್ಟು ಕೆಲಸ ಮಾಡಿದನು.’ ಆ ಕಾರಣದಿಂದ ಅಪೊಸ್ತಲನು ಫಿಲಿಪ್ಪಿಯ ಜೊತೆ ಕ್ರೈಸ್ತರಿಗೆ ಹೀಗೆ ಬರೆಯಶಕ್ತನಾದನು: “ಅವನ [ತಿಮೊಥೆಯನ] ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.” (2 ತಿಮೊಥೆಯ 1:5; ಫಿಲಿಪ್ಪಿ 2:20, 22; 1 ತಿಮೊಥೆಯ 5:23) ಮಾನವ ದೌರ್ಬಲ್ಯಗಳು ಮತ್ತು ಇತರ ಪರೀಕ್ಷೆಗಳ ಎದುರಿನಲ್ಲಿ, ನಮಗೂ ಕಪಟರಹಿತವಾದ ನಂಬಿಕೆಯಿರಬಲ್ಲದು, ಮತ್ತು ನಾವು ದೇವರಿಗೆ ನಮ್ಮ ವಿಷಯದಲ್ಲಿ ಸ್ವೀಕಾರಯೋಗ್ಯವಾದ ಅಭಿಪ್ರಾಯವನ್ನು ಮೂಡಿಸಬಲ್ಲೆವು.
18. ಲುದ್ಯಳು ಯಾರಾಗಿದ್ದಳು, ಮತ್ತು ಆಕೆ ಯಾವ ಮನೋಭಾವವನ್ನು ಪ್ರದರ್ಶಿಸಿದಳು?
18 ಲುದ್ಯಳು ತನ್ನ ವಿಷಯವಾಗಿ ದೇವರಲ್ಲಿ ಉತ್ತಮವಾದ ಅಭಿಪ್ರಾಯವನ್ನು ಮೂಡಿಸಿದ ದೇವಭಕ್ತೆಯಾದ ಸ್ತ್ರೀಯೆಂಬುದು ಸ್ಪಷ್ಟ. ಆಕೆಯೂ ಆಕೆಯ ಕುಟುಂಬವೂ, ಸುಮಾರು ಸಾ.ಶ. 50ರಲ್ಲಿ ಫಿಲಿಪ್ಪಿಯಲ್ಲಿ ಪೌಲನ ಚಟುವಟಿಕೆಯ ಕಾರಣ ಯೂರೋಪಿನಲ್ಲಿ ಕ್ರೈಸ್ತತ್ವವನ್ನು ಅವಲಂಬಿಸಿದವರಲ್ಲಿ ಮೊದಲಿಗರಾಗಿದ್ದರು. ಥುವತೈರದ ನಿವಾಸಿಯಾಗಿದ್ದ ಲುದ್ಯಳು ಪ್ರಾಯಶಃ ಒಬ್ಬ ಯೆಹೂದಿ ಮತಾವಲಂಬಿಯಾಗಿದ್ದಳು, ಆದರೆ ಫಿಲಿಪ್ಪಿಯಲ್ಲಿ ಕೊಂಚ ಜನ ಯೆಹೂದ್ಯರು ಇದ್ದಿದ್ದಿರಬಹುದು ಮತ್ತು ಸಭಾಮಂದಿರವೇ ಇರಲಿಲ್ಲ. ಪೌಲನು ಅವರೊಂದಿಗೆ ಮಾತನಾಡಿದಾಗ ಆಕೆಯೂ ಇತರ ಭಕ್ತೆಯರಾದ ಸ್ತ್ರೀಯರೂ ಒಂದು ನದಿಯ ಬಳಿ ಕೂಡಿ ಬರುತ್ತಿದ್ದರು. ಇದರ ಪರಿಣಾಮವಾಗಿ, ಲುದ್ಯಳು ಕ್ರೈಸ್ತಳಾಗಿ ಪೌಲನೂ ಅವನ ಸಂಗಾತಿಗಳೂ ಆಕೆಯೊಂದಿಗೆ ತಂಗುವಂತೆ ಅವರನ್ನು ಒಡಂಬಡಿಸಿದಳು. (ಅ. ಕೃತ್ಯಗಳು 16:12-15) ಲುದ್ಯಳು ತೋರಿಸಿದ ಅತಿಥಿಸತ್ಕಾರವು ಸತ್ಯ ಕ್ರೈಸ್ತರನ್ನು ಪ್ರತ್ಯೇಕಿಸುವ ವಿಶೇಷ ಚಿಹ್ನೆಯಾಗಿ ಉಳಿದಿದೆ.
19. ದೊರ್ಕಳು ಯಾವ ಸುಕೃತ್ಯಗಳ ಮೂಲಕ ತನ್ನ ವಿಷಯದಲ್ಲಿ ದೇವರಿಗೆ ಉತ್ತಮ ಅಭಿಪ್ರಾಯವನ್ನು ಕೊಟ್ಟಳು?
19 ದೊರ್ಕಳು ಯೆಹೋವ ದೇವರಿಗೆ ತನ್ನ ವಿಷಯವಾಗಿ ಉತ್ತಮ ಅಭಿಪ್ರಾಯವನ್ನು ಮೂಡಿಸಿದ ಇನ್ನೊಬ್ಬ ಸ್ತ್ರೀಯಾಗಿದ್ದಳು. ಆಕೆ ಸತ್ತಾಗ, ಯೊಪ್ಪದಲ್ಲಿ ಜೀವಿಸುತ್ತಿದ್ದ ಶಿಷ್ಯರ ವಿನಂತಿಗೆ ಪ್ರತ್ಯುತ್ತರವಾಗಿ, ಪೇತ್ರನು ಅಲ್ಲಿಗೆ ಹೋದನು. ಪೇತ್ರನನ್ನು ಎದುರುಗೊಂಡ ಇಬ್ಬರು ಪುರುಷರು, “ಅವನನ್ನು ಮೇಲಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ವಿಧವೆಯರೆಲ್ಲರು ಅಳುತ್ತಾ ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ ಮೇಲಂಗಿಗಳನ್ನೂ ತೋರಿಸಿದರು.” ದೊರ್ಕಳನ್ನು ಉಜ್ಜೀವಿಸಲಾಯಿತು. ಆದರೆ ಆಕೆಯ ಉದಾತ್ತ ಮನೋಭಾವಕ್ಕಾಗಿ ಮಾತ್ರವೇ ಆಕೆಯನ್ನು ಜ್ಞಾಪಿಸಿಕೊಳ್ಳಬೇಕೊ? ಇಲ್ಲ. ಆಕೆ ಒಬ್ಬ “ಶಿಷ್ಯಳು” ಆಗಿದ್ದಳು, ಮತ್ತು ನಿಶ್ಚಯವಾಗಿ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಸ್ವತಃ ಭಾಗವಹಿಸಿದಳು. ಕ್ರೈಸ್ತ ಸ್ತ್ರೀಯರು ಇಂದು ತದ್ರೀತಿ, ‘ಸತ್ಕ್ರಿಯೆ ಮತ್ತು ದಾನಧರ್ಮಗಳಲ್ಲಿ ಪ್ರಬಲರು’ ಆಗಿರುತ್ತಾರೆ. ರಾಜ್ಯದ ಸುವಾರ್ತೆಯನ್ನು ಪ್ರಕಟಿಸುವುದರಲ್ಲಿ ಮತ್ತು ಶಿಷ್ಯರನ್ನಾಗಿ ಮಾಡುವುದರಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವುದರಲ್ಲಿಯೂ ಅವರು ಸಂತೋಷಿಸುತ್ತಾರೆ.—ಅ. ಕೃತ್ಯಗಳು 9:36-42; ಮತ್ತಾಯ 24:14; 28:19, 20.
20. ನಾವು ನಮ್ಮಲ್ಲಿ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?
20 ಪರಮಾಧಿಕಾರಿ ಕರ್ತನಾದ ಯೆಹೋವನಿಗೆ ರಾಷ್ಟ್ರಗಳೂ ಒಬ್ಬೊಬ್ಬ ವ್ಯಕ್ತಿಗಳೂ ಲೆಕ್ಕವನ್ನೊಪ್ಪಿಸಬೇಕೆಂದು ಬೈಬಲು ಸ್ಪಷ್ಟವಾಗಿ ತೋರಿಸುತ್ತದೆ. (ಚೆಫನ್ಯ 1:7) ನಾವು ದೇವರಿಗೆ ಸಮರ್ಪಿತರಾಗಿರುವಲ್ಲಿ, ನಾವು ಆ ಕಾರಣದಿಂದ ನಮ್ಮನ್ನು, ‘ನಾನು ನನ್ನ ದೇವದತ್ತ ಸುಯೋಗಗಳನ್ನೂ ಜವಾಬ್ದಾರಿಗಳನ್ನೂ ಹೇಗೆ ವೀಕ್ಷಿಸುತ್ತೇನೆ? ಯೆಹೋವ ದೇವರಿಗೂ ಯೇಸು ಕ್ರಿಸ್ತನಿಗೂ ನಾನು ನನ್ನ ವಿಷಯದಲ್ಲಿ ಯಾವ ಅಭಿಪ್ರಾಯವನ್ನು ಕೊಡುತ್ತಿದ್ದೇನೆ?’ ಎಂದು ಕೇಳಿಕೊಳ್ಳಬಹುದು.
ನಿಮ್ಮ ಉತ್ತರಗಳೇನು?
▫ ದೇವದೂತರೂ ದೇವರ ಪುತ್ರನೂ ಯೆಹೋವನಿಗೆ ಉತ್ತರವಾದಿಗಳೆಂಬುದನ್ನು ನೀವು ಹೇಗೆ ರುಜುಪಡಿಸುವಿರಿ?
▫ ದೇವರು ರಾಷ್ಟ್ರಗಳನ್ನು ಉತ್ತರವಾದಿಗಳಾಗಿ ಮಾಡುತ್ತಾನೆಂಬುದನ್ನು ತೋರಿಸಲು ಯಾವ ಬೈಬಲ್ ಉದಾಹರಣೆಗಳಿವೆ?
▫ ದೇವರಿಗೆ ಕೊಡಲ್ಪಡುವ ವೈಯಕ್ತಿಕ ಉತ್ತರವಾದಿತ್ವದ ಕುರಿತು ಬೈಬಲು ಏನನ್ನುತ್ತದೆ?
▫ ಯೆಹೋವ ದೇವರಿಗೆ ಉತ್ತಮ ಅಭಿಪ್ರಾಯವನ್ನು ಕೊಟ್ಟ ಬೈಬಲ್ ದಾಖಲೆಯ ಕೆಲವು ವ್ಯಕ್ತಿಗಳಾರು?
[ಪುಟ 10 ರಲ್ಲಿರುವ ಚಿತ್ರ]
ಯೇಸು ಕ್ರಿಸ್ತನು ತನ್ನ ವಿಷಯದಲ್ಲಿ ತನ್ನ ಸ್ವರ್ಗೀಯ ತಂದೆಗೆ ಉತ್ತಮ ಅಭಿಪ್ರಾಯವನ್ನು ಕೊಟ್ಟನು
[ಪುಟ 15 ರಲ್ಲಿರುವ ಚಿತ್ರ]
ದೊರ್ಕಳಂತೆ, ಇಂದು ಕ್ರೈಸ್ತ ಸ್ತ್ರೀಯರು ತಮ್ಮ ವಿಷಯದಲ್ಲಿ ಯೆಹೋವ ದೇವರಿಗೆ ಒಳ್ಳೆಯ ಅಭಿಪ್ರಾಯವನ್ನು ಕೊಡುತ್ತಾರೆ
[ಪುಟ 13 ರಲ್ಲಿರುವ ಚಿತ್ರ ಕೃಪೆ]
The Death of Abel/The Doré Bible Illustrations/Dover Publications, Inc.