ಅದು ಸಾರುವಿಕೆಗೆ ಒಂದು ಅಡಚಣೆಯಾಗಿದೆಯೋ?
1 ಅಧಿಕಾಂಶ ಜನರು ಕಾರ್ಯಮಗ್ನ ಜೀವಿತಗಳನ್ನು ನಡೆಸುತ್ತಾರೆ. ಮತ್ತು ಅತಿ ಹೆಚ್ಚು ಕಾರ್ಯಮಗ್ನರಾಗಿರುವವರಲ್ಲಿ ಯೆಹೋವನ ಸಾಕ್ಷಿಗಳು ಸೇರಿದ್ದಾರೆ. ಏಕೆಂದರೆ ಅವರು ದೇವರ ವಾಕ್ಯವನ್ನು ಅಭ್ಯಾಸಿಸುತ್ತಾರೆ, ಸಭಾ ಕೂಟಗಳಿಗೆ ಹಾಜರಾಗುತ್ತಾರೆ, ಮತ್ತು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುತ್ತಾರೆ. ಅದರೊಟ್ಟಿಗೆ, ಐಹಿಕ ಕೆಲಸ, ಮನೆಕೆಲಸ ಅಥವಾ ಶಾಲಾಕೆಲಸ, ಮತ್ತು ಇನ್ನೂ ಅನೇಕ ಜವಾಬ್ದಾರಿಗಳನ್ನು ನೋಡಿಕೊಳ್ಳುವುದರಲ್ಲಿ ನಾವು ಕಾರ್ಯಮಗ್ನರಾಗಿದ್ದೇವೆ; ಇವೆಲ್ಲವೂ ಸಮಯವನ್ನು ತೆಗೆದುಕೊಳ್ಳುತ್ತವೆ. ಇದು ವಿಶೇಷವಾಗಿ ಕುಟುಂಬದ ತಲೆಗಳಿಗೆ ಪಂಥಾಹ್ವಾನದಾಯಕವಾಗಿದೆ.
2 ಅನೇಕ ಸ್ಥಳಗಳಲ್ಲಿರುವ ಅಹಿತಕರವಾದ ಆರ್ಥಿಕ ಸ್ಥಿತಿಗಳಿಂದಾಗಿ, ಜೀವನದ ಆವಶ್ಯಕತೆಗಳನ್ನು ಒದಗಿಸಲಿಕ್ಕಾಗಿ ಕುಟುಂಬದ ತಲೆಗಳು ಅನೇಕಾನೇಕ ತಾಸುಗಳ ವರೆಗೆ ಕಷ್ಟಪಟ್ಟು ದುಡಿಯಬೇಕಾಗಿರಬಹುದು. ಪ್ರಯಾಸಕರವಾದ ಉದ್ಯೋಗಗಳು ಅವರ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುವಾಗ, ಸಾರುವ ಕೆಲಸಕ್ಕಾಗಿ ಅವರ ಬಳಿ ಉಳಿಯುವ ಸಮಯವು ಕೊಂಚವೇ. ತಮ್ಮ ಕುಟುಂಬಗಳಿಗೆ ಭೌತಿಕವಾಗಿ ಒದಗಿಸುವ ಕರ್ತವ್ಯ ತಮಗಿರುವುದರಿಂದ, ತಾವು ಶುಶ್ರೂಷೆಯಲ್ಲಿ ಕೇವಲ ಸ್ವಲ್ಪ ಕೆಲಸವನ್ನು ಮಾಡಸಾಧ್ಯವಿದೆ ಎಂಬುದಾಗಿ ಕೆಲವರಿಗೆ ಅನಿಸಬಹುದು. (1 ತಿಮೊ. 5:8) ಇಂದು ಜೀವನದ ಆವಶ್ಯಕತೆಗಳನ್ನು ಗಳಿಸುವುದರಲ್ಲಿ ಅನೇಕ ಒತ್ತಡಗಳಿವೆ ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ಆದರೆ, ಒಬ್ಬನ ಐಹಿಕ ಕೆಲಸವು ಸುವಾರ್ತೆಯನ್ನು ಸಾರುವುದಕ್ಕೆ ಒಂದು ಅಡಚಣೆಯಾಗಿರಬೇಕಾದ ಆವಶ್ಯಕತೆಯಿಲ್ಲ. (ಮಾರ್ಕ 13:10) ಆದುದರಿಂದ, ನಮ್ಮ ಪರಿಸ್ಥಿತಿಯು ನಿಜವಾಗಿಯೂ ಹೇಗಿದೆ ಎಂಬುದನ್ನು ನಾವು ಪರೀಕ್ಷಿಸಿ ನೋಡುವುದು ಒಳ್ಳೇದು.
3 ಪ್ರಪಂಚದ ತೋರಿಕೆಯು ಯಾವಾಗಲೂ ಬದಲಾಗುತ್ತಾ ಇರುವುದರಿಂದ, ಮುಂದೆ ಎದುರಾಗಬಹುದಾದ ಮುಂಗಾಣದಂಥ ಬಿಕ್ಕಟ್ಟುಗಳಿಗಾಗಿ ಹಣವನ್ನು ಶೇಖರಿಸುವ ಉದ್ದೇಶದಿಂದ ಒಬ್ಬ ಕುಟುಂಬದ ತಲೆಯು ತನ್ನ ಉದ್ಯೋಗದಲ್ಲಿ ವಿಪರೀತವಾಗಿ ಸಮಯವನ್ನು ಕಳೆಯುತ್ತಿರಬಹುದು. (1 ಕೊರಿಂ. 7:31) ಹೆಚ್ಚಿನ ಐಹಿಕ ಕೆಲಸವನ್ನು ಮಾಡುವುದು ಅಧಿಕವಾದ ಲೌಕಿಕ ವಸ್ತುಗಳನ್ನು ಅಥವಾ ವಿನೋದ ಮತ್ತು ಮನೋರಂಜನೆಗೆ ಅಧಿಕವಾದ ಅವಕಾಶಗಳನ್ನು ಒದಗಿಸುತ್ತಿರುವಂತೆ ತೋರಬಹುದು. ಆದರೆ ಆತ್ಮಿಕ ಬೆನ್ನಟ್ಟುವಿಕೆಯಲ್ಲಿ ಮತ್ತು ಕೂಟಗಳಿಗೆ ಕ್ರಮವಾಗಿ ಹಾಜರಾಗುವುದರಲ್ಲಿ ಕಳೆಯಬೇಕಾದ ಸಮಯವನ್ನು ಅವುಗಳಿಗೆ ವ್ಯಯಿಸುವುದರಿಂದ ಅದು ಕುಟುಂಬವನ್ನು ಹೆಚ್ಚು ಸಂತೋಷವುಳ್ಳದ್ದಾಗಿ ಮತ್ತು ಸಂತೃಪ್ತಿಯುಳ್ಳದ್ದಾಗಿ ಮಾಡುವುದೋ? ನಮ್ಮ ಆತ್ಮಿಕತೆಗೆ ಬೆದರಿಕೆಯನ್ನೊಡ್ಡುವ ಯಾವುದನ್ನೇ ಆಗಲಿ ನಾವು ಖಂಡಿತವಾಗಿಯೂ ದೂರಮಾಡಬೇಕು. ‘ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಂಡು,’ ‘ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗಿರು’ ಎಂಬ ಯೇಸುವಿನ ಬುದ್ಧಿವಾದವನ್ನು ಪಾಲಿಸುವುದೇ ವಿವೇಕದ ಮಾರ್ಗವಾಗಿದೆ.—ಮತ್ತಾ. 6:19-21; ಲೂಕ 12:15-21.
4 ಮೊದಲು ರಾಜ್ಯದ ಅಭಿರುಚಿಗಳಿಗಾಗಿ ತವಕಪಡಿರಿ: ಎಲ್ಲದಕ್ಕಿಂತಲೂ ಮಿಗಿಲಾಗಿ ಆತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನವನ್ನು ಕೊಡಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಬೋಧಿಸಿದನು. ಅವನು ಅವರನ್ನು ಉತ್ತೇಜಿಸಿದ್ದು: “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ.” ಅವನು ಹಾಗೆ ಹೇಳಿದ್ದೇಕೆ? ಅವನು ವಿವರಿಸಿದ್ದು: “ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ.” ನಮಗೆ ಇದರ ಕುರಿತು ನಿಜವಾಗಿಯೂ ಮನವರಿಕೆಯಾಗಿರುವಲ್ಲಿ, ಯೇಸು ಮುಂದೆ ಏನು ಹೇಳಿದನೋ ಅದನ್ನು ಮಾಡುವುದರಿಂದ ಯಾವುದೇ ಅಡಚಣೆಯು ನಮ್ಮನ್ನು ತಡೆಗಟ್ಟಲಾರದು: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ [ಅಗತ್ಯವಿರುವ ಲೌಕಿಕ ವಿಷಯಗಳು] ನಿಮಗೆ ದೊರಕುವವು.” ಅದನ್ನು ದೇವರು ನೋಡಿಕೊಳ್ಳುವನು! (ಮತ್ತಾ. 6:31-33) ಜೀವನಾಧಾರದ ವಿಷಯದಲ್ಲಿ ಮಿತಿಮೀರಿದ ಚಿಂತೆ ಅಥವಾ ಶೀಘ್ರವೇ ಗತಿಸಿಹೋಗಲಿರುವ ಒಂದು ವಿಷಯ ವ್ಯವಸ್ಥೆಯಲ್ಲಿ ಹಾಯಾಗಿ ನೆಲೆಗೊಳ್ಳುವ ಆಸೆಯಿಂದ ಅಪಕರ್ಷಿತರಾಗಲು ಖಂಡಿತವಾಗಿಯೂ ಇದು ಸಮಯವಲ್ಲ.—1 ಪೇತ್ರ 5:7; 1 ಯೋಹಾ. 2:15-17.
5 ಒಬ್ಬನ ಲೌಕಿಕ ಅಗತ್ಯಗಳನ್ನು ಒದಗಿಸುವುದೇ ಐಹಿಕ ಕೆಲಸದ ಪ್ರಧಾನ ಉದ್ದೇಶವಾಗಿದೆ. ಆದರೆ ನಮಗೆ ಎಷ್ಟು ಅಗತ್ಯವಿದೆ? ಅಪೊಸ್ತಲ ಪೌಲನು ಬರೆದುದು: “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.” ನಾವು ಇದಕ್ಕಿಂತಲೂ ಹೆಚ್ಚಿನದ್ದನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೋ? ಹೌದಾದರೆ, ಪೌಲನು ಯಾವುದರ ಕುರಿತಾಗಿ ಎಚ್ಚರಿಸಿದನೊ ಆ ಪರಿಣಾಮಗಳನ್ನು ನಾವು ಕೊಯ್ಯುತ್ತಿರಬಹುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.” (1 ತಿಮೊ. 6:8, 9; ಮತ್ತಾ. 6:24; ಲೂಕ 14:33) ಮಿತಿಮೀರಿದ ಆಶೆಗಳು ನಮ್ಮನ್ನು ಅಡ್ಡಗಟ್ಟುತ್ತಿವೆಯೊ ಇಲ್ಲವೊ ಎಂಬುದನ್ನು ನಾವು ಹೇಗೆ ಕಂಡುಹಿಡಿಯಬಹುದು?
6 ನಮ್ಮ ಐಹಿಕ ಬೆನ್ನಟ್ಟುವಿಕೆಗಳಿಂದಾಗಿ ನಾವು ಕ್ಷೇತ್ರ ಸೇವೆಯಲ್ಲಿ ಕೇವಲ ಅಲ್ಪಪ್ರಮಾಣದಲ್ಲಿ ಭಾಗವಹಿಸುತ್ತಿರುವುದಾದರೆ ಅಥವಾ ಸುವಾರ್ತೆಗೋಸ್ಕರ ತ್ಯಾಗಗಳನ್ನು ಮಾಡಬೇಕಾದ ಅಗತ್ಯವನ್ನು ಗ್ರಹಿಸಲು ತಪ್ಪಿಹೋಗುತ್ತಿರುವುದಾದರೆ, ಆಗ ನಮ್ಮ ಆದ್ಯತೆಗಳನ್ನು ಸರಿಹೊಂದಿಸಬೇಕಾದ ಆವಶ್ಯಕತೆಯಿದೆ. (ಇಬ್ರಿ. 13:15, 16) ಹೆಚ್ಚು ನಿರಾಡಂಬರದ ಜೀವನ ಶೈಲಿಯು, ನಮ್ಮ ಸಾರುವಿಕೆಗೆ ಬರುವ ಈ ಅಡಚಣೆಯನ್ನು ತೆಗೆದುಹಾಕಲು ನಮಗೆ ಮಹತ್ತರವಾಗಿ ಸಹಾಯಮಾಡುವುದು. ನಮ್ಮ ಸಮಯ ಮತ್ತು ಶಕ್ತಿಯನ್ನು ಉಪಯೋಗಿಸುವ ವಿಷಯದಲ್ಲಿ, ರಾಜ್ಯದ ಅಭಿರುಚಿಗಳಿಗೆ ಯಾವಾಗಲೂ ಮೊದಲ ಆದ್ಯತೆ ಸಿಗಬೇಕು.
7 ನಿಷ್ಫಲವಾಗದ ಪ್ರಯಾಸ: ‘ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರುವಂತೆ’ ಪೌಲನ ಮಾತುಗಳು ನಮ್ಮನ್ನು ಪ್ರೋತ್ಸಾಹಿಸುತ್ತವೆ. (1 ಕೊರಿಂ. 15:58) “ಕರ್ತನ ಕೆಲಸ”ದಲ್ಲಿ ಪ್ರಧಾನವಾದದ್ದು, ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವಾಗಿದೆ. (ಮತ್ತಾ. 24:14; 28:19, 20) ಸಾಧ್ಯವಿರುವಷ್ಟು ಸಂಪೂರ್ಣವಾಗಿ ಪಾಲ್ಗೊಳ್ಳಲು, ಪ್ರತಿ ವಾರ ಕ್ಷೇತ್ರ ಸೇವೆಗಾಗಿ ನಾವು ಸಮಯವನ್ನು ಶೆಡ್ಯೂಲ್ ಮಾಡಬೇಕು ಮತ್ತು ಆ ಸಮಯವನ್ನು ಬೇರಾವುದೇ ಕೆಲಸಕ್ಕಾಗಿ ಉಪಯೋಗಿಸದಿರಲು ಪ್ರಯಾಸಪಡಬೇಕು. (ಎಫೆ. 5:15-17) ಆಗ, ಐಹಿಕ ಕೆಲಸವಾಗಲಿ ಇನ್ನಾವುದೇ ವಿಷಯವಾಗಲಿ ನಮ್ಮ ಶುಶ್ರೂಷೆಗೆ ಒಂದು ಅಡಚಣೆಯಾಗುವುದಿಲ್ಲ.
8 ಬೈಬಲ್ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ನಮ್ಮನ್ನೇ ನಾವು ನೀಡಿಕೊಳ್ಳುವಾಗ, ಕೊಡುವುದರಿಂದ ಸಿಗುವ ಅತಿ ಶ್ರೇಷ್ಠ ಗುಣಮಟ್ಟದ ಸಂತೋಷವನ್ನು ನಾವು ಅನುಭವಿಸುವೆವು. (ಅ. ಕೃ. 20:35) ರಾಜ್ಯ ಸಾರುವಿಕೆಯ ಕೆಲಸವನ್ನು ಬೆನ್ನಟ್ಟುವ ಮೂಲಕ, ನಾವು ಭವಿಷ್ಯದೆಡೆಗೆ ದೃಢಭರವಸೆಯಿಂದ ನೋಡಬಹುದು, ಏಕೆಂದರೆ “[ನಮ್ಮ] ಕೆಲಸವನ್ನೂ ಇದರಲ್ಲಿ [ನಾವು] ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”—ಇಬ್ರಿ. 6:10.