ಕುಟುಂಬಗಳೇ, ದೇವರ ಸಭೆಯ ಭಾಗದೋಪಾದಿ ಆತನನ್ನು ಸ್ತುತಿಸಿರಿ
“ಕೂಡಿದ ಸಭೆಗಳಲ್ಲಿ ಯೆಹೋವನನ್ನು ಕೊಂಡಾಡುವೆನು.”—ಕೀರ್ತನೆ 26:12.
1. ಮನೆಯಲ್ಲಿ ಅಧ್ಯಯನ ಹಾಗೂ ಪ್ರಾರ್ಥನೆಯ ಜೊತೆಗೆ, ಸತ್ಯಾರಾಧನೆಯ ಪ್ರಮುಖವಾದ ಭಾಗವು ಯಾವುದಾಗಿದೆ?
ಯೆಹೋವನ ಆರಾಧನೆಯು, ಮನೆಯಲ್ಲಿ ಪ್ರಾರ್ಥನೆ ಮತ್ತು ಬೈಬಲಿನ ಅಧ್ಯಯನವನ್ನು ಮಾತ್ರವಲ್ಲ, ದೇವರ ಸಭೆಯ ಭಾಗದೋಪಾದಿ ಚಟುವಟಿಕೆಯನ್ನೂ ಒಳಗೊಳ್ಳುತ್ತದೆ. ಪುರಾತನ ಇಸ್ರಾಯೇಲ್ಯರು ದೇವರ ನಿಯಮವನ್ನು ಕಲಿತು, ಆತನ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುವಂತೆ, ಜನರೆಲ್ಲರನ್ನು, ಅಂದರೆ “ಸ್ತ್ರೀಪುರುಷರನ್ನೂ ಮಕ್ಕಳನ್ನೂ . . . ಕೂಡಿಸ”ಬೇಕೆಂದು ಆಜ್ಞಾಪಿಸಲ್ಪಟ್ಟರು. (ಧರ್ಮೋಪದೇಶಕಾಂಡ 31:12; ಯೆಹೋಶುವ 8:35) ಯೆಹೋವನ ನಾಮವನ್ನು ಸ್ತುತಿಸುವುದರಲ್ಲಿ ವೃದ್ಧರು ಮತ್ತು ‘ಪ್ರಾಯಸ್ಥರಾದ ಸ್ತ್ರೀಪುರುಷರು,’ ಹೀಗೆ ಎಲ್ಲರೂ ಪಾಲ್ಗೊಳ್ಳುವಂತೆ ಉತ್ತೇಜಿಸಲ್ಪಟ್ಟರು. (ಕೀರ್ತನೆ 148:12, 13) ತದ್ರೀತಿಯ ಏರ್ಪಾಡುಗಳು ಕ್ರೈಸ್ತ ಸಭೆಗೆ ಅನ್ವಯಿಸುತ್ತವೆ. ಭೂಮಿಯಾದ್ಯಂತವಿರುವ ರಾಜ್ಯ ಸಭಾಗೃಹಗಳಲ್ಲಿ, ಸಭಿಕರ ಭಾಗವಹಿಸುವಿಕೆಯನ್ನು ಅವಶ್ಯಪಡಿಸುವ ಕೂಟಗಳಲ್ಲಿ ಸ್ತ್ರೀಪುರುಷರು ಮತ್ತು ಮಕ್ಕಳು ಮುಕ್ತವಾಗಿ ಭಾಗವಹಿಸುತ್ತಾರಲ್ಲದೆ, ಅದರಲ್ಲಿ ಭಾಗವಹಿಸಲು ಸಾಧ್ಯವಾದುದಕ್ಕಾಗಿ ಬಹಳವಾಗಿ ಸಂತೋಷಿಸುತ್ತಾರೆ.—ಇಬ್ರಿಯ 10:23-25.
2. (ಎ) ಎಳೆಯರು ಕೂಟಗಳಲ್ಲಿ ಆನಂದಿಸುವಂತೆ ಸಹಾಯ ಮಾಡುವುದರಲ್ಲಿ, ತಯಾರಿಯು ಏಕೆ ಒಂದು ಮುಖ್ಯ ಅಂಶವಾಗಿದೆ? (ಬಿ) ಯಾರ ಮಾದರಿಯು ಪ್ರಾಮುಖ್ಯವಾಗಿದೆ?
2 ನಿಜ, ಸಭಾ ಚಟುವಟಿಕೆಯ ಹಿತಕರವಾದ ನಿಯತಕ್ರಮವನ್ನು ಎಳೆಯರು ಅನುಸರಿಸುವಂತೆ ಸಹಾಯ ಮಾಡುವುದು ಒಂದು ಪಂಥಾಹ್ವಾನವಾಗಿರಬಲ್ಲದು. ತಮ್ಮ ಹೆತ್ತವರೊಂದಿಗೆ ಹಾಜರಾಗುವ ಕೆಲವು ಮಕ್ಕಳು ಕೂಟಗಳಲ್ಲಿ ಆನಂದಿಸದಿದ್ದರೆ, ಸಮಸ್ಯೆಯು ಏನಾಗಿರಬಹುದು? ಹೆಚ್ಚಿನ ಮಕ್ಕಳು ದೀರ್ಘ ಸಮಯದ ವರೆಗೆ ಗಮನಹರಿಸಲು ಅಸಮರ್ಥರಾಗಿರುವುದರಿಂದ, ಅವರು ಸುಲಭವಾಗಿ ಬೇಸರಗೊಳ್ಳುತ್ತಾರೆ. ಈ ಸಮಸ್ಯೆಯನ್ನು ನಿಭಾಯಿಸಲು ಪೂರ್ವತಯಾರಿಯು ಸಹಾಯ ಮಾಡಬಲ್ಲದು. ತಯಾರಿಯಿಲ್ಲದೆ ಮಕ್ಕಳು ಕೂಟಗಳಲ್ಲಿ ಅರ್ಥಭರಿತವಾಗಿ ಭಾಗವಹಿಸಲು ಸಾಧ್ಯವಿಲ್ಲ. (ಜ್ಞಾನೋಕ್ತಿ 15:23) ತಯಾರಿಯಿಲ್ಲದೆ, ತೃಪ್ತಿದಾಯಕವಾದ ಆತ್ಮಿಕ ಪ್ರಗತಿಯನ್ನು ಮಾಡುವುದು ಅವರಿಗೆ ಕಷ್ಟಕರವಾಗಿರುವುದು. (1 ತಿಮೊಥೆಯ 4:12, 15) ಇದಕ್ಕಾಗಿ ಏನು ಮಾಡಸಾಧ್ಯವಿದೆ? ಹೆತ್ತವರಾದ ತಾವು ಮೊದಲಾಗಿ ಕೂಟಗಳಿಗಾಗಿ ತಯಾರಿಸುತ್ತೇವೊ ಎಂದು ತಮ್ಮನ್ನೇ ಕೇಳಿಕೊಳ್ಳುವ ಅಗತ್ಯವಿದೆ. ಅವರ ಮಾದರಿಯು ಒಂದು ಶಕ್ತಿಶಾಲಿ ಪ್ರಭಾವವಾಗಿದೆ. (ಲೂಕ 6:40) ಕುಟುಂಬ ಅಧ್ಯಯನವನ್ನು ಜಾಗರೂಕವಾಗಿ ಯೋಜಿಸುವುದು ಕೂಡ ಒಂದು ಪ್ರಮುಖ ಅಂಶವಾಗಿರಬಲ್ಲದು.
ಹೃದಯವನ್ನು ಬಲಪಡಿಸುವುದು
3. ಕುಟುಂಬ ಅಧ್ಯಯನದ ಸಮಯದಲ್ಲಿ, ಹೃದಯಗಳನ್ನು ಬಲಪಡಿಸಲು ವಿಶೇಷವಾದ ಪ್ರಯತ್ನವು ಏಕೆ ಮಾಡಲ್ಪಡಬೇಕು, ಮತ್ತು ಇದು ಏನನ್ನು ಅಗತ್ಯಪಡಿಸುತ್ತದೆ?
3 ಕುಟುಂಬ ಅಧ್ಯಯನವು, ಕೇವಲ ತಲೆಯೊಳಗೆ ಜ್ಞಾನವನ್ನು ತುಂಬಿಸುವ ಸಮಯವಾಗಿರದೆ, ಹೃದಯಗಳನ್ನು ಬಲಪಡಿಸುವ ಸಮಯವೂ ಆಗಿರಬೇಕು. ಇದಕ್ಕೆ, ಕುಟುಂಬ ಸದಸ್ಯರು ಎದುರಿಸುವ ಸಮಸ್ಯೆಗಳ ಅರಿವು ಮತ್ತು ಪ್ರತಿಯೊಬ್ಬರಿಗಾಗಿ ಪ್ರೀತಿಪರ ಚಿಂತೆಯು ಅಗತ್ಯ. ಯೆಹೋವನು “ಹೃದಯವನ್ನು ಶೋಧಿಸುವವ”ನಾಗಿದ್ದಾನೆ.—1 ಪೂರ್ವಕಾಲವೃತ್ತಾಂತ 29:17.
4. (ಎ) “ಬುದ್ಧಿಹೀನ”ರಾಗಿರುವುದರ ಅರ್ಥವೇನು? (ಬಿ) “ಹೃದಯವನ್ನು ಸಂಪಾದಿಸು”ವುದರಲ್ಲಿ ಏನು ಒಳಗೂಡಿದೆ?
4 ಯೆಹೋವನು ನಮ್ಮ ಮಕ್ಕಳ ಹೃದಯಗಳನ್ನು ಶೋಧಿಸುವಾಗ ಏನನ್ನು ಕಂಡುಕೊಳ್ಳುತ್ತಾನೆ? ಮಕ್ಕಳಲ್ಲಿ ಹೆಚ್ಚಿನವರು, ತಾವು ದೇವರನ್ನು ಪ್ರೀತಿಸುವುದಾಗಿ ಹೇಳುವರು. ಇದು ಪ್ರಶಂಸನೀಯ. ಆದರೂ, ಒಬ್ಬ ಯುವ ಪ್ರಾಯದವನು ಇಲ್ಲವೆ ಯೆಹೋವನ ಕುರಿತು ಹೊಸದಾಗಿ ಕಲಿಯುತ್ತಿರುವವನು, ಯೆಹೋವನ ಮಾರ್ಗಗಳಲ್ಲಿ ಸೀಮಿತ ಅನುಭವವುಳ್ಳವನಾಗಿದ್ದಾನೆ. ಅವನು ಅನನುಭವಿಯಾಗಿರುವುದರಿಂದ, ಬೈಬಲು ಹೇಳುವಂತೆ “ಬುದ್ಧಿಹೀನ”ನಾಗಿರಬಹುದು. ಅವನ ಎಲ್ಲ ಉದ್ದೇಶಗಳು ಕೆಟ್ಟವು ಎಂಬುದು ಇದರ ಅರ್ಥವಲ್ಲ, ಬದಲಿಗೆ ದೇವರನ್ನು ನಿಜವಾಗಿಯೂ ಮೆಚ್ಚಿಸುವಂತಹ ಸ್ಥಿತಿಗೆ ಒಬ್ಬನ ಹೃದಯವನ್ನು ತರಲು ಸಮಯದ ಅಗತ್ಯವಿದೆ. ಇದು, ಅಪರಿಪೂರ್ಣ ಮಾನವರಿಗೆ ಸಾಧ್ಯವಿರುವಷ್ಟರ ಮಟ್ಟಿಗೆ ತಮ್ಮ ವಿಚಾರಗಳು, ಬಯಕೆಗಳು, ಆಸೆಗಳು, ಭಾವನೆಗಳು, ಮತ್ತು ಜೀವಿತದ ಗುರಿಗಳನ್ನು ದೇವರು ಸಮ್ಮತಿಸುವ ವಿಷಯಕ್ಕೆ ಸರಿಹೊಂದಿಸುವುದನ್ನು ಅಗತ್ಯಪಡಿಸುತ್ತದೆ. ವ್ಯಕ್ತಿಯೊಬ್ಬನು ದೈವಿಕ ಮಾರ್ಗಕ್ಕನುಸಾರ ತನ್ನ ಆಂತರಿಕ ವ್ಯಕ್ತಿತ್ವವನ್ನು ರೂಪಿಸುವಾಗ, ಅವನು “ಬುದ್ಧಿಯನ್ನು [“ಹೃದಯವನ್ನು,” NW] ಸಂಪಾದಿಸುತ್ತಿದ್ದಾನೆ.”—ಜ್ಞಾನೋಕ್ತಿ 9:4; 19:8.
5, 6. ತಮ್ಮ ಮಕ್ಕಳು ‘ಹೃದಯವನ್ನು ಸಂಪಾದಿಸುವಂತೆ’ ಹೆತ್ತವರು ಹೇಗೆ ಸಹಾಯ ಮಾಡಬಲ್ಲರು?
5 ತಮ್ಮ ಮಕ್ಕಳು ‘ಹೃದಯವನ್ನು ಸಂಪಾದಿಸುವಂತೆ’ ಹೆತ್ತವರು ಸಹಾಯ ಮಾಡಬಲ್ಲರೊ? ಯಾವ ಮನುಷ್ಯನೂ ಮತ್ತೊಬ್ಬನಲ್ಲಿ ಹೃದಯದ ಒಳ್ಳೆಯ ಸ್ಥಿತಿಯನ್ನು ಹಾಕಲಾರನೆಂಬುದು ನಿಜ. ನಮ್ಮಲ್ಲಿ ಪ್ರತಿಯೊಬ್ಬರಿಗೆ ಇಚ್ಛಾ ಸ್ವಾತಂತ್ರ್ಯವಿದೆ, ಮತ್ತು ನಾವು ಏನನ್ನು ಯೋಚಿಸುವಂತೆ ಅನುಮತಿಸುತ್ತೇವೊ ಅದರ ಮೇಲೆ ಹೆಚ್ಚಿನದ್ದು ಅವಲಂಬಿಸುತ್ತದೆ. ಆದರೂ, ವಿವೇಚನೆಯನ್ನು ಉಪಯೋಗಿಸುತ್ತಾ ಹೆತ್ತವರು ತಮ್ಮ ಮಗುವಿನ ಹೃದಯದಲ್ಲಿ ಏನಿದೆ ಮತ್ತು ಸಹಾಯದ ಅಗತ್ಯ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಲ್ಲರು. ‘ಇದರ ಕುರಿತು ನಿನಗೇನು ಅನಿಸುತ್ತದೆ?’ ಮತ್ತು ‘ನೀನು ನಿಜವಾಗಿಯೂ ಏನನ್ನು ಮಾಡಬಯಸುವೆ?’ ಎಂಬಂತಹ ಪ್ರಶ್ನೆಗಳನ್ನು ಉಪಯೋಗಿಸಿರಿ. ತದನಂತರ, ತಾಳ್ಮೆಯಿಂದ ಆಲಿಸಿರಿ. ಅತಿಯಾಗಿ ಪ್ರತಿಕ್ರಿಯಿಸಬೇಡಿರಿ. (ಜ್ಞಾನೋಕ್ತಿ 20:5) ಹೃದಯವನ್ನು ತಲಪಬೇಕಾದರೆ, ದಯೆ, ತಿಳುವಳಿಕೆ, ಮತ್ತು ಪ್ರೀತಿಯ ವಾತಾವರಣವು ಪ್ರಾಮುಖ್ಯವಾಗಿದೆ.
6 ಹಿತಕರವಾದ ಪ್ರವೃತ್ತಿಗಳನ್ನು ಬಲಪಡಿಸಲು, ಆತ್ಮದ ಪ್ರತಿಯೊಂದು ಫಲವನ್ನು ಆಗಿಂದಾಗ್ಗೆ ಚರ್ಚಿಸಿ, ಅದನ್ನು ವಿಕಸಿಸಿಕೊಳ್ಳಲು ಕುಟುಂಬವಾಗಿ ಪ್ರಯತ್ನಿಸಿರಿ. (ಗಲಾತ್ಯ 5:22, 23) ಯೆಹೋವ ಮತ್ತು ಯೇಸು ಕ್ರಿಸ್ತನಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಿರಿ. ಕೇವಲ ಅವರನ್ನು ಪ್ರೀತಿಸಬೇಕೆಂದು ಹೇಳುವ ಮೂಲಕವಲ್ಲ, ಬದಲಿಗೆ ನಾವು ಏಕೆ ಅವರನ್ನು ಪ್ರೀತಿಸಬೇಕೆಂಬ ಕಾರಣಗಳನ್ನು ಮತ್ತು ಆ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಸಾಧ್ಯವಿದೆ ಎಂಬುದನ್ನು ಚರ್ಚಿಸುವ ಮೂಲಕವೇ. (2 ಕೊರಿಂಥ 5:14, 15) ಪ್ರತಿಫಲವಾಗಿ ಸಿಗಬಹುದಾದ ಪ್ರಯೋಜನಗಳ ಕುರಿತು ವಿವೇಚಿಸುವ ಮೂಲಕ, ಸರಿಯಾದುದನ್ನು ಮಾಡಬೇಕೆಂಬ ಬಯಕೆಯನ್ನು ಬಲಗೊಳಿಸಿರಿ. ತಪ್ಪಾದ ಆಲೋಚನೆಗಳು, ಮಾತುಕತೆ, ಮತ್ತು ನಡತೆಯ ಕೆಟ್ಟ ಪರಿಣಾಮಗಳನ್ನು ಚರ್ಚಿಸುವ ಮೂಲಕ, ಅವುಗಳನ್ನು ತ್ಯಜಿಸಿಬಿಡುವ ಬಯಕೆಯನ್ನು ಮೂಡಿಸಿರಿ. (ಆಮೋಸ 5:15; 3 ಯೋಹಾನ 11) ನಮ್ಮ ವಿಚಾರಗಳು, ಮಾತುಕತೆ, ಮತ್ತು ನಡತೆಯು ಒಳ್ಳೆಯದಾಗಿರಲಿ ಕೆಟ್ಟದ್ದಾಗಿರಲಿ, ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಅದು ಹೇಗೆ ಬಾಧಿಸಬಲ್ಲದು ಎಂಬುದನ್ನು ತೋರಿಸಿರಿ.
7. ಮಕ್ಕಳು ಸಮಸ್ಯೆಗಳನ್ನು ನಿಭಾಯಿಸುವಂತೆ, ಮತ್ತು ಅವರು ಯೆಹೋವನೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಳ್ಳುವ ನಿರ್ಣಯಗಳನ್ನು ಮಾಡುವಂತೆ ನೆರವು ನೀಡಲು ಏನು ಮಾಡಸಾಧ್ಯವಿದೆ?
7 ಮಗುವಿಗೆ ಒಂದು ಸಮಸ್ಯೆಯಿರುವಾಗ, ಇಲ್ಲವೆ ಅದೊಂದು ಪ್ರಾಮುಖ್ಯವಾದ ನಿರ್ಣಯವನ್ನು ಮಾಡಬೇಕಾದಾಗ, ನಾವು ಹೀಗೆ ಕೇಳಬಹುದು: ‘ಇದನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆಂದು ನೀನು ನೆನಸುತ್ತೀ? ಯೆಹೋವನ ಕುರಿತಾದ ಯಾವ ವಿಷಯವು ನೀನು ಹೀಗೆ ಉತ್ತರಿಸುವಂತೆ ಮಾಡಿತು? ಇದರ ಬಗ್ಗೆ ನೀನು ಆತನಲ್ಲಿ ಪ್ರಾರ್ಥಿಸಿರುವಿಯೊ?’ ಸಾಧ್ಯವಾದಷ್ಟು ಬೇಗನೆ ಆರಂಭಿಸುತ್ತಾ, ಯಾವಾಗಲೂ ದೇವರ ಚಿತ್ತವು ಏನಾಗಿದೆ ಎಂಬುದನ್ನು ಅರಿತು, ಅದಕ್ಕನುಸಾರ ಜೀವಿಸಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುವ ಜೀವಿತದ ನಮೂನೆಯನ್ನು ನಿಮ್ಮ ಮಕ್ಕಳು ಬೆಳೆಸಿಕೊಳ್ಳುವಂತೆ ಸಹಾಯ ಮಾಡಿರಿ. ಯೆಹೋವನೊಂದಿಗೆ ಅವರೊಂದು ಆಪ್ತವಾದ ಹಾಗೂ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡಂತೆ, ಆತನ ಮಾರ್ಗಗಳಲ್ಲಿ ನಡೆಯುವುದನ್ನು ಅವರು ಆನಂದಕರವಾದದ್ದಾಗಿ ಕಂಡುಕೊಳ್ಳುವರು. (ಕೀರ್ತನೆ 119:34, 35) ಇದು, ಸತ್ಯ ದೇವರ ಸಭೆಯೊಂದಿಗೆ ಸಹವಾಸಿಸುವ ಸುಯೋಗಕ್ಕಾಗಿ ಅವರಲ್ಲಿ ಗಣ್ಯತೆಯನ್ನು ಮೂಡಿಸುವುದು.
ಸಭಾ ಕೂಟಗಳಿಗಾಗಿ ತಯಾರಿಸುವುದು
8. (ಎ) ಗಮನಕ್ಕೆ ಯೋಗ್ಯವಾದ ಎಲ್ಲವನ್ನು ನಮ್ಮ ಕುಟುಂಬ ಅಧ್ಯಯನದಲ್ಲಿ ಸೇರಿಸಲು ಯಾವುದು ನಮಗೆ ಸಹಾಯ ಮಾಡಬಹುದು? (ಬಿ) ಈ ಅಧ್ಯಯನವು ಎಷ್ಟು ಪ್ರಾಮುಖ್ಯವಾಗಿದೆ?
8 ಕುಟುಂಬ ಅಧ್ಯಯನದ ಸಮಯದಲ್ಲಿ ಗಮನಹರಿಸಬೇಕಾದ ಹಲವಾರು ವಿಷಯಗಳಿವೆ. ನೀವು ಇವೆಲ್ಲವನ್ನು ಅದರಲ್ಲಿ ಹೇಗೆ ಸರಿಯಾಗಿ ಹೊಂದಿಸುವಿರಿ? ಒಂದೇ ಸಮಯದಲ್ಲಿ ಎಲ್ಲವನ್ನು ಮಾಡುವುದು ಅಸಾಧ್ಯವೇ ಸರಿ. ಒಂದು ತಾಳೆಪಟ್ಟಿ (ಚೆಕ್ಲಿಸ್ಟ್)ಯನ್ನು ಮಾಡುವುದು ಸಹಾಯಕರವಾಗಿದೆಯೆಂದು ನೀವು ಕಂಡುಕೊಳ್ಳಬಹುದು. (ಜ್ಞಾನೋಕ್ತಿ 21:5) ಆಗಿಂದಾಗ್ಗೆ ಅದನ್ನು ಪುನರ್ವಿಮರ್ಶಿಸಿ, ಯಾವ ವಿಷಯಕ್ಕೆ ವಿಶೇಷವಾದ ಗಮನವು ಅಗತ್ಯವೆಂದು ಪರಿಗಣಿಸಿರಿ. ಕುಟುಂಬದ ಪ್ರತಿಯೊಬ್ಬ ಸದಸ್ಯರ ಪ್ರಗತಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿರಿ. ಕುಟುಂಬ ಅಧ್ಯಯನಕ್ಕಾಗಿರುವ ಈ ಏರ್ಪಾಡು, ಕ್ರೈಸ್ತ ಶಿಕ್ಷಣದ ಒಂದು ಮುಖ್ಯ ಭಾಗವಾಗಿದ್ದು, ನಮ್ಮನ್ನು ಸದ್ಯದ ಜೀವಿತಕ್ಕೆ ಹಾಗೂ ಬರಲಿರುವ ಅನಂತ ಜೀವಿತಕ್ಕೆ ಸಜ್ಜುಗೊಳಿಸುತ್ತದೆ.—1 ತಿಮೊಥೆಯ 4:8.
9. ನಮ್ಮ ಕುಟುಂಬ ಅಧ್ಯಯನಗಳಲ್ಲಿ, ಕೂಟಗಳಿಗಾಗಿ ತಯಾರಿಸುವ ಯಾವ ಗುರಿಗಳ ಸಂಬಂಧದಲ್ಲಿ ನಾವು ಕ್ರಮೇಣ ಕೆಲಸಮಾಡಬಹುದು?
9 ನಿಮ್ಮ ಕುಟುಂಬ ಅಧ್ಯಯನವು ಸಭಾ ಕೂಟಗಳ ತಯಾರಿಯನ್ನು ಒಳಗೊಳ್ಳುತ್ತದೋ? ನೀವು ಒಟ್ಟಿಗೆ ಅಧ್ಯಯನ ಮಾಡಿದಂತೆ, ಪ್ರಗತಿಪರವಾಗಿ ಕೆಲಸಮಾಡಬಹುದಾದ ಹಲವಾರು ಯೋಜನೆಗಳಿರಬಹುದು. ಇವುಗಳಲ್ಲಿ ಕೆಲವನ್ನು ಪೂರ್ತಿಗೊಳಿಸಲು ವಾರಗಳು, ತಿಂಗಳುಗಳು, ಇಲ್ಲವೆ ವರ್ಷಗಳೂ ಹಿಡಿಯಬಹುದು. ಈ ಗುರಿಗಳನ್ನು ಪರಿಗಣಿಸಿರಿ: (1) ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಸಭಾ ಕೂಟಗಳಲ್ಲಿ ಉತ್ತರಗಳನ್ನು ಕೊಡಲು ಸಿದ್ಧರಾಗಿರುವುದು, (2) ಪ್ರತಿಯೊಬ್ಬರೂ ಸ್ವಂತ ಮಾತುಗಳಲ್ಲಿ ಉತ್ತರ ಕೊಡಲು ಪ್ರಯತ್ನಿಸುವುದು, (3) ಉತ್ತರಗಳಲ್ಲಿ ವಚನಗಳನ್ನು ಸೇರಿಸುವುದು, ಮತ್ತು (4) ವೈಯಕ್ತಿಕ ಅನ್ವಯವನ್ನು ಮಾಡುವ ಉದ್ದೇಶದಿಂದ ವಿಷಯವನ್ನು ವಿಶ್ಲೇಷಿಸುವುದು. ವ್ಯಕ್ತಿಯೊಬ್ಬನು ಸತ್ಯವನ್ನು ತನ್ನದಾಗಿ ಮಾಡಿಕೊಳ್ಳುವಂತೆ ಈ ಎಲ್ಲ ವಿಷಯಗಳು ಸಹಾಯ ಮಾಡಬಲ್ಲವು.—ಕೀರ್ತನೆ 25:4, 5.
10. (ಎ) ನಮ್ಮ ಸಭಾ ಕೂಟಗಳಲ್ಲಿ ಪ್ರತಿಯೊಂದಕ್ಕೆ ಹೇಗೆ ಗಮನವನ್ನು ಕೊಡಬಹುದು? (ಬಿ) ಇದು ಏಕೆ ಸಾರ್ಥಕವಾಗಿದೆ?
10 ನಿಮ್ಮ ಕುಟುಂಬ ಅಧ್ಯಯನದಲ್ಲಿ ಸಾಮಾನ್ಯವಾಗಿ ಆ ವಾರಕ್ಕಾಗಿರುವ ಕಾವಲಿನಬುರುಜು ಅಭ್ಯಾಸ ಲೇಖನವನ್ನು ಅಭ್ಯಾಸಿಸುವುದಾದರೂ, ವ್ಯಕ್ತಿಗತವಾಗಿ ಇಲ್ಲವೆ ಕುಟುಂಬವಾಗಿ, ಸಭಾ ಪುಸ್ತಕ ಅಭ್ಯಾಸಕ್ಕಾಗಿ, ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ, ಮತ್ತು ಸೇವಾ ಕೂಟಕ್ಕಾಗಿ ತಯಾರಿಸುವ ಮಹತ್ವವನ್ನು ಕಡೆಗಣಿಸಬೇಡಿ. ಏಕೆಂದರೆ, ಯೆಹೋವನ ಮಾರ್ಗದಲ್ಲಿ ನಡೆಯುವಂತೆ ನಮಗೆ ಕಲಿಸುವ ಕಾರ್ಯಕ್ರಮದ ಭಾಗಗಳಲ್ಲಿ ಇವು ಕೂಡ ಪ್ರಾಮುಖ್ಯವಾಗಿವೆ. ಒಂದು ಕುಟುಂಬವಾಗಿ ಎಲ್ಲ ಕೂಟಗಳಿಗಾಗಿ ತಯಾರಿಸಲು ನಿಮಗೆ ಆಗಿಂದಾಗ್ಗೆ ಸಾಧ್ಯವಾಗಬಹುದು. ಹೀಗೆ ಒಟ್ಟಾಗಿ ಅಭ್ಯಾಸಿಸುವಾಗ, ಅಧ್ಯಯನಾ ಕೌಶಲಗಳು ಉತ್ತಮಗೊಳ್ಳುತ್ತವೆ. ಫಲಸ್ವರೂಪವಾಗಿ, ಕೂಟಗಳಿಂದ ಹೆಚ್ಚಿನ ಪ್ರಯೋಜನವು ದೊರಕಬಲ್ಲದು. ಬೇರೆ ವಿಷಯಗಳ ಚರ್ಚೆಯಲ್ಲಿ, ಈ ಕೂಟಗಳ ಕ್ರಮವಾದ ತಯಾರಿಯಿಂದ ಬರುವ ಪ್ರಯೋಜನ ಮತ್ತು ಅದಕ್ಕಾಗಿ ಒಂದು ನಿಗದಿತ ಸಮಯವನ್ನು ಬದಿಗಿರಿಸುವುದರ ಮಹತ್ವವನ್ನು ಸೇರಿಸಿರಿ.—ಎಫೆಸ 5:15-17.
11, 12. ಸಭೆಯಲ್ಲಿ ಹಾಡಲಿಕ್ಕಾಗಿ ತಯಾರಿಸುವುದು ಹೇಗೆ ನಮಗೆ ಪ್ರಯೋಜನವನ್ನು ತರುವುದು, ಮತ್ತು ಇದನ್ನು ಹೇಗೆ ಮಾಡಬಹುದು?
11 “ದೇವರ ಜೀವನ ಮಾರ್ಗ” ಅಧಿವೇಶನಗಳಲ್ಲಿ, ನಮ್ಮ ಕೂಟಗಳ ಮತ್ತೊಂದು ವೈಶಿಷ್ಟ್ಯವಾದ ಹಾಡುವಿಕೆಗಾಗಿ ತಯಾರಿಸುವಂತೆ ನಾವು ಉತ್ತೇಜಿಸಲ್ಪಟ್ಟೆವು. ನೀವು ಅದನ್ನು ಮಾಡಲು ಪ್ರಯತ್ನಿಸಿದ್ದೀರೊ? ಹಾಗೆ ಮಾಡುವುದರಿಂದ, ಬೈಬಲ್ ಸತ್ಯಗಳನ್ನು ನಮ್ಮ ಹೃದಮನಗಳ ಮೇಲೆ ಕೆತ್ತುವಂತೆ ಮತ್ತು ಅದೇ ಸಮಯದಲ್ಲಿ ಸಭಾ ಕೂಟಗಳಿಂದ ನಮಗೆ ಸಿಗುವ ಆನಂದವನ್ನು ಹೆಚ್ಚಿಸುವಂತೆ ಅದು ಸಹಾಯ ಮಾಡುವುದು.
12 ಶೆಡ್ಯೂಲಿನಲ್ಲಿರುವ ಕೆಲವು ಗೀತೆಗಳಲ್ಲಿನ ಪದಗಳ ಅರ್ಥವನ್ನು ಓದಿ ಚರ್ಚಿಸುವುದನ್ನು ಒಳಗೊಳ್ಳುವ ತಯಾರಿಯು, ಮನದಾಳದಿಂದ ಹಾಡುವಂತೆ ನಮಗೆ ಸಹಾಯ ಮಾಡುವುದು. ಪುರಾತನ ಇಸ್ರಾಯೇಲಿನಲ್ಲಿ, ಸಂಗೀತ ವಾದ್ಯಗಳು ಆರಾಧನೆಯಲ್ಲಿ ಪ್ರಧಾನವಾಗಿ ಬಳಸಲ್ಪಟ್ಟವು. (1 ಪೂರ್ವಕಾಲವೃತ್ತಾಂತ 25:1; ಕೀರ್ತನೆ 28:7) ನಿಮ್ಮ ಕುಟುಂಬದಲ್ಲಿ ಯಾರಾದರೂ ಒಂದು ಸಂಗೀತ ವಾದ್ಯವನ್ನು ನುಡಿಸುತ್ತಾರೋ? ವಾರಕ್ಕಾಗಿರುವ ರಾಜ್ಯ ಗೀತೆಗಳಲ್ಲೊಂದನ್ನು ಅಭ್ಯಾಸಿಸಲು ಆ ವಾದ್ಯವನ್ನು ಉಪಯೋಗಿಸಿ, ತದನಂತರ ಆ ಹಾಡನ್ನು ಕುಟುಂಬವಾಗಿ ಏಕೆ ಹಾಡಬಾರದು? ಗೀತೆಗಳ ಕ್ಯಾಸೆಟ್ಟುಗಳನ್ನು ಉಪಯೋಗಿಸುವುದು ಮತ್ತೊಂದು ಸಾಧ್ಯತೆಯಾಗಿದೆ. ಕೆಲವು ದೇಶಗಳಲ್ಲಿರುವ ನಮ್ಮ ಸಹೋದರರು, ಸಂಗೀತ ವಾದ್ಯಗಳಿಲ್ಲದೆ ಸುಂದರವಾಗಿ ಹಾಡುತ್ತಾರೆ. ಅವರು ದಾರಿಯಲ್ಲಿ ನಡೆದಂತೆ, ಇಲ್ಲವೆ ಹೊಲಗಳಲ್ಲಿ ಕೆಲಸಮಾಡಿದಂತೆ, ಆ ವಾರಕ್ಕಾಗಿ ಸಭಾ ಕೂಟಗಳಲ್ಲಿ ಶೆಡ್ಯೂಲ್ ಮಾಡಲ್ಪಟ್ಟ ಗೀತೆಗಳನ್ನು ಹಾಡುವುದರಲ್ಲಿ ಅನೇಕವೇಳೆ ಆನಂದಿಸುತ್ತಾರೆ.—ಎಫೆಸ 5:19.
ಕ್ಷೇತ್ರ ಸೇವೆಗಾಗಿ ಕುಟುಂಬದ ತಯಾರಿ
13, 14. ನಮ್ಮ ಹೃದಯಗಳನ್ನು ಕ್ಷೇತ್ರ ಶುಶ್ರೂಷೆಗಾಗಿ ತಯಾರಿಸುವ ಕುಟುಂಬ ಚರ್ಚೆಗಳು ಏಕೆ ಅಮೂಲ್ಯವಾಗಿವೆ?
13 ಇತರರಿಗೆ ಯೆಹೋವನ ಮತ್ತು ಆತನ ಉದ್ದೇಶದ ಕುರಿತು ಸಾಕ್ಷಿನೀಡುವುದು, ನಮ್ಮ ಜೀವಿತಗಳ ಪ್ರಾಮುಖ್ಯ ಭಾಗವಾಗಿದೆ. (ಯೆಶಾಯ 43:10-12; ಮತ್ತಾಯ 24:14) ಯುವಕರಾಗಿರಲಿ ವೃದ್ಧರಾಗಿರಲಿ ನಾವು ತಯಾರಿಯನ್ನು ಮಾಡಿರುವಲ್ಲಿ, ಈ ಚಟುವಟಿಕೆಯಲ್ಲಿ ಬಹಳಷ್ಟು ಆನಂದಿಸುತ್ತೇವೆ ಮತ್ತು ಹೆಚ್ಚಿನ ಒಳಿತನ್ನು ಸಾಧಿಸುತ್ತೇವೆ. ಇದನ್ನು ಕುಟುಂಬದೊಳಗೆ ಹೇಗೆ ಮಾಡಸಾಧ್ಯವಿದೆ?
14 ನಮ್ಮ ಆರಾಧನೆಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ಸತ್ಯವಾಗಿರುವಂತೆಯೇ, ನಾವು ನಮ್ಮ ಹೃದಯಗಳನ್ನು ತಯಾರಿಸುವುದು ಪ್ರಾಮುಖ್ಯವಾಗಿದೆ. ನಾವು ಏನು ಮಾಡಲಿದ್ದೇವೆ ಎಂಬುದು ಮಾತ್ರವಲ್ಲ, ಏಕೆ ಅದನ್ನು ಮಾಡಲಿದ್ದೇವೆ ಎಂಬುದನ್ನೂ ಚರ್ಚಿಸಬೇಕಾಗಿದೆ. ರಾಜ ಯೆಹೋಷಾಫಾಟನ ದಿನಗಳಲ್ಲಿ, ಜನರಿಗೆ ದೈವಿಕ ನಿಯಮದಲ್ಲಿ ಉಪದೇಶವು ಕೊಡಲ್ಪಟ್ಟಿತಾದರೂ, ಅವರು ‘ಇನ್ನೂ ತಮ್ಮ ಹೃದಯಗಳನ್ನು ಸಿದ್ಧಗೊಳಿಸಿರಲಿಲ್ಲ’ ಎಂದು ಬೈಬಲ್ ನಮಗೆ ಹೇಳುತ್ತದೆ. ಈ ಕಾರಣ, ಸತ್ಯಾರಾಧನೆಯಿಂದ ಅವರನ್ನು ವಿಮುಖಗೊಳಿಸಬಹುದಾದ ಅಪಕರ್ಷಣೆಗಳಿಗೆ ಅವರು ಸುಲಭಭೇದ್ಯರಾದರು. (2 ಪೂರ್ವಕಾಲವೃತ್ತಾಂತ 20:33; 21:11) ನಮ್ಮ ಗುರಿಯು ಕ್ಷೇತ್ರ ಸೇವೆಯಲ್ಲಿ ಕಳೆದ ತಾಸುಗಳನ್ನು ವರದಿಸುವುದಾಗಲಿ, ಇಲ್ಲವೆ ಸಾಹಿತ್ಯವನ್ನು ನೀಡುವುದಾಗಲಿ ಆಗಿರುವುದಿಲ್ಲ. ನಮ್ಮ ಶುಶ್ರೂಷೆಯು, ಯೆಹೋವನಿಗಾಗಿ ಮತ್ತು ಜೀವವನ್ನು ಆರಿಸಿಕೊಳ್ಳುವ ಅವಕಾಶದ ಅಗತ್ಯವಿರುವ ಜನರಿಗಾಗಿರುವ ಪ್ರೀತಿಯ ಅಭಿವ್ಯಕ್ತಿಯಾಗಿರಬೇಕು. (ಇಬ್ರಿಯ 13:15) ನಾವು “ದೇವರ ಜೊತೆಕೆಲಸದವರು” ಆಗಿರುವ ಚಟುವಟಿಕೆಯು ಇದೇ ಆಗಿದೆ. (1 ಕೊರಿಂಥ 3:9) ಎಂತಹ ಒಂದು ಸುಯೋಗ! ನಾವು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗ, ಪವಿತ್ರ ದೇವದೂತರ ಸಹಕಾರದೊಂದಿಗೆ ಹಾಗೆ ಮಾಡುತ್ತೇವೆ. (ಪ್ರಕಟನೆ 14:6, 7) ಕುಟುಂಬ ಚರ್ಚೆಗಳಲ್ಲಿ ನಾವು ನಮ್ಮ ಸಾಪ್ತಾಹಿಕ ಅಧ್ಯಯನವನ್ನು ಮಾಡುವಾಗ ಇಲ್ಲವೆ ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯಿಂದ ಸೂಕ್ತವಾದ ವಚನವನ್ನು ಚರ್ಚಿಸುವಾಗ, ಇದಕ್ಕಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳುವುದಕ್ಕಿಂತಲೂ ಉತ್ತಮವಾದ ಬೇರೊಂದು ಸಮಯವು ಇರಲಾರದು!
15. ಕುಟುಂಬವಾಗಿ ನಾವು ಯಾವಾಗ ಕ್ಷೇತ್ರ ಸೇವೆಗಾಗಿ ತಯಾರಿಸಬಹುದು?
15 ನಿಮ್ಮ ಮನೆವಾರ್ತೆಯ ಸದಸ್ಯರು ವಾರದ ಕ್ಷೇತ್ರ ಸೇವೆಗಾಗಿ ತಯಾರಿಸುವಂತೆ ಸಹಾಯ ಮಾಡಲು, ನೀವು ನಿಮ್ಮ ಕುಟುಂಬ ಅಧ್ಯಯನದ ಸಮಯವನ್ನು ಕೆಲವೊಮ್ಮೆ ಉಪಯೋಗಿಸುತ್ತೀರೊ? ಹಾಗೆ ಮಾಡುವುದು ತುಂಬ ಪ್ರಯೋಜನಕರವಾಗಿರಬಲ್ಲದು. (2 ತಿಮೊಥೆಯ 2:15) ಕುಟುಂಬದವರೆಲ್ಲರ ಸೇವೆಯು ಅರ್ಥಭರಿತವೂ ಫಲಪ್ರದವೂ ಆಗಿರುವಂತೆ ಅದು ಸಹಾಯ ಮಾಡುವುದು. ಕೆಲವೊಮ್ಮೆ ನೀವು ಸಂಪೂರ್ಣ ಅಧ್ಯಯನ ಅವಧಿಯನ್ನು ಇಂತಹ ತಯಾರಿಗಾಗಿ ಬದಿಗಿಡಬಹುದು. ಹೆಚ್ಚಿನ ವೇಳೆ, ನೀವು ಕುಟುಂಬ ಅಧ್ಯಯನದ ಕೊನೆಯಲ್ಲಿ ಅಥವಾ ವಾರದ ಬೇರೊಂದು ಸಮಯದಲ್ಲಿ ಕ್ಷೇತ್ರ ಶುಶ್ರೂಷೆಯ ವಿಷಯಗಳನ್ನು ಸ್ವಲ್ಪ ಸಮಯಕ್ಕಾಗಿ ಚರ್ಚಿಸಬಹುದು.
16. ಪ್ಯಾರಗ್ರಾಫಿನಲ್ಲಿ ಪಟ್ಟಿಮಾಡಲ್ಪಟ್ಟ ಕ್ರಮಗಳಲ್ಲಿ ಪ್ರತಿಯೊಂದರ ಮಹತ್ವವನ್ನು ಚರ್ಚಿಸಿರಿ.
16 ಈ ಕೆಳಗೆ ಹೇಳಲ್ಪಟ್ಟಂತೆ, ಕುಟುಂಬದ ಅಧ್ಯಯನಾ ಅವಧಿಗಳು ಹಲವಾರು ಹೆಜ್ಜೆಗಳ ಮೇಲೆ ಕೇಂದ್ರೀಕರಿಸಸಾಧ್ಯವಿದೆ: (1) ಚೆನ್ನಾಗಿ ಪೂರ್ವಾಭಿನಯಿಸಿದ ನಿರೂಪಣೆಯನ್ನು ತಯಾರಿಸಿರಿ. ಸಮಯವು ಅನುಮತಿಸುವಲ್ಲಿ, ಅದರೊಂದಿಗೆ ಬೈಬಲಿನಿಂದ ಒಂದು ವಚನವನ್ನು ಓದಿರಿ. (2) ಸಾಧ್ಯವಾದಲ್ಲಿ ಪ್ರತಿಯೊಬ್ಬರಿಗೆ ತಮ್ಮದೇ ಆದ ಕ್ಷೇತ್ರ ಸೇವೆಯ ಬ್ಯಾಗ್, ಬೈಬಲ್, ನೋಟ್ಪುಸ್ತಕ, ಪೆನ್ ಇಲ್ಲವೆ ಪೆನ್ಸಿಲ್, ಕಿರುಹೊತ್ತಗೆಗಳು, ಮತ್ತು ಸುಸ್ಥಿತಿಯಲ್ಲಿರುವ ಇತರ ಸಾಹಿತ್ಯವು ಇದೆಯೊ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಕ್ಷೇತ್ರ ಸೇವೆಯ ಬ್ಯಾಗು ದುಬಾರಿಯದ್ದಾಗಿರದಿದ್ದರೂ, ನೀಟಾಗಿರಬೇಕು. (3) ಎಲ್ಲಿ ಮತ್ತು ಹೇಗೆ ಅನೌಪಚಾರಿಕ ಸಾಕ್ಷಿಕಾರ್ಯವನ್ನು ಮಾಡುವುದೆಂಬುದನ್ನು ಚರ್ಚಿಸಿರಿ. ಕ್ಷೇತ್ರ ಸೇವೆಯಲ್ಲಿ ನೀವು ಒಟ್ಟಿಗೆ ಕೆಲಸಮಾಡಿದಂತೆ, ಈಗಾಗಲೇ ಚರ್ಚಿಸಿದ ಎಲ್ಲ ಸೂಚನೆಗಳನ್ನು ಕಾರ್ಯರೂಪಕ್ಕೆ ಹಾಕಿರಿ. ಸಹಾಯಕರ ಸೂಚನೆಗಳನ್ನು ನೀಡಿರಿ, ಆದರೆ ಅನೇಕ ವಿಷಯಗಳ ಬಗ್ಗೆ ಸಲಹೆ ನೀಡಬೇಡಿರಿ.
17, 18. (ಎ) ಕುಟುಂಬವಾಗಿ ಮಾಡಲ್ಪಡುವ ಯಾವ ರೀತಿಯ ತಯಾರಿಯು, ನಮ್ಮ ಕ್ಷೇತ್ರ ಶುಶ್ರೂಷೆಯನ್ನು ಹೆಚ್ಚು ಫಲಪ್ರದವಾಗಿ ಮಾಡಲು ಸಹಾಯಕರವಾಗಿರುವುದು? (ಬಿ) ಈ ತಯಾರಿಯ ಯಾವ ಅಂಶವನ್ನು ಪ್ರತಿ ವಾರ ಮಾಡಸಾಧ್ಯವಿದೆ?
17 ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ನೇಮಿಸಿದ ಕೆಲಸದ ಒಂದು ಪ್ರಧಾನ ಭಾಗವು ಶಿಷ್ಯರನ್ನು ಮಾಡುವ ಕೆಲಸವಾಗಿದೆ. (ಮತ್ತಾಯ 28:19, 20) ಶಿಷ್ಯರನ್ನು ಮಾಡುವುದು, ಪ್ರಚಾರ ಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೊಳ್ಳುತ್ತದೆ. ಅದು ಬೋಧಿಸುವುದನ್ನು ಅಗತ್ಯಪಡಿಸುತ್ತದೆ. ಇದನ್ನು ಮಾಡುವುದರಲ್ಲಿ ನೀವು ಪರಿಣಾಮಕಾರಿಯಾಗಿರುವಂತೆ ನಿಮ್ಮ ಕುಟುಂಬ ಅಧ್ಯಯನವು ಹೇಗೆ ಸಹಾಯ ಮಾಡಬಲ್ಲದು?
18 ಯಾರನ್ನು ಪುನಃ ಭೇಟಿಮಾಡುವುದು ಒಳ್ಳೆಯದು ಎಂಬುದನ್ನು ಕುಟುಂಬವಾಗಿ ಚರ್ಚಿಸಿರಿ. ಕೆಲವರು ಸಾಹಿತ್ಯವನ್ನು ಸ್ವೀಕರಿಸಿರಬಹುದು, ಇನ್ನೂ ಕೆಲವರು ಕೇವಲ ಆಲಿಸಿರಬಹುದು. ಅವರು ಮನೆ ಮನೆಯ ಸಾಕ್ಷಿಕಾರ್ಯದಲ್ಲಿ ಭೇಟಿಯಾಗಿರಬಹುದು ಇಲ್ಲವೆ ಮಾರುಕಟ್ಟೆಯಲ್ಲಿ ಅಥವಾ ಶಾಲೆಯಲ್ಲಿ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಸಂಧಿಸಿರಬಹುದು. ಏನೇ ಆಗಲಿ, ದೇವರ ವಾಕ್ಯವು ನಿಮ್ಮನ್ನು ಮಾರ್ಗದರ್ಶಿಸಲಿ. (ಕೀರ್ತನೆ 25:9; ಯೆಹೆಜ್ಕೇಲ 9:4) ಪ್ರತಿಯೊಬ್ಬರೂ ಆ ವಾರದಲ್ಲಿ ಯಾರನ್ನು ಭೇಟಿ ಮಾಡಲು ಬಯಸುತ್ತೀರೆಂಬುದನ್ನು ನಿರ್ಧರಿಸಿರಿ. ಯಾವ ವಿಷಯದ ಕುರಿತು ಮಾತಾಡುವಿರಿ? ಅದಕ್ಕಾಗಿ ಪ್ರತಿಯೊಬ್ಬ ಸದಸ್ಯನು ತಯಾರಿಸುವಂತೆ ಕುಟುಂಬ ಚರ್ಚೆಯು ಸಹಾಯ ಮಾಡಬಲ್ಲದು. ಆಸಕ್ತರೊಂದಿಗೆ ಹಂಚಿಕೊಳ್ಳಲು ನಿರ್ದಿಷ್ಟವಾದ ವಚನಗಳನ್ನು ಮತ್ತು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನಿಂದ ಇಲ್ಲವೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಿಂದ ಸೂಕ್ತವಾದ ವಿಷಯಗಳನ್ನು ಪಟ್ಟಿಮಾಡಿಕೊಳ್ಳಿರಿ. ಒಂದೇ ಭೇಟಿಯಲ್ಲಿ ಬಹಳಷ್ಟು ವಿಷಯವನ್ನು ಆವರಿಸಲು ಪ್ರಯತ್ನಿಸಬೇಡಿ. ಮುಂದಿನ ಭೇಟಿಯಲ್ಲಿ ಉತ್ತರಿಸಲ್ಪಡುವ ಪ್ರಶ್ನೆಯನ್ನು ಮನೆಯವರಲ್ಲಿ ಬಿಟ್ಟುಬನ್ನಿರಿ. ಪ್ರತಿಯೊಬ್ಬರೂ ಯಾವ ಪುನರ್ಭೇಟಿಗಳನ್ನು ಮಾಡುವರು, ಯಾವಾಗ ಮಾಡುವರು, ಮತ್ತು ಏನನ್ನು ಸಾಧಿಸಲು ನಿರೀಕ್ಷಿಸುವರು ಎಂಬುದನ್ನು ಪ್ರತಿವಾರ ಕುಟುಂಬವಾಗಿ ಏಕೆ ಚರ್ಚಿಸಬಾರದು? ಹೀಗೆ ಮಾಡುವುದರಿಂದ, ಇಡೀ ಕುಟುಂಬದ ಕ್ಷೇತ್ರ ಶುಶ್ರೂಷೆಯು ಹೆಚ್ಚು ಫಲಪ್ರದವಾಗಲು ಇದು ಸಹಾಯ ಮಾಡುವುದು.
ಅವರಿಗೆ ಯೆಹೋವನ ಮಾರ್ಗವನ್ನು ಕಲಿಸುತ್ತಾ ಇರಿ
19. ಕುಟುಂಬ ಸದಸ್ಯರು ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಮುಂದುವರಿಯುವುದಾದರೆ, ಅವರು ಏನನ್ನು ಅನುಭವಿಸುವರು, ಮತ್ತು ಇದಕ್ಕೆ ಯಾವುದು ನೆರವು ನೀಡುವುದು?
19 ಈ ದುಷ್ಟ ಲೋಕದಲ್ಲಿ ಕುಟುಂಬ ತಲೆಯಾಗಿರುವುದು ಒಂದು ಪಂಥಾಹ್ವಾನವಾಗಿದೆ. ಸೈತಾನನು ಮತ್ತು ಅವನ ದೆವ್ವಗಳು ಯೆಹೋವನ ಸೇವಕರ ಆತ್ಮಿಕತೆಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಿವೆ. (1 ಪೇತ್ರ 5:8) ಅಲ್ಲದೆ, ಇಂದು ಹೆತ್ತವರಾದ ನಿಮ್ಮ ಮೇಲೆ, ವಿಶೇಷವಾಗಿ ಒಂಟಿ ಹೆತ್ತವರಾದ ನಿಮ್ಮ ಮೇಲೆ ಬಹಳಷ್ಟು ಒತ್ತಡವಿದೆ. ನೀವು ಮಾಡಬಯಸುವ ಎಲ್ಲ ವಿಷಯಗಳನ್ನು ಮಾಡಿಮುಗಿಸಲು ಸಮಯವನ್ನು ಕಂಡುಕೊಳ್ಳುವುದು ಕಷ್ಟಕರವಾಗಿದೆ. ಆದರೂ, ಎಲ್ಲ ಸಲಹೆಗಳನ್ನು ಒಮ್ಮೆಲೇ ಅನ್ವಯಿಸದೆ, ಒಂದೊಂದಾಗಿ ಅನ್ವಯಿಸಿ, ನಿಮ್ಮ ಕುಟುಂಬ ಅಧ್ಯಯನ ಕಾರ್ಯಕ್ರಮವನ್ನು ಕ್ರಮೇಣ ಸುಧಾರಿಸುವಾಗ ಅದು ಸಾರ್ಥಕವಾಗಿರುವುದು. ನಿಮ್ಮ ಆಪ್ತರು ಯೆಹೋವನ ಮಾರ್ಗದಲ್ಲಿ ನಿಷ್ಠಾವಂತರಾಗಿ ನಡೆಯುವುದನ್ನು ನೋಡುವುದು ತಾನೇ, ಹೃದಯಕ್ಕೆ ಉಲ್ಲಾಸವನ್ನು ನೀಡುವ ಪ್ರತಿಫಲವಾಗಿದೆ. ಯೆಹೋವನ ಮಾರ್ಗದಲ್ಲಿ ಯಶಸ್ವಿಕರವಾಗಿ ನಡೆಯಲು, ಕುಟುಂಬ ಸದಸ್ಯರು ಸಭಾ ಕೂಟಗಳಲ್ಲಿ ಉಪಸ್ಥಿತರಾಗಿರುವುದರಲ್ಲಿ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕು. ಅದು ನಿಜವಾಗಿ ಪರಿಣಮಿಸಬೇಕಾದರೆ, ಹೃದಯವನ್ನು ಬಲಪಡಿಸುವ ಹಾಗೂ ಒಂದು ಅರ್ಥಭರಿತ ಪಾಲನ್ನು ಪ್ರತಿಯೊಬ್ಬರೂ ಹೊಂದಿರುವಂತೆ ಸಜ್ಜುಗೊಳಿಸುವ ತಯಾರಿಯು ಅಗತ್ಯವಾಗಿದೆ.
20. ಇನ್ನೂ ಅನೇಕ ಹೆತ್ತವರು 3 ಯೋಹಾನ 4ರಲ್ಲಿ ವ್ಯಕ್ತಪಡಿಸಲ್ಪಟ್ಟ ಆನಂದವನ್ನು ಅನುಭವಿಸಲು ಯಾವುದು ಸಹಾಯ ಮಾಡುವುದು?
20 ತಾನು ಯಾರಿಗೆ ಆತ್ಮಿಕ ನೆರವನ್ನು ನೀಡಿದ್ದನೋ ಅವರ ಕುರಿತು ಅಪೊಸ್ತಲ ಯೋಹಾನನು ಬರೆದುದು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.” (3 ಯೋಹಾನ 4) ಮನಸ್ಸಿನಲ್ಲಿ ಸ್ಪಷ್ಟವಾದ ಲಕ್ಷ್ಯಗಳನ್ನಿಟ್ಟುಕೊಂಡು ನಡೆಸಲ್ಪಡುವ ಕುಟುಂಬ ಅಧ್ಯಯನಗಳು ಮತ್ತು ಕುಟುಂಬ ಸದಸ್ಯರ ವ್ಯಕ್ತಿಗತ ಅಗತ್ಯಗಳನ್ನು ದಯೆಯಿಂದ, ಸಹಾಯಕರ ವಿಧದಲ್ಲಿ ನಿಭಾಯಿಸುವ ಕುಟುಂಬ ತಲೆಗಳು, ತಮ್ಮ ಕುಟುಂಬವು ಇಂತಹ ಆನಂದದಲ್ಲಿ ಪಾಲ್ಗೊಳ್ಳುವಂತೆ ಹೆಚ್ಚನ್ನು ಮಾಡಶಕ್ತರಾಗಿರುವರು. ದೇವರ ಜೀವನ ಮಾರ್ಗಕ್ಕಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳುವ ಮೂಲಕ, ಕುಟುಂಬವು ಅತ್ಯುತ್ತಮವಾದ ಜೀವಿತ ಮಾರ್ಗದಲ್ಲಿ ಆನಂದಿಸುವಂತೆ ಹೆತ್ತವರು ಸಹಾಯ ಮಾಡುತ್ತಿರುವರು.—ಕೀರ್ತನೆ 19:7-11.
ನೀವು ವಿವರಿಸಬಲ್ಲಿರೊ?
◻ ನಮ್ಮ ಮಕ್ಕಳು ಕೂಟಗಳಿಗೆ ತಯಾರಿಸಬೇಕಾದದ್ದು ಏಕೆ ಅಷ್ಟೊಂದು ಪ್ರಾಮುಖ್ಯವಾಗಿದೆ?
◻ ತಮ್ಮ ಮಕ್ಕಳು ‘ಹೃದಯವನ್ನು ಸಂಪಾದಿಸುವಂತೆ’ ಹೆತ್ತವರು ಹೇಗೆ ಸಹಾಯ ಮಾಡಬಲ್ಲರು?
◻ ಎಲ್ಲ ಕೂಟಗಳಿಗಾಗಿ ತಯಾರಿಸುವುದರಲ್ಲಿ ನಮ್ಮ ಕುಟುಂಬ ಅಧ್ಯಯನವು ಹೇಗೆ ಸಹಾಯ ಮಾಡಬಲ್ಲದು?
◻ ಕ್ಷೇತ್ರ ಸೇವೆಗಾಗಿ ಕುಟುಂಬವಾಗಿ ತಯಾರಿಸುವುದು, ನಾವು ಹೆಚ್ಚು ಪರಿಣಾಮಕಾರಿಯಾಗಿರಲು ಹೇಗೆ ಸಹಾಯ ಮಾಡಬಹುದು?
[ಪುಟ 20 ರಲ್ಲಿರುವ ಚಿತ್ರ]
ನಿಮ್ಮ ಕುಟುಂಬ ಅಧ್ಯಯನದಲ್ಲಿ ಸಭಾ ಕೂಟಗಳಿಗಾಗಿ ತಯಾರಿಸುವುದೂ ಸೇರಿರಬಹುದು
[ಪುಟ 21 ರಲ್ಲಿರುವ ಚಿತ್ರ]
ಕೂಟಗಳಲ್ಲಿ ಹಾಡುವುದಕ್ಕಾಗಿ ಅಭ್ಯಾಸಮಾಡುವುದು ಪ್ರಯೋಜನಕರವಾಗಿದೆ