“ಸಮಗ್ರವಾಗಿ ಸಾಕ್ಷಿಯನ್ನು ನೀಡು”ವುದರಲ್ಲಿ ಶ್ರದ್ಧೆಯುಳ್ಳವರಾಗಿರಿ
1, 2. ಸುವಾರ್ತೆಯನ್ನು ಸಾರುವ ವಿಷಯದಲ್ಲಿ ಪೌಲನಿಗಿದ್ದ ದೃಷ್ಟಿಕೋನದಿಂದ ನೀವು ಹೇಗೆ ಪ್ರಭಾವಿತರಾಗುತ್ತೀರಿ, ಮತ್ತು “ಸಮಗ್ರವಾಗಿ ಸಾಕ್ಷಿಯನ್ನು ನೀಡು”ವುದರಲ್ಲಿ ನಾವು ಹೇಗೆ ಅವನ ಮಾದರಿಯನ್ನು ಅನುಕರಿಸಬಲ್ಲೆವು?
1 ಯೇಸು ಮತ್ತು ಇನ್ನಿತರ ಪ್ರಾಚೀನ ನಂಬಿಗಸ್ತ ಸೇವಕರಂತೆ ಅಪೊಸ್ತಲ ಪೌಲನು ಸಹ ಸುವಾರ್ತೆಯ ಹುರುಪಿನ ಪ್ರಚಾರಕನಾಗಿದ್ದು, ಯಾವುದೇ ಪರಿಸ್ಥಿತಿಯ ಎದುರಿನಲ್ಲಿಯೂ “ಸಮಗ್ರವಾಗಿ ಸಾಕ್ಷಿಯನ್ನು ನೀಡು”ತ್ತಾ ಹೋದನು. (NW) ಗೃಹಬಂಧನದಲ್ಲಿದ್ದಾಗಲೂ, ಅವನು “ತನ್ನ ಬಳಿಗೆ ಬರುವವರೆಲ್ಲರನ್ನು ಸೇರಿಸಿಕೊಂಡು . . . ತುಂಬಾ ಧೈರ್ಯದಿಂದ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.”—ಅ. ಕೃ. 28:16-31.
2 ಎಲ್ಲಾ ಸಮಯಗಳಲ್ಲಿ “ಸಮಗ್ರವಾಗಿ ಸಾಕ್ಷಿಯನ್ನು ನೀಡು”ತ್ತಾ ಇರುವ ಮೂಲಕ ನಾವು ಕೂಡ ಶ್ರದ್ಧೆಯುಳ್ಳವರಾಗಿರಸಾಧ್ಯವಿದೆ. ಇದರಲ್ಲಿ ನಾವು ಸಮ್ಮೇಳನ ಮತ್ತು ಅಧಿವೇಶನಗಳಿಗೆ ಹೋಗಿ ಬರುತ್ತಿರುವಾಗ ಭೇಟಿಯಾಗುವ ಜನರೊಂದಿಗೆ ಸಾಕ್ಷಿಕೊಡುವುದೂ ಸೇರಿದೆ.—ಅ. ಕೃ. 28:23; ಕೀರ್ತ. 145:10-13.
3. ನಮ್ಮ ಅನೌಪಚಾರಿಕ ಸಾಕ್ಷಿಯು ಕೇವಲ ಒಂದು ಪ್ರಾಸಂಗಿಕ ಪ್ರಯತ್ನವಾಗಿ ಪರಿಣಮಿಸುವುದನ್ನು ನಾವು ಹೇಗೆ ತಡೆಯಸಾಧ್ಯವಿದೆ?
3 ಪ್ರಾಸಂಗಿಕ ಸಾಕ್ಷಿಯೋ ಅಥವಾ ಅನೌಪಚಾರಿಕ ಸಾಕ್ಷಿಯೋ? ಇದರಲ್ಲಿ ಯಾವುದೇ ವ್ಯತ್ಯಾಸವಿದೆಯೋ? ಹೌದು. ಪ್ರಾಸಂಗಿಕವಾಗಿರುವ ಯಾವುದೇ ವಿಷಯವು ಕೇವಲ ಅಕಸ್ಮಾತ್ತಾಗಿ ಅಥವಾ ಯಾವುದೇ ಸಂಕಲ್ಪವಿಲ್ಲದೆ, ಅದನ್ನು ಯೋಜಿಸಲಿಲ್ಲವೋ ಅಥವಾ ಅಲ್ಪ ಪ್ರಾಮುಖ್ಯವುಳ್ಳ ವಿಷಯವೋ ಎಂಬಂತೆ ಸಂಭವಿಸುವ ಸಂಗತಿಯಾಗಿದೆ. ಇದು ಖಂಡಿತವಾಗಿಯೂ ನಮ್ಮ ಶುಶ್ರೂಷೆಯ ಸೂಕ್ತ ವರ್ಣನೆಯಾಗಿರುವುದಿಲ್ಲ. ಪೌಲನ ವಿಷಯದಲ್ಲಿ ಸತ್ಯವಾಗಿದ್ದಂತೆಯೇ, ನಮ್ಮ ಸಾಕ್ಷಿಕೊಡುವಿಕೆಯ ಮೂಲಕ ದೇವರಿಗೆ ಮಹಿಮೆ ಸಲ್ಲಿಸುವುದು ನಮಗೆ ಪ್ರಾಮುಖ್ಯವಾದ ವಿಷಯವಾಗಿದೆ, ಮತ್ತು ಈ ವರ್ಷದ ನಮ್ಮ ಪ್ರಯಾಣಗಳಲ್ಲಿ ಸೂಕ್ತವಾಗಿರುವಲ್ಲೆಲ್ಲಾ ಒಂದು ಸಾಕ್ಷಿಯನ್ನು ಕೊಡುವುದು ನಮ್ಮ ಸಂಕಲ್ಪವಾಗಿರಬೇಕು. ಆದರೂ, ನಾವು ಇತರರನ್ನು ಸಮೀಪಿಸುವ ರೀತಿಯನ್ನು ಯೋಗ್ಯವಾಗಿಯೇ ಅನೌಪಚಾರಿಕ, ಅಂದರೆ ಹಾಯಾದ, ಸ್ನೇಹಪರ, ಮತ್ತು ಸಹಜವಾದ ರೀತಿ ಎಂದು ವರ್ಣಿಸಸಾಧ್ಯವಿದೆ. ಈ ಸಮೀಪಿಸುವಿಕೆಯು ಒಳ್ಳೆಯ ಫಲಿತಾಂಶಗಳನ್ನು ಕೊಡಸಾಧ್ಯವಿದೆ.
4. ತನ್ನ ಮನೆಯಿಂದ ಸಾಕ್ಷಿಕೊಡುವಂತೆ ಪೌಲನಿಗೆ ಯಾವುದು ಸಾಧ್ಯಗೊಳಿಸಿತು?
4 ಸಾಕ್ಷಿಯನ್ನು ಕೊಡಲಿಕ್ಕಾಗಿ ತಯಾರಿ ಮಾಡಿರಿ: ಪೌಲನು ರೋಮ್ನಲ್ಲಿ ಗೃಹಬಂಧನದಲ್ಲಿದ್ದಾಗ ಸಾಕ್ಷಿಕೊಡಲಿಕ್ಕಾಗಿ ಸಂದರ್ಭಗಳನ್ನು ರೂಪಿಸಿಕೊಳ್ಳಬೇಕಾಗಿತ್ತು. ಸ್ಥಳಿಕ ಯೆಹೂದಿ ಮುಖಂಡರನ್ನು ತನ್ನ ಮನೆಗೆ ಆಮಂತ್ರಿಸಲು ಅವನು ಮೊದಲ ಹೆಜ್ಜೆಯನ್ನು ತೆಗೆದುಕೊಂಡನು. (ಅ. ಕೃ. 28:17) ರೋಮ್ನಲ್ಲಿ ಒಂದು ಕ್ರೈಸ್ತ ಸಭೆಯಿತ್ತಾದರೂ, ಆ ನಗರದಲ್ಲಿದ್ದ ಯೆಹೂದಿ ಸಮಾಜಕ್ಕೆ ಕ್ರೈಸ್ತ ನಂಬಿಕೆಯ ಕುರಿತು ಸ್ವಲ್ಪವೇ ನೇರವಾದ ಮಾಹಿತಿಯಿತ್ತೆಂಬುದನ್ನು ಪೌಲನು ಅರಿತುಕೊಂಡನು. (ಅ. ಕೃ. 28:22; ರೋಮಾ. 1:7) ಯೇಸು ಕ್ರಿಸ್ತನ ಮತ್ತು ದೇವರ ರಾಜ್ಯದ ಕುರಿತು “ಸಮಗ್ರವಾಗಿ ಸಾಕ್ಷಿಯನ್ನು ನೀಡು”ವುದರಿಂದ ಅವನು ಹಿಂಜರಿಯಲಿಲ್ಲ.
5, 6.ಅನೌಪಚಾರಿಕವಾಗಿ ಸಾಕ್ಷಿಕೊಡಲು ನಮಗೆ ಯಾವ ಸಂದರ್ಭಗಳಿರಬಹುದು, ಮತ್ತು ಇವುಗಳನ್ನು ಪರಿಣಾಮಕಾರಿಯಾಗಿ ಮಾಡಲು ನಾವು ಯಾವ ಸಿದ್ಧತೆಗಳನ್ನು ಮಾಡಿಕೊಳ್ಳಸಾಧ್ಯವಿದೆ?
5 ನೀವು ಪ್ರಯಾಣಿಸುತ್ತಿರುವಾಗ ಸಂಪರ್ಕಿಸಬಹುದಾದ, ಯೆಹೋವನ ಸಾಕ್ಷಿಗಳ ಕುರಿತು ಸ್ವಲ್ಪವೇ ಜ್ಞಾನವನ್ನು ಹೊಂದಿರುವ ಎಲ್ಲಾ ಜನರ ಕುರಿತು ಮುಂದಾಗಿಯೇ ಯೋಚಿಸಿ. ನಾವು ಉಚಿತವಾದ ಬೈಬಲ್ ಅಧ್ಯಯನಗಳನ್ನು ನೀಡುತ್ತಿದ್ದೇವೆ ಎಂಬುದು ಕೂಡ ಅವರಿಗೆ ತಿಳಿಯದೇ ಇರಬಹುದು. ನೀವು ಪ್ರಯಾಣಿಸುತ್ತಿರುವಾಗ, ಆರಾಮ ನಿಲುಗಡೆಯ ಸಮಯಗಳಲ್ಲಿ, ಪೆಟ್ರೋಲ್ ಬಂಕ್ಗಳಲ್ಲಿ, ಷಾಪಿಂಗ್ ಮಾಡುತ್ತಿರುವಾಗ, ಹೋಟೆಲ್ಗಳಲ್ಲಿ ತಂಗುತ್ತಿರುವಾಗ, ರೆಸ್ಟರಾಂಟ್ಗಳಲ್ಲಿ ತಿನ್ನುತ್ತಿರುವಾಗ, ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುತ್ತಿರುವಾಗ, ಮತ್ತು ಇತ್ಯಾದಿ ಸಂದರ್ಭಗಳಲ್ಲಿ ಸಿಗುವವರೊಂದಿಗೆ ಸಾಕ್ಷಿಕೊಡಲು ಸಿಗುವ ಅವಕಾಶಗಳಿಗಾಗಿ ಎಚ್ಚರವಾಗಿರಿ. ಒಂದು ಸಂಭಾಷಣೆಯನ್ನು ಮತ್ತು ಒಂದು ಸಂಕ್ಷಿಪ್ತ ಸಾಕ್ಷಿಯನ್ನು ಪ್ರಾರಂಭಿಸಲಿಕ್ಕಾಗಿ ಏನು ಹೇಳಬೇಕು ಎಂದು ಮುಂಚಿತವಾಗಿಯೇ ನಿರ್ಧರಿಸಿರಿ. ಮುಂದಿನ ದಿನಗಳಲ್ಲಿ ನೀವು ಪ್ರಾಯಶಃ ನಿಮ್ಮ ನೆರೆಯವರಿಗೆ, ಸಂಬಂಧಿಕರಿಗೆ, ಜೊತೆಕಾರ್ಮಿಕರಿಗೆ, ಮತ್ತು ಇತರ ಪರಿಚಯಸ್ಥರಿಗೆ ಅನೌಪಚಾರಿಕ ಸಾಕ್ಷಿಯನ್ನು ಕೊಡುವ ಮೂಲಕ ಇದನ್ನು ರೂಢಿಮಾಡಿಕೊಳ್ಳಬಹುದು.
6 ಅನೌಪಚಾರಿಕವಾಗಿ ಸಾಕ್ಷಿಕೊಡುತ್ತಿರುವಾಗ ಉಪಯೋಗಿಸಲಿಕ್ಕಾಗಿ ನಿಮ್ಮ ಬಳಿ ಪ್ರಕಾಶನಗಳ ಸರಬರಾಯಿ ಇರಬೇಕು. ಯಾವ ಪ್ರಕಾಶನಗಳು? ನೀವು ಒಂದುವೇಳೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುತ್ತೀರೋ? ಎಂಬ ಟ್ರ್ಯಾಕ್ಟನ್ನು ಉಪಯೋಗಿಸಬಹುದು. ಬೈಬಲನ್ನು ಓದಲು ವಿಭಿನ್ನ ಕಾರಣಗಳನ್ನು ಕೊಟ್ಟಿರುವಂಥ ಮೊದಲ ಐದು ಪ್ಯಾರಗ್ರಾಫ್ಗಳಿಗೆ ಗಮನ ಸೆಳೆಯಿರಿ. ಟ್ರಾಕ್ಟ್ನ ಹಿಂದೆ ಉಚಿತ ಬೈಬಲ್ ಅಧ್ಯಯನದ ವಿನಂತಿಗಾಗಿರುವ ಕೂಪನ್ ಅನ್ನು ತೋರಿಸಿರಿ. ಕಿವಿಗೊಡುವ ಒಬ್ಬ ವ್ಯಕ್ತಿಯನ್ನು ನೀವು ಕಂಡುಕೊಳ್ಳುವಾಗ, ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಬೇರೊಂದು ಭಾಷೆಯನ್ನು ಮಾತಾಡುವ ಜನರನ್ನು ಭೇಟಿಯಾಗುವ ಸಾಧ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮೊಟ್ಟಿಗೆ ಗುಡ್ ನ್ಯೂಸ್ ಫಾರ್ ಆಲ್ ನೇಷನ್ಸ್ ಪುಸ್ತಿಕೆಯನ್ನು ಕೊಂಡೊಯ್ಯಿರಿ. ಒಂದು ಸಾಕ್ಷಿಯನ್ನು ಕೊಡಲಿಕ್ಕಾಗಿ ಅದನ್ನು ಹೇಗೆ ಉಪಯೋಗಿಸುವುದು ಎಂಬುದನ್ನು 2ನೇ ಪುಟವು ವಿವರಿಸುತ್ತದೆ. ನೀವು ಒಂದುವೇಳೆ ಕಾರ್ನಲ್ಲಿ ಪ್ರಯಾಣಿಸುತ್ತಿರುವುದಾದರೆ, ರಾಜ್ಯದ ಸಂದೇಶದಲ್ಲಿ ನಿಜವಾದ ಆಸಕ್ತಿಯನ್ನು ತೋರಿಸುವವರಿಗಾಗಿ ಇತರ ಕೆಲವು ಮೂಲಭೂತ ಪ್ರಕಾಶನಗಳನ್ನು ಕೊಂಡೊಯ್ಯಲು ಕೂಡ ನಿಮಗೆ ಸಾಧ್ಯವಾಗಬಹುದು.
7, 8. ನಾವು ಪ್ರಯಾಣಿಸುತ್ತಿರುವಾಗ ಮತ್ತು ವಿರಾಮದ ಸಮಯದಲ್ಲಿ ನಮ್ಮ ವೈಯಕ್ತಿಕ ತೋರಿಕೆ ಮತ್ತು ನಡತೆಯ ವಿಷಯದಲ್ಲಿ ಯಾವ ಎಚ್ಚರಿಕೆಗೆ ಕಿವಿಗೊಡಬೇಕು?
7 ನಿಮ್ಮ ತೋರಿಕೆ ಮತ್ತು ನಡತೆಯ ಕಡೆಗೆ ಗಮನಹರಿಸಿರಿ: ನಮ್ಮ ನಡತೆ ಹಾಗೂ ನಮ್ಮ ಉಡುಗೆತೊಡುಗೆಯು ಬೇರೆಯವರಿಗೆ ಒಂದು ತಪ್ಪಾದ ಅಭಿಪ್ರಾಯವನ್ನು ಮೂಡಿಸುತ್ತಿಲ್ಲ ಅಥವಾ ಅವರು ಯೆಹೋವನ ಸಂಸ್ಥೆಗೆ “ವಿರುದ್ಧವಾಗಿ ಮಾತಾಡು”ವಂತೆ ಮಾಡುತ್ತಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. (ಅ. ಕೃ. 28:22) ಇದು ಕೇವಲ ನಾವು ಸಮ್ಮೇಳನಗಳು ಮತ್ತು ಅಧಿವೇಶನಗಳಿಗೆ ಹಾಜರಾಗುವಾಗ ಮಾತ್ರವಲ್ಲ, ಬದಲಿಗೆ ನಾವು ಪ್ರಯಾಣಿಸುತ್ತಿರುವಾಗ ಹಾಗೂ ನಮ್ಮ ವಿರಾಮದ ಸಮಯವನ್ನೂ ಅರ್ಥೈಸುತ್ತದೆ. 2002, ಆಗಸ್ಟ್ 1ರ ಕಾವಲಿನಬುರುಜುವಿನ ಪುಟ 18, ಪ್ಯಾರಗ್ರಾಫ್ 14ರಲ್ಲಿ ಹೀಗೆ ಎಚ್ಚರಿಸಲಾಗಿದೆ: ‘ನಮ್ಮ ತೋರಿಕೆಯು ಪ್ರದರ್ಶನಾತ್ಮಕವೂ, ವಿಚಿತ್ರವೂ, ಕಾಮಪ್ರಚೋದಕವೂ, ಅಂಗಾಂಗಗಳನ್ನು ಅಶ್ಲೀಲವಾಗಿ ತೋರಿಸುವಂತಹದ್ದೂ, ಗೀಳುಪ್ರಿಯವೂ ಆಗಿರಬಾರದು. ಇದಕ್ಕೆ ಕೂಡಿಸಿ, “ದೇವಭಕ್ತಿ”ಯನ್ನು ಪ್ರತಿಬಿಂಬಿಸುವಂಥ ರೀತಿಯಲ್ಲಿ ನಾವು ಬಟ್ಟೆ ಧರಿಸಬೇಕು. ಇದು ನಾವು ಚಿಂತಿಸುವಂತೆ ಮಾಡುತ್ತದೆ, ಅಲ್ಲವೆ? ಕೇವಲ ಕೂಟಗಳಿಗೆ [ಅಥವಾ ಅಧಿವೇಶನ ಸೆಷನ್ಗಳಿಗೆ] ಯೋಗ್ಯ ರೀತಿಯ ಉಡುಪನ್ನುಟ್ಟು, ಆ ಬಳಿಕ ಬೇರೆ ಸಮಯಗಳಲ್ಲಿ ಬಟ್ಟೆಯ ವಿಷಯದಲ್ಲಿ ತೀರ ಅಲಕ್ಷ್ಯಭಾವದಿಂದಿರಬೇಕೆಂದು ಇದರ ಅರ್ಥವಲ್ಲ. ನಾವು ದಿನದ 24 ತಾಸೂ ಕ್ರೈಸ್ತರಾಗಿರುವುದರಿಂದ, ನಮ್ಮ ವೈಯಕ್ತಿಕ ತೋರಿಕೆಯು ಸದಾ ಭಕ್ತಿ ಮತ್ತು ಗೌರವಯೋಗ್ಯವಾದ ಮನೋಭಾವವನ್ನು ಪ್ರತಿಬಿಂಬಿಸಬೇಕು.’—1 ತಿಮೊ. 2:9, 10.
8 ನಾವು ಸಭ್ಯವಾದ ಮತ್ತು ಘನತೆಗೆ ತಕ್ಕಂತ ರೀತಿಯ ವಸ್ತ್ರಗಳನ್ನು ಧರಿಸಬೇಕು. ನಮ್ಮ ತೋರಿಕೆ ಮತ್ತು ನಡತೆಯು ದೇವರಲ್ಲಿನ ನಮ್ಮ ನಂಬಿಕೆಯನ್ನು ಸದಾ ಪ್ರತಿಬಿಂಬಿಸುವುದಾದರೆ, ನಮ್ಮ ವೈಯಕ್ತಿಕ ತೋರಿಕೆಯಲ್ಲಿ ಕುಂದು ಇರುವ ಕಾರಣ ನಾವು ಅನೌಪಚಾರಿಕವಾಗಿ ಸಾಕ್ಷಿಕೊಡುವುದರಿಂದ ಹಿಂದೆಗೆಯುವಂತೆ ಎಂದಿಗೂ ಒತ್ತಾಯಿಸಲ್ಪಡೆವು.—1 ಪೇತ್ರ 3:15.
9. ರೋಮ್ನಲ್ಲಿನ ಸಾಕ್ಷಿಕಾರ್ಯದಲ್ಲಿ ಪೌಲನು ಯಾವ ಯಶಸ್ಸನ್ನು ಪಡೆದುಕೊಂಡನು?
9 ಅನೌಪಚಾರಿಕ ಸಾಕ್ಷಿ ಪ್ರತಿಫಲದಾಯಕವಾಗಿದೆ: ಪೌಲನು ರೋಮ್ನಲ್ಲಿ ಗೃಹಬಂಧನದಲ್ಲಿದ್ದ ಎರಡು ವರ್ಷಗಳಲ್ಲಿ ತನ್ನ ಸಾಕ್ಷಿಕಾರ್ಯದ ಪ್ರಯತ್ನಗಳ ಒಳ್ಳೆಯ ಫಲಿತಾಂಶಗಳನ್ನು ಕಂಡನು. “ಹೇಳಿದ ಮಾತುಗಳಿಗೆ ಕೆಲವರು ಒಪ್ಪಿಕೊಂಡರು” ಎಂದು ಲೂಕನು ವರದಿಸುತ್ತಾನೆ. (ಅ. ಕೃ. 28:24) ‘ನನಗೆ ಸಂಭವಿಸಿರುವದು ಸುವಾರ್ತೆಯ ಪ್ರಸಾರಣೆಗೇ ಸಹಾಯವಾಯಿತು. ಹೇಗಂದರೆ ನನ್ನ ಬೇಡಿಗಳು ಕ್ರಿಸ್ತನ ನಿಮಿತ್ತವೇ ಎಂದು ಅರಮನೆಯ ಪಹರೆಯವರೆಲ್ಲರಿಗೂ ಮಿಕ್ಕಾದವರೆಲ್ಲರಿಗೂ ಪ್ರಸಿದ್ಧವಾಯಿತು. ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬೇಡಿಗಳಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವದಕ್ಕೆ ಇನ್ನೂ ವಿಶೇಷ ಧೈರ್ಯ ಹೊಂದಿದ್ದಾರೆ’ ಎಂದು ಪೌಲನು ಬರೆದಾಗ, “ಸಮಗ್ರವಾಗಿ ಸಾಕ್ಷಿಯನ್ನು ನೀಡು”ವುದರ ಪರಿಣಾಮಕಾರಿತ್ವವನ್ನು ಅವನು ತಾನೇ ಬೆಲೆಕಟ್ಟಿದನು.—ಫಿಲಿ. 1:12-14.
10. ಕಳೆದ ವರ್ಷ ಸಾಕ್ಷಿಕೊಡುವುದರಲ್ಲಿ ಒಬ್ಬ ದಂಪತಿಯು ಯಾವ ಯಶಸ್ಸನ್ನು ಕಂಡುಕೊಂಡರು?
10 ಕಳೆದ ವರ್ಷ, ಜಿಲ್ಲಾ ಅಧಿವೇಶನದಲ್ಲಿ ಇಡೀ ದಿನವನ್ನು ಕಳೆದ ಬಳಿಕ, ಒಬ್ಬ ದಂಪತಿಯು ತಮ್ಮ ಅಧಿವೇಶನ ಬ್ಯಾಡ್ಜ್ ಕಾರ್ಡ್ನ ಬಗ್ಗೆ ಕೇಳಿದ ಒಬ್ಬಾಕೆ ಹೋಟೆಲ್ನಲ್ಲಿ ಕೆಲಸಮಾಡುವ ಪರಿಚಾರಿಕೆಗೆ ಅನೌಪಚಾರಿಕವಾಗಿ ಸಾಕ್ಷಿಯನ್ನು ನೀಡುವ ಮೂಲಕ ಪ್ರತಿಫಲದಾಯಕ ಅನುಭವವನ್ನು ಪಡೆದುಕೊಂಡರು. ಅವರು ಅವಳಿಗೆ ಅಧಿವೇಶನದ ಕುರಿತು ಮತ್ತು ಮಾನವಕುಲದ ಭವಿಷ್ಯಕ್ಕಾಗಿ ಬೈಬಲು ಒದಗಿಸುವ ನಿರೀಕ್ಷೆಯ ಕುರಿತಾಗಿಯೂ ತಿಳಿಸಿದರು. ಅವರು ಅವಳಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುತ್ತೀರೋ? ಎಂಬ ಟ್ರ್ಯಾಕ್ಟನ್ನು ಕೊಟ್ಟು ಉಚಿತ ಬೈಬಲ್ ಅಧ್ಯಯನದ ಏರ್ಪಾಡಿನ ಕುರಿತು ಅವಳಿಗೆ ವಿವರಿಸಿದರು. ತನ್ನನ್ನು ಯಾರಾದರೂ ಭೇಟಿಮಾಡುವಂತೆ ಆ ಸ್ತ್ರೀ ಕೇಳಿಕೊಂಡಳು; ತನ್ನ ಹೆಸರು ಮತ್ತು ವಿಳಾಸವನ್ನು ಟ್ರ್ಯಾಕ್ಟ್ನ ಹಿಂಬದಿಯಲ್ಲಿ ತುಂಬಿಸಿ, ಅಗತ್ಯವಾದ ಏರ್ಪಾಡುಗಳನ್ನು ಮಾಡುವಂತೆ ಆ ದಂಪತಿಯನ್ನು ಕೇಳಿಕೊಂಡಳು. “ಸಮಗ್ರವಾಗಿ ಸಾಕ್ಷಿಯನ್ನು ನೀಡು”ವುದರಲ್ಲಿ ಶ್ರದ್ಧೆಯುಳ್ಳವರಾಗಿರುವ ಮೂಲಕ ನೀವು ಯಾವ ಯಶಸ್ಸನ್ನು ಗಳಿಸಬಲ್ಲಿರಿ?
11. “ಸಮಗ್ರವಾಗಿ ಸಾಕ್ಷಿಯನ್ನು ನೀಡು”ತ್ತಾ ಸುವಾರ್ತೆಯನ್ನು ಸಮರ್ಥಿಸಲಿಕ್ಕಾಗಿ ನಾವು ಯಾವ ಗುಣಗಳನ್ನು ಬೆಳೆಸಿಕೊಳ್ಳಬೇಕು?
11 ಸಮಗ್ರವಾಗಿ ಸುವಾರ್ತೆಯನ್ನು ಸಮರ್ಥಿಸಿರಿ: ತನ್ನ ಹುರುಪಿನ ಮಾದರಿಯನ್ನು ಜೊತೆ ಕ್ರೈಸ್ತರು ಹಿಂಬಾಲಿಸುತ್ತಿದ್ದಾರೆ ಎಂಬುದನ್ನು ಪೌಲನು ತಿಳಿದುಕೊಂಡಾಗ ಅವನೆಷ್ಟು ಸಂತೋಷಪಟ್ಟಿರಬಹುದು ಎಂಬುದನ್ನು ತುಸು ಊಹಿಸಿಕೊಳ್ಳಿರಿ! ನಮ್ಮ ಬೈಬಲ್ ಆಧಾರಿತ ನಂಬಿಕೆಗಳ ಕುರಿತು ಅನೌಪಚಾರಿಕವಾಗಿ ಸಾಕ್ಷಿಕೊಡುತ್ತಾ ಸುವಾರ್ತೆಯನ್ನು ಸಮರ್ಥಿಸುವುದರಲ್ಲಿ ನಮ್ಮಿಂದಾದುದೆಲ್ಲವನ್ನೂ ನಾವು ಮಾಡೋಣ.
[ಪುಟ 3 ರಲ್ಲಿರುವ ಚೌಕ]
ಅನೌಪಚಾರಿಕ ಸಾಕ್ಷಿಗಾಗಿ ಬೇಕಾಗಿರುವ ಪ್ರಕಾಶನಗಳು
■ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುತ್ತೀರೋ? (ಟ್ರ್ಯಾಕ್ಟ್)
■ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? (ಬ್ರೋಷರ್)
■ ಗುಡ್ ನ್ಯೂಸ್ ಫಾರ್ ಆಲ್ ನೇಷನ್ಸ್ (ಪುಸ್ತಿಕೆ)
■ ಇತರ ಮೂಲಭೂತ ಪ್ರಕಾಶನಗಳು
[ಪುಟ 4 ರಲ್ಲಿರುವ ಚೌಕ]
ಅವರನ್ನು ಮರೆಯಬೇಡಿ!
ಯಾರನ್ನು ಮರೆಯಬಾರದು? ಕ್ರಿಸ್ತನ ಮರಣದ ಜ್ಞಾಪಕಾಚರಣೆ ಅಥವಾ ವಿಶೇಷ ಭಾಷಣಕ್ಕಾಗಿ ಕೂಡಿಬಂದಿದ್ದ ಎಲ್ಲಾ ಆಸಕ್ತರನ್ನು ಮರೆಯಬೇಡಿ. ಈ ವರ್ಷದ ಸಮ್ಮೇಳನಗಳು ಮತ್ತು ಅಧಿವೇಶನಗಳಿಗೆ ಹಾಜರಾಗುವಂತೆ ನಾವು ಅವರನ್ನು ಆಮಂತ್ರಿಸಿದ್ದೇವೋ? ಬಹುಶಃ ಅವರಲ್ಲಿ ಅನೇಕರು ಪ್ರೀತಿಯಿಂದ ಪ್ರೋತ್ಸಾಹಿಸಲ್ಪಡುವುದಾದರೆ, ಅವುಗಳಿಗೆ ಹಾಜರಾಗುವರು. ಈ ಕೂಟಗಳಲ್ಲಿನ ಆತ್ಮೋನ್ನತಿಮಾಡುವ ಸಹವಾಸ ಮತ್ತು ಪ್ರೋತ್ಸಾಹದಾಯಕ ಆತ್ಮಿಕ ಕಾರ್ಯಕ್ರಮದಲ್ಲಿ ಆನಂದಿಸುವಾಗ, ಅವರು ಯೆಹೋವನ ಮತ್ತು ಆತನ ಸಂಸ್ಥೆಯ ಹತ್ತಿರಕ್ಕೆ ಸೆಳೆಯಲ್ಪಡುವರು. ಒಂದು ಆಮಂತ್ರಣವನ್ನು ಕೊಟ್ಟು, ಅವರು ಬರುತ್ತಾರೋ ಇಲ್ಲವೋ ಎಂದು ಏಕೆ ನೋಡಬಾರದು? ಅವರಿಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ಕೊಡಿರಿ, ಮತ್ತು ಸಮ್ಮೇಳನ ಹಾಗೂ ಅಧಿವೇಶನಗಳ ತಾರೀಖುಗಳು, ಆ ನಿವೇಶನಗಳಿಗೆ ತಲಪಬಹುದಾದ ದಾರಿ, ಸೆಷನ್ಗಳು ಪ್ರಾರಂಭವಾಗುವ ಮತ್ತು ಮುಗಿಯುವ ಸಮಯಗಳು, ಮತ್ತು ಫೆಬ್ರವರಿ 2003ರ ನಮ್ಮ ರಾಜ್ಯದ ಸೇವೆಯಲ್ಲಿ ಹಾಗೂ 2003, ಜೂನ್ 8ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಕೊನೆಯ ಪುಟದಲ್ಲಿ ಸಂಕ್ಷಿಪ್ತವಾಗಿ ತಿಳಿಸಲ್ಪಟ್ಟಿರುವ ಕಾರ್ಯಕ್ರಮಗಳ ಮುನ್ನೋಟವನ್ನೂ ಕೊಡಿರಿ.