ಪತ್ರಿಕಾ ಮಾರ್ಗಗಳ ಮೂಲಕ “ರಾಜ್ಯದ ಬೀಜವನ್ನು ಬಿತ್ತುವುದು”
1 ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ಇಂಗ್ಲಿಷ್) ಎಂಬ ಪುಸ್ತಕದಲ್ಲಿನ ಗೀತ 133, “ರಾಜ್ಯದ ಬೀಜವನ್ನು ಬಿತ್ತುವುದು” ಎಂಬ ಶೀರ್ಷಿಕೆಯನ್ನು ಹೊಂದಿದೆ. ಈ ಗೀತೆಯು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು, ಬೀಜವನ್ನು ಬಿತ್ತುವ ಕೆಲಸಕ್ಕೆ ಹೋಲಿಸಲಾಗಿರುವ ಯೇಸುವಿನ ಸಾಮ್ಯದ ಮೇಲೆ ಆಧಾರಿತವಾಗಿದೆ. (ಮತ್ತಾ. 13:4-8; 19:23) ಗೀತೆಯ ಲಹರಿಗಳು ಹೀಗಿವೆ: “ಒಳ್ಳೆಯ ನೆಲದ ಮೇಲೆ ಬೀಳುವ ಬೀಜವು/ಹೆಚ್ಚಿನ ಸಮಯ ನಿಮ್ಮ ಮೇಲೆಯೇ ಅವಲಂಬಿಸಿರುವುದು.” ನಮ್ಮ ಶುಶ್ರೂಷೆಯ ಪರಿಣಾಮಕಾರಿತ್ವವನ್ನು ನಾವು ಹೇಗೆ ಹೆಚ್ಚಿಸಬಲ್ಲೆವು? ಒಂದು ವಿಧವು, ಪತ್ರಿಕಾ ಮಾರ್ಗವನ್ನು ಆರಂಭಿಸುವುದು ಮತ್ತು ಅದನ್ನು ಅನುಸರಿಸಿಕೊಂಡು ಹೋಗುವುದಾಗಿದೆ.
2 ಒಂದು ಪತ್ರಿಕಾ ಮಾರ್ಗದಿಂದ ಹಲವಾರು ಗುರಿಗಳನ್ನು ಸಾಧಿಸಸಾಧ್ಯವಿದೆ. (1) ಎರಡು ವಾರಗಳಿಗೊಮ್ಮೆ ಕ್ರಮವಾಗಿ ಭೇಟಿನೀಡುವುದು, ಆಸಕ್ತಿಯನ್ನು ತೋರಿಸಿರುವ ವ್ಯಕ್ತಿಯೊಂದಿಗೆ ಒಂದು ಸ್ನೇಹಶೀಲ ಸಂಬಂಧವನ್ನು ಬೆಳೆಸಿಕೊಳ್ಳಲು ನಿಮಗೆ ಸಹಾಯಮಾಡುತ್ತದೆ. (2) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿರುವ ಜೀವರಕ್ಷಕ ಮಾಹಿತಿಯನ್ನು ನೀವು ಆ ವ್ಯಕ್ತಿಗೆ ಕ್ರಮವಾಗಿ ಒದಗಿಸುತ್ತೀರಿ. (3) ನಿಮ್ಮ ಸಂಭಾಷಣೆಗಳ ಮೂಲಕ, ಆ ವ್ಯಕ್ತಿಯು ಶಾಸ್ತ್ರೀಯ ಸತ್ಯಕ್ಕಾಗಿ ಹಂಬಲವನ್ನು ಬೆಳೆಸಿಕೊಳ್ಳುವಂತೆ ನೀವು ಸಹಾಯಮಾಡಬಹುದು, ಮತ್ತು ಇದು ಒಂದು ಬೈಬಲ್ ಅಧ್ಯಯನಕ್ಕೆ ನಡೆಸಸಾಧ್ಯವಿದೆ.—1 ಪೇತ್ರ 2:2.
3 ಒಂದು ಪತ್ರಿಕಾ ಮಾರ್ಗವನ್ನು ಪ್ರಾರಂಭಿಸುವ ವಿಧ: ನಮ್ಮ ಪತ್ರಿಕೆಗಳಲ್ಲಿ ಯಾರಾದರೂ ಆಸಕ್ತಿಯನ್ನು ತೋರಿಸುವಾಗ, ಪ್ರತಿಯೊಂದು ಸಂಚಿಕೆಯಲ್ಲಿ ಎದ್ದುಕಾಣುವ ಲೇಖನಗಳು ಬರುತ್ತವೆಂದು ಮತ್ತು ಪ್ರತಿ ಎರಡು ವಾರಗಳಿಗೊಮ್ಮೆ ಅದನ್ನು ನೀಡಲು ನೀವು ಸಂತೋಷಗೊಳ್ಳುವಿರಿ ಎಂದು ಅವರಿಗೆ ಹೇಳಿರಿ. ಅಲ್ಲಿಂದ ಹಿಂದಿರುಗಿದ ಮೇಲೆ, ನೀವು ಆ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು, ಭೇಟಿಮಾಡಿದ ದಿನಾಂಕ, ನೀಡಿದ ಸಂಚಿಕೆಯ ದಿನಾಂಕಗಳು, ನೀವು ತೋರಿಸಿದಂಥ ಲೇಖನವನ್ನು, ಮತ್ತು ಆ ವ್ಯಕ್ತಿಗೆ ತುಂಬ ಹಿಡಿಸಿದ ವಿಷಯಗಳನ್ನು ಬರೆದುಕೊಳ್ಳಿರಿ.
4 ಕೆಲವೇ ವ್ಯಕ್ತಿಗಳೊಂದಿಗೆ ನೀವು ಒಂದು ಪತ್ರಿಕಾ ಮಾರ್ಗವನ್ನು ಪ್ರಾರಂಭಿಸಸಾಧ್ಯವಿದೆ. ಅನಂತರ ನೀವು ಪತ್ರಿಕಾ ಮಾರ್ಗವನ್ನು ವಿಸ್ತರಿಸಲು ಕಾರ್ಯಮಾಡಿರಿ. ನೀವು ಯಾರಿಗೆ ಪತ್ರಿಕೆಗಳನ್ನು ನೀಡುತ್ತೀರೋ ಅಂಥವರನ್ನು ಈಗಾಗಲೇ ಪ್ರಾರಂಭಿಸಿರುವ ಮಾರ್ಗಕ್ಕೆ ಸೇರಿಸುವ ಮೂಲಕ ಇದನ್ನು ಮಾಡಬಹುದು. ನಿಮ್ಮ ಪತ್ರಿಕಾ ಮಾರ್ಗವು ಹೆಚ್ಚಾದಂತೆ, ನೀವು ಅದನ್ನು ಟೆರಿಟೊರಿಗನುಸಾರವಾಗಿ ಸಂಘಟಿಸಸಾಧ್ಯವಿದೆ. ಇದು ಆ ಮಾರ್ಗವನ್ನು ಸಂಪೂರ್ಣವಾಗಿ ಆವರಿಸಲು ಸುಲಭಸಾಧ್ಯವನ್ನಾಗಿ ಮಾಡುತ್ತದೆ. ಪ್ರತಿಯೊಂದು ಭೇಟಿಯಲ್ಲೂ ಯಾವ ಸಂಚಿಕೆಯು ನೀಡಲ್ಪಟ್ಟಿದೆ ಮತ್ತು ಯಾವಾಗ ಎಂಬುದರ ಕುರಿತಾಗಿ ತಪ್ಪದೇ ಜಾಗರೂಕತೆಯಿಂದ ಬರೆದಿಡಿರಿ. ನಿಮ್ಮ ಸಂಭಾಷಣೆಗಳ ಕುರಿತಾಗಿ ಹಾಗೂ ಪುನಃ ಒಮ್ಮೆ ಆ ವ್ಯಕ್ತಿಯನ್ನು ಭೇಟಿಯಾಗುವಾಗ ಅವನ ಆಸಕ್ತಿಯನ್ನು ಹೇಗೆ ಹೆಚ್ಚಿಸಸಾಧ್ಯವಿದೆ ಎಂಬುದರ ಕುರಿತಾಗಿ ಟಿಪ್ಪಣಿಗಳನ್ನು ಸೇರಿಸಿರಿ.
5 ವ್ಯಾಪಾರಿ ಹಾಗೂ ವೃತ್ತಿಪರ ಜನರನ್ನು ಒಳಗೂಡಿಸುವುದು: ಅಂಗಡಿಯವರು ಮತ್ತು ಇತರ ವೃತ್ತಿಗಳಲ್ಲಿರುವವರು ನಮ್ಮ ಪತ್ರಿಕೆಗಳನ್ನು ಕ್ರಮವಾಗಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅನುಭವವು ತೋರಿಸಿದೆ. ಒಬ್ಬ ಹಿರಿಯನ ಪತ್ರಿಕಾ ಮಾರ್ಗದಲ್ಲಿ, ಅವನಿದ್ದ ಪಟ್ಟಣದ ಮೇಯರ್ ಸಹ ಇದ್ದನು. ಕಟ್ಟಡ ಸಾಮಾಗ್ರಿಗಳನ್ನು ಸರಬರಾಜು ಮಾಡುವ ಕಂಪನಿಯ 80 ವರ್ಷ ಪ್ರಾಯದ ಒಡೆಯನೊಂದಿಗೆ, ಪ್ರಚಾರಕನೊಬ್ಬನು ಒಂದು ಅಭ್ಯಾಸವನ್ನು ಪ್ರಾರಂಭಿಸಿದನು. ಇದು, ಕ್ರಮವಾಗಿ ಆ ವ್ಯಕ್ತಿಗೆ ಹತ್ತು ವರ್ಷಗಳ ತನಕ ಪತ್ರಿಕೆಗಳನ್ನು ಕೊಟ್ಟ ಬಳಿಕವೇ!
6 ಒಬ್ಬ ಪಯನೀಯರ್ ಸಹೋದರಿಯು ಒಂದು ಅಂಗಡಿಗೆ ಹೋದಳು, ಅಲ್ಲಿ ಆಕೆ ಒಬ್ಬ ದಂಪತಿಗಳನ್ನು ಭೇಟಿಯಾದಳು. ಆದರೆ ಅವರು ಆಕೆಗೆ ಅಷ್ಟೇನೂ ಸ್ನೇಹಭಾವವನ್ನು ತೋರಿಸಲಿಲ್ಲ. ಆದರೂ ಅವರು ಪತ್ರಿಕೆಗಳನ್ನು ತೆಗೆದುಕೊಂಡರಾದುದರಿಂದ ಆಕೆ ಆ ದಂಪತಿಗಳನ್ನು ತನ್ನ ಪತ್ರಿಕಾ ಮಾರ್ಗದಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಿದಳು. ಅವರು ತುಂಬ ನಿಷ್ಠುರರಾಗಿದ್ದುದರಿಂದ ಮತ್ತು ಆ ಸಹೋದರಿಯು ಅವರ ಅಭಿಪ್ರಾಯವನ್ನು ಕೇಳುವಾಗಲೂ, ಅವರು ಏನನ್ನೂ ಮಾತಾಡುತ್ತಿರಲಿಲ್ಲವಾದುದರಿಂದ, ಆಕೆ ಅವರನ್ನು ಭೇಟಿಮಾಡುವುದನ್ನು ನಿಲ್ಲಿಸಿಬಿಡಲು ಯೋಚಿಸಿದಳು. ಆದರೆ ಆ ಸಹೋದರಿಯು ಅದರ ಕುರಿತಾಗಿ ಪ್ರಾರ್ಥಿಸಿದಳು ಮತ್ತು ಕೊನೆಗೆ ಅವಳು ಆ ದಂಪತಿಗಳಿಗೆ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡಿದಳು. ಅದನ್ನು ಓದಿದ ಅನಂತರ, ಪತ್ನಿಯು ಉದ್ಗರಿಸಿದ್ದು: “ಕೊನೆಗೂ, ನನಗೆ ಸತ್ಯವು ಸಿಕ್ಕಿತು!” ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಲಾಯಿತು ಮತ್ತು ಅನಂತರ, ಆ ದಂಪತಿಗಳು ದೀಕ್ಷಾಸ್ನಾನವನ್ನು ಪಡೆದುಕೊಂಡರು. ಆ ಪಯನೀಯರಳ ಪಟ್ಟುಹಿಡಿಯುವಿಕೆಯು ನಿಜವಾಗಿಯೂ ಒಳ್ಳೆಯ ಫಲವನ್ನು ಉತ್ಪಾದಿಸಿತು.
7 ಪುನರ್ಭೇಟಿಗಳನ್ನು ಮಾಡುವುದು: ನೀವು ಒಂದು ಹೊಸ ಪತ್ರಿಕೆಯನ್ನು ಪಡೆದುಕೊಳ್ಳುವಾಗ, ಪ್ರತಿಯೊಂದು ಲೇಖನವನ್ನು ಓದಿರಿ. ನಿಮ್ಮ ಪತ್ರಿಕಾ ಮಾರ್ಗದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಹಿಡಿಸುವ ಅಂಶಗಳನ್ನು ಹುಡುಕಿರಿ. ಅನಂತರ ಹಿಂದಿರುಗುವಾಗ, ನೀವು ಹೀಗೆ ಹೇಳಸಾಧ್ಯವಿದೆ: “ನಾನು ಈ ಲೇಖನವನ್ನು ಓದುತ್ತಿದ್ದಾಗ, ನಿಮ್ಮನ್ನು ಮತ್ತು ನಿಮಗೆ ಇದು ಹೇಗೆ ಆಸಕ್ತಿಯನ್ನು ಉಂಟುಮಾಡಬಹುದು ಎಂಬುದನ್ನು ನೆನೆಸಿಕೊಂಡೆ.” ಎಲ್ಲ ವಯೋಮಿತಿಯ ಪ್ರಚಾರಕರು ಒಂದು ಪತ್ರಿಕಾ ಮಾರ್ಗವನ್ನಿಡುವ ಮೂಲಕ ಆನಂದವನ್ನು ಕಂಡುಕೊಳ್ಳಸಾಧ್ಯವಿದೆ. ಎಳೆಯ ಮಗುವು ಸಹ ಹೀಗೆ ಹೇಳಸಾಧ್ಯವಿದೆ: “ನಿಮ್ಮನ್ನು ಪುನಃ ಭೇಟಿಯಾದುದಕ್ಕೆ ನನಗೆ ತುಂಬ ಸಂತೋಷವಾಗಿದೆ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಇತ್ತೀಚಿನ ನಿಮ್ಮ ಪ್ರತಿಗಳು ಬಂದಿವೆ. . . . ಎಂಬ ಶೀರ್ಷಿಕೆಯುಳ್ಳ ಈ ಲೇಖನವನ್ನು ನೀವು ಇಷ್ಟಪಡುವಿರಿ ಎಂದು ನಾನು ನೆನೆಸುತ್ತೇನೆ.”
8 “ನಮ್ಮ ಮುಂದಿನ ಸಂಚಿಕೆಯಲ್ಲಿ” ಎಂಬ ಶೀರ್ಷಿಕೆಯುಳ್ಳ ರೇಖಾಚೌಕಕ್ಕೆ ಗಮನವನ್ನು ಸೆಳೆಯುವ ಮೂಲಕ, ಮುಂದೆ ಬರಲಿರುವ ಲೇಖನಗಳಿಗಾಗಿ ಆಸಕ್ತಿಯನ್ನು ಕೆರಳಿಸಿರಿ. ಲೇಖನಗಳು ಸರಣಿಯಾಗಿ ಬರುವಾಗ ಇದನ್ನು ತಿಳಿಸಿರಿ ಮತ್ತು ಅದರ ಎಲ್ಲ ಭಾಗವನ್ನೂ ತಪ್ಪದೇ ಓದುವಂತೆ ವಾಚಕನನ್ನು ಉತ್ತೇಜಿಸಿರಿ. ನಿಮ್ಮ ಪತ್ರಿಕಾ ಮಾರ್ಗದಲ್ಲಿರುವ ವ್ಯಕ್ತಿಗೆ ನೀವು ಪತ್ರಿಕೆಯನ್ನು ನೀಡುವ ಪ್ರತಿ ಬಾರಿಯೂ, ಅದನ್ನು ಒಂದು ಪುನರ್ಭೇಟಿಯನ್ನಾಗಿ ಲೆಕ್ಕಕ್ಕೆ ತೆಗೆದುಕೊಳ್ಳಬಹುದು ಎಂಬುದನ್ನು ಮರೆಯಬೇಡಿರಿ. ಇದಕ್ಕಿಂತ ಹೆಚ್ಚಾಗಿ, ಈ ಭೇಟಿಗಳನ್ನು ಮನೆ ಬೈಬಲ್ ಅಭ್ಯಾಸಗಳಾಗಿ ಮಾರ್ಪಡಿಸುವುದೇ ನಮ್ಮ ಗುರಿಯಾಗಿದೆ ಎಂಬುದನ್ನು ಜ್ಞಾಪಕದಲ್ಲಿಡಿರಿ.
9 ನಿಮ್ಮ ಪತ್ರಿಕಾ ಮಾರ್ಗದಲ್ಲಿರುವ ಜನರನ್ನು ಕ್ರಮವಾಗಿ ಭೇಟಿಯಾಗಿರಿ: ನಿಮ್ಮ ಪತ್ರಿಕಾ ಮಾರ್ಗದಲ್ಲಿರುವವರನ್ನು, ಅನುಕೂಲಕರವಾಗಿರುವ ಯಾವುದೇ ಸಮಯದಲ್ಲಿ ನೀವು ಭೇಟಿಮಾಡಸಾಧ್ಯವಿದೆ. ವಾರದ ದಿನದಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಅಥವಾ ಮನೆಮನೆಯ ಸಾರುವಿಕೆಯಲ್ಲಿ ಸಮಯವನ್ನು ಕಳೆದ ಬಳಿಕ, ವಾರಾಂತ್ಯದಲ್ಲಿ ಮಾಡಬಹುದು. ಅನಾರೋಗ್ಯದ ಕಾರಣ ಅಥವಾ ರಜೆಯಲ್ಲಿರುವ ಕಾರಣ ನೀವು ನಿಮ್ಮ ಪತ್ರಿಕಾ ಮಾರ್ಗವನ್ನು ಅನುಸರಿಸಲು ಅಶಕ್ತರಾಗಿರುವುದಾದರೆ, ನಿಮ್ಮ ಕುಟುಂಬದಲ್ಲಿರುವ ಅಥವಾ ಸಭೆಯಲ್ಲಿರುವ ಮತ್ತೊಬ್ಬ ಪ್ರಚಾರಕನು ನಿಮ್ಮ ಪರವಾಗಿ ಪತ್ರಿಕೆಗಳನ್ನು ಕೊಟ್ಟುಬರುವಂತೆ ಏರ್ಪಡಿಸಿರಿ. ಈ ರೀತಿಯಲ್ಲಿ, ನಿಮ್ಮ ಮಾರ್ಗದಲ್ಲಿರುವವರು ತಕ್ಕ ಸಮಯದಲ್ಲಿ ತಮ್ಮ ಪತ್ರಿಕೆಗಳನ್ನು ತಪ್ಪದೇ ಪಡೆದುಕೊಳ್ಳುವರು.
10 ರಾಜ್ಯದ ಬೀಜವನ್ನು ಬಿತ್ತುವ ಒಂದು ವಿಧವು, ನಿಮ್ಮ ಪತ್ರಿಕಾ ಮಾರ್ಗದಲ್ಲಿರುವ ಎಲ್ಲರಿಗೂ ಕ್ರಮವಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ತೆಗೆದುಕೊಂಡುಹೋಗಿ ಕೊಡುವುದೇ ಆಗಿದೆ. ನೀವು ಅವರಿಗೆ ಶಾಸ್ತ್ರೀಯ ಸತ್ಯವನ್ನು ಕಲಿಸಿದಂತೆ, ಅವರು ರಾಜ್ಯದ ಅರ್ಥವನ್ನು ಪಡೆದುಕೊಳ್ಳಬಹುದು ಮತ್ತು ಅನಂತರ ಕಟ್ಟಕಡೆಗೆ ನಿಮ್ಮೊಂದಿಗೆ ರಾಜ್ಯದ ಫಲವನ್ನು ಉತ್ಪಾದಿಸಬಹುದು.—ಮತ್ತಾ. 13:8, 23.