“ಯೋಗ್ಯ ಪ್ರವೃತ್ತಿಯುಳ್ಳ”ವರಿಗೆ ಸಹಾಯಮಾಡಿರಿ
1. ಈ ನಮ್ಮ ದಿನದಲ್ಲಿ ಯೆಹೋವನು ಯಾರನ್ನು ತನ್ನ ಕಡೆಗೆ ಒಟ್ಟುಗೂಡಿಸುತ್ತಿದ್ದಾನೆ?
1 ತನ್ನ ಸಾಂಕೇತಿಕ ಹೃದಯದಲ್ಲಿ ಆಳವಾಗಿ ಬೇರೂರಿರುವ ಒಂದು ಸ್ವಭಾವವನ್ನು ಪ್ರತಿಯೊಬ್ಬ ವ್ಯಕ್ತಿಯು ಹೊಂದಿರುತ್ತಾನೆ. (ಮತ್ತಾ. 12:35) ‘ಕಲಹಮಯ ಹೃದಯವುಳ್ಳ’ ವ್ಯಕ್ತಿಯ ಕುರಿತು ಬೈಬಲು ಮಾತಾಡುತ್ತದೆ. (ಕೀರ್ತ. 55:21) ಕೆಲವರು “ಕ್ರೋಧಶೀಲ”ರಾಗಿದ್ದಾರೆ. (ಜ್ಞಾನೋ. 29:22) ಆದರೆ, “ನಿತ್ಯಜೀವವನ್ನು ಪಡೆದುಕೊಳ್ಳಲು ಯೋಗ್ಯ ಪ್ರವೃತ್ತಿಯುಳ್ಳ”ವರೂ ಇದ್ದಾರೆ. (ಅ. ಕೃ. 13:48) ಈ ನಮ್ಮ ದಿನದಲ್ಲಿ, ಈ ರೀತಿಯ ಯೋಗ್ಯ ಪ್ರವೃತ್ತಿಯುಳ್ಳವರನ್ನು ಯೆಹೋವನು ತನ್ನ ಕಡೆಗೆ ಒಟ್ಟುಗೂಡಿಸುತ್ತಿದ್ದಾನೆ. (ಹಗ್ಗಾ. 2:7) ಇಂಥವರು ಯೆಹೋವನ ಆರಾಧಕರಾಗುವಂತೆ ನಾವು ಅವರಿಗೆ ಹೇಗೆ ಸಹಾಯಮಾಡಬಲ್ಲೆವು?
2. ಶಿಷ್ಯರನ್ನಾಗಿ ಮಾಡುವ ನಮ್ಮ ನೇಮಕವನ್ನು ಪೂರೈಸುವುದರಲ್ಲಿ ಏನು ಒಳಗೂಡಿದೆ?
2 ಪ್ರಜ್ಞಾಪೂರ್ವಕವಾಗಿ ಪುನರ್ಭೇಟಿಗಳನ್ನು ಮಾಡಿರಿ: ಶಿಷ್ಯರನ್ನಾಗಿ ಮಾಡಬೇಕೆಂಬ ನಮ್ಮ ನೇಮಕವನ್ನು ಪೂರೈಸುವ ಸಲುವಾಗಿ ನಮಗೆ ಪುನರ್ಭೇಟಿಗಳ ಕುರಿತು ಸರಿಯಾದ ದೃಷ್ಟಿಕೋನವಿರುವುದು ಅಗತ್ಯ. (ಮತ್ತಾ. 28:19, 20) ನಾವು ಕಂಡುಕೊಂಡ ಆಸಕ್ತಿಯನ್ನು ಬೆಳೆಸುವುದರಲ್ಲಿ ಶ್ರದ್ಧೆಯನ್ನು ತೋರಿಸುತ್ತೇವೋ? ಸಾಹಿತ್ಯವನ್ನು ಸ್ವೀಕರಿಸುವ ಅಥವಾ ಸುವಾರ್ತೆಯಲ್ಲಿ ಆಸಕ್ತಿಯನ್ನು ತೋರಿಸುವ ಎಲ್ಲರನ್ನು ನಾವು ಪುನಃ ಭೇಟಿಮಾಡುತ್ತೇವೋ? ಆತ್ಮಿಕವಾಗಿ ಬೆಳೆಯುವಂತೆ ಅವರಿಗೆ ಸಹಾಯಮಾಡುವುದರಲ್ಲಿ ನಾವು ಸತತ ಪ್ರಯತ್ನವನ್ನು ಮಾಡುತ್ತೇವೋ? ಇದರಲ್ಲಿ ಜೀವಗಳು ಒಳಗೂಡಿರುವುದರಿಂದ, ನಾವು ಕಂಡುಕೊಳ್ಳುವ ಎಲ್ಲಾ ಆಸಕ್ತಿಯನ್ನು ಬೆಳೆಸಲು ನಾವು ಪ್ರಯತ್ನಿಸಬೇಕು.
3. ಶುಶ್ರೂಷೆಯಲ್ಲಿ ಒಬ್ಬರೊಂದಿಗೆ ಸಂಭಾಷಿಸಿದ ನಂತರ ನಾವೇನು ಮಾಡಬೇಕು?
3 ಒಬ್ಬ ಆಸಕ್ತ ವ್ಯಕ್ತಿಯೊಂದಿಗೆ ನೀವು ಮಾಡಿದ ಸಂಭಾಷಣೆಯು ಮನಸ್ಸಿನಲ್ಲಿ ತಾಜಾವಾಗಿರುವಾಗಲೇ, ಆ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಬರೆದುಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಸಂಭಾಷಿಸಲ್ಪಟ್ಟ ವಿಷಯ, ಓದಲ್ಪಟ್ಟ ಯಾವುದೇ ಶಾಸ್ತ್ರವಚನಗಳು, ಮತ್ತು ಯಾವ ಸಾಹಿತ್ಯವನ್ನು ನೀಡಲಾಯಿತು ಎಂಬುದನ್ನು ಬರೆದುಕೊಳ್ಳಿ. ತದನಂತರ, ಸಾಧ್ಯವಾದಷ್ಟು ಶೀಘ್ರದಲ್ಲೇ ಹಿಂದಿರುಗಿ ಹೋಗಲು ದೃಢನಿರ್ಣಯವನ್ನು ಮಾಡಿರಿ.
4. ನಾವು ಪರಿಣಾಮಕಾರಿಯಾದ ಪುನರ್ಭೇಟಿಗಳನ್ನು ಹೇಗೆ ಮಾಡಬಹುದು?
4 ಪುನರ್ಭೇಟಿಯನ್ನು ಮಾಡುವ ವಿಧ: ನೀವು ಪುನರ್ಭೇಟಿಯನ್ನು ಮಾಡುವಾಗ, ಆದರಣೀಯರೂ ಸ್ನೇಹಪರರೂ ಮತ್ತು ಮನೆಯವರಲ್ಲಿ ಪ್ರಾಮಾಣಿಕವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರೂ ಆಗಿರುವುದು ಸಹಾಯಕಾರಿಯಾಗಿರುತ್ತದೆ. ಸಂಭಾಷಣೆಯನ್ನು ಸರಳವಾಗಿಯೂ ಶಾಸ್ತ್ರಾಧಾರಿತವಾಗಿಯೂ ಇಡಿರಿ. ಚರ್ಚಿಸಲಿಕ್ಕಾಗಿ ಒಂದು ಆಸಕ್ತಿಕರವಾದ ಬೈಬಲ್ ವಿಷಯವನ್ನು ತಯಾರಿಸಿರಿ, ಮತ್ತು ಭೇಟಿಯ ಸಮಾಪ್ತಿಯಲ್ಲಿ, ಮುಂದಿನ ಭೇಟಿಯಲ್ಲಿ ಉತ್ತರಿಸಲ್ಪಡಬಹುದಾದ ಒಂದು ಪ್ರಶ್ನೆಯನ್ನು ಎಬ್ಬಿಸಿರಿ. ಮನೆಯವನು ವ್ಯಕ್ತಪಡಿಸಬಹುದಾದ ಅಶಾಸ್ತ್ರೀಯ ದೃಷ್ಟಿಕೋನಗಳನ್ನು ಅನಾವಶ್ಯಕವಾಗಿ ಚರ್ಚಾಸ್ಪದ ವಿಷಯವಾಗಿ ಮಾಡದೇ ಇರುವುದು ಒಳ್ಳೇದು. ನೀವು ಹೆಚ್ಚಿನ ಶಾಸ್ತ್ರೀಯ ಸತ್ಯಗಳನ್ನು ಬೋಧಿಸುವಾಗ, ನೀವಿಬ್ಬರೂ ಸಮ್ಮತಿಸುವ ಒಂದು ವಿಷಯವನ್ನು ತಳಪಾಯವಾಗಿ ಉಪಯೋಗಿಸಿರಿ.—ಕೊಲೊ. 4:6.
5. ಒಬ್ಬ ಪಯನೀಯರನು ಯಾವ ಕಠಿನ ಶ್ರಮವನ್ನು ಮಾಡಿದನು, ಮತ್ತು ಯಾವ ಫಲಿತಾಂಶಗಳೊಂದಿಗೆ?
5 ಪುನರ್ಭೇಟಿಗಳನ್ನು ಮಾಡುವುದು ಕಠಿಣ ಶ್ರಮವನ್ನು ಅಗತ್ಯಪಡಿಸುತ್ತದೆ, ಆದರೆ ಅದರ ಪ್ರತಿಫಲಗಳೋ ತೃಪ್ತಿದಾಯಕ. ಜಪಾನಿನಲ್ಲಿ ಪಯನೀಯರನೊಬ್ಬನು, ಪ್ರತಿ ತಿಂಗಳು ಹೆಚ್ಚಿನ ಪುನರ್ಭೇಟಿಗಳನ್ನು ಮಾಡುವ ಗುರಿಯನ್ನು ಇಟ್ಟನು. ಮನೆಯಿಂದ ಮನೆಯ ಕೆಲಸದಲ್ಲಿ ಅವನು ಭೇಟಿಮಾಡಿದ ಎಲ್ಲರ ದಾಖಲೆಯನ್ನು ತೆಗೆದುಕೊಳ್ಳಲು ಆರಂಭಿಸಿದನು, ಮತ್ತು ಏಳು ದಿನಗಳೊಳಗೆ ಅವರನ್ನು ಪುನಃ ಭೇಟಿಮಾಡಿದನು. ತಾನು ಹೇಳಲಿಕ್ಕಿರುವ ವಿಷಯವನ್ನು ಅವನು ಕೂಲಂಕಷವಾಗಿ ತಯಾರಿಸಿದನು ಮತ್ತು ತಾನು ಕೊಂಡೊಯ್ದ ಸಂದೇಶದಲ್ಲಿ ಪೂರ್ಣ ಭರವಸೆಯುಳ್ಳವನಾಗಿ ತನ್ನ ಸೇವೆಯನ್ನು ಮುಂದುವರಿಸಿದನು. ಅವನ ಪುನರ್ಭೇಟಿಗಳಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಅವನು ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ಶಕ್ತನಾದನು. ಆ ವ್ಯಕ್ತಿ ಹೀಗೆ ಹೇಳಿದನು: “ನಾನು ನಿಮ್ಮ ಜನರ ಭೇಟಿಗಳನ್ನು ಯಾವಾಗಲೂ ನಿರಾಕರಿಸಿದ್ದೇನೆ. ನಾನು ಕಿವಿಗೊಟ್ಟದ್ದು ಇದೇ ಮೊದಲ ಬಾರಿ.” ಆ ಪಯನೀಯರನ ಪ್ರೀತಿಯ ಪಟ್ಟುಹಿಡಿಯುವಿಕೆಯು ಪ್ರತಿಫಲಗಳನ್ನು ತಂದಿತು. ಮೊದಲನೇ ತಿಂಗಳಿನ ಅಂತ್ಯದಲ್ಲಿ ಅವನು ಹತ್ತು ಬೈಬಲ್ ಅಧ್ಯಯನಗಳನ್ನು ವರದಿಸುತ್ತಿದ್ದನು.
6. ನಾವು ಪುನರ್ಭೇಟಿಗಳನ್ನು ಮಾಡುವುದರಲ್ಲಿ ಏಕೆ ಪಟ್ಟುಹಿಡಿಯಬೇಕು?
6 ಜನರ ಪರಿಸ್ಥಿತಿಗಳು ಬದಲಾಗುತ್ತಾ ಇರುತ್ತವೆ. (1 ಕೊರಿಂ. 7:31) ಅನೇಕವೇಳೆ ಒಬ್ಬ ಆಸಕ್ತ ವ್ಯಕ್ತಿಯನ್ನು ಮನೆಯಲ್ಲಿ ಪುನಃ ಕಂಡುಕೊಳ್ಳಲಿಕ್ಕಾಗಿ ಅನೇಕ ಬಾರಿ ಭೇಟಿಮಾಡಬೇಕಾಗುತ್ತದೆ. ನಮ್ಮ ಪ್ರಜ್ಞಾಪೂರ್ವಕವಾದ ಪುನರ್ಭೇಟಿಗಳ ಮೂಲಕ ಯೋಗ್ಯ ಪ್ರವೃತ್ತಿಯುಳ್ಳವರು ನಿತ್ಯಜೀವಕ್ಕೆ ನಡೆಸುವ ದಾರಿಯನ್ನು ಹಿಡಿಯುವಂತೆ ನಾವು ಅವರಿಗೆ ಸಹಾಯಮಾಡಬಲ್ಲೆವು.—ಮತ್ತಾ. 7:13, 14.