ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 52 ಪು. 265-ಪು. 267 ಪ್ಯಾ. 4
  • ಪರಿಣಾಮಕಾರಿಯಾದ ಹುರಿದುಂಬಿಸುವಿಕೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿಣಾಮಕಾರಿಯಾದ ಹುರಿದುಂಬಿಸುವಿಕೆ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ತುರ್ತಿನಿಂದ ಸಾರಿ!
    2009 ನಮ್ಮ ರಾಜ್ಯದ ಸೇವೆ
  • ಸಹೋದರ ಪ್ರೀತಿ ಕ್ರಿಯಾಶೀಲವು
    ಕಾವಲಿನಬುರುಜು—1991
  • ‘ಪ್ರೀತಿಯ ಆಧಾರದಲ್ಲಿ ಬುದ್ಧಿಹೇಳುವುದು’
    ಕಾವಲಿನಬುರುಜು—1992
  • ತೀತ, ಫಿಲೆಮೋನ ಮತ್ತು ಇಬ್ರಿಯರಿಗೆ ಬರೆದ ಪತ್ರಗಳ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 52 ಪು. 265-ಪು. 267 ಪ್ಯಾ. 4

ಅಧ್ಯಾಯ 52

ಪರಿಣಾಮಕಾರಿಯಾದ ಹುರಿದುಂಬಿಸುವಿಕೆ

ನೀವೇನು ಮಾಡುವ ಅಗತ್ಯವಿದೆ?

ಮನವೊಪ್ಪಿಸುವಂಥ ತರ್ಕಸಮ್ಮತತೆಯಿಂದ, ಒಂದು ಅಧಿಕೃತ ಮೂಲದಿಂದ ಹಾಗೂ ಒಬ್ಬ ಗೌರವಾನ್ವಿತ ವ್ಯಕ್ತಿಯಿಂದ ಪಡೆದುಕೊಂಡಂಥ ಬುದ್ಧಿವಾದದ ಮೂಲಕ ಇತರರು ಕ್ರಿಯೆಗೈಯುವಂತೆ ಪ್ರಚೋದಿಸಿರಿ. ಇದು ಮನಃಪೂರ್ವಕವಾಗಿ ಮಾತಾಡುವುದನ್ನು ಅಗತ್ಯಪಡಿಸುತ್ತದೆ.

ಇದು ಪ್ರಾಮುಖ್ಯವೇಕೆ?

ಪರಿಣಾಮಕಾರಿಯಾದ ಹುರಿದುಂಬಿಸುವಿಕೆಯು, ಯೆಹೋವನ ಆಶೀರ್ವಾದವಿರುವಂಥ ವಿಷಯಗಳನ್ನು ಮಾಡುವುದರ ಪ್ರಾಮುಖ್ಯತೆಯನ್ನು ಇತರರು ಗ್ರಹಿಸುವಂತೆ ಮಾಡುತ್ತದೆ.

ಕ್ರೈಸ್ತ ಹಿರಿಯರು, “ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸು [“ಹುರಿದುಂಬಿಸು,” NW]”ವುದಕ್ಕೆ ಶಕ್ತರಾಗಿರಬೇಕು. (ತೀತ 1:9) ಕೆಲವು ಬಾರಿ ಇದನ್ನು ತೀರ ಕಷ್ಟಕರವಾದ ಪರಿಸ್ಥಿತಿಗಳಲ್ಲಿಯೂ ಮಾಡಬೇಕಾಗುತ್ತದೆ. ಸಲಹೆ ನೀಡುವಾಗ ಅದನ್ನು ಶಾಸ್ತ್ರೀಯ ಮಾರ್ಗದರ್ಶನಗಳಿಗನುಸಾರ ನೀಡುವುದು ಪ್ರಾಮುಖ್ಯವಾಗಿದೆ. ಆದಕಾರಣ, ಹಿರಿಯರು ‘ಪ್ರಸಂಗವನ್ನು [“ಹುರಿದುಂಬಿಸುವಿಕೆಯನ್ನು,” NW] ಮಾಡುವದರಲ್ಲಿ ಆಸಕ್ತ’ರಾಗಿರಬೇಕೆಂಬ ಸಲಹೆಗೆ ಕಿವಿಗೊಡಬೇಕು. (1 ತಿಮೊ. 4:13) ನಾವು ಇಲ್ಲಿ ಮಾಡುತ್ತಿರುವ ಚರ್ಚೆಯು ಪ್ರಧಾನವಾಗಿ ಹಿರಿಯರಿಗೆ ಅಥವಾ ಈ ಸುಯೋಗವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ನಿರ್ದೇಶಿಸಲ್ಪಟ್ಟಿದೆಯಾದರೂ, ಹೆತ್ತವರು ತಮ್ಮ ಮಕ್ಕಳನ್ನು ಹುರಿದುಂಬಿಸಬೇಕಾದ ಅಥವಾ ಬೈಬಲ್‌ ಅಧ್ಯಯನ ನಡೆಸುತ್ತಿರುವವರು ತಮ್ಮ ಬೈಬಲ್‌ ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕಾದ ಸಮಯಗಳೂ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಇದೇ ರೀತಿಯ ಮಾರ್ಗದರ್ಶನಗಳು ಅನ್ವಯಿಸುತ್ತವೆ.

ಇದನ್ನು ಅಗತ್ಯಪಡಿಸುವಂಥ ಸನ್ನಿವೇಶಗಳು. ಹುರಿದುಂಬಿಸುವಿಕೆ ಯಾವಾಗ ಅಗತ್ಯವೆಂಬುದನ್ನು ನಿರ್ಣಯಿಸಲು, ಇಂತಹ ಹುರಿದುಂಬಿಸುವಿಕೆಯು ಕೊಡಲ್ಪಟ್ಟ ಸನ್ನಿವೇಶಗಳ ಬೈಬಲ್‌ ದಾಖಲೆಯನ್ನು ಪರೀಕ್ಷಿಸುವುದು ಸಹಾಯಕರವಾದದ್ದಾಗಿದೆ. ಅಪೊಸ್ತಲ ಪೇತ್ರನು ಹಿರಿಯರಿಗೆ, ದೇವರ ಮಂದೆಯ ಕುರುಬರಾಗಿರುವ ಅವರು ತಮಗಿರುವ ಜವಾಬ್ದಾರಿಗೆ ಗಮನಕೊಡಬೇಕೆಂದು ಹುರಿದುಂಬಿಸಿದನು. (1 ಪೇತ್ರ 5:1, 2, NW) ಯೌವನಸ್ಥರು “ಜಿತೇಂದ್ರಿಯರು” ಆಗಿರುವಂತೆ ಹುರಿದುಂಬಿಸಬೇಕೆಂದು ಪೌಲನು ತೀತನಿಗೆ ಸಲಹೆ ನೀಡಿದನು. (ತೀತ 2:6, NW) ಪೌಲನು ಜೊತೆಕ್ರೈಸ್ತರಿಗೆ, ಅವರ “ಮಾತು ಒಂದೇ ಆಗಿರಬೇಕು” ಎಂದೂ ಸಹೋದರರ ಮಧ್ಯೆ ಭೇದಗಳನ್ನು ಉಂಟುಮಾಡುವವರ ಸಹವಾಸದಿಂದ ದೂರವಿರುವಂತೆಯೂ ಹುರಿದುಂಬಿಸಿದನು. (1 ಕೊರಿಂ. 1:10, NW; ರೋಮಾ. 16:17, NW; ಫಿಲಿ. 4:2, NW) ಮತ್ತು ಥೆಸಲೊನೀಕದಲ್ಲಿದ್ದ ಸಭೆಯ ಸದಸ್ಯರು ಮಾಡುತ್ತಿದ್ದ ಸತ್ಕಾರ್ಯಗಳಿಗಾಗಿ ಪೌಲನು ಅವರನ್ನು ಪ್ರಶಂಸಿಸಿದರೂ, ಅವರಿಗೆ ಸಿಕ್ಕಿದ್ದ ಉಪದೇಶವನ್ನು ಅವರು ಇನ್ನೂ ಹೆಚ್ಚಾಗಿ ಅನ್ವಯಿಸಿಕೊಳ್ಳಬೇಕೆಂದೂ ಅವನು ಅವರನ್ನು ಹುರಿದುಂಬಿಸಿದನು. (1 ಥೆಸ. 4:1, 10, NW) ಪೇತ್ರನು ಜೊತೆಕ್ರೈಸ್ತರಿಗೆ “ಶಾರೀರಿಕ ಅಭಿಲಾಷೆಗಳಿಗೆ ದೂರವಾಗಿ”ರುವಂತೆ ಬೇಡಿಕೊಂಡನು. (1 ಪೇತ್ರ 2:11, NW) ನಾಚಿಕೆಗೆಟ್ಟ ಕೃತ್ಯಗಳಲ್ಲಿ ಒಳಗೂಡಿದ್ದ ದೇವಭಯವಿಲ್ಲದವರ ಪ್ರಭಾವವನ್ನು ಪರಿಗಣಿಸುವಾಗ, “ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ . . . ಹೋರಾಡಬೇಕೆಂದು” ಯೂದನು ತನ್ನ ಸಹೋದರರಿಗೆ ಬುದ್ಧಿಹೇಳಿದನು. (ಯೂದ 3, 4, NW) ಯಾವನೂ ಪಾಪದ ವಂಚಕ ಶಕ್ತಿಯಿಂದ ಹೃದಯವನ್ನು ಕಠಿನಪಡಿಸಿಕೊಳ್ಳದಂತೆ, ಕ್ರೈಸ್ತರೆಲ್ಲರೂ ಪರಸ್ಪರವಾಗಿ ಹುರಿದುಂಬಿಸಿಕೊಳ್ಳುವಂತೆ ಪ್ರೋತ್ಸಾಹಿಸಲ್ಪಟ್ಟರು. (ಇಬ್ರಿ. 3:13, NW) ಕ್ರಿಸ್ತನಲ್ಲಿ ಇನ್ನೂ ನಂಬಿಕೆಯಿಟ್ಟಿರದ ಯೆಹೂದ್ಯರನ್ನು ಪೇತ್ರನು, “ವಕ್ರಬುದ್ಧಿಯುಳ್ಳ ಈ ಸಂತತಿಯವರಿಂದ ತಪ್ಪಿಸಿಕೊಳ್ಳಿರಿ” ಎಂದು ಹುರಿದುಂಬಿಸಿದನು.—ಅ. ಕೃ. 2:40, NW.

ಇಂತಹ ಸನ್ನಿವೇಶಗಳಲ್ಲಿ ಬಲವಾದ ಹುರಿದುಂಬಿಸುವಿಕೆಯನ್ನು ಕೊಡಲು ಯಾವ ಗುಣಗಳು ಬೇಕಾಗುತ್ತವೆ? ಈ ರೀತಿ ಹುರಿದುಂಬಿಸುವವನು, ದಬ್ಬಾಳಿಕೆ ಅಥವಾ ನಿರ್ದಯೆಯನ್ನು ತೋರಿಸದೆ ತನ್ನ ಕೋರಿಕೆಯನ್ನು ಜರೂರಿಯದ್ದಾಗಿ ಹೇಗೆ ಮಾಡಬಲ್ಲನು?

“ಪ್ರೀತಿಯ ನಿಮಿತ್ತ.” ನಾವು “ಪ್ರೀತಿಯ ನಿಮಿತ್ತ” ಇಂತಹ ಹುರಿದುಂಬಿಸುವಿಕೆಯ ಬುದ್ಧಿವಾದವನ್ನು ಕೊಡದಿರುವಲ್ಲಿ, ಅದು ಅತಿ ಬಿರುಸಾಗಿ ಕಂಡುಬರಬಹುದು. (ಫಿಲೆ. 9) ಈ ಕೂಡಲೆ ಕ್ರಿಯೆಗೈಯುವ ಅಗತ್ಯವಿರುವಾಗ, ಭಾಷಣಕಾರನ ನೀಡುವಿಕೆಯು ಆ ಸನ್ನಿವೇಶದ ತುರ್ತನ್ನು ತಿಳಿಯಪಡಿಸುವಂತಿರಬೇಕೆಂಬುದು ನಿಜ. ಅದರ ವಿಷಯದಲ್ಲಿ ಮೃದುವಾಗಿ ಮಾತಾಡುವುದು, ಅವನಿಗೆ ಅದನ್ನು ಹೇಳಲು ಖೇದವಾಗುತ್ತಿದೆ ಎಂಬಂತೆ ಕೇಳಿಬರಬಹುದು. ಆದರೆ ಅದೇ ಸಮಯದಲ್ಲಿ, ಆ ಕೋರಿಕೆಯನ್ನು ಮನಃಪೂರ್ವಕವಾಗಿಯೂ ಸಹಾನುಭೂತಿಯಿಂದಲೂ ಮಾಡಬೇಕು. ಪ್ರೀತಿಪೂರ್ವಕವಾಗಿ ಮಾಡಲ್ಪಡುವ ಕೋರಿಕೆಯು ಸಭಿಕರನ್ನು ಪ್ರಚೋದಿಸುವುದು ಹೆಚ್ಚು ಸಂಭವನೀಯ. ಪೌಲನು ತನ್ನ ಮತ್ತು ತನ್ನ ಸಂಗಾತಿಗಳ ಪರವಾಗಿ ಮಾತಾಡಿದಾಗ, ಥೆಸಲೊನೀಕದವರಿಗೆ ಹೇಳಿದ್ದು: “ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ಧಿಹೇಳುತ್ತಾ [“ಹುರಿದುಂಬಿಸುತ್ತಾ,” NW] . . . ಇದ್ದೆವೆಂದು ನಿಮಗೇ ತಿಳಿದದೆ.” (1 ಥೆಸ. 2:11, 12) ಆ ಕ್ರೈಸ್ತ ಮೇಲ್ವಿಚಾರಕರು ಸಹೋದರರಿಗೆ ಪ್ರೀತಿಯಿಂದ ಮೊರೆಯಿಟ್ಟರು. ಆದಕಾರಣ, ನಿಮ್ಮ ಮಾತುಗಳು ಸಹ ನಿಮ್ಮ ಕೇಳುಗರ ಕಡೆಗೆ ನಿಮಗಿರುವ ನಿಜವಾದ ಚಿಂತೆಯ ಕಾರಣದಿಂದ ಹೊರಹೊಮ್ಮಲಿ.

ಸಮಯೋಚಿತ ಜಾಣ್ಮೆಯುಳ್ಳವರಾಗಿರಿ. ನೀವು ಯಾರನ್ನು ಕ್ರಿಯೆಗೈಯುವಂತೆ ಪ್ರೇರಿಸಲು ಪ್ರಯತ್ನಿಸುತ್ತಿದ್ದೀರೊ ಅವರು ನಿಮ್ಮ ಮಾತನ್ನು ವಿರೋಧಿಸುವಂತೆ ಮಾಡಬೇಡಿರಿ. ಅದೇ ಸಮಯದಲ್ಲಿ, ನಿಮ್ಮ ಸಭಿಕರಿಗೆ “ದೇವರ ಸಂಕಲ್ಪವನ್ನೆಲ್ಲಾ” ತಿಳಿಸಲು ಹಿಂಜರಿಯಬೇಡಿರಿ. (ಅ. ಕೃ. 20:27) ಏಕೆಂದರೆ, ಸಲಹೆಯನ್ನು ಗಣ್ಯಮಾಡುವವರು, ಯಾವುದು ಸರಿಯಾಗಿದೆಯೋ ಅದನ್ನು ಮಾಡುವಂತೆ ನೀವು ಅವರನ್ನು ದಯೆಯಿಂದ ಪ್ರೋತ್ಸಾಹಿಸಿದ ಕಾರಣ, ಅಸಮಾಧಾನಗೊಳ್ಳುವುದೂ ಇಲ್ಲ, ನಿಮ್ಮನ್ನು ಕಡಿಮೆ ಪ್ರೀತಿಸುವುದೂ ಇಲ್ಲ.—ಕೀರ್ತ. 141:5.

ಅನೇಕವೇಳೆ, ಹುರಿದುಂಬಿಸುವಿಕೆಯನ್ನು ನೀಡುವ ಮೊದಲು, ನಿರ್ದಿಷ್ಟ ಮತ್ತು ಯಥಾರ್ಥವಾದ ಪ್ರಶಂಸೆಯನ್ನು ನೀಡುವುದು ಪ್ರಯೋಜನಕರವಾದದ್ದಾಗಿದೆ. ನಿಮ್ಮ ಸಹೋದರರು ಮಾಡುತ್ತಿರುವ, ಯೆಹೋವನ ನಿಜ ಮೆಚ್ಚಿಕೆಯನ್ನು ಪಡೆದಿರುವ ಈ ಸತ್ಕಾರ್ಯಗಳ ಕುರಿತು ತುಸು ಯೋಚಿಸಿರಿ: ಅವರ ಕ್ರಿಯೆಯಲ್ಲಿ ತೋರಿಬರುವ ನಂಬಿಕೆ, ಅವರು ಪ್ರಯಾಸಪಟ್ಟು ಸೇವೆಮಾಡುವಂತೆ ಅವರನ್ನು ಪ್ರೇರಿಸುವ ಪ್ರೀತಿ, ಕಷ್ಟಕರವಾದ ಸನ್ನಿವೇಶಗಳಲ್ಲಿ ಅವರು ತೋರಿಸುವ ತಾಳ್ಮೆ. (1 ಥೆಸ. 1:2-8; 2 ಥೆಸ. 1:3-5) ಇದು ನಿಮ್ಮ ಸಹೋದರರಿಗೆ, ಅವರು ಏನು ಮಾಡುತ್ತಾರೋ ಅದನ್ನು ನೀವು ಗಣ್ಯಮಾಡುತ್ತೀರಿ ಮತ್ತು ಅವರ ಕಷ್ಟಗಳನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂಬುದನ್ನು ಅರಿತುಕೊಳ್ಳಲು ಸಹಾಯಮಾಡುವುದು, ಮತ್ತು ಮುಂದೆ ಬರಲಿರುವ ಕೋರಿಕೆಯನ್ನು ಅವರು ಸ್ವೀಕರಿಸುವ ಮನಸ್ಸುಳ್ಳವರಾಗಿರುವಂತೆ ಮಾಡುವುದು.

“ಪೂರ್ಣದೀರ್ಘಶಾಂತಿಯಿಂದ.” ಇಂತಹ ಹುರಿದುಂಬಿಸುವಿಕೆಯು “ಪೂರ್ಣದೀರ್ಘಶಾಂತಿಯಿಂದ” ಕೊಡಲ್ಪಡಬೇಕು. (2 ತಿಮೊ. 4:2) ಇದರಲ್ಲಿ ಏನು ಒಳಗೂಡಿದೆ? ದೀರ್ಘಶಾಂತಿಯಲ್ಲಿ ತಪ್ಪನ್ನು ಅಥವಾ ಕೋಪವನ್ನು ಸೈರಣೆಯಿಂದ ತಾಳಿಕೊಳ್ಳುವುದು ಒಳಗೂಡಿದೆ. ದೀರ್ಘಶಾಂತಿಯುಳ್ಳವನು, ತಾನು ಏನು ಹೇಳುತ್ತೇನೋ ಅದನ್ನು ತನ್ನ ಕೇಳುಗರು ಅನ್ವಯಿಸುವರೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾನೆ. ಈ ಮನೋಭಾವದಿಂದ ಕೊಡಲ್ಪಡುವ ಹುರಿದುಂಬಿಸುವಿಕೆಯು, ನೀವು ನಿಮ್ಮ ಕೇಳುಗರ ವಿಷಯದಲ್ಲಿ ಅತಿ ಕೆಟ್ಟದ್ದನ್ನು ಭಾವಿಸುತ್ತೀರಿ ಎಂದು ನೆನಸುವುದರಿಂದ ಅವರನ್ನು ತಡೆಯುವುದು. ನಿಮ್ಮ ಸಹೋದರ ಸಹೋದರಿಯರು ತಮ್ಮಿಂದ ಸಾಧ್ಯವಿರುವಷ್ಟರ ಮಟ್ಟಿಗೆ ಯೆಹೋವನ ಸೇವೆಮಾಡಲು ಬಯಸುತ್ತಾರೆಂಬ ನಿಮ್ಮ ದೃಢಭರವಸೆಯು, ಯಾವುದು ಸರಿಯಾಗಿದೆಯೋ ಅದನ್ನು ಮಾಡುವ ಅವರ ಬಯಕೆಯನ್ನು ಪ್ರಚೋದಿಸುವುದು.—ಇಬ್ರಿ. 6:9.

“ಸ್ವಸ್ಥಬೋಧನೆಯಿಂದ.” ಒಬ್ಬ ಹಿರಿಯನು “ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸು [“ಹುರಿದುಂಬಿಸು,” NW]”ವುದು ಹೇಗೆ? “ಕ್ರಿಸ್ತಬೋಧಾನುಸಾರವಾದ [“ಬೋಧನಾ ಕಲೆಯ ಸಂಬಂಧದಲ್ಲಿ,” NW] ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದು”ಕೊಳ್ಳುವ ಮೂಲಕವೇ. (ತೀತ 1:9) ನಿಮ್ಮ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಬದಲಾಗಿ ದೇವರ ವಾಕ್ಯವೇ ನಿಮ್ಮ ಕೋರಿಕೆಯನ್ನು ಶಕ್ತಿಯುತವಾದದ್ದಾಗಿ ಮಾಡಲಿ. ಏನು ಹೇಳಬೇಕೊ ಅದನ್ನು ಗ್ರಹಿಸುವಂತೆ ಬೈಬಲು ನಿಮಗೆ ಸಹಾಯಮಾಡಲಿ. ಚರ್ಚಿಸಲ್ಪಡುತ್ತಿರುವ ವಿಷಯದ ಕುರಿತು ಬೈಬಲು ಏನು ಹೇಳುತ್ತದೊ ಅದನ್ನು ಅನ್ವಯಿಸುವುದರಿಂದ ಬರುವ ಪ್ರಯೋಜನಗಳ ಪಟ್ಟಿಯನ್ನು ಮಾಡಿರಿ. ದೇವರ ವಾಕ್ಯಕ್ಕನುಸಾರವಾಗಿ ನಡೆಯದೆ ಇರುವುದರಿಂದ ಈಗ ಮತ್ತು ಮುಂದೆ ಅನುಭವಿಸಲಿರುವ ಪರಿಣಾಮಗಳನ್ನು ಚೆನ್ನಾಗಿ ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮ ಸಭಿಕರು ಸೂಕ್ತ ಕ್ರಮವನ್ನು ಕೈಕೊಳ್ಳುವುದರ ಅಗತ್ಯವನ್ನು ಅವರಿಗೆ ಮನಗಾಣಿಸಲು ಇವುಗಳನ್ನು ಉಪಯೋಗಿಸಿರಿ.

ನಿಮ್ಮ ಸಭಿಕರು ಏನು ಮಾಡಬೇಕು ಮತ್ತು ಅದನ್ನು ಹೇಗೆ ಮಾಡಬೇಕು ಎಂಬುದನ್ನು ನೀವು ಸ್ಪಷ್ಟವಾಗಿ ವಿವರಿಸುವುದನ್ನು ಖಚಿತಪಡಿಸಿಕೊಳ್ಳಿರಿ. ನಿಮ್ಮ ತರ್ಕಸರಣಿಯು ಶಾಸ್ತ್ರವಚನಗಳಲ್ಲಿ ಬಲವಾಗಿ ಬೇರೂರಿದೆಯೆಂಬುದನ್ನು ಸ್ಪಷ್ಟಪಡಿಸಿರಿ. ಮಾಡಲ್ಪಡಲಿರುವ ಯಾವುದೇ ನಿರ್ಣಯದ ವಿಷಯದಲ್ಲಿ ಶಾಸ್ತ್ರವಚನಗಳು ಸ್ವಲ್ಪ ಸ್ವಾತಂತ್ರ್ಯವನ್ನು ಕೊಡುವಲ್ಲಿ, ಆ ಸ್ವಾತಂತ್ರ್ಯದ ಮೇರೆಯು ಎಷ್ಟರ ಮಟ್ಟಿಗೆ ಇದೆಯೆಂಬುದನ್ನು ತೋರಿಸಿಕೊಡಿರಿ. ಬಳಿಕ, ನಿಮ್ಮ ಸಮಾಪ್ತಿ ಭಾಗದಲ್ಲಿ, ನಿಮ್ಮ ಕೇಳುಗರ ಕ್ರಿಯೆಗೈಯುವ ದೃಢನಿರ್ಧಾರವನ್ನು ಬಲಪಡಿಸುವಂಥ ಅಂತಿಮ ಕೋರಿಕೆಯನ್ನು ಮಾಡಿರಿ.

“ವಾಕ್‌ಸ್ವಾತಂತ್ರ್ಯ”ದಿಂದ. ಇತರರಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ಬುದ್ಧಿಹೇಳಲು ಒಬ್ಬನಿಗೆ “ನಂಬಿಕೆಯ ಸಂಬಂಧವಾಗಿ ಬಹು ಧೈರ್ಯ [“ವಾಕ್‌ಸ್ವಾತಂತ್ರ್ಯ,” NW]” ಇರಬೇಕು. (1 ತಿಮೊ. 3:13) ಒಬ್ಬ ವ್ಯಕ್ತಿಯು ವಾಕ್‌ಸ್ವಾತಂತ್ರ್ಯದಿಂದ ಮಾತಾಡುವಂತೆ ಯಾವುದು ಅವನನ್ನು ಶಕ್ತನನ್ನಾಗಿ ಮಾಡುತ್ತದೆ? ತನ್ನ ಸಹೋದರರು ಏನು ಮಾಡುವಂತೆ ಅವನು ಪ್ರೋತ್ಸಾಹಿಸುತ್ತಾನೊ ಅದು ತನ್ನ ಸ್ವಂತ ‘ಸತ್ಕಾರ್ಯಗಳ ಮಾದರಿಗೆ’ ಹೊಂದಿಕೆಯಲ್ಲಿದೆ ಎಂಬ ನಿಜತ್ವವೇ. (ತೀತ 2:6, 7; 1 ಪೇತ್ರ 5:3) ವಿಷಯವು ಹೀಗಿರುವಲ್ಲಿ, ಕ್ರಿಯೆಗೈಯುವಂತೆ ಯಾರನ್ನು ಪ್ರೋತ್ಸಾಹಿಸಲಾಗುತ್ತಿದೆಯೋ ಅವರು, ತಮಗೆ ಬುದ್ಧಿಹೇಳುತ್ತಿರುವವನು ಸ್ವತಃ ತಾನು ಏನನ್ನು ಮಾಡುವುದಿಲ್ಲವೋ ಅದನ್ನು ತಾವು ಮಾಡುವಂತೆ ನಿರೀಕ್ಷಿಸುವುದಿಲ್ಲ ಎಂಬುದನ್ನು ಗ್ರಹಿಸುವರು. ಅವನು ಕ್ರಿಸ್ತನನ್ನು ಅನುಕರಿಸಲು ಪ್ರಯತ್ನಿಸುವಂತೆಯೇ ತಾವೂ ಅವನ ನಂಬಿಕೆಯನ್ನು ಅನುಕರಿಸಸಾಧ್ಯವಿದೆ ಎಂಬುದನ್ನು ಅವರು ಮನಗಾಣುವರು.—1 ಕೊರಿಂ. 11:1; ಫಿಲಿ. 3:17.

ದೇವರ ವಾಕ್ಯಾಧಾರಿತವಾದ ಹುರಿದುಂಬಿಸುವಿಕೆಯು ಪ್ರೀತಿಯಿಂದ ಕೊಡಲ್ಪಡುವಲ್ಲಿ, ಅದು ಹೆಚ್ಚು ಒಳಿತನ್ನು ಸಾಧಿಸಬಲ್ಲದು. ಇಂತಹ ಹುರಿದುಂಬಿಸುವಿಕೆಯನ್ನು ಕೊಡುವ ಜವಾಬ್ದಾರಿಯನ್ನು ವಹಿಸಿಕೊಂಡಿರುವವರು ಅದನ್ನು ಉತ್ತಮ ರೀತಿಯಲ್ಲಿ ಮಾಡಲು ಶ್ರದ್ಧೆವಹಿಸಬೇಕು.—ರೋಮಾ. 12:8, NW.

ಇದನ್ನು ಮಾಡುವ ವಿಧ

  • ಪ್ರೀತಿ ಮತ್ತು ದೀರ್ಘಶಾಂತಿಯನ್ನು ತೋರಿಸಿರಿ, ಮತ್ತು ಮನಃಪೂರ್ವಕವಾಗಿ ಮಾತಾಡಿರಿ.

  • ನಿಮ್ಮ ಹುರಿದುಂಬಿಸುವಿಕೆಯನ್ನು ದೇವರ ವಾಕ್ಯದಲ್ಲಿ ಬಲವಾಗಿ ಬೇರೂರಿಸಿರಿ.

  • ಒಂದು ಒಳ್ಳೇ ಮಾದರಿಯನ್ನಿಡುವ ಮೂಲಕ ನಿಮ್ಮ ಹುರಿದುಂಬಿಸುವಿಕೆಯನ್ನು ಪುಷ್ಟಿಗೊಳಿಸಿರಿ.

ಅಭ್ಯಾಸಪಾಠ: ಅಪೊಸ್ತಲ ಪೌಲನು ಫಿಲೆಮೋನನಿಗೆ ಬರೆದ ಪತ್ರವನ್ನು ಓದಿರಿ. ಈ ವಿಷಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ: (1) ಹೃತ್ಪೂರ್ವಕವಾದ ಪ್ರಶಂಸೆ, (2) ಒನೇಸಿಮನ ಪರವಾಗಿ ಪೌಲನು ಮಾಡಿದ ಕೋರಿಕೆಗಾಗಿರುವ ಆಧಾರ, (3) ಹಿಂದಿರುಗಲಿರುವ ದಾಸನನ್ನು ಫಿಲೆಮೋನನು ಹೇಗೆ ಸ್ವೀಕರಿಸಬೇಕೆಂಬುದನ್ನು ಮನಗಾಣಿಸಲು ಪೌಲನು ಉಪಯೋಗಿಸಿದ ವಾದ, ಮತ್ತು (4) ಫಿಲೆಮೋನನು ಸರಿಯಾದುದನ್ನೇ ಮಾಡುವನೆಂಬ ವಿಷಯದಲ್ಲಿ ಪೌಲನಿಗಿದ್ದ ಭರವಸೆ. ಹುರಿದುಂಬಿಸುವಿಕೆಯನ್ನು ನೀಡುವಾಗ ಈ ನಮೂನೆಯನ್ನು ನೀವು ಹೇಗೆ ಅನುಕರಿಸಬಲ್ಲಿರಿ ಎಂಬುದನ್ನು ಪರಿಗಣಿಸಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ