“ಬಿಡುಗಡೆಯು ಸಮೀಪವಿದೆ” 2006ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
1. ಪುರಾತನಕಾಲಗಳಲ್ಲಿ ದೇವಜನರು ಸತ್ಯಾರಾಧನೆಗಾಗಿ ತಮ್ಮ ಗಣ್ಯತೆಯನ್ನು ಹೇಗೆ ವ್ಯಕ್ತಪಡಿಸಿದರು, ಮತ್ತು ತದ್ರೀತಿಯ ಯಾವ ಸದವಕಾಶವು ಇಂದು ನಮಗಿದೆ?
1 ಪುರಾತನ ಯೆಹೂದದ ಅರಸನಾದ ಹಿಜ್ಕೀಯನು ಜನರಿಗೆ ಯೆರೂಸಲೇಮಿನಲ್ಲಿ ಕೂಡಿಬರುವಂತೆ ಆಜ್ಞಾಪಿಸುತ್ತಾ ದೂತರ ಮೂಲಕ ಪತ್ರಗಳನ್ನು ಕಳುಹಿಸಿದನು. (2 ಪೂರ್ವ. 30:6, 13) ಇದಕ್ಕೆ ಜನರು ತೋರಿಸಿದ ಪ್ರತಿಕ್ರಿಯೆಯು ಸತ್ಯಾರಾಧನೆಯ ಕಡೆಗೆ ಅವರಿಗಿರುವ ಮನೋಭಾವವನ್ನು ಬಯಲುಪಡಿಸಿತು. (2 ಪೂರ್ವ. 30:10-12) ಮುಂಬರಲಿರುವ ತಿಂಗಳುಗಳಲ್ಲಿ ಯೆಹೋವನನ್ನು ಆರಾಧಿಸಲಿಕ್ಕಾಗಿ ಒಟ್ಟಾಗಿ ಕೂಡಿಬರುವ ಸುಯೋಗಕ್ಕೆ ತಮ್ಮ ಹೃತ್ಪೂರ್ವಕ ಗಣ್ಯತೆಯನ್ನು ತೋರಿಸುವ ಒಂದು ತದ್ರೀತಿಯ ಸದವಕಾಶವು ಇಂದಿರುವ ಆತನ ಸೇವಕರಿಗೆ ದೊರೆಯಲಿದೆ. “ಬಿಡುಗಡೆಯು ಸಮೀಪವಿದೆ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ನಿಮ್ಮನ್ನು ಆಮಂತ್ರಿಸುತ್ತಾ ನಿಮ್ಮ ಸಭೆಗೆ ಒಂದು ಪತ್ರವನ್ನು ಕಳುಹಿಸಲಾಗಿದೆ. ಈ ಆಮಂತ್ರಣಕ್ಕೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಕಳೆದ ವರ್ಷ ಅನೇಕ ಚಿಕ್ಕ ಅಧಿವೇಶನಗಳಿಗಾಗಿ ಏರ್ಪಾಡುಗಳು ಮಾಡಲ್ಪಟ್ಟವು. ಇದರಿಂದ, ಹೊಸಬರಿಗೆ ಹಾಜರಾಗಲು ಸುಲಭವಾಯಿತು ಮತ್ತು ಅನೇಕ ಚಿಕ್ಕ ನಗರಗಳಲ್ಲಿ ಸಾರ್ವಜನಿಕರು ಯೆಹೋವನ ಸಾಕ್ಷಿಗಳನ್ನು ಪ್ರತಿನಿಧಿಸುವ ಗುಂಪನ್ನು ನಿಕಟವಾಗಿ ಗಮನಿಸಲು ಸಾಧ್ಯವಾಯಿತು. ಆದರೆ ಈ ವರ್ಷ ಅಧಿವೇಶನಗಳು ಹೆಚ್ಚು ದೊಡ್ಡದಾಗಿರುವವು. ಇದು ಅನೇಕ ಸ್ಥಳಗಳಿಂದ ಬರುವ ಇತರ ಸಾಕ್ಷಿಗಳೊಂದಿಗೆ ಸಹವಾಸಿಸಲು ಅವಕಾಶವನ್ನು ಕೊಡುವುದು.
2. ಅಧಿವೇಶನದಿಂದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಈಗ ನಾವೇನು ಮಾಡಸಾಧ್ಯವಿದೆ?
2 ಈಗಲೇ ಏರ್ಪಾಡುಗಳನ್ನು ಮಾಡಿರಿ: ಪ್ರೀತಿಯಿಂದ ಸಿದ್ಧಗೊಳಿಸಲ್ಪಡುತ್ತಿರುವ ಆಧ್ಯಾತ್ಮಿಕ ಆಹಾರದಿಂದ ಸಂಪೂರ್ಣವಾಗಿ ಪ್ರಯೋಜನ ಪಡೆದುಕೊಳ್ಳಬೇಕಾದರೆ, ನಾವು ಇಡೀ ಕಾರ್ಯಕ್ರಮಕ್ಕೆ ಉಪಸ್ಥಿತರಾಗಿರುವುದು ಅಗತ್ಯ. ನೀವು ಮತ್ತು ನಿಮ್ಮ ಕುಟುಂಬವು ಮೂರೂ ದಿನ ತಪ್ಪದೆ ಹಾಜರಾಗಲು ಈಗಲೇ ಬೇಕಾದ ಎಲ್ಲ ಏರ್ಪಾಡುಗಳನ್ನು ವಿವೇಚನೆಯಿಂದ ಮಾಡಲು ಆರಂಭಿಸಿರಿ. (ಜ್ಞಾನೋ. 21:5) ಈ ರೀತಿಯ ತಯಾರಿಗಳನ್ನು ಮಾಡುವುದರಲ್ಲಿ ನಿಮ್ಮ ಐಹಿಕ ಕೆಲಸದ ಮಾಲೀಕರ ಬಳಿ ರಜೆ ಕೇಳುವುದು, ನಂಬಿಕೆಯಲ್ಲಿಲ್ಲದಿರುವ ಸಂಗಾತಿಯೊಟ್ಟಿಗೆ ನಿಮ್ಮ ಯೋಜನೆಗಳ ಬಗ್ಗೆ ಚರ್ಚಿಸುವುದು, ಹೋಟೆಲ್ ರಿಸರ್ವೇಷನ್ ಮಾಡುವುದು ಮತ್ತು ಬೈಬಲ್ ವಿದ್ಯಾರ್ಥಿಗಳು ಪ್ರತಿದಿನ ಹಾಜರಾಗಿರಲು ನೆರವು ನೀಡುವುದು ಸೇರಿದೆ. ಈ ಪ್ರಾಮುಖ್ಯ ವಿಷಯಗಳನ್ನು ಮಾಡಲು ಕೊನೇ ಕ್ಷಣದ ವರೆಗೂ ಕಾಯಬೇಡಿ. ಬದಲಾಗಿ, “ಅಗತ್ಯವಾದದ್ದನ್ನು [ಯೆಹೋವನೇ] ಮಾಡುವನು” ಎಂದು ಭರವಸೆಯಿಡುತ್ತಾ ಆ ವಿಷಯಗಳ ಕುರಿತು ಆತನಿಗೆ ಪ್ರಾರ್ಥಿಸಿರಿ. (ಕೀರ್ತ. 37:5, ಪರಿಶುದ್ಧ ಬೈಬಲ್) ಜಾಗರೂಕತೆಯಿಂದ ಯೋಜನೆಮಾಡುವುದು ಹಣಕಾಸಿನ ಒತ್ತಡಗಳನ್ನು ಕಡಿಮೆಗೊಳಿಸಲು ಸಹಾಯಮಾಡಬಲ್ಲದು. ಇಂದಿನಿಂದ ಅಧಿವೇಶನದ ವರೆಗಿರುವ ಸಮಯದಲ್ಲಿ ನಾವು ಸ್ವಲ್ಪ ಮೊತ್ತದ ಹಣವನ್ನು ಪ್ರತಿವಾರ ತೆಗೆದಿಡಲು ಶಕ್ತರಾಗುವುದಾದರೆ, ಇದು ನಮ್ಮ ಪ್ರಯಾಣ ಮತ್ತು ವಸತಿವ್ಯವಸ್ಥೆಯ ಖರ್ಚುಗಳನ್ನು ನಿಭಾಯಿಸಲು ಸಹಾಯಮಾಡಬಲ್ಲದು.—1 ಕೊರಿಂಥ 16:2ನ್ನು ಹೋಲಿಸಿರಿ.
3. ವಸತಿಸೌಕರ್ಯಕ್ಕಾಗಿ ಮಾಡಲ್ಪಟ್ಟಿರುವ ಏರ್ಪಾಡುಗಳೊಂದಿಗೆ ನಾವೇಕೆ ಸಹಕರಿಸಬೇಕು?
3 ಅಧಿವೇಶನ ನಡೆಯುವ ಪ್ರತಿ ನಗರದಲ್ಲೂ ಸಾಕಷ್ಟು ವಸತಿಸೌಕರ್ಯವು ದೊರಕುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಯೆಹೋವನ ಸಂಘಟನೆಯು ಶ್ರದ್ಧೆಯಿಂದ ಕೆಲಸಮಾಡಿದೆ. ಈ ಏರ್ಪಾಡುಗಳನ್ನು ಮಾಡುವುದರಲ್ಲಿ ಸಹಕಾರವನ್ನು ನೀಡಿದ ಶ್ರಮಶೀಲ ಸಹೋದರರ ಸ್ವತ್ಯಾಗದ ಪ್ರಯತ್ನಗಳಿಗಾಗಿ ಗಣ್ಯತೆ, ಅಧಿವೇಶನಕ್ಕೆ ಹಾಜರಾಗುವ ನಮ್ಮ ಜೊತೆ ಪ್ರತಿನಿಧಿಗಳಿಗಾಗಿ ಪರಿಗಣನೆ ಮತ್ತು ದೇವಪ್ರಭುತ್ವಾತ್ಮಕ ಏರ್ಪಾಡಿಗಾಗಿರುವ ಗೌರವವು, ಈ ಲೇಖನದಲ್ಲಿ ಕೊಡಲ್ಪಟ್ಟಿರುವ ಮಾರ್ಗದರ್ಶಕ ಸೂಚನೆಗಳೊಂದಿಗೆ ಪೂರ್ಣವಾಗಿ ಸಹಕರಿಸುವಂತೆ ನಮ್ಮನ್ನು ಪ್ರಚೋದಿಸಬೇಕು.—1 ಕೊರಿಂ. 13:5; 1 ಥೆಸ. 5:12, 13; ಇಬ್ರಿ. 13:17.
4-6. ಹೋಟೆಲ್ ರಿಸರ್ವೇಷನ್ ಮಾಡುವಾಗ ನಾವು ಯಾವ ಪ್ರಮುಖ ಅಂಶಗಳನ್ನು ಮನಸ್ಸಿನಲ್ಲಿಡತಕ್ಕದ್ದು, ಮತ್ತು ಏಕೆ? (ಪುಟ 4ರಲ್ಲಿರುವ ಚೌಕವನ್ನು ಸೇರಿಸಿರಿ.)
4 ಹೋಟೆಲ್ ರಿಸರ್ವೇಷನ್: ಲಭ್ಯವಿರುವ ಹೋಟೆಲುಗಳ ಶಿಫಾರಸ್ಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್ ಅನ್ನು ಅಧಿವೇಶನಕ್ಕಿಂತ ಸಾಕಷ್ಟು ಸಮಯಕ್ಕೆ ಮುಂಚೆ ಮಾಹಿತಿ ಫಲಕದ ಮೇಲೆ ಹಾಕಲಾಗುವುದು. ನೀವು ನೀಡುವ ಸಹಕಾರವು, ಅಧಿವೇಶನ ನಡೆಯುವ ಸ್ಥಳಕ್ಕೆ ಹತ್ತಿರದಲ್ಲೇ ಉನ್ನತ ಗುಣಮಟ್ಟದ ಹೋಟೆಲುಗಳನ್ನು ಸಾಧ್ಯವಾದಷ್ಟು ಸೂಕ್ತ ದರದಲ್ಲಿ ಪ್ರತಿ ವರುಷವೂ ಪಡೆದುಕೊಳ್ಳಲು ಸಹಾಯಮಾಡುವುದು.—1 ಕೊರಿಂ. 14:40.
5 ಅಧಿವೇಶನದ ಸಮಯದಲ್ಲಿ ನೀವೆಷ್ಟು ರೂಮ್ಗಳನ್ನು ಉಪಯೋಗಿಸಲಿಕ್ಕಿದ್ದೀರೋ ಅಷ್ಟನ್ನು ಮಾತ್ರ ರಿಸರ್ವ್ಮಾಡುವುದು ಪ್ರಾಮುಖ್ಯವಾಗಿದೆ. ಅಧಿವೇಶನಕ್ಕೆ ಹಾಜರಾಗಲಿರುವ ಇತರ ಸಹೋದರರಿಗೆ ನೀವು ರೂಮ್ಗಳನ್ನು ರಿಸರ್ವ್ಮಾಡುವಿರೆಂದು ಮುಂದಾಗಿಯೇ ಚರ್ಚಿಸಿರುವುದಾದರೆ ಮತ್ತು ಖಂಡಿತವಾಗಿಯೂ ರೂಮ್ ರಿಸರ್ವ್ಮಾಡಲು ಬಯಸುವವರ ಹೆಸರುಗಳನ್ನು ನೀವು ಕೊಡಲು ಸಾಧ್ಯವಿರುವುದಾದರೆ ಮಾತ್ರ ಹೆಚ್ಚಿನ ರೂಮ್ಗಳನ್ನು ರಿಸರ್ವ್ಮಾಡಬಹುದು. ಇಲ್ಲದಿದ್ದರೆ ಅಧಿವೇಶನಕ್ಕಾಗಿ ಸುಮ್ಮನೆ ರೂಮ್ಗಳು ರಿಸರ್ವ್ಮಾಡಲ್ಪಟ್ಟು, ಇತರ ಪ್ರತಿನಿಧಿಗಳಿಗೆ ರಿಸರ್ವೇಷನ್ ಮಾಡಲು ಕಷ್ಟಕರವಾಗುವುದು. ರೂಮ್ನಲ್ಲಿ ಉಳಿದುಕೊಳ್ಳಲಿಕ್ಕಿರುವ ವ್ಯಕ್ತಿಗಳಲ್ಲಿ ಒಬ್ಬರ ಹೆಸರಿನಲ್ಲಿ ರೂಮ್ ಅನ್ನು ರಿಸರ್ವ್ಮಾಡತಕ್ಕದ್ದು.
6 ನಿಮ್ಮ ರಿಸರ್ವೇಷನನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ನೀವು ರಿಸರ್ವ್ಮಾಡಿರುವ ಪ್ರತಿ ರೂಮ್ಗೆ ಮುಂಗಡ ಹಣವನ್ನು ಕೊಡತಕ್ಕದ್ದು. ಇಲ್ಲವಾದಲ್ಲಿ, ಹೋಟೆಲ್ನವರು ನಿಮ್ಮ ರೂಮನ್ನು ಬೇರೆ ಯಾರಿಗಾದರೂ ಕೊಟ್ಟುಬಿಡುವ ಸಾಧ್ಯತೆಯಿದೆ. ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ಎಲ್ಲ ಹೋಟೆಲುಗಳಿಗೆ ನೀವು ಕರೆಮಾಡಿಯೂ ರೂಮ್ಗಳು ಸಿಗದೆಹೋದಲ್ಲಿ ಅಥವಾ ಒಂದು ಹೋಟೆಲಿನ ವಿಷಯದಲ್ಲಿ ನಿಮಗೆ ಯಾವುದಾದರೂ ಸಮಸ್ಯೆಯಿರುವಲ್ಲಿ, ನಿಮ್ಮ ಸಭಾ ಕಾರ್ಯದರ್ಶಿಗೆ ಇದರ ಕುರಿತು ತಿಳಿಸಿರಿ. ಅವರು ಲಿಸ್ಟ್ನ ಮೇಲ್ಭಾಗದಲ್ಲಿ ಕೊಡಲ್ಪಟ್ಟಿರುವ ಮಾಹಿತಿಯನ್ನು ಉಪಯೋಗಿಸುತ್ತಾ ನಿಮ್ಮ ಅಧಿವೇಶನದ ರೂಮಿಂಗ್ ಇಲಾಖೆಯನ್ನು ಸಂಪರ್ಕಿಸಬೇಕು, ಬ್ರಾಂಚ್ ಆಫೀಸನ್ನಲ್ಲ. ಲಿಸ್ಟ್ನಲ್ಲಿ ಕೊಡಲ್ಪಟ್ಟಿರದ ಹೋಟೆಲ್ಗಳಿಗೆ ಕರೆಮಾಡುವುದಕ್ಕೆ ಬದಲಾಗಿ, ನಿಮ್ಮ ಅಧಿವೇಶನದ ಪರಿಷ್ಕೃತ ಲಿಸ್ಟ್ ಅನ್ನು ಪಡೆದುಕೊಳ್ಳುವ ವರೆಗೂ ದಯವಿಟ್ಟು ಕಾಯಿರಿ.
7, 8. ವಿಶೇಷ ಅಗತ್ಯದಲ್ಲಿರುವವರನ್ನು ಹೇಗೆ ಪರಾಮರಿಸಸಾಧ್ಯವಿದೆ?
7 ವಿಶೇಷ ಅಗತ್ಯಗಳು: ಜ್ಞಾನೋಕ್ತಿ 3:27 ತಿಳಿಸುವುದು: “ಉಪಕಾರ [“ಒಳ್ಳೇದನ್ನು,” NW] ಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.” ಅಧಿವೇಶನದ ಸಂಬಂಧದಲ್ಲಿ ನೀವು ಇತರರಿಗೆ ಹೇಗೆ ಒಳ್ಳೇದನ್ನು ಮಾಡಬಲ್ಲಿರಿ? ವೃದ್ಧ ಪ್ರಚಾರಕರು, ಅಸ್ವಸ್ಥರು, ಪೂರ್ಣ ಸಮಯದ ಸೇವೆಯಲ್ಲಿರುವವರು ಮತ್ತು ಇತರರಿಗೆ ಸಾರಿಗೆ ಅಥವಾ ವಸತಿಸೌಕರ್ಯದ ವಿಷಯದಲ್ಲಿ ಪ್ರಾಯೋಗಿಕ ನೆರವು ಬೇಕಾದೀತು. ಇಂಥವರ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ಪ್ರಧಾನವಾಗಿ ಸಂಬಂಧಿಕರಿಗಿದೆ. (1 ತಿಮೊ. 5:3) ಅವರಿಗೆ ಸಾಧ್ಯವಿಲ್ಲದಿರುವಲ್ಲಿ ಜೊತೆ ವಿಶ್ವಾಸಿಗಳು ನೆರವು ನೀಡಬಹುದು. (ಗಲಾ. 6:10) ತಮ್ಮ ಗುಂಪಿನಲ್ಲಿ ಯಾರಿಗೆ ವಿಶೇಷ ಅಗತ್ಯಗಳು ಇವೆಯೋ ಅವರ ಯೋಜನೆಗಳು ಅಧಿವೇಶನಕ್ಕೆ ಸಾಕಷ್ಟು ಸಮಯಕ್ಕೆ ಮುಂಚಿತವಾಗಿ ಮಾಡಲ್ಪಟ್ಟಿವೆಯೆಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಪುಸ್ತಕ ಅಧ್ಯಯನ ಮೇಲ್ವಿಚಾರಕರು ಅವರನ್ನು ವಿಚಾರಿಸಿನೋಡಬೇಕು.
8 ಸ್ಪೆಷಲ್ ನೀಡ್ಸ್ ರೂಮ್ ರಿಕ್ವೆಸ್ಟ್ ಫಾರ್ಮ್ಗಳು, ಯಾರ ವಸತಿಸೌಕರ್ಯದ ಅಗತ್ಯಗಳು ಅವರ ಕುಟುಂಬದ ಸದಸ್ಯರಿಂದ ಅಥವಾ ಅವರ ಸಭೆಯಿಂದ ಪೂರೈಸಲ್ಪಡಲು ಸಾಧ್ಯವಿಲ್ಲವೋ ಅಂತಹ ಪ್ರಚಾರಕರಿಗೆ ಮಾತ್ರ ಲಭ್ಯವಿವೆ. ಸಭಾ ಸೇವಾ ಕಮಿಟಿಯು, ಫಾರ್ಮ್ನಲ್ಲಿ ಮತ್ತು ಎಲ್ಲ ಹಿರಿಯರ ಮಂಡಲಿಗಳಿಗೆ ಸಂಬೋಧಿಸಲ್ಪಟ್ಟ 2005 ಡಿಸೆಂಬರ್ 14ರ ತಾರೀಖಿನ ಪತ್ರದಲ್ಲಿ ಕೊಡಲ್ಪಟ್ಟಿರುವ ಮಾರ್ಗದರ್ಶಕ ಸೂಚನೆಗಳನ್ನು ಉಪಯೋಗಿಸುತ್ತಾ, ಆ ಪ್ರಚಾರಕರು ಈ ಸೇವೆಯನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೋ ಎಂದು ಪರಿಶೀಲಿಸಬೇಕು. ಈ ಒದಗಿಸುವಿಕೆಯು ಒಳ್ಳೆಯ ನಿಲುವಿನಲ್ಲಿರುವ ಮತ್ತು ಸಭ್ಯ ನಡತೆಯುಳ್ಳ ಮಕ್ಕಳನ್ನು ಹೊಂದಿರುವ ಪ್ರಚಾರಕರಿಗೆ ಮಾತ್ರ ಲಭ್ಯ.
9. (ಎ) ನಮ್ಮ ನೇಮಿತ ಅಧಿವೇಶನಕ್ಕೆ ನಾವೇಕೆ ಹಾಜರಾಗಬೇಕು? (ಬಿ) ನೀವು ಮತ್ತೊಂದು ಅಧಿವೇಶನಕ್ಕೆ ಹಾಜರಾಗಬೇಕಾದ ಪರಿಸ್ಥಿತಿ ಬಂದಲ್ಲಿ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳತಕ್ಕದ್ದು?
9 ಮತ್ತೊಂದು ಅಧಿವೇಶನಕ್ಕೆ ಹಾಜರಾಗುವುದು: ಸಾಕಷ್ಟು ಆಸನ ವ್ಯವಸ್ಥೆ, ಸಾಹಿತ್ಯ, ರೂಮಿಂಗ್ ಏರ್ಪಾಡುಗಳು ಮತ್ತು ಇನ್ನಿತರ ವಿಷಯಗಳು ಲಭ್ಯವಿವೆಯೆಂದು ಖಚಿತಪಡಿಸಿಕೊಳ್ಳಲಿಕ್ಕಾಗಿ ನಿಮ್ಮ ಸಭೆಯು ನೇಮಿಸಲ್ಪಟ್ಟಿರುವ ಅಧಿವೇಶನಕ್ಕೆ ನೀವು ಹಾಜರಾಗುವಂತೆ ಪ್ರೋತ್ಸಾಹಿಸಲಾಗಿದೆ. ಪರಿಸ್ಥಿತಿಯ ಕಾರಣ ನೀವು ಮತ್ತೊಂದು ಅಧಿವೇಶನಕ್ಕೆ ಹಾಜರಾಗಬೇಕಾಗಿರುವಲ್ಲಿ ಅದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಸಭೆಯ ಕಾರ್ಯದರ್ಶಿಯನ್ನು ಸಂಪರ್ಕಿಸಿ. ಶಿಫಾರಸ್ಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್ ಮತ್ತು ಅಧಿಕ ಮಾಹಿತಿಗಾಗಿ ವಿನಂತಿಸುತ್ತಾ ನೀವು ಪತ್ರ ಬರೆಯುವಾಗ, ಸ್ವ-ವಿಳಾಸವಿರುವ ಮತ್ತು ಸ್ಟ್ಯಾಂಪ್ ಅಂಟಿಸಿರುವ ಲಕೋಟೆಯನ್ನು ಜೊತೆಸೇರಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಒಂದುವೇಳೆ ಆ ನಗರದಲ್ಲಿ ಒಂದಕ್ಕಿಂತ ಹೆಚ್ಚು ಅಧಿವೇಶನಗಳು ನಡೆಯಲಿರುವುದಾದರೆ, ನೀವು ಹಾಜರಾಗಲು ಯೋಜಿಸುತ್ತಿರುವ ಅಧಿವೇಶನದ ತಾರೀಖುಗಳನ್ನು ಸೂಚಿಸಿರಿ.
10. ಬರಲಿರುವ ಅಧಿವೇಶನದ ಸಂತೋಷವನ್ನು ಹೆಚ್ಚಿಸಲು ನಾವು ನೆರವು ನೀಡಸಾಧ್ಯವಿರುವ ಒಂದು ವಿಧವು ಯಾವುದು?
10 ಸಿದ್ಧಮನಸ್ಸುಳ್ಳ ಸ್ವಯಂಸೇವಕರು: ಅಧಿವೇಶನಕ್ಕೆ ಹಾಜರಾಗುವ, ಆಧ್ಯಾತ್ಮಿಕ ಆಹಾರದಿಂದ ಪ್ರಯೋಜನ ಪಡೆದುಕೊಳ್ಳುವ ಮತ್ತು ಭಕ್ತಿವೃದ್ಧಿಯನ್ನುಂಟುಮಾಡುವ ಸಹವಾಸದಲ್ಲಿ ಆನಂದಿಸುವ ಎಲ್ಲರೂ ಬಹಳಷ್ಟು ಸಂತೋಷವನ್ನು ಪಡೆದುಕೊಳ್ಳುವರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅಧಿವೇಶನವು ಯಶಸ್ವಿಯಾಗುವಂತೆ ಮಾಡಬೇಕಾಗಿರುವ ಕೆಲಸಕ್ಕೆ ನೆರವು ನೀಡಲು ನಾವು ಸ್ವಯಂಸೇವೆಯನ್ನು ಮಾಡುವಲ್ಲಿ ನಮ್ಮ ಸಂತೋಷವು ಇನ್ನೂ ಹೆಚ್ಚಾಗುವುದು. (ಅ. ಕೃ. 20:35) ಈ ಕೆಲಸದಲ್ಲಿ ನೆರವು ನೀಡುವಂತೆ ಸ್ಥಳಿಕ ಅಧಿವೇಶನ ಕಮಿಟಿಗಳು ಇತರರನ್ನು ಬಲುಬೇಗನೆ ಆಮಂತ್ರಿಸಲಿವೆ. ನೀವಿದರಲ್ಲಿ ಪಾಲ್ಗೊಳ್ಳಸಾಧ್ಯವಿದೆಯೊ?—ಕೀರ್ತ. 110:3.
11. ವಾರ್ಷಿಕ ಜಿಲ್ಲಾ ಅಧಿವೇಶನದ ವಿಷಯದಲ್ಲಿ ನೀವೇನನ್ನು ಗಣ್ಯಮಾಡುವಿರಿ, ಮತ್ತು ನಿಮ್ಮ ದೃಢಸಂಕಲ್ಪವು ಏನಾಗಿರಬೇಕು?
11 ಐದು ವರುಷದ ಹುಡುಗನೊಬ್ಬನು ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾದಾಗ ಹೇಳಿದ್ದು: “ಯೆಹೋವನ ಆರಾಧನೆಮಾಡುವುದರಲ್ಲಿ ನನಗೆ ತುಂಬ ಇಷ್ಟವಾದ ವಿಷಯವು ಜಿಲ್ಲಾ ಅಧಿವೇಶನವೇ ಆಗಿದೆ.” ಈ ಹೃತ್ಪೂರ್ವಕ ಹೇಳಿಕೆಯು, ನಮ್ಮ ವಾರ್ಷಿಕ ಅಧಿವೇಶನಕ್ಕೆ ಹಾಜರಾಗಲು ನಾವೆಷ್ಟು ಆನಂದಪಡುತ್ತೇವೆ ಎಂಬುದನ್ನು ಗ್ರಹಿಸಲು ನಮ್ಮೆಲ್ಲರಿಗೂ ಸಹಾಯಮಾಡುತ್ತದೆ. ಅದು ವಾಸ್ತವದಲ್ಲಿ, “ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ” ಎಂದು ಹಾಡಿದ ಕೀರ್ತನೆಗಾರನ ಮಾತುಗಳಿಗೆ ಹೊಂದಿಕೆಯಲ್ಲಿದೆ. (ಕೀರ್ತ. 84:10) ದಾವೀದನು ‘ತನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವ’ ತನ್ನ ಬಯಕೆಯನ್ನು ತಾನು ಹಾಡಿದ ಕೀರ್ತನೆಯಲ್ಲಿ ವ್ಯಕ್ತಪಡಿಸಿದನು. (ಕೀರ್ತ. 27:4) ಯೆಹೋವನ ಆರಾಧಕರ ಮಧ್ಯದಲ್ಲಿರುವುದು ದಾವೀದನಿಗೆ ತುಂಬ ಆಹ್ಲಾದಕರವಾಗಿತ್ತು. ಸತ್ಯಾರಾಧನೆಗಾಗಿ ಅವನು ತೋರಿಸಿದ ಗಣ್ಯತೆಯನ್ನು, “ಬಿಡುಗಡೆಯು ಸಮೀಪವಿದೆ” ಜಿಲ್ಲಾ ಅಧಿವೇಶನಕ್ಕೆ ಮೂರೂ ದಿನ ಹಾಜರಾಗುವ ಮೂಲಕ ನಾವು ಅನುಕರಿಸೋಣ.
[ಪುಟ 3ರಲ್ಲಿರುವಚೌಕ]
ಕಾರ್ಯಕ್ರಮದ ಸಮಯಗಳು
ಶುಕ್ರವಾರ ಮತ್ತು ಶನಿವಾರ
ಬೆಳಿಗ್ಗೆ 9:30 - ಸಾಯಂಕಾಲ 5:05
ಭಾನುವಾರ
ಬೆಳಿಗ್ಗೆ 9:30 - ಸಾಯಂಕಾಲ 4:10
[ಪುಟ 4ರಲ್ಲಿರುವಚೌಕ]
ಹೋಟೆಲ್ ರಿಸರ್ವೇಷನ್ ಮಾಡಬೇಕಾದ ವಿಧ
1. ಶಿಫಾರಸ್ಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ದೂರವಾಣಿ ಸಂಖ್ಯೆಗಳನ್ನು ಉಪಯೋಗಿಸುತ್ತಾ ಸಾಮಾನ್ಯವಾದ ಕೆಲಸದ ವೇಳೆಯಲ್ಲಿ ಹೋಟೆಲುಗಳನ್ನು ಸಂಪರ್ಕಿಸಿರಿ.
2. ನೀವು ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾಗುತ್ತಿದ್ದೀರಿ ಎಂದು ಹೋಟೆಲಿನವರಿಗೆ ತಿಳಿಸಿರಿ.
3. ನೀವು ಯಾವ ತಾರೀಖಿನಂದು ರೂಮನ್ನು ಬಾಡಿಗೆಗೆ ತೆಗೆದುಕೊಳ್ಳುವಿರಿ ಮತ್ತು ಯಾವಾಗ ಖಾಲಿಮಾಡುವಿರಿ ಎಂಬುದನ್ನು ತಿಳಿಸಿ.
4. ಯಾವುದೇ ರೂಮ್ಗಳು ಲಭ್ಯವಿಲ್ಲದಿರುವುದಾದರೆ, ಲಿಸ್ಟ್ನಲ್ಲಿರುವ ಮತ್ತೊಂದು ಹೋಟೆಲಿಗೆ ಕರೆಮಾಡಿ.
5. ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ದರಕ್ಕಿಂತ ಹೆಚ್ಚಿನ ದರವು ಕೇಳಲ್ಪಡುವುದಾದರೆ ಅದಕ್ಕೆ ಒಪ್ಪಿಕೊಳ್ಳಬೇಡಿ.
6. ನಿಮ್ಮ ರಿಸರ್ವೇಷನನ್ನು ಮಾಡಿ ಮತ್ತು ಮಂಜೂರಾತಿಯನ್ನು ಕೇಳಿಕೊಳ್ಳಿ.
7. ಕ್ರೆಡಿಟ್ ಕಾರ್ಡ್, ಚೆಕ್, ಅಥವಾ ಮನಿ ಆರ್ಡರ್ ಮೂಲಕ ಹತ್ತು ದಿನಗಳೊಳಗಾಗಿ ಮುಂಗಡ ಹಣವನ್ನು ಕಳುಹಿಸಿರಿ. ನಗದು ಹಣವನ್ನು ಕಳುಹಿಸಲೇಬೇಡಿ. ಚೆಕ್ ಅಥವಾ ಮನಿ ಆರ್ಡರ್ ಮೂಲಕ ಮುಂಗಡ ಹಣವನ್ನು ಕಳುಹಿಸಿರುವಲ್ಲಿ ಮಂಜೂರಾತಿಯ ವಿವರವನ್ನು ಅದರ ಮುಂಭಾಗದಲ್ಲಿ ಬರೆಯಿರಿ.
ದಯವಿಟ್ಟು
◼ ನೀವು ಖಂಡಿತವಾಗಿಯೂ ಉಪಯೋಗಿಸಲಿಕ್ಕಿರುವ ರೂಮ್ಗಳನ್ನು ಮಾತ್ರ ಕಾದಿರಿಸಿ.
◼ ನೀವು ಮೊದಲು ಕಾದಿರಿಸುವ ರೂಮ್ಗಳನ್ನೇ ಉಪಯೋಗಿಸಿರಿ.—ಮತ್ತಾ. 5:37.
◼ ಹೋಟೆಲ್ನವರು ಅನುಮತಿಸುವುದಕ್ಕಿಂತ ಹೆಚ್ಚು ವ್ಯಕ್ತಿಗಳು ರೂಮ್ನಲ್ಲಿ ಉಳಿದುಕೊಳ್ಳಬೇಡಿ.