ನಿಮ್ಮ ಸಾರುವ ಕೆಲಸದಲ್ಲಿ ಕ್ರಿಸ್ತನನ್ನು ಅನುಕರಿಸಿರಿ
1 ಸಾರುವ ಕೆಲಸದಲ್ಲಿ ಯೇಸು ನಮಗಾಗಿ ಅನುಕರಣಾಯೋಗ್ಯ ಮಾದರಿಯನ್ನು ಇಟ್ಟಿದ್ದಾನೆ. ದೇವರ ಮತ್ತು ಮನುಷ್ಯರ ಮೇಲೆ ಅವನಿಗಿದ್ದ ಆಳವಾದ ಪ್ರೀತಿಯನ್ನು ಅವನು ಹಲವು ಸಂದರ್ಭಗಳಲ್ಲಿ ಮತ್ತು ಅನೇಕ ವಿಧಗಳಲ್ಲಿ ತೋರಿಸಿದನು. ದೀನರಿಗೆ ಸತ್ಯವನ್ನು ಕಲಿಸಿದನು ಮತ್ತು ನರಳಾಡುತ್ತಿರುವವರಿಗೆ ಹಾಗೂ ತುಳಿಯಲ್ಪಟ್ಟಿರುವವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸುತ್ತಾ ಸಹಾಯಮಾಡಿದನು.—ಮತ್ತಾ. 9:35.
2 ಯೇಸುವಿನ ಮಾದರಿ ಮತ್ತು ಬೋಧನೆಗಳು: ಯೇಸು ಬರಿಯ ಮಾನವೀಯತೆಯ ಕೆಲಸಗಳನ್ನು ಮಾಡುತ್ತಾ ಸಮಾಜ ಸುಧಾರಣೆಯಲ್ಲಿ ಅಥವಾ ರಾಜಕೀಯ ವ್ಯವಹಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅಪಕರ್ಷಿತನಾಗಲಿಲ್ಲ. ಇಲ್ಲವೇ ಬೇರಾವುದೇ ಸದುದ್ದೇಶದ ಕೆಲಸಗಳು, ತನ್ನ ಪ್ರಧಾನ ಕೆಲಸದಿಂದ ತನ್ನನ್ನು ಅಪಕರ್ಷಿಸುವಂತೆ ಅಥವಾ ಅದಕ್ಕಿಂತ ಪ್ರಾಮುಖ್ಯವಾಗುವಂತೆ ಅವನು ಬಿಡಲಿಲ್ಲ. (ಲೂಕ 8:1) ಮಾನವಕುಲದ ಸಮಸ್ಯೆಗಳಿಗೆ ಏಕೈಕ ಶಾಶ್ವತ ಪರಿಹಾರವು ದೇವರ ರಾಜ್ಯ ಆಗಿದೆ ಎಂಬ ಸುವಾರ್ತೆಯನ್ನು ಸಾರುವುದರ ಮೇಲೆ ಅವನು ಗಮನವನ್ನು ಕೇಂದ್ರೀಕರಿಸಿದನು. ಯೇಸುವಿಗೆ ಕೊಂಚ ಸಮಯದಲ್ಲೇ ಮಹತ್ತರವಾದ ಕೆಲಸವನ್ನು ಮಾಡಲಿಕ್ಕಿತ್ತು. ಒಮ್ಮೆ ಕಪೆರ್ನೌಮಿನಲ್ಲಿದ್ದ ಜನರು ಯೇಸು ಅಲ್ಲಿಯೇ ಉಳಿಯಬೇಕೆಂದು ಬಯಸಿದರಾದರೂ, ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಹೊರಟುಬಂದಿದ್ದೇನೆ.”—ಮಾರ್ಕ 1:38.
3 ಯೇಸು ತನ್ನ ಶಿಷ್ಯರಿಗೆ ತರಬೇತಿಕೊಟ್ಟ ನಂತರ, “ಪರಲೋಕರಾಜ್ಯವು ಸಮೀಪವಾಯಿತೆಂದು ಸಾರಿಹೇಳುತ್ತಾ ಹೋಗಿರಿ” ಎಂಬ ನಿರ್ದಿಷ್ಟ ನಿರ್ದೇಶನಗಳನ್ನು ಕೊಟ್ಟನು. (ಮತ್ತಾ. 10:7) ರಾಜ್ಯದ ಅಭಿರುಚಿಗಳು ತಮ್ಮ ಜೀವನದಲ್ಲಿ ಅತಿ ಪ್ರಾಮುಖ್ಯವಾಗಿರಬೇಕೆಂದು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾ. 6:33) ಯೇಸು ಪರಲೋಕಕ್ಕೆ ಏರಿಹೋಗುವುದಕ್ಕೆ ಮುಂಚೆ ತನ್ನ ಅಂತಿಮ ಮಾತುಗಳಲ್ಲಿ ಶಿಷ್ಯರು ಏನು ಮಾಡಬೇಕೆಂಬುದನ್ನು ಸ್ಪಷ್ಟವಾಗಿ ತಿಳಿಸಿದನು. ಅವನಂದದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.”—ಮತ್ತಾ. 28:19.
4 ರಾಜ್ಯದ ಮಹತ್ವ: ಯೇಸುವಿನ ಸಂಭಾಷಣೆಯ ಮುಖ್ಯ ವಿಷಯವು ದೇವರ ರಾಜ್ಯವಾಗಿತ್ತು ಮತ್ತು ತನ್ನ ಶಿಷ್ಯರು ತನ್ನ ಈ ಮಾದರಿಯನ್ನು ಅನುಕರಿಸುವಂತೆ ಯೇಸು ಪ್ರೋತ್ಸಾಹಿಸಿದನು. ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸಲು ಮಾನವನಿಂದಾಗದು. (ಯೆರೆ. 10:23) ದೇವರ ರಾಜ್ಯ ಮಾತ್ರವೇ ದೇವರ ಹೆಸರನ್ನು ಪವಿತ್ರೀಕರಿಸುವುದು ಮತ್ತು ಮಾನವಕುಲಕ್ಕೆ ಶಾಶ್ವತವಾದ ಪರಿಹಾರವನ್ನು ನೀಡುವುದು. (ಮತ್ತಾ. 6:9, 10) ‘ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ’ ಜನರಿಗೆ ನಾವು ರಾಜ್ಯದ ಸತ್ಯಗಳನ್ನು ಬೋಧಿಸುವ ಮೂಲಕ ಅವರು ಈಗಲೂ ಸಂತೋಷಭರಿತ ಯಶಸ್ವಿ ಜೀವನವನ್ನು ನಡೆಸುವಂತೆ ಮತ್ತು ಭವಿಷ್ಯಕ್ಕಾಗಿ ವಿಶ್ವಾಸಾರ್ಹ ನಿರೀಕ್ಷೆಯನ್ನು ದೃಢವಾಗಿ ಹಿಡಿದಿಟ್ಟುಕೊಳ್ಳುವಂತೆ ಸಹಾಯಮಾಡುವೆವು.—ಯೆಹೆ. 9:4.
5 ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಯೇಸು ಇಂದಿಗೂ ಸಕ್ರಿಯ ಪಾತ್ರವನ್ನು ವಹಿಸುತ್ತಿದ್ದಾನೆ ಮತ್ತು ನಮ್ಮನ್ನು ಬೆಂಬಲಿಸುವ ಆಶ್ವಾಸನೆಯನ್ನು ನೀಡುತ್ತಾನೆ. (ಮತ್ತಾ. 28:20) ನಮ್ಮ ಸಾರುವ ಕೆಲಸವು ಎಷ್ಟರ ಮಟ್ಟಿಗೆ ಯೇಸು ಕ್ರಿಸ್ತನು ಇಟ್ಟ ಮಾದರಿಗೆ ಹೋಲುತ್ತದೆ? (1 ಪೇತ್ರ 2:21) ಮಹತ್ವಪೂರ್ಣವಾದ ಈ ಕಡೇ ದಿವಸಗಳಲ್ಲಿ ಜೀವಿಸುತ್ತಿರುವ ನಾವು, ಸಾರುವ ಕೆಲಸದಲ್ಲಿ ಯೇಸುವಿಟ್ಟ ಮಾದರಿಯನ್ನು ನಿಕಟವಾಗಿ ಅನುಕರಿಸಲು ನಮ್ಮಿಂದಾದದ್ದೆಲ್ಲವನ್ನು ಮಾಡೋಣ!