ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/09 ಪು. 3-4
  • ಆಡಳಿತ ಮಂಡಲಿಯಿಂದ ಪತ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಡಳಿತ ಮಂಡಲಿಯಿಂದ ಪತ್ರ
  • 2009 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಪ್ರಿಯ ಜೊತೆ ಸಾಕ್ಷಿಗಳೇ,
2009 ನಮ್ಮ ರಾಜ್ಯದ ಸೇವೆ
km 3/09 ಪು. 3-4

ಆಡಳಿತ ಮಂಡಲಿಯಿಂದ ಪತ್ರ

ಪ್ರಿಯ ಜೊತೆ ಸಾಕ್ಷಿಗಳೇ,

ನಿಮಗೆ ಈ ಪತ್ರಬರೆಯಲು ನಮಗೆಷ್ಟು ಸಂತೋಷವಾಗುತ್ತಿದೆ ಪ್ರಿಯ ಸಹೋದರರೇ! ಅಪೊಸ್ತಲ ಯೋಹಾನನು ತನ್ನ ಜೊತೆ ವಿಶ್ವಾಸಿಗಳನ್ನು ನಿಜವಾಗಿ ‘ಪ್ರೀತಿಸಿ,’ ಅವರು ‘ಸತ್ಯದಲ್ಲಿ ನಡೆಯುವದನ್ನು’ ಕಂಡು ಬಹಳ ಸಂತೋಷಪಟ್ಟನು. ನಿಮ್ಮ ಬಗ್ಗೆ ನಮಗೂ ಹಾಗೆಯೇ ಅನಿಸುತ್ತದೆ. (2 ಯೋಹಾ. 1, 4) ಸತ್ಯವನ್ನು ತಿಳಿದಿರುವುದು ನಮಗೆಲ್ಲರಿಗೆ ದೊಡ್ಡ ಆಶೀರ್ವಾದವೇ ಸರಿ! ಸತ್ಯವು ನಮ್ಮನ್ನು ಮಹಾ ಬಾಬೆಲಿನಿಂದ ಮತ್ತು ದೇವರನ್ನು ಅಗೌರವಿಸುವ ಅದರ ಬೋಧನೆ, ಸಂಪ್ರದಾಯಗಳಿಂದ ಬಿಡುಗಡೆ ಮಾಡಿದೆ. ಸತ್ಯಕ್ಕೆ ನಾವು ತೋರಿಸುವ ವಿಧೇಯತೆಯು ನಮ್ಮನ್ನು ಪ್ರೀತಿ, ದಯೆ, ಕರುಣೆಯುಳ್ಳ ಜನರಾಗುವಂತೆ ಸಹಾಯಮಾಡಿದೆ. ದೇವರ ದೃಷ್ಟಿಯಲ್ಲಿ ಶುದ್ಧರಾಗಿರಲು ಹಾಗೂ ನಿತ್ಯಜೀವದ ಪ್ರತೀಕ್ಷೆಯುಳ್ಳವರಾಗಿರಲೂ ಸತ್ಯವು ನಮಗೆ ದಾರಿಮಾಡಿದೆ.

ನಮ್ಮನ್ನು ಅನುದಿನವೂ ಮಾರ್ಗದರ್ಶಿಸುತ್ತಾ ಬಲಪಡಿಸುತ್ತಾ ಇರುವ ಯೆಹೋವನ ಆತ್ಮಕ್ಕಾಗಿಯೂ ನಾವೆಷ್ಟು ಕೃತಜ್ಞರು! ಇತ್ತೀಚೆಗೆ ನಡೆದ “ಪವಿತ್ರಾತ್ಮದ ಮಾರ್ಗದರ್ಶನ” ಜಿಲ್ಲಾ ಅಧಿವೇಶನಗಳಲ್ಲಿ ಯೆಹೋವನ ಈ ಪ್ರೀತಿಪರ ಒದಗಿಸುವಿಕೆಯ ಹಲವಾರು ಕಾರ್ಯವಿಧಾನಗಳನ್ನು ತಿಳಿದುಕೊಳ್ಳುವುದರಲ್ಲಿ ನೀವು ಆನಂದಿಸಿದಿರಿ ಎಂಬ ಭರವಸೆ ನಮಗಿದೆ. ಲೋಕದ ಪರಿಸ್ಥಿತಿಯು ಕೆಟ್ಟದಾಗುತ್ತಾ ಬರುವಾಗ ನಮ್ಮ ಮುಂದಿರುವ ಈ ಸಂದಿಗ್ಧ ಸಮಯದಲ್ಲಿ ಯೆಹೋವನ ಈ ಶಕ್ತಿಯುತ ಆತ್ಮವು ನಮ್ಮನ್ನು ಮಾರ್ಗದರ್ಶಿಸುವಂತೆ ನಾವು ಅದರ ಮೇಲೆ ಆತುಕೊಂಡಿರುವುದು ಅತ್ಯಾವಶ್ಯಕ.

ತಮ್ಮ ನಂಬಿಕೆಗಾಗಿ ಎಷ್ಟೋ ಕಷ್ಟವನ್ನು ತಾಳಿಕೊಂಡ ನಮ್ಮ ಸಹೋದರರ ರೋಮಾಂಚಕ ವರ್ಷಪುಸ್ತಕ ಅನುಭವಗಳನ್ನು ಓದುವಾಗ ನಿಮ್ಮ ಹೃದಯವು ಸ್ಪಂದಿಸಿತೆಂಬುದು ನಿಶ್ಚಯ. ಮತ್ತು ಈ ನಂಬಿಗಸ್ತರಲ್ಲಿ ಅನೇಕರು ಕಷ್ಟಗಳನ್ನು ಎದುರಿಸಿದಾಗ ಅವರು ದೀಕ್ಷಾಸ್ನಾನ ಪಡೆದು ಸ್ವಲ್ಪವೇ ಸಮಯವಾಗಿತ್ತು ಅಥವಾ ಇನ್ನೂ ದೀಕ್ಷಾಸ್ನಾನವಾಗಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಅವರ ನಿಷ್ಠೆ ಮತ್ತು ನೀತಿಯುತ ನಿಲುವಿಗಾಗಿ ಅವರನ್ನು ನಾವೆಷ್ಟು ಪ್ರೀತಿಸುತ್ತೇವೆ! ಅವರ ಈ ಅತ್ಯುತ್ತಮ ಮಾದರಿಯು, ಯಾವುದೇ ಸಂಕಷ್ಟ ಬರಲಿ ದೇವರ ರಾಜ್ಯಕ್ಕಾಗಿ ನಿಷ್ಠಾವಂತರಾಗಿ ನಿಲ್ಲುವ ನಮ್ಮ ದೃಢಸಂಕಲ್ಪವನ್ನು ಬಲಗೊಳಿಸುತ್ತದೆ.—1 ಥೆಸ. 1:6-8.

ಪ್ರಿಯ ಸಹೋದರ ಸಹೋದರಿಯರೇ, ನಿಮ್ಮ ಕುಟುಂಬವನ್ನು ಪ್ರೀತಿಯ ಬಂಧದಲ್ಲಿ ಐಕ್ಯವಾಗಿರಿಸಲು ನೀವು ಶ್ರಮಿಸಬೇಕೆಂದೂ ಅದಕ್ಕಾಗಿ ಆರ್ಥಿಕ ಅಥವಾ ಬೇರೆ ಅನೇಕ ಸಮಸ್ಯೆಗಳನ್ನು ನಿಮಗೆ ನಿಭಾಯಿಸಲಿಕ್ಕದೆಯೆಂದೂ ನಮಗೆ ತಿಳಿದಿದೆ. ನಿಮ್ಮಲ್ಲಿ ಕೆಲವರಿಗೆ ರಾಜ್ಯ ಸಾರುವಿಕೆಗೆ ಹಾಗೂ ಇತರ ಸಭಾ ಚಟುವಟಿಕೆಗಳಿಗೆ ಕ್ರಮವಾಗಿ, ನಿಷ್ಠೆಯಿಂದ ಬೆಂಬಲ ನೀಡುವುದು ಸಹ ಕಷ್ಟಕರವಾಗಿರಬಹುದು. ಈ ಕಾರಣಕ್ಕಾಗಿಯೇ ಬಹಳಷ್ಟು ಚರ್ಚೆ ಮತ್ತು ಪ್ರಾರ್ಥನೆ ಮಾಡಿದ ಮೇಲೆ ನಾವು ಸಭಾ ಕೂಟಗಳಲ್ಲಿ 2009ರ ಜನವರಿ 1ರಿಂದ ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ. ನಿಮ್ಮ ವೈಯಕ್ತಿಕ ಮತ್ತು ಕುಟುಂಬ ಅಧ್ಯಯನಕ್ಕಾಗಿ ಹೆಚ್ಚು ಸಮಯವನ್ನು ವ್ಯಯಿಸುವಂತೆ ಈ ಹೊಸ ಏರ್ಪಾಡುಗಳ ಅತ್ಯುತ್ತಮ ಉಪಯೋಗವನ್ನು ನೀವು ಮಾಡುವಿರೆಂದು ನಾವು ನಂಬುತ್ತೇವೆ.

ಈ ವರ್ಷದ ಹಲವಾರು ಸಮ್ಮೇಳನ ಮತ್ತು ಅಧಿವೇಶನಗಳಲ್ಲಿ ಹೆಚ್ಚೆಚ್ಚು ಮಂದಿ ದೀಕ್ಷಾಸ್ನಾನಕ್ಕೆ ಅರ್ಹರಾದದ್ದನ್ನು ನೋಡುವಾಗ ನಿಜವಾಗಿ ಸಂತೋಷವಾಗುತ್ತದೆ. ಅವರಲ್ಲಿ ಕೆಲವರು ತೀರ ಚಿಕ್ಕ ಪ್ರಾಯದವರಾಗಿದ್ದರು. ಸತ್ಯಕ್ಕಾಗಿ ಗಣ್ಯತೆಯನ್ನು ತೋರಿಸುವಂತೆ ಮತ್ತು ಬಾಲ್ಯದಿಂದಲೇ ಯೆಹೋವನನ್ನು ಸೇವಿಸಲು ಸಮರ್ಪಣೆ ಮಾಡಿಕೊಳ್ಳುವಂತೆ ನಿಮ್ಮ ಮಕ್ಕಳನ್ನು ಉತ್ತೇಜಿಸಿದ್ದಕ್ಕಾಗಿ ಹೆತ್ತವರಾದ ನಿಮ್ಮನ್ನು ಪ್ರಶಂಸಿಸುತ್ತೇವೆ. ಚಿಕ್ಕವರಾದ ಆ ಪ್ರಿಯ ಮಕ್ಕಳು ಶಾಲೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿರುವುದಾದರೂ, ದೀಕ್ಷಾಸ್ನಾನ ಪಡೆಯಲು ಅರ್ಹತೆ ಪಡೆದಿರುವುದು ಅವರಿಗೆ ಮನೆಯಲ್ಲಿ ದೊರೆತ ಉತ್ತಮ ತರಬೇತಿಯನ್ನು ಎತ್ತಿತೋರಿಸುತ್ತದೆ.—ಕೀರ್ತ. 128:1-6.

ಬೈಬಲ್‌ ಅಧ್ಯಯನ ಕಾರ್ಯದಲ್ಲಿ ದೊರೆತಿರುವ ಪ್ರಶಂಸನೀಯ ವೃದ್ಧಿಯನ್ನು ಸಹ ನಾವು ತಿಳಿಸಬಯಸುತ್ತೇವೆ. ಈ ಕಾರ್ಯದಲ್ಲಿ ಹೆಚ್ಚು ಪಾಲು ವಹಿಸಿದವರು ನಮ್ಮ ಶ್ರಮಶೀಲ ಮಿಷನೆರಿಗಳು ಮತ್ತು ವಿಶೇಷ ಪಯನೀಯರರು ಆಗಿದ್ದರು. ಉಚಿತವಾದ ‘ಜೀವಜಲಕ್ಕಾಗಿ’ ಬಾಯಾರಿರುವ ಎಲ್ಲ ಪ್ರಾಮಾಣಿಕ ಜನರನ್ನು “ಬಾ” ಎಂದು ಆಮಂತ್ರಿಸುವುದರಲ್ಲಿ ಲೋಕವ್ಯಾಪಕವಾಗಿ ನಮ್ಮ ಸಹೋದರ ಸಹೋದರಿಯರೆಲ್ಲರೂ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತಿದ್ದಾರೆ. ಇದನ್ನು ಆಡಳಿತ ಮಂಡಲಿಯ ನಾವೆಲ್ಲರೂ ಬಹಳವಾಗಿ ಗಣ್ಯಮಾಡುತ್ತೇವೆ. (ಪ್ರಕ. 22:17) ಕಳೆದ ವರ್ಷ ತಮ್ಮ ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ಸೂಚಿಸಿದ 2,89,678 ಮಂದಿಯನ್ನು ನಮ್ಮ ಲೋಕವ್ಯಾಪಕ ಸಹೋದರ ಬಳಗಕ್ಕೆ ನಾವು ಹಾರ್ದಿಕವಾಗಿ ಆಮಂತ್ರಿಸುತ್ತೇವೆ.

“ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂದು ಬರೆದ ಅಪೊಸ್ತಲ ಯೋಹಾನನ ಮಾತುಗಳನ್ನು ನಾವು ಆಗಾಗ್ಗೆ ಜ್ಞಾಪಿಸಿಕೊಳ್ಳುವುದು ಒಳ್ಳೆಯದು. (1 ಯೋಹಾ. 2:17) ಮತ್ತು ಈ ಲೋಕವು ‘ಗತಿಸಿಹೋಗುವ’ ಸಮಯದ ಕಡೇಕ್ಷಣಗಳಲ್ಲಿ ನಾವೀಗ ಜೀವಿಸುತ್ತಿರುವುದು ಅದೆಷ್ಟು ಗಂಭೀರ ಸಂಗತಿ! ಆದ್ದರಿಂದ ದೇವರ ಚಿತ್ತ ಮಾಡುವುದನ್ನು ನಮ್ಮ ಜೀವನದಲ್ಲಿ ಮುಖ್ಯವಾಗಿಡುವುದು ಮತ್ತು ‘ಎಚ್ಚರವಾಗಿರುವುದು’ ಎಷ್ಟು ವಿವೇಕಯುತ! (ಮತ್ತಾ. 24:42) ಹೀಗೆ ಮಾಡುವಲ್ಲಿ ಮುಂದೆಂದೂ ನಾವು ವಿಷಾದಪಡೆವು ಮತ್ತು ಯೆಹೋವನ ಪ್ರೀತಿಪೂರ್ವಕ ದಯೆಯ ಪ್ರಯೋಜನಗಳನ್ನು ಖಂಡಿತ ಪಡೆದುಕೊಳ್ಳುವೆವು.—ಯೆಶಾ. 63:7.

ನಿಮ್ಮ ಜೀವಿತದಲ್ಲಿ ದೇವರ ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡಲು 2009ರ ವರ್ಷಪುಸ್ತಕದ ಅನೇಕ ಪ್ರಚೋದಕ ಅನುಭವಗಳು ನಿಮಗೆಲ್ಲರಿಗೆ ಉತ್ತೇಜನ ನೀಡುವುದೆಂದು ನಮ್ಮ ನಿರೀಕ್ಷೆ. ನಾವು ಯಾವಾಗಲೂ ನಿಮ್ಮನ್ನು ನೆನಸುತ್ತೇವೆ, ನಿಮಗಾಗಿ ಪ್ರಾರ್ಥಿಸುತ್ತೇವೆ, ನಿಮ್ಮನ್ನು ಬಹಳವಾಗಿ ಪ್ರೀತಿಸುತ್ತೇವೆ ಎಂಬ ಆಶ್ವಾಸನೆ ನಿಮಗಿರಲಿ. ಯೆಹೋವನು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುವಂತಾಗಲಿ.

ನಿಮ್ಮ ಸಹೋದರರು,

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ