ಅಧ್ಯಾಯ 15
ಉತ್ತಮ ವೈಯಕ್ತಿಕ ತೋರಿಕೆ
ನಿಮ್ಮ ವೈಯಕ್ತಿಕ ತೋರಿಕೆಯು ನಿಮ್ಮ ವಿಷಯದಲ್ಲಿ ಬಹಳಷ್ಟು ಸಂಗತಿಗಳನ್ನು ತಿಳಿಯಪಡಿಸುತ್ತದೆ. ಯೆಹೋವನು ಹೃದಯವನ್ನು ನೋಡುತ್ತಾನಾದರೂ, ಮನುಷ್ಯರು ಸಾಮಾನ್ಯವಾಗಿ “ಹೊರಗಿನ ತೋರಿಕೆಯನ್ನು” ನೋಡುತ್ತಾರೆ. (1 ಸಮು. 16:7) ನೀವು ಶುದ್ಧರೂ ಒಳ್ಳೆಯ ಉಡುಪನ್ನು ಧರಿಸಿದವರೂ ಆಗಿರುವಲ್ಲಿ, ಇತರರು ನಿಮಗೆ ಸ್ವಗೌರವವಿದೆಯೆಂದು ತೀರ್ಮಾನಿಸಬಹುದು, ಮತ್ತು ನಿಮಗೆ ಕಿವಿಗೊಡುವ ಪ್ರವೃತ್ತಿಯನ್ನು ತೋರಿಸಬಹುದು. ನಿಮ್ಮ ಯೋಗ್ಯ ವಸ್ತ್ರಧಾರಣೆಯು, ನೀವು ಪ್ರತಿನಿಧಿಸುವ ಸಂಸ್ಥೆಗೆ ಕೀರ್ತಿಯನ್ನು ತರುತ್ತದೆ ಮಾತ್ರವಲ್ಲ, ನೀವು ಆರಾಧಿಸುವ ದೇವರ ವಿಷಯದಲ್ಲಿ ನಿಮ್ಮ ಕೇಳುಗರ ದೃಷ್ಟಿಕೋನದ ಮೇಲೆಯೂ ಪ್ರಭಾವ ಬೀರುವುದು.
ಅನ್ವಯಿಸಲಿಕ್ಕಾಗಿ ಮಾರ್ಗದರ್ಶನಗಳು. ಬೈಬಲು ವೈಯಕ್ತಿಕ ತೋರಿಕೆಯ ವಿಷಯದಲ್ಲಿ ಅನೇಕ ನಿಯಮಗಳನ್ನು ಕೊಡುವುದಿಲ್ಲ. ಆದರೆ ನಾವು ಸರಿಯಾದ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯಮಾಡುವ ಸಮತೂಕದ ಮೂಲತತ್ತ್ವಗಳನ್ನು ಅದು ಒದಗಿಸುತ್ತದೆ. “ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ” ಎಂಬುದೇ ಇವೆಲ್ಲಕ್ಕೂ ಇರುವ ಮೂಲಭೂತ ಸೂತ್ರವಾಗಿದೆ. (1 ಕೊರಿಂ. 10:31) ಹಾಗಾದರೆ, ನಮ್ಮ ವೈಯಕ್ತಿಕ ತೋರಿಕೆಯ ಸಂಬಂಧದಲ್ಲಿ ಯಾವ ಮೂಲತತ್ತ್ವಗಳು ಒಳಗೂಡಿವೆ?
ಪ್ರಥಮವಾಗಿ, ನಾವು ಶರೀರದಲ್ಲಿಯೂ ಉಡುಪಿನಲ್ಲಿಯೂ ಶುದ್ಧವಾಗಿರಬೇಕೆಂದು ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಪುರಾತನಕಾಲದ ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ, ಯೆಹೋವನು ಶುದ್ಧತೆಯ ಕುರಿತಾದ ನಿಯಮಗಳನ್ನು ಕೊಟ್ಟನು. ಉದಾಹರಣೆಗೆ, ಯಾಜಕರು ಸೇವೆಮಾಡುತ್ತಿದ್ದ ಸಮಯದಲ್ಲಿ, ಅವರು ನಿಶ್ಚಿತ ಸಮಯಗಳಲ್ಲಿ ಸ್ನಾನ ಮಾಡಿ ತಮ್ಮ ವಸ್ತ್ರಗಳನ್ನು ಒಗೆಯಬೇಕಿತ್ತು. (ಯಾಜ. 16:4, 24, 26, 28) ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಿಲ್ಲವಾದರೂ, ಅದರಲ್ಲಿರುವ ಮೂಲತತ್ತ್ವಗಳು ಈಗಲೂ ಜಾರಿಯಲ್ಲಿವೆ. (ಯೋಹಾ. 13:10; ಪ್ರಕ. 19:8) ವಿಶೇಷವಾಗಿ, ನಾವು ಆರಾಧನಾ ಸ್ಥಳಕ್ಕೆ ಹೋಗುವಾಗ ಅಥವಾ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ, ನಮ್ಮ ಶರೀರ, ಬಾಯುಸಿರು ಮತ್ತು ಬಟ್ಟೆಬರೆಗಳು ಇತರರಿಗೆ ಜಿಗುಪ್ಸೆ ಹುಟ್ಟಿಸದಿರುವಂತೆ ಶುದ್ಧವಾಗಿರಬೇಕು. ಸಭೆಯ ಮುಂದೆ ಭಾಷಣ ಕೊಡುವವರು ಮತ್ತು ಪ್ರತ್ಯಕ್ಷಾಭಿನಯಗಳಲ್ಲಿ ಭಾಗವಹಿಸುವವರು ಈ ವಿಷಯದಲ್ಲಿ ಅತ್ಯುತ್ತಮ ಮಾದರಿಯನ್ನಿಡಬೇಕು. ನಮ್ಮ ವೈಯಕ್ತಿಕ ತೋರಿಕೆಗೆ ಗಮನ ಕೊಡುವುದು, ಯೆಹೋವನಿಗೆ ಮತ್ತು ಆತನ ಸಂಸ್ಥೆಗೆ ಗೌರವವನ್ನು ತೋರಿಸುತ್ತದೆ.
ಎರಡನೆಯದಾಗಿ, ನಾವು ನಿರಾಡಂಬರತೆ ಮತ್ತು ಸ್ವಸ್ಥಮನಸ್ಸನ್ನು ಬೆಳೆಸಿಕೊಳ್ಳಬೇಕೆಂದು ಬೈಬಲು ನಮಗೆ ಬುದ್ಧಿಹೇಳುತ್ತದೆ. ಕ್ರೈಸ್ತ ಸ್ತ್ರೀಯರು, “ಮಾನಸ್ಥೆಯರಾಗಿಯೂ [“ನಿರಾಡಂಬರರೂ,” NW] ಡಂಭವಿಲ್ಲದವರಾಗಿಯೂ [“ಸ್ವಸ್ಥಮನಸ್ಸುಳ್ಳವರೂ,” NW] ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ . . . ಅಲಂಕರಿಸಿಕೊಳ್ಳಬೇಕು” ಎಂದು ಅಪೊಸ್ತಲ ಪೌಲನು ಅವರನ್ನು ಪ್ರೋತ್ಸಾಹಿಸಿದನು. (1 ತಿಮೊ. 2:9, 10) ಪುರುಷರ ಉಡುಪು ಮತ್ತು ಕೇಶಾಲಂಕಾರಗಳಲ್ಲಿಯೂ ನಿರಾಡಂಬರತೆ ಮತ್ತು ಸ್ವಸ್ಥಮನಸ್ಸು ಪ್ರಾಮುಖ್ಯವಾಗಿದೆ.
ನಿರಾಡಂಬರ ವ್ಯಕ್ತಿಯು ಇತರರನ್ನು ಅನಾವಶ್ಯಕವಾಗಿ ನೋಯಿಸದಿರುವ ವಿಷಯದಲ್ಲಿ ಮತ್ತು ತನ್ನ ಕಡೆಗೇ ಅನುಚಿತವಾದ ಗಮನವನ್ನು ಸೆಳೆಯದಿರುವ ವಿಷಯದಲ್ಲಿ ಆಸಕ್ತಿವಹಿಸುತ್ತಾನೆ. ಸ್ವಸ್ಥಮನಸ್ಸು ಯುಕ್ತಾಯುಕ್ತ ಪರಿಜ್ಞಾನವನ್ನು ಅಥವಾ ಒಳ್ಳೆಯ ತೀರ್ಮಾನವನ್ನು ಫಲಿಸುತ್ತದೆ. ಈ ಗುಣಗಳನ್ನು ತೋರಿಸುವ ವ್ಯಕ್ತಿಯಲ್ಲಿ, ದೈವಿಕ ಮಟ್ಟಗಳಿಗೆ ಗೌರವವನ್ನು ತೋರಿಸುವುದರಿಂದ ಫಲಿಸುವ ಸಮತೆ ಇರುತ್ತದೆ. ಈ ಗುಣಗಳನ್ನು ತೋರಿಸುವುದೆಂದರೆ, ನಾವು ಆಕರ್ಷಕ ರೀತಿಯಲ್ಲಿ ಉಡುಪನ್ನು ಧರಿಸಬಾರದೆಂದು ಅರ್ಥವಲ್ಲ. ನಮ್ಮ ತೋರಿಕೆಯ ವಿಷಯದಲ್ಲಿ ನಾವು ಮಿತಭಾವದವರಾಗಿರಲು ಮತ್ತು ವಿಪರೀತ ಫ್ಯಾಷನುಗಳ ಉಡುಪು ಮತ್ತು ಕೇಶಾಲಂಕಾರಗಳಿಂದ ದೂರವಿರಲು ಅವು ಸಹಾಯಮಾಡುತ್ತವೆ. (1 ಯೋಹಾ. 2:16) ನಾವು ಆರಾಧನೆಯ ಸ್ಥಳದಲ್ಲಿರಲಿ, ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುತ್ತಿರಲಿ ಅಥವಾ ಬೇರೆ ಚಟುವಟಿಕೆಗಳಲ್ಲಿ ಒಳಗೂಡಿರಲಿ, ನಾವು ಈ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳಲು ಬಯಸುತ್ತೇವೆ. ನಮ್ಮ ಮಾಮೂಲಿ ಉಡುಪು ಸಹ ನಿರಾಡಂಬರತೆ ಮತ್ತು ಸ್ವಸ್ಥಮನಸ್ಸನ್ನು ಪ್ರತಿಬಿಂಬಿಸಬೇಕು. ಶಾಲೆಯಲ್ಲಿ ಅಥವಾ ಉದ್ಯೋಗದ ಸ್ಥಳದಲ್ಲಿ, ಅನೌಪಚಾರಿಕ ರೀತಿಯಲ್ಲಿ ಸಾಕ್ಷಿ ನೀಡುವ ಸಂದರ್ಭಗಳು ನಮಗಿರುವವು. ಈ ಸಮಯಗಳಲ್ಲಿ ನಾವು ಕೂಟಗಳಿಗೆ, ಅಧಿವೇಶನಗಳಿಗೆ ಮತ್ತು ಸಮ್ಮೇಳನಗಳಿಗೆ ಧರಿಸುವಂಥ ರೀತಿಯಲ್ಲಿ ವಸ್ತ್ರಧಾರಣೆ ಮಾಡುವುದಿಲ್ಲವಾದರೂ, ನಮ್ಮ ಪೋಷಾಕು ನೀಟಾಗಿಯೂ ಸ್ವಚ್ಛವಾಗಿಯೂ ನಿರಾಡಂಬರವಾದದ್ದಾಗಿಯೂ ಇರಬೇಕು.
ನಾವೆಲ್ಲ ಒಂದೇ ಸಮನಾಗಿ ಉಡುಪು ಧರಿಸುವುದಿಲ್ಲ ಎಂಬುದು ನಿಜ. ನಾವು ಹಾಗೆ ಧರಿಸಬೇಕೆಂದು ನಿರೀಕ್ಷಿಸಲಾಗುವುದೂ ಇಲ್ಲ. ಜನರಿಗೆ ವಿವಿಧ ಅಭಿರುಚಿಗಳಿವೆ ಮತ್ತು ಇದು ಯೋಗ್ಯವಾದದ್ದಾಗಿದೆ. ಆದರೆ ನಾವು ಬೈಬಲಿನ ಮಾರ್ಗದರ್ಶನಗಳನ್ನು ಸದಾ ಅನ್ವಯಿಸತಕ್ಕದ್ದು.
ಕೇಶಾಲಂಕಾರ ಮತ್ತು ಹೊರ ಉಡುಪುಗಳಿಗಿಂತಲೂ ಹೆಚ್ಚು ಪ್ರಾಮುಖ್ಯವಾಗಿರುವುದು, “ಹೃದಯದ ರಹಸ್ಯ ವ್ಯಕ್ತಿ”ಯೊಂದಿಗೆ ಸಂಬಂಧಿಸಿರುವ ಉಡುಪೇ ಎಂಬುದನ್ನು ಅಪೊಸ್ತಲ ಪೇತ್ರನು ತೋರಿಸಿದನು. (1 ಪೇತ್ರ 3:3, 4, NW) ನಮ್ಮ ಹೃದಯಗಳು ಪ್ರೀತಿ, ಸಂತೋಷ, ಶಾಂತಿ, ದಯೆ ಮತ್ತು ಸ್ಥಿರವಾಗಿ ಬೇರೂರಿರುವ ನಂಬಿಕೆಯಿಂದ ತುಂಬಿರುವಾಗ, ಇವು ದೇವರನ್ನು ನಿಜವಾಗಿಯೂ ಗೌರವಿಸುವ ನಮ್ಮ ಆತ್ಮಿಕ ಉಡುಪುಗಳಾಗಿ ಪರಿಣಮಿಸುವವು.
ಮೂರನೆಯದಾಗಿ, ನಮ್ಮ ತೋರಿಕೆಯು ಸುವ್ಯವಸ್ಥಿತವಾಗಿದೆಯೊ ಎಂದು ನೋಡುವಂತೆ ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಒಂದನೆಯ ತಿಮೊಥೆಯ 2:9 ರಲ್ಲಿ ‘ಮರ್ಯಾದೆಗೆ ತಕ್ಕ ಉಡುಪಿನ [“ಸುವ್ಯವಸ್ಥಿತವಾದ ಉಡುಪಿನ,” NW]’ ಕುರಿತು ತಿಳಿಸಲಾಗಿದೆ. ಅಪೊಸ್ತಲ ಪೌಲನು ಇಲ್ಲಿ ಸ್ತ್ರೀಯರ ಉಡುಪನ್ನು ಸೂಚಿಸುತ್ತಾನಾದರೂ, ಅದೇ ಮೂಲತತ್ತ್ವವು ಪುರುಷರಿಗೂ ಅನ್ವಯಿಸುತ್ತದೆ. ಸುವ್ಯವಸ್ಥಿತವಾಗಿರುವಂಥದ್ದು ಚೊಕ್ಕಟವಾಗಿಯೂ ವ್ಯವಸ್ಥಿತವಾಗಿಯೂ ಇರುತ್ತದೆ. ನಮಗೆ ಪ್ರಾಪಂಚಿಕವಾಗಿ ಹೆಚ್ಚಿರಲಿ ಇಲ್ಲದಿರಲಿ, ನಮ್ಮ ತೋರಿಕೆಯು ನೀಟಾಗಿರಸಾಧ್ಯವಿದೆ.
ನಮ್ಮ ವೈಯಕ್ತಿಕ ತೋರಿಕೆಯಲ್ಲಿ ಗಮನಿಸಲಾಗುವ ಪ್ರಥಮ ವಿಷಯಗಳಲ್ಲಿ ಒಂದು ನಮ್ಮ ಕೇಶವಾಗಿದೆ. ಅದು ಅಚ್ಚುಕಟ್ಟಾಗಿಯೂ ಸುವ್ಯವಸ್ಥಿತವಾಗಿಯೂ ಇರಬೇಕು. ಸ್ಥಳಿಕ ಪದ್ಧತಿ ಮತ್ತು ಆನುವಂಶಿಕ ಸಂಗತಿಗಳು, ಜನರ ಕೇಶಾಲಂಕಾರದ ಮೇಲೆ ಪ್ರಭಾವಬೀರುತ್ತವೆ. ಒಂದನೆಯ ಕೊರಿಂಥ 11:14, 15 ರಲ್ಲಿ ನಾವು ಕೇಶಾಲಂಕಾರದ ಬಗ್ಗೆ ಅಪೊಸ್ತಲ ಪೌಲನು ಕೊಟ್ಟ ಸಲಹೆಯನ್ನು ನೋಡುತ್ತೇವೆ. ಇದು ಮೇಲಿನ ಎರಡು ಸಂಗತಿಗಳನ್ನು ಪರಿಗಣಿಸಿ ಕೊಟ್ಟಿರುವ ಸಲಹೆಯೆಂಬುದು ಸುವ್ಯಕ್ತ. ಆದರೆ ಒಬ್ಬ ವ್ಯಕ್ತಿಯ ಕೇಶಾಲಂಕಾರವು, ಅವನೊ ಅವಳೊ ವಿರುದ್ಧ ಲಿಂಗಜಾತಿಯ ವ್ಯಕ್ತಿಯಂತೆ ತೋರಿಬರಲು ಪ್ರಯತ್ನಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಕೊಡುವಲ್ಲಿ, ಇದು ಬೈಬಲ್ ಮೂಲತತ್ತ್ವಕ್ಕೆ ವ್ಯತಿರಿಕ್ತವಾಗಿರುತ್ತದೆ.—ಧರ್ಮೋ. 22:5.
ಪುರುಷರ ವಿಷಯಕ್ಕೆ ಬರುವಾಗ, ಅಚ್ಚುಕಟ್ಟಾದ ವೈಯಕ್ತಿಕ ತೋರಿಕೆಯಲ್ಲಿ ಗಡ್ಡಮೀಸೆಯನ್ನು ಚೆನ್ನಾಗಿ ಬೋಳಿಸಿರುವ ಸಂಗತಿಯು ಒಳಗೂಡಬಹುದು. ಮೀಸೆಯನ್ನು ಇಡುವುದು ಗೌರವಾರ್ಹವೆಂದು ವ್ಯಾಪಕವಾಗಿ ವೀಕ್ಷಿಸಲ್ಪಡುವ ಪ್ರದೇಶಗಳಲ್ಲಿ, ಮೀಸೆಯನ್ನು ಇಟ್ಟುಕೊಳ್ಳುವವರು ಅದನ್ನು ನೀಟಾಗಿ ಕತ್ತರಿಸಬೇಕು.
ನಾಲ್ಕನೆಯದಾಗಿ, ನಮ್ಮ ತೋರಿಕೆಯು ಲೋಕದ ಮತ್ತು ಅದರ ಮಾರ್ಗಗಳ ಕಡೆಗಿನ ಪ್ರೀತಿಯನ್ನು ಪ್ರತಿಬಿಂಬಿಸಬಾರದು. “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ” ಎಂದು ಅಪೊಸ್ತಲ ಯೋಹಾನನು ಎಚ್ಚರಿಸಿದನು. (1 ಯೋಹಾ. 2:15-17) ಅನೇಕ ಪಾಪಪೂರ್ಣ ಆಶೆಗಳು ಈ ಲೋಕದ ಮುಖ್ಯ ಲಕ್ಷಣಗಳಾಗಿರುತ್ತವೆ. ಇವುಗಳಲ್ಲಿ ಪಾಪಪೂರ್ಣ ಶರೀರದಾಶೆ ಮತ್ತು ಬದುಕುಬಾಳಿನ ಡಂಬದ ಪ್ರದರ್ಶನವನ್ನು ಯೋಹಾನನು ಎತ್ತಿಹೇಳುತ್ತಾನೆ. ದಂಗೆಕೋರ ಮನೋಭಾವ ಅಥವಾ ಅಧಿಕಾರಕ್ಕೆ ಅವಿಧೇಯತೆಯ ಕಡೆಗೂ ಶಾಸ್ತ್ರವಚನಗಳು ನಮ್ಮ ಗಮನವನ್ನು ಸೆಳೆಯುತ್ತವೆ. (ಜ್ಞಾನೋ. 17:11; ಎಫೆ. 2:2) ಈ ಬಯಕೆಗಳು ಮತ್ತು ಮನೋಭಾವಗಳು ಅನೇಕವೇಳೆ ಜನರ ಉಡುಪು ಮತ್ತು ಕೇಶಾಲಂಕಾರದಲ್ಲಿ ಪ್ರಕಟವಾಗುತ್ತವೆ. ಇದರ ಫಲವಾಗಿ, ಅವರ ತೋರಿಕೆ ಅಸಭ್ಯವೂ, ಲೈಂಗಿಕಾಕರ್ಷಣೆಯದ್ದೂ, ಥಳುಕಿನದ್ದೂ, ಕೊಳಕಿನದ್ದೂ, ತಾತ್ಸಾರಭರಿತವಾದದ್ದೂ ಮತ್ತು ಅಚ್ಚುಕಟ್ಟಿಲ್ಲದಂಥದ್ದೂ ಆಗಿರುತ್ತದೆ. ಯೆಹೋವನ ಸೇವಕರಾದ ನಾವು, ಇಂತಹ ಅಕ್ರೈಸ್ತ ಮಾರ್ಗಗಳನ್ನು ಪ್ರತಿಬಿಂಬಿಸುವ ಶೈಲಿಗಳಿಂದ ದೂರವಿರುತ್ತೇವೆ.
ಈ ಪ್ರಪಂಚವನ್ನು ಅನುಕರಿಸುವುದಕ್ಕೆ ಬದಲಾಗಿ, ಕ್ರೈಸ್ತ ಸಭೆಯಲ್ಲಿರುವ ಆತ್ಮಿಕವಾಗಿ ಪ್ರೌಢರಾದ ಸ್ತ್ರೀಪುರುಷರ ಉತ್ತಮ ಮಾದರಿಯು ನಿಮ್ಮ ಉಡುಪು ಮತ್ತು ಕೇಶಾಲಂಕಾರವನ್ನು ಪ್ರಭಾವಿಸುವಂತೆ ಬಿಡುವುದು ಎಷ್ಟು ಉತ್ತಮ! ಮುಂದೆ ಎಂದಾದರೊಂದು ದಿನ ಸಾರ್ವಜನಿಕ ಭಾಷಣಕಾರರಾಗಲು ನಿರೀಕ್ಷಿಸುವ ಯುವ ಪುರುಷರು, ಸಾರ್ವಜನಿಕ ಭಾಷಣಗಳನ್ನು ಕೊಡಲು ಈಗಾಗಲೇ ಅರ್ಹರಾಗಿರುವವರ ವೇಷಭೂಷಣಗಳನ್ನು ಅವಲೋಕಿಸಬಲ್ಲರು. ಮತ್ತು ಸಾರ್ವಜನಿಕ ಶುಶ್ರೂಷೆಯಲ್ಲಿ ಅನೇಕ ವರ್ಷಗಳ ವರೆಗೆ ನಿಷ್ಠೆಯಿಂದ ಭಾಗವಹಿಸಿರುವ ವ್ಯಕ್ತಿಗಳು ಇಟ್ಟಿರುವ ಮಾದರಿಯಿಂದ ಎಲ್ಲರೂ ಪಾಠವನ್ನು ಕಲಿಯಬಲ್ಲರು.—1 ತಿಮೊ. 4:12; 1 ಪೇತ್ರ 5:2, 3.
ಐದನೆಯದಾಗಿ, ಯಾವುದು ಸೂಕ್ತವೆಂದು ನಿರ್ಣಯಿಸುವುದರಲ್ಲಿ ನಾವು, “ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ” ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. (ರೋಮಾ. 15:3) ಯೇಸುವಿನ ಪ್ರಪ್ರಧಾನ ಚಿಂತೆಯು ದೇವರ ಚಿತ್ತವನ್ನು ಮಾಡುವುದಾಗಿತ್ತು. ಸ್ವಾನುಕೂಲವನ್ನಲ್ಲ, ಬದಲಾಗಿ ಇತರರಿಗೆ ಸಹಾಯಮಾಡುವುದನ್ನು ಯೇಸು ಪ್ರಥಮವಾಗಿಟ್ಟನು. ನಿರ್ದಿಷ್ಟ ಉಡುಪು ಮತ್ತು ಕೇಶಾಲಂಕಾರಗಳ ಸಂಬಂಧದಲ್ಲಿ, ಅವು ನಾವೀಗ ಸೇವೆ ಮಾಡುತ್ತಿರುವ ಸ್ಥಳದಲ್ಲಿ ನಮ್ಮ ಮತ್ತು ಜನರ ಮಧ್ಯೆ ತಡೆಯನ್ನು ಉಂಟುಮಾಡುವುದಾದರೆ, ನಾವೇನು ಮಾಡಬೇಕು? ಕ್ರಿಸ್ತನು ತೋರಿಸಿದ ದೈನ್ಯ ಮನೋಭಾವವನ್ನು ನಾವು ಅನುಕರಿಸುವಲ್ಲಿ, ಅದು ನಾವು ವಿವೇಕಭರಿತ ನಿರ್ಣಯವನ್ನು ಮಾಡುವಂತೆ ನಮಗೆ ಸಹಾಯಮಾಡಬಲ್ಲದು. ಅಪೊಸ್ತಲ ಪೌಲನು ಈ ಮೂಲತತ್ತ್ವವನ್ನು ತಿಳಿಸಿದನು: “ಮುಗ್ಗರಿಸುವುದಕ್ಕೆ ನಾವು ಯಾವುದೇ ಕಾರಣವನ್ನು ಕೊಡುತ್ತಿಲ್ಲ.” (2 ಕೊರಿಂ. 6:3, NW) ಆ ಕಾರಣಕ್ಕಾಗಿ, ನಾವು ಸಾಕ್ಷಿಯನ್ನು ಕೊಡಲು ಬಯಸುವಂಥ ಜನರ ಮನಸ್ಸನ್ನು ಮುಚ್ಚಿಬಿಡುವಂಥ ಕೇಶಾಲಂಕಾರ ಅಥವಾ ವೇಷಭೂಷಣಗಳನ್ನು ತ್ಯಜಿಸಬಹುದು.
ದೇಹಭಂಗಿ. ಉತ್ತಮವಾದ ವೈಯಕ್ತಿಕ ತೋರಿಕೆಯಲ್ಲಿ ಸರಿಯಾದ ದೇಹಭಂಗಿಯೂ ಸೇರಿದೆ. ನಾವೆಲ್ಲರೂ ಒಂದೇ ಭಂಗಿಯನ್ನು ಉಪಯೋಗಿಸುವುದಿಲ್ಲ ಮತ್ತು ನಾವೆಲ್ಲರೂ ಒಂದೇ ನಿರ್ದಿಷ್ಟ ನಮೂನೆಗೆ ಹೊಂದಿಕೊಳ್ಳಲು ಪ್ರಯತ್ನಿಸುವುದಿಲ್ಲ ಎಂಬುದು ನಿಜ. ಆದರೂ, ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ, ನೆಟ್ಟಗೆ ನಿಲ್ಲುವುದು ವೈಯಕ್ತಿಕ ಘನತೆ ಮತ್ತು ಆಶಾವಾದವನ್ನು ಸೂಚಿಸುತ್ತದೆಂಬುದು ಗಮನಾರ್ಹ. (ಯಾಜ. 26:13; ಲೂಕ 21:28) ಹೀಗಿದ್ದರೂ, ಅನೇಕ ವರ್ಷಗಳ ವರೆಗೆ ಬಗ್ಗಿಕೊಂಡು ಕೆಲಸಮಾಡಿರುವ ಕಾರಣ, ಇಲ್ಲವೆ ವೃದ್ಧಾಪ್ಯ ಅಥವಾ ಶಾರೀರಿಕ ಬಲಹೀನತೆಯ ಕಾರಣ, ಒಬ್ಬ ಸಹೋದರನೊ ಸಹೋದರಿಯೊ ನೆಟ್ಟಗೆ ನಿಲ್ಲಶಕ್ತರಾಗಲಿಕ್ಕಿಲ್ಲ ಅಥವಾ ಬೆಂಬಲಕ್ಕಾಗಿ ಅವರು ಒರಗಿ ನಿಲ್ಲುವ ಅಗತ್ಯವಿರಬಹುದು. ಆದರೆ, ಇತರರೊಂದಿಗೆ ಮಾತಾಡುವಾಗ ಉದಾಸೀನತೆಯ ಅಥವಾ ಕ್ಷಮೆಯಾಚಿಸುವ ದೇಹಭಂಗಿಯನ್ನು ವ್ಯಕ್ತಪಡಿಸದಿರಲಿಕ್ಕಾಗಿ, ನೆಟ್ಟಗೆ ನಿಲ್ಲಲು ಶಕ್ತರಾಗಿರುವವರು ಉಚಿತ ಪ್ರಮಾಣದಲ್ಲಿ ನೆಟ್ಟಗೆ ನಿಲ್ಲಬೇಕೆಂದು ಶಿಫಾರಸ್ಸುಮಾಡಲಾಗುತ್ತದೆ. ತದ್ರೀತಿ, ಭಾಷಣಕಾರನು ಒಮ್ಮೊಮ್ಮೆ ವೇದಿಕೆಯ ಸ್ಟ್ಯಾಂಡ್‌ನ ಮೇಲೆ ಕೈಗಳನ್ನಿಡುವುದು ತಪ್ಪಲ್ಲದಿದ್ದರೂ, ಅವನು ಅದರ ಮೇಲೆ ಒರಗಿ ನಿಲ್ಲದಿರುವಲ್ಲಿ, ಅದು ಸಭಿಕರಲ್ಲಿ ಸಾಮಾನ್ಯವಾಗಿ ಹೆಚ್ಚು ಸಕಾರಾತ್ಮಕವಾದ ಅಭಿಪ್ರಾಯವನ್ನು ಮೂಡಿಸುತ್ತದೆ.
ಅಚ್ಚುಕಟ್ಟಾದ ಸಾಧನ. ಶುದ್ಧವೂ ಸುವ್ಯವಸ್ಥಿತವೂ ಆಗಿರಬೇಕಾದುದು ನಮ್ಮ ವೈಯಕ್ತಿಕ ತೋರಿಕೆ ಮಾತ್ರವೇ ಅಲ್ಲ, ಬದಲಾಗಿ ನಾವು ಶುಶ್ರೂಷೆಯಲ್ಲಿ ಉಪಯೋಗಿಸುವ ಸಾಧನಗಳೂ ನಿರ್ಮಲ ಹಾಗೂ ಚೊಕ್ಕಟವಾಗಿರಬೇಕು.
ನಿಮ್ಮ ಬೈಬಲನ್ನು ತೆಗೆದುಕೊಳ್ಳಿರಿ. ನಮ್ಮ ಬೈಬಲು ಹಳೆಯದಾಗಿರುವಾಗ, ಒಂದು ಹೊಸ ಬೈಬಲನ್ನು ಪಡೆಯಲು ನಮ್ಮೆಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೂ, ನಮ್ಮ ಬೈಬಲು ನಮ್ಮೊಂದಿಗೆ ಎಷ್ಟು ದೀರ್ಘಕಾಲವೇ ಇದ್ದಿರಲಿ, ಅದನ್ನು ನಾವು ಜಾಗರೂಕತೆಯಿಂದ ಉಪಯೋಗಿಸಿದ್ದೇವೆ ಎಂಬ ರುಜುವಾತನ್ನು ಅದು ಕೊಡಬೇಕು.
ಸಾಕ್ಷಿಕಾರ್ಯಕ್ಕಾಗಿ ಉಪಯೋಗಿಸುವ ಬ್ಯಾಗನ್ನು ತುಂಬಿಸುವ ವಿಧಗಳು ಅನೇಕವಿರಬಹುದಾದರೂ, ಅದು ಅಚ್ಚುಕಟ್ಟಾಗಿರಬೇಕು. ಒಬ್ಬ ಪ್ರಚಾರಕನು ಮನೆಯವನಿಗೆ ಒಂದು ವಚನವನ್ನು ಓದಲು ಸಿದ್ಧನಾಗುತ್ತಿರುವಾಗ ಅಥವಾ ಒಬ್ಬ ಸಹೋದರನು ಸಭೆಗೆ ಒಂದು ಭಾಷಣವನ್ನು ಕೊಡುತ್ತಿರುವಾಗ, ಬೈಬಲಿನಿಂದ ಕಾಗದಗಳು ಕೆಳಗೆ ಬೀಳುವುದನ್ನು ನೀವು ಎಂದಾದರೂ ನೋಡಿದ್ದೀರೊ? ಆಗ ನೀವು ಅಪಕರ್ಷಿತರಾದಿರಿ, ಅಲ್ಲವೆ? ಬೈಬಲಿನಲ್ಲಿ ಇಡಲ್ಪಟ್ಟಿರುವ ಕಾಗದಗಳು ಅಪಕರ್ಷಣೆಗೆ ಕಾರಣವಾಗಿರುವಲ್ಲಿ, ನೀವು ಅವುಗಳನ್ನು ಬೇರೆ ಕಡೆಯಲ್ಲಿ ಇಡುವುದು, ನೀವು ನಿಮ್ಮ ಸಾಧನವನ್ನು ಸುವ್ಯವಸ್ಥಿತವಾಗಿಡಲು ಶಕ್ತರನ್ನಾಗಿಮಾಡುವುದು. ಬೈಬಲನ್ನು ಇಲ್ಲವೆ ಇತರ ಧಾರ್ಮಿಕ ಸಾಹಿತ್ಯಗಳನ್ನು ನೆಲದ ಮೇಲಿಡುವುದು ಕೆಲವು ಸಂಸ್ಕೃತಿಗಳಲ್ಲಿ ಅಗೌರವವಾಗಿ ವೀಕ್ಷಿಸಲ್ಪಡುತ್ತದೆಂಬುದು ಸಹ ನಿಮಗೆ ತಿಳಿದಿರಲಿ.
ಉತ್ತಮವಾದ ವೈಯಕ್ತಿಕ ತೋರಿಕೆಯು ನಮಗೆ ಪ್ರಾಮುಖ್ಯವಾಗಿರಬೇಕು. ಇತರರು ನಮ್ಮನ್ನು ಹೇಗೆ ಪರಿಗಣಿಸುತ್ತಾರೆಂಬುದನ್ನೂ ಅದು ಪ್ರಭಾವಿಸುತ್ತದೆ. ಆದರೆ ಎಲ್ಲಕ್ಕೂ ಮಿಗಿಲಾಗಿ, ನಾವು ಅದಕ್ಕೆ ಜಾಗರೂಕತೆಯ ಗಮನವನ್ನು ಕೊಡುವುದು, “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರ”ವಾಗಿರುವುದು ನಮ್ಮ ಬಯಕೆಯಾಗಿರುವುದರಿಂದಲೇ.—ತೀತ 2:10.