ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 14 ಪು. 128-ಪು. 130 ಪ್ಯಾ. 4
  • ಸ್ವಾಭಾವಿಕತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸ್ವಾಭಾವಿಕತೆ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಸಂಭಾಷಣಾ ರೀತಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸ್ವಾಭಾವಿಕ ಸಂಭಾಷಣೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಶಾಲೆಗಾಗಿ ವಿದ್ಯಾರ್ಥಿ ಭಾಷಣಗಳನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಪ್ರಶ್ನಾ ರೇಖಾಚೌಕ
    1996 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 14 ಪು. 128-ಪು. 130 ಪ್ಯಾ. 4

ಅಧ್ಯಾಯ 14

ಸ್ವಾಭಾವಿಕತೆ

ನೀವೇನು ಮಾಡುವ ಅಗತ್ಯವಿದೆ?

ನೀವು ನೀವಾಗಿಯೇ ಇರಿ—ಸಂಭಾಷಣಾತ್ಮಕತೆ, ಮನಃಪೂರ್ವಕತೆ ಮತ್ತು ಸಹಜತೆಯನ್ನು ತೋರಿಸಿರಿ.

ಇದು ಪ್ರಾಮುಖ್ಯವೇಕೆ?

ನೀವು ಭಾಷಣ ಕೊಡುತ್ತಿರುವಾಗ, ನಿಮ್ಮ ಬಗ್ಗೆ ಸಭಿಕರು ಏನು ಯೋಚಿಸುತ್ತಿರಬಹುದು ಎಂಬುದರ ಕುರಿತು ತುಂಬ ಚಿಂತಿತರಾಗಿರುವ ಕಾರಣ ಧೈರ್ಯಗೆಟ್ಟು, ಗಡುಸಾಗಿ ಅಥವಾ ಒರಟೊರಟಾಗಿ ಮಾತಾಡುವುದಾದರೆ ಇತರರು ನೀವೇನು ಹೇಳುತ್ತೀರೊ ಅದರಿಂದ ಅಪಕರ್ಷಿಸಲ್ಪಟ್ಟಾರು.

ನಿಮ್ಮ ಮನಸ್ಸಿನಲ್ಲಿ ಏನಿದೆಯೊ ಅದನ್ನು ಸ್ವಾಭಾವಿಕ ರೀತಿಯಲ್ಲಿ ವ್ಯಕ್ತಪಡಿಸುವುದು, ನೀವು ಇತರರ ಭರವಸೆಯನ್ನು ಸಂಪಾದಿಸಲು ಸಹಾಯಮಾಡುತ್ತದೆ. ತನ್ನ ಗುರುತನ್ನು ಮರೆಮಾಚಲಿಕ್ಕಾಗಿ ಮೊಗವಾಡ ಹಾಕಿಕೊಂಡು ಮಾತಾಡುವಂಥ ಒಬ್ಬ ವ್ಯಕ್ತಿಯು ಏನು ಹೇಳುತ್ತಾನೊ ಅದರಲ್ಲಿ ನೀವು ಭರವಸೆಯಿಡುವಿರೊ? ಆ ಮೊಗವಾಡದ ರೂಪವು ಭಾಷಣಕಾರನ ಮುಖಕ್ಕಿಂತ ಹೆಚ್ಚು ಸುಂದರವಾಗಿರುವುದಾದರೆ ನೀವು ಅವನಲ್ಲಿ ಭರವಸೆಯಿಡುವಿರೊ? ಸಾಧ್ಯವೇ ಇಲ್ಲ! ಆದುದರಿಂದ, ಒಂದು ವೇಷವನ್ನು ಹಾಕಿಕೊಳ್ಳುವ ಬದಲಿಗೆ, ನೀವು ನೀವಾಗಿಯೇ ಇದ್ದು ನಿಮ್ಮ ಸ್ವಂತ ಸ್ವಭಾವವನ್ನು ತೋರಿಸಿರಿ.

ಸ್ವಾಭಾವಿಕತೆಯೆಂದರೆ ನಿರ್ಲಕ್ಷ್ಯತೆಯೆಂದು ಎಣಿಸಬಾರದು. ವ್ಯಾಕರಣದ ಕೊರತೆ, ತಪ್ಪು ಉಚ್ಚಾರಣೆ ಮತ್ತು ಧ್ವನಿಗುಂದಿದ ಮಾತು ಸೂಕ್ತವಾದದ್ದಲ್ಲ. ಅಸಂಸ್ಕೃತ ಪದಗಳನ್ನು ಉಪಯೋಗಿಸುವುದರಿಂದ ದೂರವಿರಬೇಕು. ನಮ್ಮ ಮಾತಿನಲ್ಲಿಯೂ ನಮ್ಮ ನಡತೆಯಲ್ಲಿಯೂ ಯೋಗ್ಯವಾದ ಘನತೆಯನ್ನು ತೋರಿಸಲು ನಾವು ಬಯಸಬೇಕು. ಇಂತಹ ಸ್ವಾಭಾವಿಕತೆಯನ್ನು ತೋರಿಸುವವನು ಅತಿ ಕ್ರಮನಿಷ್ಠನಾಗಿರುವುದೂ ಇಲ್ಲ, ಸಭಿಕರ ಮೇಲೆ ಪ್ರಭಾವ ಬೀರಬೇಕೆಂಬುದರ ಕುರಿತು ಹೆಚ್ಚು ಚಿಂತಿಸುವವನೂ ಆಗಿರುವುದಿಲ್ಲ.

ಕ್ಷೇತ್ರ ಶುಶ್ರೂಷೆಯಲ್ಲಿ. ನೀವು ಒಂದು ಮನೆಯನ್ನು ಸಮೀಪಿಸುವಾಗ ಇಲ್ಲವೆ ಸಾರ್ವಜನಿಕ ಸ್ಥಳದಲ್ಲಿ ಯಾರಿಗೊ ಸಾಕ್ಷಿ ನೀಡಲು ಮುಂತೊಡಗುವಾಗ ನಿಮಗೆ ಹೆದರಿಕೆಯಾಗುತ್ತದೊ? ನಮ್ಮಲ್ಲಿ ಹೆಚ್ಚಿನವರಿಗೆ ಹೀಗಾಗುತ್ತದಾದರೂ, ಕೆಲವರಲ್ಲಿ ಈ ಅನಿಸಿಕೆ ಇತರರಲ್ಲಿರುವುದಕ್ಕಿಂತ ಹೆಚ್ಚಾಗಿರುತ್ತದೆ. ಮನಸ್ಸಿನ ಈ ತುಡಿತವು ಸ್ವರವು ಪ್ರಯಾಸದಿಂದ ಹೊರಬರುವಂತೆ ಅಥವಾ ನಡುಗುವಂತೆ ಮಾಡಬಹುದು ಇಲ್ಲವೆ ನಿಮ್ಮ ಹೆದರಿಕೆಯು, ನಿಮ್ಮ ಕೈಗಳನ್ನೊ ತಲೆಯನ್ನೊ ನೀವು ಒರಟೊರಟಾಗಿ ಚಲಿಸುವಂತೆ ಮಾಡಬಹುದು.

ಒಬ್ಬ ಪ್ರಚಾರಕನು ಅನೇಕ ಕಾರಣಗಳಿಂದಾಗಿ ಈ ಸಮಸ್ಯೆಯನ್ನು ಎದುರಿಸಬಹುದು. ತಾನು ಮನೆಯವರ ಮನಸ್ಸಿನಲ್ಲಿ ಯಾವ ಅಭಿಪ್ರಾಯವನ್ನು ಮೂಡಿಸುತ್ತೇನೊ, ತನ್ನ ನಿರೂಪಣೆಯು ಯಶಸ್ವಿಯಾಗುವುದೊ ಇಲ್ಲವೋ ಎಂದು ಅವನು ಪ್ರಾಯಶಃ ಯೋಚಿಸುತ್ತಿರಬಹುದು. ಇದಾವುದೂ ಅಸಾಮಾನ್ಯವಲ್ಲದಿದ್ದರೂ, ಇಂತಹ ವಿಷಯಗಳಿಗೆ ವಿಪರೀತ ಗಮನವನ್ನು ಕೊಡುವಾಗಲೇ ಸಮಸ್ಯೆಯುಂಟಾಗುವುದು. ಶುಶ್ರೂಷೆಯಲ್ಲಿ ತೊಡಗುವ ಮೊದಲು ನೀವು ಧೈರ್ಯಗೆಡುವುದಾದರೆ, ನಮಗೆ ಯಾವುದು ಸಹಾಯಮಾಡಬಲ್ಲದು? ಜಾಗರೂಕ ತಯಾರಿ ಮತ್ತು ಯೆಹೋವನಿಗೆ ಕಟ್ಟಾಸಕ್ತಿಯ ಪ್ರಾರ್ಥನೆಯೇ. (ಅ. ಕೃ. 4:29) ಜನರನ್ನು ಪರದೈಸಿನಲ್ಲಿ ಪರಿಪೂರ್ಣ ಆರೋಗ್ಯ ಮತ್ತು ನಿತ್ಯಜೀವವನ್ನು ಪಡೆಯಲಿಕ್ಕಾಗಿ ಕರೆಯುವುದರಲ್ಲಿ ಯೆಹೋವನ ಮಹಾ ಕರುಣೆಯ ಕುರಿತು ತುಸು ಯೋಚಿಸಿರಿ. ನೀವು ಯಾರಿಗೆ ಸಹಾಯಮಾಡಲು ಪ್ರಯತ್ನಿಸುತ್ತಿದ್ದೀರೊ ಅವರ ಕುರಿತು ಮತ್ತು ಸುವಾರ್ತೆಯನ್ನು ಕೇಳಲು ಅವರಿಗಿರುವ ಆವಶ್ಯಕತೆಯ ಕುರಿತು ಯೋಚಿಸಿರಿ.

ಜನರಿಗೆ ಇಚ್ಛಾ ಸ್ವಾತಂತ್ರ್ಯವಿದೆಯೆಂದೂ, ಆದಕಾರಣ ಅವರು ಸಂದೇಶವನ್ನು ಅಂಗೀಕರಿಸಬಲ್ಲರು ಇಲ್ಲವೆ ನಿರಾಕರಿಸಬಲ್ಲರು ಎಂಬುದೂ ಜ್ಞಾಪಕವಿರಲಿ. ಪುರಾತನಕಾಲದ ಇಸ್ರಾಯೇಲಿನಲ್ಲಿ ಯೇಸು ಸಾಕ್ಷಿ ನೀಡಿದಾಗಲೂ ಇದು ನಿಜವಾಗಿತ್ತು. ನಿಮ್ಮ ನೇಮಕವು ಕೇವಲ ಸಾರುವುದಾಗಿದೆ. (ಮತ್ತಾ. 24:14) ಜನರು ನೀವು ಮಾತಾಡುವಂತೆ ಬಿಡದಿರುವಾಗಲೂ ನಿಮ್ಮ ಸಾಕ್ಷಾತ್‌ ಸಮಕ್ಷಮವೇ ಒಂದು ಸಾಕ್ಷಿಯನ್ನು ಕೊಡುವುದು. ಯೆಹೋವನು ತನ್ನ ಚಿತ್ತವನ್ನು ಮಾಡಲು ನಿಮ್ಮನ್ನು ಉಪಯೋಗಿಸುವಂತೆ ನೀವು ಅನುಮತಿಸಿದ್ದರಿಂದ, ನೀವು ಯಶಸ್ಸನ್ನು ಹೊಂದಿರುವಿರಿ. ನಿಮಗೆ ಮಾತಾಡಲು ದೊರೆಯುವ ಅವಕಾಶಗಳಲ್ಲಿ, ನಿಮ್ಮ ಮಾತಿನ ವೈಶಿಷ್ಟ್ಯವೇನಾಗಿರುವುದು? ಇತರರ ಆವಶ್ಯಕತೆಗಳ ಮೇಲೆ ನೀವು ನಿಮ್ಮ ಯೋಚನೆಗಳನ್ನು ಕೇಂದ್ರೀಕರಿಸುವಲ್ಲಿ, ಆಗ ನಿಮ್ಮ ಮಾತು ಹಿಡಿಸುವಂತಹದ್ದೂ ಸ್ವಾಭಾವಿಕವೂ ಆಗಿರುವುದು.

ನೀವು ಸಾಕ್ಷಿ ನೀಡುತ್ತಿರುವಾಗ, ನೀವು ಪ್ರತಿನಿತ್ಯ ಮಾಡುವಂತೆಯೇ ವರ್ತಿಸುವಲ್ಲಿ ಹಾಗೂ ಮಾತಾಡುವಲ್ಲಿ, ಅದು ನಿಮ್ಮ ಕೇಳುಗರನ್ನು ಹಾಯಾಗಿರಿಸುವುದು. ಆಗ ನೀವು ಅವರೊಡನೆ ಹಂಚಿಕೊಳ್ಳಲು ಅಪೇಕ್ಷಿಸುವ ಶಾಸ್ತ್ರೀಯ ವಿಚಾರಗಳನ್ನು ಕೇಳಿಸಿಕೊಳ್ಳಲು ಅವರು ಹೆಚ್ಚು ಮನಸ್ಸನ್ನೂ ಮಾಡಿಯಾರು. ಅವರಿಗೆ ಒಂದು ಔಪಚಾರಿಕ ಭಾಷಣವನ್ನು ಕೊಡುವ ಬದಲಿಗೆ, ಅವರೊಂದಿಗೆ ಸಂಭಾಷಣೆ ನಡೆಸಿರಿ. ಸ್ನೇಹಭಾವವನ್ನು ತೋರಿಸಿರಿ. ಅವರಲ್ಲಿ ಆಸಕ್ತಿ ವಹಿಸಿ, ಅವರ ಹೇಳಿಕೆಗಳನ್ನು ಸ್ವಾಗತಿಸಿರಿ. ಆದರೆ ಭಾಷೆಯೊ ಸ್ಥಳಿಕ ಸಂಸ್ಕೃತಿಯೊ, ಅಪರಿಚಿತರ ಮುಂದೆ ಮಾತನಾಡುವಾಗ ಗೌರವ ತೋರಿಸುವ ಯಾವುದೇ ನಿಯಮಾವಳಿಯನ್ನು ಇಟ್ಟಿರುವಲ್ಲಿ, ಅವುಗಳನ್ನು ನೀವು ಅನುಸರಿಸಲು ಬಯಸುವಿರಿ. ಆದರೆ ನೀವು ಯಾವಾಗಲೂ ಹಾಯಾದ ನಸುನಗೆಯೊಂದಿಗೆ ಸಿದ್ಧರಾಗಿರಸಾಧ್ಯವಿದೆ.

ವೇದಿಕೆಯ ಮೇಲೆ. ನೀವು ಜನರ ಒಂದು ಗುಂಪಿಗೆ ಮಾತಾಡುವಾಗ, ಸ್ವಾಭಾವಿಕವಾದ, ಸಂಭಾಷಣಾತ್ಮಕ ಭಾಷಣ ಶೈಲಿಯು ಸಾಮಾನ್ಯವಾಗಿ ಅತ್ಯುತ್ತಮ. ಹೌದು, ಸಭಿಕರ ಗುಂಪು ದೊಡ್ಡದಾಗಿರುವಾಗ, ನಿಮ್ಮ ಸ್ವರವು ದೂರದ ವರೆಗೆ ಕೇಳಿಸುವಂತೆ ಮಾಡುವ ಆವಶ್ಯಕತೆಯಿದೆ. ನೀವು ನಿಮ್ಮ ಭಾಷಣವನ್ನು ಬಾಯಿಪಾಠ ಮಾಡಲು ಪ್ರಯತ್ನಿಸುವುದಾದರೆ ಅಥವಾ ನಿಮ್ಮ ಟಿಪ್ಪಣಿಯು ತುಂಬ ವಿವರದಿಂದ ಕೂಡಿರುವುದಾದರೆ, ನೀವು ಪ್ರಾಯಶಃ ನಿಷ್ಕೃಷ್ಟವಾದ ಪದಗಳನ್ನು ಉಪಯೋಗಿಸುವುದರ ಕುರಿತು ತೀರ ಚಿಂತಿತರಾಗುವಿರಿ. ಸೂಕ್ತವಾದ ಪದಗಳು ಪ್ರಾಮುಖ್ಯವಾದರೂ, ಅವುಗಳಿಗೆ ತೀರ ಹೆಚ್ಚು ಗಮನ ಕೊಡುವಲ್ಲಿ, ಭಾಷಣವು ಗಡುಸಾದದ್ದೂ ಔಪಚಾರಿಕವೂ ಆಗಿರುವುದು. ಸ್ವಾಭಾವಿಕತೆ ಮಾತ್ರ ನಷ್ಟವಾಗುತ್ತದೆ. ನಿಮ್ಮ ವಿಚಾರಗಳ ಕುರಿತು ಮುಂದಾಗಿಯೇ ಜಾಗರೂಕತೆಯಿಂದ ಯೋಚಿಸಬೇಕು. ಆದರೆ ಹೆಚ್ಚಿನ ಗಮನವನ್ನು ವಿಚಾರಗಳಿಗೆ ಕೊಡಿರಿ, ನಿಷ್ಕೃಷ್ಟವಾದ ಪದಗಳಿಗಲ್ಲ.

ಕೂಟದಲ್ಲಿ ನಿಮ್ಮ ಇಂಟರ್‌ವ್ಯೂ ನಡೆಯುತ್ತಿರುವಾಗಲೂ ಇದು ಸತ್ಯವಾಗಿದೆ. ಚೆನ್ನಾಗಿ ತಯಾರಿಸಿರಿ, ಆದರೆ ನಿಮ್ಮ ಉತ್ತರಗಳನ್ನು ಓದಿ ಹೇಳಬೇಡಿ ಅಥವಾ ಬಾಯಿಪಾಠ ಮಾಡಿಕೊಳ್ಳಬೇಡಿ. ಸ್ವಾಭಾವಿಕವಾದ ಧ್ವನಿಯ ಏರಿಳಿತಗಳಿಂದ ಇದನ್ನು ಕೊಡಿರಿ. ಆಗ ನಿಮ್ಮ ಹೇಳಿಕೆಗಳಿಗೆ ಹಿತಕರವಾದ ಸಹಜತೆಯಿರುವುದು.

ಭಾಷಣದ ಅಪೇಕ್ಷಣೀಯ ಗುಣಗಳನ್ನು ವಿಪರೀತಕ್ಕೆ ಕೊಂಡೊಯ್ಯುವಲ್ಲಿ, ಅದು ಸಭಿಕರಿಗೆ ಅಸ್ವಾಭಾವಿಕವಾಗಿ ಕಂಡುಬರಬಹುದು. ಉದಾಹರಣೆಗೆ, ನೀವು ಸ್ಪಷ್ಟವಾಗಿ ಮತ್ತು ಸರಿಯಾದ ಉಚ್ಚಾರಣೆಯನ್ನು ಉಪಯೋಗಿಸಿ ಮಾತಾಡಬೇಕೆಂಬುದು ನಿಜವಾದರೂ, ನಿಮ್ಮ ಮಾತು ಗಡುಸಾಗಿಯೊ ಕೃತಕವಾಗಿಯೊ ಕೇಳಿಸುವಷ್ಟರ ಮಟ್ಟಿಗೆ ನೀವು ಹಾಗೆ ಮಾಡಬಾರದು. ಒತ್ತುನೀಡುವ ಅಥವಾ ವರ್ಣನಾತ್ಮಕ ಭಾವಾಭಿನಯಗಳು ಚೆನ್ನಾಗಿ ಉಪಯೋಗಿಸಲ್ಪಟ್ಟಾಗ ಅವು ಭಾಷಣಕ್ಕೆ ಸ್ಫೂರ್ತಿಯನ್ನು ಕೊಡಬಲ್ಲವಾದರೂ, ಗಡುಸಾದ ಅಥವಾ ಡಾಂಭಿಕ ಭಾವಾಭಿನಯಗಳು ನೀವು ಏನು ಹೇಳುತ್ತಿದ್ದೀರೋ ಆ ವಿಷಯದಿಂದ ಸಭಿಕರನ್ನು ಅಪಕರ್ಷಿಸಬಹುದು. ಧ್ವನಿಯ ಮಟ್ಟವನ್ನು ಸಾಕಷ್ಟು ವರ್ಧಿಸಿರಿ, ಆದರೆ ವಿಪರೀತ ಗಟ್ಟಿಯಾಗಿ ಮಾತಾಡಲು ಪ್ರಯತ್ನಿಸಬೇಡಿ. ನಿಮ್ಮ ಭಾಷಣಕ್ಕೆ ಆಗಾಗ ಹುಮ್ಮಸ್ಸನ್ನು ಕೂಡಿಸುವುದು ಒಳ್ಳೆಯದಾದರೂ, ನೀವು ವಾಗಾಡಂಬರದಿಂದ ಮಾತ್ರ ದೂರವಿರಬೇಕು. ಧ್ವನಿಯ ಏರಿಳಿತ, ಉತ್ಸಾಹ ಮತ್ತು ಭಾವಪೂರ್ಣತೆಗಳನ್ನು, ಇವು ನಿಮ್ಮ ಕಡೆಗೆ ಗಮನ ಸೆಳೆಯದಂತಹ ರೀತಿಯಲ್ಲಿ ಅಥವಾ ಸಭಿಕರನ್ನು ಮುಜುಗರಗೊಳಿಸದಂತಹ ರೀತಿಯಲ್ಲಿ ಉಪಯೋಗಿಸಬೇಕು.

ಕೆಲವರು ಭಾಷಣ ಕೊಡದಿರುವಾಗಲೂ ಸ್ವಾಭಾವಿಕವಾಗಿ ಒಂದು ನಿರ್ದಿಷ್ಟ ರೀತಿಯಲ್ಲಿ ಮಾತಾಡುತ್ತಾರೆ. ಬೇರೆಯವರು ತಮ್ಮ ಮಾತಿನಲ್ಲಿ ಹೆಚ್ಚಾಗಿ ಆಡುಭಾಷೆಯನ್ನು ಬಳಸುತ್ತಾರೆ. ಆದರೆ, ಪ್ರತಿದಿನ ಸರಿಯಾಗಿ ಮಾತನಾಡಿ, ನಿಮ್ಮ ಕ್ರೈಸ್ತ ಘನತೆಯನ್ನು ಕಾಪಾಡಿಕೊಳ್ಳುವುದೇ ಪ್ರಾಮುಖ್ಯವಾಗಿದೆ. ಆಗ, ನೀವು ವೇದಿಕೆಯ ಮೇಲಿರುವಾಗ, ಆಕರ್ಷಿಸುವಂಥ ಸ್ವಾಭಾವಿಕತೆಯಿಂದ ಸುಲಭವಾಗಿ ಮಾತನಾಡುವಿರಿ ಮತ್ತು ವರ್ತಿಸುವಿರಿ.

ಸಾರ್ವಜನಿಕವಾಗಿ ಓದುವಾಗ. ಸಾರ್ವಜನಿಕ ವಾಚನದಲ್ಲಿ ಸ್ವಾಭಾವಿಕವಾಗಿರಬೇಕಾದರೆ ಪ್ರಯತ್ನವು ಅಗತ್ಯ. ಇದನ್ನು ಸಾಧಿಸಲು, ನೀವು ಓದಲಿರುವ ಆ ವಿಷಯಭಾಗದಲ್ಲಿರುವ ಪ್ರಧಾನ ವಿಚಾರಗಳನ್ನು ಗುರುತಿಸಿ, ಅವುಗಳನ್ನು ಹೇಗೆ ವಿಕಸಿಸಲಾಗಿದೆಯೆಂಬುದನ್ನು ಅವಲೋಕಿಸಿರಿ. ಅವುಗಳನ್ನು ಚೆನ್ನಾಗಿ ಮನಸ್ಸಿನಲ್ಲಿಟ್ಟುಕೊಳ್ಳಿರಿ; ಇಲ್ಲದಿರುವಲ್ಲಿ, ನೀವು ಕೇವಲ ಪದಗಳನ್ನು ಓದುವಿರಿ ಅಷ್ಟೆ. ಅಪರಿಚಿತ ಪದಗಳ ಉಚ್ಚಾರಣೆಯನ್ನು ಪರೀಕ್ಷಿಸಿರಿ. ಸ್ವರದ ಸರಿಯಾದ ಏರಿಳಿತವನ್ನು ಪಡೆಯಲು ಮತ್ತು ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುವ ರೀತಿಯಲ್ಲಿ ಪದಗಳನ್ನು ಒಟ್ಟುಗೂಡಿಸಲು, ಗಟ್ಟಿಯಾಗಿ ಓದುವುದನ್ನು ಅಭ್ಯಾಸ ಮಾಡಿರಿ. ನಿಮ್ಮ ವಾಚನವು ಸರಾಗವಾಗಿ ಹರಿಯುವ ತನಕ ಪುನಃ ಪುನಃ ಓದಿರಿ. ನಿಮ್ಮ ಭಾಗದ ಒಳ್ಳೆಯ ಪರಿಚಯವನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ನೀವು ಗಟ್ಟಿಯಾಗಿ ಓದುವಾಗ, ನಿಮ್ಮ ವಾಚನವು ತುಂಬ ಹುರುಪಿನ ಸಂಭಾಷಣೆಯಂತೆ ಕೇಳಿಬರುವುದು. ಇದೇ ಸ್ವಾಭಾವಿಕತೆಯಾಗಿದೆ.

ನಮ್ಮ ಸಾರ್ವಜನಿಕ ವಾಚನದಲ್ಲಿ ಹೆಚ್ಚಿನದ್ದು ನಮ್ಮ ಬೈಬಲಾಧಾರಿತ ಪ್ರಕಾಶನಗಳಿಂದಾಗಿದೆ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನಮಗೆ ದೊರೆಯುವ ಓದುವ ನೇಮಕಗಳಲ್ಲದೆ, ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಮತ್ತು ವೇದಿಕೆಯಿಂದ ಭಾಷಣ ಕೊಡುವಾಗ ಶಾಸ್ತ್ರವಚನಗಳನ್ನು ಓದುತ್ತೇವೆ. ಕಾವಲಿನಬುರುಜು ಅಧ್ಯಯನದಲ್ಲಿ ಮತ್ತು ಸಭಾ ಪುಸ್ತಕ ಅಧ್ಯಯನದಲ್ಲಿ ಚರ್ಚಿಸಲಾಗುವ ಭಾಗಗಳನ್ನು ಓದುವಂತೆ ಸಹೋದರರನ್ನು ನೇಮಿಸಲಾಗುತ್ತದೆ. ಕೆಲವು ಅರ್ಹ ಸಹೋದರರು ಅಧಿವೇಶನದಲ್ಲಿ ಸಭಿಕರ ಮುಂದೆ ಹಸ್ತಪ್ರತಿಗಳನ್ನು ಓದುವ ನೇಮಕಗಳನ್ನು ಪಡೆಯುತ್ತಾರೆ. ನೀವು ಬೈಬಲನ್ನೇ ಓದುತ್ತಿರಲಿ, ಇಲ್ಲವೆ ಬೇರೆ ಯಾವುದೇ ವಿಷಯವನ್ನು ಓದುತ್ತಿರಲಿ, ಉದ್ಧರಿತ ಹೇಳಿಕೆಗಳನ್ನು ಸ್ವಾರಸ್ಯಕರವಾಗಿ ಕೇಳಿಸುವಂಥ ರೀತಿಯಲ್ಲಿ ಓದಿರಿ. ಅನೇಕ ವ್ಯಕ್ತಿಗಳ ಉದ್ಧರಣೆಗಳಿರುವುದಾದರೆ, ಪ್ರತಿಯೊಬ್ಬನ ಭಾಗವನ್ನು ತುಸು ಬದಲಾಯಿಸಿದ ಸ್ವರದಿಂದ ಓದಿರಿ. ಒಂದು ಎಚ್ಚರಿಕೆಯ ಮಾತು: ವಿಪರೀತ ನಾಟಕೀಯವಾಗಿ ಓದದೆ, ಸ್ವಾಭಾವಿಕ ರೀತಿಯಲ್ಲಿ ನಿಮ್ಮ ವಾಚನವನ್ನು ಜೀವಂತಗೊಳಿಸಲು ಪ್ರಯತ್ನಿಸಿರಿ.

ಸ್ವಾಭಾವಿಕವಾದ ವಾಚನವು ಸಂಭಾಷಣಾತ್ಮಕವಾಗಿರುತ್ತದೆ. ಅದು ಕೃತಕವಾಗಿ ಕೇಳಿಬರದೆ, ನಿಶ್ಚಿತಾಭಿಪ್ರಾಯವುಳ್ಳದ್ದಾಗಿರುತ್ತದೆ.

ಇದನ್ನು ಮಾಡುವ ವಿಧ

  • ನೀವು ದಿನಾಲೂ ಹೇಗೆ ಮಾತಾಡುತ್ತೀರೋ ಅದೇ ರೀತಿ ಮಾತಾಡಿರಿ. ನಿಮ್ಮ ಮನಸ್ಸನ್ನು ನಿಮ್ಮ ಮೇಲಲ್ಲ, ಬದಲಾಗಿ ಯೆಹೋವನ ಮೇಲೆ ಮತ್ತು ಜನರು ಆತನ ಕುರಿತು ಕಲಿಯುವ ಆವಶ್ಯಕತೆಯ ಮೇಲೆ ಕೇಂದ್ರೀಕರಿಸಿರಿ.

  • ಭಾಷಣವನ್ನು ತಯಾರಿಸುವಾಗ, ಪ್ರಧಾನ ಗಮನವನ್ನು ನಿಷ್ಕೃಷ್ಟವಾದ ಪದಗಳಿಗಲ್ಲ, ವಿಚಾರಗಳಿಗೆ ನೀಡಿರಿ.

  • ಭಾಷಣ ಕೊಡುವಾಗ ಮತ್ತು ದಿನನಿತ್ಯದ ಸಂಭಾಷಣೆಯಲ್ಲಿ, ಅಲಕ್ಷ್ಯದಿಂದ ಮಾತಾಡುವ ಅಭ್ಯಾಸಗಳಿಂದ ಹಾಗೂ ಸ್ವತಃ ನಿಮ್ಮ ಕಡೆಗೆ ಗಮನ ಸೆಳೆಯುವಂಥ ರೀತಿಯಲ್ಲಿ ಭಾಷಣದ ಗುಣಗಳನ್ನು ಉಪಯೋಗಿಸುವ ಪ್ರವೃತ್ತಿಯಿಂದ ದೂರವಿರಿ.

  • ಸಾರ್ವಜನಿಕ ವಾಚನಕ್ಕಾಗಿ ಚೆನ್ನಾಗಿ ತಯಾರಿಸಿರಿ. ಭಾವಪೂರ್ಣತೆಯಿಂದ ಮತ್ತು ಅರ್ಥದ ತೀಕ್ಷ್ಣ ಪ್ರಜ್ಞೆಯುಳ್ಳವರಾಗಿ ಓದಿರಿ.

ಅಭ್ಯಾಸಪಾಠಗಳು: (1) ಮಲಾಕಿಯ 1:2-14 ನ್ನು ಮೌನವಾಗಿ ಓದಿರಿ. ಮತ್ತು ಅಲ್ಲಿ ಮಾತನಾಡುತ್ತಿರುವವರನ್ನು ಗಮನದಲ್ಲಿಡಿರಿ. ಈಗ ಗಟ್ಟಿಯಾಗಿ ತಕ್ಕ ಭಾವವನ್ನು ವ್ಯಕ್ತಪಡಿಸುತ್ತಾ ಓದಿರಿ. (2) ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವುದಕ್ಕೆ ಮೊದಲು ಮೂರು ಬೇರೆ ಬೇರೆ ಸಂದರ್ಭಗಳಲ್ಲಿ, ಈ ಪಾಠದ ಮೊದಲ ಎರಡು ಪ್ಯಾರಗ್ರಾಫ್‌ಗಳನ್ನು ಹಾಗೂ 128ನೆಯ ಪುಟದಲ್ಲಿ “ಕ್ಷೇತ್ರ ಶುಶ್ರೂಷೆಯಲ್ಲಿ” ಎಂಬ ಉಪಶಿರೋನಾಮದ ಕೆಳಗೆ ಕೊಡಲ್ಪಟ್ಟಿರುವ ಭಾಗವನ್ನು ಓದಿರಿ. ಆ ಸಲಹೆಯನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ