ನಾನು ಸಾಕಷ್ಟು ಸೇವೆಮಾಡುತ್ತಿಲ್ಲ!
1. ನಂಬಿಗಸ್ತ ಕ್ರೈಸ್ತರನ್ನು ಯಾವ ಚಿಂತೆ ಕಾಡುತ್ತಿರಬಹುದು?
1 ನಿಮಗೆ ಯಾವತ್ತಾದರೂ ಹೀಗೆ ಅನಿಸಿದೆಯೋ? ವೃದ್ಧಾಪ್ಯ, ಆರೋಗ್ಯ ಸಮಸ್ಯೆ, ಕುಟುಂಬ ಜವಾಬ್ದಾರಿಗಳ ಕಾರಣ ನೀವು ಈ ಮುಂಚೆ ಮಾಡುತ್ತಿದ್ದಷ್ಟು ಸೇವೆಮಾಡಲು ಕಷ್ಟವಾಗುತ್ತಿರಬಹುದು. ಇದರಿಂದ ನೀವು ತುಂಬ ನೊಂದುಕೊಳ್ಳುತ್ತಿರಬಹುದು. ಒಬ್ಬ ಸಹೋದರಿಗೆ ಮೂವರು ಮಕ್ಕಳಿದ್ದು, ಆಕೆಯ ಸಮಯ ಶಕ್ತಿಯೆಲ್ಲಾ ಕುಟುಂಬವನ್ನು ನೋಡಿಕೊಳ್ಳುವುದರಲ್ಲೇ ವ್ಯಯವಾಗುತ್ತಿತ್ತು. ಆಕೆಗೆ ಹೆಚ್ಚು ಸೇವೆ ಮಾಡಲಾಗುತ್ತಿರಲಿಲ್ಲ. ಇದರಿಂದ ಅವಳ ಮನಸ್ಸಾಕ್ಷಿ ಚುಚ್ಚುತ್ತಿತ್ತು. ನಿಮಗೂ ಈ ರೀತಿ ಅನಿಸುತ್ತಿರುವಲ್ಲಿ ಸಮತೂಕದ ನೋಟವನ್ನು ಹೇಗಿಡಬಲ್ಲಿರಿ?
2. ಯೆಹೋವನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ?
2 ಯೆಹೋವನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ? ಹೆಚ್ಚು ಸೇವೆಮಾಡಬೇಕೆಂದು ನಾವೆಲ್ಲರೂ ಬಯಸುತ್ತೇವೆ ನಿಜ. ಆದರೆ ನಾವು ನೆನಸಿದಷ್ಟನ್ನು ಮಾಡಲಿಕ್ಕಾಗದೇ ಇರಬಹುದು. ನಾವು ಇನ್ನೂ ಹೆಚ್ಚನ್ನು ಮಾಡಬೇಕೆಂಬ ಬಯಕೆ ತಾನೇ ಸೇವೆಯ ಬಗ್ಗೆ ನಮಗೆ ಉದಾಸೀನತೆ ಇಲ್ಲ ಎಂಬದನ್ನು ತೋರಿಸುತ್ತದೆ. ಯೆಹೋವನಿಗೆ ನಮ್ಮ ಇತಿಮಿತಿಗಳು ತಿಳಿದಿವೆ ಮತ್ತು ನಮ್ಮಿಂದ ಮಾಡಲು ಅಸಾಧ್ಯವಾದದ್ದನ್ನು ಆತನು ನಿರೀಕ್ಷಿಸುವುದಿಲ್ಲ ಎಂಬದನ್ನು ನಾವೆಂದೂ ಮರೆಯಬಾರದು. (ಕೀರ್ತ. 103:13, 14) ಹಾಗಾದರೆ ಆತನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ? ನಮ್ಮ ಪೂರ್ಣ ಪ್ರಾಣದ ಸೇವೆಯನ್ನು ಅಂದರೆ ನಮಗೆ ಸಾಧ್ಯವಿರುವುದರಲ್ಲೇ ಅತ್ಯುತ್ತಮವಾದದ್ದನ್ನು ಕೊಡಬೇಕೆಂದೇ.—ಕೊಲೊ. 3:23.
3. ನಾವು ಶುಶ್ರೂಷೆಯಲ್ಲಿ ಎಷ್ಟನ್ನು ಮಾಡಬಹುದೆಂದು ಪರಿಶೀಲಿಸುವುದು ಹೇಗೆ?
3 ನಾವೆಷ್ಟನ್ನು ಮಾಡಬಹುದೆಂದು ನಿರ್ಧರಿಸಲು ಯಾವುದು ಸಹಾಯಮಾಡಬಲ್ಲದು? ಇದಕ್ಕಾಗಿ ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯೆಹೋವನ ಸಹಾಯ ಕೇಳಬೇಕು. (ಕೀರ್ತ. 26:2) ನಮ್ಮನ್ನು ಚೆನ್ನಾಗಿ ತಿಳಿದಿರುವ ಮತ್ತು ನಾವೆಲ್ಲಿ ಅಭಿವೃದ್ಧಿ ಮಾಡಬೇಕೆಂದು ಹೇಳಲು ಹಿಂಜರಿಯದ ಭರವಸಾರ್ಹ, ಪ್ರೌಢ ಕ್ರೈಸ್ತರೊಬ್ಬರ ಸಹಾಯವನ್ನೂ ಕೇಳಬಹುದು. (ಜ್ಞಾನೋ. 27:9) ನಮ್ಮ ಪರಿಸ್ಥಿತಿ ಬದಲಾಗುತ್ತಾ ಇರುವ ಕಾರಣ ಆಗಾಗ್ಗೆ ಅದರ ಪರಿಶೀಲನೆ ಮಾಡಿಕೊಳ್ಳುವುದು ಒಳ್ಳೇದೆಂಬದನ್ನು ನೆನಪಿನಲ್ಲಿಡಿ.—ಎಫೆ. 5:10.
4. ಕ್ರೈಸ್ತ ಶುಶ್ರೂಷೆಯ ಕುರಿತ ಬೈಬಲಾಧಾರಿತ ಮರುಜ್ಞಾಪನಗಳೆಡೆಗೆ ನಮ್ಮ ನೋಟವೇನಾಗಿರಬೇಕು?
4 ಮರುಜ್ಞಾಪನಗಳ ಕುರಿತ ನಿಮ್ಮ ನೋಟ: ಓಟದ ಸ್ಪರ್ಧೆ ನಡೆಯುತ್ತಿರುವಾಗ ಅಭಿಮಾನಿಗಳು ಹುರಿದುಂಬಿಸುತ್ತಿರುತ್ತಾರೆ. ಇವರ ಉದ್ದೇಶ ಓಟಗಾರರು ತಮ್ಮ ಗುರಿಸಾಧಿಸಲು ಸಹಾಯಮಾಡುವುದೇ ಹೊರತು ಧೃತಿಗೆಡಿಸುವುದಲ್ಲ. ಹಾಗೆಯೇ ‘ದೇವರ ವಾಕ್ಯವನ್ನು ತುರ್ತಿನಿಂದ ಸಾರಲಿಕ್ಕಾಗಿ’ ಕೂಟಗಳಲ್ಲಿ ಮತ್ತು ಪ್ರಕಾಶನಗಳಲ್ಲಿ ಕೊಡಲಾಗುವ ಬೈಬಲಾಧಾರಿತ ಪ್ರೋತ್ಸಾಹ ಮತ್ತು ಮರುಜ್ಞಾಪನಗಳು ನಮ್ಮ ಪ್ರಯೋಜನಕ್ಕಾಗಿವೆಯೇ ಹೊರತು ನಾವು ಮಾಡುತ್ತಿರುವ ಸೇವೆ ಸಾಲದು ಎಂದು ತಿಳಿಸುವುದಕ್ಕಲ್ಲ. (2 ತಿಮೊ. 4:2) ನಾವು ಎಲ್ಲಿಯ ತನಕ ನಮ್ಮಿಂದಾದ ಅತ್ಯುತ್ತಮ ಪ್ರಯತ್ನ ಮಾಡುತ್ತೇವೋ ಅಲ್ಲಿಯ ತನಕ ಯೆಹೋವನು ನಮ್ಮ ‘ಪ್ರೀತಿಯನ್ನೂ ಕೆಲಸವನ್ನೂ’ ಮರೆಯದೆ ಪ್ರತಿಫಲ ಕೊಡುವನೆಂಬ ಭರವಸೆ ನಮಗಿರಬಲ್ಲದು.—ಇಬ್ರಿ. 6:10.