ನಿಮ್ಮ ಬಲವೇ ನಿಮ್ಮ ಬಲಹೀನತೆಯಾಗದಿರಲಿ
ಒಡಲಲ್ಲಿ ನೀರುತಡೆಯ 16 ಅರೆಗಳಿದ್ದ, ಸುಖವಿಲಾಸಗಳ ಪ್ರಯಾಣಿಕ ಹಡಗಾದ ಟೈಟ್ಯಾನಿಕ್, ಎಂದಿಗೂ ಮುಳುಗಲಾರದ ಹಡಗೆಂದು ಪರಿಗಣಿಸಲ್ಪಟ್ಟಿತ್ತು. ಅದು ತನ್ನ ಪ್ರಥಮ ಪ್ರಯಾಣವನ್ನು 1912ರಲ್ಲಿ ಆರಂಭಿಸಿದಾಗ, ಅದರಲ್ಲಿರಬೇಕಾಗಿದ್ದ ರಕ್ಷಾನೌಕೆ (ಲೈಫ್ಬೋಟ್)ಗಳ ಒಟ್ಟು ಸಂಖ್ಯೆಯ ಅರ್ಧದಷ್ಟನ್ನು ಮಾತ್ರ ಅದು ಕೊಂಡೊಯ್ದಿತ್ತು. ಆ ಹಡಗು ಒಂದು ದೊಡ್ಡ ನೀರ್ಗಲ್ಲ ಬಂಡೆಯನ್ನು ಬಲವಾಗಿ ತಾಕಿ, ಮುಳುಗಿಹೋಯಿತು. ಮತ್ತು ಅದು ತನ್ನ ಜೊತೆಗೆ 1,500 ಜೀವಗಳನ್ನು ಸಹ ಜಲಸಮಾಧಿ ಮಾಡಿಬಿಟ್ಟಿತು.
ಪುರಾತನ ಯೆರೂಸಲೇಮಿನ ದೇವಭಯವುಳ್ಳ ಅರಸನಾದ ಉಜ್ಜೀಯನು, ಒಬ್ಬ ಬುದ್ಧಿವಂತ ಮಿಲಿಟರಿ ಸೇನಾಪತಿಯಾಗಿದ್ದನು. ಯೆಹೋವನ ಸಹಾಯದಿಂದ, ಅವನು ತನ್ನ ವೈರಿಗಳನ್ನು ಒಬ್ಬರ ನಂತರ ಒಬ್ಬರನ್ನಾಗಿ ಸೋಲಿಸಿದನು. “[ಉಜ್ಜೀಯನು] ಬಲಿಷ್ಠನಾಗುವ ವರೆಗೂ ದೇವರ ಆಶ್ಚರ್ಯವಾದ ಸಹಾಯವನ್ನು ಹೊಂದಿದನು; ಅವನ ಕೀರ್ತಿಯು ದೂರದ ವರೆಗೆ ಹಬ್ಬಿತು.” ಆದರೆ ಅನಂತರ ಅವನು “ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ” ನಡೆದುಕೊಂಡನು. ಉಜ್ಜೀಯನ ಗರ್ವದ ಕಾರಣ, ಅವನಿಗೆ ಕುಷ್ಠರೋಗವು ತಗಲಿತು.—2 ಪೂರ್ವಕಾಲವೃತ್ತಾಂತ 26:15-21; ಜ್ಞಾನೋಕ್ತಿ 16:18.
ವಿವೇಕ, ಮಿತಭಾವ, ಮತ್ತು ದೀನತೆಯೆಂಬ ಗುಣಗಳೊಂದಿಗೆ ಸಾಮರ್ಥ್ಯಗಳನ್ನು ಸರಿದೂಗಿಸದಿದ್ದಲ್ಲಿ, ಅವು ಸುಲಭವಾಗಿ ಬಲಹೀನತೆಗಳಾಗಿ ಇಲ್ಲವೆ ಹೊರೆಗಳಾಗಿ ಪರಿಣಮಿಸಬಲ್ಲವು ಎಂಬುದನ್ನು ಈ ಎರಡು ವೃತ್ತಾಂತಗಳು ನಮಗೆ ಕಲಿಸುತ್ತವೆ. ಇದು ಗಂಭೀರವಾದ ವಿಷಯವಾಗಿದೆ, ಏಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ನಿರ್ದಿಷ್ಟವಾದ ಸಾಮರ್ಥ್ಯಗಳು ಇಲ್ಲವೆ ಕೌಶಲಗಳಿವೆ. ಅವುಗಳು ಒಂದು ಅಮೂಲ್ಯವಾದ ಸ್ವತ್ತಾಗಿರುವಂತೆ ಮತ್ತು ನಮಗೂ ಇತರರಿಗೂ, ವಿಶೇಷವಾಗಿ ನಮ್ಮ ಸೃಷ್ಟಿಕರ್ತನಿಗೆ ಆನಂದದ ಮೂಲವಾಗಿರುವಂತೆ ನಾವು ಬಯಸುತ್ತೇವೆ. ನಿಜ, ದೇವರು ನಮಗೆ ನೀಡಿರುವಂತಹ ಯಾವುದೇ ಕೌಶಲವನ್ನು ನಾವು ಪೂರ್ಣವಾಗಿ ಉಪಯೋಗಿಸಬೇಕು, ಆದರೆ ಅದೇ ಸಮಯದಲ್ಲಿ ಅದೊಂದು ಅಮೂಲ್ಯವಾದ ಆಸ್ತಿಯಾಗಿಯೇ ಉಳಿಯುವಂತೆ ಅದನ್ನು ನಿಯಂತ್ರಿಸುವ ಅಗತ್ಯವೂ ಇದೆ.
ಉದಾಹರಣೆಗೆ, ತನ್ನ ಕೆಲಸವನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಯೊಬ್ಬನು, ಕಾರ್ಯವ್ಯಸನಿಯಾಗುವ ಮೂಲಕ ಈ ಕೌಶಲವನ್ನು ಒಂದು ಬಲಹೀನತೆಯಾಗಿ ಬದಲಾಯಿಸಬಲ್ಲನು. ಮುಂಜಾಗ್ರತೆಯುಳ್ಳ ಒಬ್ಬ ವ್ಯಕ್ತಿಯನ್ನು ಸುಲಭವಾಗಿ ವಂಚಿಸಲು ಸಾಧ್ಯವಿಲ್ಲದಿರಬಹುದು, ಆದರೆ ಇಂತಹ ವ್ಯಕ್ತಿಯು ಎಂದಿಗೂ ನಿರ್ಣಯಗಳನ್ನೇ ಮಾಡದೆ ಹೋಗಬಹುದು. ದಕ್ಷತೆಯು ಕೂಡ ಒಂದು ಅತ್ಯುತ್ತಮ ಗುಣವಾಗಿದೆ, ಆದರೆ ಮಾನವ ಸ್ವಭಾವವನ್ನು ಕಡೆಗಣಿಸುವ ವೈಪರೀತ್ಯಕ್ಕೆ ಹೋಗುವಾಗ, ಅದರ ಫಲಿತಾಂಶವು ಅಸಂತೋಷವನ್ನು ಉಂಟುಮಾಡುವ, ಭಾವಶೂನ್ಯವೂ ಅನಮ್ಯವೂ ಆದ ವಾತಾವರಣವಾಗಿರಬಹುದು. ಆದುದರಿಂದ ನಿಮಲ್ಲಿರುವ ಸಾಮರ್ಥ್ಯಗಳ ಕುರಿತು ಸ್ವಲ್ಪ ಯೋಚಿಸಿರಿ. ನೀವು ಅವುಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದೀರೊ? ಅವು ಇತರರಿಗೆ ಒಂದು ಆಶೀರ್ವಾದವಾಗಿ ಪರಿಣಮಿಸಿವೆಯೊ? ಎಲ್ಲಕ್ಕಿಂತಲೂ ಹೆಚ್ಚಾಗಿ, ನೀವು ಅವುಗಳನ್ನು “ಎಲ್ಲಾ ಒಳ್ಳೇ ದಾನಗಳ” ಮೂಲನಾಗಿರುವ ಯೆಹೋವನಿಗೆ ಘನತೆಯನ್ನು ತರಲು ಉಪಯೋಗಿಸುತ್ತಿದ್ದೀರೊ? (ಯಾಕೋಬ 1:17) ಆ ಉದ್ದೇಶದಿಂದ, ನಾವು ಇಂತಹ ಸಾಮರ್ಥ್ಯಗಳಲ್ಲಿ ಕೆಲವನ್ನು ನಿಕಟವಾಗಿ ಪರಿಗಣಿಸಲು ಸಮಯವನ್ನು ತೆಗೆದುಕೊಂಡು, ಅವುಗಳನ್ನು ನಿಯಂತ್ರಿಸದೆ ಬಿಡುವಲ್ಲಿ, ಅವು ಹೇಗೆ ಬಲಹೀನತೆಗಳಾಗಿ ಇಲ್ಲವೆ ಹೊರೆಗಳಾಗಿ ವಿಕಸಿಸಬಲ್ಲವು ಎಂಬುದನ್ನು ನೋಡೋಣ.
ಮಾನಸಿಕ ಸಾಮರ್ಥ್ಯಗಳನ್ನು ವಿವೇಕಪ್ರದವಾಗಿ ಉಪಯೋಗಿಸಿರಿ
ಬುದ್ಧಿವಂತರಾಗಿರುವುದು ನಿಜವಾಗಿಯೂ ಒಂದು ಅತ್ಯಮೂಲ್ಯ ಆಸ್ತಿಯಂತಿದೆ. ಆದರೂ, ಅದು ಅತಿಯಾದ ಆತ್ಮವಿಶ್ವಾಸಕ್ಕೆ ನಡೆಸಿದರೆ, ಇಲ್ಲವೆ ಇತರರು ನಮ್ಮನ್ನು ಬಹಳವಾಗಿ ಪ್ರಶಂಸಿಸುವಾಗ ಅಥವಾ ಮಿತಿಮೀರಿ ಹೊಗಳುವಾಗ ನಮ್ಮ ಕುರಿತೇ ನಾವು ಅತಿಶಯವಾದ ಅಭಿಪ್ರಾಯವನ್ನು ಬೆಳೆಸಿಕೊಳ್ಳುವಂತೆ ಇದು ಮಾಡಿದರೆ, ಅದು ಒಂದು ಬಲಹೀನತೆಯಾಗಿ ಪರಿಣಮಿಸಬಲ್ಲದು. ಅಥವಾ ನಾವು ದೇವರ ವಾಕ್ಯದ ಮತ್ತು ಬೈಬಲ್ ಆಧಾರಿತ ಪ್ರಕಾಶನಗಳ ವಿಷಯದಲ್ಲಿ ಬೌದ್ಧಿಕ ನೋಟವನ್ನು ಬೆಳೆಸಿಕೊಳ್ಳುವಂತೆ ಅದು ಮಾಡಬಹುದು.
ಅತಿಯಾದ ಆತ್ಮವಿಶ್ವಾಸವು ಬೇರೆ ವಿಧಗಳಲ್ಲೂ ಕಾಣಿಸಿಕೊಳ್ಳಬಹುದು. ಉದಾಹರಣೆಗೆ, ಬುದ್ಧಿವಂತನೊಬ್ಬನಿಗೆ ಕ್ರೈಸ್ತ ಸಭೆಯಲ್ಲಿ ಭಾಷಣಕೊಡುವ—ಅದು ಬಹಿರಂಗ ಭಾಷಣ ಇಲ್ಲವೆ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನೀಡಲ್ಪಡುವ ಒಂದು ಭಾಷಣವಾಗಿರಬಹುದು—ನೇಮಕವೊಂದು ಸಿಗುವುದಾದರೆ, ಅದನ್ನು ಅವನು ಕೊನೆಯ ಗಳಿಗೆಯ ವರೆಗೂ ತಯಾರಿಸದೆ ಇರಬಹುದು, ಅಥವಾ ಯೆಹೋವನ ಆಶೀರ್ವಾದಕ್ಕಾಗಿ ಪ್ರಾರ್ಥಿಸದೆ ಕೂಡ ಇರಬಹುದು. ಅವನು ತನ್ನ ಜ್ಞಾನಭಂಡಾರದ ಮೇಲೆ ಮತ್ತು ಪೂರ್ವ ಸಿದ್ಧತೆಯಿಲ್ಲದೆ ತತ್ಕ್ಷಣ ಯೋಚಿಸಿ ಮಾತಾಡುವ ತನ್ನ ಸಾಮರ್ಥ್ಯದ ಮೇಲೆ ಬಹಳ ಭರವಸವಿಡಬಹುದು. ಅವನ ಸ್ವಾಭಾವಿಕ ಸಾಮರ್ಥ್ಯವು ಅವನಿಗಿರುವ ಈ ಅಸಡ್ಡೆಯ ಮನೋಭಾವವನ್ನು ಒಂದಿಷ್ಟು ಕಾಲ ಮರೆಮಾಚಬಹುದಾದರೂ, ಯೆಹೋವನ ಸಂಪೂರ್ಣ ಸಹಾಯವಿಲ್ಲದೆ ಅವನ ಆತ್ಮಿಕ ಪ್ರಗತಿಯು ನಿಧಾನಗೊಂಡು ನಿಂತುಹೋಗಬಹುದು. ಒಂದು ಅತ್ಯುತ್ತಮ ಕೌಶಲದ ಎಂತಹ ದುರುಪಯೋಗ!—ಜ್ಞಾನೋಕ್ತಿ 3:5, 6; ಯಾಕೋಬ 3:1.
ತೀಕ್ಷ್ಣ ಬುದ್ಧಿಮತ್ತೆಯ ಒಬ್ಬನು, ಬೈಬಲಿನ ಬಗ್ಗೆ ಹಾಗೂ ಬೈಬಲ್ ಸಾಹಿತ್ಯಗಳ ಬಗ್ಗೆ ಬೌದ್ಧಿಕ ನೋಟವನ್ನು ಸಹ ಬೆಳೆಸಿಕೊಳ್ಳಬಹುದು. ಆದರೆ ಇಂತಹ ಜ್ಞಾನವು “ಉಬ್ಬಿಸುತ್ತದೆ” ಅಥವಾ ಅಹಂ ಅನ್ನು ಬಲೂನಿನ ಹಾಗೆ ಉಬ್ಬುವಂತೆ ಮಾಡುತ್ತದೆ; ಅದು ಪ್ರೀತಿಪರ ಕ್ರೈಸ್ತ ಸಂಬಂಧಗಳನ್ನು ‘ಬೆಳೆಸುವುದಿಲ್ಲ.’ (1 ಕೊರಿಂಥ 8:1, NW; ಗಲಾತ್ಯ 5:26) ಆದರೆ ಮತ್ತೊಂದು ಕಡೆಯಲ್ಲಿ, ಆತ್ಮಿಕ ಪುರುಷನು ತನಗೆ ಯಾವುದೇ ಮಾನಸಿಕ ಸಾಮರ್ಥ್ಯಗಳಿರಲಿ, ಯಾವಾಗಲೂ ಪ್ರಾರ್ಥಿಸುತ್ತಾನೆ ಮತ್ತು ದೇವರಾತ್ಮದಲ್ಲಿ ಭರವಸೆಯಿಡುತ್ತಾನೆ. ಅವನು ಸಮಪ್ರಮಾಣದಲ್ಲಿ ಪ್ರೀತಿ, ದೀನತೆ, ಜ್ಞಾನ, ಮತ್ತು ವಿವೇಕದಲ್ಲಿ ಅಭಿವೃದ್ಧಿ ಹೊಂದುತ್ತಾ ಹೋದಂತೆ, ಅವನ ಸಾಮರ್ಥ್ಯವು ಅತ್ಯಮೂಲ್ಯವಾದ ಆಸ್ತಿಯಾಗಿ ಪರಿಣಮಿಸುತ್ತದೆ.—ಕೊಲೊಸ್ಸೆ 1:9, 10.
ನಮ್ಮಲ್ಲಿರುವ ಸಾಮರ್ಥ್ಯದ ಕಾರಣ ನಾವು ವಿನಯಶೀಲರಾಗಿರದೆ, ನಮ್ಮ ಬಗ್ಗೆ ಅತಿಶಯವಾದ ನೋಟವನ್ನು ಬೆಳೆಸಿಕೊಂಡಾಗಲೂ ಅದು ಒಂದು ಬಲಹೀನತೆಯಾಗಿ ಪರಿಣಮಿಸಸಾಧ್ಯವಿದೆ. ಜನರು ಎಷ್ಟೇ ಪ್ರತಿಭಾಶಾಲಿಗಳಾಗಿದ್ದರೂ, ಯೆಹೋವನು “ಜ್ಞಾನಿಗಳೆಂದು ಎಣಿಸಿಕೊಳ್ಳುವವರನ್ನು . . . ಲಕ್ಷಿಸುವದೇ ಇಲ್ಲ” ಎಂಬುದನ್ನು ಒಬ್ಬ ಪ್ರತಿಭಾಶಾಲಿ ವ್ಯಕ್ತಿ ಮತ್ತು ಅವನನ್ನು ಬಹಳವಾಗಿ ಕೊಂಡಾಡುವವರು ಮರೆತುಬಿಡಬಹುದು. (ಯೋಬ 37:24) “ದೀನರಲ್ಲಿ ಜ್ಞಾನ”ವಿದೆ ಎಂಬುದಾಗಿ ದೇವರ ವಾಕ್ಯವು ಹೇಳುತ್ತದೆ. (ಜ್ಞಾನೋಕ್ತಿ 11:2) ಬಹಳಷ್ಟು ಬುದ್ಧಿವಂತನೂ ಸುಶಿಕ್ಷಿತನೂ ಆಗಿದ್ದ ಅಪೊಸ್ತಲ ಪೌಲನು, ಕೊರಿಂಥದವರಿಗೆ ಹೀಗೆ ಬರೆದು ತಿಳಿಸಿದನು: “ಸಹೋದರರೇ, ನಾನಂತೂ . . . ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ ಜ್ಞಾನಾಡಂಬರದಿಂದಾಗಲಿ ಬರಲಿಲ್ಲ. . . . ಇದಲ್ಲದೆ ನಾನು ನಿಮ್ಮಲ್ಲಿಗೆ ಬಂದಾಗ ನಿಮ್ಮ ಬಳಿಯಲ್ಲಿ ಬಲಹೀನನೂ ಭಯಪಡುವವನೂ ಬಹು ನಡುಗುವವನೂ ಆಗಿದ್ದೆನು. ನಿಮ್ಮ ನಂಬಿಕೆಯು ಮಾನುಷಜ್ಞಾನವನ್ನು ಆಧಾರಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಂಡಿರಬೇಕೆಂದು ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೆ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.”—1 ಕೊರಿಂಥ 2:1-5.
ನಿಜವಾಗಿಯೂ ಬುದ್ಧಿವಂತನಾಗಿರುವ ವ್ಯಕ್ತಿಯು, ಬುದ್ಧಿಶಕ್ತಿಯ ಬಗ್ಗೆ ಲೋಕಕ್ಕಿರುವ ನೋಟದಿಂದಾಗಲಿ ಅಥವಾ ಯಶಸ್ಸಿನ ಬಗ್ಗೆ ಅದು ನೀಡುವ ಅರ್ಥವಿವರಣೆಯಿಂದಾಗಲಿ ಮೋಸಹೋಗುವುದಿಲ್ಲ. ಅವನು ಮನುಷ್ಯರ ಮೆಚ್ಚುಗೆಯನ್ನಾಗಲಿ ಇಲ್ಲವೆ ಲೌಕಿಕ ಸಂಪತ್ತನ್ನು ಶೇಖರಿಸಲಿಕ್ಕಾಗಲಿ ತನ್ನ ಕೌಶಲಗಳನ್ನು ಉಪಯೋಗಿಸದೆ, ತನಗೆ ಜೀವವನ್ನೂ ಸಾಮರ್ಥ್ಯಗಳನ್ನೂ ದಯಪಾಲಿಸಿದಾತನಿಗೆ ಅತ್ಯುತ್ತಮವಾದುದನ್ನು ಕೊಡುತ್ತಾನೆ. (1 ಯೋಹಾನ 2:15-17) ಆ ಗುರಿಯುಳ್ಳವನಾಗಿ, ಅವನು ತನ್ನ ಜೀವಿತದಲ್ಲಿ ರಾಜ್ಯದ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡುತ್ತಾನೆ, ಮತ್ತು ಫಲಸ್ವರೂಪವಾಗಿ ಅವನು “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು.” ತನ್ನಲ್ಲಿರುವ ಸ್ವಾಭಾವಿಕ ಕೌಶಲಗಳಿಂದಾಗಿ ಅಲ್ಲ, ಯೆಹೋವನ ಆಶೀರ್ವಾದದಿಂದಾಗಿ “ಅವನ ಕಾರ್ಯವೆಲ್ಲವೂ ಸಫಲವಾಗುವದು.”—ಕೀರ್ತನೆ 1:1-3; ಮತ್ತಾಯ 6:33.
ಕ್ರೈಸ್ತತ್ವವು ನಿಮ್ಮ ಬಲಕ್ಕೆ ಹೆಚ್ಚನ್ನು ಕೂಡಿಸಲಿ
ಕ್ರೈಸ್ತತ್ವದಲ್ಲಿ ಒಳ್ಳೆಯ ಗುಣಗಳ ಪುಷ್ಕಳತೆ ಎಷ್ಟಿದೆಯೆಂದರೆ, ಲೌಕಿಕ ತತ್ವಜ್ಞಾನಗಳು ಅದರ ಮುಂದೆ ಕಳೆಗುಂದಿರುತ್ತವೆ. ಉದಾಹರಣೆಗೆ, ಕ್ರೈಸ್ತ ಜೀವನ ಮಾರ್ಗವು, ಅತ್ಯುತ್ತಮ ಪತಿಪತ್ನಿಯರನ್ನು, ಅತ್ಯುತ್ತಮ ನೆರೆಯವರನ್ನು, ಮತ್ತು ಅತ್ಯುತ್ತಮ ಕೆಲಸಗಾರರನ್ನು, ಅಂದರೆ, ಪ್ರಾಮಾಣಿಕರೂ, ಗೌರವಸ್ಥರೂ, ಮತ್ತು ಶ್ರಮಶೀಲರಾಗಿರುವಂತಹ ಜನರನ್ನು ಉಂಟುಮಾಡುತ್ತದೆ. (ಕೊಲೊಸ್ಸೆ 3:18-23) ಅಲ್ಲದೆ, ಮಾತಾಡುವ ಮತ್ತು ಕಲಿಸುವ ವಿಷಯದಲ್ಲಿ ಕ್ರೈಸ್ತರಿಗೆ ಸಿಗುವ ತರಬೇತಿಯು, ಒಳ್ಳೆಯ ಸಂವಾದ ಕೌಶಲಗಳನ್ನು ಬೆಳೆಸುತ್ತದೆ. (1 ತಿಮೊಥೆಯ 4:13-15) ಈ ಕಾರಣ, ಹೆಚ್ಚಿನ ಜವಾಬ್ದಾರಿಗಳಿಗಾಗಿ ಮತ್ತು ಬಡ್ತಿಗಳಿಗಾಗಿ ಧಣಿಗಳು ಕ್ರೈಸ್ತರನ್ನೇ ಇಷ್ಟಪಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಜಾಗರೂಕವಾಗಿ ನಿಯಂತ್ರಿಸಲ್ಪಡದಿದ್ದಲ್ಲಿ ಇಂತಹ ಸಾಮರ್ಥ್ಯಗಳನ್ನು ದುರುಪಯೋಗಿಸಲೂ ಸಾಧ್ಯವಿದೆ. ಏಕೆಂದರೆ, ಒಂದು ಬಡ್ತಿ ಇಲ್ಲವೆ ಆಕರ್ಷಣೀಯ ಸಂಬಳವು, ಕಂಪನಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದನ್ನು ಅರ್ಥೈಸಬಹುದು. ಇದು ಕ್ರೈಸ್ತ ಕೂಟಗಳನ್ನು ಕ್ರಮವಾಗಿ ತಪ್ಪಿಸುವಂತೆ ಮಾಡಬಹುದು ಇಲ್ಲವೆ ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ಅಸಾಧ್ಯಗೊಳಿಸಬಹುದು.
ಆಸ್ಟ್ರೇಲಿಯದಲ್ಲಿ ಕ್ರೈಸ್ತ ಹಿರಿಯನೂ ಕುಟುಂಬಸ್ಥನೂ ಆಗಿರುವ ಒಬ್ಬ ಸಹೋದರನು ಕೂಡ, ಬಹಳ ಯಶಸ್ವಿ ವ್ಯಾಪಾರಸ್ಥನಾಗಿದ್ದು, ಲೋಕದ ಸಿರಿಸಂಪತ್ತನ್ನೆಲ್ಲಾ ಗಳಿಸಬಹುದಾಗಿತ್ತು. ಆದರೂ, ಈ ವ್ಯವಸ್ಥೆಯಲ್ಲಿ ಐಶ್ವರ್ಯವಂತನಾಗುವ ಆಸೆಯನ್ನು ಅವನು ತೊರೆದುಬಿಟ್ಟನು. “ನನ್ನ ಕುಟುಂಬದೊಂದಿಗೆ ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ನಾನು ಬಯಸಿದೆ” ಎಂದು ಅವನು ಹೇಳಿದನು. “ಆದುದರಿಂದ ನನ್ನ ಐಹಿಕ ಕೆಲಸದಲ್ಲಿ ನಾನು ಕಳೆಯುವ ಸಮಯವನ್ನು ಕಡಿಮೆಮಾಡಲು ನಾನು ಹಾಗೂ ನನ್ನ ಪತ್ನಿ ಒಪ್ಪಿಕೊಂಡೆವು. ವಾರಕ್ಕೆ ಐದು ದಿನಗಳು ಕೆಲಸಮಾಡುವ ಅಗತ್ಯ ನನಗಿರದಿದ್ದಲ್ಲಿ ನಾನೇಕೆ ಮಾಡಬೇಕು?” ಎಂಬುದಾಗಿ ಅವನು ಕೂಡಿಸಿ ಹೇಳಿದನು. ಚೆನ್ನಾಗಿ ಯೋಚಿಸಿ ಮಾಡಲ್ಪಟ್ಟ ಕೆಲವು ಹೊಂದಾಣಿಕೆಗಳಿಂದ, ವಾರಕ್ಕೆ ಮೂರು ಅಥವಾ ನಾಲ್ಕು ದಿನಗಳು ದುಡಿದರೂ ತನ್ನ ಕುಟುಂಬವನ್ನು ಪರಾಮರಿಸಸಾಧ್ಯವಿದೆ ಎಂಬುದನ್ನು ಈ ಹಿರಿಯನು ಕಂಡುಕೊಂಡನು. ಸಕಾಲದಲ್ಲಿ, ಸ್ಥಳೀಯ ಅಸೆಂಬ್ಲಿ ಹಾಲ್ ಕಮಿಟಿ ಮತ್ತು ಜಿಲ್ಲಾ ಅಧಿವೇಶನದ ಆಡಳಿತದಲ್ಲಿ ಸೇವೆಸಲ್ಲಿಸುವ ಇತರ ಸೇವಾ ಸುಯೋಗಗಳಲ್ಲಿ ಭಾಗವಹಿಸಲು ಅವನು ಆಮಂತ್ರಿಸಲ್ಪಟ್ಟನು. ಅವನ ಸಾಮರ್ಥ್ಯಗಳು ವಿವೇಕಪ್ರದವಾಗಿ ಬಳಸಲ್ಪಟ್ಟ ಕಾರಣ, ಅವನಿಗೂ ಅವನ ಕುಟುಂಬಕ್ಕೂ ಆನಂದ ಮತ್ತು ಸಂತೃಪ್ತಿಯು ಲಭಿಸಿದವು.
ಸುಯೋಗಗಳ ಕಡೆಗೆ ಸಮತೂಕದ ಮನೋಭಾವ
ಸಭೆಯಲ್ಲಿ ಸೇವಾ ಸುಯೋಗಗಳಿಗಾಗಿ ಪ್ರಯಾಸಪಡುವಂತೆ ಕ್ರೈಸ್ತ ಪುರುಷರು ಉತ್ತೇಜಿಸಲ್ಪಡುತ್ತಾರೆ. “ಸಭಾಧ್ಯಕ್ಷನ [ಅಥವಾ ಶುಶ್ರೂಷಾ ಸೇವಕನ] ಉದ್ಯೋಗವನ್ನು ಪಡಕೊಳ್ಳಬೇಕೆಂದಿರುವವನು ಒಳ್ಳೇ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.” (1 ತಿಮೊಥೆಯ 3:1) ಈಗಾಗಲೇ ಉಲ್ಲೇಖಿಸಲ್ಪಟ್ಟಿರುವ ಸಾಮರ್ಥ್ಯಗಳ ಜೊತೆಗೆ, ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಸಿದ್ಧಮನಸ್ಸು ಒಳ್ಳೆಯ ವಿವೇಚನಾಶಕ್ತಿಯೊಂದಿಗೆ ಸರಿದೂಗಿಸಲ್ಪಡಬೇಕು. ಯೆಹೋವನ ಸೇವೆಯಲ್ಲಿ ಆನಂದವನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಅಷ್ಟೊಂದು ನೇಮಕಗಳನ್ನು ಯಾರೊಬ್ಬರೂ ವಹಿಸಿಕೊಳ್ಳಬಾರದು. ನಿಜ, ಒಂದು ಸಿದ್ಧಮನಸ್ಸು ಪ್ರಶಂಸನೀಯವೂ ಅಗತ್ಯವೂ ಆಗಿದೆ, ಏಕೆಂದರೆ ಅಂತಹ ಮನಸ್ಸನ್ನು ತೋರಿಸದವನನ್ನು ಯೆಹೋವನು ಮೆಚ್ಚುವುದಿಲ್ಲ; ಆದರೆ ಸಿದ್ಧಮನಸ್ಸು, ವಿನಯಶೀಲತೆ ಹಾಗೂ “ಸ್ವಸ್ಥಚಿತ್ತ”ವನ್ನು ಸಹ ಪ್ರದರ್ಶಿಸಬೇಕು.—ತೀತ 2:12; ಪ್ರಕಟನೆ 3:15, 16.
ಯೇಸುವಿನ ಕೋಮಲತೆ, ಒಳನೋಟ, ಮತ್ತು ಸೂಕ್ಷ್ಮಸಂವೇದನೆಯ ಕಾರಣ, ಅತ್ಯಂತ ಬಡ ವ್ಯಕ್ತಿಯು ಸಹ ಅವನ ಸಹವಾಸದಲ್ಲಿ ನೆಮ್ಮದಿಯಿಂದ ಇರಬಹುದಿತ್ತು. ತದ್ರೀತಿಯಲ್ಲಿ ಇಂದು, ಯಾರಲ್ಲಿ ಅನುಭೂತಿ ಮತ್ತು ಚಿಂತಿಸುವ ವ್ಯಕ್ತಿತ್ವವೆಂಬ ಒಳ್ಳೆಯ ಗುಣವಿದೆಯೊ, ಅಂತಹವರ ಸಹವಾಸದಲ್ಲಿ ಜನರು ನಿರಾತಂಕವಾಗಿ ಇರುತ್ತಾರೆ. ಕ್ರೈಸ್ತ ಸಭೆಯಲ್ಲಿರುವ ಇಂತಹ ಆದರದ, ಸ್ನೇಹಪರ ಹಿರಿಯರು, ‘ಪುರುಷರಲ್ಲಿ ವರಗಳೋಪಾದಿ’ ಎಣಿಸಲ್ಪಡುತ್ತಾರೆ. ಅವರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ” ಇರುತ್ತಾರೆ.—ಎಫೆಸ 4:8, NW; ಯೆಶಾಯ 32:2.
ಆದರೆ ಹಿರಿಯರು, ಇತರರಿಗೆ ಸಹಾಯ ಮಾಡುವುದರಲ್ಲಿ ವ್ಯಯಿಸುವ ಸಮಯವನ್ನು ವೈಯಕ್ತಿಕ ಅಧ್ಯಯನ, ಮನನ, ಪ್ರಾರ್ಥನೆ, ಮತ್ತು ಸಾರ್ವಜನಿಕ ಶುಶ್ರೂಷೆಯಂತಹ ತಮ್ಮ ಸ್ವಂತ ಕಾರ್ಯಗಳಿಗಾಗಿ ಬೇಕಾದ ಸಮಯದೊಂದಿಗೆ ಸರಿದೂಗಿಸಬೇಕು. ವಿವಾಹಿತ ಹಿರಿಯರು ತಮ್ಮ ಕುಟುಂಬಗಳಿಗಾಗಿ ಸಮಯವನ್ನು ಬದಿಗಿಟ್ಟು, ವಿಶೇಷವಾಗಿ ಅವರೊಂದಿಗೆ ಸ್ನೇಹಪರರಾಗಿರಬೇಕು.
ಸಮರ್ಥ ಸ್ತ್ರೀಯರು—ಒಂದು ಅದ್ಭುತಕರವಾದ ಆಶೀರ್ವಾದ
ಸಮರ್ಥ ಹಿರಿಯರಂತೆ, ಆತ್ಮಿಕ ಪ್ರವೃತ್ತಿಯ ಸ್ತ್ರೀಯರು ಸಹ ಯೆಹೋವನ ಸಂಸ್ಥೆಗೆ ಒಂದು ಅತ್ಯುತ್ತಮ ಆಸ್ತಿಯಾಗಿದ್ದಾರೆ. ಸಾಮಾನ್ಯವಾಗಿ, ಸ್ತ್ರೀಯರು ಇತರರಲ್ಲಿ ಆಸಕ್ತಿಯನ್ನು ತೋರಿಸುವವರಾಗಿರುತ್ತಾರೆ. ಈ ಗುಣವನ್ನು ಯೆಹೋವನು ಗಣ್ಯಮಾಡುತ್ತಾನೆ ಮತ್ತು ಉತ್ತೇಜಿಸುತ್ತಾನೆ. “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ” ಎಂಬುದಾಗಿ ಅಪೊಸ್ತಲ ಪೌಲನು ಬರೆದನು. (ಫಿಲಿಪ್ಪಿ 2:4) ಆದರೆ ಈ ‘ಪರಹಿತಕ್ಕೆ’ ಮಿತಿಗಳಿವೆ, ಏಕೆಂದರೆ ಯಾವ ಕ್ರೈಸ್ತನೂ “ಪರಕಾರ್ಯಗಳಲ್ಲಿ ತಲೆಹಾಕುವವನು” ಇಲ್ಲವೆ ಹರಟೆಹೊಡೆಯುವವನು ಆಗಿರಲು ಬಯಸುವುದಿಲ್ಲ.—1 ಪೇತ್ರ 4:15; 1 ತಿಮೊಥೆಯ 5:13.
ಸ್ತ್ರೀಯರಲ್ಲಿ ಇನ್ನೂ ಅನೇಕ ಕೌಶಲಗಳಿವೆ. ಉದಾಹರಣೆಗೆ, ಒಬ್ಬ ಕ್ರೈಸ್ತ ಪತ್ನಿಯು, ತನ್ನ ಪತಿಗಿಂತಲೂ ಹೆಚ್ಚು ಬುದ್ಧಿವಂತಳಾಗಿರಬಹುದು. ಆದರೂ, ಯೆಹೋವನಿಗೆ ಭಯಪಡುವ ಒಬ್ಬ “ಗುಣವತಿಯಾದ ಸತಿ”ಯಂತೆ, ಅವಳು ತನ್ನ ಪತಿಗೆ ಗೌರವವನ್ನು ತೋರಿಸಿ, ಅವಳಲ್ಲಿರುವ ಕೌಶಲಗಳನ್ನು ಅವನಿಗೆ ಪೂರಕವಾಗಿ ಉಪಯೋಗಿಸಬೇಕೇ ಹೊರತು, ಅವನೊಂದಿಗೆ ಸ್ಪರ್ಧಿಸಲಿಕ್ಕಾಗಿ ಉಪಯೋಗಿಸಬಾರದು. ಮತ್ತು ಒಬ್ಬ ಬುದ್ಧಿವಂತ, ಹಾಗೂ ನಮ್ರಭಾವದ ಪತಿಯು ಹೊಟ್ಟೆಕಿಚ್ಚುಪಡುವ ಇಲ್ಲವೆ ತೀವ್ರ ಅಸಮಾಧಾನವನ್ನು ತೋರಿಸುವ ಬದಲು, ತನ್ನ ಪತ್ನಿಯ ಸಾಮರ್ಥ್ಯಗಳನ್ನು ಅಮೂಲ್ಯವೆಂದೆಣಿಸಿ, ಅವುಗಳಲ್ಲಿ ಹರ್ಷಿಸಬೇಕು. ಅವಳು ತನ್ನ ಮನೆವಾರ್ತೆಯನ್ನು ಕಟ್ಟಲು ಮತ್ತು ತನ್ನಂತೆಯೇ ತನ್ನ ಮಕ್ಕಳು ಸಹ ‘ಯೆಹೋವನಿಗೆ ಭಯಪಡುವಂತೆ’ ಸಹಾಯಮಾಡಲು ತನ್ನೆಲ್ಲ ಸಾಮರ್ಥ್ಯಗಳನ್ನು ಪೂರ್ಣವಾಗಿ ಉಪಯೋಗಿಸುವಂತೆ ಅವನು ಉತ್ತೇಜಿಸಬೇಕು. (ಜ್ಞಾನೋಕ್ತಿ 31:10, 28-30; ಆದಿಕಾಂಡ 2:18) ಇಂತಹ ವಿನಯಶೀಲ ಹಾಗೂ ನಮ್ರಭಾವದ ಪತಿಪತ್ನಿಯರು, ಯೆಹೋವನನ್ನು ನಿಜವಾಗಿಯೂ ಘನಪಡಿಸುವ ವಿವಾಹಗಳಲ್ಲಿ ಸಫಲರಾಗುತ್ತಾರೆ.
ಒಂದು ಬಲಶಾಲಿಯಾದ ವ್ಯಕ್ತಿತ್ವವನ್ನು ಪಳಗಿಸುವುದು
ನೀತಿಯ ಮೇಲೆ ಮತ್ತು ಯೆಹೋವನ ಚಿತ್ತವನ್ನು ಪೂರ್ಣ ಹೃದಯದಿಂದ ಮಾಡುವುದರ ಮೇಲೆ ಆತುಕೊಂಡಿರುವ ಒಂದು ಬಲಶಾಲಿಯಾದ ವ್ಯಕ್ತಿತ್ವವು, ವಿನಯಶೀಲತೆ ಹಾಗೂ ನಮ್ರಭಾವದೊಂದಿಗೆ ಮೃದುಗೊಳಿಸಲ್ಪಟ್ಟಾಗ ಒಂದು ಅತ್ಯುತ್ತಮ ಆಸ್ತಿಯಾಗಿರಬಲ್ಲದು. ಆದರೆ ಇತರರ ಮೇಲೆ ಅಧಿಕಾರ ನಡೆಸಲು ಇಲ್ಲವೆ ಹೆದರಿಸಲು ಬಳಸಲ್ಪಟ್ಟಾಗ, ಅದೊಂದು ಬಲಹೀನತೆಯಾಗಿರಬಲ್ಲದು. ಇದು ವಿಶೇಷವಾಗಿ ಕ್ರೈಸ್ತ ಸಭೆಯಲ್ಲಿ ನಿಜವಾಗಿದೆ. ಸಭಾ ಹಿರಿಯರ ಸಹವಾಸದಲ್ಲಿರುವುದನ್ನೂ ಸೇರಿಸಿ, ಕ್ರೈಸ್ತರು ಒಬ್ಬರು ಇನ್ನೊಬ್ಬರ ಸಹವಾಸದಲ್ಲಿ ನೆಮ್ಮದಿಯಿಂದಿರಬೇಕು.—ಮತ್ತಾಯ 20:25-27.
ತದ್ರೀತಿಯಲ್ಲಿ ಹಿರಿಯರು, ಒಬ್ಬರಿನ್ನೊಬ್ಬರ ಸಹವಾಸದಲ್ಲಿ ಹಾಯಾಗಿರಬೇಕು. ಮತ್ತು ಅವರು ಒಟ್ಟಾಗಿ ಕೂಡಿಬರುವಾಗ, ಅವರು ತೆಗೆದುಕೊಳ್ಳುವಂತಹ ನಿರ್ಣಯಗಳನ್ನು ಪ್ರಭಾವಶಾಲಿಯಾದ ವ್ಯಕ್ತಿತ್ವವಲ್ಲ, ಬದಲಾಗಿ ಪವಿತ್ರಾತ್ಮವು ಪ್ರಭಾವಿಸಬೇಕು. ಹೌದು, ಪವಿತ್ರಾತ್ಮವು ಅತ್ಯಂತ ಕಿರಿಯ ಇಲ್ಲವೆ ಮಿತಭಾಷಿ ಹಿರಿಯನನ್ನು ಸೇರಿಸಿ, ಹಿರಿಯರ ಮಂಡಲಿಯಲ್ಲಿರುವ ಯಾವನೇ ಹಿರಿಯನನ್ನು ಪ್ರಭಾವಿಸಬಲ್ಲದು. ಆದುದರಿಂದ ಬಲಶಾಲಿಯಾದ ವ್ಯಕ್ತಿತ್ವಗಳಿರುವವರು, ತಾವು ಸರಿಯಾದ ಕಾರ್ಯವನ್ನೇ ಮಾಡುತ್ತಿದ್ದೇವೆಂದು ಭಾವಿಸಿದರೂ, ಮತ್ತೊಬ್ಬರ ಅಭಿಪ್ರಾಯಕ್ಕೆ ಮಣಿದು, ಹೀಗೆ ಜೊತೆ ಹಿರಿಯರಿಗೆ “ಮಾನಮರ್ಯಾದೆಯನ್ನು” ತೋರಿಸುವ ಮೂಲಕ ತಮ್ಮಲ್ಲಿರುವ ಸಾಮರ್ಥ್ಯವನ್ನು ನಿರ್ವಹಿಸಬೇಕು. (ರೋಮಾಪುರ 12:10) ಪ್ರಸಂಗಿ 7:16 ದಯಾಪರವಾಗಿ ಎಚ್ಚರಿಸುವುದು: “ಧರ್ಮವನ್ನು ಅತಿಯಾಗಿ ಆಚರಿಸದಿರು; ಜ್ಞಾನವನ್ನು ಅಧಿಕವಾಗಿ ಆರ್ಜಿಸಬೇಡ; ನಿನ್ನನ್ನು ನೀನೇ ನಾಶನಕ್ಕೆ ಏಕೆ ಗುರಿಮಾಡಿಕೊಳ್ಳುವಿ?”
“ಎಲ್ಲಾ ಒಳ್ಳೇ ದಾನಗಳ” ಮೂಲನಾಗಿರುವ ಯೆಹೋವನು, ತನ್ನ ಅದ್ಭುತಕರವಾದ ಸಾಮರ್ಥ್ಯಗಳನ್ನು ಸಂಪೂರ್ಣ ಪರಿಪೂರ್ಣತೆಯಲ್ಲಿ ನಿರ್ವಹಿಸುತ್ತಾನೆ. (ಯಾಕೋಬ 1:17; ಧರ್ಮೋಪದೇಶಕಾಂಡ 32:4) ಮತ್ತು ಆತನು ನಮ್ಮ ಶಿಕ್ಷಕನಾಗಿದ್ದಾನೆ! ನಮ್ಮ ಸ್ವಾಭಾವಿಕ ಕೌಶಲಗಳು ಇಲ್ಲವೆ ಸಾಮರ್ಥ್ಯಗಳನ್ನು ವಿಕಸಿಸಿಕೊಳ್ಳಲು ಮತ್ತು ಅವುಗಳನ್ನು ವಿವೇಕಯುತವಾಗಿ, ಮಿತಭಾವದಿಂದ, ಹಾಗೂ ಪ್ರೀತಿಪರವಾಗಿ ನಿಭಾಯಿಸಲು, ಆತನಿಂದ ಕಲಿತುಕೊಳ್ಳೋಣ ಮತ್ತು ಕಷ್ಟಪಟ್ಟು ಕೆಲಸಮಾಡೋಣ. ಆಗ ನಾವು ಇತರರಿಗೆ ಎಂತಹ ಒಂದು ಆಶೀರ್ವಾದವಾಗಿ ಪರಿಣಮಿಸುವೆವು!
[ಪುಟ 27 ರಲ್ಲಿರುವ ಚಿತ್ರಗಳು]
ಆತ್ಮಿಕ ಪ್ರಗತಿಯು ಪ್ರಾರ್ಥನಾಪೂರ್ವಕ ಅಧ್ಯಯನ ಮತ್ತು ಯೆಹೋವನ ಮೇಲಿನ ಆತುಕೊಳ್ಳುವಿಕೆಯ ಮೇಲೆ ಅವಲಂಬಿಸಿದೆ
[ಪುಟ 29 ರಲ್ಲಿರುವ ಚಿತ್ರ]
ವಿನಯಶೀಲತೆಯೊಂದಿಗೆ ಸೇರಿದ ವೈಯಕ್ತಿಕ ಆಸಕ್ತಿಯು ಒಂದು ಆಶೀರ್ವಾದವಾಗಿದೆ
[ಪುಟ 26 ರಲ್ಲಿರುವ ಚಿತ್ರ ಕೃಪೆ]
Courtesy of The Mariners’ Museum, Newport News, VA