ಯೆಹೋವನ “ಕಣ್ಣುಗಳು” ಎಲ್ಲರನ್ನು ಸೂಕ್ಷ್ಮವಾಗಿ ಪರಿಶೋಧಿಸುತ್ತವೆ
“ಆತನ [ಯೆಹೋವನ] ಕಣ್ಣುಗಳು ಮಾನವರನ್ನು ನೋಡುತ್ತವೆ; ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ.”—ಕೀರ್ತ. 11:4.
1. ಯಾವ ರೀತಿಯ ಜನರನ್ನು ನಾವು ಇಷ್ಟಪಡುತ್ತೇವೆ?
ನಿಮ್ಮ ಕುರಿತು ನಿಜವಾಗಿ ಆಸಕ್ತಿವಹಿಸುವವರ ಕುರಿತು ನಿಮಗೆ ಹೇಗನಿಸುತ್ತದೆ? ಯಾವುದೇ ವಿಷಯದ ಕುರಿತು ನೀವು ಅವರ ಅಭಿಪ್ರಾಯ ಕೇಳಿದರೆ ಅವರದನ್ನು ಮುಚ್ಚುಮರೆಯಿಲ್ಲದೆ ತಿಳಿಸುತ್ತಾರೆ. ನಿಮಗೆ ಅವಶ್ಯಬಿದ್ದಾಗ ಅವರು ಉದಾರವಾಗಿ ಸಹಾಯ ಮಾಡುತ್ತಾರೆ. ಅಗತ್ಯವಿರುವಾಗ ನಿಮಗೆ ಪ್ರೀತಿಯಿಂದ ಸಲಹೆಯನ್ನೂ ಕೊಡುತ್ತಾರೆ. (ಕೀರ್ತ. 141:5; ಗಲಾ. 6:1) ಇಂಥ ಜನರನ್ನು ನೀವು ಇಷ್ಟಪಡುತ್ತೀರಲ್ಲವೇ? ಯೆಹೋವನೂ ಆತನ ಮಗನೂ ಅಂಥವರೇ. ನಿಮ್ಮ ಕುರಿತು ಯಾವ ಮಾನವನಿಗಿಂತಲೂ ಮಿಗಿಲಾದ ಆಸಕ್ತಿ ಅವರಿಗಿದೆ. ಈ ಆಸಕ್ತಿ ನಿಸ್ವಾರ್ಥವಾದದ್ದು. ನೀವು ‘ವಾಸ್ತವವಾದ ಜೀವವನ್ನು ಹೊಂದುವಂತೆ’ ಸಹಾಯಮಾಡುವುದೇ ಅವರ ಇಚ್ಛೆ.—1 ತಿಮೊ. 6:18, 19; ಪ್ರಕ. 3:19.
2. ಯೆಹೋವನಿಗೆ ತನ್ನ ಸೇವಕರಲ್ಲಿ ಎಷ್ಟು ಆಸಕ್ತಿಯಿದೆ?
2 ಯೆಹೋವನಿಗೆ ನಮ್ಮ ಮೇಲಿರುವ ಗಾಢಾಸಕ್ತಿಯನ್ನು ಕೀರ್ತನೆಗಾರ ದಾವೀದನು ಹೀಗೆ ವ್ಯಕ್ತಪಡಿಸಿದನು: “ಆತನ [ಯೆಹೋವನ] ಕಣ್ಣುಗಳು ಮಾನವರನ್ನು ನೋಡುತ್ತವೆ; ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ.” (ಕೀರ್ತ. 11:4) ಹೌದು, ದೇವರು ನಮ್ಮನ್ನು ನೋಡುತ್ತಾನೆ ಮಾತ್ರವಲ್ಲ ನಮ್ಮನ್ನು ಪರಿಶೋಧಿಸುತ್ತಾನೆ ಸಹ. ದಾವೀದನು ಹೀಗೂ ಬರೆದನು: “ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ ರಾತ್ರಿವೇಳೆ ವಿಚಾರಿಸಿದರೂ ... ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವದಿಲ್ಲ.” (ಕೀರ್ತ. 17:3) ಯೆಹೋವನಿಗೆ ತನ್ನ ಮೇಲೆ ಎಷ್ಟು ಗಾಢಾಸಕ್ತಿಯಿದೆ ಎಂಬ ಅರಿವು ದಾವೀದನಿಗಿತ್ತು ಎಂಬುದು ಸ್ಪಷ್ಟ. ತಾನು ಹೃದಯದಲ್ಲಿ ಪಾಪಭರಿತ ಆಲೋಚನೆಗಳನ್ನು ಮೆಲುಕುಹಾಕಿದರೆ ಯೆಹೋವನ ಮನನೋಯಿಸಿ ಆತನ ಕೋಪವನ್ನು ಬರಮಾಡಿಕೊಳ್ಳುವೆನೆಂದು ಅವನಿಗೆ ತಿಳಿದಿತ್ತು. ದಾವೀದನಿಗೆ ಯೆಹೋವನು ಎಷ್ಟು ನೈಜನಾಗಿದ್ದನೋ ನಿಮಗೂ ಅಷ್ಟೇ ನೈಜನಾಗಿದ್ದಾನೋ?
ಯೆಹೋವನು ಹೃದಯವನ್ನು ನೋಡುತ್ತಾನೆ
3. ನಮ್ಮ ಅಪರಿಪೂರ್ಣತೆಗಳ ಬಗ್ಗೆ ಯೆಹೋವನು ಸಮತೋಲನದ ಮನೋಭಾವವನ್ನು ಹೇಗೆ ತೋರಿಸುತ್ತಾನೆ?
3 ನಾವು ಹೃದಯದಲ್ಲಿ ಅಂದರೆ ಅಂತರಂಗದಲ್ಲಿ ನಿಜವಾಗಿ ಏನಾಗಿದ್ದೇವೋ ಅದರಲ್ಲಿ ಯೆಹೋವನು ಮುಖ್ಯವಾಗಿ ಆಸಕ್ತನಾಗಿದ್ದಾನೆ. (ಕೀರ್ತ. 19:14; 26:2) ನಮ್ಮ ಮೇಲಿನ ಪ್ರೀತಿಯಿಂದಾಗಿ ಯೆಹೋವನು ನಮ್ಮ ಚಿಕ್ಕಪುಟ್ಟ ತಪ್ಪುಗಳನ್ನೇ ನೋಡುತ್ತಿರುವುದಿಲ್ಲ. ಉದಾಹರಣೆಗೆ ಅಬ್ರಹಾಮನ ಹೆಂಡತಿಯಾದ ಸಾರಳು ಸತ್ಯ ಹೇಳದಿದ್ದಾಗ, ಆಕೆ ಹೆದರಿಕೆ ಮತ್ತು ಸಂಕೋಚದಿಂದ ಹಾಗೆ ಮಾಡಿರಬಹುದೆಂದು ದೇವದೂತನು ಗ್ರಹಿಸುತ್ತಾ ಆಕೆಯನ್ನು ಮೆತ್ತಗೆ ಗದರಿಸಿದನು. (ಆದಿ. 18:12-15) ಮೂಲಪಿತೃಗಳಲ್ಲಿ ಒಬ್ಬನಾದ ಯೋಬನು “ದೇವರಿಗಿಂತಲೂ ತಾನೇ ನ್ಯಾಯವಂತನೆಂದು” ಹೇಳಿಕೊಂಡನು. ಆದರೆ ಅವನು ಸೈತಾನನಿಂದ ತುಂಬ ಕಷ್ಟಕ್ಕೀಡಾಗಿದ್ದನೆಂದು ತಿಳಿದಿದ್ದ ಯೆಹೋವನು ಅವನನ್ನು ಆಶೀರ್ವದಿಸಿದನು. (ಯೋಬ 32:2; 42:12) ತದ್ರೀತಿಯಲ್ಲಿ, ಚಾರೆಪ್ತಾದ ವಿಧವೆಯು ಪ್ರವಾದಿಗೆ ನುಡಿದ ಮಾತುಗಳನ್ನು ಯೆಹೋವನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಆಕೆ ತನ್ನ ಒಬ್ಬನೇ ಮಗನ ಸಾವಿನ ಆಘಾತದಿಂದಾಗಿ ಹೀಗೆ ಹೇಳಿದ್ದಳೆಂದು ದೇವರು ಅರ್ಥಮಾಡಿಕೊಂಡನು.—1 ಅರ. 17:8-24.
4, 5. ಯೆಹೋವನು ಅಬೀಮೆಲೆಕನಿಗೆ ಪರಿಗಣನೆ ತೋರಿಸಿದ್ದು ಹೇಗೆ?
4 ಯೆಹೋವನು ಹೃದಯಗಳನ್ನು ಪರಿಶೋಧಿಸಲು ಶಕ್ತನಾಗಿರುವುದರಿಂದಲೇ ಅವಿಶ್ವಾಸಿಗಳಿಗೂ ಪರಿಗಣನೆ ತೋರಿಸಿದ್ದಾನೆ. ಫಿಲಿಷ್ಟಿಯ ಪಟ್ಟಣವಾದ ಗೆರಾರಿನ ರಾಜ ಅಬೀಮೆಲೆಕನ ಕುರಿತ ವೃತ್ತಾಂತವನ್ನು ಪರಿಗಣಿಸಿ. ಅಬ್ರಹಾಮ ಮತ್ತು ಸಾರ ಗಂಡಹೆಂಡತಿಯೆಂದು ತಿಳಿಯದೆ ಅಬೀಮೆಲೆಕನು ಸಾರಳನ್ನು ತನ್ನ ಹೆಂಡತಿಯಾಗಿ ಮಾಡಲು ತನ್ನ ಮನೆಗೆ ಕರೆತಂದನು. ಆದರೆ ಅಬೀಮೆಲೆಕನು ಆಕೆಯನ್ನು ಕೂಡುವ ಮುಂಚೆಯೇ ಯೆಹೋವನು ಒಂದು ಸ್ವಪ್ನದಲ್ಲಿ ಅವನಿಗಂದದ್ದು: “ನೀನು ಇದನ್ನು ಯಥಾರ್ಥಮನಸ್ಸಿನಿಂದ ಮಾಡಿದೆ ಎಂಬುದನ್ನು ನಾನು ಬಲ್ಲೆ; ಆದಕಾರಣ ನಾನಂತೂ ನೀನು ನನಗೆ ವಿರುದ್ಧವಾಗಿ ಪಾಪಮಾಡದಂತೆ ನಿನ್ನನ್ನು ತಡೆದು ಆಕೆಯನ್ನು ಮುಟ್ಟಗೊಡಿಸಲಿಲ್ಲ. ಹೀಗಿರುವಲ್ಲಿ ಆ ಮನುಷ್ಯನ ಹೆಂಡತಿಯನ್ನು ತಿರಿಗಿ ಅವನಿಗೆ ಒಪ್ಪಿಸಿ ಬಿಡು. ಅವನು ಪ್ರವಾದಿ, ನಿನಗೋಸ್ಕರ ನನಗೆ ಪ್ರಾರ್ಥಿಸುವನು, ಮತ್ತು ನೀನು ಬದುಕುವಿ.”—ಆದಿ. 20:1-7.
5 ಸುಳ್ಳು ದೇವರುಗಳ ಆರಾಧಕನಾಗಿದ್ದ ಅಬೀಮೆಲೆಕನನ್ನು ಯೆಹೋವನು ಕಠೋರವಾಗಿ ಶಿಕ್ಷಿಸಬಹುದಿತ್ತು. ಆದರೆ ಈ ಸಂದರ್ಭದಲ್ಲಿ ಅವನ ಮನಸ್ಸು ಯಥಾರ್ಥವಾಗಿತ್ತು ಎಂಬದನ್ನು ದೇವರು ನೋಡಿದನು. ಯೆಹೋವನು ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾ ರಾಜನು ಪಶ್ಚಾತ್ತಾಪಪಟ್ಟು ‘ಬದುಕಿ’ ಉಳಿಯುವುದು ಹೇಗೆಂಬದನ್ನು ಹೇಳಿಕೊಟ್ಟನು. ನೀವು ಆರಾಧಿಸಲು ಬಯಸುವುದು ಇಂಥ ದೇವರನ್ನೇ ಅಲ್ಲವೇ?
6. ಯೇಸು ತನ್ನ ತಂದೆಯನ್ನು ಯಾವ ವಿಧಗಳಲ್ಲಿ ಅನುಕರಿಸಿದನು?
6 ಯೇಸು, ಶಿಷ್ಯರಲ್ಲಿದ್ದ ಒಳ್ಳೇ ಅಂಶಗಳಿಗೆ ಹೆಚ್ಚಿನ ಗಮನಕೊಡುವ ಮೂಲಕ ಮತ್ತು ಅವರನ್ನು ಸಿದ್ಧಮನಸ್ಸಿನಿಂದ ಕ್ಷಮಿಸುವ ಮೂಲಕ ತನ್ನ ತಂದೆಯನ್ನು ಪರಿಪೂರ್ಣವಾಗಿ ಅನುಕರಿಸಿದನು. (ಮಾರ್ಕ 10:35-45; 14:66-72; ಲೂಕ 22:31, 32; ಯೋಹಾ. 15:15) ಯೋಹಾನ 3:17 ರಲ್ಲಿ ಯೇಸು ಏನನ್ನು ಹೇಳಿದನೋ ಅದರೊಂದಿಗೆ ಆತನ ಮನೋಭಾವ ಹೊಂದಿಕೆಯಲ್ಲಿತ್ತು. ಆತನಂದ್ದದು: “ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ.” ಹೌದು ಯೆಹೋವ ಮತ್ತು ಯೇಸುವಿಗೆ ನಮ್ಮ ಮೇಲೆ ಗಾಢ ಹಾಗೂ ಅಚಲ ಪ್ರೀತಿಯಿದೆ. ಇದು, ನಾವು ಜೀವವನ್ನು ಪಡೆಯಬೇಕೆಂದು ಅವರಿಗಿರುವ ಹಂಬಲದಿಂದ ವ್ಯಕ್ತವಾಗುತ್ತದೆ. (ಯೋಬ 14:15) ಇಂಥ ಪ್ರೀತಿಯು, ದೇವರು ನಮ್ಮನ್ನು ಏಕೆ ಪರಿಶೋಧಿಸುತ್ತಾನೆ, ನಮ್ಮನ್ನು ಹೇಗೆ ವೀಕ್ಷಿಸುತ್ತಾನೆ ಮತ್ತು ಆತನೇನು ಗಮನಿಸುತ್ತಾನೋ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುವುಗಳಿಗೆ ಕಾರಣಕೊಡುತ್ತದೆ.—1 ಯೋಹಾನ 4:8, 19 ಓದಿ.
ಪ್ರೀತಿಯಿಂದ ಪರಿಶೋಧಿಸುತ್ತಾನೆ
7. ಯೆಹೋವನು ನಮ್ಮನ್ನು ಯಾವ ಉದ್ದೇಶದಿಂದ ಪರಿಶೋಧಿಸುತ್ತಾನೆ?
7 ನಮ್ಮ ತಪ್ಪನ್ನು ಹಿಡಿಯಲಿಕ್ಕೆಂದೇ ಕಾಯುತ್ತಿರುವ ಪೊಲೀಸ್ನಂತೆ ಯೆಹೋವನು ಸ್ವರ್ಗದಿಂದ ನೋಡುತ್ತಿದ್ದಾನೆಂದು ಎಣಿಸುವುದು ಎಷ್ಟು ತಪ್ಪಾಗಿರುವುದು! ವಾಸ್ತವದಲ್ಲಿ, ನಾವು ಸ್ವಾರ್ಥಿಗಳಾಗಿದ್ದೇವೆಂದು ದೂರುತ್ತಾ ತನ್ನ ವಾದವನ್ನು ಸಮರ್ಥಿಸುತ್ತಿರುವವನು ಸೈತಾನನು. (ಪ್ರಕ. 12:10) ಒಬ್ಬನ ಉದ್ದೇಶಗಳು ಒಳ್ಳೆಯದಾಗಿದ್ದರೂ ಅವು ಕೆಟ್ಟದ್ದಾಗಿವೆ ಎಂದು ಅವನು ಆರೋಪಿಸುತ್ತಾನೆ. (ಯೋಬ 1:9-11; 2:4, 5) ದೇವರ ಕುರಿತು ಕೀರ್ತನೆಗಾರನು ಬರೆದದ್ದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತ. 130:3) ಖಂಡಿತ ಯಾರೂ ನಿಲ್ಲರು! (ಪ್ರಸಂ. 7:20) ತನ್ನ ಪ್ರಿಯ ಮಕ್ಕಳಿಗೆ ಯಾವುದೇ ಹಾನಿಯಾಗದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡುವ ತಂದೆಯಂತೆ ಯೆಹೋವನು ಕರುಣೆ ಹಾಗೂ ದಯೆಯಿಂದ ನಮ್ಮನ್ನು ನೋಡುತ್ತಾನೆ. ನಮಗೆ ಹಾನಿಯಾಗದಂತೆ ನಮ್ಮ ಅಪರಿಪೂರ್ಣತೆಗಳು ಮತ್ತು ಬಲಹೀನತೆಗಳ ಕುರಿತು ಅನೇಕವೇಳೆ ನಮ್ಮನ್ನು ಎಚ್ಚರಿಸುತ್ತಾನೆ.—ಕೀರ್ತ. 103:10-14; ಮತ್ತಾ. 26:41.
8. ಯೆಹೋವನು ತನ್ನ ಸೇವಕರಿಗೆ ಹೇಗೆ ಶಿಸ್ತು ಮತ್ತು ಉಪದೇಶವನ್ನು ಕೊಡುತ್ತಾನೆ?
8 ಬೈಬಲ್ ಹಾಗೂ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಆಧ್ಯಾತ್ಮಿಕ ಆಹಾರದ ಮೂಲಕ ನೀಡಲಾಗುವ ಉಪದೇಶ ಮತ್ತು ಶಿಸ್ತಿನಿಂದ ದೇವರ ಪ್ರೀತಿ ವ್ಯಕ್ತವಾಗುತ್ತದೆ. (ಮತ್ತಾ. 24:45; ಇಬ್ರಿ. 12:5, 6) ಕ್ರೈಸ್ತ ಸಭೆ ಮತ್ತು “ಮನುಷ್ಯರಲ್ಲಿ ದಾನಗಳ” ಮೂಲಕವೂ ಯೆಹೋವನು ಸಹಾಯ ಒದಗಿಸುತ್ತಾನೆ. (ಎಫೆ. 4:8, NW) ಅಷ್ಟೇಕೆ, ಆತನು ಒಬ್ಬ ತಂದೆಯಂತೆ ಕೊಡುವ ಮಾರ್ಗದರ್ಶನಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬದಕ್ಕೆ ಗಮನಕೊಟ್ಟು ನಮಗೆ ಇನ್ನೂ ಹೆಚ್ಚಿನ ಸಹಾಯ ಮಾಡುತ್ತಾನೆ. ಕೀರ್ತನೆ 32:8 ತಿಳಿಸುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” ಹಾಗಾದರೆ ಯಾವಾಗಲೂ ನಾವು ಯೆಹೋವನಿಗೆ ಕಿವಿಗೊಡುವುದು ಎಷ್ಟು ಮಹತ್ತ್ವದ್ದು! ಆತನು ನಮ್ಮ ಪ್ರೀತಿಯ ತಂದೆಯೂ ಬೋಧಕನೂ ಆಗಿದ್ದಾನೆಂಬದನ್ನು ಅಂಗೀಕರಿಸುತ್ತಾ ಆತನ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳಬೇಕು.—ಮತ್ತಾಯ 18:4 ಓದಿ.
9. ನಾವು ಯಾವ ಗುಣಗಳನ್ನು ವರ್ಜಿಸಬೇಕು, ಮತ್ತು ಏಕೆ?
9 ಇನ್ನೊಂದು ಪಕ್ಕದಲ್ಲಿ, ನಾವು ಅಹಂಕಾರ, ನಂಬಿಕೆಯ ಕೊರತೆ ಅಥವಾ “ಪಾಪದಿಂದ ಮೋಸಹೋಗಿ ಕಠಿನರಾಗದಂತೆ” ಜಾಗ್ರತೆ ವಹಿಸಬೇಕು. (ಇಬ್ರಿ. 3:13; ಯಾಕೋ. 4:6) ಇಂಥ ಗುಣಗಳು ಅನೇಕ ವೇಳೆ, ಒಬ್ಬ ವ್ಯಕ್ತಿ ಅಹಿತಕರ ಆಲೋಚನೆ ಅಥವಾ ದುರಿಚ್ಛೆಗಳನ್ನು ಮನದೊಳಗೇ ಪೋಷಿಸುವಾಗ ತಲೆದೋರುತ್ತವೆ. ಅಂಥ ವ್ಯಕ್ತಿ ಯೋಗ್ಯವಾದ ಶಾಸ್ತ್ರಾಧಾರಿತ ಬುದ್ಧಿವಾದವನ್ನು ತಳ್ಳಿಹಾಕುವ ಹಂತಕ್ಕೂ ತಲಪಬಹುದು. ಅಷ್ಟೇ ಅಲ್ಲ, ಅವನ ಕೆಟ್ಟ ಮನೋಭಾವ ಹಾಗೂ ನಡತೆಯು ಅವನಲ್ಲಿ ಎಷ್ಟು ತಳವೂರಬಹುದೆಂದರೆ ಅವನು ತನ್ನನ್ನೇ ದೇವರಿಗೆ ವೈರಿಯನ್ನಾಗಿ ಮಾಡಿಕೊಳ್ಳಬಹುದು. ಖಂಡಿತವಾಗಿ ಇದೊಂದು ಭಯಂಕರ ಸನ್ನಿವೇಶ! (ಜ್ಞಾನೋ. 1:22-31) ಆದಾಮಹವ್ವರ ಹಿರಿಮಗನಾದ ಕಾಯಿನನ ಉದಾಹರಣೆಯನ್ನು ತೆಗೆದುಕೊಳ್ಳಿ.
ಯೆಹೋವನು ಎಲ್ಲವನ್ನೂ ನೋಡಿ ಅದಕ್ಕೆ ತಕ್ಕಂತೆ ಕ್ರಿಯೆಗೈಯುತ್ತಾನೆ
10. ಯೆಹೋವನು ಕಾಯಿನನ ಯಜ್ಞವನ್ನು ನಿರಾಕರಿಸಿದ್ದೇಕೆ, ಮತ್ತು ಕಾಯಿನನ ಪ್ರತಿಕ್ರಿಯೆ ಏನಾಗಿತ್ತು?
10 ಕಾಯಿನ ಹೇಬೆಲರು ತಮ್ಮ ತಮ್ಮ ಯಜ್ಞಗಳನ್ನು ಯೆಹೋವನಿಗೆ ಅರ್ಪಿಸಿದಾಗ, ಆತನು ಅವರ ಯಜ್ಞದಲ್ಲಿ ಮಾತ್ರವಲ್ಲ ಅವರ ಇರಾದೆಯಲ್ಲೂ ಆಸಕ್ತನಾಗಿದ್ದನು. ದೇವರು, ಅವರ ಹೃದಯದಲ್ಲಿ ಏನಿತ್ತೆಂಬದನ್ನು ತಿಳಿದವನಾಗಿ ಹೇಬೆಲನು ನಂಬಿಕೆಯಿಂದ ಅರ್ಪಿಸಿದ ಯಜ್ಞವನ್ನು ಸ್ವೀಕರಿಸಿದನು. ಆದರೆ ಕಾಯಿನನ ಯಜ್ಞವು ಯಾವುದೋ ವಿಧದಲ್ಲಿ ನಂಬಿಕೆಯ ಕೊರತೆಯನ್ನು ಸೂಚಿಸಿದ್ದರಿಂದ ಅದನ್ನು ನಿರಾಕರಿಸಿದನು. (ಆದಿ. 4:4, 5; ಇಬ್ರಿ. 11:4) ಕಾಯಿನನು ಈ ಘಟನೆಯಿಂದ ಪಾಠ ಕಲಿತು ತನ್ನ ಮನೋಭಾವ ಬದಲಾಯಿಸುವ ಬದಲಿಗೆ ತನ್ನ ತಮ್ಮನ ಮೇಲೆ ಕ್ರೋಧಿತನಾದನು.—ಆದಿ. 4:6.
11. ಕಾಯಿನನ ವಂಚಕ ಹೃದಯ ಹೇಗೆ ಬಯಲಾಯಿತು, ಮತ್ತು ಇದರಿಂದ ನಮಗೆ ಯಾವ ಪಾಠವಿದೆ?
11 ಯೆಹೋವನು ಕಾಯಿನನ ಈ ಅಪಾಯಕಾರಿ ಮನೋಭಾವವನ್ನು ಗಮನಿಸಿ ಆ ಕುರಿತು ಅವನೊಂದಿಗೆ ಮಾತಾಡುತ್ತಾ, ಅವನು ಒಳ್ಳೇ ಕೆಲಸ ಮಾಡಿದರೆ ಅವನ ತಲೆ ಎತ್ತಲ್ಪಡುವುದೆಂದು ಹೇಳಿದನು. ವಿಷಾದಕರವಾಗಿ ಕಾಯಿನನು ಸೃಷ್ಟಿಕರ್ತನ ಹಿತೋಪದೇಶವನ್ನು ನಿರ್ಲಕ್ಷಿಸಿ ತನ್ನ ತಮ್ಮನನ್ನು ಕೊಂದನು. “ನಿನ್ನ ತಮ್ಮನಾದ ಹೇಬೆಲನು ಎಲ್ಲಿ” ಎಂದು ದೇವರು ಕಾಯಿನನನ್ನು ಪ್ರಶ್ನಿಸಿದಾಗ ಅವನು, “ನಾನರಿಯೆ; ನನ್ನ ತಮ್ಮನನ್ನು ಕಾಯುವವನು ನಾನೋ” ಎಂದು ಅಗೌರವಯುತವಾಗಿ ಉತ್ತರಿಸಿದನು. ಈ ಎದುರುತ್ತರದಿಂದ ಅವನ ಹೃದಯದಲ್ಲಿದ್ದ ಹುಳುಕು ಇನ್ನಷ್ಟು ಬಯಲಾಯಿತು. (ಆದಿ. 4:7-9) ಹೃದಯ ಎಷ್ಟು ವಂಚಕವಾಗಿರಬಹುದಲ್ಲವೇ? ಅದು, ದೇವರು ನೇರವಾಗಿ ಕೊಡುವ ಸಲಹೆಯನ್ನೂ ಕಡೆಗಣಿಸಬಲ್ಲದು. (ಯೆರೆ. 17:9) ಹಾಗಾಗಿ ನಾವು ಇಂಥ ಘಟನೆಗಳಿಂದ ಪಾಠಕಲಿತು ತಪ್ಪಾದ ಆಲೋಚನೆ ಮತ್ತು ಆಶೆಗಳನ್ನು ಕೂಡಲೇ ತಳ್ಳಿಹಾಕೋಣ. (ಯಾಕೋಬ 1:14, 15 ಓದಿ.) ಶಾಸ್ತ್ರಾಧಾರಿತ ಸಲಹೆಯು ನಮಗೆ ಸಿಗುವಾಗ ಅದಕ್ಕೆ ಕೃತಜ್ಞರಾಗಿ ಅದನ್ನು ದೇವರ ಪ್ರೀತಿಯ ದ್ಯೋತಕವಾಗಿ ಪರಿಗಣಿಸೋಣ.
ಯಾವ ಪಾಪವೂ ಗುಪ್ತವಾಗಿರಲು ಸಾಧ್ಯವಿಲ್ಲ
12. ಒಬ್ಬ ವ್ಯಕ್ತಿ ತಪ್ಪು ಮಾಡುವಾಗ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆ?
12 ತಪ್ಪು ಮಾಡುವಾಗ ಯಾರೂ ನೋಡದಿದ್ದರೆ ನುಣುಚಿಕೊಳ್ಳಬಹುದು ಎಂದು ಕೆಲವರೆಣಿಸುತ್ತಾರೆ. (ಕೀರ್ತ. 19:12) ನಿಜವೇನೆಂದರೆ ಯಾವುದೇ ಪಾಪವನ್ನು ಗುಪ್ತವಾಗಿಡಲು ಸಾಧ್ಯವಿಲ್ಲ. ಯಾಕೆಂದರೆ “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ.” (ಇಬ್ರಿ. 4:13) ಯೆಹೋವನು ನಮ್ಮ ಅಂತರಾಳದ ಇರಾದೆಗಳನ್ನು ಪರಿಶೋಧಿಸುವ ನ್ಯಾಯಧೀಶನಾಗಿದ್ದಾನೆ ಮತ್ತು ಯಾವುದೇ ತಪ್ಪುಕೃತ್ಯಕ್ಕೆ ಆತನು ಪರಿಪೂರ್ಣ ನ್ಯಾಯದಿಂದ ಪ್ರತಿಕ್ರಿಯಿಸುತ್ತಾನೆ. ಆತನು “ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು.” ಆದರೆ ಪಶ್ಚಾತ್ತಾಪಪಡದೆ ‘ಬೇಕೆಂದು ಪಾಪಮಾಡುವವರನ್ನು’ ಅಥವಾ ಕುಟಿಲ ಯೋಜನೆಮಾಡುವವರನ್ನು “ಶಿಕ್ಷಿಸದೆ ಬಿಡದವನು” ಆಗಿದ್ದಾನೆ. (ವಿಮೋ. 34:6, 7; ಇಬ್ರಿ. 10:26) ಇದು, ಆಕಾನ ಮತ್ತು ಅನನೀಯ ಸಪ್ಫೈರಳೊಂದಿಗೆ ಯೆಹೋವನು ವ್ಯವಹರಿಸಿದ ರೀತಿಯಿಂದ ವ್ಯಕ್ತವಾಯಿತು.
13. ಆಕಾನನ ಪಾಪಕ್ಕೆ ಕೆಟ್ಟ ಯೋಚನೆಗಳು ಹೇಗೆ ಕಾರಣವಾದವು?
13 ದೇವರ ಆಜ್ಞೆಯನ್ನು ಉಲ್ಲಂಘಿಸುತ್ತಾ ಆಕಾನನು ಯೆರಿಕೋ ಪಟ್ಟಣದ ಕೊಳ್ಳೆಯನ್ನು ತಂದು ತನ್ನ ಗುಡಾರದಲ್ಲಿ ಬಚ್ಚಿಟ್ಟನು. ಅವನ ಕುಟುಂಬ ಸಹ ಇದರಲ್ಲಿ ಶಾಮೀಲಾಗಿದ್ದಿರಬಹುದು. ಅವನ ಪಾಪವು ಬಯಲಾದಾಗ, ಅದು ಎಷ್ಟು ಘೋರವಾಗಿತ್ತೆಂಬ ಅರಿವು ತನಗಾಗಿದೆ ಎಂಬುದನ್ನು ತೋರಿಸುತ್ತಾ ಅವನು ಹೇಳಿದ್ದು: “ನಾನು ... ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.” (ಯೆಹೋ. 7:20) ಕಾಯಿನನಂತೆ ಆಕಾನನ ಹೃದಯವೂ ಕೆಡಲಾರಂಭಿಸಿತ್ತು. ಆಕಾನನಲ್ಲಿದ್ದ ಲೋಭವೇ ಅವನನ್ನು ವಂಚಕನಾಗುವಂತೆ ಮಾಡಿತು. ಯೆರಿಕೋವಿನ ಕೊಳ್ಳೆಯು ಯೆಹೋವನಿಗೆ ಸೇರಿದ್ದರಿಂದ ಆಕಾನನು ಒಂದರ್ಥದಲ್ಲಿ ಯೆಹೋವನಿಂದ ಕದ್ದನು. ಇದಕ್ಕಾಗಿ ಅವನು ಮತ್ತು ಅವನ ಕುಟುಂಬವು ಪ್ರಾಣ ಕಳಕೊಳ್ಳಬೇಕಾಯಿತು.—ಯೆಹೋ. 7:25.
14, 15. ಅನನೀಯ ಮತ್ತು ಸಪ್ಫೈರ ದೇವರ ಅನುಗ್ರಹವನ್ನು ಏಕೆ ಕಳೆದುಕೊಂಡರು, ಮತ್ತು ಇದರಿಂದ ನಮಗೇನು ಪಾಠ?
14 ಅನನೀಯ ಮತ್ತು ಅವನ ಹೆಂಡತಿ ಸಪ್ಫೈರ, ಯೆರೂಸಲೇಮಿನಲ್ಲಿದ್ದ ಆರಂಭದ ಕ್ರೈಸ್ತ ಸಭೆಯ ಸದಸ್ಯರಾಗಿದ್ದರು. ಸಾ.ಶ. 33ರ ಪಂಚಾಶತ್ತಮದ ನಂತರ, ದೂರದ ಊರುಗಳಿಂದ ಯೆರೂಸಲೇಮಿಗೆ ಬಂದು ವಿಶ್ವಾಸಿಗಳಾದವರ ಭೌತಿಕ ಅಗತ್ಯಗಳನ್ನು ನೋಡಿಕೊಳ್ಳಲಿಕ್ಕಾಗಿ ನಿಧಿ ಸಂಗ್ರಹಿಸುವ ಏರ್ಪಾಡು ಮಾಡಲಾಯಿತು. ಸ್ವಯಂ ಪ್ರೇರಿತ ಕಾಣಿಕೆಗಳಿಂದ ಈ ನಿಧಿಗೆ ಹಣ ಬರುತ್ತಿತ್ತು. ಅನನೀಯನು ತನ್ನ ಜಮೀನನ್ನು ಮಾರಿ, ಬಂದ ಹಣದಲ್ಲಿ ಒಂದಿಷ್ಟನ್ನು ಕಾಣಿಕೆಯಾಗಿ ಕೊಟ್ಟನು. ಆದಾಗ್ಯೂ, ಅವನು ಸಿಕ್ಕಿದ ಪೂರ್ತಿ ಹಣವನ್ನು ದಾನ ಮಾಡಿದವನಂತೆ ನಟಿಸಿದನು ಮತ್ತು ಇದು ಅವನ ಹೆಂಡತಿಗೆ ತಿಳಿದಿತ್ತು. ಸಭೆಯಲ್ಲಿ ವಿಶೇಷ ಗೌರವ ಗಳಿಸುವುದೇ ಈ ದಂಪತಿಯ ಆಸೆಯಾಗಿತ್ತೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಕೃತ್ಯ ಬೇರೆಯವರ ಕಣ್ಣಿಗೆ ಮಣ್ಣೆರಚುವಂತಿತ್ತು. ಅದ್ಭುತಕರ ರೀತಿಯಲ್ಲಿ ಯೆಹೋವನು ಅಪೊಸ್ತಲ ಪೇತ್ರನಿಗೆ ಅವರು ಮಾಡಿದ ಮೋಸವನ್ನು ತಿಳಿಯಪಡಿಸಿದನು ಮತ್ತು ಪೇತ್ರನು ಅದರ ಬಗ್ಗೆ ಅನನೀಯನನ್ನು ವಿಚಾರಿಸಿದನು. ಆ ಕೂಡಲೇ ಅನನೀಯನು ಬಿದ್ದು ಪ್ರಾಣಬಿಟ್ಟನು. ಸ್ವಲ್ಪದರಲ್ಲೇ ಸಪ್ಫೈರಳೂ ಸತ್ತಳು.—ಅ. ಕೃ. 5:1-11.
15 ಅನನೀಯ ಮತ್ತು ಸಪ್ಫೈರರು ಮಾಡಿದ ತಪ್ಪು ಪೂರ್ವಾಲೋಚನೆಯಿಲ್ಲದೇ ಥಟ್ಟೆಂದು ಮಾಡಿದ ತಪ್ಪಾಗಿರಲಿಲ್ಲ. ಅವರು ಅಪೊಸ್ತಲರನ್ನು ವಂಚಿಸಲೆಂದು ಸಂಚುಹೂಡಿ ಸುಳ್ಳಾಡಿದರು. ಇನ್ನೂ ಕೆಟ್ಟ ಸಂಗತಿಯೇನೆಂದರೆ ಅವರು ‘ಪವಿತ್ರಾತ್ಮವನ್ನೂ ದೇವರನ್ನೂ ವಂಚಿಸಲು’ ಪ್ರಯತ್ನಿಸಿದರು. ಇದಕ್ಕೆ ಯೆಹೋವನ ಪ್ರತಿಕ್ರಿಯೆಯು, ಆತನು ಕ್ರೈಸ್ತ ಸಭೆಯನ್ನು ಕಪಟಿಗಳಿಂದ ಸಂರಕ್ಷಿಸಲು ಸದಾ ಸಿದ್ಧನಿದ್ದಾನೆಂಬದನ್ನು ಸ್ಪಷ್ಟಪಡಿಸುತ್ತದೆ. “ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವದು ಭಯಂಕರವಾದದ್ದು” ಎಂಬುದು ಎಷ್ಟು ಸತ್ಯ!—ಇಬ್ರಿ. 10:31.
ಯಾವಾಗಲೂ ಸಮಗ್ರತೆ ಕಾಪಾಡಿಕೊಳ್ಳಿರಿ
16. (ಎ) ದೇವಜನರನ್ನು ಭ್ರಷ್ಟಗೊಳಿಸಲು ಸೈತಾನನು ಹೇಗೆ ಪ್ರಯತ್ನಿಸುತ್ತಿದ್ದಾನೆ? (ಬಿ) ನೀವು ವಾಸಿಸುವ ಪ್ರದೇಶದ ಜನರನ್ನು ಸೈತಾನನು ಯಾವ ವಿಧಾನಗಳ ಮೂಲಕ ಭ್ರಷ್ಟಗೊಳಿಸುತ್ತಿದ್ದಾನೆ?
16 ಸೈತಾನನು, ನಾವು ಭ್ರಷ್ಟಗೊಳ್ಳುವಂತೆ ಮತ್ತು ನಾವು ಯೆಹೋವನ ಅನುಗ್ರಹವನ್ನು ಕಳೆದುಕೊಳ್ಳುವಂತೆ ತನ್ನಿಂದ ಸಾಧ್ಯವಿರುವುದೆಲ್ಲವನ್ನು ಮಾಡುತ್ತಾನೆ. (ಪ್ರಕ. 12:12, 17) ಲೈಂಗಿಕ ಅನೈತಿಕತೆ ಮತ್ತು ಹಿಂಸಾಚಾರದ ಗೀಳು ಹಿಡಿದಿರುವ ಈ ಲೋಕದಲ್ಲಿ ಪಿಶಾಚನ ಕೈವಾಡ ಸ್ಪಷ್ಟವಾಗಿ ತೋರಿಬರುತ್ತದೆ. ಅಶ್ಲೀಲ ಚಿತ್ರಣಗಳು ಇಂದು ಕಂಪ್ಯೂಟರ್ ಮತ್ತಿತರ ಇಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಬೆರಳತುದಿಯಲ್ಲೇ ಲಭ್ಯವಿವೆ. ಸೈತಾನನ ಆಕ್ರಮಣಗಳಿಗೆ ನಾವೆಂದೂ ಬಲಿಬೀಳದಿರೋಣ. ಅದಕ್ಕೆ ಬದಲಾಗಿ ಕೀರ್ತನೆಗಾರ ದಾವೀದನ ಅನಿಸಿಕೆಗಳೇ ನಮ್ಮದಾಗಿರಲಿ. ಅವನು ಬರೆದದ್ದು: “ಸನ್ಮಾರ್ಗವನ್ನು ಲಕ್ಷಿಸಿ ನಡೆಯುವೆನು; ... ಮನೆಯೊಳಗೂ ಯಥಾರ್ಥಹೃದಯದಿಂದಲೇ ಪ್ರವರ್ತಿಸುವೆನು.”—ಕೀರ್ತ. 101:2.
17. (ಎ) ಯೆಹೋವನು ಮರೆಯಲ್ಲಿರುವ ಪಾಪಗಳನ್ನು ಏಕೆ ಬಯಲಿಗೆಳೆಯುತ್ತಾನೆ? (ಬಿ) ನಾವು ಯಾವ ದೃಢಸಂಕಲ್ಪ ಮಾಡಬೇಕು?
17 ಯೆಹೋವನು ಹಿಂದೆ ಕೆಲವೊಮ್ಮೆ ಮಾಡಿದಂತೆ ಇಂದು ಕೂಡ ಗಂಭೀರ ಪಾಪ ಮತ್ತು ವಂಚನಾತ್ಮಕ ನಡತೆಯನ್ನು ಅದ್ಭುತಕರವಾಗಿ ಬಯಲುಪಡಿಸುವುದಿಲ್ಲ. ಆದರೂ ಆತನು ಎಲ್ಲರನ್ನು ನೋಡುತ್ತಾನೆ. ತನ್ನದೇ ಆದ ಸಮಯದಲ್ಲಿ ಹಾಗೂ ವಿಧದಲ್ಲಿ ಮರೆಯಲ್ಲಿದ್ದದ್ದನ್ನು ಬಹಿರಂಗಗೊಳಿಸುವನು. ಪೌಲನು ಹೇಳಿದ್ದು: “ಕೆಲವರ ಪಾಪಕೃತ್ಯಗಳು ಪ್ರಸಿದ್ಧವಾಗಿದ್ದು ಅವರು ಇಂಥವರೆಂದು ಮೊದಲೇ ತಿಳಿಯಪಡಿಸುತ್ತವೆ; ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ.” (1 ತಿಮೊ. 5:24) ಯೆಹೋವನು ದುಷ್ಕೃತ್ಯಗಳನ್ನು ಬಯಲಿಗೆಳೆಯುವ ಮುಖ್ಯ ಕಾರಣವು ಆತನ ಪ್ರೀತಿಯಾಗಿದೆ. ಆತನು ಸಭೆಯನ್ನು ಪ್ರೀತಿಸುತ್ತಾನೆ ಮತ್ತು ಅದರ ಶುದ್ಧತೆಯನ್ನು ಕಾಪಾಡಲು ಬಯಸುತ್ತಾನೆ. ಅಲ್ಲದೇ, ಹಿಂದೆ ಪಾಪ ಮಾಡಿ ಈಗ ನಿಜವಾಗಿಯೂ ಪಶ್ಚಾತ್ತಾಪಪಡುವವರನ್ನು ದೇವರು ಕರುಣಿಸುತ್ತಾನೆ. (ಜ್ಞಾನೋ. 28:13) ಆದ್ದರಿಂದ ದೇವರ ಕಡೆಗೆ ಸಂಪೂರ್ಣ ಹೃದಯವನ್ನು ಕಾಪಾಡಿಕೊಳ್ಳಲು ಮತ್ತು ಎಲ್ಲ ಭ್ರಷ್ಟ ಪ್ರಭಾವಗಳನ್ನು ಪ್ರತಿರೋಧಿಸಲು ಪ್ರಯಾಸಪಡೋಣ.
ಸಂಪೂರ್ಣ ಹೃದಯ ಕಾಪಾಡಿಕೊಳ್ಳಿ
18. ರಾಜ ದಾವೀದನು, ತನ್ನ ಮಗನಿಗೆ ದೇವರ ಬಗ್ಗೆ ಯಾವ ಭಾವನೆಯಿರಬೇಕೆಂದು ಬಯಸಿದನು?
18 ರಾಜ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ಹೇಳಿದ್ದು: “ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು; ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ.” (1 ಪೂರ್ವ. 28:9) ತನ್ನ ಮಗನು, ದೇವರೊಬ್ಬನಿದ್ದಾನೆಂದು ನಂಬುವುದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕೆಂದು ದಾವೀದನು ಬಯಸಿದನು. ಯೆಹೋವನಿಗೆ ತನ್ನ ಸೇವಕರಲ್ಲಿರುವ ಗಾಢಾಸಕ್ತಿಯನ್ನು ಸೊಲೊಮೋನನು ಗಣ್ಯಮಾಡಬೇಕೆಂಬದು ಅವನ ಇಚ್ಛೆಯಾಗಿತ್ತು. ಯೆಹೋವನು ತೋರಿಸುವ ಗಾಢಾಸಕ್ತಿಯನ್ನು ನೀವು ಕೂಡ ಗಣ್ಯಮಾಡುತ್ತೀರೋ?
19, 20. ಕೀರ್ತನೆ 19:7-11ಕ್ಕನುಸಾರ ದೇವರ ಸಮೀಪಕ್ಕೆ ಬರಲು ದಾವೀದನಿಗೆ ಯಾವುದು ಸಹಾಯ ಮಾಡಿತು, ಮತ್ತು ನಾವು ದಾವೀದನನ್ನು ಹೇಗೆ ಅನುಕರಿಸಬಲ್ಲೆವು?
19 ಯೋಗ್ಯ ಪ್ರವೃತ್ತಿಯುಳ್ಳ ಜನರು ತನ್ನ ಕಡೆಗೆ ಸೆಳೆಯಲ್ಪಡುವರು ಮತ್ತು ತನ್ನ ಅದ್ಭುತಕರ ಗುಣಗಳ ಕುರಿತ ಜ್ಞಾನ ಪಡೆದು ತನಗೆ ಆಪ್ತರಾಗುವರೆಂದು ಯೆಹೋವನಿಗೆ ತಿಳಿದಿದೆ. ಆದ್ದರಿಂದ ತನ್ನನ್ನು ತಿಳಿದುಕೊಳ್ಳುವಂತೆ ಮತ್ತು ತನ್ನ ಅಸದೃಶ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳುವಂತೆ ಯೆಹೋವನು ಬಯಸುತ್ತಾನೆ. ಇದನ್ನು ನಾವು ಹೇಗೆ ಮಾಡಬಲ್ಲೆವು? ಆತನ ವಾಕ್ಯವನ್ನು ಅಧ್ಯಯನ ಮಾಡುವ ಮತ್ತು ಆತನ ಆಶೀರ್ವಾದಗಳನ್ನು ನಮ್ಮ ಜೀವನದಲ್ಲಿ ಅನುಭವಿಸುವ ಮೂಲಕವೇ.—ಜ್ಞಾನೋ. 10:22; ಯೋಹಾ. 14:9.
20 ದೇವರ ವಾಕ್ಯವನ್ನು ಕೃತಜ್ಞತಾಭಾವದಿಂದ ಮತ್ತು ಪ್ರಾರ್ಥನಾಪೂರ್ವಕವಾಗಿ ಓದುತ್ತೀರೋ? ಬೈಬಲಿನ ಮೂಲತತ್ತ್ವಗಳಿಗನುಸಾರ ಜೀವಿಸುವ ಮೌಲ್ಯವನ್ನು ಗ್ರಹಿಸುತ್ತೀರೋ? (ಕೀರ್ತನೆ 19:7-11 ಓದಿ.) ಹೀಗೆ ಮಾಡುವಲ್ಲಿ ಯೆಹೋವನಲ್ಲಿನ ನಿಮ್ಮ ನಂಬಿಕೆ ಮತ್ತು ಆತನಿಗಾಗಿರುವ ಪ್ರೀತಿ ಬೆಳೆಯುತ್ತಿರುವುದು. ಆತನು ಇನ್ನೂ ಹೆಚ್ಚು ನಿಮ್ಮ ಸಮೀಪಕ್ಕೆ ಬರುವನು ಮತ್ತು ನಿಮ್ಮ ಕೈಹಿಡಿದು ನಡೆಯುವನು. (ಯೆಶಾ. 42:7; ಯಾಕೋ. 4:8) ಹೌದು, ಜೀವಕ್ಕೆ ನಡೆಸುವ ಇಕ್ಕಟ್ಟಾದ ದಾರಿಯಲ್ಲಿ ನೀವು ನಡೆಯುತ್ತಿರುವಾಗ ಆತನು ನಿಮ್ಮನ್ನು ಹರಸುವ ಮೂಲಕ ಮತ್ತು ನಿಮ್ಮನ್ನು ಆಧ್ಯಾತ್ಮಿಕವಾಗಿ ಸಂರಕ್ಷಿಸುವ ಮೂಲಕ ನಿಮ್ಮ ಮೇಲಿರುವ ಪ್ರೀತಿಯನ್ನು ಸಾಬೀತುಪಡಿಸುವನು.—ಕೀರ್ತ. 91:1, 2; ಮತ್ತಾ. 7:13, 14.
ನಿಮ್ಮ ಉತ್ತರವೇನು?
• ಯೆಹೋವನು ನಮ್ಮನ್ನು ಪರಿಶೋಧಿಸುವುದೇಕೆ?
• ಕೆಲವರು ದೇವರ ವೈರಿಗಳಾಗುವಂತೆ ಯಾವುದು ಕಾರಣವಾಯಿತು?
• ಯೆಹೋವನು ನಮಗೆ ನೈಜನಾಗಿದ್ದಾನೆಂದು ನಾವು ಹೇಗೆ ತೋರಿಸಬಲ್ಲೆವು?
• ದೇವರ ಕಡೆಗೆ ಸಂಪೂರ್ಣ ಹೃದಯವನ್ನು ನಾವು ಹೇಗೆ ಕಾಪಾಡಿಕೊಳ್ಳಬಲ್ಲೆವು?
[ಪುಟ 4ರಲ್ಲಿರುವ ಚಿತ್ರ]
ಕಣ್ಣಲ್ಲಿ ಕಣ್ಣಿಟ್ಟು ನೋಡುವ ತಂದೆಯಂತೆ ಯೆಹೋವನು ನಮ್ಮ ಕಾಳಜಿವಹಿಸುವುದು ಹೇಗೆ?
[ಪುಟ 5ರಲ್ಲಿರುವ ಚಿತ್ರ]
ಅನನೀಯನಿಂದ ನಾವು ಯಾವ ಪಾಠ ಕಲಿಯುತ್ತೇವೆ?
[ಪುಟ 6ರಲ್ಲಿರುವ ಚಿತ್ರ]
ಸಂಪೂರ್ಣ ಹೃದಯದಿಂದ ಯೆಹೋವನನ್ನು ಸೇವಿಸುತ್ತಿರಲು ನಮಗೆ ಯಾವುದು ಸಹಾಯ ಮಾಡುವುದು?