‘ಕೂಲಂಕಷ ಸಾಕ್ಷಿ ಕೊಡಿ’—ಅಪಾರ್ಟ್ಮೆಂಟ್ಗಳಲ್ಲಿ ಸಾರುವ ಮೂಲಕ
1. ‘ಕೂಲಂಕಷ ಸಾಕ್ಷಿ ಕೊಡುವುದರಲ್ಲಿ’ ಯಾವುದು ಸಹ ಒಳಗೂಡಿದೆ?
1 “ಕೂಲಂಕಷ ಸಾಕ್ಷಿ” ಕೊಡಬೇಕೆನ್ನುವುದೇ ಅಪೊಸ್ತಲ ಪೌಲನ ಇಚ್ಛೆ ಆಗಿತ್ತು. ನಮ್ಮ ಆಸೆಯೂ ಅದೇ. (ಅ. ಕಾ. 20:24) ಹಾಗಾಗಿಯೇ ನಮ್ಮ ಸೇವಾಕ್ಷೇತ್ರಗಳಲ್ಲಿ ಆದಷ್ಟು ಜಾಸ್ತಿ ಜನರಿಗೆ ಸುವಾರ್ತೆ ಮುಟ್ಟಿಸಲು ತುಂಬ ಪರಿಶ್ರಮ ಹಾಕುತ್ತಿದ್ದೀವಿ. ಇದರಲ್ಲಿ ಅಪಾರ್ಟ್ಮೆಂಟ್ಗಳು ಸಹ ಸೇರಿವೆ. ಅಲ್ಲಿ ಸುವಾರ್ತೆ ಸಾರೋದು ಅಷ್ಟು ಸುಲಭವಲ್ಲ. ಆದರೆ ಅಪಾರ್ಟ್ಮೆಂಟ್ಗಳಲ್ಲಿ ತುಂಬ ತುಂಬ ಜನರು ವಾಸಿಸುತ್ತಿರುವುದರಿಂದ ಆದಷ್ಟು ಜನರಿಗೆ ಸುವಾರ್ತೆ ತಲುಪಿಸಲು ಒಳ್ಳೇ ಅವಕಾಶ ಸಿಗುತ್ತೆ.
2. ಅಪಾರ್ಟ್ಮೆಂಟ್ಗಳಲ್ಲಿ ಸಾರುವಾಗ ವಿವೇಚನೆ, ಜಾಣ್ಮೆ ತೋರಿಸಬೇಕು ಏಕೆ?
2 ಕೊಲೆ, ಕೊಳ್ಳೆ, ದರೋಡೆ ಜಾಸ್ತಿ ಆಗುತ್ತಿರುವುದರಿಂದ ಹೆಚ್ಚಿನ ಅಪಾರ್ಟ್ಮೆಂಟ್ಗಳನ್ನು ಭದ್ರಪಡಿಸಲಾಗಿದೆ. ಹೆಚ್ಚಿನ ಕಡೆ ಸೆಕ್ಯೂರಿಟಿಗಳನ್ನು ನೇಮಿಸಲಾಗಿದೆ ಅಥವಾ ಸಿಸಿ ಕ್ಯಾಮರ ಅಳವಡಿಸಲಾಗಿದೆ. (2 ತಿಮೊ. 3:1, 2) ಕೆಲವೊಂದು ಅಪಾರ್ಟ್ಮೆಂಟ್ಗಳಲ್ಲಿ ಅಪರಿಚಿತ ವ್ಯಕ್ತಿಗಳನ್ನು ಒಳಗೆ ಸೇರಿಸಬಾರದು ಅನ್ನೋ ನಿಯಮವಿರುತ್ತೆ. ಒಂದುವೇಳೆ ಮನೆಯವರು ಯಾರಾದರೂ ನಮ್ಮ ಬಗ್ಗೆ ದೂರು ನೀಡಿದರೆ ಸೆಕ್ರಿಟರಿ/ಸೆಕ್ಯೂರಿಟಿ ನಮ್ಮನ್ನು ಹೋಗುವಂತೆ ಹೇಳಬಹುದು. ಹಾಗಾಗಿ ನಾವು ವಿವೇಚನೆ ಬಳಸಿ ಜಾಣ್ಮೆಯಿಂದ ನಡೆದುಕೊಳ್ಳುವುದು ಬಹುಮುಖ್ಯ.
3. ಅಪಾರ್ಟ್ಮೆಂಟ್ಗಳಲ್ಲಿ ಯಾವ ಸಮಯದಲ್ಲಿ ಸಾರುವುದು ಉತ್ತಮ? ಏಕೆ?
3 ಯಾವಾಗ ಸಾರಬೇಕು: ಜನರು ತಮ್ಮ ಅಪಾರ್ಟ್ಮೆಂಟ್ಗಳಲ್ಲಿ ಇರುವ ಸಮಯದಲ್ಲಿ ಹೋಗಿ ಸಾರಬೇಕು. ಹೆಚ್ಚಾಗಿ ಜನರು ಸಂಜೆ ಹೊತ್ತಿನಲ್ಲಿ ಹಾಗೂ ಶನಿವಾರ, ಭಾನುವಾರ ಮನೆಯಲ್ಲಿರುತ್ತಾರೆ. ಆ ಸಮಯದಲ್ಲಿ ಸಾರುವುದರಿಂದ ತುಂಬ ಪ್ರಯೋಜನ ಸಿಕ್ಕಿದೆ ಅನ್ನೋದು ಅನೇಕ ಪ್ರಚಾರಕರ ಅನುಭವ. ಹೆಚ್ಚಿನ ಜನರು ಹೊರಗೆ ಹೋಗಿರುವ ಸಮಯದಲ್ಲಿ ನಾವು ಸಾರಲು ಹೋಗುವುದಾದರೆ ನಮ್ಮ ಬಗ್ಗೆ ಅನುಮಾನ ಬರಬಹುದು. ಬೆಳಿಗ್ಗೆನೇ ಹೋಗುವುದು ಅದರಲ್ಲೂ ವಾರಾಂತ್ಯಗಳಲ್ಲಿ ಬೆಳಬೆಳಿಗ್ಗೆನೇ ಹೋದರೆ ಮನೆಯವರು ನಮ್ಮ ಮೇಲೆ ದೂರು ನೀಡಬಹುದು.
4, 5. ಗೇಟ್ಬೀಗ ಹಾಕಿರುವ ಅಪಾರ್ಟ್ಮೆಂಟ್ಗಳಲ್ಲಿ ನಾವು ಹೇಗೆ ಪ್ರವೇಶ ಪಡೆಯಬಹುದು?
4 ಪ್ರವೇಶ: ಸುವಾರ್ತೆ ಸಾರುವ ಮುನ್ನ ಅಪಾರ್ಟ್ಮೆಂಟಿನ ಸೆಕ್ರಿಟರಿ ಅಥವಾ ಯಾವ ಸಿಬ್ಬಂದಿಯನ್ನೂ ಸಂಪರ್ಕಿಸಬಾರದು. ಒಂದುವೇಳೆ ಗೇಟ್ಬೀಗ ಹಾಕಿದ್ದು ಹೊರಗೆ ಇಂಟರ್ಕಾಮ್ ಫೋನ್ ಇಟ್ಟಿರುವಲ್ಲಿ ಅದರ ಮೂಲಕ ಒಬ್ಬ ಮನೆಯವರ ಹತ್ರ ಮಾತಾಡಿ ಒಳಗೆ ಬಂದು ಮಾತಾಡಬಹುದಾ ಅಂತ ಕೇಳಿ. ಅವರ ಹತ್ತಿರ ಮಾತಾಡಿದ ಬಳಿಕ ಬೇಕಿದ್ದರೆ ಪಕ್ಕದ ಮನೆಯವರ ಹತ್ತಿರ ಮಾತಾಡಬಹುದು. ಕೆಲವೊಮ್ಮೆ ಮೊದಲ ವ್ಯಕ್ತಿ ಹತ್ತಿರ ಮಾತಾಡಿದ ಬಳಿಕ ಮತ್ತೆ ಹೊರಗೆ ಬಂದು ಫೋನ್ ಮೂಲಕ ಪಕ್ಕದ ಮನೆಯವರ ಅನುಮತಿ ಕೇಳಿ ಆಮೇಲೆ ಹೋಗಿ ಮಾತಾಡುವುದು ಒಳ್ಳೇದು. ಒಂದೇ ದಿನದಲ್ಲಿ ಈ ರೀತಿ ಎಷ್ಟು ವ್ಯಕ್ತಿಗಳ ಜೊತೆ ಮಾತಾಡುತ್ತೇವೆ ಅನ್ನುವುದನ್ನು ಜಾಣ್ಮೆಯಿಂದ ನಿರ್ಣಯಿಸಬೇಕು.
5 ನೀವು ಬಂದಿರುವ ಉದ್ದೇಶವನ್ನು ಫೋನ್ನಲ್ಲೇ ತಿಳಿಸುವಂತೆ ಕೆಲವರು ಕೇಳಬಹುದು. ಆಗ ಸ್ನೇಹಭಾವದಿಂದ ನಿಮ್ಮ ಪರಿಚಯ ಮಾಡಿಕೊಳ್ಳಿ. ಒಂದುವೇಳೆ ಮನೆಯವರ ಹೆಸರು ಅಲ್ಲೆಲ್ಲಾದರೂ ಬರೆದಿರುವಲ್ಲಿ ಅವರ ಹೆಸರನ್ನು ಉಪಯೋಗಿಸಿ ಮಾತಾಡಿ. ಚುಟುಕಾಗಿ ಬಂದ ವಿಷಯವನ್ನು ತಿಳಿಸಿ.
6. ಅಪಾರ್ಟ್ಮೆಂಟ್ಗಳಲ್ಲಿ ಸೆಕ್ಯೂರಿಟಿಗಳಿದ್ದರೆ ಏನು ಮಾಡಬೇಕು?
6 ಒಳಗೆ ಹೋಗಲು ಸೆಕ್ಯೂರಿಟಿ ಅನುಮತಿ ಕೊಡದಿದ್ದಲ್ಲಿ ಅವರಿಗೇ ಸಾಕ್ಷಿಕೊಡಬಹುದು. ಕೆಲವೊಬ್ರು ಸೆಕ್ಯೂರಿಟಿಗಳು ನಮ್ಮ ಸಾಹಿತ್ಯ ಓದಲು ಇಷ್ಟಪಡುತ್ತಾರೆ. ಬೈಬಲ್ ಅಧ್ಯಯನ ಆರಂಭಿಸುವ ಅವಕಾಶ ಸಹ ಸಿಗುತ್ತೆ. ಒಂದುವೇಳೆ ಆಸಕ್ತಿ ತೋರಿಸಿದ ಒಬ್ಬ ಮನೆಯವರ ಹತ್ತಿರ ಮಾತಾಡಲು ಸೆಕ್ಯೂರಿಟಿ ಅನುಮತಿ ಕೊಡುವಲ್ಲಿ ಅವರ ಬಳಿ ಮಾತ್ರ ಮಾತಾಡಿ ಬನ್ನಿ. ಬೇರೆ ಮನೆಗಳಿಗೆ ಹೋಗದಿರುವುದು ಒಳ್ಳೇದು.
7. ಅಪಾರ್ಟ್ಮೆಂಟಿನ ಸಿಬ್ಬಂದಿ ಹತ್ರ ಅನುಮತಿ ಕೇಳುವಾಗ ಏನಂತ ಹೇಳಬಹುದು?
7 ಕೆಲವೊಂದು ಸಲ ಅಪಾರ್ಟ್ಮೆಂಟ್ನ ಸೆಕ್ರಿಟರಿ ಹತ್ತಿರ ಅನುಮತಿ ಕೇಳುವಂತೆ ಸೆಕ್ಯೂರಿಟಿಗಳು ಹೇಳಬಹುದು. ಹಾಗೆ ಸೆಕ್ರಿಟರಿಯನ್ನು ಭೇಟಿಮಾಡುವಾಗ ಹೀಗೆ ಹೇಳಿ: “ನನ್ನ ಹೆಸರು ____________________________. ನಾವು ಯೆಹೋವನ ಸಾಕ್ಷಿಗಳು. ನಮ್ಮದೊಂದು ಅಂತಾರಾಷ್ಟ್ರೀಯ ಸಂಸ್ಥೆ. ಬದುಕಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳು ಅಂದರೆ ಕುಟುಂಬದಲ್ಲಿ ಸಂತೋಷವಾಗಿರಕ್ಕೆ ಏನು ಮಾಡಬೇಕು, ಮಕ್ಕಳಿಗೆ ಜವಾಬ್ದಾರಿ ಕಲಿಸೋದು ಹೇಗೆ, ಕಷ್ಟಗಳನ್ನು ಎದುರಿಸೋದು ಹೇಗೆ, ಭವಿಷ್ಯದ ಬಗ್ಗೆ ಹೆದರದೆ ಇರುವುದು, ಹೀಗೆ ಅನೇಕ ವಿಷಯಗಳ ಬಗ್ಗೆ ಮಾತಾಡುತ್ತಿದ್ದೀವಿ. [ತಕ್ಕ ಪತ್ರಿಕೆ ಅಥವಾ ಸಾಹಿತ್ಯ ತೋರಿಸಿ.] ನೀವು ಅನುಮತಿ ಕೊಡುವುದಾದರೆ ಕೆಲವು ಮನೆಯವರ ಹತ್ತಿರ ಮಾತಾಡ್ತೀವಿ. ಅವರಿಗೆ ಇಷ್ಟವಿರುವುದಾದರೆ ಉಚಿತವಾಗಿ ಪತ್ರಿಕೆಗಳನ್ನು ಕೊಟ್ಟು ಹೋಗ್ತೀವಿ. ಆದರೆ ನಾವು ಯಾರನ್ನೂ ಬಲವಂತ ಮಾಡುವುದಿಲ್ಲ. ಅವರಿಗೆ ಮಾತಾಡಕ್ಕೆ ಇಷ್ಟವಿಲ್ಲದ್ದಿದ್ದರೆ ಅಥವಾ ಬ್ಯೂಸಿ ಇದ್ದರೆ ನಾವು ಬಂದುಬಿಡುತ್ತೇವೆ.” ಇಲ್ಲಾಂದ್ರೆ ನಾವು ಕೊನೆಯಲ್ಲಿ ಈ ರೀತಿ ಸಹ ಹೇಳಬಹುದು: “ಈ ಒಳ್ಳೇ ವಿಷಯಗಳನ್ನು ಮನೆಯವರ ಹತ್ತಿರ ಹಂಚಿಕೊಳ್ಳಲು ಅನುಮತಿ ಕೊಡುವಂತೆ ಕೇಳಿಕೊಳ್ಳುತ್ತೇವೆ. ಇಷ್ಟಪಡುವವರಿಗೆ ಸಾಹಿತ್ಯವನ್ನು ಉಚಿತವಾಗಿ ಕೊಡುತ್ತೇವೆ.”
8. ಬ್ಯಾಗ್ ವಿಷಯದಲ್ಲಿ ನಾವೇನನ್ನು ಮನಸ್ಸಿನಲ್ಲಿಡಬೇಕು?
8 ಶಿಷ್ಟಾಚಾರ: ದೊಡ್ಡ ದೊಡ್ಡ ಬ್ಯಾಗ್ಗಳನ್ನು ತಗೊಂಡು ಹೋದರೆ ಎಲ್ಲರ ಗಮನ ನಮ್ಮ ಮೇಲಿರುತ್ತೆ. ಹಾಗಾಗಿ ಚಿಕ್ಕ ಬ್ಯಾಗ್ ಅಥವಾ ಬ್ಯಾಗನ್ನೇ ತೆಗೆದುಕೊಂಡು ಹೋಗದಿದ್ದರೂ ಒಳ್ಳೆದೇ. ಕೆಲವು ಪ್ರಚಾರಕರು ಚಿಕ್ಕ ಫೋಲ್ಡರ್ ಅಥವಾ ಕಿಸೆಯಲ್ಲಿ ಪತ್ರಿಕೆಗಳನ್ನು ಇಟ್ಟುಕೊಳ್ಳುತ್ತಾರೆ.
9. ನಾವು ಹೇಗೆ ಸಭ್ಯತೆ ತೋರಿಸಬಹುದು? ಇದು ಪ್ರಾಮುಖ್ಯವೇಕೆ?
9 ಅಪಾರ್ಟ್ಮೆಂಟ್ ಒಳಪ್ರವೇಶಿಸುವ ಮುನ್ನ ಚಪ್ಪಲಿಯನ್ನು ಚೆನ್ನಾಗಿ ಒರೆಸಿ ಮತ್ತು ಒಳಗೆ ಹೋದ ಮೇಲೆ ಗೇಟನ್ನು ಮುಚ್ಚಲು ಮರೆಯಬೇಡಿ. ಈ ರೀತಿ ಸಭ್ಯತೆಯಿಂದ ನಡೆದುಕೊಳ್ಳುವುದರಿಂದ ಈ ವಿಷಯದಲ್ಲಿ ಮನೆಯವರು ನಮ್ಮನ್ನು ದೂರಲು ಅವಕಾಶ ಇರುವುದಿಲ್ಲ. ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆ ಲಿಫ್ಟ್ ಅಥವಾ ನೀವು ಹೋಗಬೇಕಾದ ಮಹಡಿಗೆ ನೇರವಾಗಿ ಹೋಗಿ. ಆ ಕಡೆ ಈ ಕಡೆ ನೋಡುತ್ತಾ ಹೋದರೆ ಜನರಿಗೆ ನಮ್ಮ ಮೇಲೆ ಅನುಮಾನ ಬರಬಹುದು.
10. ಮನೆಯವರಿಗೆ ತೊಂದರೆಯಾಗದಿರಲು ನಾವೇನು ಮಾಡಬೇಕು?
10 ಕೆಲವು ಅಪಾರ್ಟ್ಮೆಂಟ್ಗಳಲ್ಲಿ ಚಿಕ್ಕ ಶಬ್ದ ಕೂಡ ಜೋರಾಗಿ ಕೇಳುತ್ತೆ. ಹಾಗಾಗಿ ತುಂಬ ಜೋರಾಗಿ ಮಾತಾಡದೆ ಮನೆಯವರಿಗೆ ಕೇಳುವಷ್ಟು ಧ್ವನಿಯಲ್ಲಿ ಮಾತಾಡಿ. ನಿಮ್ಮ ಜೊತೆ ಇರುವ ಪ್ರಚಾರಕರ ಹತ್ರ ಮಾತಾಡುವಾಗ್ಲೂ ಮೆಲುಧ್ವನಿಯಲ್ಲಿ ಮಾತಾಡಿ. ಹಾಗಂತ ಏನೋ ಗುಟ್ಟು ಮಾತಾಡೋ ರೀತಿನೂ ಮಾತಾಡಬೇಡಿ. ಕೆಲವು ಪ್ರಚಾರಕರು ಮನೆಯವರಿಗೆ ತೊಂದರೆ ಆಗದಿರಲು ಒಂದರ ನಂತರ ಒಂದು ಮನೆಗೆ ಹೋಗುವ ಬದಲು ಒಂದು ಬದಿಯಲ್ಲಿ ಮಾತಾಡಿದ ಮೇಲೆ ಇನ್ನೊಂದು ಬದಿಯಲ್ಲಿರುವ ಮನೆಗೆ ಹೋಗುತ್ತಾರೆ. ಬಾಗಿಲನ್ನು ಬಡಿಯುವಾಗಲೂ ತುಂಬ ಜೋರಾಗಿ ಬಡಿಯಬೇಡಿ ಮನೆಯವರು ಹೆದರಬಹುದು.
11. ಬಾಗಿಲಕಿಂಡಿ ಇರುವ ಮನೆಯಲ್ಲಿ ನಾವು ಹೇಗೆ ಸಾಕ್ಷಿ ನೀಡಬಹುದು?
11 ಹೊರಗೆ ಇರುವವರನ್ನು ನೋಡಲು ಬಾಗಿಲಲ್ಲಿ ಸಣ್ಣ ತೂತು (ಪೀಪ್ಹೋಲ್) ಇರುವುದಾದರೆ ನಿಮ್ಮ ಹಾಗೂ ನಿಮ್ಮ ಜೊತೆಯಿರುವವರ ಮುಖ ಕಾಣೋ ಹಾಗೆ ನಿಂತುಕೊಳ್ಳಿ. ಯಾರಾದರೂ ಆ ತೂತಿನಿಂದ ನೋಡಿದರೆ ವಂದಿಸಿ ಮಾತಾಡಿ. ಮನೆಯವರು ‘ಯಾರು ನೀವು?’ ಅಂತ ಕೇಳುವುದಾದರೆ ನಿಮ್ಮ ಹಾಗೂ ನಿಮ್ಮ ಜೊತೆ ಇರುವವರ ಹೆಸರು ಹೇಳಿ. ಆಗ ಮನೆಯವರಿಗೆ ಸ್ವಲ್ಪ ಧೈರ್ಯ ಬರಬಹುದು, ಬಾಗಿಲು ತೆರೆಯಬಹುದು. ಬಾಗಿಲು ತೆರೆಯದಿದ್ದರೂ ನಿಮ್ಮ ವಿಷಯ ತಿಳಿಸಿ.
12. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಪತ್ರಿಕೆಗಳನ್ನು ಹೇಗೆ ಇಟ್ಟು ಬರಬೇಕು?
12 ಮನೆಯಲ್ಲಿ ಯಾರೂ ಇಲ್ಲದಿದ್ದರೆ: ಪತ್ರಿಕೆಗಳು ಅಲ್ಲಲ್ಲಿ ಬಿದ್ದುಕೊಂಡಿರುತ್ತೆ ಅನ್ನೋದು ಅನೇಕ ಸಿಬ್ಬಂದಿಗಳ ದೂರು. ಬಾಗಿಲಲ್ಲಿ ಪತ್ರಿಕೆಗಳನ್ನು ಇಟ್ಟು ಬರುವುದಾದರೆ ಅವು ಕೆಳಗೆ ಬೀಳುತ್ತವೆ. ಹಾಗಾಗಿ ಹೋಗುವವರ ಬರುವವರ ಕಣ್ಣಿಗೆ ಕಾಣದ ಹಾಗೆ ಪತ್ರಿಕೆಗಳನ್ನು ಇಟ್ಟು ಬನ್ನಿ.
13. ಮನೆಯವರಿಗೆ ಕೋಪ ಬಂದ್ರೆ ಏನು ಮಾಡಬೇಕು?
13 ಮನೆಯವರಿಗೆ ಕೋಪ ಬಂದ್ರೆ: ಮನೆಯವರಿಗೆ ಕೋಪ ಬಂದು ಸೆಕ್ಯೂರಿಟಿಯನ್ನು ಕರೆಯುವಷ್ಟರ ಮಟ್ಟಿಗೆ ಹೋಗುವುದಾದರೆ ತಕ್ಷಣ ಆ ಮಹಡಿಯಿಂದ ಹೊರಟು ಬೇರೆ ಮಹಡಿಗೆ ಹೋಗಿ. ಮುಂದೆಂದಾದರೂ ಅಲ್ಲಿ ಸುವಾರ್ತೆ ಸಾರಬಹುದು. ಕೆಲವೊಮ್ಮೆ ಆ ಇಡೀ ಕಟ್ಟಡವನ್ನು ಬಿಟ್ಟು ಬರುವುದು ಉತ್ತಮ. ಇದರಿಂದ ಅಪಾರ್ಟ್ಮೆಂಟ್ನ ಸೆಕ್ರಿಟರಿ ಅಥವಾ ಸೆಕ್ಯೂರಿಟಿಯೊಂದಿಗೆ ಸಮಸ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದು. ‘ಈ ಕಡೆ ಬರಲೇಬಾರದು’ ಅಂತ ಮನೆಯವರು ಹೇಳದಿದ್ದರೂ ಆ ಮನೆಯ ಸಂಖ್ಯೆಯನ್ನು do-not-call ಎಂದು ಗುರುತಿಸಿ ನಿಮ್ಮ ಸೇವಾಕ್ಷೇತ್ರ ಕಾರ್ಡ್ ಜೊತೆ ಇಡಿ. ಯಾವಾಗ್ಲೂ ಮಾಡೋ ರೀತಿ ಇಂಥ ಮನೆಗಳನ್ನು ಆಗಾಗ್ಗೆ ಸಂದರ್ಶಿಸಿ ಮನೆಯವರ ಅಭಿಪ್ರಾಯ ಬದಲಾಗಿದೆಯಾ ಅಂತ ಪರಿಶೀಲಿಸುತ್ತಿರಬೇಕು.
14, 15. ಕಟ್ಟಡದ ಉಸ್ತುವಾರಿ ವಹಿಸುವವರು ನಮಗೆ ಹೋಗುವಂತೆ ಹೇಳುವಲ್ಲಿ ಏನು ಮಾಡಬೇಕು?
14 ಹೋಗುವಂತೆ ನಿಮಗೆ ಹೇಳಿದ್ರೆ: ಸುವಾರ್ತೆ ಸಾರುತ್ತಿರುವಾಗ ಸೆಕ್ರಿಟರಿ/ಸಿಬ್ಬಂದಿ/ಸೆಕ್ಯೂರಿಟಿ/ಉಸ್ತುವಾರಿ ವಹಿಸುವವರು ಯಾರಾದರೂ ನಿಮಗೆ ಹೋಗುವಂತೆ ಹೇಳುವಲ್ಲಿ ತಕ್ಷಣ ಹೊರಟುಬಿಡಿ. ಕೇಸು, ಪೊಲೀಸ್ ಅನ್ನುವಷ್ಟರ ಮಟ್ಟಿಗೆ ಸಮಸ್ಯೆ ಬೆಳೆಯದಂತೆ ನೋಡಿಕೊಳ್ಳುವುದು ಒಳ್ಳೇದು. ಕೆಲವೊಮ್ಮೆ ಅವರಿಗೆ ಯೆಹೋವನ ಸಾಕ್ಷಿಗಳ ಮೇಲೆ ಕೋಪ ಇರಲ್ಲ ಬದಲಿಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ ಅಷ್ಟೆ.
15 ಕಟ್ಟಡದ ಉಸ್ತುವಾರಿ ವಹಿಸುವವರು ನಿಮಗೆ ಹೋಗುವಂತೆ ಹೇಳುವುದಾದರೆ ನೀವು ಯಾಕೆ ಬಂದಿದ್ದೀರಿ ಅಂತ ಜಾಣ್ಮೆಯಿಂದ ಹಾಗೂ ಗೌರವದಿಂದ ವಿವರಿಸಬಹುದು. (1 ಪೇತ್ರ 3:15) ಆಗ ಅವರು ಸಾರಲು ಅನುಮತಿಕೊಡುವ ಸಾಧ್ಯತೆಯಿದೆ. ಅನುಮತಿ ಕೊಡದಿದ್ದರೆ ವಾದ ಮಾಡದೆ ಅಲ್ಲಿಂದ ಹೊರಟುಹೋಗಿ. ಅಪಾರ್ಟ್ಮೆಂಟ್ಗಳಲ್ಲಿ ಇರುವವರ ಸಂತೋಷ, ಕಟ್ಟಡದ ಭದ್ರತೆ ಕಾಪಾಡುವುದೇ ಅವರ ಕರ್ತವ್ಯ ಎನ್ನುವುದನ್ನು ನಾವು ಮನಸ್ಸಿನಲ್ಲಿಡಬೇಕು. ಪರಿಸ್ಥಿತಿ ನೋಡಿ ಅವರ ಹತ್ರ ನೀವು ನಿಯತವಾಗಿ ಮನೆಯವರ ಅಂಚೆ ಪೆಟ್ಟಿಗೆಯಲ್ಲಿ ಪತ್ರಿಕೆಗಳನ್ನು ಬಿಟ್ಟುಹೋಗಲು ಅನುಮತಿ ಕೋರಬಹುದು. (ಕೊಲೊ. 4:6) ಇಂಥ ಘಟನೆಗಳು ನಡೆದಾಗ ಸೇವಾ ಮೇಲ್ವಿಚಾರಕರಿಗೆ ತಿಳಿಸಬೇಕು.
16. ಅಪಾರ್ಟ್ಮೆಂಟ್ಗಳಲ್ಲಿ ಸಾಕ್ಷಿ ನೀಡಲು ಸಾಧ್ಯವಾಗದಿದ್ದರೆ ಏನು ಮಾಡಬಹುದು?
16 ಸ್ವಲ್ಪ ಸಮಯದ ನಂತರ ಮತ್ತೆ ಅಲ್ಲಿ ಸೇವೆ ಮಾಡಬಹುದು. ಆದರೆ ಆಗಲೂ ಜಾಣ್ಮೆ ಉಪಯೋಗಿಸಬೇಕು. ಒಂದುವೇಳೆ ಸಾರಕ್ಕೆ ಆಗಲಿಲ್ಲವಾದರೆ ಟೆಲಿಫೋನ್ ಅಥವಾ ಪತ್ರಗಳ ಮೂಲಕ ಸುವಾರ್ತೆ ತಲಪಿಸಬಹುದು. ಹೆಸರು, ಫೋನ್ ನಂಬರ್ಗಳನ್ನು ಸೆಕ್ಯೂರಿಟಿ ಬಳಿ ಕೇಳಿ ಪಡೆಯಬಹುದು. ಪತ್ರ ಬರೆಯುವಾಗ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಎಂಬ ಪುಸ್ತಕದ ಪುಟ 71-73ರಲ್ಲಿರುವ ಸಲಹೆಗಳನ್ನು ಪಾಲಿಸಿ. ಕೆಲವು ಪ್ರಚಾರಕರು ಏನು ಮಾಡುತ್ತಾರೆಂದರೆ ಬೆಳಗ್ಗೆ ಹಾಗೂ ಸಂಜೆ ಅಪಾರ್ಟ್ಮೆಂಟ್ ಇರುವ ರಸ್ತೆಯಲ್ಲಿ ಸಾಕ್ಷಿಕಾರ್ಯ ಮಾಡುತ್ತಾರೆ. ಆಗ ಕೆಲಸಕ್ಕೆ ಹೋಗುವ ಹಾಗೂ ಕೆಲಸದಿಂದ ವಾಪಸ್ ಬರುವ ಅಪಾರ್ಟ್ಮೆಂಟ್ ಜನರು ಸಿಗುತ್ತಾರೆ.
17. ಅಪಾರ್ಟ್ಮೆಂಟ್ಗಳಲ್ಲಿ ಸುವಾರ್ತೆ ಸಾರುವುದು ತುಂಬ ಪ್ರಾಮುಖ್ಯವೇಕೆ?
17 ಈ ದುಷ್ಟ ಲೋಕದ ಅಂತ್ಯ ತುಂಬ ಹತ್ತಿರವಿದೆ. ಯೆಹೋವ ದೇವರ ನಾಮವನ್ನು ಕೋರುವವರು ಮಾತ್ರ ರಕ್ಷಣೆ ಹೊಂದುವರು. “ಆದರೆ ತಾವು ಯಾರ ಮೇಲೆ ನಂಬಿಕೆಯಿಟ್ಟಿಲ್ಲವೋ ಆತನನ್ನು ಕೋರುವುದು ಹೇಗೆ? ತಾವು ಯಾರ ಕುರಿತು ಕೇಳಿಸಿಕೊಂಡಿಲ್ಲವೋ ಆತನಲ್ಲಿ ನಂಬಿಕೆಯಿಡುವುದು ಹೇಗೆ?” (ರೋಮ. 10:13, 14) “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ”ವಿರುವ ತುಂಬ ಜನರು ಅಪಾರ್ಟ್ಮೆಂಟ್ಗಳಲ್ಲಿದ್ದಾರೆ. (ಅ. ಕಾ. 13:48) ನಾವು ವಿವೇಚನೆ ಮತ್ತು ಜಾಣ್ಮೆ ತೋರಿಸುವಲ್ಲಿ ಆ ಎಲ್ಲ ಜನರಿಗೆ ಸುವಾರ್ತೆ ತಲಪಿಸಲು ಸಾಧ್ಯ.