ಮಕ್ಕಳೇ—ನೀವು ಯಾವ ಆಧ್ಯಾತ್ಮಿಕ ಗುರಿಗಳನ್ನು ಇಟ್ಟಿದ್ದೀರಾ?
1 ಮಾಡಿದ ಕೆಲಸ ಸಾರ್ಥಕ ಆದಾಗ ಮತ್ತು ಇಟ್ಟ ಗುರಿಯನ್ನು ಸಾಧಿಸಿದಾಗ ಎಷ್ಟು ಸಂತೋಷ ಆಗುತ್ತದೆ ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. (ಆದಿಕಾಂಡ 1:28; 2:15, 19 ನೋಡಿ.) ಹಾಗಾಗಿ ಜನರಿಗೆ ಸಾರುವ ಮತ್ತು ಬೋಧಿಸುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. ಅಲ್ಲದೆ ಪರದೈಸಲ್ಲಿ ಅನಂತಕಾಲ ಬದುಕಬೇಕು ಅನ್ನುವ ಗುರಿಯನ್ನು ನಾವು ಕೂಡ ಇಟ್ಟಿದ್ದೇವೆ. ಇಷ್ಟೇ ಅಲ್ಲ ನಮ್ಮ ಶಕ್ತಿ-ಸಾಮರ್ಥ್ಯ, ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಬಳಸಬೇಕೆಂದರೆ ನಾವು ಆಧ್ಯಾತ್ಮಿಕ ಗುರಿಗಳನ್ನು ಇಟ್ಟು ಅದನ್ನು ಸಾಧಿಸುತ್ತಾ ಹೋಗಬೇಕು.—1 ಕೊರಿಂ. 9:26.
2 ಸಾಧಿಸಲು ಸಾಧ್ಯವಾಗುವ ಗುರಿಗಳು: ಮಕ್ಕಳು ಆಧ್ಯಾತ್ಮಿಕ ಗುರಿಗಳನ್ನು ಇಡಲೇಬೇಕು. ತಮ್ಮತಮ್ಮ ಸಾಮರ್ಥ್ಯವನ್ನು ಅರಿತು ತಮ್ಮಿಂದ ಸಾಧಿಸಲು ಆಗುವಂಥ ಗುರಿಗಳನ್ನು ಇಡಬೇಕು. (1 ತಿಮೊ. 4:15) ಕೆಲವು ಪುಟಾಣಿಗಳು ಓದುಬರಹ ಕಲಿಯುವ ಮುಂಚೆನೇ ಬೈಬಲ್ ಪುಸ್ತಕಗಳ ಹೆಸರನ್ನು ಬಾಯಿಪಾಠವಾಗಿ ಹೇಳುತ್ತಾರೆ. ಕುಟುಂಬ ಅಧ್ಯಯನದಲ್ಲಿ ಕೂಟಗಳಿಗೆ ಹೇಗೆ ತಯಾರಿ ಮಾಡುವುದು ಅಂತ ಕಲಿಯುವುದರಿಂದ ಮಕ್ಕಳು ಕೂಟಗಳಲ್ಲಿ ಉತ್ತರ ಹೇಳುವ ಮತ್ತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವ ಗುರಿಗಳನ್ನು ಇಡಲು ಸಹಾಯವಾಗುತ್ತೆ. ಮಕ್ಕಳು ಹೆತ್ತವರ ಜತೆ ಸೇವೆ ಮಾಡುವುದರಿಂದ ಸಾಕ್ಷಿಕೊಡುವುದು ಹೇಗೆ ಅಂತ ಕಲಿಯುತ್ತಾರೆ. ಇದು ಅವರಿಗೆ ಪ್ರಚಾರಕರಾಗುವ ಗುರಿಯನ್ನು ತಲಪಲು ಸಹಾಯ ನೀಡುತ್ತೆ. ಅಷ್ಟೇ ಅಲ್ಲ ಮಕ್ಕಳು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಗುರಿ ಇಡುವಂತೆ ಹೆತ್ತವರು ಪ್ರೋತ್ಸಾಹಿಸಬೇಕು.
3 ಎಳೇ ವಯಸ್ಸಿನ ಮಕ್ಕಳು ಯೇಸುವನ್ನು ಅನುಕರಿಸಬೇಕು. ಯೇಸು ಚಿಕ್ಕ ವಯಸ್ಸಲ್ಲೇ ಅಂದರೆ 12 ವರ್ಷವಿದ್ದಾಗಲೇ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಬೇರೆಯವರ ಹತ್ತಿರ ಸರಾಗವಾಗಿ ಮಾತಾಡುತ್ತಿದ್ದನು. (ಲೂಕ 2:42-49, 52) ನೀವು ಕೂಡ ವೈಯಕ್ತಿಕ ಅಧ್ಯಯನ, ಪ್ರತಿದಿನ ಬೈಬಲ್ ಓದುವುದು, ಕೂಟಕ್ಕೆ ಬಂದಾಗ ಪ್ರೌಢ ಕ್ರೈಸ್ತರ ಜತೆ ಮಾತಾಡುವುದು, ಅವರ ಜತೆ ಸೇವೆಗೆ ಹೋಗುವುದು ಇಂಥ ಗುರಿಗಳನ್ನು ಇಡಬೇಕು. ಆಗ ಯೇಸು ಕಲಿಸಿದ ಹಾಗೇ ದೇವರ ರಾಜ್ಯದ ಬಗ್ಗೆ ನೀವು ಸಹ ಕಲಿಸುವ ಕೌಶಲ ಬೆಳೆಸಿಕೊಳ್ಳುವಿರಿ.