ವಿವೇಚನೆ ಬಳಸಿ ಸುವಾರ್ತೆ ಸಾರಿ
1 ಬೇರೆಬೇರೆ ನಂಬಿಕೆ ಮತ್ತು ಹಿನ್ನೆಲೆ ಇರುವ ಜನರಿಗೆ ಸುವಾರ್ತೆ ಸಾರುವಾಗ ವಿವೇಚನೆ ಬಳಸುವುದರ ಪ್ರಾಮುಖ್ಯತೆಯನ್ನು ಪೌಲ ಒತ್ತಿ ಹೇಳಿದ. ನಮ್ಮ ದಿನಗಳಲ್ಲೂ ಕೆಲವರಿಗೆ ಧರ್ಮದಲ್ಲಿ ತುಂಬ ಶ್ರದ್ಧೆ ಇದ್ದರೆ ಇನ್ನೂ ಕೆಲವರಿಗೆ ಧರ್ಮದ ಬಗ್ಗೆ ಆಸಕ್ತಿಯೇ ಇರುವುದಿಲ್ಲ ಅಥವಾ ಆಧ್ಯಾತ್ಮಿಕ ವಿಷಯವನ್ನು ಗೌರವಿಸುವುದಿಲ್ಲ. ರಾಜ್ಯದ ಸುವಾರ್ತೆ ಸಾರುವವರಾದ ನಾವು ‘ಎಲ್ಲಾ ರೀತಿಯ ಜನರ’ ಹೃದಯ ತಲುಪಬೇಕಾದರೆ ವಿವೇಚನೆ ಬಳಸಬೇಕು.—1 ಕೊರಿಂ. 9:19-23.
2 ಮನೆಯವರನ್ನು ಅರ್ಥಮಾಡಿಕೊಳ್ಳಿ: ನಾವು ತೋರಿಸುವ ವಿವೇಚನೆಯ ಸರಿಯಾದ ಉಪಯೋಗ ಆಗುವುದು ಸೇವೆಯಲ್ಲಿ ಮನೆಯವರ ಆಸಕ್ತಿಗೆ ತಕ್ಕಂತೆ ನಮ್ಮ ನಿರೂಪಣೆಯನ್ನು ಹೊಂದಿಸಿಕೊಳ್ಳುವಾಗ. ಇದಕ್ಕೆ ಒಳ್ಳೇ ತಯಾರಿ ಅಗತ್ಯ. ನಮ್ಮ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ ಇರುವ ಎಲ್ಲಾ ವಿಷಯ ಮತ್ತು ಲೇಖನಗಳನ್ನು ಚೆನ್ನಾಗಿ ಓದಿ ಪರಿಚಿತರಾಗಬೇಕು. ಆಗ ಸುವಾರ್ತೆ ಸಾರಲು ಅನೇಕ ವಿಷಯಗಳ ಪೀಠಿಕೆ ನಮ್ಮ ಬಳಿ ಇರುತ್ತೆ. ನಾವು ವೃದ್ಧರ ಜತೆ, ಯುವಕರ ಜತೆ, ಕುಟುಂಬದ ಯಜಮಾನರ ಜತೆ, ಗೃಹಿಣಿಯರ ಜತೆ, ಉದ್ಯೋಗಸ್ಥ ಮಹಿಳೆಯರ ಜತೆ, ಇನ್ನೂ ಬೇರೆಬೇರೆ ರೀತಿಯ ಜನರ ಜತೆ ಮಾತಾಡುವಾಗ ಅವರ ವೈಯಕ್ತಿಕ ಸನ್ನಿವೇಶ ಗಣನೆಗೆ ತೆಗೆದುಕೊಳ್ಳಬೇಕು ಹಾಗೂ ವಿವೇಚನೆಯಿಂದ ಸರಿಯಾದ ನಿರೂಪಣೆ ಬಳಸಬೇಕು.
3 ಮನೆಯವರ ಹತ್ತಿರ ಮಾತಾಡುತ್ತಿರುವಾಗ ಹಾಗೇ ನಿಮ್ಮ ಸುತ್ತಮುತ್ತಲಿನ ಕಡೆ ಸಹ ಗಮನ ಇರಲಿ. ಮನೆಯವರು ಹೆತ್ತವರಾಗಿರಬಹುದು, ಯಾವ ಧರ್ಮದವರು ಅಂತ ತಿಳಿದುಬರಬಹುದು, ಮನೆಯನ್ನು ಚೆನ್ನಾಗಿ ಇಟ್ಟಿರಬಹುದು. ಇಂಥ ವಿಚಾರಗಳನ್ನು ನೀವು ಗಮನಿಸಿದಾಗ ಅದಕ್ಕೆ ತಕ್ಕಂತೆ ನಿಮ್ಮ ನಿರೂಪಣೆಯನ್ನು ಹೊಂದಿಸಿ ಅವರ ಆಸಕ್ತಿ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಮಾತಾಡಬಹುದು. ಚಾಣಾಕ್ಷತೆಯಿಂದ ವಿವೇಚಿಸಿ ಪ್ರಶ್ನೆ ಕೇಳುವುದಾದರೆ ಮತ್ತು ಮನೆಯವರು ಉತ್ತರ ಕೊಡುವಾಗ ಸರಿಯಾಗಿ ಗಮನ ಕೊಡುವುದಾದರೆ ಅವರ ನಂಬಿಕೆ ಭಾವನೆಗಳು ಏನು ಅಂತ ತಿಳಿಯಲು ಶಕ್ತರಾಗುತ್ತೀರ. ನಂತರ ಅದಕ್ಕೆ ಸರಿಹೊಂದಿಸಿ ನಿರೂಪಣೆಯನ್ನು ಮುಂದುವರಿಸಬಹುದು.
4 ನಿರೂಪಣೆಯನ್ನು ಸಂದರ್ಭಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿ: ಮನೆಯವರ ಹತ್ತಿರ ಮಾತಾಡಲು ಶುರುಮಾಡಿದಾಗ ಮಕ್ಕಳ ಆಟಸಾಮಾನು ನಿಮ್ಮ ಗಮನಕ್ಕೆ ಬಂತು ಅಂತ ಇಟ್ಟುಕೊಳ್ಳಿ. ಆಗ ಈ ನಿರೂಪಣೆಯನ್ನು ಬಳಸಬಹುದು: “ಈ ಏರಿಯಾದಲ್ಲಿರೋ ಅಪ್ಪ-ಅಮ್ಮಂದಿರ ಹತ್ತಿರ ಮಕ್ಕಳಿಗೆ ಕಲಿಸಬೇಕಾದ ನೀತಿಪಾಠದ ಬಗ್ಗೆ ಅಭಿಪ್ರಾಯವನ್ನು ತಿಳಿದುಕೊಳ್ಳುತ್ತಿದ್ದೇವೆ. ಈವಾಗೆಲ್ಲಾ ಶಾಲೆಗಳಲ್ಲಿ ಅದರ ಬಗ್ಗೆ ತಲೆನೂ ಕೆಡಿಸಿಕೊಳ್ಳದೆ ಇರುವುದು ಅನೇಕ ಹೆತ್ತವರಿಗೆ ಬೇಜಾರದ ವಿಷ್ಯ. ಇಂಥ ಸಮಸ್ಯೆ ಬಗ್ಗೆ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ?” ಮನೆಯವರ ಉತ್ತರವನ್ನು ಆಲಿಸಿ. ಅವರಿಗೆ ಆಸಕ್ತಿಯಿದೆಂದು ಅವರ ಮಾತಿಂದ ಗೊತ್ತಾದರೆ ಹೀಗೆ ಮುಂದುವರಿಸಿ: “ಮಕ್ಕಳಿಗೆ ಮತ್ತು ನಮಗೆ ಸರಿಯಾದ ಮಾರ್ಗದರ್ಶನೆ ಬೇಕು ಅಂತ ಬೈಬಲ್ ಹೇಳುತ್ತೆ. ಜ್ಞಾನೋಕ್ತಿ 14:12ರಲ್ಲಿ ಏನು ತಿಳಿಸುತ್ತೆ ಅಂತ ಗಮನಿಸಿ.” ವಚನ ಓದಿದ ಮೇಲೆ ಹೀಗೆ ಹೇಳಬಹುದು: “ಬೈಬಲ್ನಲ್ಲಿರುವ ಇಂಥ ಸಲಹೆಗಳು ಎಷ್ಟು ಪ್ರಾಮುಖ್ಯ ಅಂತ ನಾನೊಂದು ಪುಸ್ತಕ ಓದುತ್ತಿರುವಾಗ ತಿಳಿದುಕೊಂಡೆ.” ಬೈಬಲ್ ಬೋಧಿಸುತ್ತದೆ ಪುಸ್ತಕದ ಅಧ್ಯಾಯ 14ಕ್ಕೆ ತಿರುಗಿಸಿ ಸೂಕ್ತ ಪ್ಯಾರವನ್ನು ಓದಿ ಚರ್ಚಿಸಿ.
5 ಯೆಹೋವನ ಸೇವೆಗಾಗಿ ಚೆನ್ನಾಗಿ ತಯಾರಿ ಮಾಡಿ ವಿವೇಚನೆಯನ್ನು ತೋರಿಸಿದರೆ “ನಾನು ಯಾವ ರೀತಿಯಲ್ಲಾದರೂ ಕೆಲವರನ್ನು ರಕ್ಷಿಸಲಿಕ್ಕಾಗಿ ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು” ಎಂದು ಅಪೊಸ್ತಲ ಪೌಲ ಹೇಳಿದಂತೆ ನಾವು ಸಹ ಹೇಳಬಹುದು.—1 ಕೊರಿಂ. 9:22; ಜ್ಞಾನೋ. 19:8.