ಸಾರುವ ಕೆಲಸದಲ್ಲಿ ಪ್ರಗತಿ ಮಾಡುತ್ತಾ ಇರಿ
1. ಸಾರುವುದರಲ್ಲಿ ಪ್ರಗತಿ ಮಾಡುತ್ತಾ ಇರಬೇಕು ಎಂದು ಪ್ರಥಮ ಶತಮಾನದ ಯಾವ ಉದಾಹರಣೆಗಳಿಂದ ಕಲಿಯಬಹುದು?
1 ಕ್ರೈಸ್ತನಾದ ಪ್ರತಿಯೊಬ್ಬನು ಸಾರುವ ಕೆಲಸದಲ್ಲಿ ಪ್ರಗತಿ ಮಾಡುತ್ತಲೇ ಇರಬೇಕು. ಆದ್ದರಿಂದಲೇ ತನ್ನ ಶಿಷ್ಯರಿಗೆ ಯೇಸು ಹಂತ ಹಂತವಾಗಿ ತರಬೇತಿ ಕೊಡುತ್ತಾ ಇದ್ದನು. (ಲೂಕ 9:1-5; 10:1-11) ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಸಹ ಅಪೊಲ್ಲೋಸನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ “ದೇವರ ಮಾರ್ಗವನ್ನು ಅವನಿಗೆ ಇನ್ನೂ ಸರಿಯಾದ ರೀತಿಯಲ್ಲಿ ವಿವರಿಸಿದರು.” (ಅ. ಕಾ. 18:24-26) ಸಾರುವುದರಲ್ಲಿ ಉತ್ತಮ ಅನುಭವ ಇದ್ದ ತಿಮೊಥೆಯನು ತನ್ನ ಸ್ವಂತ ಬೋಧನೆಯನ್ನು ಅನ್ವಯಿಸಿಕೊಳ್ಳುತ್ತಾ ಇರುವಂತೆ ಪೌಲನು ಅವನಿಗೆ ಪ್ರೋತ್ಸಾಹಿಸಿದನು. ಹಾಗೆ ಮಾಡಿದರೆ ಮಾತ್ರ ತಿಮೊಥೆಯನ ‘ಅಭಿವೃದ್ಧಿ ಎಲ್ಲರಿಗೂ ಪ್ರಕಟವಾಗುವುದು’ ಎಂದು ಹೇಳಿದನು. (1 ತಿಮೊ. 4:13-15) ಇದರಿಂದ ನಾವು ತಿಳಿಯುವ ವಿಷಯ ಏನೆಂದರೆ ಎಷ್ಟೇ ವರ್ಷಗಳಿಂದ ಸುವಾರ್ತೆ ಸಾರುತ್ತಿದ್ದರೂ ನಾವೆಲ್ಲರೂ ಪ್ರಗತಿ ಮಾಡುತ್ತಲೇ ಇರಬೇಕು.
2. ನಾವು ಇತರರಿಂದ ಹೇಗೆ ಕಲಿಯಬಹುದು?
2 ಇತರರಿಂದ ಕಲಿಯಿರಿ: ಇತರರಿಂದ ಕಲಿಯುವ ಮೂಲಕ ಸಾರುವುದರಲ್ಲಿ ಪ್ರಗತಿ ಮಾಡಬಹುದು. (ಜ್ಞಾನೋ. 27:17) ಆದ್ದರಿಂದ ಇತರ ಪ್ರಚಾರಕರು ಸಾರುವಾಗ ಪೂರ್ತಿ ಗಮನಕೊಡಿ. ಸಾರುವುದರಲ್ಲಿ ಪ್ರಗತಿ ಮಾಡಲು ಇನ್ನೂ ಏನೆಲ್ಲಾ ಮಾಡಬೇಕೆಂದು ಉತ್ತಮವಾಗಿ ಸುವಾರ್ತೆ ಸಾರಲು ಗೊತ್ತಿರುವ ಪ್ರಚಾರಕರನ್ನು ಕೇಳಿ. ಅವರ ಸಲಹೆಗೆ ಚೆನ್ನಾಗಿ ಕಿವಿಗೊಡಿ. (ಜ್ಞಾನೋ. 1:5) ಪುನರ್ಭೇಟಿ ಮಾಡುವುದು, ಬೈಬಲ್ ಅಧ್ಯಯನ ಆರಂಭಿಸುವುದು ಅಥವಾ ವಿವಿಧ ರೀತಿಯಲ್ಲಿ ಸುವಾರ್ತೆ ಸಾರುವುದು ತುಂಬ ಕಷ್ಟ ಅಂತ ನಿಮಗನಿಸುತ್ತಾ? ಹಾಗಾದರೆ, ಇವುಗಳನ್ನು ಕಲಿಸಿಕೊಡುವಂತೆ ನಿಮ್ಮ ಗುಂಪು ಮೇಲ್ವಿಚಾರಕ ಅಥವಾ ಅನುಭವ ಇರುವ ಒಬ್ಬ ಪ್ರಚಾರಕನ ಹತ್ತಿರ ನೀವೇ ಹೋಗಿ ಕೇಳಿಕೊಳ್ಳಿ. ತಪ್ಪದೇ ಯೆಹೋವನಿಗೆ ಪ್ರಾರ್ಥಿಸುತ್ತಾ ಇರಿ. ಯಾಕೆಂದರೆ, ನಮ್ಮ ಸಾಮರ್ಥ್ಯಗಳನ್ನು ಇನ್ನೂ ಉತ್ತಮಗೊಳಿಸಲು ಪವಿತ್ರಾತ್ಮ ಸಹಾಯ ಮಾಡುತ್ತದೆ.—ಲೂಕ 11:13.
3. ಇತರರನ್ನು ನಾವು ಕೇಳದೆ ಇದ್ದರೂ ಅವರಾಗಿಯೇ ಬಂದು ಸಲಹೆ ಕೊಟ್ಟರೆ ಏನು ಮಾಡಬೇಕು?
3 ಇತರರನ್ನು ನೀವು ಕೇಳದೆ ಇದ್ದರೂ ಅವರಾಗಿಯೇ ಬಂದು ಪ್ರಗತಿ ಮಾಡಲು ಸಲಹೆ ಕೊಟ್ಟರೆ ಕೋಪ ಮಾಡಿಕೊಳ್ಳಬೇಡಿ. (ಪ್ರಸಂ. 7:9) ಬದಲಿಗೆ ಅಪೊಲ್ಲೋಸನಂತೆ ಅವರಿಗೆ ಕೃತಜ್ಞತೆ ಹೇಳಿ, ದೀನತೆಯಿಂದ ಅದನ್ನು ಸ್ವೀಕರಿಸಿ. ಹೀಗೆ ಮಾಡಿದರೆ, ನೀವು ವಿವೇಕಿಗಳೆಂದು ತೋರಿಸಿಕೊಡುತ್ತೀರಿ.—ಜ್ಞಾನೋ. 12:15.
4. ಸಾರುವುದರಲ್ಲಿ ಪ್ರಗತಿ ಮಾಡಬೇಕೆಂದು ಯೇಸು ಹೇಳಿದ್ದೇಕೆ?
4 ಯೆಹೋವನಿಗೆ ಮಹಿಮೆ ತನ್ನಿ: ಒಂದು ದೃಷ್ಟಾಂತ ಉಪಯೋಗಿಸುತ್ತಾ ಯೇಸು ತನ್ನ ಶಿಷ್ಯರಿಗೆ ಸಾರುವುದರಲ್ಲಿ ಪ್ರಗತಿ ಮಾಡಲು ಪ್ರೋತ್ಸಾಹ ನೀಡಿದನು. ಆ ದೃಷ್ಟಾಂತದಲ್ಲಿ ಯೇಸು ಸ್ವತಃ ತನ್ನನ್ನು ದ್ರಾಕ್ಷಿ ಬಳ್ಳಿಗೆ ಮತ್ತು ತನ್ನ ಅಭಿಷಿಕ್ತ ಶಿಷ್ಯರನ್ನು ಅದರ ಕೊಂಬೆಗಳಿಗೆ ಹೋಲಿಸಿದನು. ಫಲ ಕೊಡುವ ಪ್ರತಿಯೊಂದು ಕೊಂಬೆ “ಇನ್ನೂ ಹೆಚ್ಚು ಫಲವನ್ನು ಕೊಡುವಂತೆ” ಅವುಗಳನ್ನು ತನ್ನ ತಂದೆಯು ಹಸನುಗೊಳಿಸುತ್ತಾನೆ ಅಂದರೆ ಸ್ವಚ್ಛಗೊಳಿಸುತ್ತಾನೆ ಎಂದು ಹೇಳಿದನು. (ಯೋಹಾ. 15:1, 2) ದ್ರಾಕ್ಷಿ ತೋಟದ ಯಜಮಾನನು ತನ್ನ ದ್ರಾಕ್ಷಿ ಬಳ್ಳಿಯ ಕೊಂಬೆಗಳು ತುಂಬ ಫಲ ಕೊಡಬೇಕೆಂದು ಬಯಸುತ್ತಾನೆ. ಅದೇ ರೀತಿ ನಾವು ಸೇವೆಯಲ್ಲಿ ಚೆನ್ನಾಗಿ ಮಾತಾಡುವ ಮೂಲಕ ಹೆಚ್ಚು “ಫಲವನ್ನು” ಕೊಡಬೇಕೆಂದು ಯೆಹೋವನು ಬಯಸುತ್ತಾನೆ. (ಇಬ್ರಿ. 13:15) ಸಾರುವುದರಲ್ಲಿ ನಾವು ಪ್ರಗತಿ ಮಾಡುತ್ತಾ ಇರುವ ಮೂಲಕ ಬಹಳ ಫಲವನ್ನು ಕೊಡುತ್ತೇವೆ. ಜೊತೆಗೆ ಯೇಸು ಹೇಳಿದಂತೆ ‘ಯೆಹೋವನಿಗೆ ಮಹಿಮೆ ತರುತ್ತೇವೆ.’—ಯೋಹಾ. 15:8.