ಯುವ ಸಹೋದರರೇ, ಆಧ್ಯಾತ್ಮಿಕ ಗುರಿ ಮುಟ್ಟಲು ಪ್ರಯತ್ನಿಸುತ್ತಿದ್ದೀರಾ?
1. ಒಬ್ಬ ಯುವ ಸಹೋದರ 1 ತಿಮೊಥೆಯ 3:1ರಲ್ಲಿರುವ ಸಲಹೆಯನ್ನು ಯಾವತ್ತಿಂದ ಪಾಲಿಸಲು ಶುರುಮಾಡಬೇಕು?
1 “ಯಾವನಾದರೂ ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ ಅವನು ಒಳ್ಳೇ ಕಾರ್ಯವನ್ನು ಅಪೇಕ್ಷಿಸುವವನಾಗಿದ್ದಾನೆ.” (1 ತಿಮೊ. 3:1) ದೇವಪ್ರೇರಣೆಯಿಂದ ಬರೆಯಲಾದ ಮೇಲಿನ ಮಾತುಗಳು ಸಹೋದರರು ಸಭೆಯಲ್ಲಿ ಸೇವಾ ಸುಯೋಗಗಳನ್ನು ಗಳಿಸಲು ಅರ್ಹತೆ ಪಡೆಯವಂತೆ ಪ್ರೋತ್ಸಾಹಿಸುತ್ತಿವೆ. ಇದಕ್ಕಾಗಿ ನಿಮಗೆಷ್ಟು ಪ್ರಾಯವಾಗಿರಬೇಕು? ಆಧ್ಯಾತ್ಮಿಕ ಗುರಿ ಸಾಧಿಸಲು ನೀವು ಹರೆಯದಿಂದಲೇ ಪ್ರಯತ್ನಿಸುವುದು ಒಳ್ಳೇದು. ಆಗ ನಿಮಗೆ ಬೇಕಾದ ತರಬೇತಿ ಸಿಗುತ್ತೆ. ದೊಡ್ಡವರಾಗುತ್ತಾ ಹೋದಂತೆ ನೀವು ಶುಶ್ರೂಷಾ ಸೇವಕರಾಗಲು ಅರ್ಹತೆ ಪಡೆದಿದ್ದೀರಿ ಅಂತ ಸಾಬೀತಾಗುತ್ತೆ. (1 ತಿಮೊ. 3:10) ನೀವು ದೀಕ್ಷಾಸ್ನಾನ ಪಡೆದ ಯುವ ಸಹೋದರನಾಗಿದ್ದರೆ ಆಧ್ಯಾತ್ಮಿಕ ಗುರಿ ತಲುಪಲು ಏನು ಮಾಡಬೇಕು?
2. ತ್ಯಾಗವೆಂಬ ಗುಣವನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು? ಹೇಗೆ ತೋರಿಸಬಲ್ಲೆವು?
2 ತ್ಯಾಗ: ನೀವಿಟ್ಟಿರುವ ಆಧ್ಯಾತ್ಮಿಕ ಗುರಿಯ ಉದ್ದೇಶ ಹೆಸರು ಗಳಿಸುವುದಲ್ಲ, ‘ಒಳ್ಳೇ ಕಾರ್ಯ’ ಮಾಡುವುದು. ಹಾಗಾಗಿ ಸಹೋದರ ಸಹೋದರಿಯರಿಗೆ ಸಹಾಯ ಮಾಡಬೇಕೆನ್ನುವ ಬಯಕೆ ಬೆಳೆಸಿಕೊಳ್ಳಿ. ಇದನ್ನು ಬೆಳೆಸಿಕೊಳ್ಳುವ ಒಂದು ವಿಧ, ಯೇಸುವಿನ ಮಾದರಿಯ ಬಗ್ಗೆ ಧ್ಯಾನಿಸುವುದು. (ಮತ್ತಾ. 20:28; ಯೋಹಾ. 4:6, 7; 13:4, 5) ಪರಹಿತ ನೋಡುವ ಗುಣವನ್ನು ಬೆಳೆಸಿಕೊಳ್ಳಲು ಯೆಹೋವ ದೇವರ ಸಹಾಯ ಬೇಡಿ. (1 ಕೊರಿಂ. 10:24) ಸಭೆಯಲ್ಲಿರುವ ವೃದ್ಧ ಮತ್ತು ಶಾರೀರಿಕವಾಗಿ ಬಲಹೀನರಾಗಿರುವ ಸಹೋದರ ಸಹೋದರಿಯರಿಗೆ ಸಹಾಯ ನೀಡಲು ನೀವೇನಾದರೂ ಮಾಡಬಹುದಾ? ನೀವಾಗಿಯೇ ಹೋಗಿ ರಾಜ್ಯ ಸಭಾಗೃಹ ಶುಚಿತ್ವ ಅಥವಾ ನಿರ್ವಹಣೆಯಲ್ಲಿ ಕೈಜೋಡಿಸಬಹುದಾ? ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನೇಮಕವಿರುವ ವಿದ್ಯಾರ್ಥಿ ಬರದಿದ್ದರೆ ನೀವದನ್ನು ಮಾಡಲು ಸಿದ್ಧರಾಗಿರುತ್ತೀರಾ? ಬೇರೆಯವರ ಹಿತಕ್ಕಾಗಿ ತ್ಯಾಗಗಳನ್ನು ಮಾಡುವುದರಿಂದ ಎಷ್ಟು ಆನಂದ ಸಿಗುತ್ತೆ ಎನ್ನುವುದನ್ನು ನೀವೇ ಸವಿದುನೋಡುತ್ತೀರಿ.—ಅ. ಕಾ. 20:35.
3. ಒಬ್ಬ ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆ ಇರಬೇಕು ಯಾಕೆ? ಅದನ್ನು ಹೇಗೆ ಬೆಳೆಸಿಕೊಳ್ಳಬಹುದು?
3 ಆಧ್ಯಾತ್ಮಿಕತೆ: ಸಭೆಯಲ್ಲಿ ಸೇವೆ ಸಲ್ಲಿಸಲು ಒಬ್ಬ ವ್ಯಕ್ತಿಗೆ ಬೇಕಾಗಿರುವುದು ವಿಶೇಷ ಪ್ರತಿಭೆಗಳು ಅಥವಾ ಕೌಶಲಗಳು ಅಲ್ಲ, ಆಧ್ಯಾತ್ಮಿಕತೆ. ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಪ್ರತಿಯೊಂದು ವಿಷಯವನ್ನೂ ಯೆಹೋವ ದೇವರ ಮತ್ತು ಯೇಸುವಿನ ದೃಷ್ಟಿಕೋನದಿಂದಲೇ ನೋಡುತ್ತಾನೆ. (1 ಕೊರಿಂ. 2:15, 16) “ಪವಿತ್ರಾತ್ಮದಿಂದ ಉಂಟಾಗುವ ಫಲ” ಅಂದರೆ ಆ ಗುಣಗಳನ್ನು ತೋರಿಸುತ್ತಾನೆ. (ಗಲಾ. 5:22, 23) ದೇವರ ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಾನೆ. ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಡುತ್ತಾನೆ. (ಮತ್ತಾ. 6:33) ಸಭಾಕೂಟಗಳಿಗೆ ತಪ್ಪದೆ ಹಾಜರಾಗುವುದರ ಜೊತೆಗೆ, ನಿಯಮಿತ ವೈಯಕ್ತಿಕ ಅಧ್ಯಯನ ರೂಢಿ ಇಟ್ಟುಕೊಳ್ಳುವ ಮೂಲಕ ಕೂಡ ಆಧ್ಯಾತ್ಮಿಕ ಗುಣಗಳನ್ನು ಬೆಳೆಸಿಕೊಳ್ಳಬಹುದು. ಈ ಅಧ್ಯಯನದಲ್ಲಿ ಪ್ರತಿದಿನ ಬೈಬಲ್ ಓದುವುದು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಪ್ರತಿಯೊಂದು ಸಂಚಿಕೆಯನ್ನು ಓದುವುದು ಮತ್ತು ಸಭಾಕೂಟಗಳಿಗಾಗಿ ತಯಾರಿಸುವುದು ಸೇರಿದೆ. (ಕೀರ್ತ. 1:1, 2; ಇಬ್ರಿ. 10:24, 25) ಆಧ್ಯಾತ್ಮಿಕ ಪ್ರಗತಿ ಮಾಡುವಂತೆ ಯುವ ತಿಮೊಥೆಯನಿಗೆ ಪೌಲ ಪ್ರೋತ್ಸಾಹಿಸುತ್ತಾ ಹೀಗೆ ಹೇಳಿದನು: “ನಿನ್ನ ಬೋಧನೆಯ ವಿಷಯದಲ್ಲಿಯೂ ಸದಾ ಗಮನಕೊಡುವವನಾಗಿರು.” (1 ತಿಮೊ. 4:15, 16) ಹಾಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಸಿಕ್ಕಿದ ನೇಮಕಗಳನ್ನು ಚೆನ್ನಾಗಿ ನಿರ್ವಹಿಸಲು ಶ್ರಮ ಹಾಕಿ. ಯಾವಾಗಲೋ ಒಮ್ಮೆ ಅಲ್ಲ ನಿಯಮಿತವಾಗಿ ಸುವಾರ್ತೆ ಸಾರಿ, ಸಾರಲು ಹೋಗುವ ಮುನ್ನ ಸಿದ್ಧತೆ ನಡೆಸಿ. ಪಯನೀಯರ್ ಸೇವೆ, ಬೆತೆಲ್ ಸೇವೆ, ಅವಿವಾಹಿತ ಸಹೋದರರಿಗಾಗಿ ಬೈಬಲ್ ಶಾಲೆಗೆ ಹಾಜರಾಗುವಂಥ ಆಧ್ಯಾತ್ಮಿಕ ಗುರಿಗಳನ್ನಿಡಿ. ಅದನ್ನು ಸಾಧಿಸಲು ಶ್ರಮಿಸಿ. ಆಧ್ಯಾತ್ಮಿಕತೆ ನಿಮಗೆ “ಯೌವನ ಸಹಜವಾದ ಇಚ್ಛೆಗಳನ್ನು ಬಿಟ್ಟು ಓಡಿ” ಹೋಗಲು ನೆರವು ನೀಡುತ್ತೆ.—2 ತಿಮೊ. 2:22.
4. ಭರವಸೆ ಮತ್ತು ನಂಬಿಗಸ್ತಿಕೆ ಕಾಪಾಡಿಕೊಳ್ಳುವುದು ಪ್ರಾಮುಖ್ಯವೇಕೆ?
4 ಭರವಸಾರ್ಹತೆ ಮತ್ತು ನಂಬಿಗಸ್ತಿಕೆ: ಒಂದನೇ ಶತಮಾನದಲ್ಲಿ ಬಡ ಕ್ರೈಸ್ತ ಸಹೋದರ ಸಹೋದರಿಯರಿಗೆ ಆಹಾರ ಹಂಚುವ ಕೆಲಸವನ್ನು “ಒಳ್ಳೇ ಹೆಸರುಳ್ಳ” ಸಹೋದರರಿಗೆ ವಹಿಸಲಾಗಿತ್ತು. ಇವರು ಭರವಸಾರ್ಹ ಮತ್ತು ನಂಬಿಗಸ್ತ ಸಹೋದರರಾದ ಕಾರಣ ಅದರ ಬಗ್ಗೆ ಅಪೊಸ್ತಲರು ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಇದರಿಂದ ಅಪೊಸ್ತಲರಿಗೆ ಇನ್ನಿತರ ಪ್ರಧಾನ ಕೆಲಸಕಾರ್ಯಗಳಿಗೆ ಗಮನಹರಿಸಲು ಸಾಧ್ಯವಾಯಿತು. (ಅ. ಕಾ. 6:1-4) ಸಭೆಯಲ್ಲಿ ನಿಮಗೊಂದು ನೇಮಕ ಸಿಗುವಲ್ಲಿ ನಿಮ್ಮೆಲ್ಲ ಸಾಮರ್ಥ್ಯವನ್ನು ಬಳಸಿ ಕೆಲಸಮಾಡಿ. ಈ ವಿಷಯದಲ್ಲಿ ನೋಹನನ್ನು ಅನುಕರಿಸಿ. ಆತ ನಾವೆ ಕಟ್ಟಲು ಕೊಡಲಾದ ಸೂಚನೆಗಳನ್ನೆಲ್ಲ ಚಾಚೂತಪ್ಪದೆ ಪಾಲಿಸಿದನು ಅಲ್ಲವೇ? (ಆದಿ. 6:22) ನಂಬಿಗಸ್ತಿಕೆ ಅನ್ನೋದು ಆಧ್ಯಾತ್ಮಿಕ ಪ್ರಬುದ್ಧತೆಯ ಗುರುತು. ನಂಬಿಗಸ್ತರನ್ನು ಕಂಡರೆ ಯೆಹೋವ ದೇವರಿಗೆ ತುಂಬ ಇಷ್ಟ.—1 ಕೊರಿಂ. 4:2; “ತರಬೇತಿಯ ಪ್ರಯೋಜನಗಳು” ಚೌಕ ನೋಡಿ.
5. ಯುವ ಸಹೋದರರು ಯಾಕೆ ಆಧ್ಯಾತ್ಮಿಕ ಗುರಿಗಳನ್ನಿಡಬೇಕು?
5 ಪ್ರವಾದನೆಗನುಸಾರ ಯೆಹೋವ ದೇವರು ಸಾರುವ ಕೆಲಸದ ವೇಗವನ್ನು ಹೆಚ್ಚಿಸುತ್ತಿದ್ದಾನೆ. (ಯೆಶಾ. 60:22) ಸುಮಾರು 2 ಲಕ್ಷ 50 ಸಾವಿರದಷ್ಟು ಜನರು ಪ್ರತೀ ವರ್ಷ ದೀಕ್ಷಾಸ್ನಾನ ಪಡೆಯುತ್ತಿದ್ದಾರೆ. ಹೀಗೆ ಸತ್ಯಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಿದಂತೆ ಸಭೆಯನ್ನು ನೋಡಿಕೊಳ್ಳಲು ಅರ್ಹರಾದ ಆಧ್ಯಾತ್ಮಿಕ ಪುರುಷರ ಅಗತ್ಯ ಕೂಡ ಹೆಚ್ಚಾಗುತ್ತಿದೆ. ಯೆಹೋವನ ಸೇವೆಯಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ. (1 ಕೊರಿಂ. 15:58) ಯುವ ಸಹೋದರರೇ, ಆಧ್ಯಾತ್ಮಿಕ ಗುರಿಯಿಟ್ಟು ಅದನ್ನು ಸಾಧಿಸುವುದರತ್ತ ಸಾಗುತ್ತಿದ್ದೀರಾ? ಹಾಗಾದರೆ ಒಳ್ಳೇ ಕಾರ್ಯ ಮಾಡುವ ಬಯಕೆ ನಿಮಗಿದೆ ಎಂದರ್ಥ!
[ಪುಟ 5ರಲ್ಲಿರುವ ಚಿತ್ರ]
ಸತ್ಯಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಿದಂತೆ ಸಭೆಯನ್ನು ನೋಡಿಕೊಳ್ಳಲು ಅರ್ಹರಾದ ಆಧ್ಯಾತ್ಮಿಕ ಪುರುಷರ ಅಗತ್ಯ ಕೂಡ ಹೆಚ್ಚಾಗುತ್ತಿದೆ
[ಪುಟ 6ರಲ್ಲಿರುವ ಚಿತ್ರ]
ತರಬೇತಿಯ ಪ್ರಯೋಜನಗಳು
ಹಿರಿಯರು ಅರ್ಹರಾದ ಯುವ ಸಹೋದರರಿಗೆ ನೇಮಕಗಳನ್ನು ಕೊಟ್ಟು ತರಬೇತಿ ನೀಡುವುದರಿಂದ ಪ್ರಯೋಜನವಿದೆ. ಸರ್ಕಿಟ್ ಮೆಲ್ವಿಚಾರಕರೊಬ್ಬರು ಕೂಟವಾದ ನಂತರ ವೇದಿಕೆ ಮುಂದೆ ಕುಳಿತು ಒಬ್ಬ ಪ್ರಚಾರಕರ ಹತ್ತಿರ ಮಾತಾಡುತ್ತಿದ್ದರು. ಆಗ ಒಬ್ಬ ಹುಡುಗ ಪಕ್ಕದಲ್ಲಿ ನಿಂತಿರುವುದನ್ನು ನೋಡಿ ‘ನನ್ನ ಹತ್ತಿರ ಮಾತಾಡಬೇಕಂತ ಕಾಯುತ್ತಿದ್ದೀಯಾ’ ಅಂತ ಅವನನ್ನು ಕೇಳಿದರು. ಯಾವಾಗಲೂ ಕೂಟವಾದ ಮೇಲೆ ವೇದಿಕೆಯನ್ನು ವ್ಯಾಕ್ಯೂಮ್ ಮಾಡಿ ಶುಚಿ ಮಾಡಬೇಕು ಅಂತ ಹೇಳಿದ್ದಾರೆ ಅಂತ ಆ ಹುಡುಗ ಹೇಳಿದ. ಅವನ ಹೆತ್ತವರು ಮನೆಗೆ ಹೋಗಲು ಇವನನ್ನು ಕಾಯುತ್ತಿದ್ದರು, ಆದರೆ ಈ ಹುಡುಗ ಕೊಟ್ಟ ಕೆಲಸ ಮುಗಿಸಿನೇ ಬರುತ್ತೇನೆ ಅಂತ ನಿಂತಿದ್ದ. ಇದನ್ನು ನೋಡಿ ಸರ್ಕಿಟ್ ಮೇಲ್ವಿಚಾರಕರಿಗೆ ತುಂಬ ಖುಷಿಯಾಯಿತು. ಅವರು ಹೇಳಿದರು: “ಈ ಸಭೆಯ ಹಿರಿಯರು ಅರ್ಹರಾದ ಯುವ ಸಹೋದರರಿಗೆ ಸಭೆಯಲ್ಲಿ ನೇಮಕಗಳನ್ನು ಕೊಟ್ಟು ತರಬೇತಿ ನೀಡುತ್ತಾರೆ. ಇದರಿಂದ ನಾನು ಭೇಟಿ ನೀಡಿದಾಗೆಲ್ಲ ಯುವ ಸಹೋದರರನ್ನು ಶುಶ್ರೂಷಾ ಸೇವಕರಾಗಲು ಶಿಫಾರಸು ಮಾಡಲು ಅವರಿಗೆ ಸಹಾಯವಾಗುತ್ತೆ.”