ಸುಳ್ಳು ದೇವರುಗಳ ವಿರುದ್ಧ ಸಾಕ್ಷಿಗಳು
“ಯೆಹೋವನ ಮಾತೇನಂದರೆ—ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು.”—ಯೆಶಾಯ 43:10.
1. ಸತ್ಯ ದೇವರು ಯಾರು, ಮತ್ತು ಇಂದು ಆರಾಧಿಸಲ್ಪಡುವ ಬಹು ಸಂಖ್ಯೆಯ ದೇವರುಗಳಿಗಿಂತ ಮಿಗಿಲಾಗಿ ಆತನು ಯಾವ ವಿಷಯಗಳಲ್ಲಿ ಶ್ರೇಷ್ಠನಾಗಿದ್ದಾನೆ?
ಸತ್ಯ ದೇವರು ಯಾರು? ಇಂದು, ಅತ್ಯಂತ ಪ್ರಾಮುಖ್ಯವಾದ ಈ ಪ್ರಶ್ನೆಯು ಇಡೀ ಮಾನವಕುಲವನ್ನು ಎದುರಿಸುತ್ತದೆ. ಮಾನವರು ಬಹು ಸಂಖ್ಯೆಯ ದೇವರುಗಳನ್ನು ಆರಾಧಿಸುವಾಗ್ಯೂ, ಒಬ್ಬನು ಮಾತ್ರವೇ ನಮಗೆ ಜೀವವನ್ನು ಕೊಡಬಲ್ಲನು ಮತ್ತು ಒಂದು ಸಂತೋಷಕರ ಭವಿಷ್ಯತ್ತನ್ನು ನೀಡಬಲ್ಲನು. ಒಬ್ಬನ ಕುರಿತಾಗಿ ಮಾತ್ರವೇ ಹೀಗೆ ಹೇಳಸಾಧ್ಯವಿದೆ: “ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ.” (ಅ. ಕೃತ್ಯಗಳು 17:28) ನಿಜವಾಗಿಯೂ ಆರಾಧಿಸಲ್ಪಡತಕ್ಕ ಹಕ್ಕು ಒಬ್ಬ ದೇವರಿಗೆ ಮಾತ್ರವೇ ಇದೆ. ಪ್ರಕಟನೆ ಪುಸ್ತಕದಲ್ಲಿರುವ ಸ್ವರ್ಗೀಯ ಮೇಳ ಗೀತವು ಹೇಳುವಂತೆ: “ಯೆಹೋವನೇ, ನಮ್ಮ ದೇವರು ಕೂಡ, ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ನೀನು ಅರ್ಹನು, ಏಕೆಂದರೆ ಸಕಲ ಸಂಗತಿಗಳನ್ನು ನೀನು ಸೃಷ್ಟಿಸಿದ್ದೀ, ಮತ್ತು ನಿನ್ನ ಚಿತ್ತದ ಕಾರಣ ಅವು ಅಸ್ತಿತ್ವಕ್ಕೆ ಬಂದವು ಮತ್ತು ಸೃಷ್ಟಿಸಲ್ಪಟ್ಟವು.”—ಪ್ರಕಟನೆ 4:11, NW.
2, 3. (ಎ) ಯೆಹೋವನ ಆರಾಧಿಸಲ್ಪಡತಕ್ಕ ಹಕ್ಕನ್ನು ಸೈತಾನನು ಮೋಸದಿಂದ ಹೇಗೆ ಪಂಥಾಹ್ವಾನಿಸಿದನು? (ಬಿ) ಹವ್ವಳಿಗೆ ಹಾಗೂ ಅವಳ ಮಕ್ಕಳಿಗೆ ಹವ್ವಳ ಪಾಪದ ಫಲಿತಾಂಶವು ಏನಾಗಿತ್ತು, ಮತ್ತು ಸೈತಾನನಿಗೆ ಫಲಿತಾಂಶವೇನಾಗಿತ್ತು?
2 ಏದೆನ್ ತೋಟದಲ್ಲಿ, ಯೆಹೋವನ ಆರಾಧಿಸಲ್ಪಡತಕ್ಕ ಹಕ್ಕನ್ನು ಸೈತಾನನು ಮೋಸದಿಂದ ಪಂಥಾಹ್ವಾನಿಸಿದನು. ಒಂದು ಸರ್ಪವನ್ನು ಉಪಯೋಗಿಸಿ, ಯೆಹೋವನ ನಿಯಮದ ವಿರುದ್ಧ ದಂಗೆಯೇಳುವಲ್ಲಿ ಮತ್ತು ಯೆಹೋವನು ನಿಷೇಧಿಸಿದ್ದ ಮರದಿಂದ ಹಣ್ಣನ್ನು ತಿಂದಲ್ಲಿ, ಅವಳು ಸ್ವತಃ ದೇವರಂತಾಗುವಳೆಂದು ಅವನು ಹವ್ವಳಿಗೆ ಹೇಳಿದನು. ಅವನ ಮಾತುಗಳು ಹೀಗಿದ್ದವು: “ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.” (ಆದಿಕಾಂಡ 3:5) ಹವ್ವಳು ಸರ್ಪವನ್ನು ನಂಬಿದಳು ಮತ್ತು ನಿಷೇಧಿತ ಹಣ್ಣನ್ನು ತಿಂದಳು.
3 ನಿಶ್ಚಯವಾಗಿ, ಸೈತಾನನು ಸುಳ್ಳು ಹೇಳಿದನು. (ಯೋಹಾನ 8:44) ಹವ್ವಳು ಪಾಪ ಮಾಡಿದಾಗ ಅವಳು “ದೇವರಂತೆ” ಆದ ಒಂದೇ ಒಂದು ರೀತಿಯು, ಯೆಹೋವನು ತೀರ್ಮಾನಿಸುವಂತೆ ಬಿಡಬೇಕಾಗಿದ್ದ ಯಾವುದೋ ವಿಷಯವನ್ನು—ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು—ನಿರ್ಧರಿಸುವ ಜವಾಬ್ದಾರಿಯನ್ನು ತಾನು ತೆಗೆದುಕೊಂಡದ್ದೇ ಆಗಿತ್ತು. ಮತ್ತು ಸೈತಾನನ ಸುಳ್ಳಿನ ಹೊರತಾಗಿಯೂ, ಕೊನೆಗೆ ಅವಳು ಸತ್ತಳು. ಆದುದರಿಂದ ಹವ್ವಳ ಪಾಪದ ನಿಜವಾದ ಫಲಾನುಭವಿಯು ಸೈತಾನನೊಬ್ಬನೇ. ವಾಸ್ತವವಾಗಿ ಪಾಪ ಮಾಡುವಂತೆ ಹವ್ವಳನ್ನು ಒಪ್ಪಿಸುವುದರಲ್ಲಿ ಸೈತಾನನ ಅನಿರೂಪಿತ ಗುರಿಯು, ಸ್ವತಃ ಒಬ್ಬ ದೇವರಾಗುವುದಾಗಿತ್ತು. ಹವ್ವಳು ಪಾಪ ಮಾಡಿದಾಗ, ಅವಳು ಅವನ ಪ್ರಥಮ ಮಾನವ ಹಿಂಬಾಲಕಳಾಗಿ ಪರಿಣಮಿಸಿದಳು, ಮತ್ತು ಬೇಗನೆ ಆದಾಮನು ಅವಳ ಜೊತೆಗೂಡಿದನು. ಅವರ ಮಕ್ಕಳಲ್ಲಿ ಅಧಿಕಾಂಶ ಮಂದಿ “ಪಾಪಿ” ಗಳಾಗಿ ಹುಟ್ಟಿದ್ದು ಮಾತ್ರವಲ್ಲದೆ, ಸೈತಾನನ ಪ್ರಭಾವದ ಕೆಳಗೂ ಬಿದ್ದರು, ಮತ್ತು ಸ್ವಲ್ಪ ಸಮಯದಲ್ಲಿಯೇ, ಸತ್ಯ ದೇವರಿಂದ ವಿಮುಖವಾಗಿದ್ದ ಇಡೀ ಲೋಕವು ಅಸ್ತಿತ್ವಕ್ಕೆ ಬಂತು.—ಆದಿಕಾಂಡ 6:5; ಕೀರ್ತನೆ 51:5.
4. (ಎ) ಈ ಲೋಕದ ದೇವರು ಯಾರು? (ಬಿ) ಯಾವುದರ ಕುರಿತು ತುರ್ತಿನ ಅಗತ್ಯವಿದೆ?
4 ಆ ಲೋಕವು ಜಲಪ್ರಳಯದಲ್ಲಿ ನಾಶಗೊಳಿಸಲ್ಪಟ್ಟಿತು. (2 ಪೇತ್ರ 3:6) ಜಲಪ್ರಳಯದ ಬಳಿಕ ಯೆಹೋವನಿಂದ ವಿಮುಖವಾದ ಎರಡನೆಯ ಲೋಕವು ವಿಕಾಸಗೊಂಡಿತು, ಮತ್ತು ಇದು ಇನ್ನೂ ಅಸ್ತಿತ್ವದಲ್ಲಿದೆ. ಅದರ ಕುರಿತಾಗಿ ಬೈಬಲ್ ಹೇಳುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.” (1 ಯೋಹಾನ 5:19) ಯೆಹೋವನ ನಿಯಮದ ಭಾವಾರ್ಥಕ್ಕೂ ಶಬ್ದಾರ್ಥಕ್ಕೂ ವಿರುದ್ಧವಾಗಿರುವ ಅದರ ಕಾರ್ಯಚಟುವಟಿಕೆಯಿಂದಾಗಿ, ಈ ಲೋಕವು ಸೈತಾನನ ಗುರಿಗಳನ್ನು ಪೂರೈಸುತ್ತಿದೆ. ಅವನು ಅದರ ದೇವರಾಗಿದ್ದಾನೆ. (2 ಕೊರಿಂಥ 4:4) ಆದರೂ, ಮೂಲತಃ ಅವನು ನಿಷ್ಫಲನಾದ ದೇವರು. ಅವನು ಜನರನ್ನು ಸಂತೋಷಪಡಿಸಲಾರನು ಅಥವಾ ಅವರಿಗೆ ಜೀವವನ್ನು ಕೊಡಲಾರನು; ಯೆಹೋವನು ಮಾತ್ರವೇ ಅದನ್ನು ಮಾಡಬಲ್ಲನು. ಆದುದರಿಂದ, ಅರ್ಥಪೂರ್ಣವಾದ ಒಂದು ಜೀವಿತವನ್ನು ಮತ್ತು ಹೆಚ್ಚು ಉತ್ತಮವಾದ ಒಂದು ಲೋಕವನ್ನು ಅಪೇಕ್ಷಿಸುವ ಜನರು, ಮೊದಲಾಗಿ ಯೆಹೋವನು ಸತ್ಯ ದೇವರಾಗಿದ್ದಾನೆ ಎಂಬುದನ್ನು ಕಲಿಯಬೇಕು ಮತ್ತು ತದನಂತರ ಆತನ ಚಿತ್ತವನ್ನು ಮಾಡಲು ಕಲಿಯಬೇಕು. (ಕೀರ್ತನೆ 37:18, 27, 28; ಪ್ರಸಂಗಿ 12:13) ಹೀಗೆ, ಯೆಹೋವನ ಕುರಿತು ಸಾಕ್ಷಿನೀಡಲು ಅಥವಾ ಸತ್ಯವನ್ನು ಘೋಷಿಸಲು, ನಂಬಿಕೆಯುಳ್ಳ ಪುರುಷರು ಮತ್ತು ಸ್ತ್ರೀಯರಿಗೆ ತುರ್ತಿನ ಆವಶ್ಯಕತೆಯಿದೆ.
5. ಯಾವ “ಸಾಕ್ಷಿಗಳ ಮೇಘ” ವನ್ನು ಪೌಲನು ಉಲ್ಲೇಖಿಸಿದನು? ಅವನು ಪಟ್ಟಿಮಾಡುವ ಕೆಲವು ಜನರನ್ನು ಹೆಸರಿಸಿ.
5 ಮಾನವ ಕುಲದ ಇತಿಹಾಸದ ಆರಂಭದಿಂದಲೇ, ಅಂತಹ ನಂಬಿಗಸ್ತ ವ್ಯಕ್ತಿಗಳು ಲೋಕರಂಗದ ಮೇಲೆ ಕಂಡುಬಂದಿದ್ದಾರೆ. ಇಬ್ರಿಯ 11 ನೆಯ ಅಧ್ಯಾಯದಲ್ಲಿ, ಅಪೊಸ್ತಲ ಪೌಲನು ಅವರ ಕುರಿತು ಒಂದು ಉದ್ದವಾದ ಪಟ್ಟಿಯನ್ನು ಕೊಡುತ್ತಾನೆ ಮತ್ತು ಅವರನ್ನು “ಸಾಕ್ಷಿಗಳ ಬಹು ದೊಡ್ಡ ಮೇಘ” ಎಂದು ಕರೆಯುತ್ತಾನೆ. (ಇಬ್ರಿಯ 12:1, NW) ಪೌಲನ ಪಟ್ಟಿಯಲ್ಲಿ, ಆದಾಮಹವ್ವರ ದ್ವಿತೀಯ ಪುತ್ರನಾದ ಹೇಬೆಲನು ಮೊದಲಿಗನಾಗಿದ್ದನು. ಜಲಪ್ರಳಯಕ್ಕೂ ಮುಂಚಿನ ಸಮಯದಿಂದ ಹನೋಕ ಮತ್ತು ನೋಹರು ಸಹ ಹೆಸರಿಸಲ್ಪಟ್ಟಿದ್ದಾರೆ. (ಇಬ್ರಿಯ 11:4, 5, 7) ಯೆಹೂದ್ಯ ಕುಲದ ಮೂಲಪುರುಷನಾದ ಅಬ್ರಹಾಮನು ಪ್ರಮುಖನು. “ದೇವರ [“ಯೆಹೋವನ,” NW] ಸ್ನೇಹಿತ” ನೆಂದು ಕರೆಯಲ್ಪಡುವ ಅಬ್ರಹಾಮನು, “ನಂಬತಕ್ಕ ಸತ್ಯಸಾಕ್ಷಿ” ಯಾದ ಯೇಸುವಿನ ಪೂರ್ವಜನಾದನು.—ಯಾಕೋಬ 2:23; ಪ್ರಕಟನೆ 3:14.
ಸತ್ಯಕ್ಕಾಗಿ ಅಬ್ರಹಾಮನ ಸಾಕ್ಷಿ
6, 7. ಯೆಹೋವನು ಸತ್ಯ ದೇವರಾಗಿದ್ದಾನೆ ಎಂಬುದಕ್ಕೆ, ಯಾವ ವಿಧಗಳಲ್ಲಿ ಅಬ್ರಹಾಮನ ಜೀವಿತ ಮತ್ತು ಕಾರ್ಯಚಟುವಟಿಕೆಗಳು ಸಾಕ್ಷಿಯಾಗಿದ್ದವು?
6 ಅಬ್ರಹಾಮನು ಒಬ್ಬ ಸಾಕ್ಷಿಯೋಪಾದಿ ಹೇಗೆ ಕಾರ್ಯನಡಿಸಿದನು? ಯೆಹೋವನಿಗೆ ತನ್ನ ಬಲವಾದ ನಂಬಿಕೆ ಮತ್ತು ನಿಷ್ಠೆಯ ವಿಧೇಯತೆಯ ಮೂಲಕವೇ. ಊರ್ ಪಟ್ಟಣವನ್ನು ಬಿಟ್ಟು, ತನ್ನ ಜೀವಿತದ ಉಳಿದ ದಿನಗಳನ್ನು ದೂರದ ದೇಶವೊಂದರಲ್ಲಿ ಕಳೆಯುವಂತೆ ಅವನಿಗೆ ಅಪ್ಪಣೆಮಾಡಲ್ಪಟ್ಟಾಗ, ಅಬ್ರಹಾಮನು ವಿಧೇಯನಾದನು. (ಆದಿಕಾಂಡ 15:7; ಅ. ಕೃತ್ಯಗಳು 7:2-4) ಅಲೆದಾಡುತ್ತಿರುವ ಅನಾಗರಿಕ ಜನರು ಅನೇಕವೇಳೆ ತಮ್ಮ ಅಲೆಮಾರಿ ಜೀವನವನ್ನು ತೊರೆಯುವರು ಮತ್ತು ಪಟ್ಟಣದ ಹೆಚ್ಚು ಭದ್ರವಾದ ಜೀವನದ ಆಯ್ಕೆಮಾಡುವರು. ಆದುದರಿಂದ, ಗುಡಾರಗಳಲ್ಲಿ ಜೀವನ ನಡೆಸುವುದನ್ನು ಅಂಗೀಕರಿಸಲಿಕ್ಕಾಗಿ ಅಬ್ರಹಾಮನು ಪಟ್ಟಣವನ್ನು ಬಿಟ್ಟುಹೋದಾಗ, ಯೆಹೋವ ದೇವರಲ್ಲಿನ ತನ್ನ ಭರವಸೆಯ ಕುರಿತು ಬಲವಾದ ಪುರಾವೆಯನ್ನು ಅವನು ಕೊಟ್ಟನು. ಅವನ ವಿಧೇಯತೆಯು, ಅವನ ನಡತೆಯನ್ನು ಗಮನಿಸುತ್ತದ್ದವರಿಗೆ ಒಂದು ಸಾಕ್ಷಿಯಾಗಿತ್ತು. ಅಬ್ರಹಾಮನ ನಂಬಿಕೆಯ ಕಾರಣದಿಂದಾಗಿ ಯೆಹೋವನು ಅವನನ್ನು ಹೇರಳವಾಗಿ ಆಶೀರ್ವದಿಸಿದನು. ಗುಡಾರಗಳಲ್ಲಿ ಜೀವಿಸುತ್ತಿದ್ದಾಗ್ಯೂ, ಅಬ್ರಹಾಮನು ಪ್ರಾಪಂಚಿಕವಾಗಿ ಸಮೃದ್ಧಿ ಹೊಂದಿದನು. ಲೋಟನು ಮತ್ತು ಅವನ ಕುಟುಂಬವು ಬಂದಿಯಾಗಿ ಕೊಂಡೊಯ್ಯಲ್ಪಟ್ಟಾಗ, ಯೆಹೋವನು ಅಬ್ರಹಾಮನ ಬೆನ್ನಟ್ಟುವಿಕೆಯಲ್ಲಿ ಅವನಿಗೆ ಯಶಸ್ಸನ್ನು ಕೊಟ್ಟನು, ಇದರಿಂದಾಗಿ ಅವನು ಅವರನ್ನು ಕಾಪಾಡಲು ಶಕ್ತನಾದನು. ಅಬ್ರಹಾಮನ ಹೆಂಡತಿಯು ತನ್ನ ಮುಪ್ಪಿನ ಪ್ರಾಯದಲ್ಲಿ ಒಬ್ಬ ಮಗನನ್ನು ಹೆತ್ತಳು, ಮತ್ತು ಹೀಗೆ ಅಬ್ರಹಾಮನು ಒಂದು ಸಂತತಿಗೆ ತಂದೆಯಾಗುವನೆಂಬ ಯೆಹೋವನ ವಾಗ್ದಾನವು ದೃಢಪಡಿಸಲ್ಪಟ್ಟಿತು. ಅಬ್ರಹಾಮನ ಮೂಲಕವಾಗಿ, ತನ್ನ ವಾಗ್ದಾನಗಳನ್ನು ನೆರವೇರಿಸುವ ಜೀವಂತ ದೇವರು ಯೆಹೋವನಾಗಿದ್ದಾನೆಂದು ಜನರು ಕಂಡುಕೊಂಡರು.—ಆದಿಕಾಂಡ 12:1-3; 14:14-16; 21:1-7.
7 ಲೋಟನನ್ನು ಕಾಪಾಡಿ ಹಿಂದಿರುಗುತ್ತಿದ್ದಾಗ, “ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ಆಗಲಿ” ಎಂದು ಹೇಳುತ್ತಾ ಸ್ವಾಗತಿಸಿದ, ಸಾಲೇಮಿ (ತದನಂತರ ಯೆರೂಸಲೇಮ್ ಎಂದು ಕರೆಯಲ್ಪಟ್ಟಿತು)ನ ಅರಸನಾದ ಮೆಲ್ಕೀಚೆದೆಕನು ಅಬ್ರಹಾಮನನ್ನು ಸಂಧಿಸಿದನು. ಸೊದೋಮಿನ ಅರಸನು ಸಹ ಅವನನ್ನು ಸಂಧಿಸಿದನು ಮತ್ತು ಅವನಿಗೆ ಬಹುಮಾನಗಳನ್ನು ಕೊಡಲು ಬಯಸಿದನು. ಅಬ್ರಹಾಮನು ನಿರಾಕರಿಸಿದನು. ಏಕೆ? ತನ್ನ ಆಶೀರ್ವಾದಗಳ ಉಗಮದ ಕುರಿತಾಗಿ ಯಾವುದೇ ಸಂದೇಹವು ಅಲ್ಲಿರುವುದನ್ನು ಅವನು ಅಪೇಕ್ಷಿಸಲಿಲ್ಲ. ಅವನು ಹೇಳಿದ್ದು: “ಒಂದು ದಾರವನ್ನಾಗಲಿ ಕೆರದ ಬಾರನ್ನಾಗಲಿ ನಿನ್ನದರಲ್ಲಿ ಯಾವದನ್ನೂ ತೆಗೆದುಕೊಳ್ಳುವದಿಲ್ಲವೆಂದು ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರದೇವರಾಗಿರುವ ಯೆಹೋವನ ಕಡೆಗೆ ಕೈಯೆತ್ತಿ ಪ್ರಮಾಣಮಾಡುತ್ತೇನೆ. ಅಬ್ರಾಮನು ನನ್ನ ಸೊತ್ತಿನಿಂದಲೇ ಐಶ್ವರ್ಯವಂತನಾದನೆಂದು ಹೇಳಿಕೊಳ್ಳುವದಕ್ಕೆ ನಿನಗೆ ಆಸ್ಪದವಾಗಬಾರದು, ನನಗೆ ಏನೂ ಬೇಡ.” (ಆದಿಕಾಂಡ 14:17-24) ಅಬ್ರಹಾಮನು ಎಂತಹ ಅತ್ಯುತ್ತಮ ಸಾಕ್ಷಿಯಾಗಿದ್ದನು!
ಸಾಕ್ಷಿಗಳ ಒಂದು ಜನಾಂಗ
8. ಮೋಶೆಯು ಯೆಹೋವನಲ್ಲಿ ಹೇಗೆ ಮಹತ್ತರ ನಂಬಿಕೆಯನ್ನು ತೋರಿಸಿದನು?
8 ಅಬ್ರಹಾಮನ ವಂಶಜನಾದ ಮೋಶೆಯು ಸಹ, ಪೌಲನ ಸಾಕ್ಷಿಗಳ ಕುರಿತಾದ ಪಟ್ಟಿಯಲ್ಲಿ ಕಂಡುಬರುತ್ತಾನೆ. ಮೋಶೆಯು ಐಗುಪ್ತದ ಐಶ್ವರ್ಯಗಳನ್ನು ಉಪೇಕ್ಷಿಸಿದನು ಮತ್ತು ತದನಂತರ ಇಸ್ರಾಯೇಲ್ನ ಮಕ್ಕಳನ್ನು ಬಿಡುಗಡೆಗೆ ನಡೆಸಲಿಕ್ಕಾಗಿ, ಆ ಮಹಾ ಲೋಕ ಶಕ್ತಿಯ ಅಧಿಪತಿಯನ್ನು ಧೈರ್ಯದಿಂದ ಎದುರಿಸಿದನು. ಅವನು ಧೈರ್ಯವನ್ನು ಎಲ್ಲಿಂದ ಪಡೆದುಕೊಂಡನು? ತನ್ನ ನಂಬಿಕೆಯಿಂದಲೇ. ಪೌಲನು ಹೇಳುವುದು: “[ಮೋಶೆಯು] ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:27) ಐಗುಪ್ತದ ದೇವರುಗಳು ದೃಗ್ಗೋಚರವೂ ಸ್ಪರ್ಶಸಾಧ್ಯವೂ ಆಗಿದ್ದರು. ಇಂದು ಕೂಡ, ಅವುಗಳ ಪ್ರತಿಮೆಗಳು ಜನರ ಮೇಲೆ ಪ್ರಭಾವ ಬೀರುತ್ತವೆ. ಆದರೆ ಯೆಹೋವನು ಅದೃಶ್ಯನಾಗಿದ್ದಾಗ್ಯೂ, ಆ ಎಲ್ಲ ಸುಳ್ಳು ದೇವರುಗಳಿಗಿಂತ ಆತನು ಮೋಶೆಗೆ ಎಷ್ಟೋ ಹೆಚ್ಚು ನೈಜವಾಗಿದ್ದನು. ಯೆಹೋವನು ಅಸ್ತಿತ್ವದಲ್ಲಿದ್ದಾನೆ ಮತ್ತು ಆತನು ತನ್ನ ಆರಾಧಕರಿಗೆ ಪ್ರತಿಫಲವನ್ನು ಕೊಡುತ್ತಾನೆಂಬುದರಲ್ಲಿ ಮೋಶೆಗೆ ಸಂದೇಹವಿರಲಿಲ್ಲ. (ಇಬ್ರಿಯ 11:6) ಮೋಶೆಯು ಒಬ್ಬ ಪ್ರಮುಖ ಸಾಕ್ಷಿಯಾದನು.
9. ಇಸ್ರಾಯೇಲ್ ಜನಾಂಗವು ಯೆಹೋವನನ್ನು ಹೇಗೆ ಸೇವಿಸಲಿತ್ತು?
9 ಇಸ್ರಾಯೇಲ್ಯರನ್ನು ಬಿಡುಗಡೆಗೆ ನಡಿಸಿದ ಬಳಿಕ, ಯೆಹೋವನ ಮತ್ತು ಯಾಕೋಬನ ಮೂಲಕ ಬಂದ ಅಬ್ರಹಾಮನ ವಂಶಜರ ನಡುವಿನ ಒಂದು ಒಡಂಬಡಿಕೆಗೆ ಮೋಶೆಯು ಮಧ್ಯಸ್ಥಗಾರನಾದನು. ಫಲಿತಾಂಶವಾಗಿ, ಇಸ್ರಾಯೇಲ್ ಜನಾಂಗವು ಯೆಹೋವನ ವಿಶೇಷ ಸ್ವತ್ತಿನೋಪಾದಿ ಅಸ್ತಿತ್ವಕ್ಕೆ ಬಂತು. (ವಿಮೋಚನಕಾಂಡ 19:5, 6) ಮೊದಲ ಬಾರಿಗೆ, ಒಂದು ಜನಾಂಗೀಯ ಸಾಕ್ಷಿಯು ಕೊಡಲ್ಪಡಲಿಕ್ಕಿತ್ತು. ಯೆಶಾಯನ ಮೂಲಕ ಕೊಡಲ್ಪಟ್ಟ ಯೆಹೋವನ ಮಾತುಗಳು, ಸುಮಾರು 800 ವರ್ಷಗಳ ತರುವಾಯ, ಜನಾಂಗದ ಅಸ್ತಿತ್ವದ ಆರಂಭದಿಂದ ಮೂಲತತ್ವಗಳ ಸಂಬಂಧದಲ್ಲಿ ಅನ್ವಯಿಸಲ್ಪಟ್ಟವು: “ಯೆಹೋವನ ಮಾತೇನಂದರೆ—ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; ನೀವು ನನ್ನನ್ನು ತಿಳಿದು ನಂಬಿ ನನ್ನನ್ನೇ ಪರಮಾತ್ಮನು ಎಂದು ಗ್ರಹಿಸುವ ಹಾಗೆ [ಇದನ್ನು ನಡಿಸಿದೆನು].” (ಯೆಶಾಯ 43:10) ಈ ಹೊಸ ಜನಾಂಗವು ಯೆಹೋವನ ಸಾಕ್ಷಿಗಳೋಪಾದಿ ಹೇಗೆ ಕಾರ್ಯನಡಿಸಲಿತ್ತು? ಅವರ ನಂಬಿಕೆ ಮತ್ತು ವಿಧೇಯತೆ ಹಾಗೂ ಅವರ ಪರವಾದ ಯೆಹೋವನ ಕಾರ್ಯಚಟುವಟಿಕೆಗಳ ಮೂಲಕವೇ.
10. ಇಸ್ರಾಯೇಲಿನ ಪರವಾಗಿ ಯೆಹೋವನ ಪ್ರಬಲವಾದ ಕಾರ್ಯಗಳು ಯಾವ ವಿಧದಲ್ಲಿ ಒಂದು ಸಾಕ್ಷಿಯನ್ನು ಒದಗಿಸಿದವು, ಮತ್ತು ಯಾವ ಫಲಿತಾಂಶಗಳೊಂದಿಗೆ?
10 ಅದರ ಆರಂಭದ ಸುಮಾರು 40 ವರ್ಷಗಳ ಬಳಿಕ, ಇಸ್ರಾಯೇಲ್ ವಾಗ್ದಾನ ದೇಶದ ಒಡೆತನವನ್ನು ಇನ್ನೇನು ತೆಗೆದುಕೊಳ್ಳಲಿಕ್ಕಿತ್ತು. ಯೆರಿಕೋ ಪಟ್ಟಣದ ಸುಳಿವು ತಿಳಿದುಕೊಳ್ಳಲಿಕ್ಕಾಗಿ ಗೂಢಚಾರರು ಹೋದರು, ಮತ್ತು ಯೆರಿಕೋವಿನ ನಿವಾಸಿಯಾದ ರಾಹಾಬಳು ಅವರನ್ನು ಸಂರಕ್ಷಿಸಿದಳು. ಏಕೆ? ಅವಳು ಹೇಳಿದ್ದು: “ನೀವು ಐಗುಪ್ತದಿಂದ ಹೊರಟು ಬಂದ ಮೇಲೆ ಯೆಹೋವನು ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟದ್ದನ್ನೂ ನೀವು ಯೊರ್ದನಿನ ಆಚೆಯಲ್ಲಿರುವ ಸೀಹೋನ್ ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನಿರ್ಮೂಲಮಾಡಿದ್ದನ್ನೂ ಕೇಳಿ ನಮ್ಮ ಎದೆಯೊಡೆದುಹೋಯಿತು; ನಿಮ್ಮನ್ನು ಎದುರಿಸುವ ಧೈರ್ಯವು ಒಬ್ಬನಲ್ಲಿಯೂ ಇಲ್ಲ. ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು.” (ಯೆಹೋಶುವ 2:10, 11) ಯೆಹೋವನ ಪ್ರಬಲವಾದ ಕಾರ್ಯಗಳ ವರದಿಯು, ರಾಹಾಬಳು ಮತ್ತು ಅವಳ ಕುಟುಂಬವು ಯೆರಿಕೋ ಪಟ್ಟಣವನ್ನು ಹಾಗೂ ಅದರ ಸುಳ್ಳು ದೇವರುಗಳನ್ನು ಬಿಟ್ಟುಹೋಗುವಂತೆಯೂ ಇಸ್ರಾಯೇಲಿನೊಂದಿಗೆ ಯೆಹೋವನನ್ನು ಆರಾಧಿಸುವಂತೆಯೂ ಪ್ರಚೋದಿಸಿತು. ಇಸ್ರಾಯೇಲಿನ ಮೂಲಕವಾಗಿ ಯೆಹೋವನು ಒಂದು ಪ್ರಬಲವಾದ ಸಾಕ್ಷಿಯನ್ನು ಕೊಟ್ಟಿದ್ದನೆಂಬುದು ಸ್ಪಷ್ಟ.—ಯೆಹೋಶುವ 6:25.
11. ಸಾಕ್ಷಿನೀಡುವುದರ ಕುರಿತಾಗಿ ಎಲ್ಲಾ ಇಸ್ರಾಯೇಲ್ಯ ಹೆತ್ತವರಿಗೆ ಯಾವ ಜವಾಬ್ದಾರಿಯಿತ್ತು?
11 ಇಸ್ರಾಯೇಲ್ಯರು ಇನ್ನೂ ಐಗುಪ್ತದಲಿದ್ಲಾಗ್ದ, ಯೆಹೋವನು ಮೋಶೆಯನ್ನು ಫರೋಹನ ಬಳಿಗೆ ಕಳುಹಿಸಿ ಹೇಳಿದ್ದು: “ಫರೋಹನ ಬಳಿಗೆ ತಿರಿಗಿ ಹೋಗು. ನಾನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ಈ ಮಹತ್ಕಾರ್ಯಗಳನ್ನು ನಡಿಸುವದಕ್ಕೆ ಆಸ್ಪದವಾಗುವದಕ್ಕೂ ಇಸ್ರಾಯೇಲ್ಯರು ತಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ನಾನು ಐಗುಪ್ತ್ಯರ ನಡುವೆ ನಡಿಸಿರುವ ಮಹತ್ಕಾರ್ಯಗಳನ್ನು ವಿವರಿಸಿ—ಯೆಹೋವನು ಐಗುಪ್ತ್ಯರನ್ನು ತನಗೆ ಇಷ್ಟ ಬಂದಂತೆ ಆಡಿಸಿ ಶಿಕ್ಷಿಸಿದನು ಎಂಬದಾಗಿ ತಿಳಿಸುವದಕ್ಕೂ ನಾನು ಫರೋಹನ ಹೃದಯವನ್ನೂ ಅವನ ಪರಿವಾರದವರ ಹೃದಯಗಳನ್ನೂ ಮೊಂಡಮಾಡಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳಿಂದ ನೀವು ನನ್ನನ್ನೇ ಯೆಹೋವನೆಂದು ತಿಳುಕೊಳ್ಳುವಿರಿ.” (ವಿಮೋಚನಕಾಂಡ 10:1, 2) ವಿಧೇಯ ಇಸ್ರಾಯೇಲ್ಯರು ತಮ್ಮ ಮಕ್ಕಳಿಗೆ ಯೆಹೋವನ ಬಲಿಷ್ಠ ಕೃತ್ಯಗಳ ಕುರಿತು ಹೇಳುತ್ತಿದ್ದರು. ಪ್ರತಿಯಾಗಿ, ಅವರ ಮಕ್ಕಳು ತಮ್ಮ ಮಕ್ಕಳಿಗೆ ಅವುಗಳ ಕುರಿತು ಹೇಳುತ್ತಿದ್ದರು, ಮತ್ತು ಹೀಗೆ ತಲತಲಾಂತರಗಳ ವರೆಗೆ ಅದನ್ನು ಮಾಡಸಾಧ್ಯವಿತ್ತು. ಹೀಗೆ, ಯೆಹೋವನ ಪ್ರಬಲ ಕಾರ್ಯಗಳನ್ನು ಜ್ಞಾಪಿಸಿಕೊಳ್ಳಬಹುದಿತ್ತು. ತದ್ರೀತಿಯಲ್ಲಿ ಇಂದು, ತಮ್ಮ ಮಕ್ಕಳಿಗೆ ಸಾಕ್ಷಿನೀಡುವ ಜವಾಬ್ದಾರಿಯು ಹೆತ್ತವರಿಗಿದೆ.—ಧರ್ಮೋಪದೇಶಕಾಂಡ 6:4-7; ಜ್ಞಾನೋಕ್ತಿ 22:6.
12. ಸೊಲೊಮೋನನ ಮತ್ತು ಇಸ್ರಾಯೇಲಿನ ಮೇಲಿನ ಯೆಹೋವನ ಆಶೀರ್ವಾದವು ಒಂದು ಸಾಕ್ಷಿಯೋಪಾದಿ ಹೇಗೆ ಕಾರ್ಯನಡಿಸಿತು?
12 ಇಸ್ರಾಯೇಲ್ ನಂಬಿಗಸ್ತವಾಗಿದ್ದಾಗ ಅದರ ಮೇಲೆ ಸುರಿಸಲ್ಪಟ್ಟ ಯೆಹೋವನ ಹೇರಳವಾದ ಆಶೀರ್ವಾದವು, ಸುತ್ತಲಿನ ಜನಾಂಗಗಳಿಗೆ ಒಂದು ಸಾಕ್ಷ್ಯದೋಪಾದಿ ಕಾರ್ಯನಡಿಸಿತು. ಯೆಹೋವನ ವಾಗ್ದತ್ತ ಆಶೀರ್ವಾದಗಳನ್ನು ವಿಸ್ತಾರವಾಗಿ ವರ್ಣಿಸಿದ ಬಳಿಕ ಮೋಶೆ ಹೇಳಿದಂತೆ: “ಭೂಮಿಯಲ್ಲಿರುವ ಎಲ್ಲಾ ಜನಗಳೂ ನಿಮ್ಮನ್ನು ಯೆಹೋವನ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.” (ಧರ್ಮೋಪದೇಶಕಾಂಡ 28:10) ತನ್ನ ನಂಬಿಕೆಯ ಕಾರಣದಿಂದ ಸೊಲೊಮೋನನಿಗೆ ಜ್ಞಾನವೂ ಐಶ್ವರ್ಯವೂ ಕೊಡಲ್ಪಟ್ಟಿತ್ತು. ಅವನ ಆಳಿಕ್ವೆಯ ಕೆಳಗೆ ಜನಾಂಗವು ಸಂಪತ್ಭರಿತವಾಯಿತು ಮತ್ತು ದೀರ್ಘಾವಧಿಯ ಶಾಂತಿಯನ್ನು ಅನುಭೋಗಿಸಿತು. ಆ ಸಮಯದ ಕುರಿತಾಗಿ ನಾವು ಒದುವುದು: “ಎಲ್ಲಾ ಜನಾಂಗಗಳಲ್ಲಿಯೂ ಸೊಲೊಮೋನನ ಜ್ಞಾನವಿಶೇಷವನ್ನು ಕುರಿತು ಕೇಳಿದ ಭೂಪಾಲರಲ್ಲಿಯೂ ಅನೇಕರು ಅವನ ಜ್ಞಾನವಾಕ್ಯಗಳನ್ನು ಕೇಳುವದಕ್ಕೋಸ್ಕರ ಬಂದರು.” (1 ಅರಸು 4:25, 29, 30, 34) ಸೊಲೊಮೋನನ ಭೇಟಿಗಾರರಲ್ಲಿ ಶೆಬಾ ದೇಶದ ರಾಣಿಯು ಪ್ರಮುಖಳಾಗಿದ್ದಳು. ಜನಾಂಗ ಹಾಗೂ ಅದರ ಅರಸನ ಮೇಲಿನ ಯೆಹೋವನ ಆಶೀರ್ವಾದವನ್ನು ಸ್ವತಃ ನೋಡಿದ ಬಳಿಕ ಅವಳು ಹೇಳಿದ್ದು: “ನಿನ್ನನ್ನು ಮೆಚ್ಚಿ ತನ್ನ ಸನ್ನಿಧಿಯಲ್ಲಿ ಅರಸನಾಗುವದಕ್ಕೆ ನಿನ್ನನ್ನು ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನಿನ್ನ ದೇವರು ಇಸ್ರಾಯೇಲ್ಯರನ್ನು ಪ್ರೀತಿಸಿ” ದನು.—2 ಪೂರ್ವಕಾಲವೃತ್ತಾಂತ 9:8.
13. ಇಸ್ರಾಯೇಲಿನ ಅತ್ಯಂತ ಪರಿಣಾಮಕಾರಿ ಸಾಕ್ಷಿಯು ಬಹುಶಃ ಯಾವುದಾಗಿದ್ದಿರಬಹುದು, ಮತ್ತು ನಾವು ಇನ್ನೂ ಅದರಿಂದ ಹೇಗೆ ಪ್ರಯೋಜನ ಪಡೆಯುತ್ತಿದ್ದೇವೆ?
13 ಇಸ್ರಾಯೇಲಿನ ಅತ್ಯಂತ ಪರಿಣಾಮಕಾರಿ ಸಾಕ್ಷಿಯು ಬಹುಶಃ ಏನಾಗಿತ್ತೆಂಬುದನ್ನು ಅಪೊಸ್ತಲ ಪೌಲನು ಉಲ್ಲೇಖಿಸಿದನು. ರೋಮ್ನಲ್ಲಿನ ಕ್ರೈಸ್ತ ಸಭೆಯೊಂದಿಗೆ ಮಾಂಸಿಕ ಇಸ್ರಾಯೇಲನ್ನು ಚರ್ಚಿಸುತ್ತಿದ್ದಾಗ, ಅವನು ಹೇಳಿದ್ದು: “ದೈವೋಕ್ತಿಗಳು ಅವರ ವಶಕ್ಕೆ ಒಪ್ಪಿಸಲ್ಪಟ್ಟವು.” (ರೋಮಾಪುರ 3:1, 2) ಮೋಶೆಯಿಂದ ಆರಂಭಿಸಿ, ಇಸ್ರಾಯೇಲಿನೊಂದಿಗಿನ ಯೆಹೋವನ ವ್ಯವಹಾರಗಳು, ಹಾಗೂ ಆತನ ಸಲಹೆ, ಆತನ ನಿಯಮಗಳು, ಮತ್ತು ಆತನ ಪ್ರವಾದನೆಗಳನ್ನು ಬರಹದಲ್ಲಿ ದಾಖಲಿಸಲಿಕ್ಕಾಗಿ ಕೆಲವು ನಂಬಿಗಸ್ತ ಇಸ್ರಾಯೇಲ್ಯರು ಪ್ರೇರಿಸಲ್ಪಟ್ಟರು. ಈ ಬರಹಗಳ ಮೂಲಕ ಆ ಪುರಾತನ ಶಾಸ್ತ್ರಿಗಳು ಭವಿಷ್ಯತ್ತಿನ ಎಲ್ಲಾ ಸಂತತಿ—ಇಂದಿನ ನಮ್ಮ ಸಂತತಿಯನ್ನೂ ಸೇರಿಸಿ—ಗಳಿಗೆ, ಏಕಮಾತ್ರ ದೇವರಿದ್ದಾನೆ ಮತ್ತು ಆತನ ಹೆಸರು ಯೆಹೋವ ಎಂದಾಗಿದೆ ಎಂಬ ಸಾಕ್ಷಿಯನ್ನು ನೀಡಿದರು.—ದಾನಿಯೇಲ 12:9; 1 ಪೇತ್ರ 1:10-12.
14. ಯೆಹೋವನಿಗಾಗಿ ಸಾಕ್ಷಿ ನೀಡಿದ ಕೆಲವರು ಹಿಂಸೆಯನ್ನು ಅನುಭವಿಸಿದ್ದೇಕೆ?
14 ಅಸಂತೋಷಕರವಾಗಿ, ಇಸ್ರಾಯೇಲ್ ನಂಬಿಕೆಯನ್ನು ಅಭ್ಯಾಸಿಸಲು ಆಗಿಂದಾಗ್ಗೆ ತಪ್ಪಿಹೋಯಿತು, ಮತ್ತು ಆಗ ಯೆಹೋವನು ತನ್ನ ಸ್ವಂತ ಜನಾಂಗಕ್ಕೆ ಸಾಕ್ಷಿಗಳನ್ನು ಕಳುಹಿಸಬೇಕಾಯಿತು. ಇವರಲ್ಲಿ ಅನೇಕರು ಹಿಂಸಿಸಲ್ಪಟ್ಟರು. ಕೆಲವರು “ಅಪಹಾಸ್ಯ ಕೊರಡೆಯ ಪೆಟ್ಟು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು” ಎಂದು ಪೌಲನು ಹೇಳಿದನು. (ಇಬ್ರಿಯ 11:36) ನಿಜವಾಗಿಯೂ ನಂಬಿಗಸ್ತ ಸಾಕ್ಷಿಗಳು! ಅನೇಕವೇಳೆ ಯೆಹೋವನು ಆರಿಸಿಕೊಂಡ ಜನಾಂಗದ ಜೊತೆ ಸದಸ್ಯರಿಂದಲೇ ಅವರಿಗೆ ಹಿಂಸೆಗಳು ಬಂದವು ಎಂಬುದು ಎಷ್ಟು ಶೋಚನೀಯ! (ಮತ್ತಾಯ 23:31, 37) ವಾಸ್ತವವಾಗಿ, ಜನಾಂಗದ ಪಾಪವು ಎಷ್ಟು ಮಹತ್ತರವಾಗಿ ಪರಿಣಮಿಸಿತೆಂದರೆ, ಸಾ.ಶ.ಪೂ 607 ರಲ್ಲಿ ಯೆರೂಸಲೇಮನ್ನು ಅದರ ದೇವಾಲಯದೊಂದಿಗೆ ನಾಶಮಾಡುವಂತೆ ಮತ್ತು ಬದುಕಿ ಉಳಿಯುವ ಅಧಿಕಾಂಶ ಇಸ್ರಾಯೇಲ್ಯರನ್ನು ದೇಶಭ್ರಷ್ಟತೆಗೆ ಕೊಂಡೊಯ್ಯುವಂತೆ ಯೆಹೋವನು ಬಾಬೆಲಿನವರನ್ನು ಕರೆತಂದನು. (ಯೆರೆಮೀಯ 20:4; 21:10) ಯೆಹೋವನ ನಾಮಕ್ಕಾಗಿರುವ ಜನಾಂಗೀಯ ಸಾಕ್ಷಿಗೆ ಅದು ಕೊನೆಯಾಗಿತ್ತೊ? ಇಲ್ಲ.
ದೇವರುಗಳ ನ್ಯಾಯವಿಚಾರಣೆ
15. ಬಾಬೆಲಿನ ದೇಶಭ್ರಷ್ಟತೆಯಲ್ಲಿಯೂ ಒಂದು ಸಾಕ್ಷಿಯು ಹೇಗೆ ಕೊಡಲ್ಪಟ್ಟಿತು?
15 ಬಾಬೆಲಿನ ದೇಶಭ್ರಷ್ಟತೆಯಲ್ಲಿ ಸಹ, ಜನಾಂಗದ ನಂಬಿಗಸ್ತ ಸದಸ್ಯರು ಯೆಹೋವನ ದೇವತ್ವ ಮತ್ತು ಶಕ್ತಿಯ ಕುರಿತು ಸಾಕ್ಷಿನೀಡಲು ಹಿಂಜರಿಯಲಿಲ್ಲ. ಉದಾಹರಣೆಗೆ, ದಾನಿಯೇಲನು ಧೈರ್ಯದಿಂದ ನೆಬೂಕದ್ನೆಚ್ಚರನ ಕನಸುಗಳ ಅರ್ಥವಿವರಣೆ ಮಾಡಿದನು, ಬೇಲ್ಶಚ್ಚರನಿಗಾಗಿ ಗೋಡೆಯ ಮೇಲಿನ ಲೇಖನವನ್ನು ವಿವರಿಸಿದನು, ಮತ್ತು ಪ್ರಾರ್ಥನೆಯ ವಿಷಯದಲ್ಲಿ ದಾರ್ಯಾವೆಷನ ಮುಂದೆ ಒಪ್ಪಂದ ಮಾಡಿಕೊಳ್ಳಲು ನಿರಾಕರಿಸಿದನು. ಒಂದು ಪ್ರತಿಮೆಗೆ ಅಡ್ಡಬೀಳಲು ನಿರಾಕರಿಸಿದಾಗ, ಮೂವರು ಇಬ್ರಿಯರು ಸಹ, ನೆಬೂಕದ್ನೆಚ್ಚರನಿಗೆ ಒಂದು ಅದ್ಭುತಕರವಾದ ಸಾಕ್ಷಿಯನ್ನು ಕೊಟ್ಟರು.—ದಾನಿಯೇಲ 3:13-18; 5:13-29; 6:4-27.
16. ತಮ್ಮ ದೇಶಕ್ಕೆ ಇಸ್ರಾಯೇಲ್ನ ಹಿಂದಿರುಗುವಿಕೆಯನ್ನು ಯೆಹೋವನು ಹೇಗೆ ಮುಂತಿಳಿಸಿದನು, ಮತ್ತು ಈ ಹಿಂದಿರುಗುವಿಕೆಯ ಉದ್ದೇಶವೇನಾಗಿರಲಿತ್ತು?
16 ಆದಾಗಲೂ, ಜನಾಂಗೀಯ ಸಾಕ್ಷಿಯು ಪುನಃ ಇಸ್ರಾಯೇಲ್ ದೇಶದಲ್ಲಿ ಕೊಡಲ್ಪಡುವುದೆಂದು ಯೆಹೋವನು ಉದ್ದೇಶಿಸಿದನು. ಬಾಬೆಲಿನಲ್ಲಿ ದೇಶಭ್ರಷ್ಟರಾದ ಯೆಹೂದ್ಯರ ನಡುವೆ ಪ್ರವಾದಿಸಿದ ಯೆಹೆಜ್ಕೇಲನು, ಧ್ವಂಸಮಾಡಲ್ಪಟ್ಟ ದೇಶಕ್ಕೆ ಸಂಬಂಧಿಸಿದ ಯೆಹೋವನ ದೃಢನಿರ್ಧಾರದ ಕುರಿತು ಬರೆದದ್ದು: “ನಿಮ್ಮಲ್ಲಿ ಬಹು ಜನರು ಅಂದರೆ ಇಸ್ರಾಯೇಲ್ ವಂಶವೆಲ್ಲವೂ ವಾಸಿಸುವಂತೆ ಮಾಡುವೆನು; ಪಟ್ಟಣಗಳು ಜನಭರಿತವಾಗುವವು, ಹಾಳುನಿವೇಶನಗಳಲ್ಲಿ ಕಟ್ಟಡಗಳು ಏಳುವವು.” (ಯೆಹೆಜ್ಕೇಲ 36:10) ಯೆಹೋವನು ಇದನ್ನು ಏಕೆ ಮಾಡಲಿದ್ದನು? ಮುಖ್ಯವಾಗಿ ತನ್ನ ಸ್ವಂತ ಹೆಸರಿಗೆ ಒಂದು ಸಾಕ್ಷಿಯೋಪಾದಿ. ಯೆಹೆಜ್ಕೇಲನ ಮುಖಾಂತರ ಆತನು ಹೇಳಿದ್ದು: “ಇಸ್ರಾಯೇಲ್ ವಂಶದವರೇ, ನಿಮ್ಮ ನಿಮಿತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧನಾಮದ ನಿಮಿತ್ತವೇ ಈ ರಕ್ಷಣಕಾರ್ಯವನ್ನು ಮಾಡುತ್ತೇನೆ.”—ಯೆಹೆಜ್ಕೇಲ 36:22; ಯೆರೆಮೀಯ 50:28.
17. ಯೆಶಾಯ 43:10ರ ಮಾತುಗಳ ಪೂರ್ವಾಪರ ಸಂದರ್ಭವು ಏನಾಗಿತ್ತು?
17 ಬಾಬೆಲಿನ ದೇಶಭ್ರಷ್ಟತೆಯಿಂದ ಇಸ್ರಾಯೇಲಿನ ಹಿಂದಿರುಗುವಿಕೆಯನ್ನು ಪ್ರವಾದಿಸುತ್ತಿದ್ದಾಗಲೇ, ಇಸ್ರಾಯೇಲು ಯೆಹೋವನ ಸಾಕ್ಷಿ, ಆತನ ಸೇವಕನಾಗಿತ್ತು ಎಂದು ಹೇಳುತ್ತಾ ಪ್ರವಾದಿಯಾದ ಯೆಶಾಯನು, ಯೆಶಾಯ 43:10 ರಲ್ಲಿರುವ ಮಾತುಗಳನ್ನು ಬರೆಯುವಂತೆ ಪ್ರೇರೇಪಿಸಲ್ಪಟ್ಟನು. ಯೆಶಾಯ 43 ಮತ್ತು 44 ರಲ್ಲಿ, ಯೆಹೋವನು ಇಸ್ರಾಯೇಲಿನ ಸೃಷ್ಟಿಕರ್ತ, ರಚಕ, ದೇವರು, ಪವಿತ್ರನು, ಉದ್ಧಾರಕ, ವಿಮೋಚಕ, ಅರಸ, ಮತ್ತು ನಿರ್ಮಾಣಿಕನೋಪಾದಿ ವರ್ಣಿಸಲ್ಪಡುತ್ತಾನೆ. (ಯೆಶಾಯ 43:3, 14, 15; 44:2) ಜನಾಂಗವು ಆತನನ್ನು ಅಂತಹವನನ್ನಾಗಿ ಮಹಿಮೆ ಪಡಿಸಲು ಪದೇ ಪದೇ ಸೋತುಹೋದ ಕಾರಣದಿಂದಲೇ ಇಸ್ರಾಯೇಲಿನ ದೇಶಭ್ರಷ್ಟತೆಯು ಅನುಮತಿಸಲ್ಪಟ್ಟಿತು. ಹಾಗಿದ್ದರೂ, ಅವರು ಇನ್ನೂ ಆತನ ಜನರಾಗಿದ್ದರು. ಯೆಹೋವನು ಅವರಿಗೆ ಹೀಗೆ ಹೇಳಿದ್ದನು: “ಭಯಪಡಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರುಹಿಡಿದು ಕರೆದೆನಲ್ಲಾ; ನೀನು ನನ್ನವನೇ.” (ಯೆಶಾಯ 43:1) ಬಾಬೆಲಿನಲ್ಲಿ ಇಸ್ರಾಯೇಲಿನ ದೇಶಭ್ರಷ್ಟತೆಯು ಅಂತ್ಯಗೊಳ್ಳಲಿತ್ತು.
18. ಬಾಬೆಲಿನಿಂದ ಇಸ್ರಾಯೇಲಿನ ಬಿಡುಗಡೆಯು, ಯೆಹೋವನು ಏಕಮಾತ್ರ ಸತ್ಯ ದೇವರಾಗಿದ್ದಾನೆ ಎಂಬುದನ್ನು ಹೇಗೆ ರುಜುಪಡಿಸಿತು?
18 ಬಾಬೆಲಿನಿಂದ ಇಸ್ರಾಯೇಲಿನ ಬಿಡುಗಡೆಯನ್ನು, ಯೆಹೋವನು ದೇವರುಗಳ ನ್ಯಾಯವಿಚಾರಣೆಯಾಗಿ ಮಾಡಿದನೆಂಬುದು ನಿಜ. ತಮ್ಮ ಸಾಕ್ಷಿಗಳನ್ನು ಮುಂತರುವಂತೆ ಜನಾಂಗಗಳ ಸುಳ್ಳು ದೇವರುಗಳನ್ನು ಆತನು ಪಂಥಾಹ್ವಾನಿಸಿದನು, ಮತ್ತು ಇಸ್ರಾಯೇಲನ್ನು ತನ್ನ ಸಾಕ್ಷಿಯೋಪಾದಿ ಹೆಸರಿಸಿದನು. (ಯೆಶಾಯ 43:9, 12) ಆತನು ಇಸ್ರಾಯೇಲನ್ನು ಬಿಡುಗಡೆ ಮಾಡಿದಾಗ, ಬಾಬೆಲಿನ ದೇವರುಗಳು ದೇವರುಗಳೇ ಅಲ್ಲವೆಂಬುದನ್ನು ಮತ್ತು ತಾನೊಬ್ಬನೇ ಸತ್ಯ ದೇವರಾಗಿದ್ದೇನೆಂಬುದನ್ನು ಆತನು ರುಜುಪಡಿಸಿದನು. (ಯೆಶಾಯ 43:14, 15) ಆ ಘಟನೆಗೆ ಸುಮಾರು 200 ವರ್ಷಗಳ ಮೊದಲು, ಯೆಹೂದ್ಯರನ್ನು ಬಿಡುಗಡೆಗೊಳಿಸುವುದರಲ್ಲಿ ತನ್ನ ಸೇವಕನೋಪಾದಿ ಪಾರಸಿಯನಾದ ಕೋರೆಷನನ್ನು ಹೆಸರಿಸಿದಾಗ, ಆತನು ತನ್ನ ದೇವತ್ವದ ಇನ್ನೂ ಹೆಚ್ಚಿನ ರುಜುವಾತನ್ನು ಕೊಟ್ಟನು. (ಯೆಶಾಯ 44:28) ಇಸ್ರಾಯೇಲ್ ಬಿಡುಗಡೆಗೊಳಿಸಲ್ಪಡಲಿತ್ತು. ಏಕೆ? ಯೆಹೋವನು ವಿವರಿಸುವುದು: “ಅವರು [ಇಸ್ರಾಯೇಲ್] ನನ್ನ ಸುತ್ತಿಯನ್ನು ಪುನಃ ಪರಿಗಣಿಸಬೇಕು.” (ಯೆಶಾಯ 43:21, NW) ಇದು ಒಂದು ಸಾಕ್ಷಿಗಾಗಿ ಇನ್ನೂ ಹೆಚ್ಚಿನ ಅವಕಾಶವನ್ನು ಕೊಡಲಿತ್ತು.
19. ಇಸ್ರಾಯೇಲ್ಯರು ಯೆರೂಸಲೇಮಿಗೆ ಹಿಂದಿರುಗುವಂತೆ ಕೋರೆಷನು ಆಮಂತ್ರಿಸುವ ಮೂಲಕ ಮತ್ತು ಆ ಹಿಂದಿರುಗುವಿಕೆಯ ಬಳಿಕ ನಂಬಿಗಸ್ತ ಯೆಹೂದ್ಯರ ಕೃತ್ಯಗಳ ಮೂಲಕ ಯಾವ ಸಾಕ್ಷಿಯು ಕೊಡಲ್ಪಟ್ಟಿತು?
19 ಸಮಯ ಬಂದಾಗ, ಪ್ರವಾದಿಸಿದ್ದಂತೆಯೇ ಪಾರಸಿಯನಾದ ಕೋರೆಷನು ಬಾಬೆಲನ್ನು ವಶಪಡಿಸಿಕೊಂಡನು. ಒಬ್ಬ ವಿಧರ್ಮಿಯಾಗಿದ್ದರೂ, ಬಾಬೆಲಿನಲ್ಲಿದ್ದ ಯೆಹೂದ್ಯರಿಗೆ ಒಂದು ಅಭಿಪ್ರಾಯ ನುಡಿಯನ್ನು ಕೋರೆಷನು ಪ್ರಕಟಿಸಿದಾಗ, ಅವನು ಯೆಹೋವನ ದೇವತ್ವವನ್ನು ಘೋಷಿಸಿದನು: “ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ ಅವರು ಯೆಹೂದದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟಲ್ಟಿ; ಅವರ ದೇವರು ಅವರ ಸಂಗಡ ಇರಲಿ.” (ಎಜ್ರ 1:3) ಅನೇಕ ಯೆಹೂದ್ಯರು ಪ್ರತಿಕ್ರಿಯಿಸಿದರು. ಅವರು ವಾಗ್ದಾನ ದೇಶಕ್ಕೆ ದೀರ್ಘವಾದ ಪ್ರಯಾಣವನ್ನು ಬೆಳೆಸಿದರು ಮತ್ತು ಪುರಾತನ ದೇವಾಲಯದ ನಿವೇಶನದಲ್ಲಿ ಒಂದು ಯಜ್ಞವೇದಿಯನ್ನು ಸ್ಥಾಪಿಸಿದರು. ನಿರುತ್ತೇಜನ ಮತ್ತು ಬಲವಾದ ವಿರೋಧದ ಹೊರತಾಗಿಯೂ, ಅವರು ಕೊನೆಯದಾಗಿ ದೇವಾಲಯವನ್ನು ಹಾಗೂ ಯೆರೂಸಲೇಮ್ ಪಟ್ಟಣವನ್ನು ಪುನಃ ಕಟ್ಟಲು ಶಕ್ತರಾಗಿದ್ದರು. “ಪರಾಕ್ರಮದಿಂದಲ್ಲ, ಬಲದಿಂದಲ್ಲ [ಆತನ] ಆತ್ಮದಿಂದಲೇ” ಎಂದು ಯೆಹೋವನು ತಾನೇ ಹೇಳಿದಂತೆ ಇದೆಲ್ಲವೂ ಸಂಭವಿಸಿತು. (ಜೆಕರ್ಯ 4:6) ಈ ಸಾಧನೆಗಳು ಯೆಹೋವನು ಸತ್ಯ ದೇವರಾಗಿದ್ದಾನೆ ಎಂಬುದಕ್ಕೆ ಇನ್ನೂ ಹೆಚ್ಚಿನ ಪುರಾವೆಯನ್ನು ಕೊಟ್ಟವು.
20. ಇಸ್ರಾಯೇಲಿನ ದೌರ್ಬಲ್ಯಗಳ ಹೊರತಾಗಿಯೂ, ಪುರಾತನ ಲೋಕದಲ್ಲಿ ಯೆಹೋವನ ಹೆಸರಿಗೆ ಒಂದು ಸಾಕ್ಷಿಯನ್ನು ಅವರು ಕೊಟ್ಟಿರುವುದರ ಕುರಿತು ಏನು ಹೇಳಸಾಧ್ಯವಿದೆ?
20 ಹೀಗೆ, ಅಪರಿಪೂರ್ಣವಾದ ಮತ್ತು ಕೆಲವೊಮ್ಮೆ ದಂಗೆಕೋರ ಜನರ ಒಂದು ಜನಾಂಗವಾಗಿದ್ದರೂ, ಯೆಹೋವನು ಇಸ್ರಾಯೇಲನ್ನು ತನ್ನ ಸಾಕ್ಷಿಯೋಪಾದಿ ಉಪಯೋಗಿಸುವುದನ್ನು ಮುಂದುವರಿಸಿದನು. ಕ್ರೈಸ್ತಪೂರ್ವ ಲೋಕದಲ್ಲಿ, ಅದರ ದೇವಾಲಯ ಮತ್ತು ಯಾಜಕತ್ವದೊಂದಿಗೆ ಆ ಜನಾಂಗವು, ಸತ್ಯ ಆರಾಧನೆಯ ಲೋಕ ಕೇಂದ್ರದೋಪಾದಿ ಸ್ಥಿರವಾಗಿ ನಿಂತಿತು. ಹೀಬ್ರು ಶಾಸ್ತ್ರವಚನಗಳಲ್ಲಿ, ಇಸ್ರಾಯೇಲಿಗೆ ಸಂಬಂಧಿಸಿದ ಯೆಹೋವನ ಕೃತ್ಯಗಳ ಕುರಿತಾಗಿ ಯಾರಾದರೂ ಓದುವಲ್ಲಿ, ಏಕಮಾತ್ರ ಸತ್ಯ ದೇವರಿದ್ದಾನೆ ಮತ್ತು ಆತನ ಹೆಸರು ಯೆಹೋವ ಎಂದಾಗಿದೆ ಎಂಬ ವಿಷಯದಲ್ಲಿ ಅವನಿಗೆ ಯಾವುದೇ ಸಂದೇಹವಿರಸಾಧ್ಯವಿಲ್ಲ. (ಧರ್ಮೋಪದೇಶಕಾಂಡ 6:4; ಜೆಕರ್ಯ 14:9) ಹಾಗಿದ್ದರೂ, ಯೆಹೋವನ ಹೆಸರಿಗೆ ಇನ್ನೂ ಹೆಚ್ಚು ಮಹತ್ತಾದ ಸಾಕ್ಷಿಯು ಕೊಡಲ್ಪಡಬೇಕಾಗಿತ್ತು, ಮತ್ತು ನಾವು ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಿರುವೆವು.
ನಿಮಗೆ ನೆನಪಿದೆಯೆ?
◻ ಯೆಹೋವನು ಸತ್ಯ ದೇವರಾಗಿದ್ದಾನೆ ಎಂಬುದಕ್ಕೆ ಅಬ್ರಹಾಮನು ಹೇಗೆ ಸಾಕ್ಷಿನೀಡಿದನು?
◻ ಮೋಶೆಯ ಯಾವ ಪ್ರಮುಖ ಗುಣವು ಒಬ್ಬ ನಂಬಿಗಸ್ತ ಸಾಕ್ಷಿಯಾಗಿರಲು ಅವನನ್ನು ಶಕ್ತನನ್ನಾಗಿ ಮಾಡಿತು?
◻ ಯಾವ ವಿಧಗಳಲ್ಲಿ ಇಸ್ರಾಯೇಲ್ ಯೆಹೋವನ ಕುರಿತು ಜನಾಂಗೀಯ ಸಾಕ್ಷಿಯನ್ನು ಕೊಟ್ಟಿತು?
◻ ಯೆಹೋವನು ಏಕಮಾತ್ರ ಸತ್ಯ ದೇವರು ಎಂಬುದಕ್ಕೆ, ಬಾಬೆಲಿನಿಂದ ಇಸ್ರಾಯೇಲ್ಯರ ಬಿಡುಗಡೆಯು ಒಂದು ಪ್ರದರ್ಶಿಸುವಿಕೆಯಾಗಿತ್ತು ಹೇಗೆ?
[ಪುಟ 10 ರಲ್ಲಿರುವ ಚಿತ್ರ]
ತನ್ನ ನಂಬಿಕೆ ಮತ್ತು ವಿಧೇಯತೆಯ ಮೂಲಕ, ಅಬ್ರಹಾಮನು ಯೆಹೋವನ ದೇವತ್ವಕ್ಕೆ ಒಂದು ಪ್ರಮುಖವಾದ ಸಾಕ್ಷಿಯನ್ನು ಕೊಟ್ಟನು