ದೇವರು ಶಕ್ತಿಯೋ ವ್ಯಕ್ತಿಯೋ?
ಸಾಮಾನ್ಯ ಉತ್ತರಗಳು:
▪“ಆತನು ಎಲ್ಲೆಲ್ಲಿಯೂ ಎಲ್ಲಾದರಲ್ಲೂ ಇದ್ದಾನೆ. ಗಾಳಿಯು ಹೇಗೋ ಹಾಗೆ.”
▪“ಅವರ್ಣನೀಯ ಬುದ್ಧಿಶಕ್ತಿಯುಳ್ಳಾತ, ನಿರಾಕಾರ ಶಕ್ತಿಯೇ ಆತನು.”
ಯೇಸು ಏನು ಹೇಳಿದನು?
▪“ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ.” (ಯೋಹಾನ 14:2) ದೇವರಿಗೆ ಒಂದು ಸಾಂಕೇತಿಕ ಮನೆ ಅಥವಾ ನಿವಾಸಸ್ಥಾನ ಇದೆಯೋ ಎಂಬಂತೆ ಯೇಸು ಇಲ್ಲಿ ಹೇಳಿದನು.
▪“ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ; ಇನ್ನು ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ.” (ಯೋಹಾನ 16:28) ದೇವರು ಒಂದು ನಿರ್ದಿಷ್ಟ ಸ್ಥಾನದಲ್ಲಿ ಜೀವಿಸುವ ನೈಜ ಆತ್ಮಿಕ ವ್ಯಕ್ತಿಯೆಂದು ಯೇಸು ನಂಬಿದ್ದನು.
ಯೇಸುವು ದೇವರನ್ನು ಒಂದು ಅಮೂರ್ತ ಶಕ್ತಿಯಾಗಿ ಎಂದೂ ನಿರ್ದೇಶಿಸಿರಲಿಲ್ಲ. ಬದಲಾಗಿ ಅವನು ದೇವರೊಂದಿಗೆ ಮಾತನಾಡಿದನು, ಆತನಿಗೆ ಪ್ರಾರ್ಥನೆಯನ್ನೂ ಮಾಡಿದನು. ಎಷ್ಟೋ ಸಲ ಯೆಹೋವ ದೇವರನ್ನು ಸ್ವರ್ಗೀಯ ತಂದೆ ಎಂದೂ ಕರೆದನು. ಅದು ದೇವರೊಂದಿಗೆ ಅವನಿಗಿದ್ದ ಅತ್ಯಾಪ್ತ ಸಂಬಂಧವನ್ನು ಪ್ರಕಟಪಡಿಸಿತು.—ಯೋಹಾನ 8:19, 38, 54.
“ದೇವರನ್ನು ಯಾರೂ ಎಂದೂ ಕಂಡಿಲ್ಲ” ಮತ್ತು “ದೇವರು ಆತ್ಮಸ್ವರೂಪನು” ಎಂಬದು ನಿಜವಾಗಿ ಸತ್ಯ. (ಯೋಹಾನ 1:18; 4:24) ಆದರೆ ಅದರ ಅರ್ಥವು ಆತನಿಗೆ ಯಾವ ರೀತಿಯ ಶರೀರವಾಗಲಿ ರೂಪವಾಗಲಿ ಇಲ್ಲವೆಂದಲ್ಲ. (ಯೋಹಾನ 1:18; 4:24) ಬೈಬಲ್ ನಮಗನ್ನುವುದು: “ಪ್ರಾಕೃತ ದೇಹವಿರುವದಾದರೆ ಆತ್ಮಿಕ ದೇಹವೂ ಇರುವದು.” (1 ಕೊರಿಂಥ 15:44) ಹಾಗಾದರೆ ಯೆಹೋವ ದೇವರಿಗೆ ಒಂದು ಆತ್ಮಿಕ ದೇಹವಿದೆಯೆ?
ಹೌದು. ಯೇಸು ಸತ್ತವರೊಳಗಿಂದ ಪುನರುತ್ಥಾನವಾದಾಗ, “ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದನು.” (ಇಬ್ರಿಯ 9:24) ಇದು ನಮಗೆ ದೇವರ ಕುರಿತಾದ ಎರಡು ಪ್ರಾಮುಖ್ಯ ನಿಜತ್ವಗಳನ್ನು ಕಲಿಸುತ್ತದೆ. ಮೊದಲನೆಯದು, ಆತನಿಗೆ ಒಂದು ವಾಸಸ್ಥಳವಿದೆ. ಎರಡನೆಯದು, ಆತನು ಒಬ್ಬ ಆತ್ಮಿಕ ವ್ಯಕ್ತಿ, ಸರ್ವವ್ಯಾಪಿಯಾಗಿರುವ ಕೇವಲ ಒಂದು ಅವರ್ಣನೀಯ ಶಕ್ತಿಯಲ್ಲ.
ಹೀಗಿರಲಾಗಿ ಸರ್ವತ್ರವೂ ಇರುವ ವಸ್ತುಗಳನ್ನು ಹತೋಟಿಯಲ್ಲಿಡಲು ದೇವರಿಗೆ ಶಕ್ತಿಯಿರುವುದು ಹೇಗೆ? ಆತನ ಪವಿತ್ರಾತ್ಮದ ಮೂಲಕವೇ. ದೇವರು ತನ್ನ ಪವಿತ್ರಾತ್ಮವನ್ನು ಅಥವಾ ಕಾರ್ಯಕಾರಿ ಶಕ್ತಿಯನ್ನು ಸಮಸ್ತ ವಿಶ್ವದ ಯಾವುದೇ ಮೂಲೆಗೆ ಕಳುಹಿಸಶಕ್ತನು. ಒಬ್ಬ ತಂದೆಯು ತನ್ನ ಮಗುವನ್ನು ಸಂತೈಸಲು ಮತ್ತು ಪರಿಪಾಲಿಸಲು ಹೇಗೆ ತನ್ನ ಹಸ್ತವನ್ನು ಚಾಚುತ್ತಾನೋ ಹಾಗೆ ದೇವರು ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ತನ್ನ ಪವಿತ್ರಾತ್ಮವನ್ನು ಬಳಸುತ್ತಾನೆ.—ಯೋಬ 33:4; ಕೀರ್ತನೆ 139:7.
ದೇವರು ಒಬ್ಬ ಆತ್ಮ ವ್ಯಕ್ತಿಯಾಗಿರಲಾಗಿ, ಇಷ್ಟಾನಿಷ್ಟಗಳ ಒಂದು ವ್ಯಕ್ತಿತ್ವವು ಆತನಿಗಿದೆ ಮಾತ್ರವಲ್ಲ ಅನಿಸಿಕೆಗಳು ಸಹ ಇವೆ. ಆತನು ತನ್ನ ಜನರನ್ನು ಪ್ರೀತಿಸುತ್ತಾನೆ, ತನ್ನ ಕೆಲಸಕಾರ್ಯಗಳಲ್ಲಿ ಸಂತೋಷಿಸುತ್ತಾನೆ, ವಿಗ್ರಹಾರಾಧನೆ ಆತನಿಗೆ ಹೇಯವಾಗಿದೆ, ದುಷ್ಟತನಕ್ಕಾಗಿ ನೊಂದುಕೊಳ್ಳುತ್ತಾನೆ ಎಂದು ಬೈಬಲ್ ಹೇಳುತ್ತದೆ. (ಆದಿಕಾಂಡ 6:6; ಧರ್ಮೋಪದೇಶಕಾಂಡ 16:22; 1 ಅರಸುಗಳು 10:9; ಕೀರ್ತನೆ 104:31) 1 ತಿಮೊಥೆಯ 1:11ರಲ್ಲಿ (NW) ಆತನನ್ನು “ಸಂತೋಷದ ದೇವರು” ಎಂದು ಕರೆಯಲಾಗಿದೆ. ಇಂಥ ದೇವರನ್ನು ನಮ್ಮ ಪೂರ್ಣ ಹೃದಯದಿಂದ ಪ್ರೀತಿಸಲು ಕಲಿಯಸಾಧ್ಯವಿದೆ ಎಂದು ಯೇಸು ಹೇಳಿದ್ದರಲ್ಲೇನೂ ಆಶ್ಚರ್ಯವಿಲ್ಲ!—ಮಾರ್ಕ 12:30.a (w9 2/1)
[ಪಾದಟಿಪ್ಪಣಿ]
a ಈ ವಿಷಯದ ಕುರಿತ ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 1ನೆಯ ಅಧ್ಯಾಯ ನೋಡಿರಿ.
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ತಂದೆಯು ತನ್ನ ಮಗುವಿನೆಡೆಗೆ ಕೈಯನ್ನು ಚಾಚುವಂತೆಯೇ ದೇವರು ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಪವಿತ್ರಾತ್ಮವನ್ನು ಬಳಸುತ್ತಾನೆ