ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು ಮೆಕ್ಸಿಕೊದಲ್ಲಿ
ಸೇವೆಯನ್ನು ಹೆಚ್ಚಿಸುವ ಸಲುವಾಗಿ ಅನೇಕ ಯುವಜನರು ತಮ್ಮ ಜೀವನಶೈಲಿಯನ್ನು ಸರಳಗೊಳಿಸುತ್ತಿರುವುದನ್ನು ನೋಡುವಾಗ ತುಂಬ ಖುಷಿಯಾಗುತ್ತೆ. (ಮತ್ತಾ. 6:22) ಅವರು ಏನೆಲ್ಲ ಬದಲಾವಣೆಗಳನ್ನು ಮಾಡುತ್ತಿದ್ದಾರೆ? ಏನೆಲ್ಲ ಸವಾಲುಗಳನ್ನು ಎದುರಿಸುತ್ತಿದ್ದಾರೆ? ಇದನ್ನು ತಿಳಿದುಕೊಳ್ಳಲು ಮೆಕ್ಸಿಕೊದಲ್ಲಿ ಸೇವೆಮಾಡುತ್ತಿರುವ ಕೆಲವರ ಪರಿಚಯ ಮಾಡಿಕೊಳ್ಳೋಣ.
“ನಾವು ಬದಲಾವಣೆ ಮಾಡಲೇಬೇಕಿತ್ತು”
ಡಸ್ಟಿನ್ ಮತ್ತು ಜೇಸ ಅಮೆರಿಕದವರು. 2007 ಜನವರಿಯಲ್ಲಿ ವಿವಾಹವಾದರು. ಸ್ವಲ್ಪ ಸಮಯದಲ್ಲೇ ಅವರ ಬಹುದಿನದ ಕನಸು ನನಸಾಯಿತು. ಒಂದು ಹಾಯಿದೋಣಿ ಕೊಂಡುಕೊಂಡು ವರ್ಷಪೂರ್ತಿ ಅದರಲ್ಲೇ ಬದುಕು ಸಾಗಿಸುವ ಅವರ ಆಸೆ ಈಡೇರಿತು. ಅವರ ದೋಣಿ ಪೆಸಿಫಿಕ್ ಸಾಗರಕ್ಕೆ ಹತ್ತಿರವಿರುವ ಆಸ್ಟೋರಿಯ, ಓರೆಗನ್ ಅನ್ನೋ ಸ್ಥಳಕ್ಕೆ ಬಂದು ಸೇರಿತು. ಅದು ಸುತ್ತಲೂ ಗುಡ್ಡಬೆಟ್ಟ ಹಿಮಪರ್ವತಗಳಿರುವ ಸುಂದರ ಸ್ಥಳ. “ನೀವು ಯಾವ ಕಡೆ ನೋಡಿದರೂ ಮನಸೂರೆಗೊಳ್ಳುವ ದೃಶ್ಯಗಳು” ಅನ್ನುತ್ತಾರೆ ಡಸ್ಟಿನ್. 26 ಅಡಿಯ ದೋಣಿಯೇ ಅವರ ಅರಮನೆ. ಅರೆಕಾಲಿಕ ಕೆಲಸ ಮಾಡುತ್ತಿದ್ದರು, ಬೇರೆ ಭಾಷೆಯ ಸಭೆಗೆ ಹೋಗುತ್ತಿದ್ದರು ಮತ್ತು ಆಗಾಗ್ಗೆ ಆಕ್ಸಿಲಿಯರಿ ಪಯನೀಯರ್ ಸೇವೆಮಾಡುತ್ತಿದ್ದರು. ಹಾಗಾಗಿ ತಾವು ತುಂಬ ಸರಳ ಜೀವನ ನಡೆಸುತ್ತಿದ್ದೇವೆ, ಯೆಹೋವ ದೇವರನ್ನು ಆಶ್ರಯಿಸಿದ್ದೇವೆ ಅಂತ ಆ ದಂಪತಿ ನೆನಸಿದ್ದರು. ಆದರೆ ಅದು ಭ್ರಮೆಯಾಗಿತ್ತು ಅನ್ನುತ್ತಾರೆ ಅವರು. “ಸಭೆಗೆ ನೆರವು ನೀಡುವ ಬದಲು ಹೆಚ್ಚಿನ ಸಮಯ ದೋಣಿ ಸರಿಮಾಡುವುದರಲ್ಲೇ ಪೋಲಾಗುತ್ತಿತ್ತು. ನಾವು ನಿಜವಾಗ್ಲೂ ಯೆಹೋವ ದೇವರಿಗೆ ಆದ್ಯತೆ ಕೊಡಬೇಕಾದರೆ ನಾವು ಬದಲಾವಣೆ ಮಾಡಲೇಬೇಕಿತ್ತು” ಅನ್ನುತ್ತಾರೆ ಡಸ್ಟಿನ್.
ಜೇಸ ಹೇಳುತ್ತಾರೆ “ಮದುವೆಗೆ ಮುಂಚೆ ನಾನು ಮೆಕ್ಸಿಕೊದಲ್ಲಿದ್ದೆ. ಇಂಗ್ಲಿಷ್ ಸಭೆಗೆ ಹೋಗುತ್ತಿದ್ದೆ. ಅಲ್ಲಿ ತುಂಬ ಎಂಜಾಯ್ ಮಾಡ್ತಿದ್ದೆ. ಮತ್ತೆ ಅಲ್ಲಿಗೆ ಹೋಗಬೇಕು ಅಂತ ತುಂಬ ಆಸೆಪಡುತ್ತಿದ್ದೆ.” ಬೇರೆ ಜಾಗಕ್ಕೆ ಹೋಗಿ ಸೇವೆ ಮಾಡುವ ತಮ್ಮ ಇಚ್ಛೆಯನ್ನು ಇನ್ನಷ್ಟು ಬಲಗೊಳಿಸಲು ಕುಟುಂಬ ಆರಾಧನಾ ಸಂಜೆಯಂದು ಜೀವನ ಕಥೆಯನ್ನು ಓದಲು ಆರಂಭಿಸಿದರು. ಎಷ್ಟೋ ಸಹೋದರ ಸಹೋದರಿಯರು ಅಗತ್ಯ ಹೆಚ್ಚಿರೋ ದೇಶಕ್ಕೆ ಹೋಗಿ ಸೇವೆ ಮಾಡುತ್ತಿರುವುದರ ಬಗ್ಗೆ ಓದುವಾಗ ತಮಗೂ ಆ ಸಂತೋಷ ಬೇಕು ಅಂತ ಅನಿಸ್ತಿತ್ತು ಡಸ್ಟಿನ್ರವರಿಗೆ. (ಯೋಹಾ. 4:35) ಅವರ ಸ್ನೇಹಿತರು ಒಂದು ದಿನ ಮೆಕ್ಸಿಕೊದಲ್ಲಿ ಹೊಸ ಗುಂಪು ಆರಂಭವಾಗಿದೆ ಮತ್ತು ಅಲ್ಲಿ ನೆರವಿನ ಅಗತ್ಯವಿದೆ ಅಂತ ಹೇಳಿದರು. ತಕ್ಷಣ ಇಬ್ಬರೂ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ದೋಣಿ ಮಾರಿದರು. ಮೆಕ್ಸಿಕೊಗೆ ಹೊರಟರು.
“ಜೀವನದಲ್ಲಿ ತಗೊಂಡ ಅತ್ಯುತ್ತಮ ತೀರ್ಮಾನ”
ಆಸ್ಟೋರಿಯದಿಂದ 4,345 ಕಿ.ಮೀ. ದೂರದಲ್ಲಿರುವ ಟೆಕೋಮಾನ್ ಅನ್ನೋ ಪಟ್ಟಣಕ್ಕೆ ಬಂದರು. “ಇಲ್ಲಿ ತಂಗಾಳಿಯಿಲ್ಲ ಸುಡುಬಿಸಿಲು. ಬೆಟ್ಟಗುಡ್ಡಗಳ ದೃಶ್ಯವಿಲ್ಲ. ಕಣ್ಣಿಗೆ ಕಾಣಿಸುವಷ್ಟು ದೂರ ಬರೀ ನಿಂಬೆ ಮರಗಳು” ಅನ್ನುತ್ತಾರೆ ಡಸ್ಟಿನ್. ಸ್ವಲ್ಪ ದಿನ ಅವರಿಗೆ ಕೆಲಸನೇ ಇರಲಿಲ್ಲ, ದುಡ್ಡಿಲ್ಲದ ಕಾರಣ ದಿನಕ್ಕೆ ಎರಡು ಹೊತ್ತು ಬರೀ ಅನ್ನ, ಬೀನ್ಸ್ ತಿನ್ನುತ್ತಿದ್ದರು. “ಇನ್ನು ನಮ್ಮಿಂದ ಸಾಧ್ಯವಿಲ್ಲ ಅಂತ ಯಾವಾಗ ಅನಿಸಿತೋ ಆ ಸಮಯಕ್ಕೆ ಸರಿಯಾಗಿ ನಮ್ಮ ಬೈಬಲ್ ವಿದ್ಯಾರ್ಥಿಗಳು ಮಾವಿನ ಹಣ್ಣು, ಬಾಳೆಹಣ್ಣು, ಪಪ್ಪಾಯಿ ಕೊಡಲು ಆರಂಭಿಸಿದರು. ನಿಂಬೆಹಣ್ಣಂತೂ ಬ್ಯಾಗ್ ತುಂಬ ಕೊಡುತ್ತಿದ್ದರು” ಅನ್ನುತ್ತಾರೆ ಜೇಸ. ಸ್ವಲ್ಪ ಸಮಯದ ನಂತರ ತೈವಾನ್ ಮೂಲದ ಆನ್ಲೈನ್ ಶಾಲೆಯಲ್ಲಿ ಕೆಲಸ ಸಿಕ್ಕಿತು. ಅದರಿಂದ ಸಿಗುತ್ತಿದ್ದ ಹಣ ದಿನ ಖರ್ಚಿಗೆ ಸಾಕಾಗುತ್ತಿತ್ತು.
ತಮ್ಮ ಈ ಹೊಸ ಜೀವನದ ಬಗ್ಗೆ ಅವರಿಗೆ ಹೇಗನಿಸುತ್ತೆ? “ನಿಜ ಹೇಳಬೇಕೆಂದ್ರೆ ನಮ್ಮ ಜೀವನದಲ್ಲಿ ತಗೊಂಡ ಅತ್ಯುತ್ತಮ ತೀರ್ಮಾನ ಅಂದ್ರೆ ಇಲ್ಲಿಗೆ ಬಂದಿದ್ದು. ಯೆಹೋವ ದೇವರೊಟ್ಟಿಗಿನ ನಮ್ಮ ಸಂಬಂಧ ಮುಂಚೆಗಿಂತ ತುಂಬ ಗಟ್ಟಿಯಾಗಿದೆ. ನಾವಿಬ್ಬರೂ ಒಟ್ಟಿಗೆ ಸೇವೆಗೆ ಹೋಗ್ತೀವಿ, ಕೂಟಗಳಿಗೆ ಒಟ್ಟಿಗೆ ಮುನ್ತಯಾರಿ ಮಾಡ್ತೀವಿ, ಬೈಬಲ್ ವಿದ್ಯಾರ್ಥಿಗಳಿಗೆ ಇನ್ನು ಹೇಗೆಲ್ಲ ಸಹಾಯ ಮಾಡೋದು ಅಂತ ಚರ್ಚಿಸುತ್ತೀವಿ. ಇದರಿಂದ ನಮ್ಮ ಬಂಧನೂ ಬಲವಾಗಿದೆ. ಅಲ್ಲದೆ ಆಗ ಇದ್ದ ಚಿಂತೆಗಳು ಈಗ ಇಲ್ಲ. ಆದರೆ ಆಗ ಇಲ್ಲದಿದ್ದ ಒಂದು ಸಂಗತಿಯನ್ನು ಈಗ ಅನುಭವಿಸುತ್ತಿದ್ದೀವಿ. ಕೀರ್ತನೆ 34:8 ಹೇಳಿರುವ ಹಾಗೆ ‘ಯೆಹೋವ ದೇವರು ಸರ್ವೋತ್ತಮ ಅನ್ನೋದನ್ನು ಅನುಭವದಿಂದ ಸವಿದು ನೋಡುತ್ತಿದ್ದೀವಿ.’”
ಸಾವಿರಾರು ಸ್ವಯಂ ಸೇವಕರಿಗೆ ಸಿಕ್ಕಿದ ಸ್ಫೂರ್ತಿ
2,900ಕ್ಕೂ ಜಾಸ್ತಿ ಸಹೋದರ ಸಹೋದರಿಯರು ಮೆಕ್ಸಿಕೊದಲ್ಲಿ ತುಂಬ ಅಗತ್ಯವಿರುವ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ. ಇವರಲ್ಲಿ ಅನೇಕರು 20ರಿಂದ 40 ವಯಸ್ಸಿನ ವಿವಾಹಿತ ಮತ್ತು ಅವಿವಾಹಿತರು. ಇವರೆಲ್ಲ ಯಾಕೆ ಇಂಥ ಕಷ್ಟದ ಕೆಲಸವನ್ನು ವಹಿಸಿಕೊಂಡಿದ್ದಾರೆ? ಕೆಲವರನ್ನು ಕೇಳಿದಾಗ ಮೂರು ಕಾರಣಗಳನ್ನು ಕೊಟ್ಟರು. ಯಾವ ಕಾರಣಗಳು ಅಂತ ನೋಡೋಣ ಬನ್ನಿ.
ಯೆಹೋವ ದೇವರ ಮತ್ತು ಜನರ ಮೇಲೆ ಪ್ರೀತಿ ಇರುವುದರಿಂದ. 18ನೇ ವರ್ಷಕ್ಕೆ ದೀಕ್ಷಾಸ್ನಾನ ಪಡಕೊಂಡ ಲೆಟೆಸ್ಯಾ ಹೇಳುತ್ತಾರೆ: “ನನ್ನ ಬದುಕನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಂಡಾಗ ನಾನು ಇನ್ಮುಂದೆ ಪೂರ್ಣ ಹೃದಯ ಮತ್ತು ಪ್ರಾಣದಿಂದ ದೇವರನ್ನು ಸೇವಿಸಬೇಕು ಅಂತ ಅರ್ಥಮಾಡಿಕೊಂಡೆ. ಆದಷ್ಟು ನನ್ನ ಸಮಯ, ಶಕ್ತಿಯನ್ನು ಸೇವೆಗೇ ಉಪಯೋಗಿಸಬೇಕು ಅಂತ ಆವತ್ತೇ ತೀರ್ಮಾನ ಮಾಡಿಬಿಟ್ಟೆ.” (ಮಾರ್ಕ 12:30) ಹೆರ್ಮೀಲೊ (ಲೆಟೆಸ್ಯಾಳ ಗಂಡ) ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಸ್ಥಳಾಂತರಿಸಿದಾಗ ಅವರ ವಯಸ್ಸು 20. ಸ್ಥಳಾಂತರಿಸಿದ್ದು ಯಾಕೆ ಅಂತ ಹೇಳುತ್ತಾರೆ: “ನನಗೆ ಜನರ ಮೇಲೆ ಪ್ರೀತಿ ಇದ್ದರೆ ಅವರಿಗೆ ಆಧ್ಯಾತ್ಮಿಕವಾಗಿ ಸಹಾಯ ಮಾಡಲೇಬೇಕು ಅಂತ ನಿರ್ಣಯಿಸಿದೆ.” (ಮಾರ್ಕ 12:31) ಹಾಗಾಗಿ ಮಾಂಟರೆ ಅನ್ನೋ ಅಭಿವೃದ್ಧಿಶೀಲ ನಗರವನ್ನು ಬ್ಯಾಂಕ್ ಉದ್ಯೋಗವನ್ನು ಆರಾಮದಾಯಕ ಜೀವನವನ್ನೆಲ್ಲ ಬಿಟ್ಟು ಒಂದು ಸಣ್ಣ ಪಟ್ಟಣಕ್ಕೆ ಹೆರ್ಮೀಲೊ ಸ್ಥಳಾಂತರಿಸಿದರು.
ನಿಜವಾದ ಮತ್ತು ಅನಂತ ಸಂತೋಷ ಸಿಗುವುದರಿಂದ. ದೀಕ್ಷಾಸ್ನಾನ ಆದ ತಕ್ಷಣ ಲೆಟೆಸ್ಯಾ ಅನುಭವೀ ಪಯನೀಯರ್ ಸಹೋದರಿಯೊಂದಿಗೆ ಒಂದು ದೂರದ ಪಟ್ಟಣಕ್ಕೆ ಹೋಗಿ ಒಂದು ತಿಂಗಳು ಸುವಾರ್ತೆ ಸಾರಿದಳು. ಅದನ್ನು ಮೆಲುಕು ಹಾಕುತ್ತಾ ಲೆಟೆಸ್ಯಾ ಹೇಳ್ತಾರೆ “ಜನರು ಚೆನ್ನಾಗಿ ಕೇಳೋದನ್ನು ನೋಡಿ ನನಗೆ ಆಶ್ಚರ್ಯವಾಯಿತು ಜೊತೆಗೆ ತುಂಬ ಖುಷಿಯಾಯ್ತು. ಆ ಒಂದು ತಿಂಗಳು ಮುಗಿತಿದ್ದ ಹಾಗೆ ‘ನಾನೂ ಇದನ್ನೇ ಮಾಡ್ತೀನಿ’ ಅಂತ ನಿಶ್ಚಯಿಸಿದೆ.” ಎಸ್ಲೀ (20-25ರ ಹರೆಯ) ಸಹ ಇದೇ ನಿರ್ಣಯಕ್ಕೆ ಬಂದಳು. ಇದಕ್ಕೆ ಕಾರಣ ಈ ರೀತಿ ಸೇವೆ ಮಾಡುವವರ ಮೊಗದಲ್ಲಿದ್ದ ಆನಂದ. ಪ್ರೌಢ ಶಾಲೆಯಲ್ಲಿರುವಾಗಲೇ ಅಗತ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಸೇವೆಮಾಡಿದ ಸಾಕ್ಷಿಗಳನ್ನು ಭೇಟಿಮಾಡಿದ್ದಳು. “ಆ ಸಹೋದರ ಸಹೋದರಿಯರು ಸದಾ ಹಸನ್ಮುಖರಾಗಿರುವುದನ್ನು ನೋಡುವಾಗ ಇವರ ತರನೇ ಬದುಕಬೇಕು ಅಂತ ತೀರ್ಮಾನಿಸಿದೆ” ಅನ್ನುತ್ತಾಳೆ ಅವಳು. ಅನೇಕ ಸಹೋದರಿಯರು ಎಸ್ಲೀ ತಗೊಂಡ ಅದೇ ಹೆಜ್ಜೆ ತೆಗೆದುಕೊಂಡಿದ್ದಾರೆ. ಮೆಕ್ಸಿಕೊದಲ್ಲಿ 680ಕ್ಕೂ ಅಧಿಕ ಅವಿವಾಹಿತ ಸಹೋದರಿಯರು ಅಗತ್ಯವಿರುವ ಪ್ರದೇಶಕ್ಕೆ ಹೋಗಿ ಸೇವೆ ಮಾಡುತ್ತಿದ್ದಾರೆ. ಚಿಕ್ಕವರು ದೊಡ್ಡವರು ಎಲ್ಲರಿಗೂ ಇವರೆಲ್ಲ ಎಂಥ ಒಳ್ಳೇ ಆದರ್ಶವಲ್ಲವೇ!
ಅರ್ಥಭರಿತ ಮತ್ತು ಸಂತೃಪ್ತಿಯ ಬದುಕನ್ನು ಬಾಳಲು. ವಿದ್ಯಾರ್ಥಿವೇತನ ಪಡೆದು ಉನ್ನತ ವ್ಯಾಸಂಗ ಮಾಡುವ ಅವಕಾಶ ಎಸ್ಲೀಯ ಮುಂದಿತ್ತು. ಆ ಅವಕಾಶವನ್ನು ಸದುಪಯೋಗಿಸಿಕೊಂಡು ಉನ್ನತ ವ್ಯಾಸಂಗ ಮಾಡು, ಬದುಕಿನಲ್ಲಿ ಒಂದು ನೆಲೆ ಕಂಡುಕೋ, ಕಾರು ತಗೊಂಡು ಜೀವನ ಪೂರ್ತಿ ಸುತ್ತಾಡು ಅಂತ ಸಮವಯಸ್ಕರೆಲ್ಲ ದುಂಬಾಲು ಬಿದ್ದಿದ್ದರು. ಎಸ್ಲೀ ಅದ್ಯಾವುದಕ್ಕೂ ಸೊಪ್ಪುಹಾಕಲಿಲ್ಲ. “ನನ್ನ ಕ್ರೈಸ್ತ ಸ್ನೇಹಿತರಲ್ಲಿ ತುಂಬ ಜನ ಶಿಕ್ಷಣ ಹಣ ಮಜಾ ಅಂತ ಅದರ ಹಿಂದೆ ಹೋದರು. ಆಧ್ಯಾತ್ಮಿಕ ಗುರಿಗಳ ಮೇಲೆ ಅವರಿಟ್ಟಿದ್ದ ಗಮನ ಮಾಸತೊಡಗಿತು. ಲೋಕದ ವಿಷಯಗಳಲ್ಲಿ ಹೆಚ್ಚೆಚ್ಚು ತಲ್ಲೀನರಾದಂತೆ ಸಮಸ್ಯೆಗಳು ಹೆಚ್ಚಾದವು. ಬೇಸತ್ತು ಹೋದರು. ನಾನಂತು ನನ್ನ ಯೌವನದ ಒಂದೊಂದು ದಿನವನ್ನೂ ದೇವರ ಸೇವೇಲಿ ಉಪಯೋಗಿಸಬೇಕು ಅಂತ ನಿರ್ಧರಿಸಿದೆ” ಅಂತ ಹೇಳುತ್ತಾಳೆ.
ಎಸ್ಲೀ ಕೆಲಸಕ್ಕೆ ಬೇಕಾದ ಕೆಲವೊಂದು ಕೋರ್ಸ್ಗಳನ್ನು ಮಾಡಿ ಉದ್ಯೋಗಕ್ಕೆ ಸೇರಿಕೊಂಡಳು. ಜೀವನಕ್ಕೆ ಸಾಕಾಗುವಷ್ಟು ದುಡ್ಡೂ ಸಿಗ್ತಿತ್ತು ಪಯನೀಯರ್ ಸೇವೆನೂ ಮಾಡಲಿಕ್ಕಾಗುತ್ತಿತ್ತು. ನಂತರ ತುರ್ತಾಗಿ ಪ್ರಚಾರಕರ ಅಗತ್ಯವಿರೋ ಸ್ಥಳಕ್ಕೆ ಸ್ಥಳಾಂತರಿಸಿದಳು. ಓಟೋಮಿ ಮತ್ತು ಟ್ಲಾಪಾನಿಕೊ ಜನರು ಮಾತಾಡುವ ಭಾಷೆ ಕಲಿಯುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾದಳು. ದೂರದೂರದ ಸ್ಥಳಗಳಲ್ಲಿ ಸುವಾರ್ತೆ ಸಾರಲು ಆರಂಭಿಸಿ ಇದೀಗ ಮೂರು ವರ್ಷಗಳಾದವು. ಹಿಂದೆ ತಿರುಗಿ ನೋಡಿದಾಗ ಅವಳಿಗಾಗುವ ಭಾವನೆ: “ಅಗತ್ಯ ಹೆಚ್ಚಿರೋ ಸ್ಥಳಗಳಲ್ಲಿ ಸೇವೆ ಮಾಡಿದ್ದರಿಂದ ಸಂತೃಪ್ತಿಯಿದೆ ಮತ್ತು ಜೀವನಕ್ಕೆ ಒಂದು ಅರ್ಥ ಸಿಕ್ಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವ ದೇವರಿಗೆ ಇನ್ನು ಆಪ್ತಳಾಗಿದ್ದೀನಿ.” ಫಿಲಿಪ್ ಮತ್ತು ರಾಕೆಲ್ ದಂಪತಿ (30-35ರ ಪ್ರಾಯ) ಹೇಳುತ್ತಾರೆ “ಜನರು ಲೋಕದಲ್ಲಿ ನಡೀತಿರೋ ವಿಷಯಗಳ್ನ ನೋಡಿ ಬದುಕಿನಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಅಂತ ಹೆದರುತ್ತಾರೆ. ಆದರೆ ನಮಗೆ ಆ ಆತಂಕ ಇಲ್ಲ. ಬೈಬಲ್ ವಿಷಯಗಳನ್ನು ಆಸಕ್ತಿಯಿಂದ ಕೇಳುವ ಜನರಿಗೆ ಸುವಾರ್ತೆ ಸಾರುವುದು ನಮ್ಮ ಬದುಕಿಗೆ ಅರ್ಥಕೊಡುತ್ತೆ ಮತ್ತು ತುಂಬ ಸಂತೃಪ್ತಿಯಿದೆ.”
ಸವಾಲುಗಳನ್ನು ಜಯಿಸೋದು ಹೇಗೆ?
ಪ್ರಚಾರಕರ ಅಗತ್ಯವಿರುವ ಸ್ಥಳಗಳಿಗೆ ಹೋಗಿ ಸೇವೆ ಮಾಡೋದು ಅಷ್ಟು ಸುಲಭವಲ್ಲ. ಕೆಲವೊಂದು ಸವಾಲುಗಳಿವೆ. ಅದರಲ್ಲಿ ಒಂದು ಹಣಕಾಸಿನ ಸಮಸ್ಯೆ. ಹಾಗಾಗಿ ನೀವು ಎಲ್ಲಿ ಸೇವೆ ಮಾಡುತ್ತೀರೋ ಆ ಜಾಗಕ್ಕೆ ತಕ್ಕಂತೆ ಹೊಂದಿಕೊಂಡು ಕೆಲಸ ಮಾಡಬೇಕಾಗುತ್ತೆ. ಅನುಭವೀ ಪಯನೀಯರ್ ವೆರೋನಿಕಾ ಏನು ಮಾಡುತ್ತಿದ್ರು ಗೊತ್ತಾ? “ನಾನು ಸೇವೆ ಮಾಡುತ್ತಿದ್ದ ಒಂದು ಊರಲ್ಲಿ ಕಡಿಮೆ ಬೆಲೆಯ ಊಟ ತಯಾರಿಸಿ ಮಾರುತ್ತಿದ್ದೆ. ಇನ್ನೊಂದು ಊರಿಗೆ ಸ್ಥಳಾಂತರಿಸಿದಾಗ ಬಟ್ಟೆ ಮಾರುತ್ತಿದ್ದೆ, ಕೂದಲು ಕತ್ತರಿಸುವ ಕೆಲಸ ಮಾಡುತ್ತಿದ್ದೆ. ಸದ್ಯಕ್ಕೆ ಮನೆಕೆಲಸ ಮಾಡ್ತಿದ್ದೀನಿ ಮತ್ತು ಮಕ್ಕಳ ಜೊತೆ ಹೇಗೆ ಮಾತಾಡುವುದು ಅಂತ ಹೆತ್ತವರಿಗೆ ಪಾಠ ಹೇಳಿಕೊಡ್ತೀನಿ.”
ಬೇರೆ ಬೇರೆ ಸಂಸ್ಕೃತಿ ಪದ್ಧತಿಗಳಿಗೆ ಹೊಂದಿಕೊಳ್ಳೋದು ಮತ್ತೊಂದು ಸವಾಲು. ಅದರಲ್ಲೂ ದೂರದೂರದ ಊರಿನ ನಿವಾಸಿಗಳ ಸಂಸ್ಕೃತಿ ಪದ್ಧತಿಗಳಂತೂ ತುಂಬ ವಿಚಿತ್ರವೆನಿಸುತ್ತೆ. ಫಿಲಿಪ್ ಮತ್ತು ರಾಕೆಲ್ ನಾವಾಟಲ್ ಭಾಷೆಯ ಕ್ಷೇತ್ರದಲ್ಲಿ ಕೆಲಸಮಾಡುವಾಗ ಅದೇ ಆಗಿದ್ದು. “ಅಲ್ಲಿನ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಅಜಗಜಾಂತರ” ಅನ್ನುತ್ತಾರೆ ಫಿಲಿಪ್. ಹೊಂದಿಕೊಳ್ಳಲು ಯಾವುದು ಸಹಾಯ ಮಾಡಿತು ಅವರಿಗೆ? “ನಾವಾಟಲ್ ಜನರಲ್ಲಿದ್ದ ಒಳ್ಳೆ ಗುಣಗಳನ್ನು ನೋಡತೊಡಗಿದೆವು. ಪ್ರಾಮಾಣಿಕತೆ, ಧಾರಾಳ ಮನಸ್ಸು, ಅವರ ಕುಟುಂಬಗಳಲ್ಲಿದ್ದ ಅನ್ಯೋನ್ಯತೆ ಇಂಥ ಎಷ್ಟೋ ಒಳ್ಳೆ ಗುಣಗಳಿದ್ವು. ಅಲ್ಲಿ ಹೋಗಿದ್ದರಿಂದ ಒಳ್ಳೊಳ್ಳೆ ವಿಷಯಗಳನ್ನು ಕಲಿತ್ವಿ. ಅಲ್ಲಿನ ಜನರಿಂದ ಆ ಊರಿನ ಸಹೋದರ ಸಹೋದರಿಯರಿಂದ ತುಂಬ ವಿಷಯ ಕಲಿಯಕ್ಕಾಯ್ತು” ಅನ್ನುತ್ತಾರೆ ರಾಕೆಲ್.
ನೀವೂ ಸಿದ್ಧರಾಗಿ
ಅಗತ್ಯವಿರುವ ಸ್ಥಳಗಳಿಗೆ ಹೋಗಿ ಸೇವೆ ಮಾಡಲು ಮನಸ್ಸು ಹಾತೊರೆಯುತ್ತಿದ್ಯಾ? ಅದಕ್ಕಾಗಿ ನೀವು ಏನೆಲ್ಲ ಸಿದ್ಧತೆ ಮಾಡಬೇಕಾಗುತ್ತೆ? ಆ ರೀತಿ ಸೇವೆ ಮಾಡುತ್ತಿರುವ ಸಹೋದರ ಸಹೋದರಿಯರ ಕಿವಿಮಾತು ಏನೆಂದರೆ: ಹೋಗೋ ಮುಂಚೆನೇ ಸರಳ ಜೀವನ ಆರಂಭಿಸಿ. ಇರುವುದರಲ್ಲೇ ತೃಪ್ತರಾಗಲು ಕಲಿಯಿರಿ. (ಫಿಲಿ. 4:11, 12) ಬೇರೇನು ಮಾಡಬಹುದು? ಲೆಟೆಸ್ಯಾ ಏನು ಮಾಡಿದರು ಅಂತ ನೋಡೋಣ “ಯಾವಾಗ ಎಲ್ಲಿ ಅಗತ್ಯವಿರುತ್ತೋ ಅಲ್ಲಿಗೆ ಯಾವ ಕ್ಷಣದಲ್ಲೂ ಹೋಗಕ್ಕೆ ರೆಡಿ ಇರಬೇಕು ಅನ್ನೋ ಆಸೆ ನನಗಿತ್ತು. ಹಾಗಾಗಿ ಬೇರೆಲ್ಲೂ ಹೋಗಕ್ಕೆ ಬಿಡದೆ ಕಟ್ಟಿಹಾಕುವಂಥ ಯಾವ ಉದ್ಯೋಗಕ್ಕೂ ನಾನು ಸೇರಿಕೊಳ್ಳುತ್ತಿರಲಿಲ್ಲ.” ವೆರೋನಿಕಾ ಹೇಳೋದು “ನನ್ನ ಕುಟುಂಬದ ಜೊತೆ ಇದ್ದಾಗ ಮನೆ ಶುಚಿ ಮಾಡುವ ಕೆಲಸದಲ್ಲಿ ಸಹಾಯಮಾಡುತ್ತಿದ್ದೆ. ಕಡಿಮೆ ಹಣದಲ್ಲಿ ಒಳ್ಳೆ ಆಹಾರ ತಯಾರಿಸೋದನ್ನು ಕಲಿತೆ. ಹಣ ಉಳಿಸಕ್ಕೂ ಕಲಿತೆ.” ಹೆರ್ಮೀಲೊ “ಅಡುಗೆ ಮಾಡಕ್ಕೆ, ಬಟ್ಟೆ ಒಗೆಯಕ್ಕೆ, ಇಸ್ತ್ರಿ ಹಾಕಕ್ಕೆ ಕಲಿತುಕೊಂಡೆ” ಅನ್ನುತ್ತಾರೆ.
ಮದುವೆಯಾಗಿ ಎಂಟು ವರ್ಷಗಳಾಗಿರುವ ಲೇವಿ ಮತ್ತು ಅಮೀಲ್ಯಾ ಅಮೆರಿಕದವರು. ಇವರಿಗೆ ಮೆಕ್ಸಿಕೊಗೆ ಹೋಗಿ ಸೇವೆ ಮಾಡುವ ಅಭಿಲಾಷೆ ಇತ್ತು. ಅದಕ್ಕಾಗಿ ಸಿದ್ಧತೆಗಳನ್ನು ಮಾಡಿದರು. ಆ ಸಿದ್ಧತೆಗಳನ್ನು ಆಶೀರ್ವದಿಸಪ್ಪಾ ಅಂತ ದೇವರನ್ನು ಬೇಡಿಕೊಂಡರು. ಲೇವಿ ಹೇಳುತ್ತಾರೆ: “ಬೇರೆ ಕಡೆ ಹೋಗಿ ಒಂದು ವರ್ಷ ಸೇವೆಮಾಡಲು ಎಷ್ಟು ಹಣ ಬೇಕಾಗುತ್ತೆ ಅಂತ ಲೆಕ್ಕ ಹಾಕಿದ್ವಿ. ನಂತರ ಅಷ್ಟು ಹಣ ಸಂಪಾದನೆ ಮಾಡಕ್ಕೆ ಸಹಾಯ ಮಾಡು ಅಂತ ಯೆಹೋವ ದೇವರಿಗೆ ಪ್ರಾರ್ಥಿಸಿದ್ವಿ.” ಅವರು ಪ್ರಾರ್ಥಿಸಿದಷ್ಟು ಹಣವನ್ನು ಕೆಲವೇ ತಿಂಗಳಲ್ಲಿ ಸಂಪಾದನೆ ಮಾಡಿದರು. ತಕ್ಷಣ ಮೆಕ್ಸಿಕೊಗೆ ಹೊರಟರು. “ನಾವು ದೇವರ ಹತ್ರ ಯಾವ ವಿಷ್ಯನ ನಿರ್ದಿಷ್ಟವಾಗಿ ಬೇಡಿಕೊಂಡೆವೋ ಅದಕ್ಕೆ ಯೆಹೋವ ದೇವರು ಉತ್ತರ ಕೊಟ್ಟರು. ಆಮೇಲೆ ನಮ್ಮ ಸರದಿಯಾಗಿತ್ತು. ಪ್ರಾರ್ಥನೆಗೆ ತಕ್ಕಂತೆ ಹೆಜ್ಜೆ ತಗೊಂಡ್ವಿ” ಅನ್ನುತ್ತಾರೆ ಲೇವಿ. “ಒಂದು ವರ್ಷ ಮಾತ್ರ ಇಲ್ಲಿ ಸೇವೆ ಮಾಡೋಣ ಅಂತ ನೆನಸಿದ್ವಿ ಆದರೆ ನಾವೀಗ ಇಲ್ಲಿಗೆ ಬಂದು ಏಳು ವರ್ಷವಾಯ್ತು. ಇಲ್ಲಿಂದ ಹೋಗಬೇಕು ಅನ್ನೋ ಯೋಚನೆ ಸ್ವಲ್ಪನೂ ಇಲ್ಲ. ಇಲ್ಲಿ ಯೆಹೋವ ದೇವರ ಸಹಾಯವನ್ನು ಕಣ್ಣಾರೆ ನೋಡ್ತಿದ್ದೀವಿ. ಪ್ರತಿ ಕ್ಷಣ ಆತನ ಒಳ್ಳೇತನವನ್ನು ಅನುಭವಿಸುತ್ತಿದ್ದೀವಿ.”
ಮೆಕ್ಸಿಕೊದಲ್ಲಿರೋ ಇಂಗ್ಲಿಷ್ ಭಾಷೆಯ ಕ್ಷೇತ್ರದಲ್ಲಿ ಅಮೆರಿಕದಿಂದ ಬಂದು ಸೇವೆಮಾಡುತ್ತಿರುವ ಆ್ಯಡಮ್ ಮತ್ತು ಜೆನಿಫರ್ಗ ಪ್ರಾರ್ಥನೆ ತುಂಬ ಸಹಾಯಮಾಡಿತು. ಅವರು ಹೇಳುತ್ತಾರೆ, “ಸಮಯ ಬರಲಿ ಅಂತ ಕಾಯ್ತಾ ಕೂರ್ಬೇಡಿ. ಅಗತ್ಯವಿರೋ ಕಡೆ ಹೋಗಿ ಸೇವೆ ಮಾಡುವ ನಿಮ್ಮ ಮನದಾಸೆಯ ಬಗ್ಗೆ ದೇವರ ಹತ್ರ ಹೇಳಿ. ಪ್ರಾರ್ಥನೆಗೆ ತಕ್ಕಂತೆ ಹೆಜ್ಜೆ ತೆಗೆದುಕೊಳ್ಳಿ. ಸರಳ ಜೀವನ ನಡೆಸಿ. ಎಲ್ಲಿ ಸೇವೆ ಮಾಡಕ್ಕೆ ಇಷ್ಟಪಡ್ತೀರ ಅಂತ ಬ್ರಾಂಚ್ ಆಫೀಸ್ಗೆ ಪತ್ರ ಬರೆಯಿರಿ. ಹಣಕಾಸು ಹೊಂದಿಸಿಕೊಂಡು ತಕ್ಷಣ ಹೊರಟುಬಿಡಿ.”a ಅತಿ ಸುಂದರ ಬದುಕು ಆಧ್ಯಾತ್ಮಿಕ ಆಶೀರ್ವಾದಗಳು ನಿಮಗಾಗಿ ಕಾಯುತ್ತಿರುತ್ತವೆ!
a ಹೆಚ್ಚಿನ ಮಾಹಿತಿ ಆಗಸ್ಟ್ 2011ರ ನಮ್ಮ ರಾಜ್ಯ ಸೇವೆಯಲ್ಲಿರುವ ಈ ಲೇಖನದಲ್ಲಿದೆ: “ನೀವು ‘ಮಕೆದೋನ್ಯಕ್ಕೆ’ ಹೋಗಬಲ್ಲಿರೊ?”