ಜನರನ್ನು ಎಚ್ಚರಿಸಲು ಇನ್ನೂ ಹೆಚ್ಚನ್ನು ಮಾಡಬಲ್ಲಿರಾ?
20ನೇ ಶತಮಾನದ ಆರಂಭದಷ್ಟಕ್ಕೆ ಮಾರ್ಕೆಟ್ ಬೀದಿಗಳತ್ತ ಒಂದು ನೋಟ (ಇಂಗ್ಲಿಷ್) ಎಂಬ ಒಂದು ಮೂಕಚಿತ್ರ ಬಿಡುಗಡೆಯಾಯಿತು. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ನಗರದ ಜನರ ಜೀವನವನ್ನು ಆ ಚಿತ್ರ ವೀಕ್ಷಕರ ಮುಂದಿಟ್ಟಿತು. ಚಿತ್ರ ನಿರ್ಮಾಪಕರು ಒಂದು ಕೇಬಲ್ ಕಾರಿಗೆ ಕೈಚಾಲಿತ ಕ್ಯಾಮೆರಾವನ್ನು ಅಳವಡಿಸಿದ್ದರು. ಕಾರು ಚಲಿಸುತ್ತಿದ್ದಂತೆ ಅಲ್ಲಿನ ಜನನಿಬಿಡ ಬೀದಿಗಳು ಕ್ಯಾಮೆರಾದಲ್ಲಿ ಸೆರೆಯಾದವು. ಕುದುರೆಗಾಡಿಗಳು, ಅಂದಿನ ವಾಹನಗಳು, ವಸ್ತುಗಳನ್ನು ಖರೀದಿಸುವ ಜನರು, ವಾರ್ತಾಪತ್ರಿಕೆಗಳನ್ನು ಮಾರುತ್ತಿರುವ ಹುಡುಗರೆಲ್ಲರು ಆ ಚಿತ್ರದ ಭಾಗವಾದರು.
ಆದರೆ ಈಗ ಆ ಮೂಕಚಿತ್ರವನ್ನು ನೋಡಿದರೆ ಬೇಸರವಾಗುತ್ತದೆ. ಏಕೆಂದರೆ ಆ ಚಿತ್ರ ಚಿತ್ರೀಕರಣವಾದದ್ದು 1906ರ ಏಪ್ರಿಲ್ನಲ್ಲಿ. ಆ ತಿಂಗಳ 18ನೇ ತಾರೀಕಿನಂದು ಅದೇ ನಗರದಲ್ಲಿ ಭೂಕಂಪ ಸಂಭವಿಸಿ, ಬೆಂಕಿಯ ಅನಾಹುತ ಆಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ನಗರದ ಆ ಭಾಗ ಸಂಪೂರ್ಣ ನಾಶವಾಗಿಯೇ ಹೋಯಿತೆನ್ನಬೇಕು. ಅಂದು ಕ್ಯಾಮೆರಾವು ಸೆರೆಹಿಡಿದಿದ್ದ ಅನೇಕ ಜನರು ಕೆಲವೇ ದಿನಗಳ ನಂತರ ಜೀವಂತ ಇರಲಿಲ್ಲ. ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರ ಕುಟುಂಬದವರಾದ ಸ್ಕಾಟ್ ಮೈಲ್ಸ್ ಹೇಳುತ್ತಾರೆ: “ಅದರಲ್ಲಿದ್ದ ಜನರನ್ನು ನೋಡುವಾಗ ಅಯ್ಯೋ ಅನಿಸ್ತದೆ. ಪಾಪ, ಕೆಲವೇ ದಿನಗಳಲ್ಲಿ ತಾವು ಪ್ರಾಣ ಕಳೆದುಕೊಳ್ಳುತ್ತೇವೆ ಎಂದು ಅವರು ನೆನಸಿರಲೇ ಇಲ್ಲ.”
ಅಂಥದ್ದೇ ಪರಿಸ್ಥಿತಿ ಈಗಲೂ ಇದೆ. ನಮ್ಮ ಸುತ್ತಮುತ್ತಲಿರುವ ಜನರನ್ನು ನೋಡಿ ನಮಗೆ ಅಯ್ಯೋ ಅನಿಸುತ್ತದೆ. ಏಕೆಂದರೆ ಈ ದುಷ್ಟ ಲೋಕದ ಮೇಲೂ ಅವರ ಜೀವನಶೈಲಿಯ ಮೇಲೂ ದೊಡ್ಡ ನಾಶನ ಬಂದು ಬಡಿಯಲಿದೆ. ಅದರ ಅರಿವೇ ಇಲ್ಲದೆ ಜನರು ತಮ್ಮದೇ ಕೆಲಸ ಕಾರ್ಯಗಳಲ್ಲಿ ಮುಳುಗಿದ್ದಾರೆ. ಆದರೆ ಯೆಹೋವನ ನ್ಯಾಯತೀರ್ಪಿನ ದಿನ ಆ ಭೂಕಂಪದಂತೆ ಎಚ್ಚರಿಸದೆ ಬರುವುದಿಲ್ಲ. ಈ ಬಗ್ಗೆ ಸುತ್ತಮುತ್ತಲು ಇರುವವರಿಗೆ ಎಚ್ಚರಿಸಲು ನಮಗೆ ಇನ್ನು ಸ್ವಲ್ಪ ಕಾಲಾವಕಾಶವಿದೆ. ಈಗಾಗಲೇ ನೀವು ಪ್ರತಿವಾರಕ್ಕೆ ಒಂದಿಷ್ಟು ಸಮಯ ಮನೆ-ಮನೆ ಸೇವೆಗಾಗಿ ಬದಿಗಿರಿಸಿರಬಹುದು. ಆದರೆ ಜನರನ್ನು ಎಚ್ಚರಿಸಲು ಇನ್ನೂ ಏನಾದರೂ ಮಾಡಬಲ್ಲಿರಾ?
ಯೇಸು ಸಾರುವ ಕೆಲಸದಿಂದ ವಿಶ್ರಮಿಸಲಿಲ್ಲ
ಸೇವೆಯ ವಿಷಯದಲ್ಲಿ ಯೇಸುವಿಟ್ಟ ಮಾದರಿ ಮಹತ್ವದ್ದು. ಆತನು ಯಾವಾಗಲೂ ಸಿಕ್ಕಿದವರಿಗೆಲ್ಲ ಸುವಾರ್ತೆ ಸಾರಿದನು. ದಾರಿಯಲ್ಲಿ ನಡೆಯುವಾಗ ಸುಂಕ ವಸೂಲಿಗಾರನಿಗೆ, ಮಧ್ಯಾಹ್ನದ ಸಮಯದಲ್ಲಿ ತಾನು ಕುಳಿತಿದ್ದ ಸ್ಥಳಕ್ಕೆ ಬಂದ ಸ್ತ್ರೀಗೆ ಸಾರಿದನು. (ಲೂಕ 19:1-5; ಯೋಹಾ. 4:5-10, 21-24) ವಿಶ್ರಮಿಸಲು ಎಂದು ಬದಿಗಿಟ್ಟ ಸಮಯದಲ್ಲೂ ಪೂರ್ಣಮನಸ್ಸಿನಿಂದ ಜನರಿಗೆ ಸಾರಿದನು. ಜನರ ಮೇಲೆ ಅವನಿಗೆ ಅನುಕಂಪವಿತ್ತು. ಹಾಗಾಗಿ ಹೆಸರಿಗೆ ಮಾತ್ರ ಸುವಾರ್ತೆ ಸಾರದೆ ಎಲ್ಲ ಸಂದರ್ಭಗಳಲ್ಲೂ ಸಾರಿದನು. (ಮಾರ್ಕ 6:30-34) ಅಂಥ ಹುರುಪನ್ನು ಈಗ ಯಾರಾದರೂ ತೋರಿಸುತ್ತಿದ್ದಾರಾ?
ಅವಕಾಶವನ್ನು ಬಿಟ್ಟುಕೊಡಲಿಲ್ಲ
ಸಹೋದರಿ ಮೆಲೀಕಾ ಏನು ಮಾಡುತ್ತಾರೆ ಗಮನಿಸಿ. ಆಕೆ ಬಿಗಿ ಭದ್ರತೆಯಿರುವ ಕಟ್ಟಡದಲ್ಲಿ ವಾಸಿಸುತ್ತಾಳೆ. ಅದೇ ಕಟ್ಟಡದಲ್ಲಿ ಹೊರದೇಶಗಳಿಂದ ಬಂದ ಅನೇಕ ವಿದ್ಯಾರ್ಥಿಗಳು ಇದ್ದಾರೆ. ಅವರ ಫೋನ್ ನಂಬರ್ಗಳು ಬೇರೆ ಯಾರಿಗೂ ಸಿಗುವುದಿಲ್ಲ. ಅವರ ಹೆಸರುಗಳನ್ನು ಕಟ್ಟಡದ ಡೈರೆಕ್ಟರಿಯಲ್ಲೂ ಕೊಟ್ಟಿಲ್ಲ. ಈ ವಿದ್ಯಾರ್ಥಿಗಳಿಗೆ ಸುವಾರ್ತೆ ಸಾರುವುದು ತನಗೊಂದು ಉತ್ತಮ ಅವಕಾಶವೆಂದು ಆಕೆ ತಿಳಿದುಕೊಂಡಳು. ಹಾಗಾಗಿ ಕಟ್ಟಡದ ಪ್ರವೇಶದ್ವಾರದ ಹತ್ತಿರದಲ್ಲಿ ಹಾಗೂ ಲಿಫ್ಟ್ನಲ್ಲಿ ಸಿಗುವವರೊಂದಿಗೆ ಬೈಬಲ್ ಕುರಿತು ಮಾತಾಡುತ್ತಾಳೆ. “ಇದನ್ನು ನನ್ನ ಟೆರಿಟೊರಿ ಎಂದೇ ಹೇಳಬಹುದು” ಎನ್ನುತ್ತಾಳೆ ಆಕೆ. ಆಕೆ ತನ್ನೊಂದಿಗೆ ಯಾವಾಗಲೂ ಬೇರೆಬೇರೆ ಭಾಷೆಯ ಸಾಹಿತ್ಯ ಇಟ್ಟುಕೊಳ್ಳುತ್ತಾಳೆ. ಅನೇಕರು ಕರಪತ್ರ ಹಾಗೂ ಪತ್ರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ನಮ್ಮ jw.org ವೆಬ್ಸೈಟ್ ಬಗ್ಗೆಯೂ ಹೇಳುತ್ತಾಳೆ. ಇದರಿಂದಾಗಿ ಅನೇಕ ಬೈಬಲ್ ಅಧ್ಯಯನಗಳನ್ನು ಆರಂಭಿಸಿದ್ದಾಳೆ.
ಸೋನ್ಯ ಕೂಡ ಹಾಗೆಯೇ. ತನ್ನಿಂದಾದಷ್ಟು ಹೆಚ್ಚು ಜನರಿಗೆ ಸಾಕ್ಷಿಕೊಡಲು ಪ್ರಯತ್ನಿಸುತ್ತಾಳೆ. ಅವಳು ಒಬ್ಬ ವೈದ್ಯರ ಕ್ಲಿನಿಕ್ನಲ್ಲಿ ಕೆಲಸಮಾಡುತ್ತಾಳೆ. ತನ್ನೊಟ್ಟಿಗೆ ಕೆಲಸಮಾಡುವ ಪ್ರತಿಯೊಬ್ಬರಿಗೆ ಸಾಕ್ಷಿ ಕೊಡಬೇಕೆಂಬ ಗುರಿಯನ್ನು ಅವಳಿಟ್ಟಳು. ಅದಕ್ಕಾಗಿ ಅವರಲ್ಲಿ ಪ್ರತಿಯೊಬ್ಬರಿಗೆ ಯಾವ ಅಗತ್ಯಗಳಿವೆ ಎಂದು ಮೊದಲು ಗಮನಿಸಿದಳು. ನಂತರ ಮಧ್ಯಾಹ್ನದ ವಿರಾಮ ಸಮಯದಲ್ಲಿ ಒಬ್ಬೊಬ್ಬರನ್ನೇ ಮಾತಾಡಿಸಿ ಆಧ್ಯಾತ್ಮಿಕ ವಿಷಯಗಳ ಕುರಿತು ಚರ್ಚಿಸಿದಳು. ಇದರಿಂದ ಅವಳಿಗೆ ಎರಡು ಬೈಬಲ್ ಅಧ್ಯಯನ ಸಿಕ್ಕಿದವು. ಈಗ ಅವಳು ವಿರಾಮದ ಸಮಯದಲ್ಲಿ ವೈದ್ಯಕೀಯ ಕೇಂದ್ರದ ಪ್ರವೇಶದ ಹತ್ತಿರವಿರುವ ಲಾಬಿಯಲ್ಲಿ ಕುಳಿತು ಅಲ್ಲಿ ತಮ್ಮ ಸರದಿಗಾಗಿ ಕಾಯುತ್ತಿರುವವರೊಂದಿಗೆ ಮಾತಾಡಬೇಕೆಂಬ ಯೋಜನೆಯನ್ನು ಮಾಡಿದ್ದಾಳೆ.
ಅವಕಾಶವನ್ನು ಕೈಬಿಡಬೇಡಿ
“ಇದರಷ್ಟು ಭೀಕರ ವಿಪತ್ತು ಯಾವುದೇ ದೇಶಕ್ಕೆ, ನಗರಕ್ಕೆ ಸಂಭವಿಸಿರಲಿಕ್ಕಿಲ್ಲ” ಎಂದರು 1906ರ ಭೂಕಂಪವನ್ನು ಪಾರಾಗಿ ಉಳಿದ ವ್ಯಕ್ತಿಯೊಬ್ಬರು. ಆದರೆ ‘ದೇವರನ್ನು ಅರಿಯದವರೆಲ್ಲರ’ ಮೇಲೆ ಬರಲಿರುವ ಯೆಹೋವನ ಮುಯ್ಯಿತೀರಿಸುವ ದಿನದ ಮುಂದೆ ಈ ಎಲ್ಲ ವಿಪತ್ತುಗಳು ಏನೇನೂ ಅಲ್ಲ. (2 ಥೆಸ. 1:8) ಆದ್ದರಿಂದ, ಸಾಕ್ಷಿಗಳು ಕೊಡುತ್ತಿರುವ ಎಚ್ಚರಿಕೆಗೆ ಕಿವಿಗೊಟ್ಟು ಜನರು ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬೇಕು ಎನ್ನುವುದೇ ಯೆಹೋವನ ಬಯಕೆ.—2 ಪೇತ್ರ 3:9; ಪ್ರಕ. 14:6, 7.
ದಿನನಿತ್ಯದ ಕೆಲಸದಲ್ಲಿ ತೊಡಗಿರುವಾಗ ಸಾಕ್ಷಿಕೊಡಲು ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸುವಿರಾ?
ಆಧ್ಯಾತ್ಮಿಕವಾಗಿ ಜನರ ಕಣ್ತೆರೆಯುವ ಸದವಕಾಶ ನಮಗಿದೆ. ನಾವು ಕಠಿನ ಕಾಲಗಳಲ್ಲಿ ಜೀವಿಸುತ್ತಿದ್ದೇವೆಂಬ ಸತ್ಯವನ್ನು ಮನಗಾಣಿಸಿ, ಸ್ವಾರ್ಥಪರ ಬಯಕೆಗಳನ್ನು ಬಿಟ್ಟುಬಿಟ್ಟು ಯೆಹೋವನನ್ನು ಆಶ್ರಯಿಸಲು ನೆರವಾಗುವ ಸುಯೋಗ ನಮಗಿದೆ. (ಚೆಫ. 2:2, 3) ಹಾಗಾದರೆ ಸಾಕ್ಷಿಕೊಡಲು ಸಿಗುವ ಪ್ರತಿಯೊಂದು ಅವಕಾಶವನ್ನು ನೀವು ಸದುಪಯೋಗಿಸುವಿರಾ? ನಿಮ್ಮ ಸಹೋದ್ಯೋಗಿಗಳಿಗೆ, ನೆರೆಯವರಿಗೆ, ದಿನನಿತ್ಯ ಸಿಗುವವರಿಗೆ ಸಾಕ್ಷಿಕೊಡುವಿರಾ? ಜನರನ್ನು ಎಚ್ಚರಿಸಲು ಇನ್ನೂ ಹೆಚ್ಚನ್ನು ಮಾಡಬಲ್ಲಿರಾ?