ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಏಪ್ರಿಲ್‌ ಪು. 3-4
  • ನಿಮ್ಮ ಸೇವೆ ಇಬ್ಬನಿಯ ಹಾಗೆ ಇದೆಯಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಸೇವೆ ಇಬ್ಬನಿಯ ಹಾಗೆ ಇದೆಯಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇಬ್ಬನಿಯ ಹಾಗೆ ಸೇವೆ—ಹೇಗೆ?
  • ನಮ್ಮ ಸೇವೆ ತುಂಬ ಅಮೂಲ್ಯ
  • ನಿಸರ್ಗದ ಬಾಷ್ಪ
    ಎಚ್ಚರ!—1995
  • ನಿಮಗೆ ನೆನಪಿದೆಯೇ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಏಪ್ರಿಲ್‌ ಪು. 3-4
ಒಬ್ಬ ಯೆಹೋವನ ಸಾಕ್ಷಿ ಸುವಾರ್ತೆ ಸಾರುತ್ತಿರುವ ಚಿತ್ರವನ್ನು ಇಬ್ಬನಿಯ ಮೇಲಿಟ್ಟು ತೋರಿಸಲಾಗಿದೆ

ನಿಮ್ಮ ಸೇವೆ ಇಬ್ಬನಿಯ ಹಾಗೆ ಇದೆಯಾ?

ನಮ್ಮ ಸೇವೆ ನಮಗೆ ತುಂಬ ಮುಖ್ಯ, ನಮಗದು ತುಂಬ ಅಮೂಲ್ಯ. ಆದರೆ ಎಲ್ಲರೂ ನಮ್ಮಂತೆ ಯೋಚಿಸುವುದಿಲ್ಲ. ಜನರಿಗೆ ಬೈಬಲ್‌ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಳ್ಳಲಿಕ್ಕೆ ಇಷ್ಟ. ಆದರೆ ಎಲ್ಲರೂ ಬೈಬಲ್‌ ಅಧ್ಯಯನ ಮಾಡಲು ಇಷ್ಟಪಡುವುದಿಲ್ಲ.

ಗೆವಿನ್‌ನ ಉದಾಹರಣೆ ನೋಡಿ. ಇವರು ಕೂಟಗಳಿಗೆ ಹೋಗುತ್ತಿದ್ದರು ಆದರೆ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡಿರಲಿಲ್ಲ. ತನಗೆ ಬೈಬಲ್‌ ಬಗ್ಗೆ ಅಷ್ಟೇನು ತಿಳಿದಿಲ್ಲ ಎನ್ನುವ ವಿಷಯ ಬೇರೆಯವರಿಗೆ ಗೊತ್ತಾಗುವುದು ಅವರಿಗೆ ಇಷ್ಟವಿರಲಿಲ್ಲ. ಅದೂ ಅಲ್ಲದೆ ‘ಎಲ್ಲಿ ನನ್ನನ್ನು ಅವರ ಧರ್ಮಕ್ಕೆ ಸೇರಿಸಿಕೊಂಡುಬಿಡುತ್ತಾರೋ, ಎಲ್ಲಿ ನನಗೆ ಮೋಸ ಮಾಡಿಬಿಡುತ್ತಾರೋ’ ಅನ್ನುವ ಭಯ ಅವರಿಗಿತ್ತು. ನೀವೇನು ನೆನಸುತ್ತೀರಿ? ಇಂಥ ವ್ಯಕ್ತಿಗೆ ಸಹಾಯಮಾಡುವುದು ಹೇಗೆ? ಬೈಬಲ್‌ ಬಗ್ಗೆ ಕಲಿಯುವುದರಿಂದ ಒಬ್ಬ ವ್ಯಕ್ತಿಗೆ ಏನೆಲ್ಲಾ ಪ್ರಯೋಜನ ಸಿಗುತ್ತದೆ ಅನ್ನುವುದರ ಬಗ್ಗೆ ನಾವು ಯೋಚಿಸಬೇಕು. ಯೆಹೋವನು ಒಮ್ಮೆ ಇಸ್ರಾಯೇಲ್ಯರಿಗೆ, “ನನ್ನ ಬೋಧನೆಯು ಮಂಜಿನಂತೆಯೂ ಕಾಯಿಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ [ಹಿತವಾಗಿರುವದು]” ಎಂದು ಹೇಳಿದನು. (ಧರ್ಮೋ. 31:19, 30; 32:2) ಈಗ ನಾವು ಮಂಜಿನ ಅಥವಾ ಇಬ್ಬನಿಯ ಕೆಲವು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ. ಇದು ನಮ್ಮ ಸಾರುವ ಕೆಲಸಕ್ಕೆ ಹೇಗೆ ಸಂಬಂಧಿಸಿದೆ, ‘ಎಲ್ಲ ರೀತಿಯ ಜನರಿಗೆ’ ಒಳ್ಳೇ ರೀತಿಯಲ್ಲಿ ಸಾರಲು ಹೇಗೆ ಸಹಾಯಮಾಡುತ್ತದೆ ಎಂದು ನೋಡೋಣ.—1 ತಿಮೊ. 2:3, 4.

ಇಬ್ಬನಿಯ ಹಾಗೆ ಸೇವೆ—ಹೇಗೆ?

ಇಬ್ಬನಿ ಕೋಮಲವಾಗಿ ಇರುತ್ತದೆ. ಗಾಳಿಯಲ್ಲಿರುವ ತೇವಾಂಶ ಹನಿಹನಿಯಾಗಿ ಕೂಡಿ ಇಬ್ಬನಿ ಉಂಟಾಗುತ್ತದೆ. ಯೆಹೋವನ ಮಾತುಗಳು ಹೇಗೆ ಇಬ್ಬನಿಯಂತೆ ಇದ್ದವು? ಇಸ್ರಾಯೇಲ್ಯರೊಂದಿಗೆ ಆತನು ಕೋಮಲವಾಗಿ ಪ್ರೀತಿಯಿಂದ ಮಾತಾಡಿದನು. ನಾವು ಇದನ್ನು ಹೇಗೆ ಮಾಡಬಹುದು? ಜನರಿಗೆ ತಮ್ಮದೇ ಆದ ನಂಬಿಕೆಗಳು ಇರುತ್ತವೆ. ಅದನ್ನು ನಾವು ಟೀಕಿಸಬಾರದು. ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯಮಾಡುತ್ತೇವೆ ಅಷ್ಟೇ, ಆದರೆ ತೀರ್ಮಾನ ಮಾಡುವುದು ಅವರಿಗೆ ಬಿಟ್ಟಿದ್ದು. ನಾವು ಈ ರೀತಿಯಲ್ಲಿ ಬೋಧಿಸುವಾಗ ಜನರಲ್ಲಿ ವೈಯಕ್ತಿಕ ಆಸಕ್ತಿ ತೋರಿಸಿದಂತೆ ಆಗುತ್ತದೆ. ಆಗ ಅವರು ನಮ್ಮ ಸಂದೇಶಕ್ಕೆ ಕಿವಿಗೊಡಬಹುದು. ನಮಗೂ ಸೇವೆಯನ್ನು ಒಳ್ಳೇದಾಗಿ ಮಾಡಿದ ಸಂತೃಪ್ತಿ ಸಿಗುತ್ತದೆ.

ಇಬ್ಬನಿ ಚೈತನ್ಯ ತರುತ್ತದೆ. ನಮ್ಮ ಸೇವೆಯಿಂದ ಬೇರೆಯವರಿಗೆ ಚೈತನ್ಯ ಸಿಗಬೇಕಾದರೆ ನಾವು ಅವರಿಗೆ ಸತ್ಯವನ್ನು ಕಲಿಸಲು ಬೇರೆಬೇರೆ ವಿಧಾನಗಳನ್ನು ಬಳಸಬೇಕಾಗಬಹುದು. ಗೆವಿನ್‌ ವಿಷಯದಲ್ಲಿ ಏನಾಯಿತು ನೋಡೋಣ. ಕ್ರಿಸ್‌ ಎಂಬ ಸಹೋದರ ಅವರಿಗೆ ಬೈಬಲ್‌ ಅಧ್ಯಯನ ಮಾಡೋಣವಾ ಎಂದು ಕೇಳಿದರು. ಆದರೆ ಗೆವಿನ್‌ ಆರಂಭದಲ್ಲಿ ಇದಕ್ಕೆ ಒಪ್ಪದ ಕಾರಣ ಅವರ ಮೇಲೆ ಒತ್ತಡ ಹಾಕಲು ಹೋಗಲಿಲ್ಲ. ಬೈಬಲ್‌ ಬಗ್ಗೆ ಮಾಡುವ ಚರ್ಚೆಗಳು ಚೆನ್ನಾಗಿರುತ್ತವೆ ಎಂಬುದನ್ನು ಅರ್ಥಮಾಡಿಸಲು ಕ್ರಿಸ್‌ ಬೇರೆಬೇರೆ ವಿಧಾನಗಳನ್ನು ಬಳಸಿದರು. ಇಡೀ ಬೈಬಲಿನಲ್ಲಿ ಒಂದು ಮುಖ್ಯ ಸಂದೇಶವಿದೆ. ಈ ಸಂದೇಶ ಯಾವುದು ಅಂತ ತಿಳುಕೊಂಡರೆ ಕೂಟಗಳಲ್ಲಿ ಹೇಳಲಾಗುವ ವಿಷಯಗಳನ್ನು ಇನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಆಗುತ್ತದೆ ಎಂದು ವಿವರಿಸಿದರು. ಬೈಬಲಿನಲ್ಲಿ ಸತ್ಯ ಇದೆ ಎಂದು ತಿಳಿದುಕೊಳ್ಳಲು ಬೈಬಲ್‌ ಪ್ರವಾದನೆಗಳು ನನಗೆ ಸಹಾಯಮಾಡಿದವು ಅಂತ ಕ್ರಿಸ್‌ ಗೆವಿನ್‌ಗೆ ಹೇಳಿದರು. ಇದರಲ್ಲಿ ಗೆವಿನ್‌ಗೆ ಏನೋ ಕುತೂಹಲ ಅನಿಸಿತು ಮತ್ತು ಅವರಿಬ್ಬರು ಪ್ರವಾದನೆಗಳ ನೆರವೇರಿಕೆಯ ಬಗ್ಗೆ ಅನೇಕ ಚರ್ಚೆಗಳನ್ನು ಮಾಡಿದರು. ಈ ಚರ್ಚೆಗಳಿಂದ ಗೆವಿನ್‌ಗೆ ಚೈತನ್ಯ ಸಿಕ್ಕಿತು. ಅವರು ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡರು.

ಇಬ್ಬನಿ ಜೀವ ರಕ್ಷಿಸುತ್ತದೆ. ಬೇಸಿಗೆ ಕಾಲ ಬಂದಾಗ ಇಸ್ರೇಲಿನಲ್ಲಿ ಹಲವಾರು ತಿಂಗಳು ಮಳೆ ಬರದೆ ಎಲ್ಲ ಬರಡಾಗಿ ಬಿಡುತ್ತದೆ. ಇಂಥ ಸಮಯದಲ್ಲಿ ಇಬ್ಬನಿಯಿಂದ ಸಿಗುವ ಹನಿಹನಿ ನೀರನ್ನು ಗಿಡಗಳು ಬಳಸಿಕೊಂಡು ಜೀವಂತವಾಗಿ ಉಳಿಯುತ್ತವೆ. ಬೈಬಲು “ಯೆಹೋವನ ವಾಕ್ಯಗಳ ಕ್ಷಾಮ” ಬರುವುದೆಂದು ಮುಂತಿಳಿಸಿತ್ತು. ಅದು ಈಗಾಗಲೇ ಬಂದಿದೆ. (ಆಮೋ. 8:11) ಇಂಥ ಸಮಯದಲ್ಲಿ ಸುವಾರ್ತೆ ಸಾರುವ ಅಭಿಷಿಕ್ತರು ‘ಯೆಹೋವನ ವರವಾದ ಇಬ್ಬನಿಯಂತೆ’ ಇರುವರು ಎಂದು ಯೆಹೋವನು ಮಾತುಕೊಟ್ಟಿದ್ದಾನೆ. ಅವರಿಗೆ ‘ಬೇರೆ ಕುರಿಗಳ’ ಸಹಾಯವೂ ಇದೆ. (ಮೀಕ 5:7; ಯೋಹಾ. 10:16) ನಾವು ಸಾರುವ ಈ ಸಂದೇಶ ಜನರ ಜೀವವನ್ನು ರಕ್ಷಿಸಲು ಯೆಹೋವನು ಮಾಡಿರುವ ಏರ್ಪಾಡಾಗಿದೆ. ಇದನ್ನು ಮನಸ್ಸಿನಲ್ಲಿಟ್ಟು ನಾವು ಸೇವೆ ಮಾಡುತ್ತೇವಾ?

ಇಬ್ಬನಿ ಯೆಹೋವನು ಕೊಡುವ ಆಶೀರ್ವಾದ. (ಧರ್ಮೋ. 33:13) ನಾವು ಸಾರುವ ಸಂದೇಶಕ್ಕೆ ಯಾರು ಕಿವಿಗೊಡುತ್ತಾರೋ ಅವರಿಗೆ ತುಂಬ ಆಶೀರ್ವಾದ ಸಿಗುತ್ತದೆ. ಗೆವಿನ್‌ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡದ್ದೇ ಅವರಿಗೊಂದು ಆಶೀರ್ವಾದವಾಗಿತ್ತು. ಏಕೆಂದರೆ ಅವರಿಗಿದ್ದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಅವರು ಬೇಗ ಪ್ರಗತಿ ಮಾಡಿ ದೀಕ್ಷಾಸ್ನಾನ ಪಡೆದರು. ಈಗ ತಮ್ಮ ಪತ್ನಿ ಜಾಯ್ಸ್‌ ಜೊತೆ ಸಂತೋಷದಿಂದ ದೇವರ ರಾಜ್ಯದ ಸುವಾರ್ತೆ ಸಾರುತ್ತಿದ್ದಾರೆ.

ಯೆಹೋವನ ಸಾಕ್ಷಿಗಳು ಬಸ್‌ ನಿಲ್ದಾಣದಲ್ಲಿ ಸಾರುತ್ತಿದ್ದಾರೆ

ಇಬ್ಬನಿಯಂತಿರುವ ನಮ್ಮ ಸೇವೆ ಇಡೀ ಭೂಮಿಯನ್ನು ತೋಯಿಸುತ್ತಿದೆ

ನಮ್ಮ ಸೇವೆ ತುಂಬ ಅಮೂಲ್ಯ

ಬರೀ ಒಂದು ಹನಿ ಇಬ್ಬನಿಯಿಂದ ದೊಡ್ಡದಾಗಿ ಏನು ಸಾಧಿಸಲು ಆಗುವುದಿಲ್ಲ ನಿಜ. ಆದರೆ ಒಂದೊಂದು ಹನಿಯೂ ಸೇರಿದಾಗ ತುಂಬ ಪ್ರಯೋಜನ ಸಿಗುತ್ತದೆ. ಅವು ನೆಲವನ್ನು ತೋಯಿಸಿ ಗಿಡಗಳಿಗೆ ಬೇಕಾದ ಪೋಷಣೆ ನೀಡುತ್ತವೆ. ಅದೇ ರೀತಿ ನಾವು ಸೇವೆಯಲ್ಲಿ ವೈಯಕ್ತಿಕವಾಗಿ ಏನು ಮಾಡುತ್ತೇವೋ ಅದು ನಮಗೆ ಅಷ್ಟು ದೊಡ್ಡದು ಅನಿಸಲಿಕ್ಕಿಲ್ಲ. ಆದರೆ ಒಬ್ಬೊಬ್ಬರೂ ಸೇವೆಯಲ್ಲಿ ಹಾಕುವ ಪ್ರಯತ್ನ ತುಂಬ ಪ್ರಾಮುಖ್ಯ. ಹನಿ-ಹನಿ ಕೂಡಿದರೆ ಹಳ್ಳ ಅನ್ನುವ ಹಾಗೆ ಯೆಹೋವನ ಸಾಕ್ಷಿಗಳೆಲ್ಲರ ಜಂಟಿ ಪ್ರಯತ್ನದಿಂದ “ಎಲ್ಲ ಜನಾಂಗಗಳಿಗೆ” ಸಾಕ್ಷಿ ಸಿಗುತ್ತಾ ಇದೆ. (ಮತ್ತಾ. 24:14) ಹಾಗಾದರೆ ನಮ್ಮ ಸೇವೆಯ ಬಗ್ಗೆ ಏನು? ಅದು ಜನರಿಗೆ ಆಶೀರ್ವಾದ ತರುವಂತೆ ಇದೆಯಾ? ಇಬ್ಬನಿಯ ಬಗ್ಗೆ ಕಲಿತ ವೈಶಿಷ್ಟ್ಯಗಳನ್ನು ಮನಸ್ಸಿನಲ್ಲಿಟ್ಟು ನಮ್ಮ ಸೇವೆಯನ್ನು ಮಾಡಿದರೆ ಅದು ಜನರಿಗೆ ಕೋಮಲವಾಗಿ ಅನಿಸುತ್ತದೆ, ಚೈತನ್ಯ ತರುತ್ತದೆ, ಅವರ ಜೀವವನ್ನೂ ರಕ್ಷಿಸುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ