ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಸೆಪ್ಟೆಂಬರ್‌ ಪು. 20-25
  • ನೀತಿವಂತರಾಗೋಕೆ ತುಂಬ ಜನರಿಗೆ ಸಿಗೋ ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀತಿವಂತರಾಗೋಕೆ ತುಂಬ ಜನರಿಗೆ ಸಿಗೋ ಸಹಾಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ‘ಮಣ್ಣಲ್ಲಿ ಮಣ್ಣಾಗಿರೋರು ಎದ್ದೇಳ್ತಾರೆ’
  • “ನೀತಿಯ ದಾರಿ ಹಿಡಿಯೋಕೆ ತುಂಬ ಜನ್ರಿಗೆ ಸಹಾಯ ಮಾಡುವವರು”
  • ಕೊನೆ ಪರೀಕ್ಷೆ
  • “ಅಂತ್ಯದ” ಸಮಯದಲ್ಲಿ . . .
  • ಅಂತ್ಯಕಾಲದಲ್ಲಿ ಸತ್ಯ ಆರಾಧಕರನ್ನು ಗುರುತಿಸುವುದು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ಯೆಹೋವನು ದಾನಿಯೇಲನಿಗೆ ಒಂದು ಅದ್ಭುತಕರವಾದ ಬಹುಮಾನವನ್ನು ವಾಗ್ದಾನಿಸುತ್ತಾನೆ
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ನಿಮ್ಮ ಹೆಸರು “ಜೀವದ ಪುಸ್ತಕದಲ್ಲಿ” ಇದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ದಾನಿಯೇಲ ಪುಸ್ತಕ ಮತ್ತು ನೀವು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಸೆಪ್ಟೆಂಬರ್‌ ಪು. 20-25

ಅಧ್ಯಯನ ಲೇಖನ 40

ನೀತಿವಂತರಾಗೋಕೆ ತುಂಬ ಜನರಿಗೆ ಸಿಗೋ ಸಹಾಯ

“ನೀತಿಯ ದಾರಿ ಹಿಡಿಯೋಕೆ ತುಂಬ ಜನ್ರಿಗೆ ಸಹಾಯ ಮಾಡುವವರು ನಕ್ಷತ್ರಗಳ ಹಾಗೆ ಸದಾಕಾಲ ಹೊಳಿತಾರೆ.”—ದಾನಿ. 12:3.

ಗೀತೆ 111 ಆತ ಕರೆಯುವ

ಕಿರುನೋಟa

1. ಸಾವಿರ ವರ್ಷದ ಆಳ್ವಿಕೆಯಲ್ಲಿ ಏನೆಲ್ಲಾ ನಡಿಯುತ್ತೆ?

ಯೇಸುವಿನ 1,000 ವರ್ಷದ ಆಳ್ವಿಕೆಯಲ್ಲಿ ಸತ್ತವರು ಮತ್ತೆ ಎದ್ದು ಬಂದಾಗ ನಾವು ಖುಷಿಯಲ್ಲಿ ತೇಲಾಡುತ್ತಿರುತ್ತೀವಿ. ನಾವು ಹೇಗೆ ನಮ್ಮವರನ್ನ ಮತ್ತೆ ನೋಡೋಕೆ ಕಾಯ್ತಾ ಇದ್ದೀವೋ ಹಾಗೇ ಯೆಹೋವನೂ ಅವರನ್ನ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾನೆ. (ಯೋಬ 14:15) ತೀರಿಹೋಗಿರುವವರು ಮತ್ತೆ ವಾಪಸ್‌ ಬಂದಾಗ ಭೂಮಿ ಮೇಲಿರೋ ಪ್ರತಿಯೊಬ್ಬರಿಗೂ ಎಷ್ಟು ಖುಷಿಯಾಗುತ್ತೆ ಅಲ್ವಾ! ಜೀವದ ಪುಸ್ತಕದಲ್ಲಿ ‘ನೀತಿವಂತರ’ ಹೆಸರಿದೆ. ಇವರು “ಜೀವ ಪಡೆದುಕೊಳ್ಳೋಕೆ ಎದ್ದು ಬರ್ತಾರೆ” ಅಂತ ಹಿಂದಿನ ಲೇಖನದಲ್ಲಿ ಕಲಿತ್ವಿ. (ಅ. ಕಾ. 24:15; ಯೋಹಾ. 5:29) ಹರ್ಮಗೆದೋನ್‌ ನಂತರ ಮೊದಲು ಜೀವಂತವಾಗಿ ಎದ್ದು ಬರುವವರಲ್ಲಿ ತೀರಿಹೋಗಿರೋ ನಮ್ಮ ಪ್ರಿಯರೂ ಇರಬಹುದು.b ಅಷ್ಟೇ ಅಲ್ಲ, “ಅನೀತಿವಂತರು” ಅಂದ್ರೆ ಯೆಹೋವನ ಬಗ್ಗೆ ತಿಳಿದುಕೊಳ್ಳೋಕೆ ಅಥವಾ ಆತನನ್ನ ಆರಾಧಿಸೋಕೆ ಅವಕಾಶ ಸಿಗದೇ ತೀರಿಹೋದವರು “ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ.”

2-3. (ಎ) ಯೆಶಾಯ 11:9, 10ರಲ್ಲಿ ಹೇಳಿರೋ ಹಾಗೆ ಇಡೀ ಭೂಮಿಯಲ್ಲಿ ಇಲ್ಲಿ ತನಕ ನಡಿದೇ ಇರೋ ಯಾವ ದೊಡ್ಡ ಶೈಕ್ಷಣಿಕ ಕೆಲಸ ನಡಿಯುತ್ತೆ? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?

2 ಜೀವಂತವಾಗಿ ಎದ್ದು ಬರೋ ಎಲ್ಲರೂ ತುಂಬ ವಿಷಯಗಳನ್ನ ಕಲಿಯಬೇಕಾಗುತ್ತೆ. (ಯೆಶಾ. 26:9; 61:11) ಅದಕ್ಕೇ ಮಾನವ ಚರಿತ್ರೆಯಲ್ಲೇ ನಡೆದಿಲ್ಲದ ದೊಡ್ಡ ಶೈಕ್ಷಣಿಕ ಕೆಲಸ ಆಗ ಶುರುವಾಗುತ್ತೆ. (ಯೆಶಾಯ 11:9, 10 ಓದಿ.) ಯಾಕಂದ್ರೆ ಅನೀತಿವಂತರು ಯೇಸು ಬಗ್ಗೆ, ದೇವರ ಸರ್ಕಾರ, ಬಿಡುಗಡೆ ಬೆಲೆ, ಯೆಹೋವನ ಹೆಸರು ಮತ್ತು ಆತನ ಆಳೋ ಹಕ್ಕಿನ ಬಗ್ಗೆ ಸೈತಾನ ಎಬ್ಬಿಸಿದ ಸವಾಲಿನ ಬಗ್ಗೆ ಎಲ್ಲಾ ತಿಳಿದುಕೊಳ್ಳಬೇಕಾಗುತ್ತೆ. ಇವರಷ್ಟೇ ಅಲ್ಲ, ನೀತಿವಂತರೂ ಎಷ್ಟೋ ವಿಷಯಗಳನ್ನ ಕಲಿಬೇಕಾಗುತ್ತೆ. ಯಾಕಂದ್ರೆ ನಮ್ಮ ಹತ್ರ ಈಗ ಇರೋ ತರ ಅವರ ಹತ್ರ ಪೂರ್ತಿ ಬೈಬಲ್‌ ಇರಲಿಲ್ಲ. ಯೆಹೋವ ನಮಗೆ ತಿಳಿಸಿರೋ ಎಷ್ಟೋ ವಿಷಯಗಳು ಅವರಿಗೆ ಗೊತ್ತೇ ಇಲ್ಲ. ಅದನ್ನೆಲ್ಲ ಅವರು ತಿಳಿದುಕೊಳ್ಳಬೇಕು. ಒಟ್ಟಿನಲ್ಲಿ ನೀತಿವಂತರಿಗೂ ಅನೀತಿವಂತರಿಗೂ ಕಲಿಯೋಕೆ ತುಂಬ ಇರುತ್ತೆ.

3 ಈ ದೊಡ್ಡ ಶೈಕ್ಷಣಿಕ ಕೆಲಸ ಹೇಗೆ ನಡಿಯುತ್ತೆ? ಒಬ್ಬರ ಹೆಸರು ಜೀವದ ಪುಸ್ತಕದಲ್ಲಿ ಶಾಶ್ವತವಾಗಿ ಇರೋದು, ಇಲ್ಲದೇ ಇರೋದು ಅವರು ಆ ಶೈಕ್ಷಣಿಕ ಕೆಲಸಕ್ಕೆ ಸ್ಪಂದಿಸೋದರ ಮೇಲೆ ಹೇಗೆ ಹೊಂದಿಕೊಂಡಿದೆ? ಅಂತ ಈ ಲೇಖನದಲ್ಲಿ ಕಲಿತೀವಿ. ಇದಕ್ಕೆ ಉತ್ತರ ತಿಳಿದುಕೊಳ್ಳೋಕೆ ದಾನಿಯೇಲ ಮತ್ತು ಪ್ರಕಟನೆ ಪುಸ್ತಕದಲ್ಲಿರೋ ಕೆಲವು ಭವಿಷ್ಯವಾಣಿಗಳನ್ನ ನೋಡೋಣ. ಸತ್ತವರು ಮತ್ತೆ ಜೀವಂತವಾಗಿ ಎದ್ದು ಬರೋದರ ಬಗ್ಗೆ ದಾನಿಯೇಲ ಪುಸ್ತಕದಲ್ಲಿದ್ದ ಭವಿಷ್ಯವಾಣಿಯನ್ನ ನಾವು ಮುಂಚೆ ಹೇಗೆ ಅರ್ಥಮಾಡಿಕೊಂಡಿದ್ವಿ ಮತ್ತು ಈಗ ಹೇಗೆ ಅರ್ಥ ಮಾಡಿಕೊಂಡಿದ್ದೀವಿ ಅನ್ನೋದನ್ನೂ ನೋಡೋಣ. ಇವೆಲ್ಲ ಮುಂದೆ ನಡಿಯೋ ವಿಷಯಗಳಾದ್ರೂ ನಾವು ಇದಕ್ಕೆ ಗಮನ ಕೊಡೋದು ಯಾಕೆ ಮುಖ್ಯ ಅಂತ ನೋಡಿ. ಮೊದಲು ನಾವು ದಾನಿಯೇಲ 12:1, 2ರಲ್ಲಿರೋ ಭವಿಷ್ಯವಾಣಿ ಬಗ್ಗೆ ಚರ್ಚೆ ಮಾಡೋಣ.

‘ಮಣ್ಣಲ್ಲಿ ಮಣ್ಣಾಗಿರೋರು ಎದ್ದೇಳ್ತಾರೆ’

4-5. ಅಂತ್ಯಕಾಲದ ಬಗ್ಗೆ ದಾನಿಯೇಲ 12:1 ಏನು ಹೇಳಿತ್ತು?

4 ದಾನಿಯೇಲ 12:1 ಓದಿ. ಅಂತ್ಯಕಾಲದಲ್ಲಿ ಯಾವೆಲ್ಲಾ ಘಟನೆಗಳು ನಡಿಯುತ್ತೆ ಅಂತ ದಾನಿಯೇಲ ಪುಸ್ತಕ ಹೇಳುತ್ತೆ. ಯಾವ ಘಟನೆಯಾದ ಮೇಲೆ ಯಾವ ಘಟನೆ ನಡಿಯುತ್ತೆ ಅನ್ನೋದನ್ನೂ ಹೇಳುತ್ತೆ. ಉದಾಹರಣೆಗೆ, ದಾನಿಯೇಲ 12:1ರಲ್ಲಿ “[ದೇವರ] ಜನ್ರ ಪರವಾಗಿ ನಿಂತಿರೋ” ಮೀಕಾಯೇಲ ಅಂದ್ರೆ ಯೇಸು ಕ್ರಿಸ್ತನ ಬಗ್ಗೆ ಹೇಳಿತ್ತು. ಈ ಭವಿಷ್ಯವಾಣಿ ಯೇಸು 1914ರಲ್ಲಿ ದೇವರ ಸರ್ಕಾರದ ರಾಜನಾದಾಗ ನೆರವೇರೋಕೆ ಶುರುವಾಯ್ತು.

5 ಕಷ್ಟಕಾಲದಲ್ಲಿ ಯೇಸು “ಕ್ರಮ ತಗೊಳ್ತಾನೆ” ಅಂತ ದಾನಿಯೇಲ ಪುಸ್ತಕ ಹೇಳುತ್ತೆ. ಈ ಕಷ್ಟಕಾಲದ ಬಗ್ಗೆ ದಾನಿಯೇಲ ಮುಂದುವರಿಸ್ತಾ ಹೀಗೆ ಹೇಳಿದ: ಅದು “ಎಂಥ ಕಷ್ಟಕಾಲ . . . ಅಂದ್ರೆ ಭೂಮಿ ಮೇಲೆ ಮೊದಲ ದೇಶ ಹುಟ್ಕೊಂಡ ದಿನದಿಂದ ಅವತ್ತಿನ ತನಕ ಅಂಥ ಕಷ್ಟಕಾಲ ಬಂದಿಲ್ಲ.” ಈ ‘ಕಷ್ಟಕಾಲವನ್ನ’ ಮತ್ತಾಯ 24:21 “ಮಹಾ ಸಂಕಟ” ಅಂತ ಕರೆಯುತ್ತೆ. ಈ ಕಷ್ಟಕಾಲದ ಕೊನೆಯಲ್ಲಿ ಅಂದ್ರೆ ಹರ್ಮಗೆದೋನ್‌ ಯುದ್ಧದಲ್ಲಿ ಯೇಸು ದೇವಜನರನ್ನ ಕಾಪಾಡೋಕೆ “ಕ್ರಮ ತಗೊಳ್ತಾನೆ.” ಪ್ರಕಟನೆ ಪುಸ್ತಕ ಈ ದೇವಜನರನ್ನ ‘ಮಹಾ ಸಂಕಟವನ್ನ ಪಾರಾಗಿ ಬಂದ ದೊಡ್ಡ ಗುಂಪು’ ಅಂತ ಕರೆಯುತ್ತೆ.—ಪ್ರಕ. 7:9, 14.

6. ದೊಡ್ಡ ಗುಂಪಿನವರು ಮಹಾ ಸಂಕಟವನ್ನ ಪಾರಾದ ಮೇಲೆ ಏನಾಗುತ್ತೆ? ವಿವರಿಸಿ. (ಭೂಮಿ ಮೇಲೆ ಜೀವ ಪಡೆದುಕೊಳ್ಳೋಕೆ ಎದ್ದು ಬರುವವರ ಬಗ್ಗೆ ಇನ್ನೂ ಜಾಸ್ತಿ ತಿಳಿದುಕೊಳ್ಳೋಕೆ ಈ ಸಂಚಿಕೆಯ “ವಾಚಕರಿಂದ ಪ್ರಶ್ನೆಗಳು” ನೋಡಿ.)

6 ದಾನಿಯೇಲ 12:2 ಓದಿ. ದೊಡ್ಡ ಗುಂಪಿನವರು ಕಷ್ಟಕಾಲವನ್ನ ಪಾರಾದ ಮೇಲೆ ಏನಾಗುತ್ತೆ? ಈ ವಚನಗಳಲ್ಲಿ ಹೇಳಿರೋ ಮಾತುಗಳು, ದೇವಜನರು ಕೊನೇ ದಿನಗಳಲ್ಲಿ ಸಾಂಕೇತಿಕವಾಗಿ ಅಂದ್ರೆ ಆಧ್ಯಾತ್ಮಿಕವಾಗಿ ಮತ್ತೆ ಜೀವ ಪಡೆದುಕೊಳ್ಳೋದರ ಬಗ್ಗೆ ಹೇಳ್ತಿದೆ ಅಂತ ಮುಂಚೆ ಅಂದುಕೊಂಡಿದ್ವಿ.c ಆದ್ರೆ ಇದ್ರಲ್ಲಿ ಹೇಳಿರೋ ಮಾತುಗಳು ಮುಂದೆ ಹೊಸಲೋಕದಲ್ಲಿ ಜನರು ನಿಜವಾಗಲೂ ಮತ್ತೆ ಜೀವ ಪಡೆದುಕೊಳ್ಳೋದರ ಬಗ್ಗೆ ಹೇಳ್ತಾ ಇದೆ. ಹೀಗೆ ಹೇಳೋಕೆ ಆಧಾರ ಏನು? ಈ ವಚನದಲ್ಲಿ ಹೇಳಿರೋ ‘ಮಣ್ಣು’ ಅನ್ನೋ ಪದವನ್ನ ಯೋಬ 17:16 ರಲ್ಲೂ ಬಳಸಲಾಗಿದೆ. ಈ ಎರಡೂ ವಚನಗಳಲ್ಲಿರೋ ಮೂಲ ಪದದ ಅರ್ಥ ಸಮಾಧಿ. ಹಾಗಾಗಿ ದಾನಿಯೇಲ 12:2ರಲ್ಲಿ ಹೇಳಿರೋ ಮಾತುಗಳು ತೀರಿಹೋಗಿರುವವರು ನಿಜವಾಗಲೂ ಮತ್ತೆ ಜೀವ ಪಡೆದುಕೊಳ್ಳೋದನ್ನ ಸೂಚಿಸುತ್ತಿದೆ. ಇದು ಕೊನೇ ದಿನಗಳು ಮುಗಿದ ಮೇಲೆ ಅಂದ್ರೆ ಹರ್ಮಗೆದೋನ್‌ ಯುದ್ಧ ಆದಮೇಲೆ ನಡಿಯುತ್ತೆ.

7. (ಎ) “ಶಾಶ್ವತವಾಗಿ ಜೀವಿಸೋಕೆ” ಕೆಲವರು ಎದ್ದು ಬರ್ತಾರೆ ಅನ್ನೋದರ ಅರ್ಥ ಏನು? (ಬಿ) ಇವರು “ಉತ್ತಮ ರೀತಿಯಲ್ಲಿ” ಮತ್ತೆ ಎದ್ದು ಬರ್ತಾರೆ ಅನ್ನೋದರ ಅರ್ಥ ಏನು?

7 ದಾನಿಯೇಲ 12:2ರಲ್ಲಿ ಕೆಲವರು “ಶಾಶ್ವತವಾಗಿ ಜೀವಿಸೋಕೆ” ಎದ್ದು ಬರ್ತಾರೆ ಅಂತ ಹೇಳಿರೋದರ ಅರ್ಥ ಏನು? ಮತ್ತೆ ಜೀವಂತವಾಗಿ ಎದ್ದು ಬಂದವರು ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಯೆಹೋವ ಮತ್ತು ಯೇಸು ಬಗ್ಗೆ ತಿಳಿದುಕೊಂಡು ಅವರ ಬಗ್ಗೆ ಕಲಿತಾ ಅವರ ಮಾತನ್ನ ಕೇಳಬೇಕು. ಯಾರು ಹೀಗೆ ನಡೆದುಕೊಳ್ಳುತ್ತಾರೋ ಅವರಿಗೆ ಕೊನೆಯಲ್ಲಿ ಶಾಶ್ವತ ಜೀವ ಸಿಗುತ್ತೆ ಅನ್ನೋದೇ ಇದರ ಅರ್ಥ. (ಯೋಹಾ. 17:3) ಈ ಹಿಂದೆ ಭೂಮಿ ಮೇಲೆ ಜೀವಂತವಾಗಿ ಎದ್ದು ಬಂದವರಿಗಿಂತ ಇವರು “ಉತ್ತಮ ರೀತಿಯಲ್ಲಿ” ಜೀವ ಪಡೆದುಕೊಳ್ತಾರೆ ಅಂತ ಹೇಳಬಹುದು. (ಇಬ್ರಿ. 11:35) ಯಾಕಂದ್ರೆ ಈ ಮುಂಚೆ ಜೀವಂತವಾಗಿ ಎದ್ದು ಬಂದವರು ಅಪರಿಪೂರ್ಣರಾಗಿದ್ರಿಂದ ಮತ್ತೆ ತೀರಿಹೋದರು.

8. ಕೆಲವರು “ಅವಮಾನ ಪಡ್ಕೊಳ್ಳೋಕೆ, ಶಾಶ್ವತವಾದ ತಿರಸ್ಕಾರ ಪಡ್ಕೊಳ್ಳೋಕೆ” ಎದ್ದೇಳುತ್ತಾರೆ ಅನ್ನೋದರ ಅರ್ಥ ಏನು?

8 ಜೀವಂತವಾಗಿ ಎದ್ದು ಬಂದವರೆಲ್ಲರೂ ಯೆಹೋವನಿಂದ ಕಲಿಯೋಕೆ ಇಷ್ಟ ಪಡ್ತಾರೆ ಅಂತ ಹೇಳೋಕೆ ಆಗಲ್ಲ. ಕೆಲವರು “ಅವಮಾನ ಪಡ್ಕೊಳ್ಳೋಕೆ, ಶಾಶ್ವತವಾದ ತಿರಸ್ಕಾರ ಪಡ್ಕೊಳ್ಳೋಕೆ” ಎದ್ದೇಳುತ್ತಾರೆ ಅಂತ ದಾನಿಯೇಲ ಭವಿಷ್ಯವಾಣಿಯಲ್ಲಿ ಹೇಳಿದ. ಇದರ ಅರ್ಥ ಏನು? ಕೆಲವರು ದೇವರ ವಿರುದ್ಧ ತಿರುಗಿ ಬೀಳೋದ್ರಿಂದ ಅವರ ಹೆಸರುಗಳನ್ನ ಆತನು ಜೀವದ ಪುಸ್ತಕದಲ್ಲಿ ಬರೆಯಲ್ಲ. ಅದಕ್ಕೆ ಅವರಿಗೆ ಶಾಶ್ವತ ಜೀವ ಸಿಗಲ್ಲ. ಅವರು “ಶಾಶ್ವತವಾದ ತಿರಸ್ಕಾರ” ಅಂದ್ರೆ ನಾಶನವನ್ನ ಅನುಭವಿಸುತ್ತಾರೆ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಮತ್ತೆ ಜೀವ ಪಡೆದುಕೊಂಡವರಿಗೆ ಕೊನೆಗೆ ಏನಾಗುತ್ತೆ ಅನ್ನೋದು ಅವರು ಜೀವಂತವಾಗಿ ಎದ್ದು ಬಂದಮೇಲೆ ಹೇಗೆ ನಡೆದುಕೊಳ್ತಾರೋ ಅದರ ಮೇಲೆ ಹೊಂದಿಕೊಂಡಿರುತ್ತೆ ಅಂತ ದಾನಿಯೇಲ 12:2ರಲ್ಲಿ ಹೇಳ್ತಿದೆ.d (ಪ್ರಕ. 20:12) ಆಗ ಕೆಲವರಿಗೆ ಶಾಶ್ವತ ಜೀವ ಸಿಗುತ್ತೆ, ಕೆಲವರಿಗೆ ಸಿಗಲ್ಲ.

“ನೀತಿಯ ದಾರಿ ಹಿಡಿಯೋಕೆ ತುಂಬ ಜನ್ರಿಗೆ ಸಹಾಯ ಮಾಡುವವರು”

9-10. (ಎ) ಮಹಾಸಂಕಟ ಆದಮೇಲೆ ಇನ್ನೂ ಏನಾಗುತ್ತೆ? (ಬಿ) ‘ವಿಶಾಲ ಆಕಾಶದ ಹಾಗೆ ಹೊಳಿಯುವವರು’ ಯಾರು?

9 ದಾನಿಯೇಲ 12:3 ಓದಿ. “ಕಷ್ಟಕಾಲ” ಅಥವಾ ಮಹಾ ಸಂಕಟ ಮುಗಿದ ಮೇಲೆ ಏನಾಗುತ್ತೆ ಅಂತ ದಾನಿಯೇಲ 12:2ರಲ್ಲಿ ನೋಡಿದ್ವಿ. ಇನ್ನೂ ಏನೆಲ್ಲಾ ಆಗುತ್ತೆ ಅಂತ ವಚನ 3ರಲ್ಲಿ ಇದೆ. ಅದನ್ನ ಈಗ ನೋಡೋಣ.

10 ಆ ವಚನದಲ್ಲಿ ಕೆಲವರು “ವಿಶಾಲ ಆಕಾಶದ ಹಾಗೆ ಹೊಳಿತಾರೆ” ಅಂತ ಹೇಳುತ್ತೆ. ಅವರು ಯಾರು? ಇದನ್ನ ಅರ್ಥ ಮಾಡಿಸೋಕೆ ಮತ್ತಾಯ 13:43ರಲ್ಲಿ ಯೇಸು ಏನು ಹೇಳಿದನು ಅಂತ ನೋಡಿ. “ಆ ಸಮಯದಲ್ಲಿ ತಂದೆಯ ಆಳ್ವಿಕೆಯಲ್ಲಿ ನೀತಿವಂತರು ಸೂರ್ಯನ ತರ ಹೊಳಿತಾರೆ” ಅಂತ ಆತನು ಹೇಳಿದನು. ಯೇಸು ಇದನ್ನ ಹೇಳೋಕೆ ಮುಂಚೆ ‘ದೇವರ ಆಳ್ವಿಕೆಯ ಮಕ್ಕಳ’ ಬಗ್ಗೆ ಮಾತಾಡ್ತಿದ್ದನು. ಅಂದ್ರೆ ಸ್ವರ್ಗದಲ್ಲಿ ತನ್ನ ಜೊತೆ ಆಳ್ವಿಕೆ ಮಾಡೋ ಅಭಿಷಿಕ್ತ ಸಹೋದರರ ಬಗ್ಗೆ ಅವನು ಮಾತಾಡ್ತಿದ್ದನು. (ಮತ್ತಾ. 13:38) ಹಾಗಾಗಿ ದಾನಿಯೇಲ 12:3, ಅಭಿಷಿಕ್ತರ ಬಗ್ಗೆ ಮತ್ತು 1,000 ವರ್ಷದಲ್ಲಿ ಅವರು ಮಾಡೋ ಕೆಲಸದ ಬಗ್ಗೆ ಹೇಳುತ್ತಿರಬೇಕು.

ಹಿಂದಿನ ಲೇಖನದಲ್ಲಿದ್ದ ದೃಶ್ಯವನ್ನೇ ಇನ್ನೊಂದು ಕಡೆಯಿಂದ ತೋರಿಸಲಾಗಿದೆ. ಒಬ್ಬ ಸಹೋದರ ಪರದೈಸ್ನಲ್ಲಿ ಮತ್ತೆ ಜೀವ ಪಡೆದುಕೊಂಡು ಎದ್ದು ಬಂದವರಿಗೆ ಕಲಿಸ್ತಿದ್ದಾನೆ. ದಾನಿಯೇಲ 2ನೇ ಅಧ್ಯಾಯದಲ್ಲಿ ನೆಬೂಕದ್ನೆಚ್ಚರ ಕನಸಿನಲ್ಲಿ ಕಂಡ ಮೂರ್ತಿಯ ಬಗ್ಗೆ ವಿವರಿಸ್ತಿದ್ದಾನೆ. ಅದನ್ನ ಯೇಸು ಮತ್ತು 1,44,000 ಅಭಿಷಿಕ್ತರು ನೋಡ್ತಿದ್ದಾರೆ.

1,44,000 ಅಭಿಷಿಕ್ತರು ಯೇಸು ಜೊತೆ 1,000 ವರ್ಷದ ಆಳ್ವಿಕೆಯಲ್ಲಿ ಈ ಭೂಮಿ ಮೇಲೆ ನಡಿಯೋ ಶೈಕ್ಷಣಿಕ ಕೆಲಸವನ್ನ ನೋಡಿಕೊಳ್ತಾರೆ (ಪ್ಯಾರ 11 ನೋಡಿ)

11-12. ಸಾವಿರ ವರ್ಷದ ಆಳ್ವಿಕೆಯಲ್ಲಿ 1,44,000 ಅಭಿಷಿಕ್ತರು ಏನೆಲ್ಲಾ ಮಾಡ್ತಾರೆ?

11 “ನೀತಿಯ ದಾರಿ ಹಿಡಿಯೋಕೆ ತುಂಬ ಜನ್ರಿಗೆ” ಅಭಿಷಿಕ್ತರು ಹೇಗೆ ಸಹಾಯ ಮಾಡುತ್ತಾರೆ? 1,000 ವರ್ಷದ ಆಳ್ವಿಕೆಯಲ್ಲಿ ಭೂಮಿ ಮೇಲೆ ನಡಿಯೋ ಶೈಕ್ಷಣಿಕ ಕೆಲಸವನ್ನ ಅವರು ಯೇಸು ಜೊತೆಗಿದ್ದು ನೋಡಿಕೊಳ್ತಾರೆ. ಈ 1,44,000 ಅಭಿಷಿಕ್ತರು ಯೇಸು ಜೊತೆ ರಾಜರಾಗಿರೋದು ಮಾತ್ರ ಅಲ್ಲ, ಪುರೋಹಿತರಾಗಿಯೂ ಕೆಲಸ ಮಾಡ್ತಾರೆ. (ಪ್ರಕ. 1:6; 5:10; 20:6) ಅವರು ‘ದೇಶಗಳ ಜನ್ರನ್ನ ವಾಸಿಮಾಡ್ತಾರೆ.’ ಅಂದ್ರೆ ನಿಧಾನವಾಗಿ ಪರಿಪೂರ್ಣರಾಗೋಕೆ ಜನರಿಗೆ ಸಹಾಯ ಮಾಡ್ತಾರೆ. (ಪ್ರಕ. 22:1, 2; ಯೆಹೆ. 47:12) ಈ ಕೆಲಸದಲ್ಲಿ ಕೈಜೋಡಿಸುವಾಗ ಅವರ ಖುಷಿಗೆ ಎಲ್ಲೆನೇ ಇರಲ್ಲ!

12 ನೀತಿಯ ದಾರಿ ಹಿಡಿಯೋ “ತುಂಬ” ಜನರಲ್ಲಿ ಯಾರೆಲ್ಲಾ ಇದ್ದಾರೆ? ಹೊಸ ಲೋಕದಲ್ಲಿ ಮತ್ತೆ ಜೀವ ಪಡೆದುಕೊಳ್ಳುವವರು, ಹರ್ಮಗೆದೋನನ್ನ ಪಾರಾದವರು ಇರ್ತಾರೆ ಮತ್ತು ಹೊಸ ಲೋಕದಲ್ಲಿ ಹುಟ್ಟೋ ಮಕ್ಕಳು ಕೂಡ ಇರಬಹುದು. ಒಟ್ಟಿನಲ್ಲಿ 1,000 ವರ್ಷದ ಕೊನೆಯಲ್ಲಿ ಭೂಮಿ ಮೇಲಿರೋ ಎಲ್ಲರೂ ಪರಿಪೂರ್ಣರಾಗಿರುತ್ತಾರೆ. ಹಾಗಾದ್ರೆ ಜೀವದ ಪುಸ್ತಕದಲ್ಲಿ ಅವರ ಹೆಸರುಗಳನ್ನ ಪೆನ್ನಿನಿಂದ ಶಾಶ್ವತವಾಗಿ ಯಾವಾಗ ಬರೆಯಲಾಗುತ್ತೆ?

ಕೊನೆ ಪರೀಕ್ಷೆ

13-14. ಜನರು ಪರಿಪೂರ್ಣರಾದ ಮೇಲೆ ಶಾಶ್ವತ ಜೀವ ಪಡಕೊಳ್ಳಬೇಕಾದ್ರೆ ಏನು ಮಾಡಬೇಕು?

13 ಪರಿಪೂರ್ಣರಾಗಿರೋ ಎಲ್ಲರಿಗೂ ಶಾಶ್ವತ ಜೀವ ಸಿಗುತ್ತಾ? ಇಲ್ಲ. ಆದಾಮ ಹವ್ವರ ಬಗ್ಗೆ ಯೋಚನೆ ಮಾಡಿ ನೋಡಿ. ಅವರು ಪರಿಪೂರ್ಣರಾಗಿದ್ದರು. ಅವರು ಶಾಶ್ವತ ಜೀವ ಪಡಕೊಳ್ಳಬೇಕಾದರೆ ಯೆಹೋವನ ಮಾತನ್ನ ಕೇಳಬೇಕಿತ್ತು. ಆದ್ರೆ ಅವರು ಯೆಹೋವನ ಮಾತು ಕೇಳದೆ ತಪ್ಪು ಮಾಡಿಬಿಟ್ಟರು.—ರೋಮ. 5:12.

14 ಸಾವಿರ ವರ್ಷದ ಕೊನೆಯಲ್ಲಿ ಭೂಮಿ ಮೇಲಿರೋ ಎಲ್ಲರೂ ಪರಿಪೂರ್ಣರಾಗಿರ್ತಾರೆ. ಆದ್ರೆ ಅಲ್ಲಿರೋ ಪ್ರತಿಯೊಬ್ಬರು ಯೆಹೋವನ ಆಳ್ವಿಕೆನ ಯಾವಾಗಲು ಬೆಂಬಲಿಸುತ್ತಾರಾ ಅಥವಾ ಆದಾಮ ಹವ್ವ ತರ ಪರಿಪೂರ್ಣರಾಗಿದ್ರೂ ಯೆಹೋವನನ್ನು ಬಿಟ್ಟು ಹೋಗ್ತಾರಾ? ಯಾರೆಲ್ಲಾ ಬಿಟ್ಟುಹೋಗ್ತಾರೆ ಯಾರೆಲ್ಲ ಆತನಿಗೆ ನಂಬಿಗಸ್ತರಾಗಿರ್ತಾರೆ ಅನ್ನೋದು 1,000 ವರ್ಷದ ಕೊನೆಯಲ್ಲಿ ಗೊತ್ತಾಗುತ್ತೆ. ಹೇಗೆ?

15-16. (ಎ) ಜನರಿಗೆ ತಾವು ಯೆಹೋವನ ಆಳ್ವಿಕೆಯನ್ನ ಬೆಂಬಲಿಸ್ತೀವಿ ಅಂತ ತೋರಿಸೋ ಅವಕಾಶ ಯಾವಾಗ ಸಿಗುತ್ತೆ? (ಬಿ) ಕೊನೆ ಪರೀಕ್ಷೆ ಆದಮೇಲೆ ಏನಾಗುತ್ತೆ?

15 ಸಾವಿರ ವರ್ಷಗಳ ತನಕ ಸೈತಾನ ಬಂಧನದಲ್ಲಿ ಇರ್ತಾನೆ. ಆಗ ಅವನು ಯಾರನ್ನೂ ದಾರಿ ತಪ್ಪಿಸೋಕಾಗಲ್ಲ. 1,000 ವರ್ಷಗಳ ಕೊನೆಯಲ್ಲಿ ಅವನಿಗೆ ಬಿಡುಗಡೆಯಾಗುತ್ತೆ. ಆಗ ಅವನು ಪರಿಪೂರ್ಣರಾಗಿರೋ ಮನುಷ್ಯರನ್ನ ದಾರಿ ತಪ್ಪಿಸೋಕೆ ನೋಡುತ್ತಾನೆ. ಆಗ ಪ್ರತಿಯೊಬ್ಬರಿಗೂ ‘ನಾವು ಯೆಹೋವನನ್ನು ಗೌರವಿಸ್ತೀವಿ ಮತ್ತು ಆತನ ಆಳ್ವಿಕೆಯನ್ನ ಬೆಂಬಲಿಸ್ತೀವಿ’ ಅಂತ ತೋರಿಸೋಕೆ ಒಂದು ಅವಕಾಶ ಸಿಗುತ್ತೆ. (ಪ್ರಕ. 20:7-10) ದಾರಿ ತಪ್ಪಿಸೋಕೆ ಸೈತಾನ ಮಾಡೋ ಪ್ರಯತ್ನಕ್ಕೆ ಜನರು ಹೇಗೆ ಪ್ರತಿಕ್ರಿಯಿಸ್ತಾರೋ ಅದರ ಆಧಾರದ ಮೇಲೆ ಅವರ ಹೆಸರನ್ನ ಜೀವದ ಪುಸ್ತಕದಲ್ಲಿ ಶಾಶ್ವತವಾಗಿ ಬರಿಬೇಕಾ ಬೇಡ್ವಾ ಅನ್ನೋದನ್ನ ಯೆಹೋವ ನಿರ್ಧರಿಸ್ತಾನೆ.

16 ಆದಾಮ ಹವ್ವ ತರ ಕೆಲವರು ಯೆಹೋವನನ್ನು ಬಿಟ್ಟು ಹೋಗ್ತಾರೆ. ಅಂಥವರಿಗೆ ಏನಾಗುತ್ತೆ? ‘ಜೀವದ ಪುಸ್ತಕದಲ್ಲಿ ಯಾರ ಹೆಸ್ರು ಇಲ್ವೋ ಅವ್ರನ್ನೆಲ್ಲ ಆ ಬೆಂಕಿ ಕೆರೆಗೆ ತಳ್ಳಿಬಿಡಲಾಗುತ್ತೆ’ ಅಂತ ಪ್ರಕಟನೆ 20:15 ಹೇಳುತ್ತೆ. ಅಂದ್ರೆ ಯಾರು ಯೆಹೋವನ ವಿರುದ್ಧ ತಿರುಗಿ ಬೀಳುತ್ತಾರೋ ಅವರೆಲ್ಲ ಪೂರ್ತಿಯಾಗಿ ನಾಶವಾಗುತ್ತಾರೆ. ಆದ್ರೆ ತುಂಬ ಜನರು ಕೊನೆ ಪರೀಕ್ಷೆಯಲ್ಲಿ ಪಾಸ್‌ ಆಗ್ತಾರೆ. ಅವರ ಹೆಸರನ್ನ ಶಾಶ್ವತವಾಗಿ ಜೀವದ ಪುಸ್ತಕದಲ್ಲಿ ಬರೆಯಲಾಗುತ್ತೆ.

“ಅಂತ್ಯದ” ಸಮಯದಲ್ಲಿ . . .

17. ನಮ್ಮ ಸಮಯದಲ್ಲಿ ಏನಾಗುತ್ತೆ ಅಂತ ದೇವದೂತ ದಾನಿಯೇಲನಿಗೆ ಹೇಳಿದ? (ದಾನಿಯೇಲ 12:4, 8-10)

17 ಮುಂದೆ ನಡೆಯೋ ಘಟನೆಗಳನ್ನ ನೆನಸಿಕೊಂಡ್ರೆ ನಮ್ಮ ಮೈ ಜುಮ್‌ ಅನ್ನುತ್ತೆ ಅಲ್ವಾ! ದಾನಿಯೇಲನಿಗೆ ಒಬ್ಬ ದೇವದೂತ ನಮ್ಮ ಸಮಯದ ಬಗ್ಗೆ ಅಂದ್ರೆ “ಅಂತ್ಯದ” ಸಮಯದ ಬಗ್ಗೆ ಮಾಹಿತಿ ಕೊಟ್ಟ. (ದಾನಿಯೇಲ 12:4, 8-10 ಓದಿ; 2 ತಿಮೊ. 3:1-5) ಅವನು ದಾನಿಯೇಲನಿಗೆ ಆ ಸಮಯದಲ್ಲಿ “ನಿಜವಾದ ಜ್ಞಾನ ತುಂಬಿ ತುಳುಕುತ್ತೆ” ಅಂದ. ಅದರ ಅರ್ಥ ದಾನಿಯೇಲ ಪುಸ್ತಕದಲ್ಲಿರೋ ಎಲ್ಲಾ ಭವಿಷ್ಯವಾಣಿಯನ್ನ ದೇವಜನರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಈ ಸಮಯದಲ್ಲಿ “ಕೆಟ್ಟವರು ಕೆಟ್ಟ ಕೆಲಸ ಮಾಡ್ತಾರೆ. ಕೆಟ್ಟವರು ಯಾರೂ ಈ ಮಾತುಗಳನ್ನ ಅರ್ಥ ಮಾಡ್ಕೊಳ್ಳಲ್ಲ” ಅಂತನೂ ಆ ದೇವದೂತ ಹೇಳಿದ.

18. ಮುಂದೆ ಕೆಟ್ಟ ಜನರಿಗೆ ಏನಾಗುತ್ತೆ?

18 ಇವತ್ತು ಕೆಟ್ಟವರು ಏನೇ ಕೆಟ್ಟ ಕೆಲಸ ಮಾಡಿದರು ಅವರಿಗೆ ಏನೂ ಆಗುತ್ತಿಲ್ಲ ಅಂತ ನಮಗೆ ಅನಿಸಬಹುದು. (ಮಲಾ. 3:14, 15) ಆದರೆ, ಬೇಗನೆ ಯೇಸು ಆಡುಗಳ ತರ ಇರೋ ಈ ಜನರನ್ನ ಕುರಿಗಳ ತರ ಇರೋ ಜನರಿಂದ ಬೇರೆ ಮಾಡಿ ಅವರಿಗೆ ನ್ಯಾಯತೀರಿಸ್ತಾನೆ. (ಮತ್ತಾ. 25:31-33) ಇಂಥ ಕೆಟ್ಟ ಜನರು ಮಹಾ ಸಂಕಟದಲ್ಲಿ ನಾಶವಾಗುತ್ತಾರೆ ಮತ್ತು ಹೊಸ ಲೋಕದಲ್ಲಿ ಅವರು ಮತ್ತೆ ಜೀವಂತವಾಗಿ ಎದ್ದು ಬರಲ್ಲ. ಮಲಾಕಿ 3:16 ಹೇಳಿರೋ “ಜ್ಞಾಪಕ ಪುಸ್ತಕದಲ್ಲಿ” ಇವರ ಹೆಸರೂ ಇರಲ್ಲ.

19. ನಾವು ಈಗ ಏನು ಮಾಡಬೇಕು? ಮತ್ತು ಯಾಕೆ? (ಮಲಾಕಿ 3:16-18)

19 ನಾವು ಆ ಕೆಟ್ಟ ಜನರ ತರ ಅಲ್ಲ ಅಂತ ತೋರಿಸಿಕೊಡೋಕೆ ಇದೇ ಸರಿಯಾದ ಸಮಯ. (ಮಲಾಕಿ 3:16-18 ಓದಿ.) ಯೆಹೋವ ದೇವರು ಈಗಿನಿಂದಲೇ “ವಿಶೇಷ ಸ್ವತ್ತು” ಅಥವಾ ಅಮೂಲ್ಯ ಆಸ್ತಿ ತರ ಇರೋ ಜನರನ್ನ ಒಟ್ಟು ಸೇರಿಸುತ್ತಿದ್ದಾನೆ. ನಾವೂ ಅವರಲ್ಲಿ ಒಬ್ಬರಾಗಿರಬೇಕು ಅನ್ನೋದು ನಮ್ಮ ಆಸೆ.

ಪರದೈಸ್ನಲ್ಲಿ ಪ್ರವಾದಿ ದಾನಿಯೇಲ ಮತ್ತು ಕೆಲವು ಸ್ನೇಹಿತರು ಒಟ್ಟಿಗೆ ಕೂತುಕೊಂಡು ಖುಷಿಖುಷಿಯಾಗಿ ಊಟ ಮಾಡ್ತಿದ್ದಾರೆ.

ದಾನಿಯೇಲ, ನಾವು ಪ್ರೀತಿಸೋ ಜನರು ಮತ್ತು ಬೇರೆಯವರು ತಮ್ಮ ಪಾಲಿಗಾಗಿ ಹೊಸ ಲೋಕದಲ್ಲಿ ‘ಎದ್ದು ನಿಲ್ಲೋದನ್ನ’ ನೋಡುವಾಗ ನಮ್ಮ ಖುಷಿ ಮುಗಿಲು ಮುಟ್ಟುತ್ತೆ! (ಪ್ಯಾರ 20 ನೋಡಿ)

20. (ಎ) ಯೆಹೋವ ದಾನಿಯೇಲನಿಗೆ ಯಾವ ಮಾತು ಕೊಟ್ಟಿದ್ದನು? (ಬಿ) ಆ ಮಾತು ನೆರವೇರೋ ದಿನಕ್ಕಾಗಿ ನೀವು ಯಾಕೆ ಕಾಯುತ್ತಿದ್ದೀರಾ?

20 ನಮ್ಮ ಕಾಲದಲ್ಲಿ ತುಂಬಾ ರೋಮಾಂಚಕ ಘಟನೆಗಳು ನಡೆಯುತ್ತಿದೆ. ಮುಂದೆ ಇನ್ನೂ ಅದ್ಭುತವಾದ ಘಟನೆಗಳು ನಡೆಯುತ್ತೆ. ದುಷ್ಟತನ ನಾಶ ಆಗೋದನ್ನ ನಾವು ಕಣ್ಣಾರೆ ನೋಡ್ತೀವಿ. ಆಮೇಲೆ “ನೀನು ಕಾಯಬೇಕಾಗಿರೋ ದಿನಗಳು ಕಳೆದ ಮೇಲೆ ನಿನ್ನ ಪಾಲಿಗಾಗಿ ನೀನು ಎದ್ದು ನಿಲ್ತೀಯ” ಅಂತ ಯೆಹೋವ ದಾನಿಯೇಲನಿಗೆ ಹೇಳಿದ ಮಾತು ನೆರವೇರುತ್ತೆ. (ದಾನಿ. 12:13) ದಾನಿಯೇಲ ಹಾಗೂ ನೀವು ಪ್ರೀತಿಸೋ ಜನರು ಮತ್ತೆ ‘ಎದ್ದು ನಿಲ್ಲೋದನ್ನ’ ನೋಡೋಕೆ ನೀವು ಕಾತುರದಿಂದ ಕಾಯುತ್ತಿರಬಹುದು. ಆದ್ರೆ ನೀವು ಅದನ್ನ ನೋಡಬೇಕಂದ್ರೆ ನಿಮ್ಮ ನಂಬಿಕೆಯನ್ನ ಉಳಿಸಿಕೊಳ್ಳಬೇಕು. ಅದಕ್ಕೋಸ್ಕರ ಈ ಕ್ಷಣದಿಂದಲೇ ನಿಮ್ಮ ಕೈಲಾಗಿದ್ದನ್ನೆಲ್ಲಾ ಮಾಡ್ತಾ ಇರಿ. ಆಗ ಯೆಹೋವ ನಿಮ್ಮ ಹೆಸರನ್ನೂ ಜೀವದ ಪುಸ್ತಕದಲ್ಲಿ ಬರೆಯುತ್ತಾನೆ. ಅದಾದಮೇಲೂ ನೀವು ಆತನಿಗೆ ನಂಬಿಗಸ್ತರಾಗಿರಿ. ಆಗ ನಿಮ್ಮ ಹೆಸರು ಎಂದೆಂದಿಗೂ ಆ ಪುಸ್ತಕದಲ್ಲಿ ಇರುತ್ತೆ.

ಈ ವಚನಗಳ ಅರ್ಥವೇನು?

  • ದಾನಿಯೇಲ 12:1

  • ದಾನಿಯೇಲ 12:2, 3

  • ದಾನಿಯೇಲ 12:4, 8-10

ಗೀತೆ 95 “ಯೆಹೋವನು ಒಳ್ಳೆಯವನೆಂದು ಸವಿದು ನೋಡಿರಿ”

a ದಾನಿಯೇಲ 12:2, 3ರಲ್ಲಿ ಹೇಳಿರೋ ದೊಡ್ಡ ಶೈಕ್ಷಣಿಕ ಕೆಲಸದ ಬಗ್ಗೆ ನಮಗೆ ಸಿಕ್ಕಿರೋ ಹೊಸ ತಿಳುವಳಿಕೆಯನ್ನ ಈ ಲೇಖನದಲ್ಲಿ ನೋಡ್ತೀವಿ. ಈ ಶೈಕ್ಷಣಿಕ ಕೆಲಸ ಯಾವಾಗ ನಡಿಯುತ್ತೆ, ಯಾರೆಲ್ಲಾ ಇದ್ರಲ್ಲಿ ಕೈಜೋಡಿಸ್ತಾರೆ ಮತ್ತು ಈ ಕೆಲಸ, ಕ್ರಿಸ್ತನ 1,000 ವರ್ಷದ ಆಳ್ವಿಕೆಯ ಕೊನೆಯಲ್ಲಿ ನಡಿಯೋ ಅಂತಿಮ ಪರೀಕ್ಷೆಗೆ ಜನರನ್ನ ಹೇಗೆ ತಯಾರಿ ಮಾಡುತ್ತೆ ಅಂತ ತಿಳಿದುಕೊಳ್ತೀವಿ.

b ಕೊನೇ ದಿನಗಳಲ್ಲಿ ಯಾರು ನಂಬಿಗಸ್ತರಾಗಿ ತೀರಿಹೋಗಿರುತ್ತಾರೋ ಅವರು ಮೊದಲು ಜೀವಂತವಾಗಿ ಎದ್ದು ಬರಬಹುದು. ಆಮೇಲೆ ಅವರಿಗಿಂತ ಮುಂಚೆ ಸತ್ತವರು ಎದ್ದು ಬರಬಹುದು. ನಾವು ಹೀಗೆ ಯಾಕೆ ಹೇಳಬಹುದು? ಯಾಕಂದ್ರೆ ತೀರಿಹೋದವರು ಮತ್ತೆ ಎದ್ದು ಬಂದಾಗ ಅವರನ್ನ ಸ್ವಾಗತಿಸೋಕೆ ಅವರಿಗೆ ಪರಿಚಯ ಇರುವವರು ಅಲ್ಲಿ ಇರೋಕಾಗುತ್ತೆ. ಸತ್ತಮೇಲೆ ಸ್ವರ್ಗಕ್ಕೆ ಹೋಗುವವರು “ಸರದಿ ಪ್ರಕಾರ” ಮತ್ತೆ ಜೀವ ಪಡೆದುಕೊಳ್ತಾರೆ ಅಂತ ಬೈಬಲ್‌ ಹೇಳುತ್ತೆ. ಹಾಗಾಗಿ ಭೂಮಿ ಮೇಲೆ ಜೀವಿಸೋಕೆ ಎದ್ದು ಬರುವವರೂ ಸರದಿ ಪ್ರಕಾರನೇ ಬರ್ತಾರೆ ಅಂತ ನಾವು ಹೇಳಬಹುದು.—1 ಕೊರಿಂ. 14:33; 15:23.

c ಇದು ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಅನ್ನೋ ಪುಸ್ತಕದ 17ನೇ ಅಧ್ಯಾಯ ಮತ್ತು ಜುಲೈ 1, 1987ರ ಕಾವಲಿನಬುರುಜುವಿನ ಪುಟ 21-25ರಲ್ಲಿರೋ (ಇಂಗ್ಲಿಷ್‌) ಮಾಹಿತಿಗೆ ಸಿಕ್ಕಿರೋ ಹೊಸ ತಿಳುವಳಿಕೆಯಾಗಿದೆ.

d ಆದ್ರೆ ಅಪೊಸ್ತಲರ ಕಾರ್ಯ 24:15ರಲ್ಲಿ “ನೀತಿವಂತರು” ಮತ್ತು “ಅನೀತಿವಂತರು,” ಅಂತ ಹೇಳಿರೋದು ಮತ್ತು ಯೋಹಾನ 5:29ರಲ್ಲಿ “ಒಳ್ಳೇ ಕೆಲಸ ಮಾಡಿದವರು” ಮತ್ತು “ಕೆಟ್ಟ ಕೆಲಸ ಮಾಡ್ತಾ ಇದ್ದವರು” ಅಂತ ಹೇಳಿರೋದು, ಜನರು ತೀರಿಹೋಗೋ ಮುಂಚೆ ಹೇಗೆ ನಡೆದುಕೊಂಡರೋ ಅದರ ಬಗ್ಗೆ ಹೇಳ್ತಾ ಇದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ