ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಮೇ ಪು. 26-31
  • ಯೆಹೋವನ ಹೆಸ್ರು ನಿಮಗೆ ಎಷ್ಟು ಮುಖ್ಯ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಹೆಸ್ರು ನಿಮಗೆ ಎಷ್ಟು ಮುಖ್ಯ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅವ್ರನ್ನ ತನ್ನ (ಹೆಸ್ರಿನ) ಜನ್ರಾಗಿ ಆರಿಸ್ಕೊಂಡಿದ್ದಾನೆ
  • “ನೀವು ನನ್ನ ಸಾಕ್ಷಿಗಳು”
  • ನಮ್ಮೆಲ್ರಿಗೂ ಯೆಹೋವನ ಹೆಸ್ರು ಎಷ್ಟು ಮುಖ್ಯ?
  • ಯೆಹೋವನ ಹೆಸ್ರು ಯೇಸುಗೆ ಎಷ್ಟು ಮುಖ್ಯ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • “ಯೆಹೋವನ ಹೆಸ್ರನ್ನ ಕೊಂಡಾಡಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • “ನೀವು ಯಾರನ್ನ ಆರಾಧಿಸಬೇಕಂತ” ಇದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಮೇ ಪು. 26-31

ಅಧ್ಯಯನ ಲೇಖನ 23

ಗೀತೆ 12 ಅತ್ಯುನ್ನತ ದೇವ – ಯೆಹೋವ!

ಯೆಹೋವನ ಹೆಸ್ರು ನಿಮಗೆ ಎಷ್ಟು ಮುಖ್ಯ?

“ಯೆಹೋವ ಹೀಗೆ ಹೇಳ್ತಿದ್ದಾನೆ ‘ನೀವು ನನ್ನ ಸಾಕ್ಷಿಗಳು.’”—ಯೆಶಾ. 43:10.

ಈ ಲೇಖನದಲ್ಲಿ ಏನಿದೆ?

ಸೈತಾನ ಯೆಹೋವನ ಬಗ್ಗೆ ಹೇಳಿದ್ದೆಲ್ಲಾ ಸುಳ್ಳು, ಯೆಹೋವನ ಹೆಸ್ರು ಪವಿತ್ರವಾಗಿದೆ ಅಂತ ನಾವು ಹೇಗೆ ಸಾಬೀತು ಮಾಡಬಹುದು ಅಂತ ನೋಡೋಣ.

1-2. ಯೇಸುಗೆ ಬೇರೆಲ್ಲದಕ್ಕಿಂತ ಯೆಹೋವನ ಹೆಸ್ರೇ ಮುಖ್ಯವಾಗಿತ್ತು ಅಂತ ನಮಗೆ ಹೇಗೆ ಗೊತ್ತು?

ಯೇಸುಗೆ ಬೇರೆಲ್ಲದಕ್ಕಿಂತ ಯೆಹೋವನ ಹೆಸ್ರೇ ತುಂಬ ಮುಖ್ಯವಾಗಿತ್ತು. ‘ಯೆಹೋವ ಪವಿತ್ರನು’ ಅಂತ ತೋರಿಸೋಕೆ ಯೇಸು ತುಂಬ ಕಷ್ಟಪಟ್ಟನು. ನಾವು ಹಿಂದಿನ ಲೇಖನದಲ್ಲಿ ನೋಡಿದ ಹಾಗೆ, ಯೆಹೋವ ಮಾಡೋದೆಲ್ಲ ಸರಿ ಅಂತ ತೋರಿಸೋಕೆ ಯೇಸು ತನ್ನ ಪ್ರಾಣವನ್ನ ಕೊಡೋಕೂ ರೆಡಿ ಇದ್ದನು. (ಮಾರ್ಕ 14:36; ಇಬ್ರಿ. 10:7-9) ಅಷ್ಟೇ ಅಲ್ಲ, ತನ್ನ ಸಾವಿರ ವರ್ಷ ಆಳ್ವಿಕೆ ಆದ್ಮೇಲೆ ಯೇಸು ತನ್ನೆಲ್ಲ ಅಧಿಕಾರವನ್ನ ಯೆಹೋವನಿಗೆ ಒಪ್ಪಿಸೋ ಮೂಲಕ ಯೆಹೋವನ ಹೆಸ್ರಿಗೆ ಎಲ್ಲ ಮಹಿಮೆ ಕೊಡ್ತಾನೆ. (1 ಕೊರಿಂ. 15:26-28) ಯೆಹೋವ ದೇವ್ರಿಗೋಸ್ಕರ ಯೇಸು ಮಾಡಿರೋದನ್ನೆಲ್ಲಾ ನೋಡಿದ್ರೆ ಆತನು ಯೆಹೋವನನ್ನ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿದ್ದನು ಅಂತ ನಮಗೆ ಗೊತ್ತಾಗುತ್ತೆ.

2 ಯೇಸು ಭೂಮಿಗೆ ಬಂದಿದ್ದೇ ತನ್ನ ತಂದೆ ಯೆಹೋವನ ಬಗ್ಗೆ ಜನ್ರಿಗೆ ಕಲಿಸೋಕೆ. (ಯೋಹಾ. 5:43; 12:13) ಯೇಸು ತನ್ನ ಶಿಷ್ಯರಿಗೂ ಯೆಹೋವ ದೇವ್ರ ಬಗ್ಗೆ ಹೇಳ್ಕೊಟ್ಟನು. (ಯೋಹಾ. 17:6, 26) ಯೇಸು ಸತ್ಯನ ಸಾರಿದ್ದು, ಅದ್ಭುತಗಳನ್ನ ಮಾಡಿದ್ದೆಲ್ಲಾ ಯೆಹೋವ ದೇವ್ರ ಶಕ್ತಿಯಿಂದಾನೇ ಅಂತ ಜನ್ರೆಲ್ರಿಗೂ ಮನವರಿಕೆ ಮಾಡಿದನು. (ಯೋಹಾ. 10:25) ಅಷ್ಟೇ ಅಲ್ಲ, ಯೇಸು ತನ್ನ ಶಿಷ್ಯರ ಬಗ್ಗೆ ಯೆಹೋವನ ಹತ್ರ ಪ್ರಾರ್ಥನೆ ಮಾಡಬೇಕಾದ್ರೆ, ‘ಅಪ್ಪಾ ನೀನು ನನಗೆ ಕೊಟ್ಟಿರೋ ಆ ಹೆಸ್ರಿಗೆ ಕಳಂಕ ಬರಬಾರದು, ಇವರನ್ನ ಕಾಪಾಡು’ ಅಂತ ಹೇಳಿದನು. (ಯೋಹಾ. 17:11) ಇದನ್ನೆಲ್ಲಾ ನೋಡಿದ್ರೆ ಯೇಸು ಯಾವಾಗ್ಲೂ ಬಾಯಿತುಂಬ ಯೆಹೋವನ ಬಗ್ಗೆ ಮಾತಾಡ್ತಿದ್ದನು ಅಂತ ನಮಗೆ ಗೊತ್ತಾಗುತ್ತೆ. ಹಾಗಂದ್ಮೇಲೆ ಕ್ರೈಸ್ತರು ಅಂತ ಹೇಳ್ಕೊಳ್ಳೋರು ಕೂಡ ಯೆಹೋವನ ಹೆಸ್ರನ್ನ ಬಳಸಬೇಕಲ್ವಾ? ಅವರು ಆ ಹೆಸ್ರೇ ಬಳಸಿಲ್ಲ ಅಂದ್ರೆ ಕ್ರೈಸ್ತರು ಅಂತ ಹೇಗೆ ಹೇಳ್ಕೊಳೋಕೆ ಆಗುತ್ತೆ?

3. ಈ ಲೇಖನದಲ್ಲಿ ನಾವೇನು ಕಲಿತೀವಿ?

3 ನಾವು ನಿಜ ಕ್ರೈಸ್ತರಾಗಿರೋದ್ರಿಂದ ಯೇಸು ತರಾನೇ ಯೆಹೋವನ ಹೆಸ್ರನ್ನ ಪ್ರೀತಿಸ್ತಿವಿ, ಅದಕ್ಕೆ ಗೌರವ ಕೊಡ್ತಿವಿ. (1 ಪೇತ್ರ 2:21) ಈ ಲೇಖನದಲ್ಲಿ, ಯೆಹೋವ ತನ್ನ ಹೆಸ್ರನ್ನ ‘ದೇವರ ಆಳ್ವಿಕೆಯ ಸಿಹಿಸುದ್ದಿ’ ಸಾರೋರಿಗೆ ಯಾಕೆ ಕೊಟ್ಟಿದ್ದಾನೆ ಅಂತ ನೋಡೋಣ. (ಮತ್ತಾ. 24:14) ಅದ್ರ ಜೊತೇಲಿ ಯೆಹೋವನ ಹೆಸ್ರು ನಮ್ಮೆಲ್ರಿಗೂ ಎಷ್ಟು ಮುಖ್ಯವಾಗಿರಬೇಕು ಅಂತಾನೂ ಕಲಿಯೋಣ.

ಅವ್ರನ್ನ ತನ್ನ (ಹೆಸ್ರಿನ) ಜನ್ರಾಗಿ ಆರಿಸ್ಕೊಂಡಿದ್ದಾನೆ

4. (ಎ) ಯೇಸು ಸ್ವರ್ಗಕ್ಕೆ ಹೋಗೋ ಮುಂಚೆ ತನ್ನ ಶಿಷ್ಯರಿಗೆ ಯಾವ ಕೆಲಸ ಕೊಟ್ಟನು? (ಬಿ) ಆ ಕೆಲಸದ ಬಗ್ಗೆ ಯೋಚ್ನೆ ಮಾಡಿದ್ರೆ ನಮಗೆ ಯಾವ ಪ್ರಶ್ನೆ ಬರುತ್ತೆ?

4 ಯೇಸು ಸ್ವರ್ಗಕ್ಕೆ ಹೋಗೋ ಸ್ವಲ್ಪ ಮುಂಚೆ ತನ್ನ ಶಿಷ್ಯರ ಹತ್ರ, “ಪವಿತ್ರಶಕ್ತಿ ನಿಮ್ಮ ಮೇಲೆ ಬಂದಾಗ ನಿಮಗೆ ಬಲ ಸಿಗುತ್ತೆ. ಆಗ ನೀವು ಯೆರೂಸಲೇಮ್‌, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂದನು. (ಅ. ಕಾ. 1:8) ಅದ್ರರ್ಥ ಯೇಸುವಿನ ಶಿಷ್ಯರು ಬರೀ ಇಸ್ರಾಯೇಲಲ್ಲಿ ಮಾತ್ರ ಅಲ್ಲ ಬೇರೆ ದೇಶಗಳಲ್ಲೂ ಸಿಹಿಸುದ್ದಿ ಸಾರ್ತಾರೆ ಅಂತ. ಹೀಗೆ ಬೇರೆ ದೇಶಗಳವರು ಸಹ ಯೇಸುವಿನ ಶಿಷ್ಯರಾಗೋ ಅವಕಾಶ ಇತ್ತು. (ಮತ್ತಾ. 28:19, 20) ಆದ್ರೆ ನೀವು ಆ ವಚನವನ್ನ ಸರಿಯಾಗಿ ನೋಡಿದ್ರೆ ಅಲ್ಲಿ ಯೇಸು, “ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂತ ಹೇಳಿದ್ದಾನೆ. ಹಾಗಾದ್ರೆ ಯೇಸುವಿನ ಶಿಷ್ಯರಾಗೋರು ಬರೀ ಯೇಸು ಬಗ್ಗೆ ಸಿಹಿಸುದ್ದಿ ಸಾರಿದ್ರೆ ಸಾಕಾಗ್ತಿತ್ತಾ ಅಥವಾ ಯೆಹೋವ ದೇವ್ರ ಹೆಸ್ರನ್ನ ತಿಳ್ಕೊಂಡು ಆತನ ಬಗ್ಗೆನೂ ಸಿಹಿಸುದ್ದಿ ಸಾರಬೇಕಿತ್ತಾ? ಅಪೊಸ್ತಲರ ಕಾರ್ಯ 15ನೇ ಅಧ್ಯಾಯದಲ್ಲಿ ಏನೆಲ್ಲಾ ಆಯ್ತು ಅಂತ ನೋಡಿದ್ರೆ ಈ ಪ್ರಶ್ನೆಗೆ ಉತ್ರ ಸಿಗುತ್ತೆ.

5. ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರು ‘ಎಲ್ಲಾ ಜನರು ಯೆಹೋವನ ಹೆಸ್ರನ್ನ ತಿಳ್ಕೊಬೇಕು’ ಅಂತ ಹೇಗೆ ತೋರಿಸ್ಕೊಟ್ರು? (ಚಿತ್ರ ನೋಡಿ.)

5 ಕ್ರಿಸ್ತಶಕ 49ರಲ್ಲಿ ಅಪೊಸ್ತಲರು ಮತ್ತು ಕೆಲವು ಹಿರಿಯರು ಯೆರೂಸಲೇಮ್‌ನಲ್ಲಿ ಸೇರಿ ಬಂದ್ರು. ಆಗ ಅವರು ಯೆಹೂದ್ಯರಲ್ಲದ ಜನ ಕ್ರೈಸ್ತರಾಗೋಕೆ ಸುನ್ನತಿ ಮಾಡಿಸ್ಕೊಬೇಕಾ ಅನ್ನೋ ವಿಷ್ಯದ ಬಗ್ಗೆ ಮಾತಾಡ್ತಿದ್ರು. ಆ ಮೀಟಿಂಗ್‌ ಕೊನೇಲಿ ಯೇಸುವಿನ ಮಲತಮ್ಮನಾಗಿದ್ದ ಯಾಕೋಬ, “ಮೊದಲನೇ ಸಲ ದೇವರು ಅವ್ರ [ಯೆಹೂದ್ಯರಲ್ಲದವ್ರ] ಕಡೆ ಗಮನಕೊಟ್ಟು ಅವ್ರನ್ನ ತನ್ನ ಜನ್ರಾಗಿ ಅಥವಾ ‘ತನ್ನ ಹೆಸ್ರಿಗಾಗಿ’ ಆರಿಸ್ಕೊಂಡಿದ್ದಾನೆ. ಅದನ್ನೇ [ಪೇತ್ರ] ನಮಗೆ ಚೆನ್ನಾಗಿ ವಿವರಿಸಿದ” ಅಂತ ಹೇಳಿದ. ಯಾಕೋಬ ಇಲ್ಲಿ ಯಾರ ಹೆಸ್ರಿನ ಬಗ್ಗೆ ಮಾತಾಡ್ತಿದ್ದಾನೆ? ಯಾಕೋಬ ತನ್ನ ಮಾತನ್ನ ಮುಂದುವರೆಸ್ತಾ, ಪ್ರವಾದಿ ಆಮೋಸ ಬರೆದ ಮಾತನ್ನ ನೆನಪಿಸ್ತಾನೆ. ಅಲ್ಲಿ, ‘ಆಗ ಉಳಿದವರು, ಎಲ್ಲ ದೇಶಗಳಲ್ಲಿರೋ ಜನ್ರ ಜೊತೆ ಸೇರಿ ಯೆಹೋವನಾದ ನನ್ನ ಸೇವೆಮಾಡ್ತಾರೆ. ಇದನ್ನೆಲ್ಲ ಮಾಡ್ತಿರೋ ಯೆಹೋವ ದೇವ್ರ ಹೆಸ್ರನ್ನ [ಯೆಹೋವನ] ಜನ ಹಾಡಿಹೊಗಳ್ತಾರೆ’ ಅಂತಿದೆ. (ಅ. ಕಾ. 15:14-18. ಪಾದಟಿಪ್ಪಣಿ) ಇದನ್ನೆಲ್ಲ ನೋಡಿದ್ರೆ ನಮಗೇನು ಗೊತ್ತಾಗುತ್ತೆ? ಇಲ್ಲಿ ಯಾಕೋಬ ಮಾತಾಡಿದ್ದು ಯೆಹೋವನ ಹೆಸ್ರಿನ ಬಗ್ಗೆ. ಹೊಸ ಶಿಷ್ಯರು ಯೆಹೋವನ ಹೆಸ್ರನ್ನ ಬರೀ ತಿಳ್ಕೊಳ್ಳೋದಷ್ಟೇ ಅಲ್ಲ ಇನ್ನು ಮುಂದೆ ಅವ್ರನ್ನ ‘ಯೆಹೋವನ ಜನ’ ಅಂತ ಕರಿತಾರೆ. ಇನ್ಮುಂದೆ ಶಿಷ್ಯರು ದೇವ್ರ ಹೆಸ್ರನ್ನ ಜನ್ರಿಗೆ ತಿಳಿಸ್ತಾರೆ, ಜನ ಇವ್ರನ್ನ ಆ ಹೆಸರಿಂದಾನೇ ಗುರುತು ಹಿಡಿತಾರೆ ಅಂತ ಗೊತ್ತಾಗುತ್ತೆ.

ಕೆಲವು ಅಪೊಸ್ತಲರು ಮತ್ತು ಹಿರಿಯ ಪುರುಷರ ಹತ್ರ ಯಾಕೋಬ ಯೆರೂಸಲೇಮಿನಲ್ಲಿ ಮಾತಾಡ್ತಾ ಇದ್ದಾನೆ. ಅವನು ಮಾತಾಡುವಾಗ ಇಬ್ರು ಸಹೋದರರು ಸುರುಳಿಯನ್ನ ತೆರೆದಿದ್ದಾರೆ.

ಕ್ರೈಸ್ತರು ದೇವ್ರ ಹೆಸ್ರಿಗಾಗಿರೋ ಜನ ಅಂತ 1ನೇ ಶತಮಾನದಲ್ಲಿದ್ದ ಆಡಳಿತ ಮಂಡಲಿ ಒಂದು ಕೂಟದಲ್ಲಿ ಅರ್ಥ ಮಾಡ್ಕೊಳ್ತು (ಪ್ಯಾರ 5 ನೋಡಿ)


6-7. (ಎ) ಯೇಸು ಭೂಮಿಗೆ ಬರೋಕೆ ಒಂದು ಕಾರಣ ಏನು? (ಬಿ) ಇನ್ನೊಂದು ಮುಖ್ಯ ಕಾರಣ ಏನು?

6 ಯೇಸುವಿನ ಹೆಸ್ರಿನ ಅರ್ಥ “ಯೆಹೋವ ರಕ್ಷಣೆ ಆಗಿದ್ದಾನೆ” ಅಂತ. ಯಾರೆಲ್ಲ ಯೇಸುವಿನಲ್ಲಿ ಮತ್ತು ಯೆಹೋವನಲ್ಲಿ ನಂಬಿಕೆ ಇಡ್ತಾರೋ ಅವ್ರನ್ನ ಕಾಪಾಡೋಕೆ ಯೆಹೋವ ಯೇಸುನ ಕಳುಹಿಸಿದನು. ಯೇಸು ಭೂಮಿಗೆ ಬಂದಿದ್ದೇ ಮನುಷ್ಯರಿಗೋಸ್ಕರ ತನ್ನ ಜೀವಾನ ಕೊಡೋಕೆ. (ಮತ್ತಾ. 20:28) ಈ ತರ ಯೇಸು ತನ್ನ ಜೀವಾನ ಕೊಡೋ ಮೂಲಕ ನಮ್ಮೆಲ್ರ ಪಾಪವನ್ನ ಅಳಿಸಿ ಹಾಕಿ ಶಾಶ್ವತ ಜೀವ ಸಿಗೋ ಹಾಗೆ ಮಾಡಿದನು.—ಯೋಹಾ. 3:16.

7 ಮನುಷ್ಯರನ್ನ ಕಾಪಾಡೋಕೆ ಯೇಸು ಯಾಕೆ ಭೂಮಿಗೆ ಬರಬೇಕಾಯ್ತು? ಏದೆನ್‌ ತೋಟದಲ್ಲಿ ಏನಾಯ್ತು ಅಂತ ನೆನಪಿಸ್ಕೊಳ್ಳಿ. ಆದಾಮ ಹವ್ವ ಯೆಹೋವನ ಮಾತು ಕೇಳಲಿಲ್ಲ. ಹಾಗಾಗಿ ಶಾಶ್ವತವಾಗಿ ಜೀವನ ಮಾಡೋ ಅವಕಾಶ ಮನುಷ್ಯರ ಕೈ ತಪ್ಪಿ ಹೋಯ್ತು. (ಆದಿ. 3:6, 24) ಅದಕ್ಕೆ ಯೇಸು ಮನುಷ್ಯರನ್ನ ಕಾಪಾಡೋಕೆ ಈ ಭೂಮಿಗೆ ಬಂದನು. ಆದ್ರೆ ಯೇಸು ಭೂಮಿಗೆ ಬಂದಿದ್ದು ಬರೀ ಇದೊಂದೇ ಕೆಲಸಕ್ಕಲ್ಲ. ಇದಕ್ಕಿಂತ ಮುಖ್ಯವಾಗಿ ಇನ್ನೊಂದು ಕಾರಣ ಇತ್ತು. ಅದೇನಂದ್ರೆ, ಯೆಹೋವನ ಮೇಲೆ ಇರೋ ಆರೋಪಗಳೆಲ್ಲ ಸುಳ್ಳು ಅಂತ ಸಾಬೀತು ಮಾಡೋದು. (ಆದಿ. 3:4, 5) ಯೆಹೋವನ ಹೆಸ್ರು ಪವಿತ್ರ ಆದ್ರೆ ಮಾತ್ರನೇ ಮನುಷ್ಯರಿಗೆ ಶಾಶ್ವತ ಜೀವ ಸಿಗುತ್ತೆ. ಯೆಹೋವನ ಮೇಲಿರೋ ಆರೋಪ ಎಲ್ಲಾ ಸುಳ್ಳು ಅಂತ ಯೇಸುಗಿಂತ ಚೆನ್ನಾಗಿ ಬೇರೆ ಯಾರು ಸಾಬೀತು ಮಾಡೋಕಾಗಲ್ಲ. ಯಾಕಂದ್ರೆ ಯೇಸು ಯೆಹೋವನ ಪ್ರತಿನಿಧಿಯಾಗಿದ್ದ ಮತ್ತೆ ಯೆಹೋವ ಹೇಳೋದನ್ನೆಲ್ಲಾ ಮಾಡ್ತಿದ್ದನು.

ಕ್ರೈಸ್ತರು ಅಂತ ಹೇಳ್ಕೊಳ್ಳೋರು ಯೆಹೋವನ ಹೆಸ್ರನ್ನ ಬಳಸಬೇಕಲ್ವಾ? ಅವರು ಆ ಹೆಸ್ರೇ ಬಳಸಿಲ್ಲ ಅಂದ್ರೆ ಕ್ರೈಸ್ತರು ಅಂತ ಹೇಗೆ ಹೇಳ್ಕೊಳೋಕೆ ಆಗುತ್ತೆ?

8. ಯೇಸುನ ನಂಬೋ ಪ್ರತಿಯೊಬ್ರು ಏನನ್ನ ಒಪ್ಕೊಬೇಕಿತ್ತು?

8 ಯೇಸುವಿನ ಎಲ್ಲಾ ಶಿಷ್ಯರು ಅಂದ್ರೆ ಅವರು ಯೆಹೂದ್ಯರಾಗಿರಲಿ, ಯೆಹೂದ್ಯರಲ್ಲದ ಜನರಾಗಿರಲಿ, ರಕ್ಷಣೆ ಯೇಸುವಿನ ತಂದೆ ಯೆಹೋವನಿಂದ ಮಾತ್ರ ಬರತ್ತೆ ಅಂತ ಒಪ್ಕೊಬೇಕಿತ್ತು. (ಯೋಹಾ. 17:3) ಜೊತೆಗೆ ಅವ್ರೆಲ್ರೂ ಯೇಸು ತರಾನೇ ‘ನಾವು ಯೆಹೋವನ ಜನ’ ಅಂತ ಗುರುತಿಸ್ಕೊಬೇಕಿತ್ತು. ಇದ್ರ ಜೊತೇಲಿ ಅವ್ರೆಲ್ರೂ ಯೆಹೋವನ ಹೆಸ್ರು ಪವಿತ್ರವಾಗೋದು ಎಷ್ಟು ಮುಖ್ಯ ಅಂತಾ ಅರ್ಥ ಮಾಡ್ಕೊಬೇಕಿತ್ತು. ಯಾಕಂದ್ರೆ ಯೆಹೋವನ ಹೆಸ್ರು ಪವಿತ್ರವಾದ್ರೆ ಮಾತ್ರ ಇವ್ರಿಗೆ ರಕ್ಷಣೆ ಸಿಗುತ್ತೆ. (ಅ. ಕಾ. 2:21, 22) ಇದನ್ನೆಲ್ಲಾ ನೋಡಿದ್ರೆ ನಮಗೇನು ಗೊತ್ತಾಗುತ್ತೆ? ಯೇಸುವಿನ ನಂಬಿಗಸ್ತ ಶಿಷ್ಯರೆಲ್ರೂ ಯೆಹೋವನ ಬಗ್ಗೆನೂ ಕಲಿಬೇಕು, ಯೇಸು ಬಗ್ಗೆನೂ ಕಲಿಬೇಕು. ಅದಕ್ಕೆ ಯೇಸು ಯೋಹಾನ 17ನೇ ಅಧ್ಯಾಯದಲ್ಲಿ ಪ್ರಾರ್ಥನೆ ಮಾಡ್ತಾ, “ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ, ಇನ್ನೂ ಹೇಳ್ಕೊಡ್ತೀನಿ. ಯಾಕಂದ್ರೆ ನೀನು ನನ್ನನ್ನ ಪ್ರೀತಿಸಿದ ಹಾಗೆ ಇವ್ರೂ ಒಬ್ಬರನ್ನೊಬ್ರು ಪ್ರೀತಿಸಬೇಕು ಮತ್ತು ನಾನು ಇವ್ರ ಜೊತೆ ಆಪ್ತನಾಗಿ ಇರಬೇಕು” ಅಂತ ಹೇಳಿದನು.—ಯೋಹಾ. 17:26.

“ನೀವು ನನ್ನ ಸಾಕ್ಷಿಗಳು”

9. ಬೇರೆಲ್ಲದಕ್ಕಿಂತ ಯೆಹೋವನ ಹೆಸ್ರೇ ನಮಗೆ ಮುಖ್ಯ ಅಂತ ಹೇಗೆ ತೋರಿಸಬಹುದು?

9 ಯೇಸುವಿನ ಶಿಷ್ಯರಾಗಿರಬೇಕಂದ್ರೆ ನಾವು ಯೆಹೋವನ ಹೆಸ್ರನ್ನ ಪವಿತ್ರ ಮಾಡೋದ್ರ ಬಗ್ಗೆ ಯೋಚ್ನೆ ಮಾಡಲೇಬೇಕು ಅಂತ ಇಲ್ಲಿವರೆಗೂ ಕಲಿತ್ವಿ. (ಮತ್ತಾ. 6:9, 10) ಅಂದ್ರೆ ನಾವೆಲ್ರೂ ಬೇರೆಲ್ಲದಕ್ಕಿಂತ ಹೆಚ್ಚಾಗಿ ಯೆಹೋವನ ಹೆಸ್ರಿಗೆ ಗೌರವ ಕೊಡಬೇಕು. ಇದನ್ನ ಬರೀ ಬಾಯಿ ಮಾತಲ್ಲಿ ಹೇಳೋದಲ್ಲ ನಮ್ಮ ನಡೆ ನುಡಿಯಲ್ಲಿ ತೋರಿಸಬೇಕು. ಈಗ ನಾವು, ಯೆಹೋವನ ಹೆಸ್ರನ್ನ ಪವಿತ್ರ ಮಾಡೋಕೆ ಇನ್ನೂ ಏನು ಮಾಡಬಹುದು ಮತ್ತು ಸೈತಾನ ಯೆಹೋವನ ಮೇಲೆ ಹಾಕಿರೋ ಆರೋಪ ಸುಳ್ಳು ಅಂತ ಸಾಬೀತು ಮಾಡೋಕೆ ಏನು ಮಾಡಬಹುದು ಅಂತ ಕಲಿಯೋಣ.

10. ಯೆಶಾಯ 42ರಿಂದ 44ನೇ ಅಧ್ಯಾಯಗಳಲ್ಲಿ ಯಾವ ವಾದ ನಡೀತಿದೆ? (ಯೆಶಾಯ 43:9; 44:7-9) (ಚಿತ್ರ ನೋಡಿ.)

10 ಯೆಶಾಯ 42ರಿಂದ 44ನೇ ಅಧ್ಯಾಯಗಳಲ್ಲಿ ಯೆಹೋವನ ಹೆಸ್ರನ್ನ ಪವಿತ್ರ ಮಾಡೋಕೆ ನಾವೆಲ್ಲಾ ಏನು ಮಾಡಬಹುದು ಅಂತಿದೆ. ಆ ಅಧ್ಯಾಯಗಳಲ್ಲಿ ಕೋರ್ಟ್‌ ಅಲ್ಲಿ ನಡೆಯೋ ಕೇಸ್‌ ತರ ‘ನಿಜವಾದ ದೇವರು ಯಾರು?’ ಅನ್ನೋ ವಿಷ್ಯದ ಬಗ್ಗೆ ವಾದ ನಡಿತೀದೆ. ಯೆಹೋವ ಯಾರೆಲ್ಲಾ ತನ್ನನ್ನ ಆರಾಧಿಸಲ್ವೋ ಅವ್ರಿಗೆ, ‘ನೀವು ಆರಾಧನೆ ಮಾಡ್ತಿರೋರೇ ನಿಜವಾದ ದೇವರು ಅಂತ ಸಾಬೀತು ಮಾಡಿ. ನಿಮ್ಮ ಕಡೆಯವರು ಯಾರಾದ್ರೂ ಇದ್ರೆ ಸಾಕ್ಷಿ ಹೇಳೋಕೆ ಕರ್ಕೊಂಡು ಬನ್ನಿ’ ಅಂತ ಕರಿತಿದ್ದಾನೆ. ‘ನೀವು ಸತ್ಯದೇವರಾಗಿದ್ರೆ ಆಧಾರ ಕೊಡಿ’ ಅಂತ ಹೇಳ್ತಿದಾನೆ. ಆದ್ರೆ ಆ ದೇವರುಗಳ ಪರವಾಗಿ ಮುಂದೆ ಬಂದು ಮಾತಾಡೋರು, ಆಧಾರ ಕೊಡೋರು ಒಬ್ರೂ ಇಲ್ಲ.—ಯೆಶಾಯ 43:9; 44:7-9 ಓದಿ.

ಚಿತ್ರ: ಭೂಮಿಯ ಎಲ್ಲ ಕಡೆ ಇರೋ ಸಹೋದರರು ಯೆಹೋವನ ಹೆಸ್ರನ್ನ ಪವಿತ್ರ ಮಾಡೋ ಕೆಲ್ಸ ಮಾಡ್ತಿದ್ದಾರೆ. ದೇವದೂತರು ಹಾರಾಡ್ತಾ ಇದಾರೆ. 1. ಒಂದು ದಂಪತಿ ತಳ್ಳುಬಂಡಿ ಸಾಕ್ಷಿಕಾರ್ಯ ಮಾಡ್ತಿದ್ದಾರೆ. 2.  ಒಬ್ಬ ಸಾಕ್ಷಿ ಹುಡುಗಿ ತನ್ನ ಕ್ಲಾಸ್‌ಮೇಟ್‌ಗೆ jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡ್ತಿದ್ದಾಳೆ. 3. ಪ್ರಯಾಣ ಮಾಡುವಾಗ ನಮ್ಮ ಸಹೋದರ ಸಾಕ್ಷಿ ನೀಡ್ತಿದ್ದಾನೆ. 4. ಮುಸುಕು ಹಾಕಿಕೊಂಡಿರೋ ಪೊಲೀಸರು ನಮ್ಮ ಸಹೋದರನಿಗೆ ಬೇಡಿ ಹಾಕಿ ಕರ್ಕೊಂಡು ಹೋಗ್ತಿದ್ದಾರೆ. 5. ಆಸ್ಪತ್ರೆಯ ಹಾಸಿಗೆ ಮೇಲಿರೋ ನಮ್ಮ ಸಹೋದರಿ ತಾನು ಯಾಕೆ ರಕ್ತ ತಗೊಳ್ಳಲ್ಲ ಅಂತ ಡಾಕ್ಟರ್‌ಗೆ ವಿವರಿಸ್ತಿದ್ದಾರೆ.

ನಮ್ಮ ಮಾತಲ್ಲಿ, ನಡತೇಲಿ ಹೀಗೆ ಪ್ರತಿಯೊಂದ್ರಲ್ಲೂ ಯೆಹೋವನೇ ಸತ್ಯ ದೇವರು ಅಂತ ನಾವು ತೋರಿಸ್ಕೊಡ್ತೇವೆ (ಪ್ಯಾರ 10-11 ನೋಡಿ)


11. ಯೆಶಾಯ 43:10-12ರಲ್ಲಿ ಯೆಹೋವನು ತನ್ನ ಜನ್ರಿಗೆ ಏನಂತ ಹೇಳ್ತಿದ್ದಾನೆ?

11 ಯೆಶಾಯ 43:10-12 ಓದಿ. “ನೀವು ನನ್ನ ಸಾಕ್ಷಿಗಳು. . . . ನಾನು ನಿಮ್ಮ ದೇವರು” ಅಂತ ಯೆಹೋವ ಹೇಳಿದ್ದಾನೆ. ಅಷ್ಟೇ ಅಲ್ಲ, “ನನ್ನನ್ನ ಬಿಟ್ಟು ಬೇರೆ ದೇವರಿದ್ದಾನಾ?” ಅನ್ನೋ ಒಂದು ಪ್ರಶ್ನೆನೂ ಕೇಳಿದ್ದಾನೆ. (ಯೆಶಾ. 44:8) ಈ ಪ್ರಶ್ನೆಗೆ ನಾವೆಲ್ರೂ ಉತ್ರ ಕೊಡಬೇಕು. ನಾವು ನಮ್ಮ ಮಾತು ಮತ್ತು ನಮ್ಮ ನಡತೆ ಮೂಲಕ ಯೆಹೋವ ಮಾತ್ರ ಸತ್ಯದೇವರು ಅಂತ ಸಾಬೀತು ಮಾಡ್ಬೇಕು. ಯೆಹೋವನ ಹೆಸ್ರಿಗಿರೋ ಗೌರವ ಮತ್ತು ಮಹಿಮೆ ಬೇರೆ ಯಾವ ಹೆಸ್ರಿಗೂ ಇಲ್ಲ. ಸೈತಾನ ನಮಗೆ ಎಷ್ಟೇ ಕಷ್ಟ ವಿರೋಧಗಳನ್ನ ತಂದ್ರೂ ನಾವು ನಮ್ಮ ಇಡೀ ಜೀವನ ಯೆಹೋವನಿಗೆ ನಿಯತ್ತಾಗಿರೋ ಇರೋ ಮೂಲಕ ಯೆಹೋವನನ್ನ ತುಂಬಾ ಪ್ರೀತಿಸ್ತೀವಿ ಅಂತ ತೋರಿಸ್ಕೊಡಬಹುದು. ನಾವು ಈ ತರ ನಿಯತ್ತಾಗಿದ್ರೆ ಸೈತಾನ ಹೇಳಿರೋದೆಲ್ಲಾ ಸುಳ್ಳು ಅಂತ ಸಾಬೀತು ಮಾಡಬಹುದು ಹಾಗೂ ಯೆಹೋವನ ಹೆಸ್ರನ್ನ ಪವಿತ್ರ ಮಾಡಬಹುದು.

12. ಯೆಶಾಯ 40:3, 5ರಲ್ಲಿರೋ ಭವಿಷ್ಯವಾಣಿ ಹೇಗೆ ನೆರವೇರಿತು?

12 ನಾವು ಯೆಹೋವನ ಹೆಸ್ರಿಗೆ ಗೌರವ ಕೊಟ್ರೆ ಅಥವಾ ಮಹಿಮೆ ತಂದ್ರೆ ಯೇಸು ಕ್ರಿಸ್ತನನ್ನ ಅನುಕರಿಸಿದಂತೆ ಆಗುತ್ತೆ. ಯೆಶಾಯ ತನ್ನ ಭವಿಷ್ಯವಾಣಿಯಲ್ಲಿ ‘ಯೆಹೋವನ ಮಾರ್ಗ ಸಿದ್ಧಮಾಡೋ’ ಒಬ್ಬ ವ್ಯಕ್ತಿ ಬರ್ತಾನೆ ಅಂತ ಹೇಳಿದ್ದ. (ಯೆಶಾ. 40:3) ಈ ವ್ಯಕ್ತಿ ಯಾರು? ಇದು ಹೇಗೆ ನೆರವೇರಿತು? ದೀಕ್ಷಾಸ್ನಾನ ಕೊಡ್ತಿದ್ದ ಯೋಹಾನ ಯೇಸುವಿನ ಮಾರ್ಗನ ಸಿದ್ಧ ಮಾಡ್ದ. ಅದು ಒಂದರ್ಥದಲ್ಲಿ ಯೆಹೋವನ ಮಾರ್ಗನ ಸಿದ್ಧ ಮಾಡಿದಂತಿತ್ತು. ನಾವ್ಯಾಕೆ ಹೀಗೆ ಹೇಳಬಹುದು? ಯಾಕಂದ್ರೆ ಯೇಸು ಯೆಹೋವನ ಪರವಾಗಿ ಮತ್ತು ಯೆಹೋವನ ಹೆಸ್ರಲ್ಲಿ ಮಾತಾಡಿದನು. (ಮತ್ತಾ. 3:3; ಮಾರ್ಕ 1:2-4; ಲೂಕ 3:3-6) ಯೆಶಾಯ ಹೇಳಿದ ಆ ಭವಿಷ್ಯವಾಣಿಯಲ್ಲಿ “ಯೆಹೋವನ ಮಹಿಮೆ ಎಲ್ರಿಗೂ ಗೊತ್ತಾಗುತ್ತೆ” ಅಂತಾನೂ ಇದೆ. (ಯೆಶಾ. 40:5) ಇದು ಹೇಗೆ ನೆರವೇರಿತು? ಯೇಸು ಭೂಮಿಗೆ ಬಂದಾಗ ಪ್ರತಿಯೊಂದು ಸಂದರ್ಭದಲ್ಲೂ ಯೆಹೋವ ದೇವ್ರ ತರಾನೇ ನಡ್ಕೊಂಡನು. ಹಾಗಾಗಿ ಒಂದರ್ಥದಲ್ಲಿ ಯೆಹೋವನೇ ಭೂಮಿಗೆ ಬಂದಿರೋ ತರ ಇತ್ತು. ಯೇಸು ನಡ್ಕೊಂಡಿದ್ದನ್ನ ನೋಡಿದಾಗ ಯೆಹೋವನ ಬಗ್ಗೆ ಜನ್ರಿಗೆ ಚೆನ್ನಾಗಿ ಅರ್ಥ ಆಯ್ತು. ಹೀಗೆ ಯೆಹೋವನ ಮಹಿಮೆ ಎಲ್ರಿಗೂ ಗೊತ್ತಾಯ್ತು.—ಯೋಹಾ. 12:45.

13. ನಾವು ಯೇಸುನ ಹೇಗೆ ಅನುಕರಿಸಬಹುದು?

13 ಯೇಸು ತರಾನೇ ನಾವೂ ಯೆಹೋವನಿಗೆ ಸಾಕ್ಷಿಗಳು. ಆದ್ರೆ ನಾವು ಯೆಹೋವನಿಗೆ ಒಳ್ಳೆ ಸಾಕ್ಷಿಯಾಗಿ ಇರಬೇಕಂದ್ರೆ ನಮಗೆ ಸಿಗೋ ಎಲ್ಲಾ ಜನ್ರಿಗೂ ಆತನು ಮಾಡಿರೋ ಒಳ್ಳೆ ಕೆಲಸಗಳ ಬಗ್ಗೆ ಚೆನ್ನಾಗಿ ಸಾರಬೇಕು. ಇದನ್ನ ಚೆನ್ನಾಗಿ ಮಾಡಬೇಕಂದ್ರೆ ಯೆಹೋವನ ಹೆಸ್ರನ್ನ ಪವಿತ್ರ ಮಾಡೋಕೆ ಯೇಸು ಏನೆಲ್ಲಾ ಮಾಡಿದ್ದಾನೆ ಅಂತ ಜನ್ರಿಗೆ ಅರ್ಥ ಮಾಡಿಸಬೇಕು. (ಅ. ಕಾ. 1:8) ಯಾಕಂದ್ರೆ ಯೇಸು ಅಷ್ಟು ಚೆನ್ನಾಗಿ ಜನ್ರಿಗೆ ಯೆಹೋವನ ಬಗ್ಗೆ ಬೇರೆ ಯಾರೂ ಕಲಿಸಿಲ್ಲ. (ಪ್ರಕ. 1:5) ಅದಕ್ಕೆ ನಾವೆಲ್ರೂ ಯೇಸುನ ಚೆನ್ನಾಗಿ ಅನುಕರಿಸಬೇಕು. ಈಗ ಯೆಹೋವನ ಹೆಸ್ರು ನಮ್ಮೆಲ್ರಿಗೂ ಎಷ್ಟು ಮುಖ್ಯ ಆಗಿರಬೇಕು ಅಂತ ನೋಡೋಣ.

ನಮ್ಮೆಲ್ರಿಗೂ ಯೆಹೋವನ ಹೆಸ್ರು ಎಷ್ಟು ಮುಖ್ಯ?

14. ಕೀರ್ತನೆ 105:3ರಲ್ಲಿ ಹೇಳಿರೋ ತರ ಯೆಹೋವನ ಹೆಸ್ರನ್ನ ನೋಡಿದಾಗ ನಮಗೆ ಹೇಗನಿಸುತ್ತೆ?

14 ಯೆಹೋವನ ಹೆಸ್ರು ಹೇಳೋಕೆ ನಾವು ಹೆಮ್ಮೆ ಪಡ್ತೀವಿ. (ಕೀರ್ತನೆ 105:3 ಓದಿ.) ನಾವು ಯೆಹೋವನ ಹೆಸ್ರು ಹೇಳೋಕೆ ಹೆಮ್ಮೆಪಟ್ಟಾಗ ಯೆಹೋವ ನಮ್ಮನ್ನ ನೋಡಿ ತುಂಬಾ ಖುಷಿ ಪಡ್ತಾನೆ. (ಯೆರೆ. 9:23, 24; 1 ಕೊರಿಂ. 1:31; 2 ಕೊರಿಂ. 10:17) ‘ಯೆಹೋವನ ಬಗ್ಗೆ ಹೆಮ್ಮೆಪಡೋದು’ ಅಂದ್ರೇನು? ಯೆಹೋವನ ಹೆಸ್ರಿಗೆ ಗೌರವ, ಮಹಿಮೆ ಕೊಡೋ ಅವಕಾಶ ನಮಗೆ ಸಿಕ್ಕಿರೋ ದೊಡ್ಡ ಸುಯೋಗ ಅಂತ ಖುಷಿಪಡೋದೆ ಆಗಿದೆ. ನಾವು ನಮ್ಮ ಜೊತೆ ಕೆಲಸ ಮಾಡೋರಿಗೆ, ನಮ್ಮ ಜೊತೆ ಓದೋರಿಗೆ, ಅಕ್ಕಪಕ್ಕದ ಮನೆಯವ್ರಿಗೆ ಹೀಗೆ ಎಲ್ರ ಹತ್ರ ‘ನಾವು ಯೆಹೋವನ ಸಾಕ್ಷಿಗಳು’ ಅಂತ ಧೈರ್ಯದಿಂದ ಹೇಳಬೇಕು. ಆ ತರ ಹೇಳೋಕೆ ಯಾವತ್ತೂ ನಾಚಿಕೆ ಪಡಬಾರದು. ಆದ್ರೆ ನಾವು ಯೆಹೋವ ದೇವ್ರ ಬಗ್ಗೆ ಯಾರ ಹತ್ರನೂ ಮಾತಾಡಬಾರದು ಅಂತ ಸೈತಾನ ಬಯಸ್ತಾನೆ. (ಯೆರೆ. 11:21; ಪ್ರಕ. 12:17) ಜನ್ರೆಲ್ರೂ ಯೆಹೋವನ ಹೆಸ್ರನ್ನ ಮರೆತು ಹೋಗಬೇಕು ಅಂತ ಸೈತಾನ ಮತ್ತು ಸೈತಾನನ ಸುಳ್ಳು ಹಬ್ಬಿಸೋ ಜನ ಇಷ್ಟಪಡ್ತಾರೆ. (ಯೆರೆ. 23:26, 27) ಆದ್ರೆ ಯೆಹೋವನ ಹೆಸ್ರಿನ ಮೇಲೆ ನಮಗಿರೋ ಪ್ರೀತಿ “ಇಡೀ ದಿನ” ಆತನ ಬಗ್ಗೆ ಮಾತಾಡೋಕೆ, ಹಾಡಿ ಹೊಗಳೋಕೆ ನಮ್ಮನ್ನ ಪ್ರೋತ್ಸಾಹಿಸುತ್ತೆ.—ಕೀರ್ತ. 5:11; 89:16.

15. ಯೆಹೋವನ ಹೆಸ್ರಲ್ಲಿ ಪ್ರಾರ್ಥನೆ ಮಾಡೋದ್ರಲ್ಲಿ ಏನೆಲ್ಲ ಸೇರಿದೆ?

15 ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸ್ತೀವಿ. (ಯೋವೇ. 2:32; ರೋಮ. 10:13, 14) ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋದು ಅಂದ್ರೆ ಯೆಹೋವನ ಹೆಸ್ರನ್ನ ತಿಳ್ಕೊಂಡು ಅದನ್ನ ಬಳಸೋದು. ಅದ್ರ ಜೊತೆಗೆ ಯೆಹೋವ ನಿಜವಾಗ್ಲೂ ಇದ್ದಾನೆ, ಆತನ ಮೇಲೆ ನಾವು ನಂಬಿಕೆ ಇಡಬಹುದು, ಆತನು ನಮಗೆ ಸಹಾಯ ಮಾಡ್ತಾನೆ, ನಮ್ಮನ್ನ ಸರಿ ದಾರಿಲಿ ನಡಿಸ್ತಾನೆ ಅಂತ ಭರವಸೆ ಇಡೋದು. (ಕೀರ್ತ. 20:7; 99:6; 116:4; 145:18) ಅದಷ್ಟೇ ಅಲ್ಲ, ಬೇರೆ ಜನ್ರಿಗೆ ಯೆಹೋವನ ಹೆಸ್ರು ಏನು, ಆತನಲ್ಲಿ ಯಾವೆಲ್ಲ ಒಳ್ಳೆ ಗುಣಗಳಿದೆ ಅಂತ ಕಲಿಸೋದು ಮತ್ತು ಅವರು ತಮ್ಮ ಜೀವನವನ್ನ ಬದಲಾಯಿಸ್ಕೊಂಡು ಆತನ ಜೊತೆ ಸ್ನೇಹ ಬೆಳೆಸ್ಕೊಳ್ಳೋಕೆ ಸಹಾಯ ಮಾಡೋದೂ ಸೇರಿದೆ.—ಯೆಶಾ. 12:4; ಅ. ಕಾ. 2:21, 38.

16. ಸೈತಾನ ಒಬ್ಬ ಸುಳ್ಳುಗಾರ ಅಂತ ನಾವು ಹೇಗೆ ಸಾಬೀತು ಮಾಡಬಹುದು?

16 ಯೆಹೋವನ ಹೆಸ್ರಿಗಾಗಿ ನಾವು ಕಷ್ಟಗಳನ್ನ ತಾಳ್ಕೊಳ್ತಿವಿ. (ಯಾಕೋ. 5:10, 11) ಕಷ್ಟ ಬಂದಾಗ್ಲೂ ನಾವು ಯೆಹೋವನಿಗೆ ನಿಯತ್ತಾಗಿದ್ರೆ ಸೈತಾನ ಸುಳ್ಳುಗಾರ ಅಂತ ಸಾಬೀತು ಮಾಡ್ತೀವಿ. ಯೋಬನ ದಿನಗಳಲ್ಲಿ ಸೈತಾನ ಯೆಹೋವನನ್ನ ಆರಾಧಿಸೋರ ಬಗ್ಗೆ ಹೇಳ್ತಾ, “ಮನುಷ್ಯ ತನ್ನ ಜೀವ ಹೋಗುತ್ತೆ ಅನ್ನುವಾಗ ಪ್ರಾಣ ಉಳಿಸ್ಕೊಳ್ಳೋಕೆ ತನ್ನ ಹತ್ರ ಇರೋದನ್ನೆಲ್ಲ ಕೊಟ್ಟುಬಿಡ್ತಾನೆ” ಅಂತ ಆರೋಪ ಹಾಕಿದ್ದಾನೆ. (ಯೋಬ 2:4) ‘ಯೆಹೋವನ ಜನ ಎಲ್ಲಾ ಚೆನ್ನಾಗಿದ್ದಾಗ ಮಾತ್ರ ಆತನನ್ನ ಆರಾಧಿಸ್ತಾರೆ. ಅದೇ ಒಂದ್ಸಲ ಕಷ್ಟ ಬರಲಿ, ಯೆಹೋವನನ್ನ ಬಿಟ್ಟು ಓಡಿ ಹೋಗ್ತಾರೆ’ ಅಂತ ಅವನು ಹೇಳಿದ್ದಾನೆ. ಆದ್ರೆ ಯೋಬ ನಿಯತ್ತಾಗಿರೋ ಮೂಲಕ ಸೈತಾನ ಹೇಳಿದ್ದೆಲ್ಲಾ ಸುಳ್ಳು ಅಂತ ಸಾಬೀತು ಮಾಡಿದ. ಅದೇ ತರ ನಾವೂ ಸೈತಾನ ನಮಗೆ ಎಷ್ಟೇ ಕಷ್ಟ ಸಮಸ್ಯೆ ತಂದ್ರು ಯಾವತ್ತೂ ಯೆಹೋವನಿಗೆ ದ್ರೋಹ ಮಾಡಲ್ಲ ಅಂತ ತೋರಿಸಿ ಕೊಡಬಹುದು. ನಾವು ಈ ತರ ಕಷ್ಟಗಳನ್ನ ತಾಳ್ಕೊಳ್ಳೋವಾಗ ಯೆಹೋವ ಖಂಡಿತ ನಮಗೆ ಸಹಾಯ ಮಾಡ್ತಾನೆ ಅಂತ ನಂಬಿಕೆ ಇಡಬಹುದು.—ಯೋಹಾ. 17:11.

17. ಯೆಹೋವನ ಹೆಸ್ರಿಗೆ ಮಹಿಮೆ ತರೋಕೆ ಬೇರೆ ಏನು ಕೂಡ ಮಾಡಬಹುದು? (1 ಪೇತ್ರ 2:12)

17 ಯೆಹೋವನ ಹೆಸ್ರಿಗೆ ನಾವು ಗೌರವ ಕೊಡ್ತೀವಿ. (ಜ್ಞಾನೋ. 30:9; ಯೆರೆ. 7:8-11) ‘ಯೆಹೋವನ ಸಾಕ್ಷಿಗಳು’ ಅನ್ನೋ ನಮ್ಮ ಹೆಸ್ರಲ್ಲೇ ಯೆಹೋವನ ಹೆಸ್ರಿದೆ. ನಾವು ಆತನನ್ನ ಪ್ರತಿನಿಧಿಸ್ತೀವಿ. ಹಾಗಾಗಿ, ನಾವು ಏನೇ ಮಾಡಿದ್ರೂ ಅದು ಯೆಹೋವ ದೇವ್ರಿಗೆ ಗೌರವ ತರುತ್ತೆ, ಇಲ್ಲಾಂದ್ರೆ ಯೆಹೋವನ ಹೆಸ್ರಿಗೆ ಅವಮಾನ ತರುತ್ತೆ. (1 ಪೇತ್ರ 2:12 ಓದಿ.) ಆದ್ರಿಂದಾನೇ ನಾವು ಯಾವಾಗ್ಲೂ ಯೆಹೋವನಿಗೆ ಗೌರವ ಮತ್ತು ಮಹಿಮೆ ಕೊಡೋಕೆ ನಮ್ಮ ಕೈಲಾಗೋದ್ದನ್ನೆಲ್ಲಾ ಮಾಡ್ತೀವಿ. ನಿಜ ನಮ್ಮಲ್ಲಿ ಕುಂದುಕೊರತೆಗಳಿದೆ, ಅಪರಿಪೂರ್ಣತೆ ಇದೆ. ಹಾಗಿದ್ರೂ ಯೆಹೋವನ ಹೆಸ್ರಿಗೆ ಅವಮಾನ ತರದೆ ಇರೋಕೆ ನಾವು ಸಂಪೂರ್ಣ ಪ್ರಯತ್ನ ಮಾಡ್ತೀವಿ.

18. ಯೆಹೋವನ ಹೆಸ್ರು ನಮಗೆ ತುಂಬ ಮುಖ್ಯ ಅಂತ ತೋರಿಸ್ಕೊಡೋ ಇನ್ನೊಂದು ವಿಧ ಯಾವುದು? (ಪಾದಟಿಪ್ಪಣಿ ನೋಡಿ.)

18 ನಾವು ನಮ್ಮ ಹೆಸ್ರಿಗಿಂತ ಯೆಹೋವನ ಹೆಸ್ರು ಮತ್ತು ಗೌರವದ ಬಗ್ಗೆನೇ ಜಾಸ್ತಿ ಯೋಚಿಸ್ತಿವಿ. (ಕೀರ್ತ. 138:2) ಯೆಹೋವನ ಮೇಲಿರೋ ಪ್ರೀತಿಯಿಂದಾಗಿ ನಾವು ಮಾಡೋ ಕೆಲವು ಕೆಲಸಗಳನ್ನ ನೋಡ್ದಾಗ ಜನ್ರಿಗೆ ಇಷ್ಟ ಆಗಲ್ಲ. ಆಗ ಅವರು ನಮಗೆ ಅವಮಾನ ಮಾಡಬಹುದು ನಮ್ಮ ಬಗ್ಗೆ ತಪ್ಪಾಗಿ ಮಾತಾಡಬಹುದು.a ಉದಾಹರಣೆಗೆ, ಯೇಸು ಸತ್ತಾಗ ಜನ ಅವನನ್ನ ಒಬ್ಬ ಕಳ್ಳನ ಹಾಗೆ, ಮೋಸಗಾರನ ಹಾಗೆ ನೋಡಿ ಅವನಿಗೆ ಅವಮಾನ ಮಾಡಿದ್ರು. ಆದ್ರೆ ಯೇಸು, ಯೆಹೋವನಿಗೆ ಮಹಿಮೆ ತರೋಕ್ಕೋಸ್ಕರ ಅವಮಾನ ಆದ್ರೂ ತನ್ನ ಪ್ರಾಣನ ತ್ಯಾಗ ಮಾಡೋಕೆ ಇಷ್ಟಪಟ್ಟನು. ಯೇಸು ‘ನನಗೆ ಅವಮಾನ ಆಯ್ತಲ್ಲ’ ಅಂತ ಚಿಂತೆ ಮಾಡಲಿಲ್ಲ. ‘ಜನ ನನ್ನ ಬಗ್ಗೆ ಏನ್‌ ಅಂದ್ಕೊತ್ತಾರೋ’ ಅಂತ ಕೊರಗಲಿಲ್ಲ. (ಇಬ್ರಿ. 12:2-4) ಯೆಹೋವನ ಇಷ್ಟ ಏನು ಅಂತ ಅರ್ಥ ಮಾಡ್ಕೊಂಡು ಅದನ್ನ ಮಾಡೋದ್ರ ಮೇಲೆ ಮಾತ್ರ ಗಮನ ಇಟ್ಟನು.—ಮತ್ತಾ. 26:39.

19. ಯೆಹೋವನ ಹೆಸ್ರಿನ ಬಗ್ಗೆ ನಿಮಗೆ ಹೇಗನಿಸುತ್ತೆ? ಯಾಕೆ?

19 ಯೆಹೋವ ಅನ್ನೋ ಹೆಸ್ರು ಹೇಳೋಕೆ ನಮಗೆ ಹೆಮ್ಮೆ ಆಗುತ್ತೆ. ‘ಯೆಹೋವನ ಸಾಕ್ಷಿಗಳು’ ಅಂತ ಕರೆಸ್ಕೊಳ್ಳೋದು ನಮಗೆ ಸಿಕ್ಕಿರೋ ಗೌರವ! ಹಾಗಾಗಿ ಯೆಹೋವನ ಹೆಸ್ರಿಂದಾಗಿ ನಮಗೆ ಏನೇ ಅವಮಾನ ಆಗ್ಲಿ ನಾವು ಅದ್ರ ಬಗ್ಗೆ ಬೇಜಾರ್‌ ಮಾಡ್ಕೊಳಲ್ಲ. ನಮಗೆ ನಮ್ಮ ಹೆಸ್ರಿಗಿಂತ, ನಮ್ಮ ಸ್ವಂತ ಗೌರವಕ್ಕಿಂತ ಯೆಹೋವನ ಹೆಸರೇ ಮುಖ್ಯ! ಹಾಗಾಗಿ ಸೈತಾನ ನಮಗೆ ಏನೇ ಕಷ್ಟ ಕೊಟ್ರು, ಎಷ್ಟೇ ನಿರುತ್ಸಾಹ ಮಾಡಿದ್ರು ನಾವಂತೂ ಯೆಹೋವನನ್ನ ಮಹಿಮೆ ಪಡಿಸೋದನ್ನ ನಿಲ್ಲಿಸೋದೇ ಇಲ್ಲ. ಯೇಸುನೂ ಹೀಗೆ ನಡ್ಕೊಂಡು ಬೇರೆಲ್ಲದಕ್ಕಿಂತ ತನಗೆ ಯೆಹೋವನ ಹೆಸರೇ ಮುಖ್ಯ ಅಂತ ತೋರಿಸ್ಕೊಟ್ಟ. ನಾವೂ ತೋರಿಸ್ಕೊಡೋಣ!

ನೀವೇನು ಹೇಳ್ತೀರಾ?

  • ನಿಜ ಕ್ರೈಸ್ತರಿಗೆ ಯೆಹೋವನ ಹೆಸ್ರು ಯಾಕೆ ಮುಖ್ಯ?

  • ಇವತ್ತು ಒಂದು ರೀತಿಲಿ ಯಾವ ಕೋರ್ಟ್‌ ಕೇಸ್‌ ನಡೀತಾ ಇದೆ?

  • ನಮಗೆ ಯೆಹೋವನ ಹೆಸ್ರೇ ಮುಖ್ಯ ಅಂತ ಹೇಗೆ ತೋರಿಸ್ಕೊಡಬಹುದು?

ಗೀತೆ 10 ಹರ್ಷದಿ ಹಾಡಿ ಕೊಂಡಾಡು

a ಯೋಬ ತನ್ನ ಮಕ್ಕಳನ್ನ, ಆಸ್ತಿಪಾಸ್ತಿನ ಕಳ್ಕೊಂಡಾಗ “ಪಾಪ ಮಾಡಲಿಲ್ಲ, ದೇವರು ಕೆಟ್ಟದು ಮಾಡಿದ್ದಾನೆ ಅಂತ ದೂರಲಿಲ್ಲ.” (ಯೋಬ 1:22; 2:10) ಆದ್ರೆ ಯಾವಾಗ ಅವನ ಸ್ನೇಹಿತರು ಬಂದು ‘ನೀನೇನೋ ತಪ್ಪು ಮಾಡಿದ್ದೀಯಾ’ ಅಂತ ಅವನ ಮೇಲೆ ಸುಳ್ಳಾರೋಪ ಹಾಕಿ ಅವನ ಹೆಸ್ರಿಗೆ ಅವಮಾನ ಮಾಡಿದ್ರೋ ಆಗ ಯೋಬನಿಗೆ ಸಹಿಸಲಿಕ್ಕೆ ಆಗ್ಲಿಲ್ಲ. ಆಗ ಅವನು ‘ಹಿಂದೆಮುಂದೆ ಯೋಚ್ನೆ ಮಾಡದೆ ಏನೇನೋ ಮಾತಾಡಿಬಿಟ್ಟ.’ ಅವನು ಯೆಹೋವನ ಹೆಸ್ರನ್ನ ಪವಿತ್ರ ಮಾಡೋದ್ರ ಬಗ್ಗೆ ಯೋಚ್ನೆ ಮಾಡೋ ಬದಲು ತನ್ನ ಹೆಸ್ರು ಮತ್ತು ಗೌರವ ಕಾಪಾಡ್ಕೊಳ್ಳೋದ್ರ ಬಗ್ಗೆ ಯೋಚ್ನೆ ಮಾಡಿಬಿಟ್ಟ.—ಯೋಬ 6:3; 13:4, 5; 32:2; 34:5.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ