ಅಧ್ಯಯನ ಲೇಖನ 35
ಗೀತೆ 114 ತಾಳ್ಮೆಯಿಂದಿರಿ!
ತಪ್ಪಾದ ಆಸೆಗಳ ವಿರುದ್ಧ ಹೋರಾಡಿ
“ಪಾಪ ನಿಮ್ಮ ದೇಹನ ರಾಜನ ತರ ಆಳೋಕೆ ಬಿಟ್ಟುಕೊಡಬೇಡಿ. ಸತ್ತುಹೋಗೋ ನಿಮ್ಮ ದೇಹದ ಆಸೆಗಳಿಗೆ ದಾಸರಾಗಿ ನಡಿಬೇಡಿ.”—ರೋಮ. 6:12.
ಈ ಲೇಖನದಲ್ಲಿ ಏನಿದೆ?
ತಪ್ಪಾದ ಆಸೆಗಳು ಬಂದಾಗ (1) ನಮಗೆ ಬೇಜಾರಾಗುತ್ತೆ ಮತ್ತು (2) ಕೆಲವೊಮ್ಮೆ ಅವಕ್ಕೆ ನಾವು ಸೋತು ಹೋಗ್ತೀವಿ. ಇವೆರಡೂ ಆಗಬಾರದು ಅಂದ್ರೆ ಏನು ಮಾಡಬೇಕು ಅಂತ ನೋಡೋಣ.
1. ನಾವೆಲ್ಲ ಯಾವುದ್ರ ವಿರುದ್ಧ ಹೋರಾಡ್ತಾ ಇದ್ದೀವಿ?
ಒಂದು ವಿಷ್ಯ ಮಾಡಿದ್ರೆ ಯೆಹೋವನಿಗೆ ನೋವಾಗುತ್ತೆ ಅಂತ ಗೊತ್ತಿದ್ರೂ ಅದನ್ನ ಮಾಡೋ ಆಸೆ ನಿಮಗೆ ಯಾವತ್ತಾದ್ರೂ ಬಂದಿದ್ಯಾ? ಒಂದುವೇಳೆ, ಆ ತರ ಆಗಿದ್ರೆ ಬೇಜಾರಾಗಬೇಡಿ. ‘ನನಗೆ ಮಾತ್ರನೇ ಯಾಕೆ ಈ ತರ ಅನಿಸ್ತಿದೆ’ ಅಂತ ಅಂದ್ಕೊಬೇಡಿ. ಇದ್ರ ಬಗ್ಗೆ ಬೈಬಲ್ “ಎಲ್ಲ ಜನ್ರಿಗೆ ಕಷ್ಟಗಳು ಬರೋ ಹಾಗೇ ನಿಮಗೂ ಕಷ್ಟ ಬಂದಿದೆ” ಅಂತ ಹೇಳುತ್ತೆ. (1 ಕೊರಿಂ. 10:13) ಅಂದ್ರೆ ನಿಮ್ಮ ತರಾನೇ ಬೇರೆ ಎಷ್ಟೋ ಜನರು ಇಂಥ ಆಸೆಗಳ ವಿರುದ್ಧ ಹೋರಾಡ್ತಿದ್ದಾರೆ. ಆದ್ರೆ ಆ ತಪ್ಪಾದ ಆಸೆಗಳ ವಿರುದ್ಧ ಹೋರಾಡಿ ಗೆಲ್ಲೋಕೆ ಯೆಹೋವ ನಿಮಗೆ ಸಹಾಯ ಮಾಡ್ತಾನೆ.
2. ಕೆಲವು ಬೈಬಲ್ ವಿದ್ಯಾರ್ಥಿಗಳು ಮತ್ತು ಕ್ರೈಸ್ತರು ಯಾವ ತಪ್ಪಾದ ಆಸೆಗಳ ವಿರುದ್ಧ ಹೋರಾಡ್ತಿದ್ದಾರೆ? (ಚಿತ್ರಗಳನ್ನೂ ನೋಡಿ.)
2 “ಒಬ್ಬ ವ್ಯಕ್ತಿಯ ಆಸೆನೇ ಅವನನ್ನ ಎಳ್ಕೊಂಡು ಹೋಗಿ ಪುಸಲಾಯಿಸಿ ಪರೀಕ್ಷೆ ಮಾಡುತ್ತೆ” ಅಂತ ಬೈಬಲ್ ಹೇಳುತ್ತೆ. (ಯಾಕೋ. 1:14) ಅಂದ್ರೆ ಒಬ್ಬೊಬ್ಬ ವ್ಯಕ್ತಿನ ಒಂದೊಂದು ಆಸೆ ಪುಸಲಾಯಿಸುತ್ತೆ. ಉದಾಹರಣೆಗೆ, ಕೆಲವ್ರಿಗೆ ವಿರುದ್ಧ ಲಿಂಗದವ್ರ ಬಗ್ಗೆ ಅನೈತಿಕ ಆಲೋಚನೆಗಳು ಬರಬಹುದು. ಇನ್ನು ಕೆಲವ್ರಿಗೆ ಸಲಿಂಗಕಾಮದ ಆಸೆ ಬರಬಹುದು. ಬೇರೆ ಕೆಲವ್ರಿಗೆ ಅಶ್ಲೀಲ ವಿಡಿಯೋ ನೋಡೋ ಮನಸ್ಸಾಗಬಹುದು. ಕುಡಿಯೋದನ್ನ, ಡ್ರಗ್ಸ್ ತಗೊಳೋದನ್ನ ಬಿಟ್ಟಿರೋರಿಗೆ ಮತ್ತೆ ತಗೊಳೋಕೆ ಆಸೆ ಆಗಬಹುದು. ಕೆಲವು ಕ್ರೈಸ್ತರು ಮತ್ತು ಬೈಬಲ್ ವಿದ್ಯಾರ್ಥಿಗಳೂ ಇಂಥ ತಪ್ಪಾದ ಆಸೆಗಳ ವಿರುದ್ಧ ಹೋರಾಡ್ತಾ ಇರ್ತಾರೆ. ಆಗ ಅವ್ರಿಗೆ “ನಾನು ಒಳ್ಳೇದು ಮಾಡೋಕೆ ಹೋಗ್ತೀನಿ, ಆದ್ರೆ ನನ್ನೊಳಗೆ ಕೆಟ್ಟದೇ ಇದೆ” ಅಂತ ಪೌಲನಿಗೆ ಅನಿಸಿದ ತರ ಅನಿಸಬಹುದು.—ರೋಮ. 7:21.
ತಪ್ಪಾದ ಆಸೆಗಳು ದಿಢೀರಂತ ಯಾವಾಗ ಬೇಕಾದ್ರೂ, ಎಲ್ಲಿ ಬೇಕಾದ್ರೂ ಬರಬಹುದು (ಪ್ಯಾರ 2 ನೋಡಿ)c
3. ಪದೇಪದೇ ತಪ್ಪಾದ ಆಸೆಗಳ ವಿರುದ್ಧ ಹೋರಾಡ್ತಿರೋ ವ್ಯಕ್ತಿಗೆ ಹೇಗೆ ಅನಿಸಿಬಿಡಬಹುದು?
3 ನೀವು ಈ ತಪ್ಪಾದ ಆಸೆಗಳ ವಿರುದ್ಧ ತುಂಬ ವರ್ಷದಿಂದ ಹೋರಾಡ್ತಿದ್ರೆ, ‘ನನ್ನ ಕೈಯಲ್ಲಿ ಇದನ್ನ ಜಯಿಸೋ ಶಕ್ತಿ ಇಲ್ಲ,’ ‘ಯೆಹೋವ ಇನ್ಯಾವತ್ತೂ ನನ್ನ ಇಷ್ಟಪಡಲ್ಲ’ ಅಂತ ನಿಮಗೆ ಅನಿಸಬಹುದು. ಆದ್ರೆ ಈ ಎರಡೂ ಯೋಚ್ನೆಗಳು ತಪ್ಪು! ಯಾಕೆ ತಪ್ಪು ಅಂತ ತಿಳ್ಕೊಳ್ಳೋಕೆ ಈ ಲೇಖನದಲ್ಲಿರೋ ಎರಡು ಪ್ರಶ್ನೆ ನಮಗೆ ಸಹಾಯ ಮಾಡುತ್ತೆ. (1) ‘ನಂಗೆ ಶಕ್ತಿ ಇಲ್ಲ, ಯೆಹೋವ ನನ್ನ ಇಷ್ಟಪಡಲ್ಲ’ ಅಂತ ನಿಮಗೆ ಅನಿಸೋ ತರ ಯಾರು ಮಾಡ್ತಾರೆ? (2) ತಪ್ಪಾದ ಆಸೆಗಳ ವಿರುದ್ಧ ಗೆಲ್ಲೋಕೆ ನೀವೇನು ಮಾಡಬೇಕು?
ನಾವು ಹೇಗೆ ಯೋಚ್ನೆ ಮಾಡಬೇಕಂತ “ಸೈತಾನ” ಬಯಸ್ತಾನೆ?
4. (ಎ) ತಪ್ಪಾದ ಆಸೆಗಳ ವಿರುದ್ಧ ಹೋರಾಡೋಕೆ ನಮ್ಮ ಕೈಯಲ್ಲಿ ಆಗಲ್ಲ ಅಂತ ನಾವು ಅಂದ್ಕೊಬೇಕು ಅಂತ ಸೈತಾನ ಯಾಕೆ ಇಷ್ಟಪಡ್ತಾನೆ? (ಬಿ) ತಪ್ಪಾದ ಆಸೆಗಳ ವಿರುದ್ಧ ಹೋರಾಡೋ ಶಕ್ತಿ ನಮಗಿದೆ ಅಂತ ನಾವ್ಯಾಕೆ ಹೇಳಬಹುದು?
4 ತಪ್ಪಾದ ಆಸೆಗಳ ವಿರುದ್ಧ ಹೋರಾಡೋ ಶಕ್ತಿ ನಮ್ಮಲ್ಲಿಲ್ಲ ಅಂತ ನಾವು ಅಂದ್ಕೊಬೇಕು ಅಂತ ಸೈತಾನ ಇಷ್ಟಪಡ್ತಾನೆ. ಇದು ಯೇಸುಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಶಿಷ್ಯರಿಗೆ “ಪರೀಕ್ಷೆ ಬಂದಾಗ ಸೋತು ಬಿದ್ದುಹೋಗದ ಹಾಗೆ ಕಾಪಾಡು. ಸೈತಾನನಿಂದ ನಮ್ಮನ್ನ ರಕ್ಷಿಸು” ಅಂತ ಪ್ರಾರ್ಥನೆ ಮಾಡೋಕೆ ಹೇಳಿಕೊಟ್ಟನು. (ಮತ್ತಾ. 6:13) ಒಬ್ಬ ಮನುಷ್ಯನಿಗೆ ತಪ್ಪಾದ ಆಸೆ ಬಂದ್ರೆ ಅವನು ದೇವ್ರ ಮಾತು ಕೇಳೋಕೆ ಇಷ್ಟಪಡಲ್ಲ ಅನ್ನೋದು ಸೈತಾನನ ವಾದ. (ಯೋಬ 2:4, 5) ನಿಜ ಏನಂದ್ರೆ, ಸೈತಾನನೇ ತಪ್ಪಾದ ಆಸೆ ವಿರುದ್ಧ ಹೋರಾಡ್ಲಿಲ್ಲ, ಅದಕ್ಕೆ ಬಲಿ ಬಿದ್ದುಬಿಟ್ಟ. ನಿಯತ್ತಿಂದ ಯೆಹೋವನ ಸೇವೆ ಮಾಡೋದನ್ನ ನಿಲ್ಲಿಸಿಬಿಟ್ಟ. ನಾವೂ ಅವನ ತರ ಮಾಡ್ತೀವಿ ಅಂತ ಅಂದ್ಕೊಂಡಿದ್ದಾನೆ. ಅದಕ್ಕೇ ನಮ್ಮಲ್ಲಿ ಪ್ರತಿಯೊಬ್ರಿಗೂ ಒಂದೊಂದು ರೀತಿಯ ತಪ್ಪಾದ ಆಸೆ ತೋರಿಸ್ತಾನೆ. ದೇವರ ಮಗನಾದ ಯೇಸುಗೂ ತಪ್ಪಾದ ಆಸೆ ತೋರಿಸಿದ, ಆತನನ್ನೂ ಮರಳು ಮಾಡಬಹುದು ಅಂದ್ಕೊಂಡ. (ಮತ್ತಾ. 4:8, 9) ಆದ್ರೆ ನೀವೇ ಯೋಚ್ನೆ ಮಾಡಿ, ತಪ್ಪಾದ ಆಸೆಗಳ ವಿರುದ್ಧ ಹೋರಾಡೋ ಶಕ್ತಿ ನಮ್ಮ ಕೈಲಿ ಇಲ್ವಾ? ಖಂಡಿತ ಇದೆ ಅಂತ ಪೌಲ ಹೇಳಿದ್ದಾನೆ. “ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ” ಅಂತ ಅವನು ಹೇಳಿದ. ಈ ಶಕ್ತಿನ ದೇವರು ನಿಮಗೂ ಕೊಡ್ತಾನೆ!—ಫಿಲಿ. 4:13.
5. ತಪ್ಪಾದ ಆಸೆಗಳ ವಿರುದ್ಧ ಹೋರಾಡಿ ನಾವು ಗೆಲ್ತೀವಿ ಅನ್ನೋ ನಂಬಿಕೆ ಯೆಹೋವನಿಗಿದೆ ಅಂತ ಹೇಗೆ ಹೇಳಬಹುದು?
5 ನಮ್ಮ ಮೇಲೆ ಯೆಹೋವ ನಂಬಿಕೆ ಇಟ್ಟಿದ್ದಾನೆ. ನಾವು ತಪ್ಪಾದ ಆಸೆಗಳ ವಿರುದ್ಧ ಖಂಡಿತ ಹೋರಾಡಿ ಗೆಲ್ತೀವಿ ಅಂತ ಯೆಹೋವನಿಗೆ ಗೊತ್ತು. ಅದಕ್ಕೆ ಒಂದು ದೊಡ್ಡ ಗುಂಪಿನ ಜನರು ಮಹಾಸಂಕಟನ ಪಾರಾಗ್ತಾರೆ ಅಂತ ಭವಿಷ್ಯವಾಣಿ ಹೇಳಿದ್ದಾನೆ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಒಂದು, ಯೆಹೋವ ಇಲ್ಲಿ ಸುಳ್ಳು ಹೇಳ್ತಿಲ್ಲ. ಎರಡು, ತಪ್ಪಾದ ಆಸೆಗಳ ವಿರುದ್ಧ ತುಂಬ ಜನ ಹೋರಾಡಿ ಗೆದ್ದು ಹೊಸ ಲೋಕಕ್ಕೆ ಹೋಗ್ತಾರೆ. ಅಷ್ಟೇ ಅಲ್ಲ ಅವರು ‘ತಮ್ಮ ಬಟ್ಟೆಗಳನ್ನ ಕುರಿಮರಿಯ ರಕ್ತದಲ್ಲಿ ಒಗೆದು ಬೆಳ್ಳಗೆ ಮಾಡಿಕೊಂಡಿದ್ದಾರೆ’ ಅಂತಾನೂ ಯೆಹೋವ ಹೇಳಿದ್ದಾನೆ. (ಪ್ರಕ. 7:9, 13, 14) ಅಂದ್ರೆ ಯೆಹೋವನು ಅವ್ರನ್ನ ಪರಿಶುದ್ಧ ಜನರು ಅಂತ ನೋಡ್ತಾನೆ ಅಂತರ್ಥ. ಇದನ್ನೆಲ್ಲ ನೋಡಿದ್ರೆ, ನಾವೆಲ್ಲ ಖಂಡಿತ ತಪ್ಪಾದ ಆಸೆಗಳ ವಿರುದ್ಧ ಹೋರಾಡ್ತೀವಿ ಅಂತ ಯೆಹೋವನಿಗೆ ಗೊತ್ತಿದೆ ಅಂತ ಅರ್ಥ ಆಗುತ್ತಲ್ವಾ?
6-7. ಯೆಹೋವ ನಮ್ಮನ್ನ ಇಷ್ಟಪಡಲ್ಲ ಅಂತ ನಾವು ನಂಬಬೇಕು ಅಂತ ಸೈತಾನ ಯಾಕೆ ಬಯಸ್ತಾನೆ?
6 ನಮಗೆ ತಪ್ಪಾದ ಆಸೆಗಳು ಬರೋದ್ರಿಂದ ‘ಯೆಹೋವ ನನ್ನನ್ನ ಇನ್ನು ಮುಂದೆ ಪ್ರೀತಿಸಲ್ಲ’ ಅಂತ ನಾವು ಅಂದ್ಕೊಬೇಕು ಅಂತ ಸೈತಾನ ಬಯಸ್ತಾನೆ. ಆದ್ರೆ ನಿಜ ಏನಂದ್ರೆ, ಯೆಹೋವನಿಗೆ ಸೈತಾನನ ಮೇಲೆ ಪ್ರೀತಿ ಇಲ್ಲ, ಅದಕ್ಕೇ ಅವನು ನಾಶ ಆಗ್ತಾನೆ ಅಂತ ತೀರ್ಪು ಕೊಟ್ಟಿದ್ದಾನೆ. (ಆದಿ. 3:15; ಪ್ರಕ. 20:10) ಅವನ ಜೊತೆ ನಾವೂ ನಾಶ ಆಗಬೇಕು ಅಂತ ಸೈತಾನ ಎಲ್ಲಿಲ್ಲದ ಪ್ರಯತ್ನ ಹಾಕ್ತಿದ್ದಾನೆ. ಅದಕ್ಕೇ ನಾವು ‘ಯೆಹೋವ ನನ್ನನ್ನ ಪ್ರೀತಿಸಲ್ಲ’ ಅಂತ ಅಂದ್ಕೊಳ್ಳೋಕೆ ಸುಳ್ಳು ಹೇಳಿ ನಮ್ಮನ್ನ ಮರಳು ಮಾಡ್ತಿದ್ದಾನೆ. ಆದ್ರೆ “ಯಾರೂ ನಾಶ ಆಗಬಾರದು ಮತ್ತು ಪಶ್ಚಾತ್ತಾಪ ಪಡೋಕೆ ಎಲ್ರಿಗೂ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ” ಅಂತ ಬೈಬಲ್ ಹೇಳುತ್ತೆ. ಇದ್ರಿಂದ ಯೆಹೋವ ನಮ್ಮಲ್ಲಿ ಪ್ರತಿಯೊಬ್ರನ್ನೂ ತುಂಬ ಪ್ರೀತಿಸ್ತಾನೆ, ನಮಗೆ ಸಹಾಯ ಮಾಡೋಕೆ ರೆಡಿ ಇರ್ತಾನೆ ಅಂತ ಗೊತ್ತಾಗುತ್ತೆ.—2 ಪೇತ್ರ 3:9.
7 ತಪ್ಪಾದ ಆಸೆಗಳ ವಿರುದ್ಧ ಹೋರಾಡೋಕೆ ನಮಗೆ ಶಕ್ತಿ ಇಲ್ಲ ಅಥವಾ ಯೆಹೋವ ನಮ್ಮನ್ನ ಇಷ್ಟಪಡಲ್ಲ ಅಂತ ನಾವು ಅಂದ್ಕೊಂಡ್ರೆ ಸೈತಾನನ ತಾಳಕ್ಕೆ ತಕ್ಕ ಹಾಗೆ ನಾವು ಕುಣಿಯೋ ತರ ಇರುತ್ತೆ. ಆದ್ರೆ ನಿಜ ಏನು ಅಂತ ಅರ್ಥ ಮಾಡ್ಕೊಂಡ್ರೆ, ಸೈತಾನನ ವಿರುದ್ಧ ಹೋರಾಡಿ ಗೆಲ್ಲೋಕೆ ಬೇಕಾಗಿರೋ ಬಲ ನಮಗೆ ಸಿಗುತ್ತೆ.—1 ಪೇತ್ರ 5:8, 9.
ಪಾಪ ಇರೋದ್ರಿಂದ ನಮಗೆ ಹೇಗೆ ಅನಿಸುತ್ತೆ?
8. ‘ನಂಗೆ ಶಕ್ತಿ ಇಲ್ಲ, ಯೆಹೋವನ ಪ್ರೀತಿನ ಕಳ್ಕೊಂಡಿದ್ದೀನಿ’ ಅಂತ ನಾವು ಯೋಚ್ನೆ ಮಾಡೋಕೆ ಇನ್ನೊಂದು ಕಾರಣ ಯಾವುದು? (ಕೀರ್ತನೆ 51:5) (“ಪದ ವಿವರಣೆ” ನೋಡಿ.)
8 ‘ತಪ್ಪಾದ ಆಸೆಗಳ ವಿರುದ್ಧ ಹೋರಾಡೋ ಶಕ್ತಿ ನನಗಿಲ್ಲ, ಯೆಹೋವನ ಪ್ರೀತಿನ ನಾನು ಕಳ್ಕೊಂಡಿದ್ದೀನಿ’ ಅಂತ ನಾವು ಯೋಚಿಸೋ ತರ ಸೈತಾನ ಮಾಡ್ತಾನೆ ಅಂತ ಕಲಿತ್ವಿ. ಆದ್ರೆ ನಾವು ಈ ತರ ಯೋಚ್ನೆ ಮಾಡೋಕೆ ಇನ್ನೊಂದು ಕಾರಣನೂ ಇದೆ. ಅದೇ ನಮ್ಮಲ್ಲಿರೋ ಪಾಪ ಮತ್ತು ಅಪರಿಪೂರ್ಣತೆ. ಇದನ್ನು ನಾವು ಆದಾಮ ಹವ್ವರಿಂದ ಹುಟ್ತಾನೆ ಪಡ್ಕೊಂಡ್ವಿ.a—ಯೋಬ 14:4; ಕೀರ್ತ. 51:5 ಓದಿ.
9-10. (ಎ) ಪಾಪ ಮಾಡಿದ ಮೇಲೆ ಆದಾಮ ಹವ್ವಗೆ ಹೇಗೆ ಅನಿಸ್ತು? (ಬಿ) ನಮ್ಮಲ್ಲಿ ಪಾಪ ಇರೋದ್ರಿಂದ ನಮಗೂ ಹೇಗನಿಸುತ್ತೆ?
9 ಆದಾಮ ಹವ್ವ ಪಾಪ ಮಾಡಿದ ಮೇಲೆ ಅವ್ರ ಪರಿಸ್ಥಿತಿ ಹೇಗಾಯ್ತು ಅಂತ ಯೋಚ್ನೆ ಮಾಡಿ. ಅವರು ಯೆಹೋವನ ಮಾತು ಮೀರಿದ ಮೇಲೆ ತಮ್ಮ ದೇಹನ ಮುಚ್ಕೊಳ್ಳೋಕೆ ಒಂದು ಕಡೆ ಹೋಗಿ ಬಚ್ಚಿಟ್ಕೊಂಡ್ರು. ಅವರು ಯಾಕೆ ಈ ತರ ಮಾಡಿದ್ರು? ಇದ್ರ ಬಗ್ಗೆ ಇನ್‌ಸೈಟ್ ಆನ್ ದಿ ಸ್ಕ್ರಿಪ್ಚರ್ಸ್ ಪುಸ್ತಕ ಹೀಗೆ ಹೇಳುತ್ತೆ: “ಅವರು ಪಾಪ ಮಾಡಿದ್ರಿಂದ ಅವ್ರಿಗೆ ಮನಸ್ಸು ಚುಚ್ತು, ಭಯ, ನಾಚಿಕೆ ಮತ್ತು ಚಿಂತೆ ಆಯ್ತು.” ಅವ್ರ ಪರಿಸ್ಥಿತಿ ನಾಲ್ಕು ರೂಮ್‌ಗಳಿದ್ದ ಮನೆಯಲ್ಲಿ ಅವ್ರನ್ನ ಒಳಗೆ ಹಾಕಿ ಬೀಗ ಹಾಕಿದ ಹಾಗಿತ್ತು. ಒಂದು ರೀತಿಯಲ್ಲಿ ಆ ಭಾವನೆಗಳು ಈ ಮನೆಯ ನಾಲ್ಕು ರೂಮ್‌ಗಳ ತರ ಇತ್ತು. ಅವರು ಒಂದು ರೂಮ್‌ನಿಂದ ಇನ್ನೊಂದು ರೂಮ್‌ಗೆ ಹೋಗಬಹುದೇ ಹೊರತು, ಆ ಮನೆಯಿಂದ ಯಾವ ಕಾರಣಕ್ಕೂ ಹೊರಗೆ ಬರೋಕೆ ಆಗ್ತಿರ್ಲಿಲ್ಲ. ಅಂದ್ರೆ ಅವ್ರ ಪಾಪದಿಂದ ಅವರು ಯಾವತ್ತೂ ತಪ್ಪಿಸ್ಕೊಳ್ಳೋಕೆ ಆಗ್ತಿರ್ಲಿಲ್ಲ.
10 ನಮ್ಮ ಪರಿಸ್ಥಿತಿ ಆದಾಮ ಹವ್ವರಿಗಿಂತ ಸ್ವಲ್ಪ ಭಿನ್ನವಾಗಿದೆ. ಯೆಹೋವ ನಮಗೋಸ್ಕರ ಬಿಡುಗಡೆ ಬೆಲೆಯ ಏರ್ಪಾಡನ್ನ ಮಾಡಿದ್ದಾನೆ. ಇದ್ರಿಂದ ನಮ್ಮ ಪಾಪಗಳನ್ನೆಲ್ಲ ತೊಳ್ಕೊಂಡು ನಾವು ಶುದ್ಧ ಮನಸ್ಸಾಕ್ಷಿ ಪಡ್ಕೊಬಹುದು. (1 ಕೊರಿಂ. 6:11) ಆದ್ರೂ ನಾವು ಆದಾಮ ಹವ್ವರಿಂದ ಪಾಪ ಮಾಡೋ ಸ್ವಭಾವನ ಪಡ್ಕೊಂಡಿದ್ದೀವಿ. ಇದ್ರಿಂದ ನಾವು ತಪ್ಪು ಮಾಡಿದಾಗ ನಮಗೂ ಅವರ ತರನೇ ಮನಸ್ಸು ಚುಚ್ಚುತ್ತೆ, ಭಯ, ಚಿಂತೆ ಮತ್ತು ನಾಚಿಕೆ ಆಗುತ್ತೆ. ಅದಕ್ಕೇ ಬೈಬಲ್, ‘ಪಾಪ ನಮ್ಮೆಲ್ಲರ ಮೇಲೆ ರಾಜನ ತರ ಆಳ್ವಿಕೆ ಮಾಡ್ತಿದೆ’ ಅಂತ ಹೇಳುತ್ತೆ. ಅಷ್ಟೇ ಅಲ್ಲ, “ಆದಾಮನ ಹಾಗೆ ಪಾಪ ಮಾಡದವ್ರ ಮೇಲೂ ಅದು ಆಳ್ವಿಕೆ ಮಾಡ್ತು” ಅಂತಾನೂ ಹೇಳುತ್ತೆ. (ರೋಮ. 5:14) ಇದ್ರ ಬಗ್ಗೆ ಯೋಚ್ನೆ ಮಾಡಿದಾಗ ನಮಗೆ ತುಂಬ ಬೇಜಾರಾಗುತ್ತೆ ನಿಜ. ಆದ್ರೆ ಈ ತರ ಆಸೆಗಳ ವಿರುದ್ಧ ನಮ್ಮ ಕೈಯಲ್ಲಿ ಹೋರಾಡೋಕೆ ಶಕ್ತಿನೇ ಇಲ್ಲ ಅಥವಾ ಯೆಹೋವನ ಪ್ರೀತಿನ ನಾವು ಕಳ್ಕೊಂಡಿದ್ದೀವಿ ಅಂತ ಅಂದ್ಕೊಬಾರದು. ನಾವೆಲ್ರೂ ಖಂಡಿತ ಈ ತರ ತಪ್ಪಾದ ಯೋಚ್ನೆಗಳ ವಿರುದ್ಧ ಹೋರಾಡಿ ಗೆಲ್ಲಬಹುದು. ಅದು ಹೇಗೆ ಅಂತ ಈಗ ನೋಡೋಣ.
ಪಾಪ ಮಾಡಿದ್ಮೇಲೆ ಆದಾಮ ಹವ್ವರಿಗೆ ಮನಸ್ಸು ಚುಚ್ತು, ಚಿಂತೆ, ಭಯ ಮತ್ತು ನಾಚಿಕೆ ಆಯ್ತು (ಪ್ಯಾರ 9 ನೋಡಿ)
11. (ಎ) ‘ಹೋರಾಡೋ ಶಕ್ತಿ ನನಗಿಲ್ಲ’ ಅಂತ ನಿಮ್ಮ ಮನಸ್ಸು ಹೇಳಿದ್ರೆ ನೀವೇನು ಮಾಡಬೇಕು? (ಬಿ) ಯಾಕೆ? (ರೋಮನ್ನರಿಗೆ 6:12)
11 ‘ತಪ್ಪಾದ ಆಸೆಗಳ ವಿರುದ್ಧ ಪ್ರಯತ್ನ ಹಾಕ್ತಿದ್ರೂ ನಂಗೆ ಗೆಲ್ಲೋಕೆ ಆಗ್ತಿಲ್ಲ, ನಂಗೆ ಶಕ್ತಿ ಇಲ್ಲ’ ಅಂತ ನಿಮಗೆ ಅನಿಸ್ತಿದ್ಯಾ? ನಮ್ಮಲ್ಲಿರೋ ಪಾಪ ಈ ತರ ಅನಿಸೋ ಹಾಗೆ ಮಾಡುತ್ತೆ. ನೀವು ಅದ್ರ ಮಾತನ್ನ ಕೇಳಬೇಡಿ. ಅದಕ್ಕೇ ಬೈಬಲ್, “ಪಾಪ . . . ರಾಜನ ತರ ಆಳೋಕೆ ಬಿಟ್ಟುಕೊಡಬೇಡಿ” ಅಂತ ಹೇಳಿದೆ. (ರೋಮನ್ನರಿಗೆ 6:12 ಓದಿ.) ಅಂದ್ರೆ ನಮ್ಮ ಮನಸ್ಸು ಒಂದು ವಿಷ್ಯ ಹೇಳಿದ ತಕ್ಷಣ ನಾವು ಅದನ್ನ ಮಾಡಬೇಕಾಗಿಲ್ಲ. (ಗಲಾ. 5:16) ನಮ್ಮ ಕೆಟ್ಟ ಆಸೆಗಳ ವಿರುದ್ಧ ಹೋರಾಡಿ ನಾವು ಗೆಲ್ತೀವಿ ಅನ್ನೋ ನಂಬಿಕೆ ಯೆಹೋವನಿಗಿದೆ. ಒಂದುವೇಳೆ ಆ ನಂಬಿಕೆ ಆತನಿಗಿಲ್ಲ ಅಂದಿದ್ರೆ ‘ಹೋರಾಡಿ’ ಅಂತ ನಮಗೆ ಆತನು ಹೇಳ್ತಾ ಇರಲಿಲ್ಲ. (ಧರ್ಮೋ. 30:11-14; ರೋಮ. 6:6; 1 ಥೆಸ. 4:3) ಇದನ್ನೆಲ್ಲ ನೋಡಿದ್ರೆ ನಮ್ಮಲ್ಲಿ ಪ್ರತಿಯೊಬ್ರಿಗೂ ತಪ್ಪಾದ ಆಸೆಗಳ ವಿರುದ್ಧ ಹೋರಾಡಿ ಗೆಲ್ಲೋ ಶಕ್ತಿ ಇದೆ ಅಂತ ಗೊತ್ತಾಗುತ್ತೆ.
12. (ಎ) ಯೆಹೋವ ನಮ್ಮನ್ನ ಇಷ್ಟಪಡಲ್ಲ ಅಂತ ಅನಿಸಿದ್ರೆ ನಾವೇನು ಮಾಡಬೇಕು? (ಬಿ) ಯಾಕೆ?
12 ಇನ್ನೊಂದು ವಿಷ್ಯ ಇದೆ, ನಮಗೆ ತಪ್ಪಾದ ಆಸೆಗಳು ಬರೋದ್ರಿಂದ ಯೆಹೋವ ನಮ್ಮನ್ನ ಯಾವತ್ತೂ ಇಷ್ಟಪಡಲ್ಲ ಅಂತಾನೂ ನಮ್ಮ ಮನಸ್ಸು ಹೇಳುತ್ತೆ. ನಮ್ಮಲ್ಲಿರೋ ಪಾಪ ಈ ತರ ಅನಿಸೋ ಹಾಗೆ ಮಾಡುತ್ತೆ. ನೀವು ಅದ್ರ ಮಾತನ್ನ ಕೇಳಬೇಡಿ. ಯಾಕಂದ್ರೆ ಯೆಹೋವ ನಮ್ಮ ಪಾಪದ ಪರಿಸ್ಥಿತಿನ ಪೂರ್ತಿಯಾಗಿ ಅರ್ಥ ಮಾಡಿಕೊಂಡಿದ್ದಾನೆ ಅಂತ ಬೈಬಲ್ ಹೇಳುತ್ತೆ. (ಕೀರ್ತ. 103:13, 14) ನಮ್ಮಲ್ಲಿ ಪಾಪ ಇರೋದ್ರಿಂದ ನಮಗೆ ಏನೆಲ್ಲ ಆಗ್ತಿದೆ ಮತ್ತು ನಮ್ಮ ಯೋಚ್ನೆ ಹೇಗೆಲ್ಲ ಹಾಳಾಗಿದೆ ಅಂತ ಆತನಿಗೆ ಚೆನ್ನಾಗಿ ಗೊತ್ತು. (1 ಯೋಹಾ. 3:19, 20) ಹಾಗಾಗಿ ನಾವು ಎಲ್ಲಿವರೆಗೂ ತಪ್ಪಾದ ಆಸೆಗಳ ವಿರುದ್ಧ ಹೋರಾಟ ಮಾಡ್ತಿವೋ, ಪ್ರಯತ್ನ ಹಾಕೋದನ್ನ ಬಿಡಲ್ವೋ ಅಲ್ಲಿವರೆಗೂ ಯೆಹೋವ ನಮ್ಮನ್ನ ಶುದ್ಧರಾಗಿ ನೋಡ್ತಾನೆ.
13-14. ನಮ್ಮಲ್ಲಿ ತಪ್ಪಾದ ಆಸೆಗಳು ಬರ್ತಿದೆ ಅಂದ ತಕ್ಷಣ ಯೆಹೋವನ ಕಣ್ಣಲ್ಲಿ ನಾವು ಸೋತು ಹೋದ್ವಿ ಅಂತನಾ? ವಿವರಿಸಿ.
13 ತಪ್ಪಾದ ಆಸೆಗಳು ಬರೋದಕ್ಕೂ, ತಪ್ಪಾದ ಆಸೆಗಳ ಪ್ರಕಾರ ನಡ್ಕೊಳ್ಳೋದಕ್ಕೂ ವ್ಯತ್ಯಾಸ ಇದೆ ಅಂತ ಬೈಬಲ್ ಹೇಳುತ್ತೆ. ನಮ್ಮಲ್ಲಿ ಆಸೆಗಳು ಬರದೇ ಇರೋ ತರ ನಾವು ತಡೆಯೋಕೆ ಆಗಲ್ಲ. ಆದ್ರೆ ಆ ತಪ್ಪಾದ ಆಸೆಗಳ ಪ್ರಕಾರ ನಡ್ಕೊಬೇಕಾ ಬೇಡ್ವಾ ಅಂತ ನಾವು ನಿರ್ಧಾರ ಮಾಡೋಕೆ ಆಗುತ್ತೆ. ಉದಾಹರಣೆಗೆ, ಒಂದನೇ ಶತಮಾನದ ಕೊರಿಂಥ ಸಭೆಯಲ್ಲಿದ್ದ ಕೆಲವು ಕ್ರೈಸ್ತರ ಬಗ್ಗೆ ಯೋಚಿಸಿ. ಪೌಲ ಅವರ ಬಗ್ಗೆ, “ಈ ಮುಂಚೆ ನಿಮ್ಮಲ್ಲಿ ಸ್ವಲ್ಪ ಜನ” ಸಲಿಂಗಕಾಮಿಗಳು “ಆಗಿದ್ರಿ” ಅಂತ ಬರೆದ. ಇದ್ರರ್ಥ ಅವರು ಸತ್ಯಕ್ಕೆ ಬಂದ್ಮೇಲೆ ಸಲಿಂಗಕಾಮದ ಯೋಚ್ನೆ ಅವ್ರಿಗೆ ಬರಲೇ ಇಲ್ಲ ಅಂತನಾ? ಆ ತರ ನಾವು ಹೇಳೋಕೆ ಆಗಲ್ಲ. ಯಾಕಂದ್ರೆ ಇಂಥ ಆಸೆಗಳು ಮನಸ್ಸಲ್ಲಿ ಬಲವಾಗಿ ಬೇರೂರಿ ಬಿಟ್ಟಿರುತ್ತೆ. ಆದ್ರೆ ಅಂಥ ಯೋಚ್ನೆ ಬಂದಾಗ ಆ ಕ್ರೈಸ್ತರು ಸ್ವನಿಯಂತ್ರಣ ತೋರಿಸಿದ್ರು. ಆ ತಪ್ಪಾದ ಆಸೆ ಪ್ರಕಾರ ಅವರು ಇನ್ನು ಯಾವತ್ತೂ ನಡ್ಕೊಳ್ಳಲಿಲ್ಲ. ಅದಕ್ಕೇ ಯೆಹೋವ ಅವರನ್ನ ‘ತೊಳೆದು ಶುದ್ಧಮಾಡಿದನು.’ (1 ಕೊರಿಂ. 6:9-11) ನಾವು ತಪ್ಪಾದ ಆಸೆಗಳ ಪ್ರಕಾರ ನಡ್ಕೊಳ್ಳಲಿಲ್ಲ ಅಂದ್ರೆ ಯೆಹೋವ ನಮ್ಮನ್ನೂ ಶುದ್ಧ ಜನ್ರಾಗಿ ನೋಡ್ತಾನೆ.
14 ನೀವು ಎಂಥದ್ದೇ ತಪ್ಪಾದ ಆಸೆಗಳ ವಿರುದ್ಧ ಹೋರಾಡ್ತಿದ್ರೂ ಅದ್ರ ವಿರುದ್ಧ ಖಂಡಿತ ಗೆಲ್ತೀರ. ನಿಮಗೆ ಬರೋ ಆಸೆಗಳನ್ನ ತಡೆಯೋಕೆ ಆಗಿಲ್ಲ ಅಂದ್ರೂ ನೀವು ಸ್ವನಿಯಂತ್ರಣ ತೋರಿಸಿದ್ರೆ ಆ ‘ಆಸೆಗಳ ಪ್ರಕಾರ ನಡೆಯದೇ ಇರ್ತೀರ.’ (ಎಫೆ. 2:3) ನೀವು ಇದನ್ನ ಹೇಗೆ ಮಾಡಬಹುದು ಅಂತ ಈಗ ನೋಡೋಣ.
ತಪ್ಪಾದ ಆಸೆಗಳ ವಿರುದ್ಧ ಗೆಲ್ಲೋದು ಹೇಗೆ?
15. ತಪ್ಪಾದ ಆಸೆಗಳ ವಿರುದ್ಧ ಹೋರಾಡಿ ಗೆಲ್ಲಬೇಕಂದ್ರೆ ನಮ್ಮ ಬಲಹೀನತೆಗಳನ್ನ ಒಪ್ಕೊಳ್ಳೋದು ಯಾಕೆ ಮುಖ್ಯ?
15 ತಪ್ಪಾದ ಆಸೆಗಳ ವಿರುದ್ಧ ಹೋರಾಡ್ವಾಗ ನಿಮ್ಮ ಬಲಹೀನತೆಗಳನ್ನ ನೀವು ಒಪ್ಕೊಬೇಕು. ಆದ್ರೆ ಕೆಲವೊಬ್ರು ಅದನ್ನ ಒಪ್ಕೊಳಲ್ಲ, ಅವರು ಮಾಡೋ ತಪ್ಪಿಗೆ ನೆಪಗಳನ್ನ ಕೊಡ್ತಾರೆ. (ಯಾಕೋ. 1:22) ಉದಾಹರಣೆಗೆ, ‘ನಾನೇನು ಜಾಸ್ತಿ ಕುಡಿಯಲ್ಲ, ನನಗಿಂತ ಬೇರೆಯವರು ಜಾಸ್ತಿ ಕುಡಿತಾರೆ’ ಅಥವಾ ‘ನಾನು ಕುಡಿಯೋಕೆ ಇವರೇ ಕಾರಣ’ ಅಂತ ಹೇಳ್ತಾರೆ. ಇನ್ನು ಕೆಲವೊಬ್ರು, ‘ನನ್ನ ಹೆಂಡ್ತಿ ನಂಗೆ ಪ್ರೀತಿ ತೋರಿಸಿದ್ರೆ, ನಾನ್ಯಾಕೆ ಅಶ್ಲೀಲ ವಿಷಯಗಳನ್ನ ನೋಡ್ತಿದ್ದೆ’ ಅಂತ ಹೇಳ್ತಾರೆ. ಈ ತರ ಅವರು ತಮ್ಮ ತಪ್ಪುಗಳಿಗೆ ನೆಪಗಳನ್ನ ಕೊಟ್ಕೊಂಡು ತಮ್ಮನ್ನ ತಾವೇ ಮೋಸ ಮಾಡ್ಕೊಳ್ತಿದ್ದಾರೆ. ಇದ್ರಿಂದ ಕೆಟ್ಟ ಆಸೆಗೆ ಬಲಿ ಬೀಳೋ ಸಾಧ್ಯತೆ ಜಾಸ್ತಿ ಇರುತ್ತೆ. ನಾವು ನೆಪ ಕೊಟ್ಟ ತಕ್ಷಣ ತೊಂದ್ರೆಯಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ ಅಂತ ನೆನಪಿಡಬೇಕು. ನಾವು ಮಾಡೋ ತಪ್ಪಿಗೆ ನಾವೇ ಕಾರಣ ಆಗ್ತೀವಿ.—ಗಲಾ. 6:7.
16. ಸರಿಯಾಗಿರೋದನ್ನ ಮಾಡೋ ಛಲ ಬೆಳೆಸ್ಕೊಳ್ಳೋಕೆ ಏನು ಮಾಡಬೇಕು?
16 ತಪ್ಪಾದ ಆಸೆಗಳ ವಿರುದ್ಧ ಹೋರಾಡಿ ಗೆಲ್ಲಬೇಕಂದ್ರೆ ‘ಏನೇ ಆಗಲಿ ಆ ಆಸೆಗೆ ಬಲಿ ಬೀಳಲ್ಲ’ ಅನ್ನೋ ಛಲನ ನೀವು ಬೆಳೆಸ್ಕೋಬೇಕು. (1 ಕೊರಿಂ. 9:26, 27; 1 ಥೆಸ. 4:4; 1 ಪೇತ್ರ 1:15, 16) ಹಾಗಾಗಿ ತಪ್ಪಾದ ಆಸೆಗಳು ಯಾವಾಗ ಮತ್ತು ಯಾವ ವಿಷ್ಯದಿಂದ ಬರ್ತಿವೆ ಅಂತ ಮೊದಲು ತಿಳ್ಕೊಳ್ಳಿ. ಕೆಲವ್ರಿಗೆ ಸುಸ್ತಾದಾಗ ಅಥವಾ ತಡರಾತ್ರಿ ತಪ್ಪಾದ ಆಸೆಗಳು ಬರುತ್ತೆ. ನಿಮಗೆ ಯಾವಾಗ ತಪ್ಪಾದ ಆಸೆ ಬರುತ್ತೆ ಅಂತ ಮೊದ್ಲೇ ಯೋಚಿಸಿ, ಅದು ಬಂದಾಗ ನೀವು ಏನು ಮಾಡಬೇಕು ಅಂತ ಮೊದ್ಲೇ ತಯಾರಾಗಿರಿ. ನೆನಪಿಡಿ, ಆ ಆಸೆ ಬಂದ ಮೇಲೆ ತಯಾರಿ ಮಾಡೋದಲ್ಲ, ಆ ಆಸೆ ಬರೋ ಮುಂಚೆನೇ ನೀವು ತಯಾರಾಗಿ ಇರಬೇಕು.—ಜ್ಞಾನೋ. 22:3.
17. ಯೋಸೇಫನಿಂದ ನಾವೇನು ಕಲಿಬಹುದು? (ಆದಿಕಾಂಡ 39:7-9) (ಚಿತ್ರಗಳನ್ನೂ ನೋಡಿ.)
17 ಅನೈತಿಕ ಸಂಬಂಧ ಇಟ್ಕೊಳ್ಳೋಕೆ ಪೋಟೀಫರನ ಹೆಂಡ್ತಿ ಯೋಸೇಫನಿಗೆ ಆಸೆ ತೋರಿಸಿದಾಗ ಯೋಸೇಫ ಏನು ಮಾಡಿದ? ತಕ್ಷಣ, ದೃಢವಾಗಿ ‘ಬೇಡ’ ಅಂತ ಹೇಳಿದ. (ಆದಿಕಾಂಡ 39:7-9 ಓದಿ.) ಇದ್ರಿಂದ ನಮಗೇನು ಗೊತ್ತಾಗುತ್ತೆ? ಪೋಟೀಫರನ ಹೆಂಡ್ತಿ ಆಸೆ ತೋರಿಸೋ ಮುಂಚೆನೇ ಯೋಸೇಫನಿಗೆ, ಇನ್ನೊಬ್ರ ಹೆಂಡ್ತಿನ ಆಸೆ ಪಡೋದು ತಪ್ಪು ಅಂತ ಗೊತ್ತಿತ್ತು. ಅದೇ ತರಾನೇ ನೀವು ತಪ್ಪಾದ ರೀತಿಯಲ್ಲಿ ನಡ್ಕೊಳ್ಳೋ ಸಂದರ್ಭ ಬರೋ ಮುಂಚೆನೇ ತಯಾರಾಗಿ ಇರಬೇಕು. ಆಗ ತಪ್ಪು ಮಾಡೋ ಅವಕಾಶ ಬಂದ್ರೆ ನೀವು ಮಾಡಿರೋ ತೀರ್ಮಾನದ ಪ್ರಕಾರ ಸರಿಯಾಗಿ ನಡ್ಕೊಳ್ಳೋಕೆ ಸುಲಭ ಆಗುತ್ತೆ.
ತಪ್ಪಾದ ಆಸೆಗಳು ಬಂದ ತಕ್ಷಣ ಯೋಸೇಫನ ತರ ಆ ಆಸೆಗಳನ್ನ ತಡೆಯಿರಿ! (ಪ್ಯಾರ 17 ನೋಡಿ)
“ಪರೀಕ್ಷಿಸಿಕೊಳ್ತಾ ಇರಿ”
18. ತಪ್ಪಾದ ಆಸೆಗಳ ವಿರುದ್ಧ ಹೋರಾಡಿ ಗೆಲ್ಲೋಕೆ ನೀವೇನು ಮಾಡಬೇಕು? (2 ಕೊರಿಂಥ 13:5)
18 ತಪ್ಪಾದ ಆಸೆಗಳ ವಿರುದ್ಧ ನೀವು ಹೋರಾಡಿ ಗೆಲ್ಲಬೇಕಂದ್ರೆ ನಿಮ್ಮನ್ನ ನೀವು ‘ಪರೀಕ್ಷಿಸ್ಕೊಳ್ತಾ ಇರಬೇಕು.’ ನಿಮಗೆ ತಪ್ಪಾದ ಆಸೆಗಳು ಬರ್ತಿದ್ಯಾ, ಅದು ಬಂದಾಗ ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಆಗಿಂದಾಗ್ಗೆ ಯೋಚ್ನೆ ಮಾಡಬೇಕು. (2 ಕೊರಿಂಥ 13:5 ಓದಿ.) ಏನಾದ್ರೂ ಬದಲಾವಣೆ ಮಾಡ್ಕೋಬೇಕು ಅಂತ ಅನಿಸಿದ್ರೆ, ದಯವಿಟ್ಟು ಅದನ್ನ ಮಾಡ್ಕೊಳ್ಳಿ. ಉದಾಹರಣೆಗೆ, ಒಂದು ಸನ್ನಿವೇಶದಲ್ಲಿ ನೀವು ತಪ್ಪಾದ ಆಸೆನ ತಡೆದಿರ್ತೀರ ಅಂದ್ಕೊಳ್ಳಿ. ಆದ್ರೂ ನೀವು ಈ ತರ ಕೇಳ್ಕೊಳ್ಳಿ. ‘ಆ ತಪ್ಪಾದ ಆಸೆನ ತಡಿಯೋಕೆ ನಾನು ಎಷ್ಟು ಟೈಮ್ ತಗೊಂಡೆ?’ ಒಂದುವೇಳೆ ಆ ಆಸೆನ ತಡಿಯೋಕೆ ಜಾಸ್ತಿ ಟೈಮ್ ತಗೊಂಡೆ ಅಂತ ನಿಮಗೆ ಅನಿಸಿದ್ರೆ ಬೇಜಾರಾಗಬೇಡಿ. ‘ಮುಂದಿನ ಸಲ ತಕ್ಷಣ ತಡಿಯೋಕೆ ನಾನು ಏನು ಮಾಡಬಹುದು? ನಾನು ನೋಡ್ತಿರೋ ಮನೋರಂಜನೆ ತಪ್ಪಾದ ಆಸೆನ ಕಮ್ಮಿ ಮಾಡ್ತಿದ್ಯಾ ಅಥವಾ ಜಾಸ್ತಿ ಮಾಡ್ತಿದ್ಯಾ? ಅಶ್ಲೀಲ ಚಿತ್ರ ನನ್ನ ಕಣ್ಣಿಗೆ ಬಿದ್ರೆ ತಕ್ಷಣ ನಾನು ನನ್ನ ಕಣ್ಣನ್ನ ಬೇರೆ ಕಡೆ ತಿರುಗಿಸ್ತೀನಾ? ಯೆಹೋವ ಇಟ್ಟಿರೋ ನೀತಿ ನಿಯಮಗಳನ್ನ ಪಾಲಿಸೋಕೆ ಕಷ್ಟ ಆದ್ರೂ, ಅದು ನನ್ನ ಒಳ್ಳೇದಕ್ಕೇ ಇರೋದು ಅಂತ ನಾನು ನಂಬ್ತೀನಾ?’ ಅಂತ ಕೇಳ್ಕೊಳ್ಳಿ.—ಕೀರ್ತ. 101:3.
19. ನೆಪ ಕೊಡೋದ್ರಿಂದ ಅಥವಾ ಚಿಕ್ಕಪುಟ್ಟ ಅವಿವೇಕದ ನಿರ್ಧಾರಗಳನ್ನ ಮಾಡೋದ್ರಿಂದ ಯಾವೆಲ್ಲ ಅಪಾಯ ಆಗಬಹುದು?
19 ನಿಮ್ಮನ್ನ ನೀವು ಪರೀಕ್ಷಿಸ್ಕೊಳ್ಳುವಾಗ ನೆಪ ಕೊಡಬಾರದು ಅಂತ ನೆನಪಿಡಿ. ಯಾಕಂದ್ರೆ ಬೈಬಲ್, “ಹೃದಯ ಬೇರೆ ಎಲ್ಲದಕ್ಕಿಂತ ಹೆಚ್ಚು ಮೋಸ ಮಾಡುತ್ತೆ. ಅದು ಏನು ಮಾಡೋಕ್ಕೂ ಹಿಂದೆಮುಂದೆ ನೋಡಲ್ಲ” ಅಂತ ಹೇಳುತ್ತೆ. (ಯೆರೆ. 17:9) ಹೃದಯದಿಂದ “ಕೆಟ್ಟ ಆಲೋಚನೆ” ಬರುತ್ತೆ ಅಂತ ಯೇಸುನೂ ಹೇಳಿದ್ದಾನೆ. (ಮತ್ತಾ. 15:19) ಉದಾಹರಣೆಗೆ, ಒಬ್ಬ ವ್ಯಕ್ತಿ ಆಶ್ಲೀಲ ಚಿತ್ರಗಳನ್ನ ನೋಡೋದನ್ನ ನಿಲ್ಲಿಸಿರ್ತಾನೆ ಅಂತ ಅಂದ್ಕೊಳ್ಳಿ. ಆದ್ರೆ ಹೋಗ್ತಾಹೋಗ್ತಾ ‘ಒಂದು ಅಶ್ಲೀಲ ಫೋಟೋನ, ಬರೀ ನೋಡೋದ್ರಲ್ಲಿ ಏನು ತಪ್ಪಿಲ್ಲ. ಅದ್ರಲ್ಲಿ ಪೂರ್ತಿ ಬೆತ್ತಲೆ ಇಲ್ಲ ಅಲ್ವಾ?’ ಅಂತ ಅಂದ್ಕೊಬಹುದು. ಇಲ್ಲಾಂದ್ರೆ, ‘ನಾನು ಬರೀ ಆ ಆಸೆಗಳ ಬಗ್ಗೆ ಯೋಚ್ನೆ ಮಾಡ್ತಿದ್ದೀನಿ ಅಷ್ಟೇ, ನಾನೇನು ನೇರವಾಗಿ ಆ ತಪ್ಪು ಮಾಡ್ತಿಲ್ಲ ಅಲ್ವಾ?’ ಅಂತ ನೆಪ ಕೊಟ್ಕೊಬಹುದು. ಅವನು ಈ ತರ ಅಂದ್ಕೊಳ್ತಿದ್ರೆ ಅವನ ಹೃದಯ ಮೋಸ ಮಾಡ್ತಿದೆ. ‘ದೇಹದ ಆಸೆಗಳನ್ನ ತೀರಿಸ್ಕೊಳ್ಳೋಕೆ ಮೊದಲೇ ಯೋಜನೆ ಮಾಡ್ತಿದೆ’ ಅಂತರ್ಥ. (ರೋಮ. 13:14) ಯಾರೂ ದಿಢೀರ್ ಅಂತ ದೊಡ್ಡ ತಪ್ಪು ಮಾಡಲ್ಲ ಅಂತ ನೆನಪಿಡಿ. ಮೊದಮೊದಲು ಅವರು ಚಿಕ್ಕಪುಟ್ಟ ಅವಿವೇಕದ ನಿರ್ಧಾರಗಳನ್ನ ಮಾಡ್ತಾರೆ.b ಅದು ಹೋಗ್ತಾಹೋಗ್ತಾ ಒಂದಿನ ದೊಡ್ಡ ತಪ್ಪು ಮಾಡೋ ತರ ಮಾಡಿಬಿಡುತ್ತೆ. ಹಾಗಾಗಿ ನೀವು ಮಾಡ್ತಿರೋದು ಸರಿ ಅಂತ ಹೇಳೋಕೆ ನಿಮ್ಮ ಹತ್ರ ನೆಪಗಳಿರಬಹುದು, ಆದರೆ ಅದು ‘ಕೆಟ್ಟ ಆಲೋಚನೆ’ ಅಂತ ಅರ್ಥ ಮಾಡ್ಕೊಂಡು ಅದನ್ನ ಬಿಟ್ಟುಬಿಡಿ.
20. (ಎ) ಹೊಸ ಲೋಕದಲ್ಲಿ ತಪ್ಪಾದ ಆಸೆಗಳಿಗೆ ಏನಾಗುತ್ತೆ? (ಬಿ) ಈಗ ನಮಗೆ ಯಾವ ಸಹಾಯ ಇದೆ?
20 ಇಲ್ಲಿವರೆಗೂ ನಾವು, ನಮಗೆ ಬರೋ ತಪ್ಪಾದ ಆಸೆಗಳ ವಿರುದ್ಧ ಹೋರಾಡೋಕೆ ಯೆಹೋವ ಶಕ್ತಿ ಕೊಟ್ಟು ಸಹಾಯ ಮಾಡ್ತಾನೆ ಅಂತ ನೋಡಿದ್ವಿ. ಅಷ್ಟೇ ಅಲ್ಲ, ಬಿಡುಗಡೆ ಬೆಲೆ ಮೂಲಕ ಆತನು ನಮ್ಮ ಪಾಪಗಳನ್ನ ಕ್ಷಮಿಸ್ತಾನೆ, ಮುಂದೆ ಶಾಶ್ವತ ಜೀವ ಕೊಡ್ತಾನೆ ಅಂತ ಕಲಿತ್ವಿ. ಆ ಹೊಸ ಲೋಕದಲ್ಲಿ ನಾವು ತಪ್ಪಾದ ಆಸೆಗಳ ವಿರುದ್ಧ ಹೋರಾಡೋ ಅವಶ್ಯಕತೆನೇ ಇರಲ್ಲ. ಯಾಕಂದ್ರೆ ಆಗ ನಮ್ಮೆಲ್ರಿಗೂ ಶುದ್ಧ ಮನಸ್ಸು ಮತ್ತು ಹೃದಯ ಇರುತ್ತೆ. ಆದ್ರೆ ಅಲ್ಲಿವರೆಗೂ ನಾವೆಲ್ರೂ ತಪ್ಪಾದ ಆಸೆಗಳ ವಿರುದ್ಧ ಹೋರಾಡ್ತಾನೇ ಇರಬೇಕು. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ನಮಗೆ ಹೋರಾಡೋಕೆ ಬೇಕಾಗಿರೋ ಶಕ್ತಿನ ಕೊಟ್ಟೇ ಕೊಡ್ತಾನೆ. ಹೀಗೆ ನಮಗೆ ಸಹಾಯ ಇರೋದ್ರಿಂದ ನಾವೆಲ್ರೂ ಹೋರಾಡಿ ಗೆದ್ದೇ ಗೆಲ್ತೀವಿ!
ಗೀತೆ 122 ಸ್ಥಿರವಾಗಿ ನಿಲ್ಲೋಣ!
a ಪದ ವಿವರಣೆ: ಬೈಬಲ್‌ನಲ್ಲಿ ಸಾಮಾನ್ಯವಾಗಿ “ಪಾಪ” ಅಂತ ಹೇಳುವಾಗ ನಾವು ಮಾಡೋ ತಪ್ಪುಗಳನ್ನ ಸೂಚಿಸುತ್ತೆ. ಉದಾಹರಣೆಗೆ, ಕಳ್ಳತನ, ವ್ಯಭಿಚಾರ ಅಥವಾ ಕೊಲೆ. (ವಿಮೋ. 20:13-15; 1 ಕೊರಿಂ. 6:18) ಆದ್ರೆ ಇನ್ನು ಕೆಲವು ಕಡೆ, ನಾವು ಯಾವುದೇ ತಪ್ಪುಗಳನ್ನ ಮಾಡಿಲ್ಲ ಅಂದ್ರೂ ಬೈಬಲ್, ನಮ್ಮಲ್ಲಿ ‘ಪಾಪ’ ಇದೆ ಅಂತ ಹೇಳುತ್ತೆ. ಅದು ಆದಾಮ ಹವ್ವರಿಂದ, ನಾವು ಹುಟ್ತಾನೆ ಪಡ್ಕೊಂಡಿರೋ ಪಾಪ ಮಾಡೋ ಸ್ವಭಾವವನ್ನ ಸೂಚಿಸುತ್ತೆ.
b ಜ್ಞಾನೋಕ್ತಿ 7:7-23ರಲ್ಲಿ ತಿಳಿಸಿರೋ ಯುವಕ ಮೊದ್ಲು ಚಿಕ್ಕ ಅವಿವೇಕದ ನಿರ್ಧಾರಗಳನ್ನ ಮಾಡಿದ. ಇದ್ರಿಂದ ಕೊನೆಗೆ ಅವನು ಲೈಂಗಿಕ ಅನೈತಿಕತೆ ಮಾಡೋ ದೊಡ್ಡ ಅವಿವೇಕದ ನಿರ್ಧಾರ ಮಾಡಿಬಿಟ್ಟ.
c ಚಿತ್ರ ವಿವರಣೆ: ಎಡಗಡೆ: ಇಬ್ರು ಗಂಡಸ್ರು ಪ್ರಣಯಾತ್ಮಕವಾಗಿ ನಡ್ಕೊಳೋದನ್ನ ಒಬ್ಬ ಸಹೋದರ ಕಾಫಿ ಶಾಪಲ್ಲಿ ನೋಡ್ತಿದ್ದಾನೆ. ಬಲಗಡೆ: ಇಬ್ರು ಸಿಗರೇಟ್ ಸೇದುತ್ತಾ ಇರೋದನ್ನ ಒಬ್ಬ ಸಹೋದರಿ ನೋಡ್ತಿದ್ದಾಳೆ.