ಮತ್ತಾಯ
3 ಆ ದಿವಸಗಳಲ್ಲಿ ಸ್ನಾನಿಕನಾದ ಯೋಹಾನನು ಯೂದಾಯದ ಅರಣ್ಯದಲ್ಲಿ, 2 “ಪಶ್ಚಾತ್ತಾಪಪಡಿರಿ, ಸ್ವರ್ಗದ ರಾಜ್ಯವು ಸಮೀಪಿಸಿದೆ” ಎಂದು ಸಾರಿಹೇಳುತ್ತಾ ಬಂದನು. 3 ವಾಸ್ತವದಲ್ಲಿ, “ ‘ಜನರೇ ಯೆಹೋವನ ಮಾರ್ಗವನ್ನು ಸಿದ್ಧಪಡಿಸಿರಿ, ಆತನ ಹಾದಿಗಳನ್ನು ನೆಟ್ಟಗೆಮಾಡಿರಿ’ ಎಂದು ಕೂಗುವವನ ಧ್ವನಿಯು ಅರಣ್ಯದಲ್ಲಿ ಕೇಳಿಬರುತ್ತಿದೆ. ಕಿವಿಗೊಡಿರಿ!” ಎಂಬ ಮಾತುಗಳಲ್ಲಿ ಪ್ರವಾದಿಯಾದ ಯೆಶಾಯನ ಮೂಲಕ ತಿಳಿಸಲ್ಪಟ್ಟವನು ಇವನೇ. 4 ಆದರೆ ಈ ಯೋಹಾನನು ಒಂಟೆಯ ಕೂದಲಿನ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡಿದ್ದನು; ಮಿಡತೆಗಳು ಮತ್ತು ಕಾಡುಜೇನು ಅವನ ಆಹಾರವಾಗಿತ್ತು. 5 ಆಗ ಯೆರೂಸಲೇಮ್ ಮತ್ತು ಇಡೀ ಯೂದಾಯ ಸೀಮೆಯವರೂ ಯೋರ್ದನಿನ ಸುತ್ತಲಿರುವ ಎಲ್ಲ ಸೀಮೆಯವರೂ ಅವನ ಬಳಿಗೆ ಬಂದು 6 ತಮ್ಮ ತಮ್ಮ ಪಾಪಗಳನ್ನು ಮುಚ್ಚುಮರೆಯಿಲ್ಲದೆ ನಿವೇದಿಸಿಕೊಂಡು ಯೋರ್ದನ್ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
7 ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತಾನು ದೀಕ್ಷಾಸ್ನಾನ ಮಾಡಿಸುತ್ತಿದ್ದಲ್ಲಿಗೆ ಬರುತ್ತಿರುವುದನ್ನು ಅವನು ಕಂಡು ಅವರಿಗೆ, “ವಿಷಸರ್ಪಗಳ ಪೀಳಿಗೆಯವರೇ, ಬರಲಿರುವ ಕ್ರೋಧದಿಂದ ತಪ್ಪಿಸಿಕೊಳ್ಳಲು ನಿಮಗೆ ಯಾರು ಸೂಚನೆಕೊಟ್ಟರು? 8 ಆದಕಾರಣ ಪಶ್ಚಾತ್ತಾಪಕ್ಕೆ ಯೋಗ್ಯವಾದ ಫಲವನ್ನು ಉತ್ಪಾದಿಸಿರಿ; 9 ‘ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿ. ಏಕೆಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಉಂಟುಮಾಡಬಲ್ಲವನಾಗಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ. 10 ಈಗಾಗಲೇ ಮರಗಳ ಬೇರಿಗೆ ಕೊಡಲಿಯು ಬಿದ್ದಿರುತ್ತದೆ; ಒಳ್ಳೇ ಫಲವನ್ನು ಉತ್ಪಾದಿಸದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಎಸೆಯಲಾಗುವುದು. 11 ನಾನಾದರೋ ನಿಮ್ಮ ಪಶ್ಚಾತ್ತಾಪದ ನಿಮಿತ್ತ ನಿಮಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ; ಆದರೆ ನನ್ನ ಬಳಿಕ ಬರುವವನು ನನಗಿಂತ ಹೆಚ್ಚು ಬಲಶಾಲಿಯಾಗಿದ್ದಾನೆ; ಅವನ ಕೆರಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಅವನು ನಿಮಗೆ ಪವಿತ್ರಾತ್ಮದಿಂದಲೂ ಬೆಂಕಿಯಿಂದಲೂ ದೀಕ್ಷಾಸ್ನಾನ ಮಾಡಿಸುವನು. 12 ಅವನ ಕೇರುವ ಮೊರವು ಅವನ ಕೈಯಲ್ಲಿದೆ ಮತ್ತು ಅವನು ತನ್ನ ಕಣವನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಸುವನು; ಆದರೆ ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಹೇಳಿದನು.
13 ಆಗ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿಕ್ಕಾಗಿ ಯೇಸು ಗಲಿಲಾಯದಿಂದ ಯೋರ್ದನ್ ನದಿಯ ಬಳಿಗೆ ಬಂದನು. 14 ಆದರೆ ಯೋಹಾನನು ಅವನನ್ನು ತಡೆಯಲು ಪ್ರಯತ್ನಿಸುತ್ತಾ, “ನಾನು ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿರುವಾಗ ನೀನು ನನ್ನ ಬಳಿಗೆ ಬರುತ್ತೀಯಾ?” ಎಂದು ಕೇಳಿದನು. 15 ಅದಕ್ಕೆ ಉತ್ತರವಾಗಿ ಯೇಸು ಅವನಿಗೆ, “ನನ್ನನ್ನು ತಡೆಯಬೇಡ, ಏಕೆಂದರೆ ಈ ರೀತಿಯಲ್ಲಿ ನೀತಿಯುತವಾಗಿರುವುದೆಲ್ಲವನ್ನೂ ನಡಿಸುವುದು ನಮಗೆ ಸೂಕ್ತವಾದದ್ದಾಗಿದೆ” ಎಂದು ಹೇಳಿದನು. ಆಗ ಅವನು ತಡೆಯುವುದನ್ನು ನಿಲ್ಲಿಸಿದನು. 16 ಯೇಸು ದೀಕ್ಷಾಸ್ನಾನ ಪಡೆದುಕೊಂಡ ಬಳಿಕ ನೀರಿನಿಂದ ಕೂಡಲೆ ಮೇಲಕ್ಕೆ ಬರಲು, ಇಗೋ! ಆಕಾಶವು ತೆರೆಯಲ್ಪಟ್ಟಿತು ಮತ್ತು ದೇವರಾತ್ಮವು ಪಾರಿವಾಳದ ರೂಪದಲ್ಲಿ ಅವನ ಮೇಲೆ ಇಳಿದುಬರುತ್ತಿರುವುದನ್ನು ಯೋಹಾನನು ಕಂಡನು. 17 ಇದಲ್ಲದೆ ಆಕಾಶದಿಂದ ಒಂದು ವಾಣಿಯು, “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ” ಎಂದು ಹೇಳಿತು.