ಅ. ಕಾರ್ಯ
2 ಪಂಚಾಶತ್ತಮ ಹಬ್ಬದ ದಿನವು ಮುಂದುವರಿಯುತ್ತಿದ್ದಾಗ ಅವರೆಲ್ಲರೂ ಒಂದೇ ಸ್ಥಳದಲ್ಲಿ ಕೂಡಿಬಂದಿದ್ದರು. 2 ಆಗ ರಭಸವಾಗಿ ಗಾಳಿಯು ಬೀಸುತ್ತಿದೆಯೋ ಎಂಬಂತೆ ಒಂದು ಶಬ್ದವು ಆಕಾಶದಿಂದ ಥಟ್ಟನೆ ಉಂಟಾಗಿ ಅವರು ಕುಳಿತುಕೊಂಡಿದ್ದ ಮನೆಯನ್ನೆಲ್ಲ ತುಂಬಿಕೊಂಡಿತು. 3 ಬೆಂಕಿಯ ಉರಿಯಂತಿದ್ದ ನಾಲಿಗೆಗಳು ಅವರಿಗೆ ಕಾಣಿಸಿಕೊಂಡವು ಮತ್ತು ಅವು ವಿಂಗಡವಾಗಿ ಅವರಲ್ಲಿ ಪ್ರತಿಯೊಬ್ಬರ ಮೇಲೆ ಒಂದೊಂದಾಗಿ ಕುಳಿತುಕೊಂಡವು. 4 ಆಗ ಅವರೆಲ್ಲರೂ ಪವಿತ್ರಾತ್ಮದಿಂದ ತುಂಬಿದವರಾಗಿ, ಆ ಆತ್ಮವು * ತಮಗೆ ಮಾತಾಡಲು ಶಕ್ತಿಯನ್ನು ಕೊಡುತ್ತಿದ್ದ ಪ್ರಕಾರ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಲಾರಂಭಿಸಿದರು.
5 ಈ ಸಮಯದಲ್ಲಿ ಆಕಾಶದ ಕೆಳಗಿರುವ ಪ್ರತಿಯೊಂದು ದೇಶದಿಂದ ಬಂದ ದೇವಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿ ತಂಗಿದ್ದರು. 6 ಈ ಶಬ್ದವು ಕೇಳಿಬಂದಾಗ ಜನರು ಗುಂಪಾಗಿ ಕೂಡಿಬಂದರು ಮತ್ತು ಅವರಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಭಾಷೆಯಲ್ಲಿ ಶಿಷ್ಯರು ಮಾತಾಡುತ್ತಿರುವುದನ್ನು ಕೇಳಿಸಿಕೊಂಡು ದಿಗ್ಭ್ರಮೆಗೊಂಡನು. 7 ವಾಸ್ತವದಲ್ಲಿ ಅವರು ಅತ್ಯಾಶ್ಚರ್ಯದಿಂದ ಬೆರಗಾಗಿ ಹೇಳಿದ್ದು: “ಇಲ್ಲಿ ನೋಡಿ, ಮಾತಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ? 8 ಹಾಗಿರುವಾಗ ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ನಮ್ಮ ಸ್ವಂತ ಭಾಷೆಯಲ್ಲಿ ಇವರು ಮಾತಾಡುವುದನ್ನು ಕೇಳಿಸಿಕೊಳ್ಳುತ್ತಿರುವುದು ಹೇಗೆ? 9 ಪಾರ್ಥ್ಯರೂ ಮೇದ್ಯರೂ ಏಲಾಮ್ಯರೂ ಮೆಸಪಟೇಮ್ಯದ ನಿವಾಸಿಗಳೂ ಯೂದಾಯ ಕಪದೋಷೀಯ ಪೊಂತ ಏಷ್ಯಾ ಪ್ರಾಂತ 10 ಫ್ರುಗ್ಯ ಪಂಫುಲ್ಯ ಈಜಿಪ್ಟ್ ಕುರೇನೆಯ ಕಡೆಗಿರುವ ಲಿಬ್ಯದ ಭಾಗಗಳಲ್ಲಿ ವಾಸವಾಗಿರುವವರೂ ರೋಮ್ ಪಟ್ಟಣದಿಂದ ಬಂದು ಇಳಿದಿರುವ ಯೆಹೂದ್ಯರೂ ಯೆಹೂದ್ಯ ಮತಾವಲಂಬಿಗಳೂ 11 ಕ್ರೇತ್ಯರೂ ಅರಬೀದೇಶದವರೂ ಆಗಿರುವ ನಾವು ನಮ್ಮ ನಮ್ಮ ಭಾಷೆಗಳಲ್ಲಿ ಇವರು ದೇವರ ಮಹೋನ್ನತ ಕಾರ್ಯಗಳ ವಿಷಯವಾಗಿ ಮಾತಾಡುತ್ತಿರುವುದನ್ನು ಕೇಳುತ್ತಿದ್ದೇವಲ್ಲಾ!” 12 ಅವರೆಲ್ಲರೂ ಬೆರಗಾಗಿ ಕಳವಳಗೊಂಡು, “ಇದೆಲ್ಲ ಏನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 13 ಆದರೆ ಬೇರೆ ಕೆಲವರು ಅವರನ್ನು ಅಪಹಾಸ್ಯಮಾಡಿ, “ಇವರು ಸಿಹಿ ದ್ರಾಕ್ಷಾಮದ್ಯದಿಂದ ಮತ್ತರಾಗಿದ್ದಾರೆ” ಎಂದು ಹೇಳತೊಡಗಿದರು.
14 ಆಗ ಪೇತ್ರನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತು ಗಟ್ಟಿಯಾದ ಸ್ವರದಿಂದ ಅವರಿಗೆ ಹೀಗೆ ಪ್ರಬೋಧಿಸಿದನು: “ಯೂದಾಯದವರೇ ಮತ್ತು ಯೆರೂಸಲೇಮಿನ ಸರ್ವ ನಿವಾಸಿಗಳೇ, ಇದು ನಿಮಗೆ ತಿಳಿದಿರಲಿ ಹಾಗೂ ನನ್ನ ಮಾತುಗಳಿಗೆ ಕಿವಿಗೊಡಿರಿ. 15 ನೀವು ಊಹಿಸಿದಂತೆ ಈ ಜನರು ಕುಡಿದು ಮತ್ತರಾಗಿಲ್ಲ; ಈಗ ಬೆಳಗ್ಗೆ ಒಂಬತ್ತು ಗಂಟೆಯಾಗಿದೆಯಷ್ಟೆ. 16 ಆದರೆ ಪ್ರವಾದಿಯಾದ ಯೋವೇಲನ ಮೂಲಕ ಹೀಗೆ ತಿಳಿಸಲಾಗಿತ್ತು, 17 ‘ “ಕಡೇ ದಿವಸಗಳಲ್ಲಿ ನಾನು ಎಲ್ಲ ಮನುಷ್ಯರ ಮೇಲೆ ನನ್ನ ಪವಿತ್ರಾತ್ಮವನ್ನು ಸುರಿಸುವೆನು; ಆಗ ನಿಮ್ಮ ಪುತ್ರರೂ ಪುತ್ರಿಯರೂ ಪ್ರವಾದಿಸುವರು ಮತ್ತು ನಿಮ್ಮ ಯುವಕರು ದರ್ಶನಗಳನ್ನು ನೋಡುವರು ಹಾಗೂ ನಿಮ್ಮ ವೃದ್ಧರು ಕನಸುಗಳನ್ನು ಕಾಣುವರು; 18 ಮಾತ್ರವಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ ನನ್ನ ಪವಿತ್ರಾತ್ಮವನ್ನು ಸುರಿಸುವೆನು ಮತ್ತು ಅವರು ಪ್ರವಾದಿಸುವರು. 19 ನಾನು, ಮೇಲೆ ಆಕಾಶದಲ್ಲಿ ಆಶ್ಚರ್ಯಕಾರ್ಯಗಳನ್ನೂ ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ, ರಕ್ತ ಬೆಂಕಿ ಹೊಗೆಮಂಜನ್ನು ಉಂಟುಮಾಡುವೆನು; 20 ಯೆಹೋವನ ಮಹತ್ತಾದ ಹಾಗೂ ಪ್ರಖ್ಯಾತವಾದ ದಿನವು ಬರುವುದಕ್ಕೆ ಮುಂಚೆ ಸೂರ್ಯನು ಕತ್ತಲಾಗುವನು ಮತ್ತು ಚಂದ್ರನು ರಕ್ತವಾಗುವನು. 21 ಆದರೆ ಯೆಹೋವನ ನಾಮದಲ್ಲಿ ಕೋರುವ ಪ್ರತಿಯೊಬ್ಬನೂ ರಕ್ಷಿಸಲ್ಪಡುವನು” ಎಂದು ದೇವರು ಹೇಳುತ್ತಾನೆ.’
22 “ಇಸ್ರಾಯೇಲ್ ಜನರೇ, ಈ ಮಾತುಗಳನ್ನು ಕೇಳಿರಿ. ನಿಮಗೆ ತಿಳಿದಿರುವಂತೆ, ದೇವರು ನಿಮ್ಮ ಮಧ್ಯೆ ಯಾರ ಮೂಲಕ ಮಹತ್ಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡಿದನೋ ಆ ನಜರೇತಿನ ಯೇಸುವನ್ನು, 23 ದೇವರ ನಿಶ್ಚಿತ ಯೋಜನೆ ಮತ್ತು ಮುನ್ನರಿವಿಗನುಸಾರ ನಿಮಗೆ ಒಪ್ಪಿಸಲ್ಪಟ್ಟ ಈ ಮನುಷ್ಯನನ್ನು ನೀವು ನಿಯಮರಹಿತ ಜನರ ಕೈಯಿಂದ ಕಂಬಕ್ಕೆ ಜಡಿದು ಕೊಂದಿರಿ. 24 ಆದರೆ ದೇವರು ಅವನನ್ನು ಮರಣದ ಶೂಲೆಯಿಂದ ಬಿಡಿಸಿ ಪುನರುತ್ಥಾನಗೊಳಿಸಿದನು; ಏಕೆಂದರೆ ಮರಣವು ಅವನನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡಿರುವುದು ಅಸಾಧ್ಯವಾಗಿತ್ತು. 25 ದಾವೀದನು ಅವನ ಕುರಿತಾಗಿ ತಿಳಿಸಿದ್ದು: ‘ಯೆಹೋವನನ್ನು ಯಾವಾಗಲೂ ನನ್ನ ಕಣ್ಣೆದುರಿಗೇ ಇಟ್ಟುಕೊಂಡಿದ್ದೆ; ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನೆಂದಿಗೂ ಕದಲಿಸಲ್ಪಡೆನು. 26 ಆದಕಾರಣ ನನ್ನ ಹೃದಯವು ಉಲ್ಲಾಸಗೊಂಡಿತು ಮತ್ತು ನನ್ನ ನಾಲಿಗೆಯು ಬಹಳವಾಗಿ ಹರ್ಷಿಸಿತು. ಮಾತ್ರವಲ್ಲದೆ, ನನ್ನ ಶರೀರವೂ ನಿರೀಕ್ಷೆಯಲ್ಲಿ ನೆಲೆಯಾಗಿರುವುದು; 27 ಏಕೆಂದರೆ ನೀನು ನನ್ನ ಪ್ರಾಣವನ್ನು ಹೇಡೀಸ್ನಲ್ಲಿ * ಬಿಡುವುದೂ ಇಲ್ಲ, ನಿನ್ನ ನಿಷ್ಠಾವಂತನನ್ನು ಕೊಳೆಯುವಂತೆ ಬಿಡುವುದೂ ಇಲ್ಲ. 28 ನೀನು ಜೀವದ ಮಾರ್ಗಗಳನ್ನು ನನಗೆ ತಿಳಿಯಪಡಿಸಿದ್ದೀ; ನೀನು ನಿನ್ನ ಅನುಗ್ರಹದಿಂದ * ನನ್ನಲ್ಲಿ ಮಹದಾನಂದವನ್ನು ತುಂಬಿಸುವಿ.’
29 “ಜನರೇ, ಸಹೋದರರೇ, ಕುಟುಂಬ ತಲೆಯಾದ ದಾವೀದನ ಕುರಿತಾಗಿ ನಾನು ನಿಮ್ಮೊಂದಿಗೆ ವಾಕ್ಸರಳತೆಯಿಂದ ಮಾತಾಡಬಹುದು; ಅವನು ಮರಣಹೊಂದಿ ಹೂಣಲ್ಪಟ್ಟನು ಮತ್ತು ಅವನ ಸಮಾಧಿಯು ಈ ದಿನದ ವರೆಗೂ ನಮ್ಮಲ್ಲಿ ಇದೆ. 30 ಅವನು ಪ್ರವಾದಿಯಾಗಿದ್ದು ಅವನ ಸಂತತಿಯವರಲ್ಲಿ ಒಬ್ಬನು ಅವನ ಸಿಂಹಾಸನದಲ್ಲಿ ಕುಳಿತುಕೊಳ್ಳುವನೆಂದು ದೇವರು ಪ್ರಮಾಣಮಾಡಿ ಹೇಳಿದ್ದು ಅವನಿಗೆ ತಿಳಿದಿದ್ದ ಕಾರಣ, 31 ಕ್ರಿಸ್ತನ ಪುನರುತ್ಥಾನದ ಕುರಿತು ಮುಂಚಿತವಾಗಿಯೇ ನೋಡಿ ಅದರ ಕುರಿತು ಮಾತಾಡಿದನು; ಅದೇನೆಂದರೆ ‘ಅವನು ಹೇಡೀಸ್ನಲ್ಲಿ ಬಿಡಲ್ಪಡಲಿಲ್ಲ ಅಥವಾ ಅವನ ಶರೀರವು ಕೊಳೆತುಹೋಗಲಿಲ್ಲ.’ 32 ಈ ಯೇಸುವನ್ನು ದೇವರು ಪುನರುತ್ಥಾನಗೊಳಿಸಿದನು ಮತ್ತು ಇದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. 33 ಅವನು ದೇವರ ಬಲಗಡೆಯ ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ವಾಗ್ದಾನಿಸಲ್ಪಟ್ಟ ಪವಿತ್ರಾತ್ಮವನ್ನು ಹೊಂದಿರುವ ಕಾರಣ ಅದನ್ನು ನಮ್ಮ ಮೇಲೆ ಸುರಿಸಿದ್ದಾನೆ; ಇದನ್ನೇ ನೀವು ಕಂಡು ಕೇಳುತ್ತಾ ಇದ್ದೀರಿ. 34 ದಾವೀದನು ನಿಜಕ್ಕೂ ಸ್ವರ್ಗಕ್ಕೆ ಏರಿಹೋಗಲಿಲ್ಲ, ಆದರೆ ಅವನು ತಾನೇ ಹೇಳುವುದು: ‘ಯೆಹೋವನು ನನ್ನ ಕರ್ತನಿಗೆ, 35 “ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.’ 36 ಆದುದರಿಂದ ನೀವು ಶೂಲಕ್ಕೇರಿಸಿದ ಈ ಯೇಸುವನ್ನು ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ ಎಂಬುದು ಇಸ್ರಾಯೇಲ್ ಮನೆತನದವರೆಲ್ಲರಿಗೆ ನಿಶ್ಚಯವಾಗಿಯೂ ತಿಳಿದಿರಲಿ.”
37 ಜನರು ಇದನ್ನು ಕೇಳಿಸಿಕೊಂಡಾಗ ಹೃದಯದಲ್ಲಿ ಇರಿಯಲ್ಪಟ್ಟು, “ಜನರೇ, ಸಹೋದರರೇ, ನಾವು ಏನು ಮಾಡಬೇಕು?” ಎಂದು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ ಕೇಳಿದರು. 38 ಅದಕ್ಕೆ ಪೇತ್ರನು ಅವರಿಗೆ, “ಪಶ್ಚಾತ್ತಾಪಪಡಿರಿ ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರು ನಿಮ್ಮ ಪಾಪಗಳ ಕ್ಷಮಾಪಣೆಗಾಗಿ ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಿರಿ; ಆಗ ನೀವು ಪವಿತ್ರಾತ್ಮದ ಉಚಿತ ವರವನ್ನು ಪಡೆದುಕೊಳ್ಳುವಿರಿ. 39 ಈ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರದಲ್ಲಿರುವವರೆಲ್ಲರಿಗೂ ಮತ್ತು ನಮ್ಮ ದೇವರಾದ ಯೆಹೋವನು ತನ್ನ ಕಡೆಗೆ ಕರೆಯಬಹುದಾದ ಎಲ್ಲರಿಗೂ ಮಾಡಲ್ಪಟ್ಟಿದೆ” ಎಂದು ಹೇಳಿದನು. 40 ಇನ್ನೂ ಅನೇಕ ಮಾತುಗಳಿಂದ ಅವನು ಕೂಲಂಕಷವಾದ ಸಾಕ್ಷಿಯನ್ನು ಕೊಟ್ಟು, “ವಕ್ರಬುದ್ಧಿಯುಳ್ಳ ಈ ಸಂತತಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿರಿ” ಎಂದು ಅವರಿಗೆ ಎಚ್ಚರಿಕೆ ನೀಡುತ್ತಾ ಇದ್ದನು. 41 ಅವನ ಮಾತನ್ನು ಹೃದಯದಾಳದಿಂದ ಸ್ವೀಕರಿಸಿದವರು ದೀಕ್ಷಾಸ್ನಾನ ಪಡೆದರು ಮತ್ತು ಆ ದಿನದಲ್ಲಿ ಸುಮಾರು ಮೂರು ಸಾವಿರ ಜನರು ಕೂಡಿಸಲ್ಪಟ್ಟರು. 42 ಅವರು ಅಪೊಸ್ತಲರ ಬೋಧನೆಗೆ, ಪರಸ್ಪರವಾಗಿ ಹಂಚಿಕೊಳ್ಳುವುದಕ್ಕೆ, ಭೋಜನಗಳಿಗೆ ಮತ್ತು ಪ್ರಾರ್ಥನೆಗಳಿಗೆ ತಮ್ಮನ್ನು ಮೀಸಲಾಗಿಟ್ಟುಕೊಳ್ಳುತ್ತಿದ್ದರು.
43 ಪ್ರತಿಯೊಬ್ಬರೂ ಭಯಭೀತರಾಗತೊಡಗಿದರು ಮತ್ತು ಅಪೊಸ್ತಲರ ಮೂಲಕ ಅನೇಕ ಆಶ್ಚರ್ಯಕಾರ್ಯಗಳೂ ಸೂಚಕಕಾರ್ಯಗಳೂ ನಡೆಸಲ್ಪಟ್ಟವು. 44 ವಿಶ್ವಾಸಿಗಳಾದವರೆಲ್ಲರೂ ಎಲ್ಲವನ್ನೂ ಸಮಾನವಾಗಿ ಅನುಭವಿಸುವುದರಲ್ಲಿ ಒಟ್ಟಾಗಿದ್ದರು; 45 ಅವರು ತಮ್ಮ ಸ್ವತ್ತುಗಳನ್ನೂ ಆಸ್ತಿಗಳನ್ನೂ ಮಾರಿ ಬಂದ ಹಣವನ್ನು ಎಲ್ಲರಿಗೂ ಅವರವರ ಆವಶ್ಯಕತೆಗನುಸಾರ ಹಂಚಿಕೊಡುತ್ತಾ ಇದ್ದರು. 46 ಪ್ರತಿದಿನವೂ ಅವರು ಏಕಮನಸ್ಸಿನಿಂದ ದೇವಾಲಯದಲ್ಲಿ ಎಡೆಬಿಡದೆ ಕೂಡಿಬರುತ್ತಾ ಇದ್ದರು; ಅವರು ಖಾಸಗಿ ಮನೆಗಳಲ್ಲಿ ಊಟಮಾಡಿ ಮಹದಾನಂದದಿಂದಲೂ ಯಥಾರ್ಥ ಹೃದಯದಿಂದಲೂ ಆಹಾರವನ್ನು ಸೇವಿಸಿದರು. 47 ಅವರು ದೇವರನ್ನು ಸ್ತುತಿಸುತ್ತಾ ಜನರೆಲ್ಲರ ಮೆಚ್ಚುಗೆಗೆ ಪಾತ್ರರಾದರು. ಅದೇ ಸಮಯದಲ್ಲಿ ರಕ್ಷಿಸಲ್ಪಡುತ್ತಿದ್ದವರನ್ನು ಯೆಹೋವನು ಪ್ರತಿದಿನವೂ ಅವರೊಂದಿಗೆ ಸೇರಿಸುತ್ತಾ ಇದ್ದನು.