ಎಫೆಸ
1 ದೇವರ ಚಿತ್ತದ ಮೂಲಕ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಎಫೆಸದಲ್ಲಿರುವ ಪವಿತ್ರ ಜನರಿಗೂ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿರುವ ನಂಬಿಗಸ್ತರಿಗೂ ಬರೆಯುವುದೇನೆಂದರೆ,
2 ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಉಂಟಾಗಲಿ.
3 ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ; ಆತನು ನಮ್ಮನ್ನು ಎಲ್ಲ ರೀತಿಯ ಆಧ್ಯಾತ್ಮಿಕ ಆಶೀರ್ವಾದಗಳೊಂದಿಗೆ ಸ್ವರ್ಗೀಯ ಸ್ಥಳಗಳಲ್ಲಿ ಕ್ರಿಸ್ತನೊಂದಿಗೆ ಐಕ್ಯದಲ್ಲಿ ಆಶೀರ್ವದಿಸಿದ್ದಾನೆ. 4 ಹೇಗೆಂದರೆ ನಾವು ಆತನ ಮುಂದೆ ಪ್ರೀತಿಯಲ್ಲಿ ನಡೆದು ಪರಿಶುದ್ಧರೂ ದೋಷವಿಲ್ಲದವರೂ ಆಗಿರುವಂತೆ ಆತನು ನಮ್ಮನ್ನು ಲೋಕಾದಿಗಿಂತ ಮುಂಚೆಯೇ ಕ್ರಿಸ್ತನೊಂದಿಗೆ ಐಕ್ಯದಲ್ಲಿ ಆರಿಸಿಕೊಂಡನು. 5 ಆತನು ತನ್ನ ಚಿತ್ತದ ಸುಸಂತೋಷಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನಗೋಸ್ಕರ ಪುತ್ರರಾಗಿ ದತ್ತುತೆಗೆದುಕೊಳ್ಳಲು ಪೂರ್ವನಿಶ್ಚಯಮಾಡಿದನು. 6 ತನ್ನ ಮಹಿಮಾಭರಿತ ಅಪಾತ್ರ ದಯೆಯು ಸ್ತುತಿಸಲ್ಪಡುವಂತೆ ಇದನ್ನು ಮಾಡಿದನು ಮತ್ತು ಈ ಅಪಾತ್ರ ದಯೆಯನ್ನು ತನ್ನ ಪ್ರಿಯನ ಮೂಲಕ ಕುರುಣೆಯಿಂದ ನಮಗೆ ಕೊಟ್ಟನು. 7 ಅವನ ಮೂಲಕ ಅಂದರೆ ಆ ಒಬ್ಬನ ರಕ್ತದ ಮೂಲಕ ದೊರೆತ ವಿಮೋಚನಾ ಮೌಲ್ಯದ ಮುಖಾಂತರ ನಮಗೆ ಬಿಡುಗಡೆಯಾಯಿತು; ಹೌದು, ದೇವರ ಅಪಾತ್ರ ದಯೆಯ ಔದಾರ್ಯದಿಂದ ನಮ್ಮ ಅಪರಾಧಗಳು ಕ್ಷಮಿಸಲ್ಪಟ್ಟವು.
8 ಸಕಲ ವಿವೇಕ ಮತ್ತು ಬುದ್ಧಿಶಕ್ತಿಯೊಂದಿಗೆ ಆತನು ನಮಗೆ ಈ ಅಪಾತ್ರ ದಯೆಯನ್ನು ಹೇರಳವಾಗಿ ನೀಡಿದ್ದಾನೆ; 9 ಹೇಗೆಂದರೆ ಆತನು ನಮಗೆ ತನ್ನ ಚಿತ್ತದ ಪವಿತ್ರ ರಹಸ್ಯವನ್ನು ತಿಳಿಯಪಡಿಸಿದನು. ಇದು ಆತನು ತನ್ನಲ್ಲಿ ಉದ್ದೇಶಿಸಿದ ತನ್ನ ಸುಸಂತೋಷಕ್ಕನುಸಾರವಾದದ್ದು. 10 ಅದೇನೆಂದರೆ ನೇಮಿತ ಕಾಲದ ಪರಿಮಿತಿಯು ಪೂರ್ಣಗೊಂಡಾಗ, ಒಂದು ಆಡಳಿತದ ಮೂಲಕ ಸ್ವರ್ಗದಲ್ಲಿರುವ ವಿಷಯಗಳನ್ನೂ ಭೂಮಿಯಲ್ಲಿರುವ ವಿಷಯಗಳನ್ನೂ ಹೀಗೆ ಸಮಸ್ತವನ್ನು ಕ್ರಿಸ್ತನಲ್ಲಿ ಪುನಃ ಒಂದುಗೂಡಿಸುವುದೇ. ಹೌದು ಕ್ರಿಸ್ತನಲ್ಲಿ, 11 ಅವನೊಂದಿಗೆ ಐಕ್ಯದಲ್ಲಿ ನಾವು ಸಹ ಬಾಧ್ಯಸ್ಥರಾಗಿ ನೇಮಿಸಲ್ಪಟ್ಟೆವು; ತನ್ನ ಚಿತ್ತವು ಮಾರ್ಗದರ್ಶಿಸುವ ಪ್ರಕಾರ ಸಮಸ್ತ ಕಾರ್ಯಗಳನ್ನು ನಡೆಸುವಂಥ ದೇವರು ತನ್ನ ಉದ್ದೇಶಕ್ಕನುಸಾರ ನಮ್ಮನ್ನು ಪೂರ್ವನಿಶ್ಚಯಮಾಡಿದನು. 12 ಹೀಗೆ ಕ್ರಿಸ್ತನಲ್ಲಿ ಮೊದಲು ನಿರೀಕ್ಷೆಯಿಟ್ಟವರಾದ ನಾವು ದೇವರ ಮಹಿಮೆಯ ಸ್ತುತಿಗಾಗಿ ಸೇವೆಮಾಡಬೇಕು. 13 ನೀವು ಸಹ ಸತ್ಯದ ವಾಕ್ಯವನ್ನು ಅಂದರೆ ನಿಮ್ಮ ರಕ್ಷಣೆಯ ಕುರಿತಾದ ಸುವಾರ್ತೆಯನ್ನು ಕೇಳಿಸಿಕೊಂಡ ಬಳಿಕ ಅವನಲ್ಲಿ ನಿರೀಕ್ಷೆಯಿಟ್ಟಿರಿ. ನೀವು ನಂಬಿಕೆಯಿಟ್ಟ ಬಳಿಕ ಅವನ ಮೂಲಕವಾಗಿಯೇ ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮದಿಂದ * ಮುದ್ರೆಹೊಂದಿದಿರಿ. 14 ಅದು ನಮಗೆ ದೊರಕಲಿರುವ ಬಾಧ್ಯತೆಯ ಮುಂಗಡ ಗುರುತಾಗಿದೆ; ದೇವರ ಸ್ವಂತ ಆಸ್ತಿಯಾದ ನಮ್ಮನ್ನು ವಿಮೋಚನಾ ಮೌಲ್ಯದ ಮೂಲಕ ಬಿಡುಗಡೆಮಾಡುವ ಮತ್ತು ಆತನಿಗೆ ಮಹಿಮಾಭರಿತ ಸ್ತುತಿಯನ್ನು ಉಂಟುಮಾಡುವ ಉದ್ದೇಶಕ್ಕಾಗಿ ಆ ಮುದ್ರೆಯನ್ನು ಹೊಂದಿದಿರಿ.
15 ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯ ಕುರಿತು ಮತ್ತು ಎಲ್ಲ ಪವಿತ್ರ ಜನರ ಕಡೆಗೆ ನೀವು ಆ ನಂಬಿಕೆಯನ್ನು ತೋರಿಸುವುದರ ಕುರಿತು ನಾನು ಕೇಳಿಸಿಕೊಂಡಿರುವುದರಿಂದಲೇ ನಾನು ಸಹ 16 ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸುವುದನ್ನು ನಿಲ್ಲಿಸಲಿಲ್ಲ. ನನ್ನ ಪ್ರಾರ್ಥನೆಗಳಲ್ಲಿ ನಿಮ್ಮ ಕುರಿತು ಕೇಳಿಕೊಳ್ಳುತ್ತಾ ನಿಮಗೆ, 17 ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಭರಿತ ತಂದೆಯೂ ಆಗಿರುವಾತನು ತನ್ನ ನಿಷ್ಕೃಷ್ಟ ಜ್ಞಾನದಲ್ಲಿ ವಿವೇಕ ಮತ್ತು ಪ್ರಕಟನೆಯ ಪ್ರೇರಕ ಶಕ್ತಿಯನ್ನು ದಯಪಾಲಿಸುವಂತೆ ಬೇಡಿಕೊಳ್ಳುತ್ತೇನೆ. 18 ನಿಮ್ಮ ಹೃದಯದ ಕಣ್ಣುಗಳು ಜ್ಞಾನೋದಯಗೊಳಿಸಲ್ಪಟ್ಟು, ಆತನು ನಿಮ್ಮನ್ನು ಯಾವ ನಿರೀಕ್ಷೆಗಾಗಿ ಕರೆದನೆಂಬುದನ್ನೂ ಪವಿತ್ರ ಜನರಿಗಾಗಿ ಆತನು ಬಾಧ್ಯತೆಯಾಗಿ ಇಟ್ಟಿರುವ ಮಹಿಮಾಭರಿತ ಐಶ್ವರ್ಯವು ಏನಾಗಿದೆಯೆಂಬುದನ್ನೂ 19 ನಂಬುವವರಾದ ನಮ್ಮ ಕಡೆಗೆ ಆತನ ಶಕ್ತಿಯು ಎಷ್ಟು ಮಹತ್ತರವಾದದ್ದೆಂಬುದನ್ನೂ ನೀವು ತಿಳಿದುಕೊಳ್ಳುವಂತಾಗುವುದು. ಇದು ಆತನ ಶಕ್ತಿಯ ಬಲಾಢ್ಯ ಕಾರ್ಯಾಚರಣೆಗೆ ಅನುಸಾರವಾಗಿದೆ. 20 ಆತನು ಈ ಶಕ್ತಿಯನ್ನೇ ಉಪಯೋಗಿಸಿ ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿ ಸ್ವರ್ಗೀಯ ಸ್ಥಳಗಳಲ್ಲಿ ತನ್ನ ಬಲಗಡೆಯಲ್ಲಿ ಕೂರಿಸಿಕೊಂಡನು. 21 ಆ ಸ್ವರ್ಗೀಯ ಸ್ಥಳಗಳು ಎಲ್ಲ ಸರಕಾರಕ್ಕಿಂತಲೂ ಅಧಿಕಾರಕ್ಕಿಂತಲೂ ಶಕ್ತಿಗಿಂತಲೂ ಪ್ರಭುತ್ವಕ್ಕಿಂತಲೂ ಮತ್ತು ಈ ವಿಷಯಗಳ ವ್ಯವಸ್ಥೆಯಲ್ಲಿ ಮಾತ್ರವಲ್ಲ ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿಯೂ ಹೆಸರಿಸಲ್ಪಟ್ಟವರೆಲ್ಲರ ಹೆಸರಿಗಿಂತಲೂ ಮಿಗಿಲಾದವುಗಳಾಗಿವೆ. 22 ಆತನು ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದನು ಮತ್ತು ಸಭೆಯ ಒಳಿತಿಗಾಗಿ ಅವನನ್ನು ಎಲ್ಲವುಗಳ ಮೇಲೆ ಶಿರಸ್ಸಾಗಿ ನೇಮಿಸಿದನು. 23 ಸಭೆಯು ಅವನ ದೇಹವಾಗಿದೆ; ಅದು ಎಲ್ಲವನ್ನು ಎಲ್ಲದರಲ್ಲಿ ತುಂಬಿಸುವವನ ಪೂರ್ಣತೆಯಾಗಿದೆ.