1 ಥೆಸಲೊನೀಕ
1 ತಂದೆಯಾದ ದೇವರೊಂದಿಗೂ ಕರ್ತನಾದ ಯೇಸು ಕ್ರಿಸ್ತನೊಂದಿಗೂ ಐಕ್ಯದಲ್ಲಿರುವ ಥೆಸಲೊನೀಕದವರ ಸಭೆಗೆ ಪೌಲನೂ ಸಿಲ್ವಾನನೂ ತಿಮೊಥೆಯನೂ ಬರೆಯುವುದೇನೆಂದರೆ,
ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಉಂಟಾಗಲಿ.
2 ನಮ್ಮ ಪ್ರಾರ್ಥನೆಗಳಲ್ಲಿ ನಿಮ್ಮೆಲ್ಲರ ಕುರಿತು ತಿಳಿಸುವಾಗ ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. 3 ನಿಮ್ಮ ನಂಬಿಗಸ್ತ ಕ್ರಿಯೆಯನ್ನು, ನಿಮ್ಮ ಪ್ರೀತಿಪೂರ್ವಕ ಪ್ರಯಾಸವನ್ನು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಿಮಗಿರುವ ನಿರೀಕ್ಷೆಯಿಂದ ಉಂಟಾದ ನಿಮ್ಮ ತಾಳ್ಮೆಯನ್ನು ನಾವು ನಮ್ಮ ದೇವರೂ ತಂದೆಯೂ ಆಗಿರುವಾತನ ಮುಂದೆ ಎಡೆಬಿಡದೆ ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ. 4 ದೇವರಿಂದ ಪ್ರೀತಿಸಲ್ಪಡುವ ಸಹೋದರರೇ, ಆತನೇ ನಿಮ್ಮನ್ನು ಆರಿಸಿಕೊಂಡಿದ್ದಾನೆ ಎಂಬುದನ್ನು ನಾವು ಬಲ್ಲೆವು. 5 ಏಕೆಂದರೆ ನಾವು ನಿಮಗೆ ಸಾರಿದ ಸುವಾರ್ತೆಯು ನಿಮ್ಮ ಮಧ್ಯೆ ಬರಿಯ ಮಾತಾಗಿ ಬಾರದೆ ಶಕ್ತಿಯಿಂದಲೂ ಪವಿತ್ರಾತ್ಮದಿಂದಲೂ * ಬಲವಾದ ನಿಶ್ಚಿತಾಭಿಪ್ರಾಯದಿಂದಲೂ ಬಂತೆಂಬುದನ್ನು ನಾವು ಬಲ್ಲೆವು; ಹಾಗೆಯೇ ನಿಮಗೋಸ್ಕರ ನಾವು ಎಂಥವರಾದೆವು ಎಂಬುದೂ ನಿಮಗೆ ತಿಳಿದಿದೆ. 6 ನೀವು ಬಹಳ ಸಂಕಟದ ಕೆಳಗೆ ಪವಿತ್ರಾತ್ಮದಿಂದ ಉಂಟಾಗುವ ಆನಂದದಿಂದ ವಾಕ್ಯವನ್ನು ಸ್ವೀಕರಿಸಿ ನಮ್ಮನ್ನೂ ಕರ್ತನನ್ನೂ ಅನುಕರಿಸುವವರಾದಿರಿ. 7 ಹೀಗೆ ನೀವು ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಇರುವ ಎಲ್ಲ ವಿಶ್ವಾಸಿಗಳಿಗೆ ಮಾದರಿಯಾದಿರಿ.
8 ವಾಸ್ತವದಲ್ಲಿ, ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ನಿಮ್ಮಿಂದಲೇ ಯೆಹೋವನ ವಾಕ್ಯವು ಘೋಷಿಸಲ್ಪಟ್ಟಿರುವುದು ಮಾತ್ರವಲ್ಲದೆ ದೇವರ ಕಡೆಗೆ ನಿಮಗಿರುವ ನಂಬಿಕೆಯು ಎಲ್ಲ ಸ್ಥಳಗಳಲ್ಲಿಯೂ ವ್ಯಾಪಕವಾಗಿ ಪ್ರಸಿದ್ಧವಾಗಿದೆ; ಹೀಗಾಗಿ ಈ ವಿಷಯದಲ್ಲಿ ನಾವು ಏನೂ ಹೇಳಬೇಕಾಗಿಲ್ಲ. 9 ನಾವು ಮೊದಲು ನಿಮ್ಮಲ್ಲಿಗೆ ಹೇಗೆ ಬಂದೆವು ಎಂಬುದನ್ನೂ ನೀವು ಹೇಗೆ ನಿಮ್ಮ ವಿಗ್ರಹಗಳನ್ನು ಬಿಟ್ಟು ಜೀವವುಳ್ಳವನೂ ಸತ್ಯದೇವರೂ ಆಗಿರುವಾತನ ಸೇವೆಮಾಡಲಿಕ್ಕಾಗಿ ಆತನ ಕಡೆಗೆ ತಿರುಗಿಕೊಂಡು 10 ಆತನು ಸತ್ತವರೊಳಗಿಂದ ಎಬ್ಬಿಸಿದ ಆತನ ಮಗನೂ ಮುಂದೆ ಬರಲಿರುವ ದೇವರ ಕ್ರೋಧದಿಂದ ನಮ್ಮನ್ನು ತಪ್ಪಿಸುವವನೂ ಆಗಿರುವ ಯೇಸುವು ಸ್ವರ್ಗದಿಂದ ಬರುವುದನ್ನು ಕಾಯುತ್ತಾ ಇದ್ದೀರಿ ಎಂಬುದನ್ನೂ ಅವರು ತಾವೇ ವರದಿಸುತ್ತಾ ಇರುತ್ತಾರೆ.