1 ಥೆಸಲೊನೀಕ
2 ಸಹೋದರರೇ, ನಾವು ನಿಮಗೆ ನೀಡಿದ ಭೇಟಿಯು ಫಲಿತಾಂಶಗಳಿಲ್ಲದೆ ಇರಲಿಲ್ಲ ಎಂಬುದು ನಿಮಗೆ ತಿಳಿದಿದೆ ಎಂಬುದಂತು ಖಂಡಿತ. 2 (ನಿಮಗೆ ತಿಳಿದಿರುವಂತೆ) ಫಿಲಿಪ್ಪಿಯಲ್ಲಿ ನಾವು ಮೊದಲು ಕಷ್ಟವನ್ನು ಅನುಭವಿಸಿ ಅವಮಾನಿಸಲ್ಪಟ್ಟರೂ ಎಷ್ಟೋ ದೊಡ್ಡ ಹೋರಾಟದೊಂದಿಗೆ ದೇವರ ಸುವಾರ್ತೆಯನ್ನು ನಿಮಗೆ ತಿಳಿಸಲು ನಮ್ಮ ದೇವರ ಸಹಾಯದಿಂದ ಧೈರ್ಯವನ್ನು ಪಡೆದುಕೊಂಡೆವು. 3 ಏಕೆಂದರೆ ನಾವು ಕೊಡುವಂಥ ಬುದ್ಧಿವಾದವು ದೋಷದಿಂದಲೋ ಅಶುದ್ಧತೆಯಿಂದಲೋ ಮೋಸದಿಂದಲೋ ಕೂಡಿರುವುದಿಲ್ಲ. 4 ಸುವಾರ್ತೆಯನ್ನು ನಮ್ಮ ವಶಕ್ಕೆ ಒಪ್ಪಿಸಲು ನಾವು ಯೋಗ್ಯರೆಂದು ದೇವರಿಂದ ರುಜುಪಡಿಸಲ್ಪಟ್ಟಿರುವಂತೆಯೇ ನಾವು ಮನುಷ್ಯರನ್ನು ಮೆಚ್ಚಿಸಲಿಕ್ಕಾಗಿ ಅಲ್ಲ, ನಮ್ಮ ಹೃದಯಗಳನ್ನು ಪರಿಶೋಧಿಸುವವನಾಗಿರುವ ದೇವರನ್ನು ಮೆಚ್ಚಿಸಲಿಕ್ಕಾಗಿ ಮಾತಾಡುತ್ತೇವೆ.
5 ವಾಸ್ತವದಲ್ಲಿ, (ನಿಮಗೆ ತಿಳಿದಿರುವಂತೆ) ನಾವು ಎಂದೂ ಮುಖಸ್ತುತಿಮಾಡುವವರಾಗಿ ಅಥವಾ ದುರಾಶೆಗಾಗಿ ವೇಷಹಾಕಿಕೊಂಡವರಾಗಿ ನಿಮ್ಮ ಬಳಿಗೆ ಬರಲಿಲ್ಲ ಎಂಬುದಕ್ಕೆ ದೇವರೇ ಸಾಕ್ಷಿ! 6 ನಾವು ಕ್ರಿಸ್ತನ ಅಪೊಸ್ತಲರಾಗಿರುವ ಕಾರಣ ಅತಿ ಖರ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಹುದಾಗಿದ್ದರೂ ಮನುಷ್ಯರಿಂದ ಬರುವ ಮಹಿಮೆಯನ್ನು ನಿಮ್ಮಿಂದಾಗಲಿ ಇತರರಿಂದಾಗಲಿ ಪಡೆಯಲು ಬಯಸಲಿಲ್ಲ. 7 ಅದಕ್ಕೆ ಬದಲಾಗಿ ಒಬ್ಬ ತಾಯಿಯು ತನ್ನ ಮಕ್ಕಳಿಗೆ ಹಾಲುಣಿಸಿ ಪೋಷಿಸುವಂತೆಯೇ ನಾವು ನಿಮ್ಮ ಮಧ್ಯೆ ವಾತ್ಸಲ್ಯದಿಂದ ನಡೆದುಕೊಂಡೆವು. 8 ನೀವು ನಮಗೆ ಅತಿ ಪ್ರಿಯರಾದ ಕಾರಣ ನಿಮ್ಮ ವಿಷಯದಲ್ಲಿ ಕೋಮಲ ಮಮತೆಯುಳ್ಳವರಾಗಿದ್ದು ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ ನಮ್ಮ ಸ್ವಂತ ಪ್ರಾಣಗಳನ್ನೇ ಕೊಡುವುದಕ್ಕೂ ಸಂತೋಷಿಸಿದೆವು.
9 ಸಹೋದರರೇ, ನೀವು ನಮ್ಮ ಕೆಲಸವನ್ನೂ ಪರಿಶ್ರಮವನ್ನೂ ಮನಸ್ಸಿನಲ್ಲಿಟ್ಟುಕೊಂಡಿರುವುದು ಖಂಡಿತ. ನಿಮ್ಮಲ್ಲಿ ಯಾರ ಮೇಲೆಯೂ ಅತಿ ಖರ್ಚಿನ ಭಾರವನ್ನು ಹಾಕಬಾರದೆಂಬ ಉದ್ದೇಶದಿಂದಲೇ ಹಗಲೂರಾತ್ರಿ ಕೆಲಸಮಾಡುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು. 10 ವಿಶ್ವಾಸಿಗಳಾದ ನಿಮ್ಮೊಂದಿಗೆ ನಾವು ಎಷ್ಟು ನಿಷ್ಠಾವಂತರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ಕಂಡುಬಂದೆವು ಎಂಬುದಕ್ಕೆ ನೀವೇ ಸಾಕ್ಷಿಗಳು, ದೇವರೂ ಸಾಕ್ಷಿ. 11 ಇದಕ್ಕೆ ಹೊಂದಿಕೆಯಲ್ಲಿ ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಬುದ್ಧಿಹೇಳುತ್ತಾ ಸಂತೈಸುತ್ತಾ ಗಂಭೀರವಾಗಿ ಪ್ರಚೋದಿಸುತ್ತಾ ಇದ್ದೆವು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. 12 ತನ್ನ ರಾಜ್ಯ ಮತ್ತು ಮಹಿಮೆಗಾಗಿ ನಿಮ್ಮನ್ನು ಕರೆಯುವ ದೇವರಿಗೆ ನೀವು ಯೋಗ್ಯರಾಗಿ ನಡೆಯುತ್ತಾ ಇರಬೇಕೆಂದು ಇದನ್ನು ಮಾಡಿದೆವು.
13 ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿಸಿಕೊಂಡಾಗ ಅದನ್ನು ಮನುಷ್ಯರ ವಾಕ್ಯವೆಂದು ಎಣಿಸದೆ, ಅದು ನಿಜವಾಗಿಯೂ ಆಗಿರುವಂತೆ, ದೇವರ ವಾಕ್ಯವೆಂದು ಎಣಿಸಿ ಅಂಗೀಕರಿಸಿದ್ದಕ್ಕಾಗಿ ನಾವು ದೇವರಿಗೆ ಎಡೆಬಿಡದೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಆ ವಾಕ್ಯವು ವಿಶ್ವಾಸಿಗಳಾದ ನಿಮ್ಮಲ್ಲಿಯೂ ಕಾರ್ಯನಡಿಸುತ್ತಿದೆ. 14 ಸಹೋದರರೇ, ಯೂದಾಯದಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿರುವ ದೇವರ ಸಭೆಗಳವರನ್ನು ನೀವು ಅನುಕರಿಸುವವರಾದಿರಿ; ಅವರು ಯೆಹೂದ್ಯರ ಕೈಯಲ್ಲಿ ಅನುಭವಿಸುತ್ತಿರುವಂಥ ಕಷ್ಟಗಳನ್ನೇ ನೀವು ಸಹ ನಿಮ್ಮ ಸ್ವದೇಶದವರ ಕೈಯಲ್ಲಿ ಅನುಭವಿಸಲಾರಂಭಿಸಿದಿರಿ. 15 ಆ ಯೆಹೂದ್ಯರು ಕರ್ತನಾದ ಯೇಸುವನ್ನೂ ಪ್ರವಾದಿಗಳನ್ನೂ ಕೊಂದರು ಮತ್ತು ನಮ್ಮನ್ನು ಹಿಂಸಿಸಿದರು. ಅಷ್ಟುಮಾತ್ರವಲ್ಲದೆ, ಅವರು ದೇವರನ್ನು ಮೆಚ್ಚಿಸುತ್ತಿಲ್ಲ; ಎಲ್ಲ ಜನರ ಅಭಿರುಚಿಗಳಿಗೆ ವಿರುದ್ಧವಾಗಿದ್ದು 16 ಅನ್ಯಜನಾಂಗಗಳ ಜನರು ರಕ್ಷಣೆಹೊಂದುವಂತೆ ಅವರಿಗೆ ಸುವಾರ್ತೆಯನ್ನು ತಿಳಿಸುವ ನಮ್ಮನ್ನೂ ತಡೆಯಲು ಪ್ರಯತ್ನಿಸುತ್ತಾರೆ; ಇದರಿಂದಾಗಿ ಅವರು ತಮ್ಮ ಪಾಪಗಳ ಪ್ರಮಾಣವನ್ನು ಯಾವಾಗಲೂ ಹೆಚ್ಚಿಸುತ್ತಾರೆ. ಆದರೆ ದೇವರ ಕ್ರೋಧವು ಕೊನೆಗೆ ಅವರ ಮೇಲೆ ಬಂದಿದೆ.
17 ಸಹೋದರರೇ, ನಾವಂತೂ ಸ್ವಲ್ಪಕಾಲ ವ್ಯಕ್ತಿಶಃ ನಿಮ್ಮಿಂದ ಅಗಲಿದರೂ ಹೃದಯದಲ್ಲಿ ಅಗಲದೆ ನಿಮ್ಮ ಮುಖಗಳನ್ನು ನೋಡಲು ಬಹಳ ಆಶೆಯಿಂದ ಎಂದಿಗಿಂತಲೂ ಹೆಚ್ಚಿನ ಪ್ರಯತ್ನವನ್ನು ಮಾಡಿದೆವು. 18 ಆದುದರಿಂದಲೇ ನಾವು ನಿಮ್ಮ ಬಳಿಗೆ ಬರಲು ಬಯಸಿದೆವು; ಹೌದು, ಪೌಲನೆಂಬ ನಾನು ಒಮ್ಮೆ ಮಾತ್ರವಲ್ಲದೆ ಎರಡನೇ ಬಾರಿ ಅಲ್ಲಿಗೆ ಬರಲು ಮನಸ್ಸುಮಾಡಿದ್ದೆ, ಆದರೆ ಸೈತಾನನು ನಮಗೆ ಅಡ್ಡಬಂದನು. 19 ನಮ್ಮ ಕರ್ತನಾದ ಯೇಸುವಿನ ಸಾನ್ನಿಧ್ಯದ ಸಮಯದಲ್ಲಿ ಅವನ ಮುಂದೆ ನಮ್ಮ ನಿರೀಕ್ಷೆ ಅಥವಾ ಆನಂದ ಅಥವಾ ಹರ್ಷದ ಕಿರೀಟವು ಏನಾಗಿದೆ? ನೀವೇ ಅಲ್ಲವೆ? 20 ನಿಶ್ಚಯವಾಗಿಯೂ ನೀವೇ ನಮ್ಮ ಮಹಿಮೆಯೂ ಆನಂದವೂ ಆಗಿದ್ದೀರಿ.