1 ಥೆಸಲೊನೀಕ
3 ಆದುದರಿಂದ, ನಮಗೆ ಇನ್ನು ಸಹಿಸಿಕೊಳ್ಳಲಾಗದೆ ಇದ್ದಾಗ ನಾವು ಅಥೆನ್ಸಿನಲ್ಲಿಯೇ ಒಂಟಿಗರಾಗಿ ಉಳಿಯುವುದು ಒಳ್ಳೇದೆಂದು ನೆನಸಿದೆವು. 2 ನಿಮ್ಮ ನಂಬಿಕೆಯಲ್ಲಿ ನಿಮ್ಮನ್ನು ದೃಢಪಡಿಸಲು ಮತ್ತು ನಿಮಗೆ ಸಾಂತ್ವನವನ್ನು ನೀಡಲು ನಮ್ಮ ಸಹೋದರನೂ ಕ್ರಿಸ್ತನ ಕುರಿತಾದ ಸುವಾರ್ತೆಯ ಕೆಲಸದಲ್ಲಿ ದೇವರ ಶುಶ್ರೂಷಕನೂ ಆಗಿರುವ ತಿಮೊಥೆಯನನ್ನು ನಾವು ನಿಮ್ಮ ಬಳಿಗೆ ಕಳುಹಿಸಿದೆವು. 3 ಈ ಸಂಕಟಗಳಿಂದಾಗಿ ಯಾವನೂ ಚಂಚಲನಾಗಬಾರದೆಂದು ನಾವು ಹೀಗೆ ಮಾಡಿದೆವು. ಇವುಗಳನ್ನು ಅನುಭವಿಸಲಿಕ್ಕಾಗಿಯೇ ನಾವು ನೇಮಿಸಲ್ಪಟ್ಟಿದ್ದೇವೆ ಎಂಬುದನ್ನು ನೀವು ತಿಳಿದಿದ್ದೀರಿ. 4 ವಾಸ್ತವದಲ್ಲಿ, ಸಂಕಟವನ್ನು ಅನುಭವಿಸಲೇಬೇಕಾಗಿದೆ ಎಂಬುದನ್ನು ನಾವು ನಿಮ್ಮೊಂದಿಗಿದ್ದಾಗ ಮುಂದಾಗಿಯೇ ನಿಮಗೆ ಹೇಳುತ್ತಿದ್ದೆವು; ಅದರಂತೆಯೇ ಸಂಭವಿಸಿತು ಮತ್ತು ಇದನ್ನು ನೀವು ತಿಳಿದಿದ್ದೀರಿ. 5 ಆದುದರಿಂದಲೇ ನನಗೆ ಅದನ್ನು ಸಹಿಸಲು ಅಸಾಧ್ಯವಾದಾಗ, ಒಂದುವೇಳೆ ಪ್ರಲೋಭಕನು ಯಾವುದಾದರೊಂದು ರೀತಿಯಲ್ಲಿ ನಿಮ್ಮನ್ನು ಪ್ರಲೋಭಿಸಿರಬಹುದೋ ಏನೋ, ನಮ್ಮ ಪ್ರಯಾಸವು ವ್ಯರ್ಥವಾಗಿರಬಹುದೋ ಏನೋ ಎಂದು ನೆನಸಿ ನಿಮ್ಮ ನಂಬಿಗಸ್ತಿಕೆಯ ವಿಷಯದಲ್ಲಿ ತಿಳಿದುಕೊಳ್ಳುವುದಕ್ಕಾಗಿ ಅವನನ್ನು ಕಳುಹಿಸಿದೆನು.
6 ತಿಮೊಥೆಯನು ಈಗ ತಾನೇ ನಮ್ಮ ಬಳಿಗೆ ಬಂದು ನಿಮ್ಮ ನಂಬಿಗಸ್ತಿಕೆ ಮತ್ತು ಪ್ರೀತಿಯ ಕುರಿತು ಒಳ್ಳೇ ಸುದ್ದಿಯನ್ನು ನಮಗೆ ತಿಳಿಸಿದ್ದಾನೆ; ನೀವು ನಮ್ಮನ್ನು ಯಾವಾಗಲೂ ಚೆನ್ನಾಗಿ ಜ್ಞಾಪಿಸಿಕೊಳ್ಳುತ್ತಾ ನಾವು ನಿಮ್ಮನ್ನು ಹೇಗೋ ಹಾಗೆಯೇ ನೀವೂ ನಮ್ಮನ್ನು ನೋಡಲು ಹಂಬಲಿಸುತ್ತಿದ್ದೀರಿ ಎಂಬುದನ್ನು ತಿಳಿಸಿದ್ದಾನೆ. 7 ಆದಕಾರಣ ಸಹೋದರರೇ, ನೀವು ತೋರಿಸುವ ನಂಬಿಗಸ್ತಿಕೆಯ ಮೂಲಕ ನಾವು ನಮ್ಮ ಎಲ್ಲ ಕೊರತೆಯಲ್ಲಿಯೂ ಸಂಕಟದಲ್ಲಿಯೂ ನಿಮ್ಮಿಂದ ಸಾಂತ್ವನಗೊಳಿಸಲ್ಪಟ್ಟಿದ್ದೇವೆ. 8 ಏಕೆಂದರೆ ನೀವು ಕರ್ತನಲ್ಲಿ ದೃಢವಾಗಿ ನಿಲ್ಲುವುದಾದರೆ ನಾವು ಈಗ ಜೀವಿಸುತ್ತೇವೆ. 9 ನಿಮ್ಮ ನಿಮಿತ್ತ ದೇವರ ಮುಂದೆ ನಾವು ಅನುಭವಿಸುತ್ತಿರುವ ಎಲ್ಲ ಆನಂದಕ್ಕೆ ಪ್ರತಿಯಾಗಿ ನಾವು ದೇವರಿಗೆ ಯಾವ ರೀತಿಯಲ್ಲಿ ನಿಮ್ಮ ಕುರಿತು ಕೃತಜ್ಞತೆಯನ್ನು ಸಲ್ಲಿಸಸಾಧ್ಯವಿದೆ? 10 ನಿಮ್ಮ ಮುಖಗಳನ್ನು ನೋಡಲಿಕ್ಕಾಗಿಯೂ ನಿಮ್ಮ ನಂಬಿಕೆಯಲ್ಲಿರುವ ಕೊರತೆಯನ್ನು ನೀಗಿಸಲಿಕ್ಕಾಗಿಯೂ ನಾವು ಹಗಲೂರಾತ್ರಿ ಅತ್ಯಧಿಕವಾದ ಯಾಚನೆಗಳನ್ನು ಮಾಡುತ್ತೇವೆ.
11 ನಮ್ಮ ದೇವರೂ ತಂದೆಯೂ ಆಗಿರುವಾತನು ಮತ್ತು ನಮ್ಮ ಕರ್ತನಾದ ಯೇಸುವು ನಾವು ನಿಮ್ಮ ಬಳಿಗೆ ಬರುವಂತೆ ನಮ್ಮ ಮಾರ್ಗವನ್ನು ನಿರ್ದೇಶಿಸಲಿ. 12 ಇದಲ್ಲದೆ, ನಮಗೆ ನಿಮ್ಮ ಮೇಲೆ ಪ್ರೀತಿಯಿರುವಂತೆಯೇ ನೀವು ಸಹ ಒಬ್ಬರಿಗೊಬ್ಬರ ಮೇಲೆ ಮಾತ್ರವಲ್ಲದೆ ಎಲ್ಲರ ಮೇಲೆಯೂ ತೋರಿಸುವ ಪ್ರೀತಿಯಲ್ಲಿ ಹೆಚ್ಚಾಗುತ್ತಾ ಸಮೃದ್ಧಿಹೊಂದುವಂತೆ ಕರ್ತನು ಅನುಗ್ರಹಿಸಲಿ. 13 ನಮ್ಮ ಕರ್ತನಾದ ಯೇಸು ತನ್ನ ಎಲ್ಲ ಪವಿತ್ರರೊಂದಿಗೆ ಸನ್ನಿಧನಾಗುವಾಗ, ನಮ್ಮ ದೇವರೂ ತಂದೆಯೂ ಆಗಿರುವಾತನ ಮುಂದೆ ನೀವು ಪವಿತ್ರತೆಯಲ್ಲಿ ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ದೃಢಪಡಿಸಲಿ.