ಲೂಕ
1 ಸನ್ಮಾನ್ಯ ಥೆಯೊಫಿಲನೇ, ನಮ್ಮ ಮಧ್ಯದಲ್ಲಿ ಪೂರ್ಣವಾಗಿ ವಿಶ್ವಾಸಾರ್ಹವಾಗಿರುವ ನಿಜತ್ವಗಳ ಹೇಳಿಕೆಯನ್ನು ಸಂಕಲಿಸುವ ಕೆಲಸವನ್ನು ಅನೇಕರು ವಹಿಸಿಕೊಂಡಿದ್ದಾರಾದರೂ 2 ಆದಿಯಿಂದ ಸಂದೇಶದ ಪ್ರತ್ಯಕ್ಷ ಸಾಕ್ಷಿಗಳೂ ಸೇವಕರೂ ನಮಗೆ ಇವುಗಳನ್ನು ಒಪ್ಪಿಸಿದಂತೆಯೇ 3 ನಾನು ಆರಂಭದಿಂದ ಎಲ್ಲ ಸಂಗತಿಗಳನ್ನು ನಿಷ್ಕೃಷ್ಟವಾಗಿ ಪತ್ತೆಹಚ್ಚಿರುವುದರಿಂದ 4 ನಿನಗೆ ಮೌಖಿಕವಾಗಿ ಕಲಿಸಲ್ಪಟ್ಟಿರುವ ವಿಷಯಗಳ ನಿಶ್ಚಿತತೆಯನ್ನು ನೀನು ಪೂರ್ಣವಾಗಿ ತಿಳಿಯುವಂತೆ ಅವುಗಳನ್ನು ನಿನಗೆ ತರ್ಕಬದ್ಧವಾದ ಕ್ರಮದಲ್ಲಿ ಬರೆಯಲು ನಿರ್ಧರಿಸಿದೆನು.
5 ಯೂದಾಯದ ಅರಸನಾಗಿದ್ದ ಹೆರೋದನ ದಿನಗಳಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು; ಅವನ ಹೆಂಡತಿಯು ಆರೋನನ ವಂಶದವಳಾಗಿದ್ದಳು ಮತ್ತು ಅವಳ ಹೆಸರು ಎಲಿಸಬೇತ್ ಎಂದಾಗಿತ್ತು. 6 ಅವರಿಬ್ಬರೂ ಯೆಹೋವನ ಎಲ್ಲ ಆಜ್ಞೆಗಳಿಗೂ ಕಾನೂನುಬದ್ಧ ಆವಶ್ಯಕತೆಗಳಿಗೂ ಅನುಸಾರವಾಗಿ ನಿರ್ದೋಷಿಗಳಾಗಿ ನಡೆಯುತ್ತಿದ್ದ ಕಾರಣ ದೇವರ ಮುಂದೆ ನೀತಿವಂತರಾಗಿದ್ದರು. 7 ಆದರೆ ಎಲಿಸಬೇತಳು ಬಂಜೆಯಾಗಿದ್ದುದರಿಂದ ಅವರಿಗೆ ಮಗುವಿರಲಿಲ್ಲ; ಇದಲ್ಲದೆ ಅವರಿಬ್ಬರಿಗೂ ತುಂಬ ವಯಸ್ಸಾಗಿತ್ತು.
8 ಹೀಗಿರಲಾಗಿ ಜಕರೀಯನು ತನ್ನ ವರ್ಗದ ನೇಮಕದ ಪ್ರಕಾರ ದೇವರ ಮುಂದೆ ಯಾಜಕಸೇವೆಯನ್ನು ಸಲ್ಲಿಸುತ್ತಿದ್ದಾಗ, 9 ಯಾಜಕೋದ್ಯೋಗದ ವಿಧಿವಿಹಿತ ಪದ್ಧತಿಯಂತೆ ಧೂಪವನ್ನು ಅರ್ಪಿಸುವ ಸರದಿಯು ಅವನಿಗೆ ಬಂತು ಮತ್ತು ಅವನು ಯೆಹೋವನ ಆಲಯದ ಪವಿತ್ರ ಸ್ಥಳವನ್ನು ಪ್ರವೇಶಿಸಿದನು. 10 ಧೂಪವನ್ನು ಅರ್ಪಿಸುವ ವೇಳೆಯಲ್ಲಿ ಇಡೀ ಜನಸಮೂಹವು ಹೊರಗೆ ನಿಂತು ಪ್ರಾರ್ಥಿಸುತ್ತಿತ್ತು. 11 ಆಗ ಧೂಪವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ ಯೆಹೋವನ ದೂತನು ಅವನಿಗೆ ಕಾಣಿಸಿಕೊಂಡನು. 12 ಜಕರೀಯನು ಅದನ್ನು ನೋಡಿ ಕಳವಳಗೊಂಡು ಭಯಹಿಡಿದವನಾದನು. 13 ಆದರೆ ದೇವದೂತನು ಅವನಿಗೆ, “ಜಕರೀಯನೇ ಭಯಪಡಬೇಡ; ನಿನ್ನ ಯಾಚನೆಯು ಅನುಗ್ರಹಪೂರ್ವಕವಾಗಿ ಕೇಳಲ್ಪಟ್ಟಿದೆ ಮತ್ತು ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು; ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು. 14 ನಿನಗೆ ಆನಂದವೂ ಮಹಾ ಉಲ್ಲಾಸವೂ ಆಗುವುದು ಮತ್ತು ಅವನ ಜನನದಿಂದ ಅನೇಕರಿಗೆ ಹರ್ಷವುಂಟಾಗುವುದು; 15 ಏಕೆಂದರೆ ಅವನು ಯೆಹೋವನ ಮುಂದೆ ಮಹಾಪುರುಷನಾಗಿರುವನು. ಅವನು ದ್ರಾಕ್ಷಾಮದ್ಯವನ್ನಾಗಲಿ ಅಮಲೇರಿಸುವ ಯಾವುದೇ ಮದ್ಯವನ್ನಾಗಲಿ ಕುಡಿಯಬಾರದು; ಅವನು ತನ್ನ ತಾಯಿಯ ಗರ್ಭದಿಂದಲೇ ಪವಿತ್ರಾತ್ಮಭರಿತನಾಗಿರುವನು.* 16 ಮತ್ತು ಇಸ್ರಾಯೇಲ್ಯರಲ್ಲಿ ಅನೇಕರನ್ನು ಅವನು ಅವರ ದೇವರಾದ ಯೆಹೋವನ ಕಡೆಗೆ ತಿರುಗಿಸುವನು. 17 ಇದಲ್ಲದೆ ಅವನು ತಂದೆಗಳ ಹೃದಯಗಳನ್ನು ಮಕ್ಕಳ ಕಡೆಗೂ ಅವಿಧೇಯರನ್ನು ನೀತಿವಂತರ ಪ್ರಾಯೋಗಿಕ ವಿವೇಕದ ಕಡೆಗೂ ತಿರುಗಿಸಿ, ಯೆಹೋವನಿಗಾಗಿ ಅಣಿಗೊಳಿಸಲ್ಪಟ್ಟ ಜನರನ್ನು ಸಿದ್ಧಗೊಳಿಸುವುದಕ್ಕಾಗಿ ಎಲೀಯನ ಹುಮ್ಮಸ್ಸಿನೊಂದಿಗೂ ಶಕ್ತಿಯೊಂದಿಗೂ ಆತನ ಮುಂದೆ ಹೋಗುವನು” ಎಂದು ಹೇಳಿದನು.
18 ಆಗ ಜಕರೀಯನು ದೇವದೂತನಿಗೆ, “ಇದನ್ನು ನಾನು ಹೇಗೆ ನಂಬಲಿ? ನನಗೆ ವಯಸ್ಸಾಗಿದೆ ಮತ್ತು ನನ್ನ ಹೆಂಡತಿಯು ಸಹ ಪ್ರಾಯಮೀರಿದವಳು” ಎಂದನು. 19 ಇದಕ್ಕೆ ಪ್ರತ್ಯುತ್ತರವಾಗಿ ದೇವದೂತನು ಅವನಿಗೆ, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನೊಂದಿಗೆ ಮಾತಾಡಿ ಈ ಶುಭವರ್ತಮಾನವನ್ನು ನಿನಗೆ ಪ್ರಕಟಪಡಿಸಲಿಕ್ಕಾಗಿ ಕಳುಹಿಸಲ್ಪಟ್ಟಿದ್ದೇನೆ. 20 ಆದರೆ ನೇಮಿತ ಸಮಯದಲ್ಲಿ ನೆರವೇರಲಿರುವ ನನ್ನ ಮಾತುಗಳನ್ನು ನೀನು ನಂಬದೇ ಹೋದ ಕಾರಣ ಈ ವಿಷಯಗಳು ಸಂಭವಿಸುವ ತನಕ ನೀನು ಮೂಕನಾಗಿದ್ದು ಮಾತಾಡಲು ಅಸಮರ್ಥನಾಗಿರುವಿ” ಎಂದು ಹೇಳಿದನು. 21 ಈ ಸಮಯದಲ್ಲಿ ಜನರು ಜಕರೀಯನಿಗಾಗಿ ಕಾಯುತ್ತಾ ಅವನು ಪವಿತ್ರ ಸ್ಥಳದಲ್ಲಿ ತಡಮಾಡುತ್ತಿರುವುದನ್ನು ನೋಡಿ ಆಶ್ಚರ್ಯಪಡಲಾರಂಭಿಸಿದರು. 22 ಆದರೆ ಹೊರಗೆ ಬಂದಾಗ ಅವನು ತಮ್ಮೊಂದಿಗೆ ಮಾತಾಡಲು ಅಶಕ್ತನಾಗಿರುವುದನ್ನು ಕಂಡು, ಆಗಷ್ಟೇ ಪವಿತ್ರ ಸ್ಥಳದಲ್ಲಿ ಅವನು ದಿವ್ಯದರ್ಶನವನ್ನು ನೋಡಿದ್ದಿರಬೇಕೆಂದು ಅವರು ನೆನಸಿದರು; ಅವನು ಅವರಿಗೆ ಸನ್ನೆಗಳನ್ನು ಮಾಡುತ್ತಾ ಮೂಕನಾಗಿಯೇ ಉಳಿದನು. 23 ತನ್ನ ಯಾಜಕಸೇವೆಯ ದಿನಗಳು ಮುಗಿದ ಬಳಿಕ ಅವನು ತನ್ನ ಮನೆಗೆ ಹೋದನು.
24 ಈ ದಿನಗಳಾದ ಮೇಲೆ ಅವನ ಹೆಂಡತಿಯಾದ ಎಲಿಸಬೇತಳು ಗರ್ಭಿಣಿಯಾದಳು ಮತ್ತು ಐದು ತಿಂಗಳುಗಳ ವರೆಗೆ ಅವಳು ತನ್ನ ಮನೆಯಲ್ಲೇ ಮರೆಯಾಗಿ ಇದ್ದು, 25 “ಜನರ ಮಧ್ಯೆ ನನಗಿದ್ದ ಅವಮಾನವನ್ನು ತೆಗೆದುಹಾಕಲಿಕ್ಕಾಗಿ ಯೆಹೋವನು ನನ್ನ ಕಡೆಗೆ ತನ್ನ ಗಮನವನ್ನು ಹರಿಸಿ ಈ ದಿನಗಳಲ್ಲಿ ನನ್ನೊಂದಿಗೆ ಈ ರೀತಿಯಲ್ಲಿ ವ್ಯವಹರಿಸಿದ್ದಾನೆ” ಎನ್ನುತ್ತಿದ್ದಳು.
26 ಅವಳ ಆರನೇ ತಿಂಗಳಿನಲ್ಲಿ ಗಬ್ರಿಯೇಲ ದೂತನು ಗಲಿಲಾಯ ಸೀಮೆಯ ನಜರೇತೆಂಬ ಊರಿಗೆ, 27 ದಾವೀದನ ಮನೆತನದವನಾದ ಯೋಸೇಫನೆಂಬ ಪುರುಷನಿಗೆ ವಿವಾಹ ನಿಶ್ಚಯವಾಗಿದ್ದ ಒಬ್ಬ ಕನ್ಯೆಯ ಬಳಿಗೆ ದೇವರಿಂದ ಕಳುಹಿಸಲ್ಪಟ್ಟನು; ಆ ಕನ್ಯೆಯ ಹೆಸರು ಮರಿಯ ಎಂದಾಗಿತ್ತು. 28 ಅವನು ಅವಳ ಮುಂದೆ ಹೋಗಿ ಅವಳಿಗೆ, “ಅತ್ಯಂತ ಅನುಗ್ರಹಪಾತ್ರಳೇ, ನಿನಗೆ ನಮಸ್ಕಾರ; ಯೆಹೋವನು ನಿನ್ನೊಂದಿಗಿದ್ದಾನೆ” ಎಂದನು. 29 ಅವಳು ಈ ಮಾತನ್ನು ಕೇಳಿ ಬಹಳವಾಗಿ ಗಲಿಬಿಲಿಗೊಂಡು, ‘ಇದು ಎಂಥ ವಂದನೆಯಾಗಿರಬಹುದು’ ಎಂದು ತನ್ನಲ್ಲೇ ಯೋಚಿಸತೊಡಗಿದಳು. 30 ಆಗ ದೇವದೂತನು ಅವಳಿಗೆ, “ಮರಿಯಳೇ, ಭಯಪಡಬೇಡ; ನೀನು ದೇವರ ಅನುಗ್ರಹಕ್ಕೆ ಪಾತ್ರಳಾಗಿದ್ದೀ; 31 ಇಗೋ, ನೀನು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವಿ ಮತ್ತು ನೀನು ಅವನಿಗೆ ಯೇಸು ಎಂದು ಹೆಸರಿಡಬೇಕು. 32 ಅವನು ಮಹಾಪುರುಷನಾಗಿ ಮಹೋನ್ನತನ ಪುತ್ರನೆಂದು ಕರೆಯಲ್ಪಡುವನು; ಯೆಹೋವ ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು 33 ಮತ್ತು ಅವನು ಯಾಕೋಬನ ಮನೆತನದ ಮೇಲೆ ಸದಾಕಾಲಕ್ಕೂ ರಾಜನಾಗಿ ಆಳುವನು, ಅವನ ರಾಜ್ಯಕ್ಕೆ ಅಂತ್ಯವೇ ಇರದು” ಎಂದು ಹೇಳಿದನು.
34 ಆದರೆ ಮರಿಯಳು ದೇವದೂತನಿಗೆ, “ಇದು ಹೇಗಾದೀತು? ನಾನು ಪುರುಷನೊಂದಿಗೆ ಸಂಭೋಗಮಾಡಲಿಲ್ಲವಲ್ಲಾ” ಎಂದಳು. 35 ಅದಕ್ಕೆ ಪ್ರತ್ಯುತ್ತರವಾಗಿ ದೇವದೂತನು ಅವಳಿಗೆ, “ಪವಿತ್ರಾತ್ಮವು ನಿನ್ನ ಮೇಲೆ ಬರುವುದು ಮತ್ತು ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ಹುಟ್ಟುವವನು ಪವಿತ್ರನೆಂದೂ ದೇವರ ಮಗನೆಂದೂ ಕರೆಯಲ್ಪಡುವನು. 36 ಇಗೋ, ನಿನ್ನ ಸಂಬಂಧಿಕಳಾದ ಎಲಿಸಬೇತಳು ಸಹ ತನ್ನ ಮುಪ್ಪಿನಲ್ಲಿ ಗರ್ಭಿಣಿಯಾಗಿದ್ದಾಳೆ; ಅವಳ ಗರ್ಭದಲ್ಲಿ ಗಂಡುಮಗುವಿದೆ. ಬಂಜೆಯೆನಿಸಿಕೊಂಡಿದ್ದ ಅವಳಿಗೆ ಇದೀಗ ಆರನೆಯ ತಿಂಗಳು. 37 ಏಕೆಂದರೆ ದೇವರಿಗೆ ಯಾವ ಮಾತೂ ನೆರವೇರಿಸಲು ಅಸಾಧ್ಯವಾದದ್ದಲ್ಲ” ಎಂದು ಹೇಳಿದನು. 38 ಆಗ ಮರಿಯಳು, “ಇಗೋ, ನಾನು ಯೆಹೋವನ ದಾಸಿ! ನೀನು ಹೇಳಿದಂತೆಯೇ ನನಗೆ ಸಂಭವಿಸಲಿ” ಎಂದು ಹೇಳಿದಳು. ಆಗ ದೇವದೂತನು ಅವಳ ಬಳಿಯಿಂದ ಹೊರಟುಹೋದನು.
39 ಆ ದಿನಗಳಲ್ಲಿ ಮರಿಯಳು ಎದ್ದು ಮಲೆನಾಡಿನ ಒಂದು ಊರಿಗೆ, ಯೆಹೂದದ ಒಂದು ಪಟ್ಟಣಕ್ಕೆ ಅವಸರದಿಂದ ಹೋಗಿ, 40 ಜಕರೀಯನ ಮನೆಯನ್ನು ಪ್ರವೇಶಿಸಿ ಎಲಿಸಬೇತಳನ್ನು ವಂದಿಸಿದಳು. 41 ಎಲಿಸಬೇತಳು ಮರಿಯಳ ವಂದನೆಯನ್ನು ಕೇಳಿಸಿಕೊಳ್ಳುತ್ತಲೇ ಅವಳ ಗರ್ಭದಲ್ಲಿದ್ದ ಶಿಶು ಜಿಗಿಯಿತು; ಎಲಿಸಬೇತಳು ಪವಿತ್ರಾತ್ಮಭರಿತಳಾಗಿ 42 ಗಟ್ಟಿಯಾದ ಸ್ವರದಿಂದ, “ಸ್ತ್ರೀಯರಲ್ಲಿ ನೀನು ಆಶೀರ್ವದಿತಳು ಮತ್ತು ನಿನ್ನ ಗರ್ಭಫಲವು ಆಶೀರ್ವದಿತವಾದದ್ದು! 43 ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವ ಈ ಸದವಕಾಶವು ನನಗೆ ಹೇಗೆ ದೊರಕಿತು? 44 ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿಗೆ ಬೀಳುತ್ತಲೇ ನನ್ನ ಗರ್ಭದಲ್ಲಿರುವ ಶಿಶು ಅತಿ ಉಲ್ಲಾಸದಿಂದ ಜಿಗಿಯಿತು. 45 ನಂಬಿದವಳೂ ಸಂತೋಷಿತಳು, ಏಕೆಂದರೆ ಯೆಹೋವನಿಂದ ಅವಳಿಗೆ ತಿಳಿಸಲ್ಪಟ್ಟ ವಿಷಯಗಳು ಸಂಪೂರ್ಣವಾಗಿ ನೆರವೇರುವವು” ಎಂದಳು.
46 ಆಗ ಮರಿಯಳು, “ನನ್ನ ಪ್ರಾಣವು ಯೆಹೋವನನ್ನು ಮಹಿಮೆಪಡಿಸುತ್ತದೆ 47 ಮತ್ತು ನನ್ನ ಹೃದಯವು ನನ್ನ ರಕ್ಷಕನಾದ ದೇವರಲ್ಲಿ ಅತ್ಯಾನಂದಪಡದೆ ಇರಲಾರದು; 48 ಏಕೆಂದರೆ ಆತನು ತನ್ನ ದಾಸಿಯ ದೀನ ಸ್ಥಿತಿಯನ್ನು ಲಕ್ಷಿಸಿದ್ದಾನೆ. ಇಗೋ, ಇಂದಿನಿಂದ ಎಲ್ಲ ಸಂತತಿಗಳವರು ನನ್ನನ್ನು ಸಂತೋಷಿತಳು ಎಂದು ಹೇಳುವರು; 49 ಪರಾಕ್ರಮಿಯಾದಾತನು ನನಗಾಗಿ ಮಹಾಕಾರ್ಯಗಳನ್ನು ಮಾಡಿದ್ದಾನೆ; ಆತನ ನಾಮವು ಪವಿತ್ರವಾದದ್ದು. 50 ಆತನಿಗೆ ಭಯಪಡುವವರ ಮೇಲೆ ಆತನ ಕರುಣೆಯು ತಲತಲಾಂತರಗಳ ವರೆಗೂ ಇರುತ್ತದೆ. 51 ಆತನು ತನ್ನ ಬಾಹುಬಲದಿಂದ ಮಹತ್ಕಾರ್ಯವನ್ನು ನಡೆಸಿದ್ದಾನೆ; ತಮ್ಮ ಹೃದಯದ ಯೋಚನೆಯಲ್ಲಿ ಗರ್ವಿಷ್ಠರಾಗಿರುವವರನ್ನು ಆತನು ಚೆದರಿಸಿಬಿಟ್ಟಿದ್ದಾನೆ. 52 ಆತನು ಅಧಿಕಾರವುಳ್ಳ ಜನರನ್ನು ಸಿಂಹಾಸನಗಳಿಂದ ಕೆಡವಿದ್ದಾನೆ ಮತ್ತು ದೀನರನ್ನು ಉನ್ನತಕ್ಕೇರಿಸಿದ್ದಾನೆ. 53 ಆತನು ಹಸಿದವರಿಗೆ ಉತ್ತಮವಾದುದನ್ನು ನೀಡಿ ಪೂರ್ಣವಾಗಿ ತೃಪ್ತಿಪಡಿಸಿದ್ದಾನೆ ಮತ್ತು ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ. 54 ಆತನು ನಮ್ಮ ಪೂರ್ವಜರಾದ ಅಬ್ರಹಾಮನಿಗೂ ಅವನ ಸಂತತಿಯವರಿಗೂ ಹೇಳಿದಂತೆಯೇ, 55 ತನ್ನ ಸೇವಕನಾದ ಇಸ್ರಾಯೇಲನಿಗೆ ನಿತ್ಯಕ್ಕೂ ಕರುಣೆಯನ್ನು ತೋರಿಸಬೇಕೆಂಬುದನ್ನು ಮನಸ್ಸಿಗೆ ತಂದುಕೊಂಡು ಅವನ ಸಹಾಯಕ್ಕೆ ಬಂದಿದ್ದಾನೆ” ಎಂದು ಹೇಳಿದಳು. 56 ಬಳಿಕ ಮರಿಯಳು ಸುಮಾರು ಮೂರು ತಿಂಗಳುಗಳ ವರೆಗೆ ಎಲಿಸಬೇತಳೊಂದಿಗೆ ಇದ್ದು ತನ್ನ ಮನೆಗೆ ಹಿಂದಿರುಗಿದಳು.
57 ಎಲಿಸಬೇತಳು ದಿನತುಂಬಿದವಳಾದಾಗ ಗಂಡುಮಗುವನ್ನು ಹೆತ್ತಳು. 58 ಯೆಹೋವನು ಅವಳಿಗೆ ಮಹಾ ಕರುಣೆಯನ್ನು ತೋರಿಸಿದ್ದಾನೆಂಬುದನ್ನು ಅವಳ ನೆರೆಯವರೂ ಸಂಬಂಧಿಕರೂ ಕೇಳಿಸಿಕೊಂಡು ಅವಳೊಂದಿಗೆ ಹರ್ಷಿಸಿದರು. 59 ಎಂಟನೆಯ ದಿನದಲ್ಲಿ ಅವರು ಆ ಚಿಕ್ಕ ಮಗುವಿಗೆ ಸುನ್ನತಿಮಾಡಿಸಲಿಕ್ಕಾಗಿ ಬಂದರು ಮತ್ತು ಅದಕ್ಕೆ ಜಕರೀಯನೆಂದು ಅದರ ತಂದೆಯ ಹೆಸರನ್ನು ಇಡಬೇಕೆಂದಿದ್ದರು. 60 ಆದರೆ ಅದರ ತಾಯಿಯು, “ಬೇಡ, ಇವನಿಗೆ ಯೋಹಾನನೆಂದು ಹೆಸರಿಡಬೇಕು” ಎಂದಳು. 61 ಅದಕ್ಕೆ ಅವರು ಅವಳಿಗೆ, “ನಿನ್ನ ಸಂಬಂಧಿಕರಲ್ಲಿ ಈ ಹೆಸರಿನವರು ಯಾರೂ ಇಲ್ಲವಲ್ಲ” ಎಂದರು. 62 ಆಗ ಅವರು ಮಗುವಿನ ತಂದೆಯ ಬಳಿಗೆ ಹೋಗಿ ಅದಕ್ಕೆ ಏನು ಹೆಸರಿಡಬೇಕೆಂದು ಸನ್ನೆಮಾಡಿ ಕೇಳಿದರು. 63 ಅವನು ಒಂದು ಹಲಗೆಯನ್ನು ತರಿಸಿಕೊಂಡು, “ಯೋಹಾನ ಎಂಬುದೇ ಅದರ ಹೆಸರು” ಎಂದು ಬರೆದನು. ಇದನ್ನು ನೋಡಿ ಅವರೆಲ್ಲರೂ ಅತ್ಯಾಶ್ಚರ್ಯಪಟ್ಟರು. 64 ಕೂಡಲೆ ಅವನ ಬಾಯಿ ತೆರೆಯಿತು, ಅವನ ನಾಲಗೆ ಸಡಿಲವಾಯಿತು ಮತ್ತು ಅವನು ಮಾತಾಡಲಾರಂಭಿಸಿ ದೇವರನ್ನು ಕೊಂಡಾಡಿದನು. 65 ಆಗ ಅವರ ನೆರೆಹೊರೆಯಲ್ಲಿ ವಾಸಿಸುತ್ತಿದ್ದವರಿಗೆಲ್ಲ ಭಯವುಂಟಾಯಿತು; ಯೂದಾಯದ ಮಲೆನಾಡಿನಾದ್ಯಂತ ಈ ಸಂಗತಿಗಳ ಕುರಿತು ಜನರು ಮಾತಾಡಿಕೊಳ್ಳತೊಡಗಿದರು. 66 ಈ ಸಂಗತಿಯ ಕುರಿತು ಕೇಳಿಸಿಕೊಂಡವರೆಲ್ಲರೂ ತಮ್ಮ ಹೃದಯಗಳಲ್ಲಿ ಇದನ್ನು ಇಟ್ಟುಕೊಂಡು, “ಈ ಮಗು ನಿಜವಾಗಿಯೂ ಏನಾಗಲಿರುವನೋ?” ಅಂದುಕೊಳ್ಳುತ್ತಿದ್ದರು. ಏಕೆಂದರೆ ಯೆಹೋವನ ಹಸ್ತವು ನಿಶ್ಚಯವಾಗಿಯೂ ಅದರೊಂದಿಗಿತ್ತು.
67 ಮತ್ತು ಅದರ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಪ್ರವಾದಿಸುತ್ತಾ, 68 “ಇಸ್ರಾಯೇಲ್ಯರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ, ಏಕೆಂದರೆ ಆತನು ತನ್ನ ಜನರ ಕಡೆಗೆ ಗಮನವನ್ನು ತಿರುಗಿಸಿ ಅವರಿಗೆ ಬಿಡುಗಡೆಯನ್ನು ಉಂಟುಮಾಡಿದ್ದಾನೆ. 69 ಆತನು ತನ್ನ ಸೇವಕನಾದ ದಾವೀದನ ಮನೆತನದಲ್ಲಿ ನಮಗಾಗಿ ರಕ್ಷಣೆಯ ಒಂದು ಕೊಂಬನ್ನು ಎಬ್ಬಿಸಿದ್ದಾನೆ; 70 ಆತನು ಪುರಾತನಕಾಲದ ತನ್ನ ಪವಿತ್ರ ಪ್ರವಾದಿಗಳ ಬಾಯಿಂದ ತಿಳಿಸಿದಂತೆ 71 ನಮ್ಮ ಶತ್ರುಗಳಿಂದಲೂ ನಮ್ಮನ್ನು ಹಗೆಮಾಡುವವರೆಲ್ಲರ ಕೈಯಿಂದಲೂ ನಮಗೆ ರಕ್ಷಣೆಯನ್ನು ಕೊಡಲಿಕ್ಕಾಗಿ ಹೀಗೆ ಮಾಡಿದ್ದಾನೆ. 72 ನಮ್ಮ ಪೂರ್ವಜರಿಗೆ ಕರುಣೆಯನ್ನು ತೋರಿಸಿ ತಾನು ಮಾಡಿದ ಪವಿತ್ರ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡಿದ್ದಾನೆ; 73 ನಮ್ಮ ಪೂರ್ವಜನಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣಮಾಡಿದಂತೆ, 74 ನಾವು ಶತ್ರುಗಳ ಕೈಯಿಂದ ಬಿಡುಗಡೆಯನ್ನು ಹೊಂದಿದ ಬಳಿಕ ಆತನಿಗೆ ಪವಿತ್ರ ಸೇವೆಯನ್ನು ನಿರ್ಭಯವಾಗಿಯೂ 75 ನಿಷ್ಠೆಯಿಂದಲೂ ನೀತಿಯಿಂದಲೂ ನಮ್ಮ ಜೀವಮಾನವೆಲ್ಲ ಸಲ್ಲಿಸುವವರಾಗುವ ಸುಯೋಗವನ್ನು ನಮಗೆ ಅನುಗ್ರಹಿಸಿದ್ದಾನೆ. 76 ಮಗುವೇ, ನೀನಾದರೋ ಮಹೋನ್ನತನ ಪ್ರವಾದಿಯೆಂದು ಕರೆಯಲ್ಪಡುವಿ; ಏಕೆಂದರೆ ನೀನು ಯೆಹೋವನ ಮಾರ್ಗಗಳನ್ನು ಸಿದ್ಧಪಡಿಸಲಿಕ್ಕಾಗಿ ಆತನ ಮುಂದೆ ಹೋಗುವಿ. 77 ಆತನ ಜನರ ಪಾಪಗಳ ಕ್ಷಮಾಪಣೆಯ ಮೂಲಕ ಅವರಿಗೆ ರಕ್ಷಣೆಯ ಜ್ಞಾನವನ್ನು ನೀಡುವಿ; 78 ಇದು ನಮ್ಮ ದೇವರ ಸಹಾನುಭೂತಿಯಿಂದಲೇ ಸಾಧ್ಯ. ಈ ಸಹಾನುಭೂತಿಯಿಂದ ನಮಗೆ ಉನ್ನತದಿಂದ ಒಂದು ಅರುಣೋದಯವು ಉಂಟಾಗಿ 79 ಕತ್ತಲೆಯಲ್ಲಿಯೂ ಮರಣದ ಛಾಯೆಯಲ್ಲಿಯೂ ಕುಳಿತುಕೊಂಡಿರುವವರಿಗೆ ಬೆಳಕನ್ನು ನೀಡಿ, ನಮ್ಮ ಪಾದಗಳನ್ನು ಸಮೃದ್ಧಿಭರಿತ ಶಾಂತಿಯ ಮಾರ್ಗದಲ್ಲಿ ನಡೆಸುವುದು” ಎಂದು ಹೇಳಿದನು.
80 ಆ ಚಿಕ್ಕ ಮಗನು ಬೆಳೆಯುತ್ತಾ ಬಲಗೊಳ್ಳುತ್ತಾ ಹೋದನು; ಅವನು ಇಸ್ರಾಯೇಲ್ಯರಿಗೆ ತನ್ನನ್ನು ಬಹಿರಂಗವಾಗಿ ತೋರಿಸಿಕೊಳ್ಳುವ ದಿನದ ತನಕ ಅರಣ್ಯದಲ್ಲೇ ಇರುತ್ತಿದ್ದನು.