ಮತ್ತಾಯ
18 ಆ ಹೊತ್ತಿನಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಸ್ವರ್ಗದ ರಾಜ್ಯದಲ್ಲಿ ಯಾರು ನಿಜವಾಗಿಯೂ ಅತಿ ದೊಡ್ಡವನು?” ಎಂದು ಕೇಳಿದರು. 2 ಆಗ ಅವನು ಒಂದು ಚಿಕ್ಕ ಮಗುವನ್ನು ತನ್ನ ಬಳಿಗೆ ಕರೆದು ಅವರ ಮಧ್ಯದಲ್ಲಿ ನಿಲ್ಲಿಸಿ, 3 “ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದಿದ್ದರೆ ಸ್ವರ್ಗದ ರಾಜ್ಯವನ್ನು ಎಂದಿಗೂ ಪ್ರವೇಶಿಸುವುದಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 4 ಆದುದರಿಂದ ಈ ಚಿಕ್ಕ ಮಗುವಿನಂತೆ ಯಾರು ತನ್ನನ್ನು ತಗ್ಗಿಸಿಕೊಳ್ಳುವನೋ ಅವನೇ ಸ್ವರ್ಗದ ರಾಜ್ಯದಲ್ಲಿ ಅತಿ ದೊಡ್ಡವನಾಗಿದ್ದಾನೆ; 5 ಮತ್ತು ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಒಂದು ಚಿಕ್ಕ ಮಗುವನ್ನು ಸೇರಿಸಿಕೊಂಡರೆ ಅವನು ನನ್ನನ್ನು ಸಹ ಸೇರಿಸಿಕೊಳ್ಳುವವನಾಗಿದ್ದಾನೆ. 6 ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನನ್ನು ಯಾವನಾದರೂ ಎಡವಿಸುವುದಾದರೆ, ಅಂಥವನ ಕೊರಳಿಗೆ ಕತ್ತೆಯಿಂದ ಎಳೆಯಲ್ಪಡುವಂಥ ಬೀಸುವ ಕಲ್ಲನ್ನು ಕಟ್ಟಿ ವಿಶಾಲವಾದ ಸಮುದ್ರದಲ್ಲಿ ಮುಳುಗಿಸುವುದೇ ಹೆಚ್ಚು ಪ್ರಯೋಜನಕರ.
7 “ಎಡವುಗಲ್ಲುಗಳಿಂದಾಗಿ ಲೋಕಕ್ಕೆ ದುರ್ಗತಿಯೇ ಸರಿ! ಎಡವಿಸುವಿಕೆಗಳು ಅನಿವಾರ್ಯವಾಗಿ ಬಂದೇ ಬರುವವು; ಆದರೆ ಯಾವ ಮನುಷ್ಯನಿಂದ ಎಡವಲು ಕಾರಣಗಳು ಬರುತ್ತವೋ ಅವನ ಗತಿಯನ್ನು ಏನು ಹೇಳಲಿ! 8 ನಿನ್ನ ಕೈಯಾಗಲಿ ನಿನ್ನ ಕಾಲಾಗಲಿ ನಿನ್ನನ್ನು ಎಡವಿಸುವುದಾದರೆ ಅದನ್ನು ಕತ್ತರಿಸಿ ಬಿಸಾಡು; ನೀನು ಎರಡು ಕೈಗಳು ಅಥವಾ ಎರಡು ಕಾಲುಗಳುಳ್ಳವನಾಗಿ ನಿತ್ಯವಾದ ಬೆಂಕಿಗೆ ಎಸೆಯಲ್ಪಡುವ ಬದಲು ಕೈಕಳೆದುಕೊಂಡವನಾಗಿ ಅಥವಾ ಕುಂಟನಾಗಿ ಜೀವವನ್ನು ಪಡೆಯುವುದೇ ಲೇಸು. 9 ಇದಲ್ಲದೆ ನಿನ್ನ ಕಣ್ಣು ನಿನ್ನನ್ನು ಎಡವಿಸುವುದಾದರೆ ಅದನ್ನು ಕಿತ್ತುಬಿಸಾಡು; ನೀನು ಎರಡು ಕಣ್ಣುಗಳುಳ್ಳವನಾಗಿ ಬೆಂಕಿಯ ಗೆಹೆನ್ನಕ್ಕೆ ಎಸೆಯಲ್ಪಡುವ ಬದಲು ಒಂದೇ ಕಣ್ಣುಳ್ಳವನಾಗಿ ಜೀವದಲ್ಲಿ ಸೇರುವುದೇ ಲೇಸು. 10 ನೀವು ಈ ಚಿಕ್ಕವರಲ್ಲಿ ಒಬ್ಬನನ್ನೂ ತಾತ್ಸಾರಮಾಡದಂತೆ ನೋಡಿಕೊಳ್ಳಿರಿ; ಏಕೆಂದರೆ ಸ್ವರ್ಗದಲ್ಲಿರುವ ಅವರ ದೂತರು ಸ್ವರ್ಗದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿರುತ್ತಾರೆ ಎಂದು ನಿಮಗೆ ಹೇಳುತ್ತೇನೆ. 11 *——
12 “ನಿಮ್ಮ ಅಭಿಪ್ರಾಯವೇನು? ಒಬ್ಬ ಮನುಷ್ಯನ ಬಳಿ ನೂರು ಕುರಿಗಳಿದ್ದು ಅವುಗಳಲ್ಲಿ ಒಂದು ಹಿಂಡಿನಿಂದ ಬೇರೆಯಾದರೆ ಅವನು ತೊಂಬತ್ತೊಂಬತ್ತು ಕುರಿಗಳನ್ನು ಬೆಟ್ಟದಲ್ಲೇ ಬಿಟ್ಟು ಬೇರೆಯಾಗಿರುವ ಆ ಒಂದು ಕುರಿಯನ್ನು ಹುಡುಕಲು ಹೋಗುತ್ತಾನಲ್ಲವೆ? 13 ಅವನು ಅದನ್ನು ಕಂಡುಕೊಂಡರೆ, ಬೇರೆಯಾಗದೇ ಇರುವ ತೊಂಬತ್ತೊಂಬತ್ತು ಕುರಿಗಳಿಗಿಂತ ಆ ಒಂದು ಕುರಿಯ ವಿಷಯದಲ್ಲಿ ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ. 14 ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವುದನ್ನು ಸ್ವರ್ಗದಲ್ಲಿರುವ ನನ್ನ ತಂದೆಯು ಇಷ್ಟಪಡುವುದಿಲ್ಲ.
15 “ಮಾತ್ರವಲ್ಲದೆ ನಿನ್ನ ಸಹೋದರನು ಪಾಪಮಾಡಿದರೆ, ನೀನು ಮತ್ತು ಅವನು ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. 16 ಆದರೆ ಅವನು ನಿನ್ನ ಮಾತಿಗೆ ಕಿವಿಗೊಡದಿದ್ದರೆ, ಇಬ್ಬರು ಅಥವಾ ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ವಿಷಯವು ಸ್ಥಾಪಿಸಲ್ಪಡಲಿಕ್ಕಾಗಿ ನಿನ್ನೊಂದಿಗೆ ಇನ್ನೂ ಒಬ್ಬನನ್ನು ಅಥವಾ ಇಬ್ಬರನ್ನು ಕರೆದುಕೊಂಡು ಹೋಗು. 17 ಅವನು ಅವರ ಮಾತಿಗೆ ಕಿವಿಗೊಡದೆ ಹೋದರೆ ಸಭೆಗೆ ತಿಳಿಸು. ಅವನು ಸಭೆಯ ಮಾತಿಗೂ ಕಿವಿಗೊಡದೆ ಹೋದರೆ, ಅವನು ನಿನಗೆ ಅನ್ಯಜನಾಂಗದವನಂತೆಯೂ ತೆರಿಗೆ ವಸೂಲಿಮಾಡುವವನಂತೆಯೂ ಇರಲಿ.
18 “ನೀವು ಭೂಮಿಯ ಮೇಲೆ ಕಟ್ಟಬಹುದಾದ ಯಾವುದೇ ವಸ್ತುಗಳು ಸ್ವರ್ಗದಲ್ಲಿ ಆಗಲೇ ಕಟ್ಟಲ್ಪಟ್ಟಿರುವ ವಸ್ತುಗಳಾಗಿರುವವು ಮತ್ತು ನೀವು ಭೂಮಿಯ ಮೇಲೆ ಬಿಚ್ಚಬಹುದಾದ ಯಾವುದೇ ವಸ್ತುಗಳು ಸ್ವರ್ಗದಲ್ಲಿ ಆಗಲೇ ಬಿಚ್ಚಲ್ಪಟ್ಟಿರುವ ವಸ್ತುಗಳಾಗಿರುವವು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 19 ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳಬೇಕಾದ ಯಾವುದೇ ಪ್ರಾಮುಖ್ಯ ವಿಷಯದ ಕುರಿತು ಭೂಮಿಯಲ್ಲಿ ಒಂದೇ ಅಭಿಪ್ರಾಯವುಳ್ಳವರಾಗಿದ್ದರೆ, ಸ್ವರ್ಗದಲ್ಲಿರುವ ನನ್ನ ತಂದೆಯ ನಿಮಿತ್ತ ಅದು ಅವರಿಗೆ ನೆರವೇರುವುದು ಎಂದು ಪುನಃ ನಿಮಗೆ ನಿಜವಾಗಿ ಹೇಳುತ್ತೇನೆ. 20 ಏಕೆಂದರೆ ನನ್ನ ಹೆಸರಿನಲ್ಲಿ ಎಲ್ಲಿ ಇಬ್ಬರು ಅಥವಾ ಮೂವರು ಕೂಡಿಬರುತ್ತಾರೋ ಅಲ್ಲಿ ಅವರ ಮಧ್ಯೆ ನಾನಿದ್ದೇನೆ” ಎಂದನು.
21 ಆಗ ಪೇತ್ರನು ಅವನ ಬಳಿಗೆ ಬಂದು, “ಕರ್ತನೇ, ನನ್ನ ಸಹೋದರನು ನನ್ನ ವಿರುದ್ಧ ಪಾಪಮಾಡುವುದಾದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೊ?” ಎಂದು ಕೇಳಿದನು. 22 ಅದಕ್ಕೆ ಯೇಸು ಅವನಿಗೆ, “ಏಳು ಸಾರಿಯಲ್ಲ, ಎಪ್ಪತ್ತೇಳು ಸಾರಿ * ಎಂದು ನಿನಗೆ ಹೇಳುತ್ತೇನೆ.
23 “ಆದುದರಿಂದ ಸ್ವರ್ಗದ ರಾಜ್ಯವು ತನ್ನ ಆಳುಗಳಿಂದ ಲೆಕ್ಕ ತೆಗೆದುಕೊಳ್ಳಲು ಬಯಸಿದ ಅರಸನಿಗೆ ಹೋಲಿಕೆಯಾಗಿದೆ. 24 ಅವನು ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ, ಹತ್ತು ಸಾವಿರ ತಲಾಂತುಗಳಷ್ಟು * [=6,00,00,000 ದಿನಾರುಗಳು *] ಸಾಲ ತೀರಿಸಬೇಕಾಗಿದ್ದ ಒಬ್ಬ ಮನುಷ್ಯನನ್ನು ಅವನ ಬಳಿಗೆ ತರಲಾಯಿತು. 25 ಆದರೆ ಆ ಸಾಲವನ್ನು ತೀರಿಸಲು ಅವನಿಗೆ ಯಾವುದೇ ಮಾರ್ಗವಿಲ್ಲದಿದ್ದುದರಿಂದ, ಅವನನ್ನೂ ಅವನ ಹೆಂಡತಿಮಕ್ಕಳನ್ನೂ ಅವನ ಬಳಿಯಿದ್ದ ಎಲ್ಲವನ್ನೂ ಮಾರಿ ಸಾಲವನ್ನು ತೀರಿಸುವಂತೆ ಅವನ ಯಜಮಾನನು ಆಜ್ಞಾಪಿಸಿದನು. 26 ಆಗ ಆ ಆಳು ಅವನಿಗೆ ಪ್ರಣಾಮಮಾಡತೊಡಗಿ, ‘ಒಡೆಯನೇ, ನನಗೆ ತಾಳ್ಮೆ ತೋರಿಸು; ನಾನು ನಿನ್ನ ಸಾಲವನ್ನೆಲ್ಲ ತೀರಿಸುತ್ತೇನೆ’ ಎಂದು ಬೇಡಿಕೊಂಡನು. 27 ಇದರಿಂದಾಗಿ ಆ ಆಳಿನ ಯಜಮಾನನು ಅವನ ಮೇಲೆ ಕನಿಕರಪಟ್ಟು ಅವನನ್ನು ಬಿಟ್ಟುಬಿಟ್ಟನು ಮತ್ತು ಅವನ ಸಾಲವನ್ನು ರದ್ದುಮಾಡಿದನು. 28 ಆದರೆ ಆ ಆಳು ಹೊರಗೆ ಹೋಗಿ ತನಗೆ ನೂರು ದಿನಾರು ಸಾಲ ತೀರಿಸಬೇಕಾಗಿದ್ದ ತನ್ನ ಜೊತೆ ಆಳುಗಳಲ್ಲಿ ಒಬ್ಬನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕುತ್ತಾ, ‘ನನಗೆ ಕೊಡಬೇಕಾಗಿರುವ ಸಾಲವನ್ನು ಕೊಟ್ಟು ತೀರಿಸು’ ಎಂದು ಹೇಳಿದನು. 29 ಆಗ ಅವನ ಜೊತೆ ಆಳು ಅವನಿಗೆ ಅಡ್ಡಬಿದ್ದು, ‘ನನಗೆ ತಾಳ್ಮೆ ತೋರಿಸು; ನಾನು ನಿನ್ನ ಸಾಲವನ್ನು ತೀರಿಸುತ್ತೇನೆ’ ಎಂದು ಬೇಡಿಕೊಂಡನು. 30 ಆದರೆ ಅವನು ಇದಕ್ಕೆ ಒಪ್ಪದೆ ಅಲ್ಲಿಂದ ಹೊರಟುಹೋಗಿ ಆ ಜೊತೆ ಆಳು ತನ್ನ ಸಾಲವನ್ನು ತೀರಿಸುವ ತನಕ ಅವನನ್ನು ಸೆರೆಮನೆಗೆ ಹಾಕಿಸಿದನು. 31 ನಡೆದ ಸಂಗತಿಯನ್ನು ನೋಡಿದ ಅವನ ಜೊತೆ ಆಳುಗಳು ಬಹಳ ದುಃಖಿತರಾದರು ಮತ್ತು ಹೋಗಿ ನಡೆದದ್ದನ್ನೆಲ್ಲ ತಮ್ಮ ಯಜಮಾನನಿಗೆ ತಿಳಿಸಿದರು. 32 ಆಗ ಅವನ ಯಜಮಾನನು ಅವನನ್ನು ಕರೆಸಿ, ‘ದುಷ್ಟ ಆಳೇ, ನೀನು ಬೇಡಿಕೊಂಡಾಗ ನಾನು ನಿನ್ನ ಸಾಲವನ್ನೆಲ್ಲ ರದ್ದುಮಾಡಿದೆ. 33 ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೆ ಆಳಿನ ಮೇಲೆ ಕರುಣೆ ತೋರಿಸಬೇಕಿತ್ತಲ್ಲವೆ?’ ಎಂದನು. 34 ಕ್ರೋಧಭರಿತನಾದ ಯಜಮಾನನು ಸಾಲವನ್ನೆಲ್ಲ ತೀರಿಸುವ ತನಕ ಅವನನ್ನು ಸೆರೆಯವರ * ಕೈಗೆ ಒಪ್ಪಿಸಿದನು. 35 ತದ್ರೀತಿಯಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನನ್ನು ಹೃದಯಪೂರ್ವಕವಾಗಿ ಕ್ಷಮಿಸದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆಯು ಸಹ ನಿಮಗೆ ಹಾಗೆಯೇ ಮಾಡುವನು” ಎಂದು ಹೇಳಿದನು.