ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt 2 ತಿಮೊತಿ 1: 1-4: 22
  • 2 ತಿಮೊತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 2 ತಿಮೊತಿ
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ತಿಮೊತಿ

ತಿಮೊತಿಗೆ ಬರೆದ ಎರಡನೇ ಪತ್ರ

1 ನಾನು ಪೌಲ, ದೇವರ ಇಷ್ಟದ ಪ್ರಕಾರ ಕ್ರಿಸ್ತ ಯೇಸುವಿನ ಅಪೊಸ್ತಲನಾಗಿದ್ದೀನಿ. ಕ್ರಿಸ್ತ ಯೇಸು ಮೂಲಕ ದೇವರು ಕೊಟ್ಟಿರೋ ಜೀವದ+ ಮಾತನ್ನ ಸಾರೋಕೆ ನನ್ನನ್ನ ನೇಮಿಸಲಾಗಿದೆ. 2 ನನ್ನ ಪ್ರೀತಿಯ ಮಗ ತಿಮೊತಿ,+

ತಂದೆಯಾದ ದೇವರು ಮತ್ತು ನಮ್ಮ ಪ್ರಭು ಕ್ರಿಸ್ತ ಯೇಸು ನಿನಗೆ ಅಪಾರ ಕೃಪೆ, ಕರುಣೆ ತೋರಿಸ್ಲಿ, ಶಾಂತಿ ಕೊಡ್ಲಿ.

3 ನಾನು ದೇವರಿಗೆ ಚಿರಋಣಿ. ನಾನು ನನ್ನ ಪೂರ್ವಜರ ಹಾಗೆ ಶುದ್ಧ ಮನಸ್ಸಾಕ್ಷಿಯಿಂದ ಆತನಿಗೆ ಪವಿತ್ರ ಸೇವೆ ಮಾಡ್ತಿದ್ದೀನಿ. ಹಗಲೂರಾತ್ರಿ ಆತನಿಗೆ ಅಂಗಲಾಚಿ ಬೇಡುವಾಗ ನಿನ್ನನ್ನ ಯಾವಾಗ್ಲೂ ನೆನಪಿಸ್ಕೊಳ್ತೀನಿ. 4 ನೀನು ಕಣ್ಣೀರು ಇಟ್ಟಿದ್ದು ನನಗಿನ್ನೂ ನೆನಪಿದೆ. ನಿನ್ನನ್ನ ನೋಡಿದಾಗ್ಲೇ ನಂಗೆ ತುಂಬ ಖುಷಿ ಆಗೋದು. ಅದಕ್ಕೇ ನಾನು ಕಾಯ್ತಾ ಇದ್ದೀನಿ. 5 ನಿನ್ನ ಪ್ರಾಮಾಣಿಕ* ನಂಬಿಕೆ ಬಗ್ಗೆ ನಾನು ನೆನಪಿಸ್ಕೊಳ್ತೀನಿ.+ ಅಂಥ ನಂಬಿಕೆ ನಿನ್ನ ಅಜ್ಜಿ ಲೋವಿ, ನಿನ್ನ ಅಮ್ಮ ಯೂನಿಕೆಯಲ್ಲಿ ಇತ್ತು. ಅದು ನಿನ್ನಲ್ಲೂ ಇದೆ ಅನ್ನೋ ನಂಬಿಕೆ ನನಗಿದೆ.

6 ಹಾಗಾಗಿ ನಾನು ನಿನ್ನ ಮೇಲೆ ಕೈಗಳನ್ನಿಟ್ಟಾಗ ನೀನು ದೇವರಿಂದ ಪಡೆದ ಸಾಮರ್ಥ್ಯವನ್ನ ಚೆನ್ನಾಗಿ ಬಳಸು ಅಂತ ನೆನಪಿಸ್ತೀನಿ. ಬೆಂಕಿಯನ್ನ ಊದಿ ಹೆಚ್ಚಿಸೋ ಹಾಗೆ ಆ ಸಾಮರ್ಥ್ಯವನ್ನ ಹೆಚ್ಚಿಸು.+ 7 ದೇವರು ಕೊಡೋ ಪವಿತ್ರಶಕ್ತಿ* ನಮ್ಮಲ್ಲಿ ಹೇಡಿತನವನ್ನ ಅಲ್ಲ,+ ಬಲ,+ ಪ್ರೀತಿ, ಒಳ್ಳೇ ವಿವೇಚನೆ ಹುಟ್ಟಿಸುತ್ತೆ. 8 ಹಾಗಾಗಿ ನಮ್ಮ ಪ್ರಭು ಬಗ್ಗೆ ಸಾರೋಕೆ ನಾಚಿಕೆ ಪಡಬೇಡ,+ ಆತನ ಸಲುವಾಗಿ ಜೈಲಲ್ಲಿ ಇರೋ ನನ್ನನ್ನ ನೋಡಿ ಬೇಜಾರು ಮಾಡ್ಕೊಬೇಡ. ಬದಲಿಗೆ ಸಿಹಿಸುದ್ದಿ ಸಾರುವಾಗ ಬರೋ ಕಷ್ಟಗಳನ್ನ ಎದುರಿಸು.+ ಅದಕ್ಕೆ ಬೇಕಾದ ಬಲವನ್ನ ದೇವರು ಕೊಡ್ತಾನೆ ಅಂತ ಭರವಸೆ ಇಡು.+ 9 ಆತನು ನಮ್ಮನ್ನ ರಕ್ಷಿಸಿದ್ದು, ಪವಿತ್ರ ಜನ್ರಾಗಿರೋಕೆ ಕರೆದಿದ್ದು+ ನಮ್ಮ ಕೆಲಸ ನೋಡಿ ಅಲ್ಲ, ಆತನ ಅಪಾರ ಕೃಪೆ+ ಮತ್ತು ಆತನ ಉದ್ದೇಶನೇ ಇದಕ್ಕೆ ಕಾರಣ. ಆತನು ಎಷ್ಟೋ ಮುಂಚೆನೇ ಕ್ರಿಸ್ತ ಯೇಸು ಮೂಲಕ ನಮಗೆ ಅಪಾರ ಕೃಪೆ ತೋರಿಸಿದನು. 10 ಆದ್ರೆ ನಮ್ಮ ರಕ್ಷಕ ಕ್ರಿಸ್ತ ಯೇಸು+ ಕಾಣಿಸ್ಕೊಳ್ಳೋ ಮೂಲಕ ಆ ಕೃಪೆ ಬಗ್ಗೆ ಈಗ ನಮಗೆ ಸ್ಪಷ್ಟವಾಗಿ ಅರ್ಥ ಆಗಿದೆ. ಆತನು ಸಾವನ್ನೇ ಅಳಿಸಿಹಾಕಿದ್ದಾನೆ.+ ಜೀವ ಮತ್ತು ಅಳಿದು ಹೋಗದ ದೇಹ + ಪಡಿಯೋದು ಹೇಗಂತ ಸಿಹಿಸುದ್ದಿ+ ಮೂಲಕ ತೋರಿಸಿದ್ದಾನೆ.+ 11 ಆ ಸಿಹಿಸುದ್ದಿ ಹೇಳೋಕೇ ನನ್ನನ್ನ ಸಾರುವವನಾಗಿ, ಅಪೊಸ್ತಲನಾಗಿ ಮತ್ತು ಬೋಧಕನಾಗಿ ನೇಮಿಸಿದ್ದಾನೆ.+

12 ಹಾಗಾಗಿ ನಾನೂ ಈ ಎಲ್ಲ ಕಷ್ಟಗಳನ್ನ ಅನುಭವಿಸ್ತಾ ಇದ್ದೀನಿ.+ ಆದ್ರೆ ನಾನು ನಾಚಿಕೆಪಡಲ್ಲ.+ ಯಾಕಂದ್ರೆ ನಾನು ನಂಬಿರೋ ದೇವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನಾನು ಆತನಿಗೆ ಯಾವುದನ್ನ ಒಪ್ಪಿಸಿದ್ದೀನೋ ಅದನ್ನ ಆತನು ತೀರ್ಪಿನ ದಿನದ ತನಕ ಕಾಪಾಡ್ತಾನೆ ಅನ್ನೋ ನಂಬಿಕೆ ಇದೆ.+ 13 ನಾನು ನಿನಗೆ ಹೇಳಿದ ಒಳ್ಳೇ* ಮಾತುಗಳನ್ನ ಮಾದರಿಯಾಗಿ ಇಟ್ಕೊಂಡು ಪಾಲಿಸ್ತಾ ಇರು.+ ಕ್ರಿಸ್ತ ಯೇಸು ಜೊತೆ ಒಂದಾಗಿರೋ ನೀನು ನಂಬಿಕೆ ಪ್ರೀತಿ ತೋರಿಸ್ತಾ ಇರು. 14 ನಿನಗೆ ಒಪ್ಪಿಸಿರೋ ಅಮೂಲ್ಯ ವಿಷ್ಯವನ್ನ ನಮ್ಮಲ್ಲಿರೋ* ಪವಿತ್ರಶಕ್ತಿ ಮೂಲಕ ಕಾಪಾಡ್ಕೊ.+

15 ಏಷ್ಯಾ ಪ್ರದೇಶದ ಜನ್ರೆಲ್ಲ+ ನನ್ನನ್ನ ಬಿಟ್ಟುಹೋದ್ರು ಅಂತ ನಿಂಗೊತ್ತು. ಫುಗೇಲ, ಹೆರ್ಮೊಗೇನನೂ ಬಿಟ್ಟು ಹೋದ್ರು. 16 ಒನೇಸಿಫೊರನ+ ಮನೆಯವ್ರಿಗೆ ದೇವರು ಕರುಣೆ ತೋರಿಸ್ಲಿ, ಯಾಕಂದ್ರೆ ಅವನು ತುಂಬ ಸಲ ನನಗೆ ಹೊಸಬಲ ತುಂಬಿದ. ನಾನು ಜೈಲಲ್ಲಿದ್ದೀನಿ, ನನಗೆ ಬೇಡಿ ಹಾಕಿದ್ದಾರೆ ಅಂತ ಅವನು ನಾಚಿಕೆಪಡಲಿಲ್ಲ. 17 ಅವನು ರೋಮ್‌ನಲ್ಲಿ ಇದ್ದಾಗ ನನ್ನನ್ನ ಹುಡುಕಿ ಕಂಡುಹಿಡಿದ. 18 ಅವನಿಗೆ ಒಡೆಯನಾದ ಯೆಹೋವ* ತೀರ್ಪಿನ ದಿನ ಕರುಣೆ ತೋರಿಸ್ಲಿ. ಅವನು ಎಫೆಸದಲ್ಲಿ ಎಷ್ಟೆಲ್ಲ ಸೇವೆ ಮಾಡಿದ ಅಂತ ನಿನಗೆ ಚೆನ್ನಾಗಿ ಗೊತ್ತಲ್ವಾ.

2 ಹಾಗಾಗಿ ಮಗನೇ,+ ಕ್ರಿಸ್ತ ಯೇಸುವಿನ ಅಪಾರ ಕೃಪೆಯಿಂದ ಬಲ ಪಡ್ಕೊಳ್ತಾ ಇರು. 2 ನಾನು ನಿನಗೆ ಹೇಳಿದ ವಿಷ್ಯಗಳನ್ನ ಮತ್ತು ತುಂಬ ಸಾಕ್ಷಿಗಳು ಒಪ್ಕೊಂಡ ವಿಷ್ಯಗಳನ್ನ+ ನಂಬಿಗಸ್ತರಿಗೆ ಕಲಿಸು. ಆಗ ಅವರು ಬೇರೆಯವ್ರಿಗೆ ಕಲಿಸೋಕೆ ಸಾಕಷ್ಟು ಅರ್ಹತೆ ಪಡ್ಕೊತಾರೆ. 3 ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಾಗಿ+ ನಿನಗೆ ಬರೋ ಸಂಕಷ್ಟಗಳನ್ನ ಅನುಭವಿಸು.+ 4 ಒಬ್ಬನು ಸೈನಿಕನಾದ ಮೇಲೆ ವ್ಯಾಪಾರ ವ್ಯವಹಾರ* ನಡಿಸಲ್ಲ.* ಯಾಕಂದ್ರೆ ಅವನು ತನ್ನ ಸೇನಾಪತಿಯನ್ನ ಖುಷಿಪಡಿಸೋಕೆ ಇಷ್ಟಪಡ್ತಾನೆ. 5 ಆಟಗಳಲ್ಲೂ ನೋಡು, ನಿಯಮ ಬಿಟ್ಟು ಆಡಿದ್ರೆ ಕಿರೀಟ ಸಿಗಲ್ಲ.+ 6 ಬೆವರು ಸುರಿಸಿ ದುಡ್ಯೋ ರೈತ ತನ್ನ ಬೆಳೆಯ ಫಲವನ್ನ ಮೊದ್ಲು ತಿನ್ನಬೇಕು. 7 ನಾನು ಹೇಳ್ತಿರೋ ವಿಷ್ಯದ ಬಗ್ಗೆ ಯಾವಾಗ್ಲೂ ಯೋಚಿಸು. ಎಲ್ಲ ವಿಷ್ಯ ಅರ್ಥ ಮಾಡ್ಕೊಳ್ಳೋಕೆ* ದೇವರು ನಿನಗೆ ಸಹಾಯ ಮಾಡ್ತಾನೆ.

8 ನೆನಪಿಡು, ದೇವರು ಯೇಸು ಕ್ರಿಸ್ತನನ್ನ ಮತ್ತೆ ಜೀವಂತ ಎಬ್ಬಿಸಿದನು.+ ಆತನೇ ದಾವೀದನ ಸಂತಾನ.+ ಇದೇ ನಾನು ಸಾರೋ ಸಿಹಿಸುದ್ದಿ.+ 9 ಇದಕ್ಕೇ ನಾನು ಕಷ್ಟ ಅನುಭವಿಸ್ತಾ ಇದ್ದೀನಿ, ತಪ್ಪು ಮಾಡಿದವ್ರ ತರ ಜೈಲಲ್ಲಿ ಇದ್ದೀನಿ.+ ಹಾಗಿದ್ರೂ ದೇವರು ಕಲಿಸೋ ವಿಷ್ಯಗಳು ಜೈಲಲ್ಲಿ ಇಲ್ಲ.+ 10 ಈ ಕಾರಣಕ್ಕೇ ದೇವರು ಆರಿಸ್ಕೊಂಡ ಜನ್ರಿಗೋಸ್ಕರ ನಾನು ಎಲ್ಲ ಸಹಿಸ್ಕೊಳ್ತಾ ಇದ್ದೀನಿ.+ ಕ್ರಿಸ್ತ ಯೇಸು ಮೂಲಕ ಅವರೂ ರಕ್ಷಣೆ ಪಡಿಬೇಕು, ಶಾಶ್ವತ ಮಹಿಮೆ ಪಡಿಬೇಕು ಅಂತ ಸಹಿಸ್ಕೊಳ್ತಾ ಇದ್ದೀನಿ. 11 ಇದು ನಂಬುವಂಥ ವಿಷ್ಯ, ಏನಂದ್ರೆ ನಾವು ಆತನ ಜೊತೆ ಸತ್ತಿದ್ರೆ ನಿಜವಾಗ್ಲೂ ಆತನ ಜೊತೆ ಜೀವಿಸ್ತೀವಿ.+ 12 ಸಹಿಸ್ಕೊಳ್ತಾ ಇದ್ರೆ ನಾವೂ ಆತನ ಜೊತೆ ರಾಜರಾಗಿ ಆಳ್ತೀವಿ.+ ಆತನು ಯಾರಂತ ಗೊತ್ತಿಲ್ಲ ಅಂತ ನಾವು ಹೇಳಿದ್ರೆ ಆತನೂ ಹಾಗೇ ಹೇಳ್ತಾನೆ.+ 13 ನಾವು ನಂಬಿಕೆ ದ್ರೋಹ ಮಾಡಿದ್ರೂ ಆತನು ನಂಬಿಗಸ್ತನಾಗೇ ಇರ್ತಾನೆ, ಯಾಕಂದ್ರೆ ತನ್ನ ಸ್ವಭಾವದ ವಿರುದ್ಧ ನಡಿಯೋಕೆ ಆತನಿಗೆ ಸಾಧ್ಯನೇ ಇಲ್ಲ.

14 ಈ ವಿಷ್ಯಗಳನ್ನ ಅವ್ರಿಗೆ ನೆನಪಿಸ್ತಾ ಇರು. ಪದಗಳ ಬಗ್ಗೆ ಜಗಳ ಮಾಡಬಾರದು ಅಂತ ದೇವರ ಮುಂದೆ ಅವ್ರಿಗೆ ಹೇಳು.* ಅಂಥ ಜಗಳದಿಂದ ಕೇಳುವವ್ರಿಗೆ ನಷ್ಟ ಆಗುತ್ತೆ* ಬಿಟ್ರೆ ಪ್ರಯೋಜನ ಅಂತೂ ಆಗಲ್ಲ. 15 ದೇವರು ಮೆಚ್ಚಿದ ಸೇವಕನಾಗೋಕೆ, ಹುಡುಕಿದ್ರೂ ತಪ್ಪು ಸಿಗದ ಒಳ್ಳೇ ಕೆಲಸಗಾರನಾಗೋಕೆ,* ಪವಿತ್ರ ಗ್ರಂಥವನ್ನ* ಸರಿಯಾಗಿ ಬಳಸೋ ವ್ಯಕ್ತಿಯಾಗೋಕೆ+ ನಿನ್ನಿಂದ ಆಗೋದನ್ನೆಲ್ಲ ಮಾಡು. 16 ಆದ್ರೆ ಪವಿತ್ರ ಆಗಿರೋದನ್ನ ಕೆಡಿಸೋ ಸುಳ್ಳು ಮಾತುಗಳನ್ನ ಕೇಳಿಸ್ಕೊಬೇಡ.+ ಯಾಕಂದ್ರೆ ಅಂಥ ಮಾತನ್ನ ಹೇಳುವವರು ದೇವರಿಗೆ ಅಗೌರವ ತರೋ ರೀತಿಯಲ್ಲೇ ನಡಿತಾರೆ. 17 ಅವರ ಮಾತು ಕೊಳಕು ಹುಣ್ಣಿನ ತರ ಹರಡುತ್ತೆ. ಹುಮೆನಾಯ, ಪಿಲೇತ ಅಂಥವ್ರೇ.+ 18 ಅವ್ರಿಬ್ರೂ ಸತ್ಯ ಬಿಟ್ಟು ಹೋಗಿದ್ದಾರೆ. ಸತ್ತವರು ಈಗಾಗ್ಲೇ ಜೀವಂತವಾಗಿದ್ದಾರೆ ಅಂತ ಹೇಳ್ತಿದ್ದಾರೆ,+ ಜನ್ರ ನಂಬಿಕೆಯನ್ನ ಹಾಳು ಮಾಡ್ತಿದ್ದಾರೆ. 19 ಹಾಗಿದ್ರೂ ದೇವರು ಹಾಕಿರೋ ಗಟ್ಟಿಯಾದ ಅಡಿಪಾಯ ಭದ್ರವಾಗಿ ಇರುತ್ತೆ. “ತನ್ನವರು ಯಾರಂತ ಯೆಹೋವನಿಗೆ* ಚೆನ್ನಾಗಿ ಗೊತ್ತು”+ ಮತ್ತು “ಯೆಹೋವನ* ಹೆಸ್ರನ್ನ ಪಡಿದಿರೋ ಪ್ರತಿಯೊಬ್ರೂ+ ಅನೀತಿಯನ್ನ ಬಿಟ್ಟುಬಿಡ್ಲಿ” ಅನ್ನೋ ಮುದ್ರೆ ಆ ಅಡಿಪಾಯದ ಮೇಲಿದೆ.

20 ದೊಡ್ಡ ಮನೇಲಿ ಚಿನ್ನ ಬೆಳ್ಳಿಯ ಪಾತ್ರೆಗಳಷ್ಟೇ ಅಲ್ಲ ಮರದ ಮತ್ತು ಮಣ್ಣಿನ ಪಾತ್ರೆಗಳೂ ಇರುತ್ತೆ. ಸ್ವಲ್ಪ ಪಾತ್ರೆಗಳನ್ನ ವಿಶೇಷ* ಕೆಲಸಗಳಿಗೆ ಬಳಸಿದ್ರೆ, ಇನ್ನೂ ಸ್ವಲ್ಪ ಪಾತ್ರೆಗಳನ್ನ ಮಾಮೂಲಿ* ಕೆಲಸಕ್ಕೆ ಬಳಸ್ತಾರೆ. 21 ಮಾಮೂಲಿ ಪಾತ್ರೆ ತರ ಇರೋ ಜನ್ರಿಂದ ಯಾರು ದೂರ ಇರ್ತಾರೋ ಅವರು ವಿಶೇಷ ಪಾತ್ರೆ ತರ ಇರ್ತಾರೆ, ಅವ್ರನ್ನ ಮಾಮೂಲಿ ಪಾತ್ರೆ ತರ ಇರೋ ಜನ್ರ ಜೊತೆ ಸೇರಿಸಲ್ಲ, ಅವ್ರಿಂದ ಯಜಮಾನನಿಗೆ ಪ್ರಯೋಜನ ಇದೆ ಮತ್ತು ಅವ್ರನ್ನ ಪ್ರತಿಯೊಂದು ಒಳ್ಳೇ ಕೆಲಸಕ್ಕೆ ಸಿದ್ಧಮಾಡ್ತಾರೆ. 22 ಹಾಗಾಗಿ ಯೌವನದಲ್ಲಿ ಬರೋ ಆಸೆಗಳಿಂದ ದೂರ ಓಡಿಹೋಗು. ಶುದ್ಧ ಹೃದಯದಿಂದ ದೇವರಿಗೆ ಬೇಡುವವ್ರ ಜೊತೆ ನೀತಿ, ನಂಬಿಕೆ, ಪ್ರೀತಿ, ಶಾಂತಿಯನ್ನ ಗಳಿಸೋಕೆ ಶ್ರಮ ಹಾಕು.

23 ಪ್ರಯೋಜನ ಇಲ್ಲದ ಹುಚ್ಚು ವಾದ-ವಿವಾದಕ್ಕೆ ತಲೆ ಹಾಕಬೇಡ.+ ಯಾಕಂದ್ರೆ ಅದ್ರಿಂದ ಬರೀ ಜಗಳ ಹುಟ್ಟುತ್ತೆ ಅಂತ ನಿನಗೆ ಗೊತ್ತಲ್ವಾ. 24 ದೇವರ ಸೇವಕನಿಗೆ ಜಗಳ ಮಾಡೋ ಅಗತ್ಯ ಇಲ್ಲ. ಅವನು ಎಲ್ರ ಜೊತೆ ಮೃದುವಾಗಿ* ನಡ್ಕೊಬೇಕು,+ ಕಲಿಸೋ ಯೋಗ್ಯತೆ ಇರಬೇಕು, ತನ್ನ ವಿರುದ್ಧ ಯಾರಾದ್ರೂ ತಪ್ಪು ಮಾಡಿದ್ರೂ ತನ್ನನ್ನ ಹತೋಟಿಯಲ್ಲಿ ಇಟ್ಕೊಬೇಕು.+ 25 ವಿರೋಧಿಸುವವ್ರಿಗೆ ಸೌಮ್ಯವಾಗಿ ಉಪದೇಶ ಕೊಡಬೇಕು.+ ಒಂದುವೇಳೆ ಅವರು ಪಶ್ಚಾತ್ತಾಪಪಟ್ಟು ಸತ್ಯದ ಸರಿಯಾದ ಜ್ಞಾನ ಪಡಿಯೋಕೆ ದೇವರು ಅವಕಾಶ ಕೊಡಬಹುದು.+ 26 ಆಗ ಅವ್ರಿಗೆ ಬುದ್ಧಿ ಬಂದು, ಸೈತಾನ ತನ್ನ ಇಷ್ಟದ ಪ್ರಕಾರ ಮಾಡೋಕೆ ಅವ್ರನ್ನ ಜೀವಂತ ಹಿಡಿದಿದ್ದಾನೆ ಅಂತ ಅರ್ಥ ಮಾಡ್ಕೊಳ್ತಾರೆ.+ ಆಗ ಅವನ ಬಲೆಯಿಂದ ತಪ್ಪಿಸ್ಕೊಳ್ತಾರೆ.

3 ಆದ್ರೆ ಈ ವಿಷ್ಯ ಗೊತ್ತಿರಲಿ, ಏನಂದ್ರೆ ಕೊನೇ ದಿನಗಳಲ್ಲಿ+ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. 2 ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು, ತಮ್ಮ ಬಗ್ಗೆ ಕೊಚ್ಕೊಳ್ಳುವವರು, ಅಹಂಕಾರಿಗಳು, ಬೈಯೋರು, ಅಪ್ಪಅಮ್ಮನ ಮಾತು ಕೇಳದವರು, ಮಾಡಿದ ಉಪಕಾರ ಮರೆತುಬಿಡುವವರು, ನಂಬಿಕೆದ್ರೋಹ ಮಾಡುವವರು,⁠ 3 ಕುಟುಂಬದವ್ರನ್ನ ಪ್ರೀತಿಸದವರು, ಯಾವುದಕ್ಕೂ ಒಪ್ಪದವರು, ಬೇರೆಯವ್ರ ಹೆಸ್ರು ಹಾಳು ಮಾಡುವವರು, ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು, 4 ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು, ದೇವರನ್ನ ಪ್ರೀತಿಸದೆ ತಮ್ಮ ಆಸೆಗಳನ್ನ ತೀರಿಸ್ಕೊಳ್ಳೋಕೆ ಇಷ್ಟಪಡುವವರು, 5 ಮೇಲೆ ದೇವಭಕ್ತಿಯ ವೇಷ ಹಾಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಮಾಡದವರು ಇರ್ತಾರೆ.+ ಇಂಥವ್ರ ಜೊತೆ ಸೇರಬೇಡ. 6 ಇವ್ರಲ್ಲಿ ಸ್ವಲ್ಪ ಜನ ಮೋಸದಿಂದ ಮನೆಯೊಳಗೆ ನುಗ್ತಾರೆ. ಪಾಪಿಗಳಾಗಿ ತಮ್ಮ ಆಸೆಗಳಿಗೆ ಗುಲಾಮರಾಗಿರೋ ಚಂಚಲ ಸ್ತ್ರೀಯರನ್ನ ಹಿಡ್ಕೊಂಡು ಹೋಗ್ತಾರೆ. 7 ಇವರು ಕಲಿತಾನೇ ಇರ್ತಾರೆ, ಆದ್ರೆ ಯಾವತ್ತೂ ಸತ್ಯದ ಸರಿಯಾದ ಜ್ಞಾನ ಪಡ್ಕೊಳಲ್ಲ.

8 ಯನ್ನ ಮತ್ತು ಯಂಬ್ರ ಅನ್ನುವವರು ಮೋಶೆನ ವಿರೋಧಿಸಿದ ತರ ಇವರೂ ಸತ್ಯವನ್ನ ವಿರೋಧಿಸ್ತಾರೆ. ಅವ್ರ ತಲೆ ಪೂರ್ತಿ ಕೆಟ್ಟಿದೆ, ಅವರು ಸತ್ಯದ ಪ್ರಕಾರ ನಡಿದೇ ಇರೋದ್ರಿಂದ ದೇವರು ಅವ್ರನ್ನ ಮೆಚ್ಚಲ್ಲ. 9 ಅವ್ರಂತೂ ಉದ್ಧಾರ ಆಗಲ್ಲ. ಯಾಕಂದ್ರೆ ಅವರಿಬ್ರೂ ಮೂರ್ಖರು* ಅಂತ ಹೇಗೆ ಎಲ್ರಿಗೆ ಗೊತ್ತಾಯ್ತೋ ಅದೇ ತರ ಇವ್ರೂ ಮೂರ್ಖರೇ ಅಂತ ಗೊತ್ತಾಗುತ್ತೆ.+ 10 ಆದ್ರೆ ನೀನು ಹಾಗಿಲ್ಲ. ನಾನು ಏನು ಕಲಿಸ್ದೆ, ನಾನು ಹೇಗೆ ನಡ್ಕೊಂಡೆ,+ ನನ್ನ ಉದ್ದೇಶ, ನಂಬಿಕೆ, ತಾಳ್ಮೆ, ಪ್ರೀತಿ, ಸಹನೆಯನ್ನ ನೀನು ಚೆನ್ನಾಗಿ ಗಮನಿಸಿದ್ದೀಯ. 11 ಅಂತಿಯೋಕ್ಯ,+ ಇಕೋನ್ಯ+ ಮತ್ತು ಲುಸ್ತ್ರದಲ್ಲಿ+ ನನಗೆ ಬಂದ ಕಷ್ಟಹಿಂಸೆ ಎಲ್ಲ ನಿಂಗೊತ್ತು. ಅದನ್ನೆಲ್ಲ ನಾನು ಸಹಿಸ್ಕೊಂಡೆ. ಒಡೆಯ ಅದೆಲ್ಲದ್ರಿಂದ ನನ್ನನ್ನ ಕಾಪಾಡಿದನು.+ 12 ನಿಜ ಹೇಳಬೇಕಂದ್ರೆ, ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ* ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.+ 13 ಆದ್ರೆ ಕೆಟ್ಟವರು ಮೋಸಗಾರರು ಕೆಟ್ಟದ್ರಿಂದ ಇನ್ನೂ ಕೆಟ್ಟತನಕ್ಕೆ ಇಳಿತಾರೆ. ಅವರು ಮೋಸಮಾಡ್ತಾ ಮೋಸಹೋಗ್ತಾ ಇರ್ತಾರೆ.+

14 ಆದ್ರೆ ನೀನು ಕಲಿತ ಮತ್ತು ನಂಬಿದ ವಿಷ್ಯಗಳನ್ನ ಪಾಲಿಸ್ತಾ ಇರು.+ ಯಾಕಂದ್ರೆ ಅದನ್ನೆಲ್ಲ ಯಾರಿಂದ ನೀನು ಕಲಿತೆ ಅಂತ ನಿಂಗೊತ್ತು. 15 ನೀನು ಹುಟ್ಟಿದಾಗಿಂದ*+ ಪವಿತ್ರ ಪುಸ್ತಕದಲ್ಲಿ ಇರೋದನ್ನ ಕಲ್ತಿದ್ದೀಯ.+ ಆ ಪುಸ್ತಕ, ಕ್ರಿಸ್ತ ಯೇಸು ಮೇಲೆ ನೀನು ಇಟ್ಟಿರೋ ನಂಬಿಕೆಯಿಂದ ರಕ್ಷಣೆ ಪಡಿಯೋಕೆ ನಿನ್ನನ್ನ ವಿವೇಕಿಯಾಗಿ ಮಾಡುತ್ತೆ.+ 16 ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.*+ ಜನ್ರಿಗೆ ಕಲಿಸೋಕೆ,+ ತಪ್ಪನ್ನ ತೋರಿಸೋಕೆ, ಎಲ್ಲ ವಿಷ್ಯವನ್ನ ಸರಿಮಾಡೋಕೆ, ದೇವರ ಆಲೋಚನೆ ಪ್ರಕಾರ ನಮ್ಮ ಆಲೋಚನೆಗಳನ್ನ ತಿದ್ದೋಕೆ ಅದು ಸಹಾಯ ಮಾಡುತ್ತೆ.+ 17 ಇದ್ರಿಂದ ದೇವರ ಸೇವಕನಿಗೆ ಯಾವಾಗ್ಲೂ ಒಳ್ಳೇ ಕೆಲಸಗಳನ್ನ ಮಾಡೋಕೆ ಸಾಮರ್ಥ್ಯ ಸಿಗುತ್ತೆ.

4 ಕ್ರಿಸ್ತ ಯೇಸು ಪ್ರತ್ಯಕ್ಷ ಆಗೋ ಮೂಲಕ+ ಮತ್ತು ತನ್ನ ಆಳ್ವಿಕೆ ಮೂಲಕ+ ಜೀವಿಸುವವ್ರಿಗೂ ಸತ್ತವ್ರಿಗೂ+ ನ್ಯಾಯತೀರಿಸ್ತಾನೆ.+ ಆತನ ಮುಂದೆ, ದೇವರ ಮುಂದೆ ನಾನು ನಿನಗೆ ಕೊಡೋ ಆಜ್ಞೆ ಏನಂದ್ರೆ, 2 ದೇವರ ಸಂದೇಶವನ್ನ ಸಾರು.+ ಪರಿಸ್ಥಿತಿ ಚೆನ್ನಾಗಿ ಇದ್ದಾಗ್ಲೂ ಕಷ್ಟ ಬಂದಾಗ್ಲೂ ಹುರುಪಿಂದ ತಡಮಾಡ್ದೆ* ಸಾರು. ತಾಳ್ಮೆಯಿಂದ, ಜಾಣ್ಮೆಯಿಂದ ಕಲಿಸ್ತಾ+ ತಪ್ಪು ಮಾಡುವವ್ರನ್ನ ತಿದ್ದು,+ ಎಚ್ಚರಿಕೆ ಕೊಟ್ಟು ಬುದ್ಧಿಹೇಳು. 3 ಯಾಕಂದ್ರೆ ಜನ ಒಳ್ಳೇ* ಮಾತನ್ನ ಕೇಳದ ಸಮಯ ಬರುತ್ತೆ.+ ಆಗ ಅವರು ತಮ್ಮ ಕಿವಿಗೆ ಇಂಪಾದ ವಿಷ್ಯಗಳನ್ನ ಹೇಳೋ* ಬೋಧಕರನ್ನ ತಮಗೆ ಇಷ್ಟಬಂದ ಹಾಗೆ ಸೇರಿಸ್ಕೊಳ್ತಾರೆ.+ 4 ಅವರು ಸತ್ಯವನ್ನ ಬಿಟ್ಟು ಕಟ್ಟುಕಥೆಗಳನ್ನ ಗಮನಕೊಟ್ಟು ಕೇಳ್ತಾರೆ. 5 ಆದ್ರೆ ನೀನು ಏನೇ ಮಾಡಿದ್ರೂ ಯೋಚಿಸಿ ಕೆಲಸಮಾಡು, ಕಷ್ಟವನ್ನ ತಾಳ್ಕೊ,+ ಸಿಹಿಸುದ್ದಿ ಸಾರುತ್ತಾ ಇರು,* ನಿನ್ನ ಸೇವೆಯನ್ನ ಪೂರ್ತಿಯಾಗಿ ಮಾಡು.+

6 ನಾನು ಈಗಾಗ್ಲೇ ನನ್ನನ್ನ ಸುರಿಯೋ ಪಾನ ಅರ್ಪಣೆ ತರ+ ಅರ್ಪಿಸ್ಕೊಂಡಿದ್ದೀನಿ. ಇನ್ನೂ ಸ್ವಲ್ಪ ಸಮಯದಲ್ಲೇ ನನಗೆ ಬಿಡುಗಡೆ ಆಗುತ್ತೆ.+ 7 ನಾನು ಚೆನ್ನಾಗಿ ಹೋರಾಡಿದ್ದೀನಿ,+ ನಾನು ನನ್ನ ಓಟವನ್ನ ಓಡಿ ಮುಗಿಸಿದ್ದೀನಿ,+ ನಾನು ನಂಬಿಕೆಗೆ ತಕ್ಕ ಹಾಗೆ ಜೀವನ ಮಾಡಿದ್ದೀನಿ. 8 ನೀತಿಯಿಂದ ತೀರ್ಪು ಮಾಡೋ ಒಡೆಯ+ ನನಗಾಗಿ ಒಂದು ಕಿರೀಟ ಇಟ್ಟಿದ್ದಾನೆ.+ ಅದು ನೀತಿವಂತರಿಗೆ ಕೊಡೋ ಕಿರೀಟ. ಆತನು ಅದನ್ನ ತೀರ್ಪಿನ ದಿನದಲ್ಲಿ ನನಗೆ ಬಹುಮಾನವಾಗಿ ಕೊಡ್ತಾನೆ.+ ನನಗೆ ಮಾತ್ರ ಅಲ್ಲ ಆತನು ರಾಜನಾಗಿ ಬರೋದನ್ನ ಆಸೆಯಿಂದ ಕಾಯ್ತಾ ಇರೋ ಎಲ್ರಿಗೆ ಅದನ್ನ ಕೊಡ್ತಾನೆ.

9 ನೀನು ಆದಷ್ಟು ಬೇಗ ಇಲ್ಲಿಗೆ ಬಾ. 10 ಯಾಕಂದ್ರೆ ದೇಮ+ ಈ ಲೋಕವನ್ನ* ಪ್ರೀತಿಸಿದ್ರಿಂದ ನನ್ನನ್ನ ಬಿಟ್ಟು ಥೆಸಲೊನೀಕಕ್ಕೆ ಹೋದ. ಕ್ರೆಸ್ಕನು ಗಲಾತ್ಯಕ್ಕೆ, ತೀತನು ದಲ್ಮಾತ್ಯಕ್ಕೆ ಹೋದ. 11 ಲೂಕ ಮಾತ್ರ ನನ್ನ ಜೊತೆ ಇದ್ದಾನೆ. ಮಾರ್ಕನನ್ನ ನಿನ್ನ ಜೊತೆ ಕರ್ಕೊಂಡು ಬಾ, ಯಾಕಂದ್ರೆ ಅವನು ಸೇವೆಯಲ್ಲಿ ನನಗೆ ತುಂಬ ಸಹಾಯ ಮಾಡ್ತಾನೆ. 12 ತುಖಿಕನನ್ನ+ ನಾನು ಎಫೆಸಕ್ಕೆ ಕಳಿಸಿದ್ದೀನಿ. 13 ನೀನು ಬರುವಾಗ ತ್ರೋವದಲ್ಲಿ ನಾನು ಕರ್ಪನ ಮನೇಲಿ ಬಿಟ್ಟುಬಂದಿರೋ ಅಂಗಿನ, ಸುರುಳಿಗಳನ್ನ, ಮುಖ್ಯವಾಗಿ ಚರ್ಮದ ಸುರುಳಿಗಳನ್ನ ತಗೊಂಡು ಬಾ.

14 ತಾಮ್ರದ ಕೆಲಸಮಾಡೋ ಅಲೆಕ್ಸಾಂದ್ರ ನನಗೆ ತುಂಬ ಕೆಟ್ಟದು ಮಾಡಿದ್ದಾನೆ. ಅದಕ್ಕಾಗಿ ಯೆಹೋವ* ಅವನಿಗೆ ತಕ್ಕ ಶಿಕ್ಷೆ ಕೊಡ್ತಾನೆ.+ 15 ಹುಷಾರು! ನೀನೂ ಅವನಿಂದ ದೂರ ಇರು. ಯಾಕಂದ್ರೆ ಅವನು ನಮ್ಮ ಸಂದೇಶವನ್ನ ತುಂಬ ವಿರೋಧಿಸಿದ.

16 ಮೊದಲ್ನೇ ಸಲ ಅಧಿಕಾರಿಗಳ ಮುಂದೆ ನಾನು ವಾದ ಮಾಡುವಾಗ ಯಾರೂ ನನ್ನ ಪಕ್ಷ ನಿಂತ್ಕೊಳ್ಳಲಿಲ್ಲ. ಎಲ್ರೂ ನನ್ನನ್ನ ಬಿಟ್ಟು ಹೋದ್ರು. ಆ ತಪ್ಪಿಗೆ ದೇವರು ಅವ್ರಿಗೆ ಶಿಕ್ಷೆ ಕೊಡಬಾರದು ಅಂತ ಬೇಡ್ಕೊಳ್ತೀನಿ. 17 ಆದ್ರೆ ಒಡೆಯ ನನ್ನ ಪಕ್ಕದಲ್ಲೇ ನಿಂತನು. ನಾನು ಸಿಹಿಸುದ್ದಿಯನ್ನ ಪೂರ್ತಿಯಾಗಿ ಸಾರೋಕೆ ಮತ್ತು ಎಲ್ಲ ಜನ್ರು ಅದನ್ನ ಕೇಳಿಸ್ಕೊಳ್ಳೋಕೆ ಆತನು ನನ್ನಲ್ಲಿ ಶಕ್ತಿ ತುಂಬಿದನು.+ ಸಿಂಹದ ಬಾಯಿಂದ ನನ್ನನ್ನ ಕಾಪಾಡಿದನು.+ 18 ಒಡೆಯ ನನ್ನನ್ನ ಎಲ್ಲ ಕೇಡಿಂದ ಬಿಡಿಸಿ ಕಾಪಾಡಿ ದೇವರ ಆಳ್ವಿಕೆ ಬರೋ ತನಕ ನನ್ನನ್ನ ಸಂರಕ್ಷಿಸ್ತಾನೆ.+ ಆತನಿಗೆ ಯಾವಾಗ್ಲೂ ಗೌರವ ಸಿಗ್ಲಿ. ಆಮೆನ್‌.

19 ಪ್ರಿಸ್ಕಳಿಗೂ ಅಕ್ವಿಲ್ಲಗೂ+ ಒನೆಸಿಫೊರನ+ ಮನೆಯವ್ರಿಗೂ ನನ್ನ ವಂದನೆ ಹೇಳು.

20 ಎರಸ್ತ+ ಕೊರಿಂಥದಲ್ಲಿ ಉಳ್ಕೊಂಡ. ತ್ರೊಫಿಮಗೆ+ ಹುಷಾರಿಲ್ದೆ ಇದ್ದಿದ್ರಿಂದ ನಾನು ಅವನನ್ನ ಮಿಲೇತದಲ್ಲೇ ಬಿಟ್ಟು ಬಂದೆ. 21 ಚಳಿಗಾಲಕ್ಕೆ ಮುಂಚೆ ಬರೋಕೆ ನಿನ್ನಿಂದ ಆದಷ್ಟು ಪ್ರಯತ್ನ ಮಾಡು.

ಯುಬೂಲ, ಪೂದೆಯ, ಲೀನನು, ಕ್ಲೌದ್ಯಳು ಮತ್ತು ಬೇರೆ ಎಲ್ಲ ಸಹೋದರರೂ ನಿನ್ನನ್ನ ಕೇಳಿದ್ದಾರೆ.

22 ನೀನು ತೋರಿಸಿರೋ ಒಳ್ಳೇ ಮನೋಭಾವಕ್ಕೆ ಒಡೆಯ ನಿಮಗೆ ಅಪಾರ ಕೃಪೆ ತೋರಿಸಿ ಆಶೀರ್ವಾದ ಮಾಡ್ಲಿ.

ಅಥವಾ “ಕಪಟವಿಲ್ಲದ.”

ಅಥವಾ “ಸ್ವಭಾವ.”

ಅಥವಾ “ಪ್ರಯೋಜನಕರ.”

ಅಕ್ಷ. “ನಮ್ಮಲ್ಲಿ ವಾಸಿಸೋ.”

ಪರಿಶಿಷ್ಟ ಎ5 ನೋಡಿ.

ಬಹುಶಃ, “ದಿನನಿತ್ಯದ ಚಟುವಟಿಕೆ.”

ಅಕ್ಷ. “ಸಿಕ್ಕಿಕೊಳ್ಳಲ್ಲ.”

ಅಥವಾ “ವಿವೇಚನೆ ಪಡಿಯೋಕೆ.”

ಅಕ್ಷ. “ಪೂರ್ತಿ ಸಾಕ್ಷಿಕೊಡು.”

ಅಥವಾ “ಕೇಳುವವರು ಹಾಳಾಗ್ತಾರೆ, ಬಿದ್ದುಬಿಡ್ತಾರೆ.”

ಅಥವಾ “ಶ್ರಮಜೀವಿ ಆಗೋಕೆ.”

ಅಕ್ಷ. “ದೇವರ ಸತ್ಯ ವಾಕ್ಯ.”

ಪರಿಶಿಷ್ಟ ಎ5 ನೋಡಿ.

ಪರಿಶಿಷ್ಟ ಎ5 ನೋಡಿ.

ಅಥವಾ “ಗೌರವದ.”

ಅಥವಾ “ಗೌರವವಿಲ್ಲದ.”

ಅಥವಾ “ಜಾಣತನದಿಂದ.”

ಅಥವಾ “ಅವರಿಬ್ರಿಗೆ ಹುಚ್ಚುತನ.”

ಅಥವಾ “ದೇವರ ಭಕ್ತಿಯಿಂದ.”

ಅಥವಾ “ಚಿಕ್ಕಂದಿನಿಂದ; ಶೈಶವದಿಂದ.”

ಅಕ್ಷ. “ಎಲ್ಲ ಮಾತುಗಳನ್ನ ದೇವರ ಪವಿತ್ರಶಕ್ತಿಯ ಮಾರ್ಗದರ್ಶನೆ ಪ್ರಕಾರ ಬರೆಯಲಾಗಿದೆ.”

ಅಕ್ಷ. “ಅವಸರದಿಂದ.”

ಅಥವಾ “ಪ್ರಯೋಜನಕರ.”

ಅಥವಾ “ಅವ್ರಿಗೆ ಬೇಕಾಗಿರೋದನ್ನೇ ಹೇಳೋ.”

ಅಥವಾ “ಪ್ರಚಾರಕನ ಕೆಲಸ ಮಾಡು.”

ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.

ಪರಿಶಿಷ್ಟ ಎ5 ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ