ನೀವು ಹೆಚ್ಚು ಅಪಾಯ ಸಂಭವವಿರುವ ಡ್ರೈವರರೊ?
ಜಪಾನಿನ ಎಚ್ಚರ! ಸುದ್ದಿಗಾರರಿಂದ
“ಅಪಘಾತ ಸಂಭವಿಸುವ ನಮೂನೆಯ ಜನರು ನಮಗೆ ಗೊತ್ತು” ಎಂದರು ಹಿರೊಯಾಸು ಓಟ್ಸುಕ, ಜಪಾನಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಪೊಲೀಸ್ ಸಾಯನ್ಸ್, ಇದರ ಟ್ರ್ಯಾಫಿಕ್ ಸೇಫಿಯ್ಟ ಮುಖ್ಯಾಧಿಕಾರಿ. “ಆದರೂ ನಾವು ಅವರಿಗೆ ಡ್ರೈವರ್ ಲೈಸನ್ಸ್ ಕೊಡಲು ನಿರಾಕರಿಸುವುದಿಲ್ಲ. ಜನರು ತಮ್ಮ ವ್ಯಕ್ತಿತ್ವ ದೋಷಗಳನ್ನು ಅರಿತು ಅವುಗಳಲ್ಲಿ ಸುಧಾರಣೆ ಹೊಂದಬೇಕೆಂದು ನಮ್ಮ ಮನಸ್ಸು.”
ಹೆಚ್ಚು ಅಪಾಯ ಸಂಭವದ ಡ್ರೈವರರು ಸಾಮಾನ್ಯವಾಗಿ ತಾವು ಅಂಥವರೆಂದು ಎಣಿಸುವುದಿಲ್ಲ. ಆದರೆ ಪರಿಣತರು, ಒಬ್ಬನು ಚಾಲಕ ಚಕ್ರದ ಹಿಂದೆ ಕುಳಿತಾಗ ಸುಲಭವಾಗಿ ತೋರಿಬರುವ ಆರು ವಿಧದ ವ್ಯಕ್ತಿತ್ವ ದೋಷಗಳನ್ನು ಗುರುತಿಸುತ್ತಾರೆ. ನೀವು ಇವುಗಳಲ್ಲಿ ಪ್ರತಿಯೊಂದನ್ನು ಪರ್ಯಾಲೋಚಿಸುವಾಗ, ನಿಮ್ಮ ಕುರಿತು ಚಿಂತಿಸಿ, ನೀವೆಷ್ಟು ಭದ್ರವಾದ ಡ್ರೈವರರೆಂದು ನೋಡಿರಿ.
ಸಾಮಾಜಿಕವಾಗಿ ಹೊಂದಾಣಿಕೆಯಿಲ್ಲದವರು
ಹೆಚ್ಚು ಅಪಾಯ ಸಂಭವದವರಲ್ಲಿ ಸಾಮಾಜಿಕವಾಗಿ ಹೊಂದಿಕೆಯಿಲ್ಲದವರು, ಇತರರೊಂದಿಗಿನ ಸಂಬಂಧದಲ್ಲಿ ಸಮಸ್ಯೆಯಿರುವವರು ಇದ್ದಾರೆ. ಅವರು ಯಾರೆಂದರೆ:
ಸ್ವಾರ್ಥಮಗ್ನನು ಇವನು ಎಲ್ಲವನ್ನೂ ತನಗೆ ಸರಿಕಾಣುವ ಹಾಗೆಯೇ ಮಾಡಬೇಕೆಂದು ಪಟ್ಟು ಹಿಡಿಯುವವನು. ಚಾಲಕ ಚಕ್ರದ ಹಿಂದೆ ಕುಳಿತಿರುವ ಅವನು ತಾನೇ ‘ರಸ್ತೆಯ ರಾಜ’ನೆಂದು ನೆನಸುತ್ತಾನೆ. ತನ್ನ ಸ್ವಂತ ವೇಗದಲ್ಲಿ ಹೋಗಲು ಸ್ವತಂತ್ರನೆಂದು ಅವನು ನೆನಸಿ, ಮಿತಿಮೀರಿದ್ದೆಂದು ತನಗೆ ಕಾಣುವ ನಿಯಮಗಳನ್ನು ಅಸಡ್ಡೆ ಮಾಡಿ, ತನಗೆ ಮನಸ್ಸಾಗುವಾಗ ಜಂಬ ತೋರಿಸುವವನು ಇವನು. ಇತರ ಡ್ರೈವರರೊಂದಿಗೆ ರಸ್ತೆಯಲ್ಲಿ ತಾನು ಭಾಗಿಯೆಂಬುದನ್ನು ಅವನು ಮರೆಯುತ್ತಾನೆ. ನಿರಂಕುಶ ಭಾವದಿಂದ, ಸ್ವೇಚ್ಛಾನುಸಾರವಾಗಿ ವರ್ತಿಸಿ ಸದಾ ಬದಲಾಗುತ್ತಿರುವ ರಸ್ತೆಯ ಪರಿಸ್ಥಿತಿಗೆ ಪ್ರತಿವರ್ತನೆ ತೋರಿಸುತ್ತಾ ಅವುಗಳಿಗೆ ಹೊಂದಿಸಿಕೊಳ್ಳಲು ತಪ್ಪುವುದರಿಂದ ಇವನು ಅಪಘಾತಕ್ಕೆ ಕಾರಣನಾಗುತ್ತಾನೆ.
ಅಸಹಕಾರಿ ಒಬ್ಬ ಅಸಹಕಾರಿಯಾದ ಡ್ರೈವರನಿಗೆ ಇತರರ ಮೇಲೆ ಕನಿಕರವೂ ಇಲ್ಲ, ಅವರ ಯೋಚನೆಯೇನು, ಅನಿಸಿಕೆಯೇನು ಎಂಬುದನ್ನು ಅವನು ತಿಳಿಯುವುದೂ ಇಲ್ಲ. ಅವನಿಗೆ ಜನರೊಂದಿಗೆ ಹೊಂದಾಣಿಕೆಯಿಲ್ಲದ ಕಾರಣ, ಅವರಿಂದ ದೂರವಿರುವ ಪ್ರವೃತ್ತಿ ಇರುತ್ತದೆ. ಇದು ರಸ್ತೆಯ ಮೇಲೆ ಅವನ ಒರಟು ವರ್ತನೆ ಮತ್ತು ಇತರ ಡ್ರೈವರರ ಕಡೆಗೆ ಅವನ ಅಸಭ್ಯತೆಯಲ್ಲಿ ಪ್ರತಿಬಿಂಬಿತವಾಗುತ್ತದೆ. ಇವೆರಡೂ ಹೆಚ್ಚು ಅಪಾಯ ಸಂಭವಕ್ಕೆ ಕಾರಣಗಳು. ಕೆಲವರಿಗೆ ಇತರರೊಂದಿಗೆ ಸಹಕರಿಸಿ ವರ್ತಿಸುವುದು ಹೇಗೆಂದು ಕಲಿಯಲು ವರ್ಷಗಳು ಹಿಡಿಯುತ್ತವೆ. ಮತ್ತು ಯುವ ಜನರ ಮಧ್ಯೆ ಹೆಚ್ಚು ಅಪಘಾತಗಳಿಗೆ ಇದೊಂದು ಕಾರಣ.
ಜಗಳ ಹೂಡುವ ಸ್ವಭಾವಿ ಡ್ರೈವಿಂಗ್ ಇನ್ಸ್ಟ್ರಕ್ಷನ್ ಅಕಾರ್ಡಿಂಗ್ ಟು ಆ್ಯಪಿಟ್ಟ್ಯೂಡ್ ಎಂಬ ಪುಸ್ತಕಾನುಸಾರ ಜಗಳ ಹೂಡುವ ಡ್ರೈವರನ ಒಂದು ಗುರುತು, “ತನಗೆ ಆದ್ಯತೆಯ ಹಕ್ಕಿದೆ ಎಂದು ನಂಬುವ ಇವನು ಇತರರಿಗೆ ಸ್ಥಳ ಬಿಟ್ಟುಕೊಡಲು ತೀರಾ ನಿರಾಕರಿಸುವುದೇ. ಅವನು ಇತರ ಡ್ರೈವರರ ಅಥವಾ ಪಾದಚಾರಿಗಳ ದುರ್ನಡತೆಗಳನ್ನು ಅಲಕ್ಷ್ಯ ಮಾಡನು. ಇದು ಅವನ ಹಕ್ಕುಗಳನ್ನು ಕೊನೆಯ ವರೆಗೆ ರಕ್ಷಿಸಲಿಕ್ಕಾಗಿ ಅವನು ಕೂಗಾಟ, ಇತರರ ವರ್ತನೆಗಳಿಗೆ ಅಡ್ಡಿ, . . . ಹಾರ್ನ್ ಬ್ಲೋಯಿಂಗ್ . . . ಗಳಿಗೆ ತೊಡಗುವಂತೆ ಮಾಡುತ್ತದೆ.” ಕಲ್ಪನೆಯ ತಪ್ಪುಗಳೂ ಅವನನ್ನು ರೇಗಿಸಬಲ್ಲವು. ಅವನು ಸಿಡುಕನು ಕೂಡ ಆಗಿರುವಲ್ಲಿ, ಅವನ ಡ್ರೈವಿಂಗ್ ಅನೇಕ ವೇಳೆ ಸಾಮಾನ್ಯ ಪರಿಜ್ಞಾನದ ಮೇರೆಯನ್ನು ಮೀರಿ ಹೋಗುವುದು.
ಭಾವನಾತ್ಮಕವಾಗಿ ಹೊಂದಾಣಿಕೆಯಿಲ್ಲದವರು
ಇನ್ನು ಭಾವನಾತ್ಮಕ ಸಮಸ್ಯೆಗಳಿರುವವರೂ ಇದ್ದಾರೆ. ಇವರಲ್ಲಿ ಇಂಥವರು ಸೇರಿದ್ದಾರೆ:
ಅಸ್ಥಿರ ಮನಸ್ಕರು ವಿಪರೀತ ಭಾವಾವೇಶಗಳು ಅಸ್ಥಿರರನ್ನು ಗುರುತಿಸುತ್ತವೆ. ಇವನಿಗೆ ನಿರಾತಂಕ ಮನಸ್ಸು, ಉದ್ರೇಕ ಮತ್ತು ಖಿನ್ನತೆಗಳು ಆವೃತ್ತಿಯಾಗಿ ಬರುತ್ತವೆ. ಖಿನ್ನತೆಯ ಸಮಯ ಇವನು ಡ್ರೈವ್ ಮಾಡುವಲ್ಲಿ, ಇವನು ಅಪಾಯಗಳನ್ನು ಕಾಣಲು ತಪ್ಪುತ್ತಾನೆ, ಮತ್ತು ಅವನ ಪ್ರತಿಕ್ರಿಯೆಗಳು ಭದ್ರ ರೀತಿಯ ಡ್ರೈವಿಂಗಿಗೆ ತೀರಾ ನಿಧಾನವಾಗಬಹುದು. ಅವನು ಭಾವಾತ್ಮಕವಾಗಿ ಉನ್ನತ ಸ್ಥಿತಿಯಲ್ಲಿದ್ದು ಡ್ರೈವ್ ಮಾಡುವುದಾದರೆ ಅವನು ನಿರ್ಲಕ್ಷ್ಯದಿಂದ ಡ್ರೈವ್ ಮಾಡಬಹುದು. ಅವನು ಈ ಮನೋಭಾವದಲ್ಲಿರುವಾಗ ಎಚ್ಚರಿಕೆ ಕೊಡಲ್ಪಡುವುದಾದರೆ ಅವನು ಒಡನೆ ಪ್ರತಿಭಟನೆಯನ್ನು ಪ್ರದರ್ಶಿಸಬಹುದು. ಅವನು ಕೇವಲ ತನ್ನ ಖಿನ್ನತೆಯನ್ನು ವಿಪರೀತವಾಗಿ ಕಾಣಬಹುದು.
ಮಿತಿಮೀರಿ ಪುಕ್ಕಲು ಸ್ವಭಾವದವನು ಅನೇಕ ವೇಳೆ ಇವನು ಜಡ ಸ್ವಭಾವದ, ತನ್ನ ಸ್ವಂತ ಯೋಚನೆಗಳಲ್ಲಿ ಮುಳುಗಿದ, ಸರ್ವ ವಿಷಯಗಳ ಚಿಂತೆ ಮಾಡುವ ವ್ಯಕ್ತಿ. ಅವನು ಗಾಡಿ ನಡೆಸುವಾಗ ಅವನ ಮನಸ್ಸು “ಡ್ರೈವಿಂಗಿಗೆ ಸಂಬಂಧ ಪಡದ ವಿಷಯಗಳಿಂದ ತುಂಬಿರುತ್ತದೆ. ಹೀಗೆ ಅವನಿಗೆ “ಮಖ್ಯ ಮಾಹಿತಿ ತಪ್ಪಿ ಹೋಗುವ ಯಾ ಅದನ್ನು ಅವನು ಅಪಾರ್ಥ ಮಾಡಿಕೊಳ್ಳುವ ಸಂಭವ ಹೆಚ್ಚು ಇದೆ.” ಹೀಗೆಂದು ಹೆಚ್ಚು ಅಪಾಯ ಸಂಭವವಿರುವ ಡ್ರೈವರರ ಅಧ್ಯಯನದಲ್ಲಿ ರಿಚರ್ಡ್ ಇ. ಮೇಯರ್ ಮತ್ತು ಜಾನ್ ಆರ್. ಟ್ರೀಟ್ ಗಮನಿಸಿದರು. ಒಬ್ಬ ಪುಕ್ಕಲಾದ ಡ್ರೈವರನು ಒಂದು ಟ್ರಕ್ಕು ಪಕ್ಕದಲ್ಲಿ ಬರುವಂಥ ಕಠಿಣವಲ್ಲದ ಪರಿಸ್ಥಿತಿಯಲ್ಲಿಯೂ ಕಕ್ಕಾಬಿಕ್ಕಿಯಾಗುತ್ತಾನೆ. ಅವನು ಅತಿ ಕೆಡುಕನ್ನು ನಿರೀಕ್ಷಿಸುತ್ತಾನೆ.
ಆವೇಗಪರನು ಇವನು ವೇಗವಾಗಿ ವರ್ತಿಸುವವನು. ನಿಜತ್ವಗಳನ್ನು ಪರಿಗಣಿಸಿ ನಿಷ್ಕೃಷ್ಟ ತೀರ್ಮಾನವನ್ನು ಮಾಡುವ ಬದಲು ಅವನು ಹುಟ್ಟರಿವನ್ನು ಆಧಾರ ಮಾಡುತ್ತಾನೆ. ಟ್ರ್ಯಾಫಿಕ್ ಲೈಟು ಮತ್ತು ಪಾದಚಾರಿಗಳಿಗಾಗಿ ಕಾಯುವ ಸಮಯವು ಇವನಿಗೆ ಸಾಮಾನ್ಯ ವ್ಯಕ್ತಿಗಳಿಗಿಂತ ಹೆಚ್ಚಾಗಿ ಕಂಡುಬರುತ್ತದೆ. ಆದುದರಿಂದ ಅವನು ಹತಾಶನಾಗಿ ಒಡನೆ ತಾಳ್ಮೆಗೆಡುತ್ತಾನೆ. ವರ್ತಿಸುವ ಮೊದಲು ಸ್ವಸ್ಥ ತೀರ್ಮಾನಕ್ಕೆ ಬರುವುದಕ್ಕೆ ತಪ್ಪುವುದು ಅವನನ್ನು ಅಪಾಯಕಾರಿಯಾದ ಡ್ರೈವರನಾಗಿ ಮಾಡುತ್ತದೆ.
ನೀವು ನಿಮ್ಮನ್ನು ಈ ವಿಧದ ಡ್ರೈವರನಾಗಿ ನೋಡುತ್ತೀರೊ? ವಿವೇಚನೆಯಿಲ್ಲದ ಡ್ರೈವರನು ನಿಮ್ಮನ್ನು ತಾಳ್ಮೆಗೆಡಿಸುವುದಾದರೆ ನಿಮ್ಮ ಪ್ರತಿಕ್ರಿಯೆ ಏನು? ಗಾದೆ ಹೇಳುವಂತೆ, ಮೆಟ್ಟು ನಿಮಗೆ ಯೋಗ್ಯ ಅಳತೆಯದ್ದಾಗಿರುವಲ್ಲಿ, ಖಂಡಿತವಾಗಿಯೂ ಅದನ್ನು ತೊಡಿರಿ. ನಿಮ್ಮ ಸ್ವಂತ ಭದ್ರತೆಗಾಗಿ ಎಚ್ಚರಿಕೆಯನ್ನು ಮನಸ್ಸಿಗೆ ತಕ್ಕೊಂಡು ನಿಮ್ಮ ಬಲಹೀನತೆಗಳನ್ನು ಹೋಗಲಾಡಿಸಲು ಕಾರ್ಯ ನಡೆಸಿರಿ. ಉತ್ತಮ ಡ್ರೈವರನಾಗಬೇಕಾದರೆ ನಿಮ್ಮ ಭಾವುಕತೆ ಮತ್ತು ಮನೋಭಾವಗಳು ನಿಮ್ಮ ನಿಯಂತ್ರಣದಲ್ಲಿರಬೇಕು.
ಉತ್ತಮವಾಗಿ ಹೊಂದಿಕೊಂಡಿರುವ ಡ್ರೈವರನು
ಯಾವುದು ಒಬ್ಬನನ್ನು ಉತ್ತಮ ಡ್ರೈವರನಾಗಿ ಮಾಡುತ್ತದೆ? ಎಚ್ಚರ! ಮಾಡಿದ ಪತ್ರಿಕಾ ಭೇಟಿಗಳಲ್ಲಿ, ಜಪಾನಿನ ಪೊಲೀಸ್ ದಳದ ಪ್ರಮುಖ ಸಂಶೋಧಕರು, ಇತರರಿಗೆ ಪರಿಗಣನೆ, ವರ್ತಿಸುವ ಮೊದಲು ಯೋಚಿಸುವುದು, ಇಡೀ ಸ್ಥಿತಿಗತಿಯನ್ನು ಗ್ರಹಿಸುವ ಸಾಮರ್ಥ್ಯ, ನಿಷ್ಕೃಷ್ಟವಾಗಿ ತೀರ್ಮಾನಿಸುವ ವಿವೇಕ, ವಿವೇಚನೆ, ಶಾಂತ ಸ್ವಭಾವ, ಆತ್ಮ ನಿಯಂತ್ರಣ ಮತ್ತು ಇತರ ರಸ್ತೆ ಬಳಕೆದಾರರನ್ನು ಸಂರಕ್ಷಿಸುವಂತೆ ವರ್ತಿಸುವುದು—ಇವನ್ನು ಒತ್ತಿ ಹೇಳಿದರು.
ತದ್ರೀತಿ, ಒಸಾಕ ಪ್ರಿಫೆಕ್ಚರಲ್ ಯೂನಿವರ್ಸಿಟಿಯ ವರದಿಯು ಉತ್ತಮ ಡ್ರೈವರರನ್ನು, “ಉತ್ತಮ ಮಟ್ಟದ ಭಾವಾತ್ಮಕ ಸ್ಥಿರತೆಯಿರುವವರು; ವಿವೇಚನೆಯ ತೀರ್ಮಾನದ ಮಾನಸಿಕ ಕಾರ್ಯಗತಿ ದೇಹದ ಪ್ರತಿಕ್ರಿಯೆಗಿಂತ ವೇಗವಾಗಿ ಕಾರ್ಯ ನಡೆಸುತ್ತದೆ; ಅವರ ತೀರ್ಮಾನ ನಿಷ್ಕೃಷ್ಟ; ಅವರು ತಮ್ಮ ಭಾವುಕತೆಯನ್ನು ನಿಯಂತ್ರಿಸಬಲ್ಲರು” ಎಂದು ಹೇಳಿ ವರ್ಣಿಸುತ್ತದೆ. ಈ ವರ್ಣನೆ ನಿಮಗೆ ಅನ್ವಯಿಸುತ್ತದೆಯೆ?
ಸಾವಿರಾರು ವರ್ಷಗಳಿಂದ ಜನರು ಹೇಗೆ ವಿವೇಕ, ತಿಳಿವಳಿಕೆ, ಮತ್ತು ವಿವೇಚನೆಯನ್ನು ಬೆಳೆಸಬೇಕೆಂದು ಬೈಬಲು ಕಲಿಸಿದೆ. (ಜ್ಞಾನೋಕ್ತಿ 2:1-6) ಅಪೂರ್ಣ ಮಾನವರು “ಕ್ರೋಧ ಕೋಪ ಮತ್ಸರ ದೂಷಣೆ . . . ದುರ್ಭಾಷೆ”ಗಳ ಸ್ಥಾನದಲ್ಲಿ “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ” ಗಳನ್ನು ತುಂಬಿಸಬಹುದೆಂದು ಅದು ತೋರಿಸುತ್ತದೆ. ಹೌದು, ಬೈಬಲು ನೀವು ಹೆಚ್ಚು ಉತ್ತಮ ಡ್ರೈವರರಾಗುವಂತೆಯೂ ಸಹಾಯ ಮಾಡಬಲ್ಲದು!—ಕೊಲೊಸ್ಸೆ 3:8-10; ಗಲಾತ್ಯ 5:22, 23. (g90 6/8)