ಮುದ್ದಾಡ ಬೇಕೆನಿಸುವ ಕೋಆಲದಿಂದ ಮೋಹಿತರಾಗುವುದು
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
ಅಪರಿಚಿತವೂ ಅನನ್ವೇಷಿತವೂ ಆದ ದೇಶಗಳಲ್ಲಿ, ಗತಕಾಲಗಳಲ್ಲಿ, ಮನೋತ್ತೇಜಕ ಮತ್ತು ಅಸಾಮಾನ್ಯವಾದ ಪ್ರಾಣಿಗಳ ಕಂಡುಹಿಡಿತವು ಅತ್ಯಾಕರ್ಷಕ ಅನಿರೀಕ್ಷಿತ ಘಟನೆಗಳಲ್ಲಿ ಒಂದು. ಆಸ್ಟ್ರೇಲಿಯದಲ್ಲಿ 1788ರ ಬಳಿಕ ಇದು ನಿಜವಾಗಿದ್ದದ್ದು ನಿಶ್ಚಯ.
ಆ ಸಮಯದಲ್ಲಿ ಪೋರ್ಟ್ ಜ್ಯಾಕ್ಸನ್ (ಈಗ ಸಿಡ್ನಿ) ನ ಸುತ್ತಮುತ್ತಲಿನ ದಂಡನೆಯ ಪಾಳೆಯಗಳಲ್ಲಿ ಇಂಗ್ಲೆಂಡಿನಿಂದ ಆಸ್ಟ್ರೇಲಿಯಕ್ಕೆ ತರಲ್ಪಟ್ಟ ಖೈದಿಗಳು ನೆಲೆಸಿದರು. ಹತ್ತು ವರ್ಷಗಳ ಬಳಿಕ, ಪರಿಶೋಧಕನಾಗಿ ಪರಿಣಮಿಸಿದ ಒಬ್ಬ ಮುಕ್ತ ಖೈದಿಯು, 130 ಕಿಲೊಮೀಟರು ದೂರದ ದಕ್ಷಿಣ ಮಲೆನಾಡಿಗೆ ಹೊರಟನು. ಅವನು ಪ್ರಥಮವಾಗಿ ಆಸ್ಟ್ರೇಲಿಯನ್ ಕೋಆಲವನ್ನು ನೋಡಿದಾಗ ಅವನಿಗೆ ಸುಖಾಶ್ಚರ್ಯವಾಯಿತು. ಅವನು ಬರೆದುದು: ಅದು “ಅಮೆರಿಕದ ಸ್ಲೋತ್ ಪ್ರಾಣಿಗಳನ್ನು ಅಧಿಕಾಂಶ ಹೋಲುವ, ನಾಡಿಗರು [ಮೂಲನಿವಾಸಿಗಳು] ‘ಕೆಲೆವೀನ್’ ಎಂದು ಕರೆದ ಇನ್ನೊಂದು ಪ್ರಾಣಿಯಾಗಿತ್ತು.”
ಯಾವುದು ಇನ್ನೂರು ವರ್ಷಗಳಾನಂತರ ಅಸ್ಟ್ರೇಲಿಯದಂಥ ಸೂರ್ಯತಾಪದಿಂದ ಸುಟ್ಟಿರುವ ದೇಶಕ್ಕೆ ಬರುವ ಪ್ರವಾಸಿಗಳಿಗೆ ಅಷ್ಟೊಂದು ಆಕರ್ಷಕವಾಗಿದೆಯೊ ಆ ಆಕರ್ಷಕವಾದ ತುಪ್ಪುಳು ಕಂತೆಯನ್ನು ನೀವು ಪರೀಕ್ಷಿಸ ಬಯಸುವಿರೆ? ಬಯಸುವಿರೆಂಬುದು ನಿಸ್ಸಂಶಯ, ಏಕೆಂದರೆ ಕ್ಯಾಂಗರೂ ಪ್ರಾಣಿಯನ್ನು ನೋಡಬೇಕೆಂದು ಆಸ್ಟ್ರೇಲಿಯಕ್ಕೆ ಭೇಟಿ ನೀಡುವವರು ಮಾಡುವ ವಿನಂತಿಗೆ ಅನಂತರ ಪದೇ ಪದೇ ಬರುವ ವಿನಂತಿಯು, “ನಾನು ನಿಮ್ಮ ಮುದ್ದಿನ ಆಟದ ಟೆಡಿ ಬ್ಯಾರ್ ಕರಡಿಯನ್ನು ನೋಡಲೇ ಮತ್ತು ಮುಟ್ಟಲೇ ಬೇಕು,” ಎಂಬುದೇ.
ನಿಜವಾಗಿಯೂ ಕರಡಿಯಲ್ಲ
ಕೋಆಲ ಮುದ್ದಾಡಬೇಕೆನಿಸುವ ಒಂದು ಚಿಕ್ಕ ಪ್ರಾಣಿಯೆಂಬುದು ನಿಸ್ಸಂಶಯ. ಅದು ಸುಮಾರು 80 ಸೆಂಟಿಮೀಟರ್ ಉದ್ದ ಬೆಳೆದು, ಗುಂಡಿ ಮೂಗು ಮತ್ತು ನುಣುಪಾದ, ಸುಂದರ ಮೃದುರೋಮವಿರುವ ಟೆಡಿ ಬ್ಯಾರ್ ಕರಡಿಯಂತೆ ಕಾಣುತ್ತದೆ ನಿಶ್ಚಯ. ಆದರೆ ಅದು ಕರಡಿ ಜಾತಿಗೆ ಸೇರಿದ್ದಲ್ಲವೆಂದು ತಿಳಿಯಲು ನಿಮಗೆ ಆಶ್ಚರ್ಯವಾದೀತು.
ಹೌದು, ಅದನ್ನು ಪದೇ ಪದೇ ಕೋಆಲ ಕರಡಿ ಯಾ ಆಸ್ಟ್ರೇಲಿಯದ ದೇಶೀ ಕರಡಿ ಎಂದು ಕರೆಯಲಾಗುತ್ತದೆ ನಿಜ. ಆದರೆ ಇವೆಲ್ಲ ಹೆಸರಿನ ಅಪಪ್ರಯೋಗಗಳು. ಕರಡಿ ಜಾತಿಯದ್ದಾಗಿರುವ ಬದಲಿಗೆ, ಕೋಆಲ ಅಧಿಕಾಂಶ ಬೀವರ್ನಂತೆ ಕಾಣುವ ಆಸ್ಟ್ರೇಲಿಯದ ಇನ್ನೊಂದು ಹೊಟ್ಟೆಚೀಲದ ಪ್ರಾಣಿಯಾದ ವಾಂಬ್ಯಾಟನ್ನು ಒತ್ತಾಗಿ ಹೋಲುತ್ತದೆ.
ದಿ ಆಸ್ಟ್ರೇಲಿಯನ್ ಎನ್ಸೈಕ್ಲೊಪೀಡಿಯ ಈ ಆಕರ್ಷಕ ಹಾಗೂ ಮುದ್ದಾಡಿಸಬೇಕೆನಿಸುವ ಪ್ರಾಣಿಯ ಈ ಮೋಹಕ ಚಿತ್ರವನ್ನು ಕೊಡುತ್ತದೆ: “ಕೋಆಲಕ್ಕೆ ಗಟ್ಟಿಮುಟ್ಟಾದ ಶರೀರ, ಮೇಲೆ ಬೂದು ಬಣ್ಣದಿಂದ ಕಂದಿನ ತನಕದ ದಪ್ಪದ ತುಪ್ಪಳು, ಕೆಳಗೆ ಹಳದಿ-ಬಿಳಿ ಬಣ್ಣ, ದೊಡ್ಡ ಉರುಟಾದ ತುಪ್ಪಳು ತುಂಬಿದ ಕಿವಿಗಳು, ಮತ್ತು ತೊಗಲಿನಂತಿರುವ, ಹಿಗ್ಗಿರುವ, ಅಧಿಕಾಂಶ ಮೂತಿಯಂತಿರುವ ಮೂಗು . . . ಈ ಪ್ರಾಣಿ ದೃಢತೆಯಿಂದ ಹತ್ತುತ್ತದಾದರೂ ನೆಲದ ಮೇಲೆ ಒಡ್ಡೊಡ್ಡಾಗಿ ಚಲಿಸುತ್ತದೆ.”
ಪೂರ್ತಿ ಬೆಳೆದಾಗ, ಕೋಆಲಗಳು ಸುಮಾರು 14 ಕಿಲೊಗ್ರಾಮ್ ಭಾರವಿರುತ್ತವೆ. ಅವು ಸುಮಾರು 20 ವರ್ಷ ಕಾಡಿನಲ್ಲಿ ಜೀವಿಸಬಹುದು. ಕೆಲವು ಕೋಆಲಗಳು ಬಂಧನದಲ್ಲಿ 12 ವರ್ಷ ಕಾಲವೂ ಬದುಕಿವೆ.
ಆಸ್ಟ್ರೇಲಿಯನ್ ಕ್ಯಾಂಗರೂವಿನಂತೆ, ಕೋಆಲ ಹೊಟ್ಟೆಚೀಲವಿರುವ (ಮಾರ್ಸುಪೀಯಲ್, “ಜೇಬು” ಯಾ “ಚೀಲ” ಎಂಬ ಅರ್ಥವಿರುವ ಲ್ಯಾಟಿನ್ ಪದವಾದ ಮಾಸಪೀಯಮ್ ನಿಂದ) ಪ್ರಾಣಿ, ಮತ್ತು ಅದರ ಜನನ ವಿಧಾನ ಹೊಟ್ಟೆಚೀಲದ ಪ್ರಾಣಿಗಳಿಗೆ ಅದ್ವಿತೀಯ. ಹುಟ್ಟುವಾಗ ಪುಟ್ಟದಾಗಿರುವ ಈ ಮರಿ ಕೋಆಲಗಳು ಇನ್ನೂ ಪೂರ್ತಿ ವಿಕಾಸಗೊಂಡಿರದಿದ್ದರೂ ಸಹಾಯವಿಲ್ಲದೆನೇ ಅವು ತಮ್ಮ ತಾಯಿಯ ಚೀಲಕ್ಕೆ ಹೋಗಿ ಅದರ ಎರಡು ಮೊಲೆತೊಟ್ಟುಗಳಲ್ಲಿ ಒಂದಕ್ಕೆ ತಮ್ಮನ್ನು ಅಂಟಿಸಿಕೊಳ್ಳುತ್ತವೆ.
ಆರು ತಿಂಗಳುಗಳ ತರುವಾಯ, ಈ ಪುಟ್ಟನು ಪೂರ್ತಿ ವಿಕಾಸಗೊಂಡ ಶಿಶುವಾಗುತ್ತಾನೆ ಮತ್ತು ಸ್ವಲ್ಪ ಸಮಯಗಳಿಗಾಗಿ ಆ ಚೀಲವನ್ನು ಬಿಟ್ಟುಹೋಗ ಶಕ್ತನಾಗುತ್ತಾನೆ. ಆದರೆ ಸುಮಾರು ಇನ್ನೆರಡು ತಿಂಗಳುಗಳಷ್ಟರಲ್ಲಿ, ಅವನು ಒಳಗೆ ಹೋಗಲು ತೀರಾ ದೊಡ್ಡವನಾಗುತ್ತಾನೆ. ಈಗ ಮಾಡುವುದೇನು? ಅದೇನೂ ಮಹಾ ಸಮಸ್ಯೆಯಲ್ಲ! ಅವನು ತಾಯಿಯ ಬೆನ್ನನ್ನು, ಅವಳು ಮರ ಹತ್ತಿ ಕೆಳಗಿಳಿಯುವ ಸಂದರ್ಭದಲ್ಲಿ ಜೀವವುಳಿಸಿಕೊಳ್ಳುವುದಕ್ಕಾಗಿಯೋ ಎಂಬಂತೆ ತಬ್ಬಿ ಹಿಡಿದು ಅವನು ಸವಾರಿ ಮಾಡುತ್ತಾನೆ.
ಆದರೂ ಈ ಮರ ಸವಾರಿಗಳು ಸದಾ ಉಳಿಯವು. ಇನ್ನೊಂದು ಐದಾರು ತಿಂಗಳುಗಳಲ್ಲಿ, ಪುಟ್ಟನು ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕಾಗುತ್ತದೆ. ಆದರೆ ಈ ಕೊಂಚ ಸಮಯದಲ್ಲಿ, ತಾಯಿ ಕೋಆಲ ತನ್ನ ಮೃದು ರೋಮವಿರುವ ಬೆನ್ನನ್ನು ತಬ್ಬಿಕೊಂಡಿರುವ ತನ್ನ ಮರಿಯನ್ನು ಸಂತೋಷದಿಂದ ಹೊತ್ತುಕೊಂಡು ಹೋಗುವುದನ್ನು ನೋಡುವುದು ರಂಜಿಸುವ ದೃಶ್ಯವಾಗಿದೆ. ತಾಯಿಯನ್ನು ಬಿಟ್ಟ ಬಳಿಕ, ಈ ಎಳೆಯ ಕೋಆಲ ತುಂಬ ಒಂಟಿ ಜೀವನವನ್ನು ನಡೆಸುತ್ತದೆ ಮತ್ತು ಸಂತಾನೋತ್ಪತ್ತಿಯ ಸಮಯ ಮಾತ್ರ ಇತರ ಕೋಆಲಗಳನ್ನು ಸಂಪರ್ಕಿಸುತ್ತದೆ.
ಪರ್ಣಾಹಾರ
ಕೋಆಲ ಎಂಬ ಹೆಸರು, ಈ ಪ್ರಾಣಿ ಅತಿ ಕಮ್ಮಿಯಾಗಿ ಕುಡಿಯುತ್ತದೆ ಎಂದು ಸೂಚಿಸುವ ಆದಿವಾಸಿ ಪದದಿಂದ ಬಂದಿದೆ. ಆದರೆ ನೀರಿಲ್ಲದೆ ಅವು ಹೇಗೆ ಬದುಕಬಲ್ಲವು? ಇಬ್ಬನಿಯನ್ನು ಸೇವಿಸಿ ಮತ್ತು ಅವುಗಳ ಆಹಾರವಾದ ಗೋಂದು ಎಲೆಗಳಲ್ಲಿರುವ ತೇವದಿಂದಲೇ.
ಗೋಂದು ಎಲೆಗಳೊ? ಹೌದು, ಕೋಆಲಗಳು ಸುಮಾರು 50 ವಿಭಿನ್ನ ಯೂಕಲಿಪಸ್ಟ್ ಮರಗಳಲ್ಲಿ ಮೇಯುತ್ತವೆ, ಆದರೆ ಇವುಗಳಲ್ಲಿ ಒಂದು ಡಜನಿಗಿಂತಲೂ ಕಡಮೆ ಮರಗಳು ಅವುಗಳಿಗೆ ವಿಶೇಷ ಇಷ್ಟ. ಯೂಕಲಿಪಸ್ಟ್ ಮರಗಳು ಸಾಧಾರಣವಾಗಿ ಕಾಡುಗೆಂಪು ಗೋಂದು, ಬೂದು ಗೋಂದು, ಟ್ಯಾಸ್ಮೇನಿಯನ್ ನೀಲ ಗೋಂದು ಎಂಬ ಗೋಂದು ಮರಗಳು ಎಂದು ಪ್ರಸಿದ್ಧವಾಗಿವೆ.
ಪೂರ್ತಿ ಬೆಳೆದಿರುವ ಒಂದು ಕೋಆಲ ಪ್ರತಿ ದಿನ ಸುಮಾರು ಒಂದು ಕಿಲೊಗ್ರಾಮ್ ಎಲೆಯನ್ನು ನಿಧಾನವಾಗಿಯಾದರೂ ಸಂಪೂರ್ಣವಾಗಿ ಜಗಿದು ತಿನ್ನುತ್ತದೆ. ಅವು ತಮ್ಮ ಹೆಚ್ಚಿನ ಸಮಯವನ್ನು ಗೋಂದು ಮರಗಳ ಎತ್ತರಗಳಲ್ಲಿ ಕಳೆದು, ಇನ್ನೊಂದು ಮರವನ್ನು ಹತ್ತಲಿಕ್ಕಾಗಿ ಮಾತ್ರ ಕೆಳಗಿಳಿಯುತ್ತವೆ. ನೆಲದ ಮೇಲೆ ಅವುಗಳ ನಡಗೆ ನಯವಿಲ್ಲದ್ದೂ ಒಡ್ಡೊಡ್ಡಾದದ್ದೂ ಆಗಿದೆ.
ಇವು ರಾತ್ರಿ ಚಟುವಟಿಕೆಯ ಪ್ರಾಣಿಗಳಾಗಿರುವುದರಿಂದ, ದಿನದಲ್ಲಿ ಹೆಚ್ಚಿನ ಭಾಗವನ್ನು ಅವು, ನೆಲದಿಂದ ಎತ್ತರದಲ್ಲಿ ಮರಗಳ ಕವಲುಗಳಲ್ಲಿ ಅಪಾಯಕರವಾಗಿ ತಂಗುತ್ತಾ ಕಳೆಯುತ್ತವೆ. ಅದು ಅಸುಖದಾಯಕವಲ್ಲವೆ? ಅವು ಹಾಗೆಣಿಸುವಂತೆ ಕಾಣುವುದಿಲ್ಲ, ಮತ್ತು ಆ ಸ್ಥಳ ಭಾವೀ ಭಕ್ಷಕ ಮೃಗಗಳಿಂದ ಅತ್ಯುತ್ತಮ ರಕ್ಷಣೆಯನ್ನು ಒದಗಿಸುತ್ತದೆ.
ಅವುಗಳನ್ನು ಪಳಗಿಸುವುದು ಸಾಧ್ಯವೆ?
ಅತಿ ಚಿಕ್ಕಂದಿನಲ್ಲಿ ಪಡೆದಿದ್ದ ಕೋಆಲಗಳು ಪಳಗಿಸಲ್ಪಟ್ಟಾಗ ಅವು ಒಲವಿನ ಮುದ್ದಿನ ಪ್ರಾಣಿಗಳಾಗಿವೆ. ಉತ್ತರ ಕ್ವೀನ್ಸ್ಲೆಂಡಿನ ಒಂದು ದಂಪತಿಗಳು ಇಂಥ ಒಂದು ಮುದ್ದಿನ ಪ್ರಾಣಿಯನ್ನು ಅದಕ್ಕೆ ಮೂರು ತಿಂಗಳು ಪ್ರಾಯವಾಗಿದ್ದಾಗಿನಿಂದ ಬೆಳೆಸಿದರು. ಈ ಪುಟ್ಟ ಹೆಣ್ಣು “ಮರಿ” ಪ್ರತಿ ರಾತ್ರಿ, ಒಂದು ದಿಂಬಿನ ಸುತ್ತ ಕೋಆಲ ತುಪ್ಪುಳಿನ ಒಂದು ತುಂಡನ್ನು ಕಟ್ಟಿ ಅದನ್ನು ಅದರ ತಾಯಿಯ ಬದಲಿಯಾಗಿ ಬುಟ್ಟಿಯಲ್ಲಿ ಅದರ ಸಮೀಪ ಇಟ್ಟು ಅದಕ್ಕೆ ಸಮಾಧಾನ ಮಾಡುವ ತನಕ ಕೂಗುತ್ತಿತ್ತು. ಅವಳಿಗೆ ಟೆಡಿ ಎಂದು ಹೆಸರಿಡಲಾಯಿತು, ಮತ್ತು ಗೋಂದು ಎಲೆಯ ಗಟ್ಟಿ ಆಹಾರವನ್ನು ತಿನ್ನುವಷ್ಟು ದೊಡ್ಡದಾಗುವ ತನಕ ಅವಳು ದನದ ಹಾಲನ್ನು ಬೆಕ್ಕಿನ ಮರಿಯಂತೆ ಕುಡಿದು ಹಸನಾಗಿ ಬೆಳೆದಳು.
ತೊಂದರೆಯೇನಂದರೆ, ಟೆಡಿಗೆ ಮನುಷ್ಯರು ಎಷ್ಟು ರೂಢಿಯಾಗಿದ್ದರೆಂದರೆ, ಒಬ್ಬಳಾಗಿಯೇ ಇರುವುದನ್ನು ಅವಳು ದ್ವೇಷಿಸುತ್ತಿದ್ದುದು ಮಾತ್ರವಲ್ಲ, ಮಗುವಿನಂತೆ ತನ್ನನ್ನು ಹೊತ್ತುಕೊಂಡು ಹೋಗಬೇಕೆಂದು ಇಷ್ಟಪಟ್ಟಳು. ಅವಳು ನಿಜವಾಗಿಯೂ ಪೀಡೆಯಾಗಿ ಪರಿಣಮಿಸಿದಳು. ಅವಳ ತೃಪ್ತ ಜೀವನ 12 ವರ್ಷ ಮುಂದುವರಿಯಿತು. ಹೀಗೆ, ಹೌದು, ಕೋಆಲಗಳನ್ನು ಪಳಗಿಸಸಾಧ್ಯವಿದೆ, ಆದರೆ ಈಗ ಆಸ್ಟ್ರೇಲಿಯದಲ್ಲಿ ಅವನ್ನು ಮುದ್ದಿನ ಪ್ರಾಣಿಗಳಾಗಿ ಇಟ್ಟುಕೊಳ್ಳುವುದು ನ್ಯಾಯವಿರುದ್ಧ.
ನಾಶಮಾಡಲ್ಪಟ್ಟರೂ ಈಗ ರಕ್ಷಿಸಲ್ಪಡುತ್ತಿವೆ
ಈ ಶತಮಾನದ ಆರಂಭದಲ್ಲಿ ಕೋಆಲಗಳು ಎಷ್ಟು ಹೇರಳವಾಗಿದ್ದುವೆಂದರೆ ಆಸ್ಟ್ರೇಲಿಯ ಭೂಖಂಡದಲ್ಲಿ ಅವು ಲಕ್ಷಾಂತರ ಸಂಖ್ಯೆಯಲ್ಲಿದ್ದುವೆಂದು ಹೇಳಲಾಗುತ್ತಿತ್ತು. ಆದರೆ ಯೂಕಲಿಪಸ್ಟ್ ಮರದ ಕವಲುಗಳಲ್ಲಿ ದಿನದಲ್ಲಿ ಮಲಗುವ ಇವುಗಳು ಎಷ್ಟು ಸುಲಭ ಗುರಿಹಲಗೆಗಳಾಗಿದ್ದುವೆಂದರೆ, ಇವುಗಳಲ್ಲಿ ಸಾವಿರಾರನ್ನು ಕೇವಲ ಆಟಕ್ಕಾಗಿ ಗುಂಡು ಹೊಡೆದು ಕೊಲಲ್ಲಾಯಿತು.
ಬಳಿಕ, ಅವುಗಳ ನುಣುಪಾದ ಬೆಳ್ಳಿ-ಬೂದು ಬಣ್ಣದ ತುಪ್ಪುಳಿಗೆ ಗಿರಾಕಿ ಜಾಸ್ತಿಯಾದಾಗ, ಅವುಗಳನ್ನು ಶ್ರದ್ಧೆಯಿಂದ ಸಂಹರಿಸುವ ಕೆಲಸ ಆರಂಭವಾಯಿತು. ಉದಾಹರಣೆಗೆ, 1908ರಲ್ಲಿ ಕೇವಲ ಸಿಡ್ನಿಯಲ್ಲಿಯೆ ಸುಮಾರು 60,000 ಕೋಆಲ ಹಸಿ ಚಕ್ಕಳಗಳು ಮಾರಲ್ಪಟ್ಟವು. ಮತ್ತು 1924ರಲ್ಲಿ, ಆಸ್ಟ್ರೇಲಿಯದ ಪೂರ್ವ ಪ್ರಾಂತ್ಯಗಳಿಂದ 20 ಲಕ್ಷಕ್ಕೂ ಹೆಚ್ಚು ತುಪ್ಪುಳುಗಳು ರಫ್ತು ಮಾಡಲ್ಪಟ್ಟವು.
ಸಂತೋಷದ ಸಂಗತಿಯೆಂದರೆ, ಆಸ್ಟ್ರೇಲಿಯನ್ ಫೆಡರಲ್ ಸರಕಾರ ಈ ಮುದ್ದು ಪ್ರಾಣಿಯು ನಿರ್ನಾಮವಾಗಲಿದೆಯೆಂದು ಮನಗಂಡು 1933ರಲ್ಲಿ ಕೋಆಲ ಮತ್ತು ಕೋಆಲ ಉತ್ಪಾದನೆಗಳ ರಫ್ತನ್ನು ನಿಷೇಧಿಸಿತು. ಈಗ ಕೋಆಲ ರಕ್ಷಿತ ಪ್ರಾಣಿಯಾಗಿದೆ.
ಇತರ ಸರಕಾರಗಳು ಕೋಆಲಗಳನ್ನು ತಮ್ಮ ಮೃಗಶಾಲೆಗಳಲ್ಲಿ ಇಡಲು ಪ್ರಯತ್ನಿಸಿವೆಯಾದರೂ ಕಡಮೆ ಸಾಫಲ್ಯವನ್ನು ಪಡೆದಿವೆ. ಪೊಚ್ಚ ಪೊಸ ಯೂಕಲಿಪಸ್ಟ್ ಎಲೆಗಳ ಈ ವಿಶಿಷ್ಟ ಆಹಾರದ ಸರಬರಾಯಿಯನ್ನು ಕಾಪಾಡಿಕೊಳ್ಳುವುದು ಕಷ್ಟದ ಸಂಗತಿ. ಆದರೂ ಅಮೆರಿಕದ ಕ್ಯಾಲಿಫೋರ್ನಿಯ ಪ್ರಾಂತ್ಯದಲ್ಲಿ ಸಾಫಲ್ಯವನ್ನು ಸಾಧಿಸಲಾಗಿದೆ. ಅಲ್ಲಿಯ ಹವಾಮಾನ ಯೂಕಲಿಪಸ್ಟ್ ಮರಗಳ ಬೆಳೆಗೆ ಅನುಕೂಲವಾಗಿರುವುದೇ ಇದಕ್ಕೆ ಅಧಿಕಾಂಶ ಕಾರಣ. ಈಗ ಸಾನ್ ಡಿಯಾಗೊ ಮತ್ತು ಲಾಸ್ ಆ್ಯಂಜಲೀಸ್ನಲ್ಲಿ ಆರೋಗ್ಯಕರವಾದ ಹಸನಾಗಿ ಬೆಳೆಯುತ್ತಿರುವ ಕೋಆಲ ಸಂಖ್ಯೆಗಳಿವೆ. ಇನ್ನೂ ಇತ್ತೀಚೆಗೆ, ಕೋಆಲಗಳನ್ನು ಜಪಾನಿಗೆ ಕಳುಹಿಸಲಾಗಿದೆ. ಅಲ್ಲಿ ಅವು ಆರೋಗ್ಯಕರವಾಗಿರುವಂತೆ ಜಾಗ್ರತೆಯಿಂದ ಅಧ್ಯಯನ ಮಾಡಿರುವ ವಿಧಾನಗಳನ್ನು ಉಪಯೋಗಿಸಲಾಗುತ್ತಿದೆ.—ಆಗಸ್ಟ್ 22, 1986ರ ಅವೇಕ್! ನೋಡಿ.
ಈ ಮುದ್ದಾಡಬೇಕೆನಿಸುವ ಕೋಆಲ ಬದುಕಿ ಉಳಿದೀತೆ?
ನಿಷ್ಕಾರಣವಾದ ಸಂಹಾರವನ್ನು ತಡೆಯಲು ಒಂದು ಸಾಮಾನ್ಯ ಪರಿಜ್ಞಾನದ ಮಾರ್ಗವು ಅದರ ಪಾರಾಗುವಿಕೆಯ ಪ್ರತೀಕ್ಷೆಯನ್ನು ಹೆಚ್ಚಿಸೀತೆಂದು ತೋರಿಬರುತ್ತದೆ. ಲೇಖಕ ಎಲಿಸ್ ಟ್ರಾಟನ್ ಈ ಆಶಾಜನಕ ಹಾರೈಕೆಯಿಂದ ತನ್ನ ಫರ್ಡ್ ಆ್ಯನಿಮಲ್ಸ್ ಆಫ್ ಆಸ್ಟ್ರೇಲಿಯ ಎಂಬ ಪುಸ್ತಕವನ್ನು ಹೀಗೆ ಕೊನೆಗೊಳಿಸುತ್ತಾರೆ: “ಈ ಆಕರ್ಷಕವಾದ ಕೋಆಲ ಎಲ್ಲೆಲ್ಲಿಯೂ ತೀರ ಹಾನಿರಹಿತ ಪ್ರಾಣಿ. ಅವುಗಳ ಸಂಖ್ಯೆ ಹೇರಳವಾಗಿದ್ದು ಅವು ಹೊಲಮನೆಗಳಲ್ಲಿ ಮತ್ತು ಉಪನಗರಗಳಲ್ಲಿ, ಪಾಸಮ್ಗಳು ಅನೇಕ ವೇಳೆ ಮಾಡುವಂತೆ ಸುಳಿದಾಡುತ್ತಿರುವುದಾದರೆ ಅದೆಷ್ಟು ತೀವ್ರ ಆನಂದಕಾರಕ! ಅವು ಅಭಯಾರಣ್ಯಗಳಲ್ಲಿ ಸಮಾಧಾನದಿಂದ ಮೇಯುವಂತೆ ಅವುಗಳ ಸಂಖ್ಯೆಗಳು ಅದ್ಭುತಕರವಾಗಿ ವೃದ್ಧಿಯಾಗುವಂತಾಗಲಿ.”
ಪ್ರಾಣಿಪ್ರಿಯರು ಎಲ್ಲೆಡೆಗಳಲ್ಲಿಯೂ ಈ ಉದಾತ್ತ ಆಸೆಯನ್ನು ಪ್ರತಿಧ್ವನಿಸುತ್ತಾರೆ. ಈ ಮುದ್ದಾಡಬೇಕೆನಿಸುವ ಕೋಆಲದ ವಿಷಯದಲ್ಲಿ ಮಾತ್ರವಲ್ಲ, ಬದಲಿಗೆ ಈ ಭೂಗ್ರಹದಲ್ಲಿ ನಮ್ಮ ಸಂತೋಷ ಮತ್ತು ಸುಖಾನುಭವಕ್ಕಾಗಿ ಇಟ್ಟಿರುವ ಸಕಲ ಸುಂದರ ಪ್ರಾಣಿಗಳ ವಿಷಯದಲ್ಲಿಯೂ. (g91 12/8)
[ಪುಟ 16 ರಲ್ಲಿರುವ ಚಿತ್ರ]
ಪೂರ್ತಿ ಬೆಳೆದಿರುವ ಒಂದು ಕೋಆಲ ಪ್ರತಿ ದಿನ ಎರಡರಿಂದ ಮೂರು ಪೌಂಡು ಯೂಕಲಿಪಸ್ಟ್ ಎಲೆಗಳನ್ನು ನಿಧಾನವಾಗಿಯಾದರೂ ಸಂಪೂರ್ಣವಾಗಿ ಜಗಿದು ತಿನ್ನುತ್ತದೆ