ದಾಂಪತ್ಯ ಜೀವನ ಅದನ್ನು ಹೆಚ್ಚು ಸಂತೋಷಕರವಾಗಿ ಮಾಡುವುದು
ವಿವಾಹವೊಂದು ಯಶಸ್ವಿಯಾಗುವಂತೆ ಯಾವುದು ಮಾಡಬಲ್ಲದು?
ಯಾರ ಮಾರ್ಗದರ್ಶನ ದಾಂಪತ್ಯದ ಸಂತೋಷಕ್ಕೆ ನಡೆಸಬಲ್ಲದು?
ಸಂಸರ್ಗದ ಸಮಸ್ಯೆಗಳನ್ನು ಹೇಗೆ ಪರಿಹರಿಸಲು ಸಾಧ್ಯ?
ಸ್ತ್ರೀಯರ ವಿಮೋಚನೆಯ ಕುರಿತು ಅವರು ಓದಿದಂಥ ಪುಸ್ತಕಗಳ ಮೂಲಕ ಪ್ರಭಾವಿತರಾಗಿ, ಯಾಸುಹೀರೊ ಮತ್ತು ಅವನ ಸ್ನೇಹಿತೆ, ಕಾಯೋಕೊ, ಯಾವುದೇ ಸಮಯದಲ್ಲಿ ಅವರು ತಮ್ಮ ಸಂಬಂಧವನ್ನು ಕೊನೆಗಾಣಿಸಬಹುದೆಂದು ಯೋಚಿಸುತ್ತಾ, ಒಟ್ಟಾಗಿ ಜೀವಿಸಲು ಪ್ರಾರಂಭಿಸಿದರು. ಕಾಯೋಕೊ ಗರ್ಭಿಣಿಯಾದ ಅನಂತರವೇ ಮಾತ್ರ ಅವರು ತಮ್ಮ ವಿವಾಹವನ್ನು ವ್ಯವಸ್ಥಿತಗೊಳಿಸಿದರು. ಹಾಗಿದ್ದರೂ, ಕುಟುಂಬ ಏರ್ಪಾಡಿನ ಕುರಿತು ಸಂಶಯಗಳು ಯಾಸುಹೀರೊವಿನಲ್ಲಿ ಮುಂದುವರಿದವು. ಆರ್ಥಿಕ ಸಮಸ್ಯೆಗಳು ಮತ್ತು ಅಸಮಂಜಸತನದ ಭಾವನೆಯ ಉದಯದೊಂದಿಗೆ, ವಿವಾಹ ವಿಚ್ಛೇದದಿಂದ ಅವರನ್ನು ತಡೆಯಲು ಏನೂ ಇರಲಿಲ್ಲ.
ಅವರ ವಿವಾಹ ವಿಚ್ಛೇದದ ಕೆಲವು ಸಮಯದ ಅನಂತರ, ಮತ್ತು ಪರಸ್ಪರವಾಗಿ ಗೊತ್ತಿರದೆ, ಯಾಸುಹೀರೊ ಮತ್ತು ಕಾಯೋಕೊ ಇಬ್ಬರೂ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು. ಸ್ವಲ್ಪ ಸಮಯದ ಅನಂತರ, ಇದರ ಕುರಿತು ಇಬ್ಬರೂ ಕಲಿತರು ಮತ್ತು ಬೈಬಲ್ ತತ್ವಗಳನ್ನು ಅನ್ವಯಿಸುವ ಮುಖಾಂತರ ಇತರ ವ್ಯಕ್ತಿಯ ಜೀವನದಲ್ಲಿ ಮಾಡಲಾದ ಬದಲಾವಣೆಗಳನ್ನು ಗಮನಿಸಬಹುದಿತ್ತು. ಅವರು ಪುನಃ ವಿವಾಹವಾಗಲು ನಿಶ್ಚಯಿಸಿದರು. ಈಗ, ವಿವಾಹದ ಕುರಿತು ಅವರ ದೈವಿಕ ನೋಟದೊಂದಿಗೆ, ತಮ್ಮ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ಮಾಡಲು ಅವರು ಸಿದ್ಧರಾಗಿದ್ದಾರೆ.
ಅವರ ಎರಡನೆಯ ವಿವಾಹವು ಯಶಸ್ವಿಯಾಗುವಂತೆ ಯಾವುದು ಮಾಡಿತು? ವಿವಾಹದ ಮೂಲಪ್ರವರ್ತಕನಿಗಾಗಿರುವ ಅವರ ಗೌರವವೇ ಅದಾಗಿತ್ತು. (ಆದಿಕಾಂಡ 2:18-24) ಅತ್ಯಂತ ಅನುಭವೀ ವಿವಾಹ ಸಲಹೆಗಾರನಾದ ಯೆಹೋವ ದೇವರ ಮೂಲಕ ಕೊಡಲಾದ ಮಾರ್ಗದರ್ಶನವು, ದಾಂಪತ್ಯ ಸಂತೋಷಕ್ಕಿರುವ ದ್ವಾರವನ್ನು ತೆರೆಯುವ ಕೀಲಿ ಕೈಯಾಗಿದೆ.
ದಾಂಪತ್ಯ ಸಂತೋಷಕ್ಕೆ ಕೀಲಿ ಕೈ
ಯೇಸು ಕ್ರಿಸ್ತನು ಹೇಳಿದ್ದನ್ನು ಸಂಗಾತಿಗಳಿಬ್ಬರೂ ಅನ್ವಯಿಸಿದಾಗ, ದಾಂಪತ್ಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ವಿವಾಹಗಳನ್ನು ರಕ್ಷಿಸಲು ಸಾಧ್ಯವಿದೆ. ಅವನಂದದ್ದು: “‘ನಿನ್ನ ದೇವರಾಗಿರುವ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು,’ ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ.’” (ಮತ್ತಾಯ 22:37-39) ದಾಂಪತ್ಯ ಸಂತೋಷಕ್ಕೆ ಕೀಲಿ ಕೈ ಇಲ್ಲಿದೆ. ತಮ್ಮನ್ನು ಯಾ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವ ಮುಂಚೆ ಗಂಡ ಮತ್ತು ಹೆಂಡತಿಯರಿಬ್ಬರೂ ಯೆಹೋವನನ್ನು ಪ್ರೀತಿಸಬೇಕು. ಈ ಸಂಬಂಧವನ್ನು ಮೂರು ಹುರಿಯ ಹಗ್ಗಕ್ಕೆ ಹೋಲಿಸಬಹುದು. “ಒಬ್ಬೊಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಎದುರಾಗಿ ನಿಲ್ಲಬಹುದು; ಮೂರು ಹುರಿಯ ಹಗ್ಗ ಬೇಗ ಕಿತ್ತು ಹೋಗುವದಿಲ್ಲವಷ್ಟೆ.”—ಪ್ರಸಂಗಿ 4:12.
ದೇವರ ಮೇಲಣ ಪ್ರೀತಿಯ ಅರ್ಥವು, ಆತನ ಆಜ್ಞೆಗಳನ್ನು ಪಾಲಿಸುವುದೇ ಆಗಿರುವುದರಿಂದ, ಗಂಡ ಮತ್ತು ಹೆಂಡತಿಯು, ಮಾನವ ವರ್ತನೆಯ ಕುರಿತು ಇರುವ ಆತನ ನಿಯಮಗಳನ್ನು ಮತ್ತು ತತ್ವಗಳನ್ನು ತಮ್ಮ ಜೀವಿತದಲ್ಲಿ ಪ್ರಥಮವಾಗಿಡಬೇಕು. ಹಾಗೆ ಮಾಡುವುದರಿಂದ ಅವರು ಮೂರು ಹುರಿಯ ಹಗ್ಗವನ್ನು ತಯಾರಿಸುತ್ತಿದ್ದಾರೆ, ಅದರಲ್ಲಿ ಯೆಹೋವನಿಗಾಗಿರುವ ಅವರ ಪ್ರೀತಿಯೇ ಅತೀ ಬಲವಾದ ದಾರವಾಗಿದೆ. “ಆತನ ಆಜ್ಞೆಗಳು ಭಾರವಾದವುಗಳಲ್ಲ,” ಎಂದು 1 ಯೋಹಾನ 5:3 ಹೇಳುತ್ತದೆ.
ವಿವಾಹವನ್ನು ಶಾಶ್ವತವಾದ ಒಂದು ಏರ್ಪಾಡಿನೋಪಾದಿಯಲ್ಲಿ ವೀಕ್ಷಿಸುವಂತೆ ಇದು ನಡೆಸುತ್ತದೆ. (ಮಲಾಕಿಯ 2:16) ಅವರ ವಿವಾಹದಲ್ಲಿ ಇಂಥ ಒಂದು ಅಸ್ತಿವಾರದೊಂದಿಗೆ, ದಂಪತಿಗಳು ವಿವಾಹ ವಿಚ್ಛೇದವನ್ನು ಪಡೆಯುವ ಮೂಲಕ ಸಮಸ್ಯೆಗಳನ್ನು ಎದುರಿಸಲು ತಪ್ಪಿಹೋಗುವ ಬದಲು, ದಾಂಪತ್ಯ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರೇರೇಪಿಸಲ್ಪಡುವರು.
ನಿಮ್ಮ ಅತಿ ಸಮೀಪದ ನೆರೆಯವರಿಗಾಗಿ ಪ್ರೀತಿಯನ್ನು ತೋರಿಸುವುದು
ನಿಮ್ಮ ಸಂಗಾತಿಯೊಂದಿಗೆ ಶಾಶ್ವತವಾದ ಒಂದು ಬಂಧವನ್ನು ಹೊಂದಿರಲು, ನಿಮ್ಮ ಅತಿ ಸಮೀಪದ ನೆರೆಯವರಿಗಾಗಿ, ಅವನಿಗಾಗಿ ಯಾ ಅವಳಿಗಾಗಿರುವ ನಿಮ್ಮ ಪ್ರೀತಿಯನ್ನು ನೀವು ಪೋಷಿಸಬೇಕು. ಈ ಪ್ರೀತಿಯು ನಿಸ್ವಾರ್ಥವಾಗಿರಬೇಕು. ಈ ತತ್ವವನ್ನು ಬೈಬಲ್ ಹೇಗೆ ಪ್ರೋತ್ಸಾಹಿಸುತ್ತದೆ ಎಂದು ಗಮನಿಸಿರಿ: “ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿಯಿರಲಿ; ಅನ್ಯೋನ್ಯಭಾವವುಳ್ಳವರೂ ಒಂದೇ ಗುರಿಯಿಟ್ಟುಕೊಂಡವರೂ ಆಗಿರ್ರಿ. ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.”—ಫಿಲಿಪ್ಪಿ 2:2-4.
ಈ ಸ್ವಾರ್ಥ ಲೋಕದಲ್ಲಿ ಯಾವುದನ್ನೂ ವಿವಾದಾಸ್ಪದ ಯಾ ಆತ್ಮದುರಭಿಮಾನ ಇಲ್ಲದೆ ಮಾಡುವುದು ಕಠಿನವೆಂಬುವುದು ಸತ್ಯ. ನಿಮ್ಮ ಸಂಗಾತಿಯು ಪ್ರೀತಿಯನ್ನು ತೋರಿಸುವುದರಲ್ಲಿ ಆರಂಭಿಕ ಹೆಜ್ಜೆಯನ್ನು ತೆಗೆದುಕೊಳ್ಳದೆ ಇರುವಾಗ, ನಿಸ್ವಾರ್ಥತೆಯು ಇನ್ನೂ ಕಠಿನವಾಗುತ್ತದೆ; ಆದರೆ ದೀನಭಾವವನ್ನು ಧರಿಸಿಕೊಳ್ಳುವ ಮೂಲಕ, ನಿಮ್ಮ ಸಂಗಾತಿ ನಿಮಗಿಂತ ಶ್ರೇಷ್ಠರು ಎಂದು ಪರಿಗಣಿಸುವ ಮೂಲಕ, ನಿಮ್ಮ ಸಂಗಾತಿಯ ಅಭಿರುಚಿಗಳಿಗೆ ಲಕ್ಷ್ಯಕೊಡುವುದು ಸುಲಭವೆಂದು ನೀವು ಕಾಣುವಿರಿ. ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಮ್ಮಲ್ಲಿಯೂ ಇರುವಂತೆ ಬೈಬಲ್ ಒತ್ತಿ ಹೇಳುತ್ತದೆ. ಅವನು ಪರಾಕ್ರಮಿಯಾದ ಆತ್ಮನಾಗಿದ್ದನು, ಆದರೆ ಅವನೊಬ್ಬ ಮನುಷ್ಯನಾಗಿ “ದಾಸನ ರೂಪವನ್ನು ಧರಿಸಿಕೊಂಡನು.” ಅಷ್ಟು ಮಾತ್ರ ಅಲ್ಲ, ಅವನು ಭೂಮಿಯಲ್ಲಿದ್ದಾಗ, ಅವನನ್ನು ಸ್ವಾಗತಿಸದೆ ಇದ್ದಂಥ ಮನುಷ್ಯರಿಗೂ ಕೂಡ ಪ್ರಯೋಜನವಾಗುವಂತೆ, “ತನ್ನನ್ನು ತಗ್ಗಿಸಿಕೊಂಡು ಮರಣವನ್ನು . . . ಹೊಂದುವಷ್ಟು ವಿಧೇಯನಾದನು.” (ಫಿಲಿಪ್ಪಿ 2:5-8) ಈ ಮನೋಭಾವವನ್ನು ಪ್ರದರ್ಶಿಸುವ ಮೂಲಕ, ಯೇಸು ಅನೇಕ ವಿರೋಧಿಗಳ ಹೃದಯವನ್ನು ಗೆದ್ದನು, ಮತ್ತು ಯೇಸುವನ್ನು ಅನುಕರಿಸುವ ಮೂಲಕ, ಅವನ ಹಿಂಬಾಲಕರೂ ಹಾಗೆ ಮಾಡಿದರು. (ಅ. ಕೃತ್ಯಗಳು 6:7; 9:1, 2, 17, 18) ಅದೇ ನಿಮಗೂ ಸಂಭವಿಸಬಲ್ಲದು. ನಿಮ್ಮ ಸಂಗಾತಿಯನ್ನು ನಿಮಗಿಂತ ಶ್ರೇಷ್ಠರೆಂದು ವೀಕ್ಷಿಸುವ ಮೂಲಕ, ಮತ್ತು ನಿಮ್ಮ ಸಂಗಾತಿಯ ವಿಷಯಗಳ ಮೇಲೆ ವೈಯಕ್ತಿಕ ಆಸಕ್ತಿಯನ್ನು ಇಡುವ ಮೂಲಕ, ನೀವು ಕ್ರಮೇಣ ಅವನ ಯಾ ಅವಳ ಹೃದಯವನ್ನು ಗೆಲ್ಲಬಹುದು.
ಆದರೂ, ನಿಮ್ಮ ಸಂಗಾತಿಯನ್ನು ಶ್ರೇಷ್ಠರೆಂದು ವೀಕ್ಷಿಸುವುದು, ಪೂರ್ವ ದೇಶಗಳಲ್ಲಿ ವಿಷಯವು ಇದ್ದಂತೆ, ಗಂಡನೊಬ್ಬನ ನಿರಂಕುಶಾಧಿಕಾರಕ್ಕೆ ಹೆಂಡತಿಯ ನಿಷ್ಕ್ರಿಯ ತಾಳ್ಮೆಯನ್ನು ಅಗತ್ಯಪಡಿಸುವುದಿಲ್ಲ. ಪ್ರತಿಯೊಬ್ಬರು ಇತರ ವ್ಯಕ್ತಿಗಾಗಿ ತ್ಯಾಗಗಳನ್ನು ಮಾಡಲು ಸಿದ್ಧರಾಗಿರುವಲ್ಲಿ, ಗಂಡ ಮತ್ತು ಹೆಂಡತಿಯು ಒಬ್ಬರು ಇನ್ನೊಬ್ಬರನ್ನು ಶ್ರೇಷ್ಠರೆಂದು ವೀಕ್ಷಿಸಬೇಕು. ಈ ದೀನಭಾವದಿಂದ ದಂಪತಿಗಳು ತಮ್ಮ ಸಮಸ್ಯೆಗಳ ಕುರಿತು ಮಾತಾಡುವಾಗ, ಒಬ್ಬರು ಇನ್ನೊಬ್ಬರಲ್ಲಿ ನಿಸ್ವಾರ್ಥ ಆಸಕ್ತಿಯನ್ನು ಪ್ರತಿಬಿಂಬಿಸುವಾಗ, ಮತ್ತು ದೈವಿಕ ಸಲಹೆಯನ್ನು ಅನುಸರಿಸುವಾಗ, ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ದಾರಿಯಲ್ಲಿ ಅವರು ಸಫಲರಾಗಿರುತ್ತಾರೆ. ದೇವರ ಸಲಹೆಯ ಕೆಲವೊಂದು ಅಂಶಗಳನ್ನು ನಾವು ಈಗ ಪರಿಗಣಿಸೋಣ.
“ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿ” ಇರಲಿ
ವಿವಾಹದ ಏರ್ಪಾಡನ್ನು ಆರಂಭಿಸಿದ ಯೆಹೋವನಲ್ಲಿ, ಒಬ್ಬ ಮನುಷ್ಯ ಮತ್ತು ಅವನ ಹೆಂಡತಿಯ ನಡುವೆ ಇರಬೇಕಾದ ಯೋಗ್ಯ ಸಂಬಂಧಕ್ಕಾಗಿ ಒಂದು ನೀಲಿನಕ್ಷೆ ಇದೆ. ಒಬ್ಬನು ಯಾವದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವದು ಧರ್ಮವೂ ಹೇಗೆ ಎಂದು ಕೇಳಿದ್ದಕ್ಕೆ, ಯೇಸು ಕ್ರಿಸ್ತನು ಅಂದದ್ದು: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.” “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆಂದು ನಿಮಗೆ ಹೇಳುತ್ತೇನೆ,” ಎಂಬುದಾಗಿ ಮುಂದುವರಿಸಿ ಹೇಳುವ ಮೂಲಕ, ವಿವಾಹ ವಿಚ್ಛೇದಕ್ಕೆ ಮತ್ತು ಪುನಃ ವಿವಾಹಕ್ಕೆ ಕೇವಲ ಒಂದೇ ನ್ಯಾಯಬದ್ಧವಾದ ಆಧಾರವಿದೆ ಎಂಬುದನ್ನು ಅವನು ಸೂಚಿಸಿದನು.—ಮತ್ತಾಯ 19:3-9.
ವಿವಾಹಬಾಹಿರ ಲೈಂಗಿಕತೆಯು, ಪ್ರೀತಿಯ ಹೆಸರಿನಲ್ಲಿ ಆಚರಿಸಲ್ಪಡುವುದಾದರೂ ಕೂಡ, ಯಾವುದೇ ಪಕ್ಷಕ್ಕೆ ಪ್ರೀತಿಪರವಾಗಿ ಇರುವುದೇ ಇಲ್ಲ. ಮಧ್ಯ ಜಪಾನ್ನಲ್ಲಿದ್ದ ಒಬ್ಬ ಮನುಷ್ಯನು, ಅವನ ವಿವಾಹದ ಹೊರಗೆ ಹಲವಾರು ಹೆಂಗಸರೊಡನೆ ಪ್ರಣಯ ವ್ಯವಹಾರಗಳನ್ನು ನಡೆಸುತ್ತಿದ್ದನು. ಅವನ ಹೆಂಡತಿಯು ಸಂದೇಹಿಸಿದಳು ಮತ್ತು ಆಶಾಭಂಗ ಹೊಂದಿದಳು. ಅವರ ವಿವಾಹವು ಒಂದು ಬಿಕ್ಕಟ್ಟನ್ನು ಎದುರಿಸಿತು. ತಮ್ಮ ಸಂಬಂಧವನ್ನು ಅವನ ಹೆಂಡತಿಗೆ ತಿಳಿಯಪಡಿಸುತ್ತೇನೆಂದು ಪ್ರಿಯತಮೆಯರಲ್ಲೊಬ್ಬಳು ಅವನಿಗೆ ಹೇಳಿ, ಆಕೆಯನ್ನು ಅವನು ವಿವಾಹವಾಗುವಂತೆ ತಗಾದೆ ಮಾಡಿದ ದಿನವು ಬಂತು. “ಅಂಥ ಸಂಬಂಧಗಳು ಯಾರನ್ನೂ ಸಂತೋಷಪಡಿಸುವುದಿಲ್ಲ,” ಎಂದು ಅವನು ಅನುತಾಪದಿಂದ ಜ್ಞಾಪಿಸಿಕೊಳ್ಳುತ್ತಾನೆ. ಅದರಲ್ಲಿ ಒಳಗೊಂಡಿದ್ದ ಎಲ್ಲರನ್ನು ನೋಯಿಸಿದ ಅನಂತರವೇ ಅವನು ಈ ಕೆಸರಿನಿಂದ ಹೊರಗೆ ಬಂದನು. ಈ ವಿಷಯದಲ್ಲಿ ಬೈಬಲಿನ ಮಟ್ಟವು ಸುಸ್ಪಷ್ಟವಾಗಿಗಿದೆ. “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು; ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.” (ಇಬ್ರಿಯ 13:4) ಈ ಆಜ್ಞೆಯನ್ನು ಪಾಲಿಸುವ ಮೂಲಕ, ರತಿ ರವಾನಿತ ರೋಗಗಳನ್ನು, ದಾಂಪತ್ಯದ ಬಿಗುವನ್ನು, ಮತ್ತು ಅಡಗಿಸಿಟ್ಟ ಪ್ರೇಮ ವ್ಯವಹಾರದ ಒತ್ತಡವನ್ನು ಒಬ್ಬನು ಹೋಗಲಾಡಿಸುತ್ತಾನೆ.
ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ ಮತ್ತು ಪೋಷಿಸಿರಿ
ಕುಟುಂಬದೊಳಗೆ ತಲೆತನದ ತತ್ವವು ಕೂಡ ದೇವರಿಂದ ರೂಪಿಸಲ್ಪಟ್ಟಿದೆ. “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ,” ಎಂದು ಎಫೆಸ 5:22, 23 ಹೇಳುತ್ತದೆ. ಈ ಸಲಹೆಯನ್ನು ಅನ್ವಯಿಸುವುದು ಸುಲಭವಲ್ಲ. ಅಂತಿಮ ತೀರ್ಮಾನಗಳನ್ನು ಮಾಡಲು ಇದ್ದ ಆಕೆಯ ಗಂಡನ ಹಕ್ಕನ್ನು ಅಪಹರಿಸುತ್ತಾ ಇದ್ದ ಶೋಕೊ, “ಅದು ನನಗೆ ಪರ್ವತದಂಥಾ ಪಂಥಾಹ್ವಾನವಾಗಿತ್ತು,” ಎಂದು ಒಪ್ಪಿಕೊಳ್ಳುತ್ತಾಳೆ. ಒಬ್ಬ ಮನುಷ್ಯನು ತನ್ನ 20ರುಗಳ ಕೊನೆಯ ಭಾಗವನ್ನು ತಲಪಿದಾಗ ಒಂದು ಮನೆಯನ್ನು ಕೊಂಡುಕೊಳ್ಳತಕ್ಕದ್ದು ಎಂದು ಯೋಚಿಸುತ್ತಾ, ಅವಳು ಈಗಾಗಲೇ ಮುಂದುವರಿದು, ಕಂಡುಹಿಡಿದಿದ್ದ ಮನೆಯನ್ನು ಖರೀದಿಸುವಂತೆ ಅವಳ ಗಂಡನನ್ನು ಬಲಾತ್ಕರಿಸಿದಳು. ಆದರೆ, ಒಳಗೊಂಡಿದ್ದ ಬೈಬಲ್ ತತ್ವಗಳನ್ನು ಅವಳು ಕಲಿತಾಗ, ಅವಳ ಗಂಡನ ಬಗೆಗೆ ಭಿನ್ನವಾದೊಂದು ಅಭಿಪ್ರಾಯವನ್ನು ಹೊಂದತೊಡಗಿದಳು. ನಿಷ್ಕ್ರಿಯ ಮತ್ತು ಪೌರುಷಶೂನ್ಯದಂತೆ ತೋರಿದ್ದು, ಯೋಗ್ಯವಾದ ಯಥಾದೃಷ್ಟಿಯಲ್ಲಿ ಕಂಡಾಗ, ವಿವೇಚನೆಯುಳ್ಳ, ದೀನ, ಮತ್ತು ನಮ್ರವಾದ ಪಾತ್ರವಾಗಿ ತೋರಿತು.
ಗಂಡಂದಿರು ಕ್ರಿಸ್ತ ಯೇಸುವಿನ ಉನ್ನತ ಅಧಿಕಾರದ ಕೆಳಗೆ ಇದ್ದಾರೆಂದು ಅರಿತುಕೊಳ್ಳುವಂತೆ ಈ ತತ್ವವು ಕೇಳಿಕೊಳ್ಳುತ್ತದೆ. (1 ಕೊರಿಂಥ 11:3) ಕ್ರಿಸ್ತನ ಅಧಿಕಾರದ ಕೆಳಗೆ ಇದ್ದುಕೊಂಡು, ಯೇಸು ತನ್ನ ಹಿಂಬಾಲಕರನ್ನು ಯಾವ ರೀತಿಯಲ್ಲಿ ಪ್ರೀತಿಸುತ್ತಾನೊ ಅದೇ ರೀತಿಯಲ್ಲಿ ಗಂಡನೊಬ್ಬನು ತನ್ನ ಹೆಂಡತಿಯನ್ನು ಪ್ರೀತಿಸಬೇಕು ಮತ್ತು ಪೋಷಿಸಬೇಕು. (ಎಫೆಸ 5:28-30) ಹೀಗೆ, ನಿರ್ಣಯಗಳನ್ನು ಮಾಡುವ ಮುಂಚೆ, ಕ್ರೈಸ್ತ ಗಂಡನೊಬ್ಬನು ತನ್ನ ಹೆಂಡತಿಯ ಅನಿಸಿಕೆಗಳನ್ನು, ಬಯಕೆಗಳನ್ನು, ಮತ್ತು ಮಿತಿಗಳನ್ನು ವಿಚಾರಪರವಾಗಿ ಪರಿಗಣಿಸುವನು.
“ರಸವತ್ತಾಗಿರಲಿ”
ಹಿಸಾಕೊವಿಗೆ ಆಕೆಯ ಗಂಡನೊಂದಿಗೆ ಸಂಸರ್ಗಮಾಡುವ ವಿಷಯದಲ್ಲಿ ಸಮಸ್ಯೆಗಳಿದ್ದವು. ಅವನೊಂದಿಗೆ ಏನನ್ನಾದರೂ ಚರ್ಚಿಸಲು ಅವಳು ಪ್ರಯತ್ನಿಸುವಾಗಲ್ಲೆಲ್ಲಾ, ಅವನು, “ನಿನಗೆ ಇಷ್ಟಬಂದಂತೆ ಮಾಡು” ಎಂಬುದಾಗಿ ಹೇಳುವ ಮೂಲಕ ಚರ್ಚೆಯನ್ನು ತಡೆಯುತ್ತಿದ್ದನು. ಹಿಸಾಕೊ ಜ್ಞಾಪಿಸಿಕೊಳ್ಳುವುದು: “ನನ್ನ ಕಡೆಯಿಂದ ಕೋಮಲತೆಯ ಕೊರತೆಯೇ ನಮ್ಮ ಸಮಸ್ಯೆಯ ಕಾರಣವಾಗಿತ್ತೆಂದು ನಾನು ನೆನಸುತ್ತೇನೆ. ನಾನು ನಿಧಾನ ಗತಿಯಲ್ಲಿ ಮಾತಾಡಿದ್ದರೆ, ಉತ್ತಮವಾಗಿರುತ್ತಿತ್ತು.” ಇಂದು, ಅವಳು ಮತ್ತು ಅವಳ ಗಂಡನು ವಿಷಯಗಳನ್ನು ಹಸನ್ಮುಖಗಳಿಂದ ಚರ್ಚಿಸಬಲ್ಲರು. ಹಿಸಾಕೊ ಕೆಳಗಿರುವ ಸಲಹೆಯನ್ನು ಅನ್ವಯಿಸಿದಂದಿನಿಂದ ಈ ಬದಲಾವಣೆಯು ಮೂಡಿದೆ: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳ ಬೇಕೋ ಅದನ್ನು ತಿಳುಕೊಳ್ಳುವಿರಿ.” (ಕೊಲೊಸ್ಸೆ 4:6) ಉಪ್ಪಿನಿಂದ ಪಕಮ್ವಾಡಲಾದ ಆಹಾರವು ಹೆಚ್ಚು ಸ್ವಾದವುಳ್ಳದ್ದಾಗಿ ಇರುವಂತೆ, ಜಾಗರೂಕತೆಯಿಂದ ಪರಿಗಣಿಸಲಾದ ಮಾತುಗಳು ಇಂಪಾದ ರೀತಿಯಲ್ಲಿ ನುಡಿಸಲ್ಪಟ್ಟಾಗ ಕೇಳಲಿಕ್ಕೆ ಸುಲಭವಾಗಿರುತ್ತವೆ. (ಜ್ಞಾನೋಕ್ತಿ 15:1) ವಾಸ್ತವದಲ್ಲಿ, ಕೇವಲ ನೀವು ಮಾತಾಡುವ ವಿಧವನ್ನು ಲೆಕ್ಕಿಸುವ ಮೂಲಕ, ಅನೇಕ ವೇಳೆ ದಾಂಪತ್ಯದ ಭಿನ್ನಾಭಿಪ್ರಾಯವನ್ನು ತಡೆಯಸಾಧ್ಯವಿದೆ.
ಹೌದು, ಯೆಹೋವ ದೇವರನ್ನು ಪ್ರೀತಿಸುವುದು ಮತ್ತು ಆತನ ತತ್ವಗಳನ್ನು ಗೌರವಿಸುವುದು ನಿಜವಾಗಿಯೂ ಕಾರ್ಯಸಾಧಕವು. ಯೆಹೋವನಿಗಾಗಿರುವ ಪ್ರೀತಿಯು, ನಿಮ್ಮ ವಿವಾಹವನ್ನು ಶಾಶ್ವತವಾದೊಂದು ಬಂಧದೋಪಾದಿಯಲ್ಲಿ ವೀಕ್ಷಿಸುವಂತೆ ನಿಮ್ಮನ್ನು ಪ್ರಚೋದಿಸುತ್ತದೆ ಮತ್ತು ಅದನ್ನು ಸುರಕ್ಷಿತವಾಗಿಡಲು ನೀವು ದೃಢನಿಶ್ಚಯ ಉಳ್ಳವರಾಗುವಂತೆ ಸಹಾಯ ಮಾಡುತ್ತದೆ. ದಾಂಪತ್ಯದ ಎಲ್ಲಾ ಭಿನ್ನಾಭಿಪ್ರಾಯದೊಂದಿಗೆ ನಿರ್ವಹಿಸಲು ಮತ್ತು ನಿಮ್ಮ ಸಮಸ್ಯೆಗಳು ದೊಡ್ಡ ಪರ್ವತಗಳಂತೆ ತೋರಿದರೂ ಅವುಗಳನ್ನು ಬಗೆಹರಿಸಲು ನಿಮಗೆ ಸಹಾಯ ಮಾಡುವಂತೆ, ದೇವರು ಸ್ವಸ್ಥ ಮಾರ್ಗದರ್ಶಕಗಳನ್ನು ಒದಗಿಸಿದ್ದಾನೆ. ಇಲ್ಲ, ಅನೇಕ ಸಂದರ್ಭಗಳಲ್ಲಿ ವಿವಾಹ ವಿಚ್ಛೇದವು ಸಂತೋಷಕರ ಜೀವಿತಕ್ಕೊಂದು ದ್ವಾರವಾಗಿರುವುದಿಲ್ಲ, ಆದರೆ ಬೈಬಲ್ ತತ್ವಗಳನ್ನು ಅನ್ವಯಿಸುವುದು ಸಂತೋಷಕರ ಜೀವಿತಕ್ಕೊಂದು ದ್ವಾರವಾಗಿದೆ. ಯೆಹೋವನಿಗಾಗಿ ನಿಮ್ಮ ಪ್ರೀತಿಯನ್ನು ಬೆಳೆಸುವ ಮೂಲಕ ನೀವು ಆ ದ್ವಾರವನ್ನು ತೆರೆಯ ಬಲ್ಲಿರಿ. ಅತ್ಯಂತ ಅಧಿಕೃತವಾದ ವಿವಾಹ ಮಾರ್ಗದರ್ಶಕ ಪುಸ್ತಕ, ಬೈಬಲಿನಿಂದ ಆತನ ಸಲಹೆಯ ಕುರಿತು ಹೆಚ್ಚನ್ನು ಯಾಕೆ ಕಲಿಯಬಾರದು? (g93 7/8)
[ಪುಟ 9 ರಲ್ಲಿರುವ ಚೌಕ]
ವಿವಾಹ ವಿಚ್ಛೇದವು ಒಂದು ಆಯ್ಕೆಯಾಗಿರುವಾಗ
ಜಾರತ್ವದ ಆಧಾರದಮೇಲೆ, ಬೈಬಲ್ ವಿವಾಹ ವಿಚ್ಛೇದ ಮತ್ತು ಪುನಃ ವಿವಾಹವನ್ನು ಅನುಮತಿಸಿದರೂ, ವ್ಯಭಿಚಾರವು ಗಂಡ ಮತ್ತು ಹೆಂಡತಿಯ ನಡುವೆ ಇರುವ ಸಂಬಂಧವನ್ನು ಅಪ್ರಜ್ಞಾಪೂರ್ವಕವಾಗಿ ಅಂತ್ಯಗೊಳಿಸುವುದಿಲ್ಲ. ನಿರ್ದೋಷಿಯಾದ ಸಂಗಾತಿಗೆ ಒಂದು ವಿವಾಹ ವಿಚ್ಛೇದವನ್ನು ಪಡೆಯುವ ಯಾ ಪಡೆಯದೆ ಇರುವ ಆಯ್ಕೆ ಇದೆ.—ಮತ್ತಾಯ 19:9.
ಯಾಸುಕೊ ಈ ನಿರ್ಣಯವನ್ನು ಎದುರಿಸಿದಳು. ಆಕೆಯ ಗಂಡನು ಅವನ ಉಪಪತ್ನಿಯೊಂದಿಗೆ ಜೀವಿಸುತ್ತಿದ್ದನು. ಆಕೆಯ ಗಂಡನ ತಾಯಿಯು ಯಾಸುಕೊವನ್ನು ದೂಷಿಸಿ ಹೇಳಿದ್ದು: “ನನ್ನ ಮಗನು ಈ ರೀತಿ ವರ್ತಿಸುವುದಕ್ಕೆಲ್ಲಾ ಕಾರಣ ನೀನೇ.” ಯಾಸುಕೊ ದಿನರಾತ್ರಿ ಅತಳ್ತು. ಅನೇಕರು ಅವಳಿಗೆ ಸಲಹೆ ನೀಡಿದರು, ಆದರೆ ಯಾರೂ ಅವಳ ಗಂಡನ ವ್ಯವಹಾರವನ್ನು ಖಂಡಿಸಲಿಲ್ಲ. ಆಗ, ಬೈಬಲನ್ನು ಅಭ್ಯಾಸಿಸಲು ತೊಡಗಿದ್ದ ಅವಳ ಸ್ವಂತ ತಾಯಿ, ಅವಳಿಗೆ ಹೇಳಿದ್ದು: “ವ್ಯಭಿಚಾರವನ್ನು ಮಾಡುವುದು ತಪ್ಪು ಎಂಬುದಾಗಿ ಬೈಬಲಿನಲ್ಲಿ ಸ್ಪಷ್ಟವಾಗಿಗಿ ಹೇಳಲಾಗಿದೆ.” (1 ಕೊರಿಂಥ 6:9) ಈ ಲೋಕದಲ್ಲಿ ಇಂದು ಒಳ್ಳೆಯದು ಮತ್ತು ಕೆಟ್ಟದ್ದಕ್ಕಾಗಿ ಒಂದು ಮಟ್ಟವು ಇನ್ನೂ ಇದೆ ಎಂದು ತಿಳಿದಾಗ ಯಾಸುಕೊಗೆ ಬಹಳ ನೆಮ್ಮದಿ ಉಂಟಾಯಿತು.
ಈಗ ಯಾಸುಕೊಗೆ ಒಂದು ಆಯ್ಕೆ ಇತ್ತು. ಅವಳ ಗಂಡನನ್ನು ವಿವಾಹ ವಿಚ್ಛೇದ ಮಾಡಲು ಅವಳು ಯೋಚಿಸಿದರೂ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಿದ ಅನಂತರ, ಅವಳು ಕೂಡ ತನ್ನ ಪಾತ್ರವನ್ನು ವಹಿಸುತ್ತಿರಲಿಲ್ಲವೆಂದು ಅವಳು ಕಾಣಬಹುದಿತ್ತು. ಆದುದರಿಂದ ಅವಳ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಬೈಬಲ್ ತತ್ವಗಳನ್ನು ಪರೀಕ್ಷಿಸಲು ಅವಳು ನಿಶ್ಚಯಿಸಿದಳು. ಅವುಗಳನ್ನು ಅನ್ವಯಿಸಲು ಅವಳು ಪ್ರಾರಂಭಿಸಿದಳು. (ಎಫೆಸ 5:21-23) “ಅದು ಸುಲಭವಾಗಿರಲಿಲ್ಲ,” ಎಂದು ಅವಳು ಜ್ಞಾಪಿಸಿಕೊಳ್ಳುತ್ತಾಳೆ. “ನಾನು ಮತ್ತೆ ಮತ್ತೆ ಮರುಕೊಳಿಸುವಿಕೆಗಳನ್ನು ಅನುಭವಿಸಿದೆ. ನಾನು ಯೆಹೋವನಿಗೆ ಕಣ್ಣೀರಿಟ್ಟು ಪ್ರಾರ್ಥಿಸಿದ ಸಮಯಗಳು ಅನೇಕ.” ಅವಳು ಬದಲಾಯಿಸಿದಂತೆ, ಅವಳ ಗಂಡನು ಕೂಡ ಕ್ರಮೇಣವಾಗಿ ಬದಲಾದನು. ಸುಮಾರು ಐದು ವರ್ಷಗಳ ಅನಂತರ, ಅವಳ ಗಂಡನು ಅವನ ಉಪಪತ್ನಿಯೊಂದಿಗೆ ಇದ್ದ ಸಂಬಂಧವನ್ನು ಅಂತ್ಯಗೊಳಿಸಿದನು. “ದೇವರ ವಾಕ್ಯಕ್ಕೆ ವಿಧೇಯರಾಗಿರುವುದು ಖಂಡಿತವಾಗಿ ಲಾಭದಾಯಕ ಎಂದು ನನಗೆ ಮನವರಿಕೆಯಾಗಿದೆ,” ಎಂಬುದಾಗಿ ಯಾಸುಕೊ ಮುಕ್ತಾಯಗೊಳಿಸುತ್ತಾಳೆ.
[ಪುಟ 11 ರಲ್ಲಿರುವ ಚೌಕ]
ಲೈಂಗಿಕ ಅಸಮಂಜಸತೆ ಮತ್ತು ವಿವಾಹ ವಿಚ್ಛೇದ
ಅನೇಕ ದಂಪತಿಗಳು ಲೈಂಗಿಕ ಅಸಮಂಜಸತೆಯನ್ನು ವಿವಾಹ ವಿಚ್ಛೇದಕ್ಕೆ ಕಾರಣವೆಂದು ನಮೂದಿಸುತ್ತಾರೆ. ಸಮಸ್ಯೆಯು ಎಲ್ಲಿ ಅಡಗಿದೆ ಎಂಬುದನ್ನು ಸೂಚಿಸುತ್ತಾ, ಇಂದಿನ ಬದಲಾಗುತ್ತಿರುವ ಕುಟುಂಬ ಏರ್ಪಾಡಿನೊಂದಿಗೆ ನಿರ್ವಹಿಸುವ, ಸೆಕೂಶಾವ್ರಿಟಿ ಟೊ ಕಾಜೊಕಾ (ಲೈಂಗಿಕತೆ ಮತ್ತು ಕುಟುಂಬ) ಎಂಬುದಾಗಿ ಹೆಸರಿಸಲಾದ ಒಂದು ಪುಸ್ತಕವು ಹೇಳುವುದು: “ಒಮ್ಮದುವೆಯ ವಿವಾಹದ ಏರ್ಪಾಡು ಮತ್ತು ಕಾಮೋನ್ಮಾದ ಲೈಂಗಿಕ ಮಾಹಿತಿಯು ಇಂದು ಪರಸ್ಪರ ಪೂರಕವಾಗಿರುವುದಿಲ್ಲ. ಕಾಮ ಮಾಹಿತಿಯ ಪ್ರವಾಹವು ದಾಂಪತ್ಯ ಪ್ರೇಮವನ್ನು ವಿಕೃತಗೊಳಿಸುತ್ತದೆ ಮತ್ತು ಸಾಧಾರಣ ಮಮತೆಯನ್ನು ನಾಶಮಾಡುತ್ತದೆ. ಕಾಮವನ್ನು ವ್ಯಾಪಾರದ ಒಂದು ಸರಕಿನಂತೆ ಸಾದರಪಡಿಸುವುದು ಮಾತ್ರವಲ್ಲ, ಹೆಣ್ಣು ದೇಹಗಳನ್ನು ಸರಕುಗಳಂತೆ ಚಿತ್ರಿಸುವ ವಿಷಯಲಂಪಟ ವಿಡಿಯೊಟೇಪ್ಗಳು ಮತ್ತು ಕಾಮಿಕ್ಸ್ಗಳು ಮಾನವ ವಿವೇಕ ಮತ್ತು ಹೃದಯಗಳನ್ನು ತಪ್ಪುದಾರಿಗೆ ಸೆಳೆಯುತ್ತವೆ. ಹೀಗೆ, ಹೆಂಡತಿಯರು [ತಮ್ಮ ಗಂಡಂದಿರ] ಬಲಾತ್ಕಾರದಂಥ ಲೈಂಗಿಕತೆಯಿಂದ ಪೀಡಿತರಾಗುತ್ತಾರೆ, ಮತ್ತು ನಿರಾಕರಿಸಲ್ಪಟ್ಟ ಗಂಡಂದಿರು ನಿರ್ವೀಯರಾಗುತ್ತಾರೆ.”
ಅನೈತಿಕ ಪ್ರಕಾಶನಗಳು, ವಿಡಿಯೊಗಳು, ಮತ್ತು ಟಿವಿ ಕಾರ್ಯಕ್ರಮಗಳು ಲೈಂಗಿಕತೆಯನ್ನು ವಿಕೃತಗೊಳಿಸುತ್ತವೆ. ದಾಂಪತ್ಯದ ನಿಜವಾದ ಆನಂದ ಏನನ್ನು ನಿಯೋಜಿಸುತ್ತದೊ ಅದನ್ನು ಅವು ಕಲಿಸುವುದಿಲ್ಲ. ಒಂದು ಸಫಲ ವಿವಾಹವನ್ನು ಪಡೆಯಲಿಕ್ಕಾಗಿ ಗಂಡ ಮತ್ತು ಹೆಂಡತಿಯು ಬೆಳೆಸಬೇಕಾದ ಭರವಸೆಯನ್ನು ಕೂಡ ಅವು ನಾಶಮಾಡುತ್ತವೆ. ಸೈಕಾಲೊಜಿ ಟುಡೆ ಹೇಳುವುದು: “ಅವುಗಳು ಕಾಳಜಿಪೂರ್ವಕವಾಗಿ ನಿರ್ವಹಿಸಲಾಗುವುವು ಎಂಬ ಅರಿವಿನಿಂದ, ನಿಮ್ಮ ಅತೀ ಆಳವಾದ ಅನಿಸಿಕೆಗಳನ್ನು ಮತ್ತು ಆತಂಕಗಳನ್ನು ನಿಮ್ಮ ಸಂಗಾತಿಯ ನಂಬಿಕೆಗೆ ವಹಿಸಲು, ಭರವಸೆಯು ನಿಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಪ್ರೀತಿಯ ಅನಿಸಿಕೆಗಳು ಅಥವಾ ಕಾಮೋದ್ರೇಕಗಳು ಸಮಯಾವಧಿಯಲ್ಲಿ ಹೆಚ್ಚು ಕಡಿಮೆಯಾಗುತ್ತಾ ಇರಬಹುದಾದರೂ, ಆದರ್ಶವಾಗಿ, ಭರವಸೆಯು ನಿಯತಾಂಕವಾಗಿದೆ.”
ಒಂದು ಸಫಲ ದಾಂಪತ್ಯ ಜೀವನವು ಲೈಂಗಿಕತೆಯ ತಿರುಗಣೆ ಮೇಲೆ ಆಧಾರಿಸಿರುವುದಿಲ್ಲ. ಕಠಿನವಾದ ದಾಂಪತ್ಯದ ಸಮಸ್ಯೆಗಳನ್ನು ಅನುಭವಿಸಿದ್ದ ಒಬ್ಬಾಕೆ ಹೆಂಡತಿಯು ಹೇಳುವುದು: ‘ನಿಮ್ಮ ಕುಟುಂಬ ಜೀವನವನ್ನು ಸಂತೋಷಪಡಿಸುವುದು’ ಎಂಬ ಪುಸ್ತಕದಲ್ಲಿರುವ ಮಾತುಗಳು ನನ್ನನ್ನು ಬಹಳವಾಗಿ ಉತ್ತೇಜಿಸಿದವು: ‘ಸಾಮಾನ್ಯವಾಗಿ ಹೇಳುವುದಾದರೆ, ಮದುವೆಯಲ್ಲಿರುವ ಬೇರೆಲ್ಲಾ ಸಂಬಂಧಗಳು ಒಳ್ಳೇದಿದ್ದರೆ, ಪ್ರೀತಿ, ಗೌರವ, ಒಳ್ಳೇ ಮಾತುಕತೆ ಮತ್ತು ತಿಳಿವಳಿಕೆ ಅಲ್ಲಿದ್ದರೆ, ಕಾಮವು ಒಂದು ಸಮಸ್ಯೆಯಾಗಿರುವುದು ತೀರಾ ವಿರಳ.’”a
ಸಂಗಾತಿಗಳ ನಡುವೆ ನಿಕಟವಾದ ವೈಯಕ್ತಿಕ ಸಂಬಂಧವನ್ನು ನಿಜವಾಗಿಯೂ ಉಂಟುಮಾಡುವುದು ಕಾಮವಲ್ಲ, ಪ್ರೀತಿಯಾಗಿದೆ. ಪ್ರೀತಿ ಇಲ್ಲದ ಕಾಮವು ವ್ಯರ್ಥವಾಗಿದೆ, ಆದರೆ ಪ್ರೀತಿಯು ಕಾಮವಿಲ್ಲದೆ ಇರಬಲ್ಲದು. ಕಾಮವನ್ನು ಅದರ ಸ್ಥಳದಲ್ಲಿ ಇಡುತ್ತಾ, ಅದನ್ನು ತಮ್ಮ ಜೀವಿತಗಳ ಕೇಂದ್ರವನ್ನಾಗಿ ಮಾಡದೆ ಇರುವ ಮೂಲಕ, ಒಬ್ಬ ದಂಪತಿಗಳು ತಮ್ಮ ಸಹಭಾಗಿತ್ವವನ್ನು ಆನಂದಿಸಬಲ್ಲರು ಮತ್ತು ಲೈಂಗಿಕ ಅಸಮಂಜಸತೆಯ ಸಮಸ್ಯೆಯನ್ನು ಬಗೆಹರಿಸಬಲ್ಲರು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದ್ದು.
[ಪುಟ 10 ರಲ್ಲಿರುವ ಚಿತ್ರ]
ಬೈಬಲ್ ತತ್ವಗಳನ್ನು ಗೌರವಿಸುವುದು ದಂಪತಿಗಳಿಗೆ ಅನಿರ್ಬಂಧಿತವಾಗಿ ಸಂಸರ್ಗಮಾಡಲು ಸಹಾಯಮಾಡುತ್ತದೆ